(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತನ್ನ ಅಮ್ಮನ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಬಿಡುವಾದಾಗ ಸುಮನಾ ಭಾರ್ಗವಿಗೆ ಜೊತೆಯಾದಳು. ಆಶ್ರಮದ ಕೆಲಸ ಕಾರ್ಯಗಳಲ್ಲಿ ತಾನೂ ಭಾರ್ಗವಿಗೆ ನೆರವಾಗುತ್ತ ಬಿಡುವು ಸಿಕ್ಕಾಗ ಅಲ್ಲಿಯೇ ಸುತ್ತಮುತ್ತಲಿನ ಊರುಗಳಿಗೆ ಹೋಗಿಬರುವ ಪರಿಪಾಠ ಬೆಳೆಸಿಕೊಂಡಳು.
ಆಗಾಗ್ಗೆ ಬೆಂಗಳೂರಿನಲ್ಲಿದ್ದ ಮಗಳು ಮಾಲಿನಿ ಅಮ್ಮನಿದ್ದಲ್ಲಿಗೆ ಬರುವುದು ಹೋಗುವುದು ನಡೆದಿತ್ತು. ವಿದೇಶದಲ್ಲಿದ್ದ ಮಾನಸಾಳಿಂದ ಫೋನ್, ಊರಿನಲ್ಲಿದ್ದ ಅಣ್ಣನಿಂದ ಫೋನ್ ಅಪರೂಪಕ್ಕೆ ಸಿದ್ಧಾರ್ಥನಿಂದಲೂ ಫೋನ್ ಬರುತ್ತಿದ್ದವು. ಎಲ್ಲರಿಗೂ ಸಾವಕಾಶವಾಗಿ ಉತ್ತರಿಸುತ್ತಿದ್ದಳು. ಸಮಾಧಾನ ಚಿತ್ತದಿಂದಲೇ ಸಂಬಂಧಗಳನ್ನು ನಿಭಾಯಿಸುತ್ತಿದ್ದಳು ಭಾರ್ಗವಿ.
ದಿನಗಳು ಸರಿದು ಹೋಗುತ್ತಿದ್ದವು. ವಯೋಸಹಜವಾದ ಅಲ್ಪಕಾಲದ ಅನಾರೋಗ್ಯದಿಂದ ಭಾರ್ಗವಿಯ ತಂದೆ ಕಾಲವಾದರು. ಆ ಸಮಯದಲ್ಲಿ ಮೈಸೂರಿನಲ್ಲಿ ಅಮ್ಮನೊಡನೆ ಇದ್ದಳು ಮಾಲಿನಿ. ಮಗಳ ಜೊತೆಯಲ್ಲಿಯೇ ಊರಿಗೆ ಹೋದಳು ಭಾರ್ಗವಿ. ತಂದೆಯ ಕ್ರಿಯಾಕರ್ಮಗಳೆಲ್ಲ ಮುಗಿಯುವವರೆಗೆ ತವರುಮನೆಯಲ್ಲಿದ್ದಳು ವಿಷಯ ತಿಳಿದ ಕಿರಿಯ ಮಗಳು ಮಾನಸಾ ರಜೆ ಹಾಕಿ ಬಂದೇಬಿಟ್ಟಳು. ಮೂರು ಜನರೂ ತಮ್ಮ ಇನ್ನೊಂದು ಅಜ್ಜಿಯ ಮನೆಗೂ ಹೋಗಿ ಬಂದರು. ಅಮ್ಮನ ಆಣತಿಯಂತೆ ಇಬ್ಬರು ಮಕ್ಕಳೂ ತಮ್ಮಪ್ಪನ ನಡವಳಿಕೆಯ ಬಗ್ಗೆ ತುಟಿಬಿಚ್ಚಲಿಲ್ಲ. ಮೊದಲೇ ಯಾರಾದರೂ ಆಕ್ಷೇಪಾರ್ಹ ಪ್ರಶ್ನೆ ಕೇಳಿದರೆ ನೀವು ಉತ್ತರಿಸಬೇಡಿ ಎಂದು ಮನೆಯಲ್ಲಿ ಎಲ್ಲರಿಗೂ ತಾಕೀತು ಮಾಡಿದ್ದ ಸಿದ್ಧಾರ್ಥ. ಏನಿದ್ದರೂ ನಾನೇ ಉತ್ತರ ಹೇಳುತ್ತೇನೆ ಎಂದಿದ್ದರಿಂ ಯಾರೇನೂ ಕೇಳಲಿಲ್ಲ. ಯಾರೂ ಏನನ್ನೂ ಪ್ರಶ್ನಿಸದೆ ಸಹಜವಾಗಿ ಮುಂಚಿನಂತೆಯೆ ಇದ್ದು ಹಿಂತಿರುಗಿದರು.
ಇದೇ ಸಮಯದಲ್ಲಿ ತನ್ನ ಮನೆಯಲ್ಲೂ ಎಲ್ಲರಿಗೂ ತನ್ನ ಪರ ವಕಾಲತ್ತು ವಹಿಸುವುದಾಗಲೀ ಸಿದ್ಧಾರ್ಥನೊಡನೆ ಘರ್ಷಣೆ ಮಾಡುವುದಾಗಲೀ ಮಾಡಬೇಡಿರೆಂದು ಕಟ್ಟಾಜ್ಞೆ ಮಾಡಿದ್ದಳು ಭಾರ್ಗವಿ. ಅವಳಮ್ಮ, ಅತ್ತಿಗೆ, ಅಣ್ಣ ಬಾಲಕೃಷ್ಣ ಎಲ್ಲರಿಗೂ ಭಾರ್ಗವಿಯು ಈ ರೀತಿಯ ಒತ್ತಾಯ ಮಾಡಿದ್ದು ಏಕೆಂದು ತಿಳಿಯದೆ ಚಿದಂಬರ ರಹಸ್ಯದಂತಾಗಿತ್ತು. ಅವಳಿಗೇ ಬೇಡವೆಂದಮೇಲೆ ನಾವ್ಯಾಕೆ ತಲೆತೂರಿಸಿ ಪರಿಸ್ಥಿತಿಯನ್ನು ರಾಡಿಮಾಡುವುದೆಂದು ಸುಮ್ಮನಿದ್ದರು. ಹಾಗೂ ಬಾಲು ಇಂತಹ ಸಮಯದಲ್ಲಿ ಅದನ್ನೆಲ್ಲ ಪ್ರಸ್ತಾಪ ಮಾಡುವುದು ಸರಿಯಲ್ಲ, ಅದು ಸಾಧುವೂ ಅಲ್ಲ ಎಂದು ತನ್ನ ತಂಗಿ ಹೇಳಿರಬೇಕೆಂದುಕೊಂಡ. ಆದರೂ ತಂಗಿಯ ಈ ಸ್ಥಿತಿಗೆ ಪರೋಕ್ಷವಾಗಿ ನಾನೇ ಕಾರಣನಾದೆನೇ, ಗೆಳೆಯನ ಹುಂಬತನ ಈ ಮಟ್ಟ ಮುಟ್ಟುತ್ತದೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ಎಂದು ಪೇಚಾಡಿಕೊಂಡ.
ಊರಿನಿಂದ ಹಿಂತಿರುಗಿದ ಭಾರ್ಗವಿಯ ಮನದಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿತ್ತು. ಅಣ್ಣ, ಅತ್ತಿಗೆ, ಅಮ್ಮ ತನ್ನ ಬಗ್ಗೆ ತೋರಿದ ಕಾಳಜಿಯ ಬಗ್ಗೆ ಅವಳಿಗೆ ಅರಿವಿತ್ತು. ಆದರೆ ಅವರುಗಳು ಹೇಳಿದಂತೆ ಪ್ರಶ್ನೆ ಮಾಡಿದ್ದರೆ ಸಿದ್ಧಾರ್ಥನ ಬಣದವರು ಅವರವರ ದೃಷ್ಟಿಯಲ್ಲೇ ಉತ್ತರಿಸುತ್ತಿದ್ದರು. ಹಾಗೇ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಅವುಗಳನ್ನೆಲ್ಲ ಕೇಳಿಸಿಕೊಳ್ಳುವ ಅಗತ್ಯ, ಆವಶ್ಯಕತೆ ಇಲ್ಲ ಎಂದೆನಿಸಿತ್ತು. ಅಲ್ಲದೆ ನನ್ನ ಹಾಗೂ ಮಕ್ಕಳ ಬಗ್ಗೆ ತಮಗೆ ತೋಚಿದಂತೆಲ್ಲ ಇತರರ ಮೂಲಕ ಮಾತುಗಳನ್ನು ಹರಿಯಬಿಟ್ಟಿದ್ದು ಭಾರ್ಗವಿಯ ಕಿವಿಗೂ ಬಿದ್ದಿತ್ತು. ಹೂ ಆಕೆಗೆ ಓದಿನ ಭೂತ ಹಿಡಿದು ಪಟ್ಟಣ ಸೇರಿದಳು. ಆಮೇಲೂ ಏನಾಯ್ತು, ನೌಕರಿ, ಮಕ್ಕಳ ವಿದ್ಯಾಭ್ಯಾಸ, ಜವಾಬ್ದಾರಿ ಅಂತ ಕಾರಣ ಹೇಳಿಕೊಂಡು ಆಗಾಗ ಬಂದಾಪುಟ್ಟ ಹೋದಾಪುಟ್ಟ ಅನ್ನುವಂತೆ ಊರಿಗೆ ಬಂದು ಹೋಗುತ್ತಿದ್ದಳು. ಪರಿಣಾಮ ಇನ್ನೇನಾಗುತ್ತೆ ಮಗ್ಗುಲಿಗೆ ಇನ್ನೊಬ್ಬಳನ್ನು ತಂದುಕೊಂಡ ಗಂಡಸು.
ಅಕ್ಕನ ಮಗಳಿಗೂ ಆ ಹೈದನಿಗೂ ಮೊದಲಿನಿಂದಲೂ ಕನೆಕ್ಷನ್ ಇತ್ತಂತೆ. ಹೆಸರಿಗೆ ಗಂಡಾಂತ ಒಬ್ಬನಿದ್ದ. ಅವನು ನೆಗೆದುಬಿದ್ದ ಮೇಲೆ ರಾಜಾರೋಷವಾಗಿ ಅವಳು ಮಾವನಿಗೆ ಜೊತೆಯಾದ್ಲು. ಹೋಗಲಿ ಹೆಂಡತಿ ಕೆಲಸ ಮುಗಿದ ಮೇಲೆ ಅಂದರೆ ರಿಟೈರ್ ಆದಮೇಲಾದರೂ ಊರಿಗೆ ಬಂದ್ಲಾ. ಊಹೂ.. ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟಂಗಾಯ್ತು. ಅದೆಲ್ಲಕ್ಕಿಂತ ಇನ್ನೊಂದು ವಿಷ್ಯ ಐತೆ ಕೇಳಿ ಲಕ್ಷ ಲಕ್ಷ ಗಟ್ಟಲೆ ಇಡುಗಂಟು ಮಾಡಿಕೊಂಡವಳಂತೆ. ಇವನು ಓದಿಸಲಿಲ್ಲ ಅಂದ್ರೆ ಅದೆಲ್ಲ ಅವಳಿಗೆ ಎಲ್ಲಿಂದ ಬರತ್ತಿತ್ತು. ನಮ್ಮಂಗೆ ಹೊಲತ್ತಾಕ್ಕೆ ಇಟ್ಟು ಹೊತ್ಕೊಂಡು ಹೋಗಬೇಕಾಗ್ತಿತ್ತು ಅಷ್ಟೇಯಾ. ಜಮೀನಿನ ವಿಷಯದಲ್ಲಿ ಕರ್ಚಿಗೆ ಕಾಸು ಕೇಳ್ದಾಗಲೆಲ್ಲ ತಾರಮ್ಮಯ್ಯ ಆಡಿಸಿಬಿಟ್ಲಂತೆ. ಆವಾಗ ಅಕ್ಕನ ಮಗಳೇ ಅವನ ಕೈ ಹಿಡಿದದ್ದು. ಅಲ್ಲದೇ ಅವಳ ಗಂಡ ಹೋದಮ್ಯಾಕೆ ಇವನೇ ನಿಂತುಕೊಂಡು ಅದೇನೋ ಸರ್ಕಾರದಿಂದ ಅವಳಿಗೆ ಬರಬೇಕಾದ್ದೆಲ್ಲ ಕೊಡಿಸುವಂಗೆ ಮಾಡಿದನಂತೆ. ಇದ್ದೊಬ್ಬ ಮಗನಿಗೆ ಕೆಲಸಕ್ಕೆ ದಾರಿಮಾಡಿಸಿಕೊಟ್ಟಾಂತ ಸುದ್ಧಿ. ಈ ಮೊದಲವಳಿಗೆ ಎರಡೂ ಹೆಣ್ಣೇ, ಏನೇನೋ ಬಾಳ ಓದಿಕೊಂಡವಂತೆ. ಒಬ್ಬಳು ಇಲ್ಲೇ ಬೆಂಗಳೂರಿನಲ್ಲಿ ಅವಳಂತೆ. ಇನ್ನೊಬ್ಬಳು ಅದೆಲ್ಲೋ ಪರದೇಶದಾಗೆ ಅವಳಂತೆ. ಅವಾಗ್ಲೇ ಬಲಿತುಬಿಟ್ಟವೆ. ಅದ್ಯಾರು ಅವರನ್ನು ಕಟ್ಟಿಕೋತಾರೋ. ನಾನ್ ಕಂಡಂಗೆ ಮನೇಲಿ ಜಗಳ ಗುದ್ದಾಟ ಯಾವುದೂ ಆದಂಗಿಲ್ಲಪ್ಪ. ಏ ಬಿಡ್ರೀ ನಮಗ್ಯಾಕೆ ಬೇಕು ಇನ್ನೊಬ್ಬರ ಮನೆವಾರ್ತೆ. ಹೀಗೆಂದು ಪುಂಖಾನುಪುಂಖವಾಗಿ ಬೇಡವೆಂದರೂ ಕಿವಿಯ ಮೇಲೆ ಮಾತುಗಳು ಬಿದ್ದು ಮನಸ್ಸು ಮೌನವಾಗಿ ರೋಧಿಸಿತ್ತು. ಎಷ್ಟು ಯೋಚಿಸಿದರೂ ಅಷ್ಟೇ ಪ್ರಯೋಜನ ಎಂದು ಅವೆಲ್ಲವನ್ನೂ ಪಕ್ಕಕ್ಕೆ ಸರಿಸಿ ಹಿರಿಯ ಮಗಳಿಗೆ ಸೂಕ್ತವಾದ ಸಂಬಂಧ ಹುಡುಕಲು ಮೊದಲಿಟ್ಟಳು ಭಾರ್ಗವಿ.
ಹೀಗೇ ಮತ್ತೊಂದು ವರ್ಷವೇ ಉರುಳಿಹೋಯಿತು. ತಾತನ ಕಾರ್ಯಕ್ಕೆ ಮೊಮ್ಮಕ್ಕಳ ಜೊತೆ ಭಾರ್ಗವಿಯೂ ಊರಿಗೆ ಬಂದು ಹೋದನಂತರ ಸಿದ್ಧಾರ್ಥನಿಂದ ಫೋನ್ ಕಾಲ್‌ಗಳೂ ಬರುವುದು ಬಹುತೇಕ ನಿಂತೇ ಹೋದವು. ಭಾರ್ಗವಿಯು ಈ ವಿಚಾರವನ್ನು ಮೊದಲೇ ಅರಿತವಳಂತೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿದಳು. ಹೆಚ್ಚು ಹೆಚ್ಚು ಕಾಲ ಆಶ್ರಮಕ್ಕೇ ಅಂಟಿಕೊಳ್ಳತೊಡಗಿದಳು. ಸ್ವಲ್ಪ ದಿನ ಬ್ರೇಕ್ ತೆಗೆದುಕೊಂಡು ಗೆಳತಿ ಸುಮನಾಳ ಜೊತೆಗೂಡಿ ಬೋಸ್ಟನ್ನಿನಲ್ಲಿದ್ದ ಮಗಳ ಮನೆಗೆ ಹೋಗಿ ಬಂದಳು. ಅಲ್ಲಿನ ಸುತ್ತಮುತ್ತಲಿನ ಸ್ಥಳಗಳನ್ನು ಗೆಳತಿಯೊಡನೆ ಸುತ್ತಾಡಿ ತೋರಿಸಿದಳು. ಹಾಗೇ ಮಾನಸಾಳ ಮೂಲಕ ಮಾಲಿನಿಗೆ ಅವಳ ವಿವಾಹದತ್ತ ಗಮನ ಹರಿಸಲು ತಿಳಿಸಿ ಯಾವುದಾದರೂ ಅವಳಿಗೆ ಸರಿಯೆನ್ನಿಸಿದ್ದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದಳು.
ತಾಯಿಯ ಹಂಬಲ ಹಪಾಹಪಿಸುವಿಕೆಯನ್ನು ಕಂಡು ಮನದಲ್ಲಿಯೇ ಕನಿಕರ ಪಟ್ಟಳು ಮಾನಸಾ. ತನ್ನ ಅಕ್ಕನ ಮನದಿಂಗಿತವನ್ನು ಮೊದಲೇ ತಿಳಿದಿದ್ದ ಅವಳು ಅದನ್ನಿವರಿಗೆ ಹೇಗೆ ತಿಳಿಸುವುದು ಎಂದು ಯೋಚಿಸಿದಳು. ನಾನು ಇನ್ನೊಮ್ಮೆ ಅಲ್ಲಿಗೆ ಹೋದಾಗ ಅಕ್ಕನೆದುರಿಗೇ ಅವಳ ಕಡೆಯಿಂದಲೇ ಹೇಳಿಸುವುದೊಳ್ಳೆಯದು ಎಂದು ನಿರ್ಧರಿಸಿ ಮೇಲೆ ಮಾತ್ರ ಅಮ್ಮನ ಬೇಡಿಕೆಯಂತೆ “ಆಯಿತಮ್ಮಾ ಪ್ರಯತ್ನಿಸುತ್ತೇನೆ” ಎಂದು ಮಾತು ಕೊಟ್ಟು ಅವರನ್ನು ಬೀಳ್ಕೊಟ್ಟಳು ಮಾನಸಾ.
ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸುತ್ತ ಬಂದಿದ್ದ ಸುಮನಾಳಿಗೆ ಗೆಳತಿಯ ಮನೆಯಲ್ಲಿ ಹೆಚ್ಚಿನದ್ದೇನೋ ಜಟಾಪಟಿ ನಡೆದಿದೆ. ಆದರೆ ಏಕೋ ನನ್ನೊಡನೆ ಆಕೆ ಹಂಚಿಕೊಂಡಿಲ್ಲ ಎನ್ನಿಸಿತು. ತಡೆಯಲಾಗದೆ ಒಂದು ದಿನ “ಭಾರ್ಗವಿ ಇತ್ತೀಚೆಗೆ ನಿಮ್ಮವರು ಇಲ್ಲಿಗೆ ಬಂದಂತೆ ಕಾಣುತ್ತಿಲ್ಲ. ಮೇಲಾಗಿ ನೀನು ಊರಿಗೆ ಹೋಗುವ ಪ್ರಸ್ತಾಪದಿಂದ ಹಿಂದೆ ಸರಿದಂತೆ ಕಾಣುತ್ತಿದೆ. ಏನು ಮಕ್ಕಳ ಮದುವೆ ಮುಗಿಸಿಯೇ ಹೋಗಬೇಕೆಂದು ಹಂಬಲವಿದ್ದಂತೆ ಅನ್ನಿಸುತ್ತಿದೆ. ಅಲ್ಲಾ ತಪ್ಪು ತಿಳಿಯಬೇಡ, ಎಲ್ಲವನ್ನೂ ನನ್ನೊಡನೆ ಹಂಚಿಕೊಳ್ಳುತ್ತಿದ್ದವಳು ಒಮ್ಮೆಲೇ ಗಪ್ಪಾಗಿದ್ದೀಯಲ್ಲ” ಎಂದು ಪ್ರಶ್ನಿಸಿದಳು ಸುಮನಾ.
ಎಂದಾದರೊಂದು ದಿನ ಈ ಪ್ರಶ್ನೆ ಬಂದೇ ಬರುತ್ತದೆಂದು ಅರಿತಿದ್ದ ಭಾರ್ಗವಿ “ನಿನಗೆ ಹೇಳಲಾರದಂಥದ್ದೇನಲ್ಲ, ನಾನು ನಿನ್ನೊಡನೆ ಎಲ್ಲವನ್ನೂ ಕಾರಿಕೊಳ್ಳಬೇಕೆಂದು ನಿಮ್ಮ ಮನೆಗೆ ಬರುತ್ತಿದ್ದ ದಿನವೇ ನಿಮ್ಮಮ್ಮನ ದೇಹಾಂತದ ಸುದ್ಧಿ ಬಂದಿತು. ಆನಂತರ ಹೀಗೇ ಎಂದು ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಇಂತಹ ಸನ್ನಿವೇಶದಲ್ಲಿ ನಾನು ಊರಿಗೆ ಹೇಗೆ ಹೋಗಲಿ ಹೇಳು. ಹಣೆಯಲ್ಲಿ ಬರೆದಂತಾಗಲೆಂದು ನಿರ್ಧರಿಸಿ ಮಕ್ಕಳ ಭವಿಷ್ಯದ ಬದುಕಿನ ಕಡೆಗೆ ಗಮನ ಹರಿಸಿದ್ದೇನೆ. ಮನಸ್ಸು ಶಾಂತವಾಗಿ ಆಶ್ರಮದ ಕೆಲಸಗಳ ಕಡೆಗೆ ಆಸಕ್ತಿ ವಹಿಸಿದ್ದೇನೆ.” ಎಂದು ಹೇಳಿದಳು.
ಗೆಳತಿಯ ಮಾತುಗಳನ್ನೆಲ್ಲ ಕೇಳಿದ ಸುಮನಾ ಮಮ್ಮಲ ಮರುಗಿದಳು. “ಯೋಚಿಸಬೇಡ ಭಾರ್ಗವಿ, ನಾನಿರುವವರೆಗೂ ನಾನು ನಿನಗೆ ಬೆಂಗಾವಲಾಗಿರುತ್ತೇನೆ. ಜೊತೆಯಾಗಿ ಸಾಗುತ್ತ ನಿನ್ನ ಮಕ್ಕಳಿಗೆ ಒಂದು ದಾರಿ ಮಾಡೋಣ. ಕಾಲ ಕಳೆದಂತೆ ಎಲ್ಲವೂ ಸರಿಹೋದರೂ ಹೋಗಬಹುದು” ಎಂದು ಭರವಸೆಯ ನುಡಿಗಳಿಂದ ಅವಳನ್ನು ಸಮಾಧಾನ ಪಡಿಸಿದಳು.
ಇತ್ತ ಸುಮನಾಳ ಮನೆಯಲ್ಲಿಯೂ ತಾಯಿಯ ಕಾಲಾನಂತರ ಸಾಕಷ್ಟು ಬದಲಾವಣೆಗಳಾದವು. ಮೂರೂಜನ ಅಕ್ಕತಂಗಿಯರು ವಾಸವಿದ್ದ ಮನೆಯನ್ನು ಅಕ್ಕ ಭಾವ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಆಲೋಚನೆ ಮಾಡುತ್ತಿರುವ ಸುಳಿವು ದೊರೆತು ನೇರವಾಗಿ ಎಲ್ಲರೂ ಕೂಡಿಯೇ ಅವರಿಬ್ಬರನ್ನೂ ಎದುರಿಸಲು ತೀರ್ಮಾನಿಸಿದರು. ಬಹಳ ವರ್ಷಗಳ ಹಿಂದಿನ ಮನೆಯದಾಗಿದ್ದರಿಂದ ಅದನ್ನು ಮಾರಾಟ ಮಾಡಿ ಎಲ್ಲರೂ ಪಾಲು ಪಡೆದುಕೊಳ್ಳುವುದೆಂದು ನಿರ್ಧರಿಸಿ ಅದನ್ನು ಅಕ್ಕಭಾವನವರಿಗೆ ತಿಳಿಸಿದರು. ತಾವು ಮೂವರೂ ಅವರುಗಳ ಕೈಕೆಳಗೆ ಇರಲಾರೆವೆಂಬ ಅಭಿಪ್ರಾಯವನ್ನು ಮಂಡಿಸಿದರು.
ಅವರಿಗೆ ಈ ಸೋದರಿಯರ ಹೇಳಿಕೆಯು ಇಷ್ಟವಾಗದಿದ್ದರೂ ಜಗ್ಗಾಡಿದರೆ ಕಷ್ಟವೆಂದರಿತು ಅದಕ್ಕೆ ಸಮ್ಮತಿ ಸೂಚಿಸಿದರು. ಅದರಂತೆ ಮನೆಯನ್ನು ಮಾರಾಟ ಮಾಡಿ ಎಲ್ಲರಿಗೂ ಪಾಲು ಮಾಡಿದರು. ಅದು ಪಿತ್ರಾರ್ಜಿತವಾದ್ದರಿಂದ ಅಕ್ಕ ಭಾವನವರ ಇಬ್ಬರು ಮಕ್ಕಳಿಗೂ ಅದರಲ್ಲಿ ಪಾಲು ದಕ್ಕಿತು. ಒಬ್ಬೊಬ್ಬರಿಗೂ ಸುಮಾರು ಐವತ್ತು ಲಕ್ಷಕ್ಕು ಮೀರಿ ಹಣಬಂತು. ಮೂರೂಜನ ಸೋದರಿಯರು ಸೇರಿ ರಾಮಕೃಷ್ಣ ನಗರದಲ್ಲಿ ಮೂರು ಬೆಡ್‌ರೂಮಿನ ಒಂದು ಮನೆಯನ್ನು ಒಂದೂವರೆಕೋಟಿ ಕೊಟ್ಟು ಕೊಂಡುಕೊಂಡರು. ಅಲ್ಲಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿಕೊಂಡರು. ಎಂದಿನಂತೆ ಅವರವರ ಆಸಕ್ತಿಗೆ ತಕ್ಕಂತೆ ಹವ್ಯಾಸ ಬೆಳೆಸಿಕೊಂಡು ಒಬ್ಬರಿಗೊಬ್ಬರು ಆಸರೆಯಾಗಿ ದಿನಗಳೆಯುತ್ತಿದ್ದರು. ಕೊನೆಯ ಸೋದರಿ ಮಾತ್ರ ಇನ್ನೂ ಕೆಲಸ ಮುಂದುವರಿಸಿದ್ದಳು. ಎಲ್ಲರೂ ಭಾರ್ಗವಿಯ ಬದುಕಿನ ಪುಟಗಳನ್ನು ಓದುತ್ತಾ ತಮ್ಮಿಂದೇನಾದರೂ ಸಹಾಯ ಮಾಡಬಹುದೇ ಎಂಬ ಆಲೋಚನೆ ಹೊಂದಿದ್ದರು. ಅಲ್ಲದೆ ನಾವುಗಳೆಲ್ಲ ಮದುವೆಯಾಗಲಿಲ್ಲ ಎಂಬುದು ಒಂದೇ ಕಾರಣ. ಆದರೆ ಭಾರ್ಗವಿ ಮದುವೆಯಾಗಿದ್ದೂ ನಾನಾ ಕಾರಣಗಳಿಂದ ಒಂಟಿಯೇ ಎಂದುಕೊಂಡರು.
ಕಾಲ ಸರಿದು ಹೋಗುತ್ತಿತ್ತೇ ವಿನಃ ಭಾರ್ಗವಿಯ ಮಕ್ಕಳ ಮದುವೆಗೆ ಮಾಡಿದ ಯಾವ ಫ್ರಯತ್ನಗಳೂ ಫಲಕಾರಿಯಾಗಲಿಲ್ಲ. ಆದರೆ ಇದೇ ಸಮಯದಲ್ಲಿ ಸಿದ್ಧಾರ್ಥನಿಗೆ ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕಾಲವಾದನೆಂಬ ಸುದ್ಧಿ ತಿಳಿಯಿತು. ಇದರಿಂದ ಭಾರ್ಗವಿಗೆ ಬರಸಿಡಿಲು ಎರಗಿದಂತಾಯಿತು. ಆತ ತನ್ನಿಂದ ಮತ್ತು ಮಕ್ಕಳಿಂದ ಸಂಬಂಧವನ್ನು ದೂರ ಮಾಡಿಕೊಂಡಿದ್ದರೂ ಲೋಕಾರೂಢಿಯಲ್ಲಿ ಆತ ತನ್ನ ಗಂಡನಾಗಿದ್ದ ಎಂದುಕೊಂಡಿದ್ದಳು. ಮಕ್ಕಳ ಮಂಗಳ ಕಾರ್ಯದಲ್ಲಿಯಾದರೂ ಭಾಗಿಯಗುತ್ತಾನೆಂಬ ಭರವಸೆಯಿತ್ತು. ಅದೊಂದು ದೂರದ ಆಸೆಯಾಗಿತ್ತು. ಅದೂ ಈಗ ಕಮರಿಹೋಯಿತು.
ಭಗವಂತ ನನ್ನನ್ನು ಎಷ್ಟು ರೀತಿಯಲ್ಲಿ ಪರೀಕ್ಷೆಗೆ ಒಡ್ಡುತ್ತಿದ್ದಾನೆ. ನಾನೇ ತಪ್ಪು ಮಾಡಿದೆನೇ? ಒಮ್ಮೆ ಇಬ್ಬರೂ ಕುಳಿತು ಮಾತುಕತೆಯಾಡಬೇಕಿತ್ತೇನೋ. ಅವರನ್ನು ಪಕ್ಕಕ್ಕೆ ಸರಿಸದೆ ಇದ್ದಿದ್ದರೆ….. ..ಛೇ,,ನಾನೆಲ್ಲಿ ಪಕ್ಕಕ್ಕೆ ಸರಿಸಿದ್ದೆ. ಅವನೇ ನನಗೆ ತಿಳಿಯದಂತೆ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದ. ಯಾವುದಕ್ಕೂ ಉತ್ತರಸಿಗದೆ ಒದ್ದಾಡುತ್ತ ಮಕ್ಕಳೊಂದಿಗೆ ಊರಿಗೆ ತೆರಳಿ ಶಾಸ್ತ್ರ ಸಂಪ್ರದಾಯದಂತೆ ಮಾಡಬೇಕಾದ್ದನ್ನೆಲ್ಲ ಮಾಡಿ ಮುಗಿಸಿದಳು. ಪೂರ್ವೀಕರ ಆಸ್ತಿ ವಿಂಗಡಣೆಯ ವಿಚಾರ ಪ್ರಸ್ತಾಪವಾದಾಗ ತನಗಾಗಿ ಏನನ್ನೂ ಬೇಡದೆ ಎಲ್ಲವನ್ನೂ ಸಿದ್ಧಾರ್ಥನ ಅಕ್ಕ ತಂಗಿಯರ ವಶಕ್ಕೆ ನೀಡಲು ತನ್ನ ಒಪ್ಪಿಗೆ ಸೂಚಿಸಿ ನಿರ್ಲಿಪ್ತತೆಯಿಂದ ಮೈಸೂರಿಗೆ ಹಿಂತಿರುಗಿದಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=46240

-ಬಿ.ಆರ್.ನಾಗರತ್ನ, ಮೈಸೂರು

