ಕಾವ್ಯ ಭಾಗವತ

ಕಾವ್ಯ ಭಾಗವತ 117 : ಇಪ್ಪತ್ತನಾಲ್ಕು ಗುರುಗಳು – 2

Share Button

ಏಕಾದಶ ಸ್ಕಂದ – ಅಧ್ಯಾಯ – 2
ಇಪ್ಪತ್ತನಾಲ್ಕು ಗುರುಗಳು – 2

9. ಅಜಗರ – ಅಜಗರ ಸರ್ಪ ಆಹಾರಕ್ಕಾಗಿಯೂ ಸಂಚರಿಸದೆ
ಇದ್ದ ಜಾಗದಿ ದೊರಕಿದುದರಲೇ ತೃಪ್ತಿ ಪಡೆವಂತೆ
ಪ್ರಾರಬ್ಧ ಕರ್ಮಾನುಸಾರ ಲಭಿಸಿದಷ್ಟರಲ್ಲೇ ಜೀವಿಸಿ
ಸುಖ ದುಖಃಗಳು ಬರುವುದ ಸ್ವೀಕರಿಸಿ
ಪ್ರತ್ಯೇಕ ಪ್ರಯತ್ನಿಸದೆ ತತ್ವ ಚಿಂತಾಪರವಾಗಿರಬೇಕೆಂದ
ಕಲಿತೆ

10. ಸಮುದ್ರ – ಶರಧಿಯು ಮಳೆಗಾಲದಿ ಬರುವ
ಪ್ರವಾಹ ಕಾಲದಿ ನದಿಗಳಿಂದ ಉಬ್ಬದೆ
ಬೇಸಿಗೆಯಲ್ಲಿ ನೀರಿಲ್ಲದ ನದಿಗಳಿಂದ ಕುಗ್ಗದೆ
ಒಣಗದೆ ಸಮನಾಗಿರುವ ಪರಿ
ಐಶ್ವರ್ಯಕೆ ಹಿಗ್ಗದೆ ಬಡತನಕೆ ಕುಗ್ಗದೆ
ಭಗವಧ್ಯಾನದಲಿ ಸದಾ
ನಿರತನಾಗಿರಬೇಕೆಂಬುದ ಕಲಿತೆ

11. ಪತಂಗ – ಪತಂಗದಿಂ ಮನುಜ ಸ್ತ್ರೀ ಮಾಯೆಯಲಿ
ಮೋಹಿತನಾಗಿ ವಿವೇಕಹೀನನಾಗಿ
ಪತಂಗ ಅಗ್ನಿಜ್ವಾಲೆಯಲಿ ಬೆಂದಂತೆ
ನಷ್ಟವಾಗುವನೆಂಬುದ ಕಲಿತೆ

12 ಜೇನುಹುಳ – ಜೇನುಹುಳ ಹೂವಿಂದ ಹೂವಿಗೆ ಹಾರಿ
ಸ್ವಲ್ಪ ಸ್ವಲ್ಪವಾಗಿ ಮಧುಸಾರವ ಸಂಗ್ರಹಿಪ ತೆರದಿ
ಮನುಜ ಸಕಲ ಗ್ರಂಥಗಳಿಂ ಜ್ಞಾನಸುಧೆಯ ಪಡೆದು
ಜೀನುಹುಳಗಳು ಜೇನ ಸಂಗ್ರಹಿಸಿ ಕೊನೆಗೆ
ಜೀನಿನೊಡನೆ ತಾವೂ ನಾಶವಾಗುವ ಪರಿಯ ಅರಿತು
ಯೋಗಿ ಸಂಗ್ರಹದ ವ್ಯಸನ ತೊರೆದು
ಜೀವಿಸಬೇಕೆಂಬುದ ಜೇನುಹುಳಗಳಿಂದ ಕಲಿತೆ

13. ಹೆಣ್ಣಾನೆ – ಹೆಣ್ಣಾನೆಯ ಸ್ಪರ್ಶಕ್ಕೆಳಸಿ
ಬಲಶಾಲಿ ಗಂಡಾನೆ ಕಂದಕಕೆ ಬಿದ್ದು
ಕೆಡುವ ಪರಿ ಯೋಗಿಯು ಸ್ತ್ರೀಯ ಮೋಹಪಾಶಕೆ
ಬೀಳದೆ ಎಚ್ಚರದಿಂ ಇರಬೇಕೆಂಬುದ ಆನೆಯಿಂ ಕಲಿತೆ

14. ಬೇಡ – ಕಾನನದಿ ಸಹಸ್ರಾರು ಜೇನುಹುಳು
ಸಂಗ್ರಹಿಪ ಜೇನ ಬೇಡನು ಅಪಹರಿಪ ತೆರದಿ
ಲೋಭದಲಿ ಸಂಗ್ರಹಪಿ ಮನುಜನ ದ್ರವ್ಯ
ಪರರ ಪಾಲಾಗುವುದ ಬೇಡನಿಂ ಕಲಿತೆ

15. ಜಿಂಕೆ – ಜಿಂಕೆ ಬೇಟೆಗಾರದ ಪುಂಗಿಯ ಗಾನಕೆ
ಮರುಳಾಗಿ ಸೆರೆಯಾಗುವ ಪರಿಯಲಿ
ಋಷ್ಯಶೃಂಗ ಮುನಿ ಸ್ತ್ರೀ ಮುಖವ ಕಾಣದವನಾಗಿದ್ದೂ
ವೇಶ್ಯಾಸ್ತ್ರೀಯರ ಗ್ರಾಮ್ಯ ಗೀತಾ ನರ್ತನಗಳಿಗೆ
ಮೋಹಗೊಂಡು ಅವರ ಕೈಗೊಂಬೆಯಾದ ಪರಿಯ
ಜಿಂಕೆಯಿಂ ಕಲಿತೆ

16. ಮತ್ಸ್ಯ – ಮೀನುಗಳು ಜಿಹ್ವಾ ಚಾಪಲ್ಯದಿಂ
ಗಾಳಕೆ ಸಿಕ್ಕಿ ಸಾಯುವುದ ಕಂಡು ಯೋಗಿ
ರಸನೇಂದ್ರಿಯ ಮೋಹ ಚಾಪಲ್ಯಕೆ
ವಶನಾಗಬಾರದೆಂಬುದ ಕಲಿತೆ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45977

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *