ಲಹರಿ

ಹಳೆಯ ಹಾಡುಗಳೂ…. ಹಸಿರು ನೆನಪುಗಳೂ

Share Button

ಸಂಗೀತ ಕೇಳುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಲ್ಲೊಂದು. ಬಿಡುವಿನ ವೇಳೆಯಲ್ಲಿ, ನನಗಿಷ್ಟದ ಹಾಡನ್ನು ಆಲಿಸುತ್ತಾ ಕೆಲಸ ಮಾಡಲು ಎಲ್ಲಿಲ್ಲದ ಉತ್ಸಾಹ. ಸಂಗೀತಕ್ಕೆ ಭಾಷೆಯ ಗಡಿಯಿಲ್ಲ. ಪ್ರತಿಯೊಬ್ಬರಿಗೂ ಸಂಗೀತದ ಬಗ್ಗೆ ಅವರದೇ ಆದ ಅಭಿರುಚಿ ಮತ್ತು ಆಯ್ಕೆ ಇರುತ್ತದೆ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಭಾವಗೀತೆ, ಚಲನಚಿತ್ರ ಗೀತೆ, ಭಕ್ತಿಗೀತೆ ಹೀಗೆ ಹಲವಾರು ಬಗೆಯ ಸಂಗೀತದವರೆಗೆ, ಪ್ರತಿಯೊಂದೂ ಪ್ರಕಾರವೂ ತನ್ನದೇ ಅದ ಸೊಗಡನ್ನು ಹೊಂದಿದೆ. ಇತ್ತೀಚಿಗೆ, ನಾನು ಪ್ರಯಾಣ ಮಾಡುವಾಗ ‘ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು’, ಎಂಬ ಚಿತ್ರಗೀತೆಯನ್ನು ಕೇಳುತ್ತಿದ್ದೆ. ಅದರ ಸಾಲುಗಳನ್ನು ಕೇಳುವಾಗ, ಅದರಲ್ಲಿ ಅಡಗಿರುವ ಸಂತೋಷ, ದು:ಖ, ಜೀವನ ಸತ್ಯ ಹಾಗೂ ತಾತ್ವಿಕ ವಿಚಾರಗಳು ನನ್ನ ಮನಸ್ಸನ್ನು ಬಹುವಾಗಿ ತಟ್ಟಿತ್ತು. ಅಧಿಕಾರ, ಸಂಪತ್ತು, ಯಶಸ್ಸು ಎಲ್ಲವೂ ಕ್ಷಣಿಕ, ಮಾನವೀಯತೆ ಮತ್ತು ಪ್ರಾಮಾಣಿಕತೆ ಶಾಶ್ವತ ಎನ್ನುವ ಜೀವನ ಪಾಠವನ್ನು ಒಳಗೊಂಡ ಈ ಹಾಡು ಎಷ್ಟೊಂದು ಅರ್ಥಪೂರ್ಣ ಅನಿಸಿತು. ಮನಸ್ಸು ಒಮ್ಮೆ ಆ ಕಾಲಕ್ಕೆ ಸರಿದು ಬಿಟ್ಟಿತು. ಹೌದು! ಎಂಥಾ ಅಧ್ಬುತ ಸಾಹಿತ್ಯಗಳನ್ನೊಳಗೊಂಡ ಹಾಡು. ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರಾದ ಚಿ. ಉದಯಶಂಕರ್‌ ರವರಿಂದ ಮೂಡಿ ಬಂದ ಈ ಸಾಲುಗಳನ್ನು ಕೇಳುತ್ತಾ ಕಣ್ಣು ತೇವಗೊಂಡಿತ್ತು. ಸಮಯ ಉರುಳುತ್ತಲೇ ಇರುತ್ತವೆ. ಕಾಲ ಎಷ್ಟೇ ಬದಲಾದರೂ, ಕೆಲವು ಹಾಡುಗಳು ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದು ಬಿಡುತ್ತವೆ. ಆ ಹಾಡುಗಳ ಅರ್ಥಪೂರ್ಣ ಪದಗಳು, ಹಿನ್ನಲೆ ಗಾಯಕರ ಭಾವಪೂರ್ಣ ಧ್ವನಿ, ಸುಮಧುರ ಸಂಗೀತ ನಮ್ಮ ಮನಸ್ಸಿಗೆ ಮುದ ನೀಡುವುದಲ್ಲದೇ, ಮನಸ್ಸನ್ನು ಆಳವಾಗಿ ತಟ್ಟುತ್ತದೆ. ಮತ್ತೆ ಮತ್ತೆ ಕೇಳಬೇಕೆನಿಸುವ ಇಂಥಾ ಹಾಡುಗಳು ನಮ್ಮ ಹೃದಯದಲ್ಲಿ ಎಂದೆಂದಿಗೂ ಮೊಳಗುತ್ತಲೇ ಇರುತ್ತವೆ.

ಹಳೆಯ ಚಿತ್ರಗೀತೆಗಳನ್ನು ಆಲಿಸುವುದು ಮನಸ್ಸಿಗೆ ಉಲ್ಲಾಸ ಮತ್ತು ಖುಷಿಯನ್ನು ನೀಡುವ ಒಂದು ಸುಂದರ ಅನುಭವವೆಂದರೆ ತಪ್ಪಲ್ಲ. ರಾತ್ರಿ ಕೆಲಸವೆಲ್ಲಾ ಮುಗಿದ ಬಳಿಕ, ನನ್ನ ಬಳಿ ಇರುವ ಹಳೆಯದಾದ ಟೇಪ್‌ರೆಕಾರ್ಡರ್‌ನಲ್ಲಿ ಎಫ್.ಎಮ್. ಕೇಳಿಕೊಂಡು ನಿದ್ರೆಗೆ ಜಾರುವುದು ನನ್ನ ಪ್ರತಿನಿತ್ಯದ ಜಾಯಮಾನ. ಅದೇ ರೀತಿಯಲ್ಲಿ ಪ್ರಯಾಣ ಮಾಡುವಾಗ ಸಂಗೀತ ಕೇಳುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ. ನನ್ನ ನೆಚ್ಚಿನ ಹಾಡುಗಳನ್ನು ಕೇಳುತ್ತಾ, ಎಷ್ಟೇ ದೂರ ಪ್ರಯಾಣಿಸುವುದಾದರೆ, ನನಗೆ ಆಯಾಸವೇ ತಿಳಿಯುವುದಿಲ್ಲ. ಸುಮಧುರ ಸಂಗೀತವು ನಮ್ಮ ಪ್ರಯಾಣವನ್ನು ಒಂದು ಸುಂದರ ಅನುಭವವಾಗಿಸುವುದಂತೂ ಖಂಡಿತ ಸತ್ಯ. ವಿಶೇಷವಾಗಿ ಹಳೆಯ ಹಾಡುಗಳನ್ನು ಕೇಳುವಾಗ ನನ್ನ ಬಾಲ್ಯ, ಯೌವನದ ದಿನಗಳೂ ನೆನಪಾಗಿ ಮರೆಯಲಾಗದ ಕೆಲವೊಂದು ಸನ್ನಿವೇಶಗಳನ್ನು ಕಣ್ಣಮುಂದೆ ತಂದು ನಿಲ್ಲಿಸುವುದಲ್ಲದೆ, ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯುತ್ತದೆ. ಒಮ್ಮೊಮ್ಮೆ ನನ್ನ ನೆಚ್ಚಿನ ಹಾಡು ಬರುವಾಗ, ನನ್ನ ಗಮ್ಯಸ್ಥಾನ ತಲುಪಿದಾಗ, ಬೇಸರವಾಗಿ ಇನ್ನೂ ಸ್ವಲ್ಪ ದೂರ ಪ್ರಯಾಣಿಸಲು ಇರಬೇಕಿತ್ತು ಎಂದು ಮನಸ್ಸು ಬಯಸುತ್ತದೆ.

ಒಂದು ಕಾಲದಲ್ಲಿ ಕನ್ನಡ ಚಲನಚಿತ್ರ ಗೀತೆಗಳು ಕೇವಲ ಮನರಂಜನೆಯ ಸಾಧನವಾಗಿರದೆ, ಕನ್ನಡ ಸಾಹಿತ್ಯ, ಪರಂಪರೆಯ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಬಿಂಬವಾಗಿತ್ತು. ಅವುಗಳ ಪ್ರಮುಖ ಆಕರ್ಷಣೆ ಮತ್ತು ವೈಶಿಷ್ಟವೆಂದರೆ ಚಿತ್ರಗೀತೆಗಳ ಸಾಹಿತ್ಯ ಮೌಲ್ಯವಾಗಿತ್ತು. ಹಳೆಯ ಕನ್ನಡ ಹಾಡುಗಳಲ್ಲಿ ಪ್ರಕೃತಿ, ತಾಯಿ, ಜೀವನ ತತ್ವ, ತ್ಯಾಗ, ಸಹನೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ವರ್ಣನೆ, ಅರಿವೂ ಇರುತ್ತಿತ್ತು. ಮಹಾನ್ ಗಾಯಕರಾದ, ಡಾ. ರಾಜ್‌ಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲಾ ಮುಂತಾದವರು ಮಧುರ ಹಾಗೂ ಹೃದಯಸ್ಪರ್ಶಿ ಗೀತೆಗಳನ್ನು ಹಾಡುತ್ತಿದ್ದರೆ, ಎಂಥಾ ಕಲ್ಲು ಹೃದಯವೂ ಕರಗುತ್ತಿತ್ತು. ಇವರ ಹಾಡಿದ ಗಾಯನಗಳಲ್ಲಿ ಪ್ರೀತಿ, ವಿರಹ ಮತ್ತು ಜೀವನಸತ್ಯ ಸ್ಪಷ್ಟವಾಗಿ ಕಾಣುತ್ತಿತ್ತು. ಅದೇ ರೀತಿಯಲ್ಲಿ ಅರ್ಥಪೂರ್ಣ ಪದಗಳನ್ನು ಬಳಸಿ, ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಿದ ಆಗಿನ ಕಾಲದ ಗೀತಾರಚನಕಾರರು ಮತ್ತು ಸಂಗೀತ ನಿರ್ದೇಶಕರೂ ನೀಡಿದ ಅಮೂಲ್ಯ ಕೊಡುಗೆಯನ್ನು ನಾವು ಸ್ಮರಿಸಲೇಬೇಕು. ಎಲ್ಲರ ಕೊಡುಗೆಯು ಮೇಳೈಸಿ ಅದ್ಭುತ ಸಂಗೀತದ ರಸದೌತಣವನ್ನೇ ಬಡಿಸಿದರು ಎಂದರೆ ತಪ್ಪಾಗಲಾರದು. ಕನ್ನಡ ಮಾತ್ರವಲ್ಲ, ಅನ್ಯ ಭಾಷೆಗಳ ಹಾಡೂ ತನ್ನ ಸಾಹಿತ್ಯಿಕ ಸೊಗಡು ಹಾಗೂ ಸೌಂದರ್ಯದಿಂದ ಶ್ರೀಮಂತಿಕೆಯಿಂದ ಕೂಡಿತ್ತು. ರೇಡಿಯೋದಲ್ಲಿ ಬರುತ್ತಿದ್ದ ಆ ಸುಂದರ ಗೀತೆಗಳನ್ನು ಕೇಳುತಿದ್ದರೆ, ಸಂಗಿತದ ಸುವರ್ಣಯುಗವೆಂದೇ ಭಾಸವಾಗುತ್ತಿತ್ತು. ಚಿಕ್ಕಂದಿನಿಂದಲೇ, ರೇಡಿಯೋನಲ್ಲಿ ಬರುವ ಚಿತ್ರಗೀತೆಗಳು, ಕೋರಿಕೆ, ಬಿನಾಕ ಗೀತ್‌ಮಾಲಾ, ಮುಂತಾದ ಕಾರ್ಯಕ್ರಮಗಳನ್ನು ತಪ್ಪದೇ ಕೇಳುತ್ತಿದ್ದೆವು.

ಆದರೆ ಕಾಲ ಬದಲಾದಂತೆ, ಸಂಗೀತದ ಆಯಾಮವೇ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ವಿಭಿನ್ನ ಸಂಗೀತ ಪ್ರಕಾರಗಳು, ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಯುವಜನತೆಯನ್ನು ಆಕರ್ಷಿಸುವ ಭಿನ್ನ ಭಿನ್ನ ಶೈಲಿಯ ನವೀನ ಸಂಗೀತ ಸಂಯೋಜನೆಯೊಂದಿಗೆ ಕೂಡಿದ, ಅನೇಕ ಚಲನಚಿತ್ರ ಗೀತೆಗಳು ಹೊಸ ತಲೆಮಾರಿನ ಅಭಿರುಚಿಗೆ ಅನುಗುಣವಾಗಿ ಬಳಕೆಯಲ್ಲಿದೆ. ಹೊಸ ತಂತ್ರಜ್ಞಾನದ ಪ್ರಭಾವದಿಂದ ಫ್ಯೂಷನ್ ಹಾಡುಗಳೂ ಜನಪ್ರಿಯವಾಗಿದೆ. ಈಗಿನ ಸಂಗೀತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆ ಪಡೆಯುವ ಶಕ್ತಿ ಇದೆ. ಎಂತವರನ್ನೂ ಮಂತ್ರಮುಗ್ಧರನ್ನಾಗಿ ಮಾಡುವ ತಾಕತ್ತು ಇಂದಿನ ಚಲನಚಿತ್ರ ಗೀತೆಗೆ ಇದೆ. ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ತ್ವರಿತಗತಿಯಲ್ಲಿ ಹಾಡುಗಳು ಜನತೆಯನ್ನು ತಲುಪುತ್ತವೆ, ಹಾಗೂ ಜನಪ್ರಿಯತೆಯನ್ನು ಪಡೆಯುತ್ತವೆ. ಇಂದಿನ ತಲೆಮಾರಿಗೆ ಅನುಗುಣವಾಗಿ ಸಂಗೀತ ರಚನೆಯಾಗುತ್ತಿದ್ದು, ಉತ್ತಮ ಹಾಡುಗಳು ಹೊರಹೊಮ್ಮುತ್ತಿವೆ. ಸಂಗೀತ ರಂಗದಲ್ಲಿ ಅಭೂತಪೂರ್ವ ಕ್ರಾಂತಿಯಾಗಿದೆ ಎಂದೇ ಹೇಳಬಹುದು. ಹೆಸರಾಂತ ಹಿನ್ನಲೆ ಗಾಯಕರೂ, ಗೀತಾ ರಚನಕಾರರೂ ಹಾಗೂ ನುರಿತ ಸಂಗೀತ ನಿರ್ದೇಶಕರಿಂದ ಹೊಸತನದಿಂದ ಕೂಡಿದ ಚಿತ್ರಗೀತೆಗಳು ಯುವಜನತೆಯನ್ನು ಸೆಳೆಯುತ್ತಿವೆ.

ಪ್ರಸ್ತುತ ಆಧುನಿಕ ಸಂಗೀತ ಲೋಕದಲ್ಲಿ ವಿಶಿಷ್ಟ ರೀತಿಯ ಹಾಡುಗಳು ಕೇಳಿ ಬರುತ್ತಿದೆಯಾದರೂ, ನೆನಪಿನಲ್ಲಿ ಉಳಿಯುವುದು ಸ್ವಲ್ಪ ಕಷ್ಟ. ಅದೆಷ್ಟು ಜನಪ್ರಿಯ ಹಾಡಾದರೂ, ಸಾಹಿತ್ಯ ತಕ್ಷಣ ಮರೆಯುತ್ತೇವೆ. ಕ್ಲಿಷ್ಟ ಪದಗಳ ಬಳಕೆ, ಪಾಶ್ಚಾತ್ಯ ಸಂಗೀತದ ಪ್ರಭಾವ, ರಾಪ್ ಶೈಲಿಯ ಗಾಯನ, ಕಠಿಣ ಪದ ಪ್ರಯೋಗ, ಇಂಗ್ಲೀಷ್ ಭಾಷೆಗಳ ಮಿಶ್ರಣ ಇವೆಲ್ಲವೂ ಹಾಡುಗಳ ಸಾಹಿತ್ಯವನ್ನು ಸುಲಭವಾಗಿ ನೆನಪಿನಲ್ಲಿಡಲು ಅಡ್ಡಿಯಾಗುತ್ತದೆ. ನನಗೆ ಈಗಲೂ ಹೊಸ ಹಾಡುಗಳ ಸಾಲುಗಳು ಸರಿಯಾಗಿ ನೆನಪಿರುವುದಿಲ್ಲ. ಒಮ್ಮೊಮ್ಮೆ ತಪ್ಪಾಗಿ ಹೇಳುವಾಗ ಮಕ್ಕಳು ತಿದ್ದುತ್ತಾರೆ. ಆದರೆ ಹಳೆಯ ಹಾಡುಗಳನ್ನು ಸರಿಯಾಗಿ ಹಾಡುತ್ತೇನೆ. ಈ ಹಾಡುಗಳು ಸರಳ ಸಾಹಿತ್ಯದಿಂದ ತಲೆಮಾರು ಕಳೆದರೂ ನೆನಪಿನಲ್ಲಿ ಉಳಿಯುವುದಲ್ಲದೆ, ಅವುಗಳ ಸಾಹಿತ್ಯಿಕ ಮೌಲ್ಯ ಮತ್ತು ಭಾವಾನಾತ್ಮಕ ಸಂಬಂಧದೊಂದಿಗೆ ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ಬೇರೂರಿದೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ, ‘ತೆರೆದಿದೆ ಮನೆ ಬಾ ಓ ಅತಿಥಿ’, ‘ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ’ ‘ನೀರಿನಲ್ಲಿ ಅಲೆಯ ಉಂಗುರ’ ಇನ್ನೂ ಮುಂತಾದ ಅನೇಕ ಹಾಡುಗಳು ಕನ್ನಡಿಗರ ಹೃದಯದಲ್ಲಿ ಇಂದಿಗೂ ಜೀವಂತವಾಗಿದೆ.

ಒಟ್ಟಿನಲ್ಲಿ, ಸಂಗೀತದ ಶೈಲಿ ಬದಲಾಗುತ್ತಲೇ ಇರುತ್ತವೆ. ಹೊಸತನದ ಪ್ರಯೋಗ ನಡೆಯುತ್ತಲೇ ಇವೆ. ಆದರೆ ಮನಸ್ಸಿಗೆ ಹತ್ತಿರವಾದ ಕೆಲವೊಂದು ಸುಮಧುರ ಗೀತೆಗಳು ಎಂದಿಗೂ ಹಳೆಯದಾಗುವುದಿಲ್ಲ. ಸಂಗೀತವೆಂಬುದು ಬರೀ ಕಿವಿಗೆ ಇಂಪು ನೀಡುವ ಕಲೆ ಮಾತ್ರವಲ್ಲದೆ, ಅದು ಮನಸ್ಸಿನ ಭಾವನೆಗಳಿಗೆ ಇಂಬು ಕೊಡುವ ಒಂದು ಅಧ್ಬುತ ಶಕ್ತಿ. ಸಂಗೀತ ಕೇಳುವುದರಿಂದ ನೋವು, ರಕ್ತದೊತ್ತಡ, ಖಿನ್ನತೆ, ಮಾನಸಿಕ ಒತ್ತಡ ಮುಂತಾದ ಲಕ್ಷಣಗಳು ಕಡಿಮೆಯಾಗುವುದಲ್ಲದೆ, ಮಾನಸಿಕ ಸ್ವಸ್ಥತೆಯನ್ನು ಹತೋಟಿಯಲ್ಲಿರುವ ಸಾಮರ್ಥ್ಯವಿದೆಯೆಂದು, ಸಂಗೀತ ಚಿಕಿತ್ಸೆಯಿಂದ ದೃಢಪಟ್ಟಿದೆ. ಔಷಧಿಯಿಲ್ಲದೆ ಮನಸ್ಸಿಗೆ ಸಾಂತ್ವನ ನೀಡುವ ಶಕ್ತಿ ಸಂಗೀತಕ್ಕೆ ಇದೆ ಎಂದು ನನ್ನ ಅನಿಸಿಕೆ. ಹಾಡುಗಳು ಕಾಲಕ್ಕೆ ತಕ್ಕಂತೆ ಬದಲಾಗುವುದು ಸಹಜ. ಹಳೆಯ ಹಾಡುಗಳನ್ನು ನಾವು ಇಷ್ಟ ಪಟ್ಟರೆ, ಇಂದಿನ ತಲೆಮಾರು ಆಧುನಿಕ ಸಂಗೀತದೊಂದಿಗೆ ಹೊಸ ಹಾಡನ್ನು ಬಯಸುತ್ತಾರೆ. ಮೊದಲೇ ಹೇಳಿದಂತೆ, ನನಗಂತೂ ಪ್ರಯಾಣಿಸುವಾಗ ಚಿತ್ರಗೀತೆಗಳನ್ನು ಆಲಿಸುವುದೆಂದರೆ ತುಂಬಾ ಖುಷಿ. ಸಂಗೀತದ ವಿಶೇಷತೆ ಎಂದರೆ, ಅದು ನಮ್ಮ ಪ್ರಯಾಣಕ್ಕೆ ಕೇವಲ ಹಿನ್ನಲೆ ಸಂಗೀತವಾಗಿರದೆ, ನಮ್ಮ ಭಾವನೆಗಳೊಂದಿಗೆ ಬೆರೆತು ಒಂದು ಸುಂದರ ಅನುಭವವನ್ನು ಸೃಷ್ಟಿಸುತ್ತದೆ. ನಮ್ಮ ಗಮ್ಯಸ್ಥಾನ ತಲುಪಿದಾಗ, ಪ್ರಯಾಣ ಕೊನೆಗೊಳ್ಳುವುದರೊಂದಿಗೆ ಹಾಡೂ ಮುಗಿದಿರುತ್ತದೆ. ಆದರೆ, ಆ ಹಾಡುಗಳು ನೆನಪಿಸಿದ ಸಿಹಿ ಅನುಭವಗಳು ನಮ್ಮ ಮನಸ್ಸಿನಲ್ಲಿ ಬಹಳ ಕಾಲ ಪ್ರತಿಧ್ವನಿಸುತ್ತಾ ಇರುತ್ತದೆ. ಸಂಗೀತವು ಕಿವಿಗಳಿಗೆ ಶ್ರವಣ ಸುಖವನ್ನು ನೀಡುವುದರೊಂದಿಗೆ, ನಮ್ಮ ಬದುಕಿನ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಒಂದು ಸುಂದರ ಮಾಧ್ಯಮವೂ ಹೌದು.

–ಶೈಲಾರಾಣಿ ಬೋಳಾರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *