ಲಹರಿ

‘108’ – ಹಲವು ನಂಟು

Share Button

ಈ ಬದುಕೇ ಒಂದು ವಿಸ್ಮಯ. ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದ್ದರೂ  ಪರಿಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ. ಹಾಗೆಯೇ ನಮಗೆ ಸಂಬಂಧಪಡದ ವಿಷಯಗಳ ಬಗ್ಗೆ ಜಾಸ್ತಿ ಗಮನ ಹರಿಸಲು ಹೋಗುವುದು ಕಡಿಮೆಯೇ. ಕೆಲವೊಮ್ಮೆ ಕೆಲವೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಒದಗಿ ಬರುತ್ತದೆ. ಬಹುಶಃ ಎಲ್ಲರ ಅನುಭವವೂ ಹೀಗೆಯೇ ಇರಬಹುದು! ಇತ್ತೀಚೆಗೆ ಡಾ. ಗೀತಾ ಎನ್ ಅವರು ಬರೆದ ‘ಭಕ್ತಿಯ ಹೊನಲು’- ಭಕ್ತಿಗೀತೆಗಳ ಸಂಗ್ರಹ ಹಾಗೂ  ‘ಮಜಲ ಮಂದಾರ’- ಲೇಖನಗಳ ಸಂಗ್ರಹ ಪುಸ್ತಕಗಳನ್ನು ಅವಲೋಕನ ಮಾಡಿ ಅಭಿಪ್ರಾಯ ಹಂಚಿಕೊಳ್ಳುವ ಸದವಕಾಶ ಪ್ರಾಪ್ತವಾಯಿತು. ‘ಭಕ್ತಿಯ ಹೊನಲು’ ಪುಸ್ತಕದಲ್ಲಿ ಗೀತಾರವರು ರಚಿಸಿದ 108 ಭಕ್ತಿಗೀತೆಗಳಿವೆ. ಸರಳ, ಸುಂದರ, ಛಂದೋಬದ್ಧವಾದ, ಪ್ರಾಸಯುಕ್ತ ರಚನೆಗಳು. ಆಸ್ತಿಕ ಮಹಾಶಯರು ಇಷ್ಟಪಡುವಂತಹ ಭಕ್ತಿಗೀತೆಗಳು ಈ ಪುಸ್ತಕದಲ್ಲಿವೆ. ಹ್ಞಾ! ಮರೆತೆ.. ನಾನು ಬರೆಯಲು ಹೊರಟ ವಿಚಾರದತ್ತ ಬರುತ್ತೇನೆ. ಆ ಪುಸ್ತಕದ ಮೊದಲ ಭಕ್ತಿಗೀತೆ ವಿಘ್ನನಾಶಕ ಗಣಪನ ಮೇಲೆ ಇದ್ದರೆ, 108 ನೆಯ ಭಕ್ತಿಗೀತೆ ಗಾಯತ್ರಿ ದೇವಿಯ ಮೇಲಿದೆ. 108 ಕ್ರಮಸಂಖ್ಯೆ ನೋಡಿ ನನ್ನೊಳಗೆ ಒಂದು ಜಿಜ್ಞಾಸೆ ಆರಂಭವಾಯಿತು. ಕುಳಿತಲ್ಲಿಯೇ ಒಂದೆರಡು ನಿಮಿಷಗಳಲ್ಲಿ ಚಂದದೊಂದು  ಭಕ್ತಿಗೀತೆ ರಚಿಸುವಲ್ಲಿ ನಿಷ್ಣಾತರಾದ ಗೀತಾರವರಿಂದ ರಚಿತವಾದ ಭಕ್ತಿಗೀತೆಗಳ ಸಂಖ್ಯೆ 108 ಕ್ಕಿಂತ ಜಾಸ್ತಿಯೇ ಇದ್ದರೂ 108 ಭಕ್ತಿಗೀತೆಗಳನ್ನು ಆಯ್ದುಕೊಂಡಿರುವುದಕ್ಕೆ ಬಲವಾದ ಕಾರಣ ಇರಬಹುದು ಅಂತ ಅನ್ನಿಸಿತು. ಹಾಗೆಯೇ ‘108’ ನನ್ನನ್ನು ಯೋಚನೆಗೆ ಹಚ್ಚಿತು.

ಬ್ರಹ್ಮೋಪದೇಶದ ದಿನ ಉಪದೇಶ ಮಾಡುವ ಗಾಯತ್ರಿ ಮಂತ್ರವನ್ನು ಪ್ರತಿದಿನವೂ 108 ಸಲ ಹೇಳಿದರೆ ತುಂಬಾ ಒಳ್ಳೆಯದು ಅನ್ನುವುದು ಗೊತ್ತು. ಹಾಗೆಯೇ 108 ವಿಧದ ಗಾಯತ್ರಿ ಶ್ಲೋಕಗಳಿವೆ ಅನ್ನುವುದೂ ಗೊತ್ತು. ಪ್ರತಿ ವರ್ಷ ಗಣೇಶ ಚತುರ್ಥಿಯ ದಿನ ನಮ್ಮೂರಿನ ದೇವಸ್ಥಾನದಲ್ಲಿ 108 ತೆಂಗಿನಕಾಯಿಗಳ (ಅಷ್ಟೋತ್ತರ ಶತ ನಾಳಿಕೇರ) ಗಣಹೋಮ ಮಾಡುವುದೂ ಗೊತ್ತು. ಗಣಹೋಮ ಮಾಡುವಾಗ ಅಷ್ಟೋತ್ತರ ಶತ-108 ಅಥವಾ ಅಷ್ಟೋತ್ತರ ಸಹಸ್ರ-1008 ತೆಂಗಿನಕಾಯಿಯೇ ಯಾಕಿರಬಹುದು ಅನ್ನುವ ಒಂದು ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಸ್ವಲ್ಪ ಕಾಡಿದ್ದರೂ  ಆ ಬಗ್ಗೆ ಹುಡುಕಲು ಹೊರಟಿರಲಿಲ್ಲ. ಜೀವರಕ್ಷಕ ಅಂಬುಲೆನ್ಸ್ ವಾಹನಕ್ಕೂ ಇಟ್ಟಿರುವ ಸಂಖ್ಯೆ 108. ಹಾಗಾದರೆ 108 ಸಂಖ್ಯೆ ಒಂದು ಮಹತ್ವಪೂರ್ಣ ಸಂಖ್ಯೆಯೇ ಆಗಿರುತ್ತದೆ ಅನ್ನುವುದು ನನ್ನ ಅಲ್ಪ ತಿಳಿವಳಿಕೆ. ಆ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣವೆಂದು ಗೂಗಲಣ್ಣನ ಬಳಿ 108 ಸಂಖ್ಯೆಯ ಮಹತ್ವದ ಬಗ್ಗೆ ತಿಳಿಸುವಂತವನಾಗು ಅಂತ ಕೋರಿಕೆ ಮುಂದಿಟ್ಟೆ.  ಆಗ ಗೂಗಲಣ್ಣ ತೆರೆದಿಟ್ಟ ಮಾಹಿತಿಗಳ ಮಹಾಪೂರ ಕಂಡು ದಂಗಾಗುವ ಸರದಿ ನನ್ನದಾಗಿತ್ತು.

108 ಸಂಖ್ಯೆಯ ಹಿಂದೆ ಅನೇಕ ರೋಚಕ ಮಾಹಿತಿಗಳಿವೆ/ವಿಡಿಯೋಗಳು ಲಭ್ಯವಿವೆ. ಆಧ್ಯಾತ್ಮ, ವೈಜ್ಞಾನಿಕ ಕಾರಣಗಳ ಜೊತೆಗೆ ಅದೆಷ್ಟೋ ನಂಬಿಕೆಗಳ ಹಿಂದೆಯೂ ಈ ಸಂಖ್ಯೆಯೇ ಯಾಕೆ ಅನ್ನುವ ವಿಚಾರಗಳ ಮಾಹಿತಿ ಇದೆ. ಹಾಗಾಗಿ ಈ ಲೇಖನ ಗೂಗಲಣ್ಣ ನೀಡಿದ ಮಾಹಿತಿಗಳನ್ನು ಒಳಗೊಂಡಿದೆ. ಕಾಪಿರೈಟ್ ಏನಿದ್ದರೂ ಗೂಗಲಣ್ಣಂದು. ಹೀಗೂ ಇದೆಯೇ ಅಂತ ನಾನು ಹುಬ್ಬೇರಿಸಿದ್ದೇನೆ. ಆಶ್ಚರ್ಯಚಕಿತಳಾಗಿದ್ದೇನೆ. ನಾನು ಓದಿದ, ನೋಡಿದ ಕೆಲವು ಮಾಹಿತಿಗಳು ನಿಮಗಾಗಿ.

ಹಿಂದೂ ಧರ್ಮ ಮಾತ್ರವಲ್ಲದೆ ಬೌದ್ಧ ಹಾಗೂ ಜೈನ ಧರ್ಮದಲ್ಲೂ,  ಯೋಗ, ಆಧ್ಯಾತ್ಮಿಕತೆ ಮತ್ತು ವಿಜ್ಞಾನದಲ್ಲಿ ‘108’ ಸಂಖ್ಯೆಯನ್ನು ಅತ್ಯಂತ ಪವಿತ್ರ ಮತ್ತು ಬ್ರಹ್ಮಾಂಡದ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿಯೇ ‘108’ ತುಂಬಾ ಪವಿತ್ರವಾದ, ವಿಶೇಷವಾದ, ಮಹತ್ವಪೂರ್ಣ ಸಂಖ್ಯೆ.

ಇದರ ಪ್ರಮುಖ ಮಹತ್ವಗಳು ಈ ಕೆಳಗಿನಂತಿವೆ.

  •   ಯೋಗ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವ

ಜಪಮಾಲೆ: ಜಪಮಾಲೆಯಲ್ಲಿ 108 ಮಣಿಗಳು ಇರುತ್ತವೆ. 108 ಮಣಿಗಳು ಬೇಡ ಅಂತ ಅನ್ನಿಸಿದರೆ ಜಪಮಾಲೆಯಲ್ಲಿ 108 ರ ಅರ್ಧಾಂಶ (54), ಮೂರನೇ ಒಂದಂಶದಷ್ಟು (36) ಅಥವಾ ಕಾಲು ಅಂಶ (27) ಮಣಿಗಳನ್ನು/ರುದ್ರಾಕ್ಷಿಗಳನ್ನು ಬಳಸುತ್ತಾರೆ. ಮಂತ್ರವನ್ನು 108 ಬಾರಿ ಪಠಿಸಲು ಇದನ್ನು ಬಳಸಲಾಗುತ್ತದೆ. ಒಂದೇ ಮಂತ್ರವನ್ನು 108 ಸಲ ಪಠಿಸುವುದರಿಂದ ಮನಸ್ಸು ಹಾಗೂ ದೈವತ್ವದ ನಡುವೆ ಸಂಪರ್ಕ ಏರ್ಪಡುತ್ತದೆ ಅನ್ನುವ ನಂಬಿಕೆ ಇದೆ.  108 ಮಣಿಗಳನ್ನು ಹೊಂದಿದ ಮಾಲೆಯ ಮೂಲಕ ಜಪ ಮಾಡಿದರೆ ಮನುಷ್ಯ ಆಂತರಿಕವಾಗಿ ಸದೃಢನಾಗಲು ಸಹಕಾರಿ ಎಂಬ ನಂಬಿಕೆ ಇದೆ. 108 ಅನ್ನುವ ಸಂಖ್ಯೆಯನ್ನು ಆಧರಿಸಿ ಮನುಷ್ಯನ ದೇಹ ಹಾಗೂ ಆತ್ಮಕ್ಕಿರುವ ದೂರವನ್ನು ವಿಶ್ಲೇಷಿಸುವ ಕೆಲವು ಮಾಹಿತಿಗಳನ್ನು ಓದಿದೆಯಾದರೂ ಅವುಗಳು ನನ್ನ ಅರಿವಿನ ಮಿತಿಯೊಳಗೆ ಇಲ್ಲದಿರುವುದರಿಂದ ಆ ಮಾಹಿತಿಗಳ ಬಗ್ಗೆ ಬರೆದಿಲ್ಲ.

‘108’ ಅಂಕೆಯ ಅರ್ಥ:

              1 ಎಂದರೆ ಪರಮಾತ್ಮ ಅಥವಾ ಏಕತೆ (God/Oneness).
              0 ಎಂದರೆ ಶೂನ್ಯ ಅಥವಾ ಪರಿಶುದ್ಧ ಜ್ಞಾನ (Emptiness/Pure Awareness).
              8 ಎಂದರೆ ಅನಂತತೆ (Infinity).

ದೇವರುಗಳ ಹೆಸರುಗಳು: ಹಿಂದೂ ಧರ್ಮದಲ್ಲಿ ಶಿವ ಮತ್ತು ವಿಷ್ಣುವಿಗೆ ತಲಾ 108 ನಾಮಗಳಿವೆ (ಅಷ್ಟೋತ್ತರ ಶತನಾಮಾವಳಿ). ಇನ್ನು ಬ್ರಹ್ಮಾಂಡ ಶಕ್ತಿಯನ್ನು ಪ್ರತಿನಿಧಿಸುವ ಶಿವನ ಭರತನಾಟ್ಯ ಯಾರಿಗೆ ತಾನೆ ಗೊತ್ತಿಲ್ಲ? ಶಿವನ ಸ್ವರೂಪವಾದ ನಟರಾಜನ ನಾಟ್ಯದಲ್ಲಿ ೧೦೮ ಭಂಗಿಗಳಿವೆ ಅನ್ನುತ್ತಾರೆ. ಆದ್ದರಿಂದಲೇ ಶಿವನನ್ನು ಪ್ರತಿನಿಧಿಸುವ ರುದ್ರಾಕ್ಷಿ ಮಾಲೆಯಲ್ಲಿ ರುದ್ರಾಕ್ಷಿಗಳು ಸಹ 108 ಸಂಖ್ಯೆಯಲ್ಲಿದೆ.

ಉಪನಿಷತ್ತುಗಳು ಮತ್ತು ಪೀಠಗಳು: ಭಾರತದಲ್ಲಿ ಒಟ್ಟು 108 ಉಪನಿಷತ್ತುಗಳು ಮತ್ತು 108 ಶಕ್ತಿಪೀಠಗಳಿವೆ.
ಪುರಾಣಗಳು:

ಬೌದ್ಧ ಧರ್ಮ: ಬೌದ್ಧ ಧರ್ಮದಲ್ಲೂ 108 ಆಸೆಗಳು, 108 ಭ್ರಮೆಗಳು ಮತ್ತು 108 ಸುಳ್ಳುಗಳಿವೆ ಎಂದು ನಂಬಲಾಗುತ್ತದೆ. ಜಪಾನ್‌ನಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ದೇವಸ್ಥಾನದ ಗಂಟೆಯನ್ನು 108 ಬಾರಿ ಬಾರಿಸಲಾಗುತ್ತದೆ. ಮಹಾಯಾನ ಬೌದ್ಧಧರ್ಮದ ಪ್ರಮುಖ ಗ್ರಂಥವಾದ ‘ಲಂಕಾವತಾರ ಸೂತ್ರ’ದಲ್ಲಿ ಬೋಧಿಸತ್ವ ಮಹಾಮತಿಯು ಬುದ್ಧನಿಗೆ ಅತ್ಯಂತ ಆಳವಾದ 108 ಪ್ರಶ್ನೆಗಳನ್ನು ಕೇಳಿದನೆಂದು  ಉಲ್ಲೇಖವಿದೆ.

ಖಗೋಳಶಾಸ್ತ್ರ ಮತ್ತು ವಿಜ್ಞಾನ

• ಸೂರ್ಯ ಮತ್ತು ಭೂಮಿ: ಸೂರ್ಯನ ವ್ಯಾಸ – 1,391,400 ಕಿ. ಮೀ ಮತ್ತು ಭೂಮಿಯ ಸರಾಸರಿ ವ್ಯಾಸವು 12,742 ಕಿ.ಮೀ (ಸಮಭಾಜಕ ರೇಖೆಯ ವ್ಯಾಸ ಸುಮಾರು 12756.274 ಕಿ.ಮೀ. ಹಾಗೂ  ಧ್ರುವಗಳ ಮೂಲಕ ವ್ಯಾಸ ಸುಮಾರು 12712.504 ಕಿ.ಮೀ. ಆಗಿದೆ. ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ ಸುಮಾರು 109 ಪಟ್ಟು ಜಾಸ್ತಿ ಆಗಿರುತ್ತದೆ. ಈ ಸಂಖ್ಯೆಯೂ 108 ಕ್ಕೆ ತುಂಬಾ ಹತ್ತಿರವಿದೆ. ಸೂರ್ಯನಿಂದ ಭೂಮಿಗಿರುವ ಸರಾಸರಿ ದೂರವು ಸುಮಾರು 14 ಕೋಟಿ 96 ಲಕ್ಷ ಕಿ.ಮೀ ಆಗಿದ್ದು ಈ ದೂರವು  ಸೂರ್ಯನ ವ್ಯಾಸದ 108 (107.517) ರಷ್ಟಿದೆ.

• ಚಂದ್ರ ಮತ್ತು ಭೂಮಿ: ಭೂಮಿಗೂ ಚಂದ್ರನಿಗೂ ಇರುವ ಸರಾಸರಿ ದೂರವು (3,84,400 ಕಿ.ಮೀ) ಹಾಗೂ ಚಂದ್ರನ ವ್ಯಾಸದ (3474 ಕಿ. ಮೀ) ಸುಮಾರು 110 ರಷ್ಟಿದೆ. ಈ ಸಂಖ್ಯೆಯೂ 108 ಕ್ಕೆ ತುಂಬಾ ಹತ್ತಿರವಿದೆ.

• ಜ್ಯೋತಿಷ್ಯ: ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳು (ಮನೆಗಳು) ಮತ್ತು 9 ಗ್ರಹಗಳಿವೆ. 12 ಹಾಗೂ 9ನ್ನು ಗುಣಿಸಿದರೆ (12 × 9) ಬರುವ ಫಲಿತಾಂಶ 108.  ಒಂದು ವಿಶ್ವದ ನಾಲ್ಕು ದಿಕ್ಕುಗಳಲ್ಲಿ 27 ನಕ್ಷತ್ರಗಳು ಹರಡಿವೆ. 27 ನ್ನು 4 ರಿಂದ ಗುಣಿಸಿದರೆ ಸಿಗುವುದೇ 108. ಗಣಿತಜ್ಞರ ಪ್ರಕಾರ ಆರಂಭಿಕ ಸಂಖ್ಯೆಗಳಾದ 1, 2, 3 ನ್ನು ಈ ರೀತಿ ಗುಣಿಸಿದರೆ  11 x 22 x 33 = 1 x 4 x 27 =108   ಸಿಗುವುದು.

• ಆಯುರ್ವೇದ: ಆಯುರ್ವೇದ ಪದ್ಧತಿಯ ಪ್ರಕಾರ, ಮಾನವನ ದೇಹದಲ್ಲಿ, ಜೀವಶಕ್ತಿಯನ್ನು ನಿಯಂತ್ರಿಸುವ 108 ‘ಮರ್ಮ’ ಬಿಂದುಗಳು (ಜೀವನಾಧಾರಿತ ಪ್ರಮುಖ ನಾಡಿ ಕೇಂದ್ರಗಳು) ಇವೆ.  ಈ ಬಿಂದುಗಳಿಗೆ ಯಾವುದೇ ಹಾನಿಯಾದರೆ ಪ್ರಾಣಕ್ಕೆ ಕಂಟಕ ಎದುರಾಗುತ್ತದೆ.

ಅಂಬುಲೆನ್ಸ್ ಸೇವೆಗಾಗಿ ‘108’
ಭಾರತದಲ್ಲಿ ತುರ್ತು ಅಂಬುಲೆನ್ಸ್ ಸೇವೆಗಾಗಿ ‘108’ ಸಂಖ್ಯೆಯನ್ನು ಆಯ್ಕೆ ಮಾಡಿರುವುದರ ಹಿಂದೆಯೂ ವೈಜ್ಞಾನಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. 2005ರಲ್ಲಿ ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಈ ಸಂಯೋಜಿತ ತುರ್ತು ಸೇವೆ ಜಾರಿಗೆ ಬಂದಾಗ ಈ ಸಂಖ್ಯೆಯನ್ನು ಇಡಲಾಯಿತು.

ತುರ್ತು ಪರಿಸ್ಥಿತಿಯಲ್ಲಿ ಜನರು ಗಾಬರಿಯಾಗಿದ್ದಾಗ ಸುಲಭವಾಗಿ ನೆನಪಿಗೆ ಬರುವ ಮತ್ತು ಡಯಲ್ ಮಾಡಲು ಸುಲಭವಾದ ಸಂಖ್ಯೆ ಬೇಕಿತ್ತು. ‘108’ ಎಂಬುದು ಭಾರತೀಯರ ಮನಸ್ಸಿನಲ್ಲಿ ಅತ್ಯಂತ ಸರಳವಾಗಿ ಮತ್ತು ಬೇಗನೆ ಅಚ್ಚೊತ್ತುವ ಮೂರು ಅಂಕಿಗಳಾಗಿವೆ. ಅಂಬುಲೆನ್ಸ್ ಕೂಡ ಜೀವ ಉಳಿಸುವ ಕೆಲಸ ಮಾಡುವುದರಿಂದ, ಆಯುರ್ವೇದದ ಈ ಜೀವ ರಕ್ಷಕ ಬಿಂದುಗಳ ಸಂಖ್ಯೆಯನ್ನು ಸಾಂಕೇತಿಕವಾಗಿ ಇಡಲಾಗಿದೆ ಎಂಬ ನಂಬಿಕೆಯೂ ಇದೆ.

ಯೋಗ ಮತ್ತು ಪ್ರಾಣಾಯಾಮದಲ್ಲಿ 108ರ ಮಹತ್ವ
ಯೋಗ ಮತ್ತು ಧ್ಯಾನದಲ್ಲಿ, ಈ ಸಂಖ್ಯೆಯು ಇನ್ನಷ್ಟು ಆಳವಾದ ಅರ್ಥವನ್ನು ಹೊಂದಿದೆ. ಮಂತ್ರವನ್ನು 108 ಬಾರಿ ಜಪಿಸಲು ನಮಗೆ ಸಲಹೆ ನೀಡಲಾಗುತ್ತದೆ. ಇದು ಪುನರಾವರ್ತನೆಯನ್ನು ಸೂಚಿಸಬಹುದು, ಇದು ಮನಸ್ಸಿನ ಉತ್ತಮ ಗಮನ ಮತ್ತು ಏಕಾಗ್ರತೆಗೆ ಕಾರಣವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ 21,600 ಉಸಿರುಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ, ಅದರಲ್ಲಿ ಅರ್ಧ, ಅಂದರೆ 10,800, ಸೌರ ಉಸಿರುಗಳು (ಹಗಲಿನಲ್ಲಿ), ಆದರೆ ಇನ್ನರ್ಧ, 10,800, ರಾತ್ರಿ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆ. 108 ಅನ್ನು 100 ರಿಂದ ಗುಣಿಸಿದರೆ 10,800 ಬರುತ್ತದೆ, ಇದು 108 ನಮ್ಮ ಜೀವನ ಮತ್ತು ಉಸಿರಾಟದೊಂದಿಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಮತ್ತೊಮ್ಮೆ ಸಂಕೇತಿಸುತ್ತದೆ.

‘108’ ಸಂಖ್ಯೆಯ ಬಗ್ಗೆ ಓದುತ್ತಾ ಹೋದಂತೆ ವೇದ್ಯವಾಗುವುದು ಒಂದೇ. ‘108’ ಸಂಖ್ಯೆಗೆ ಹೊಂದುವ ಪುರಾಣಗಳು, ವೈಜ್ಞಾನಿಕ ಪುರಾವೆಗಳನ್ನು ಕಾಣಬಹುದು. ಉದಾಹರಣೆಗೆ ಕೃಷ್ಣನಿಗೆ ‘108’ ಗೋಪಿಯರಿದ್ದರು ಅನ್ನುವ ವರ್ಣನೆ ಇದೆ.  ಸನಾತನ ಧರ್ಮದಲ್ಲಿ ಬಹಳ ಮಹತ್ವದ ಪವಿತ್ರ ಗಂಗಾ ನದಿಯು 12 ಡಿಗ್ರಿ ರೇಖಾಂಶ ಮತ್ತು 9 ಡಿಗ್ರಿ ಅಕ್ಷಾಂಶವನ್ನು ವ್ಯಾಪಿಸಿದೆ. 12 ಅನ್ನು 9 ರಿಂದ ಗುಣಿಸಿದಾಗ ‘108’ ಬರುವುದರಿಂದ, ಈ ಸಂಖ್ಯೆಯನ್ನು ಸಾಮಾನ್ಯವಾಗಿ ಗಂಗೆಗೆ ಜೋಡಿಸಲಾಗುತ್ತದೆ. ‘108’ ಒಂದು ಹರ್ಷದ್ ಸಂಖ್ಯೆಯಾಗಿದೆ. ಯಾವ ಸಂಖ್ಯೆಯು, ಆ ಸಂಖ್ಯೆಯಲ್ಲಿರುವ ಅಂಕೆಗಳ ಮೊತ್ತದಿಂದ ಸಂಪೂರ್ಣವಾಗಿ ಭಾಗಿಸಲ್ಪಡುವದೋ (ಶೇಷ ಉಳಿಯದೆ) ಆ ಸಂಖ್ಯೆಯನ್ನು  ಹರ್ಷದ್ ಸಂಖ್ಯೆ ಅನ್ನುವರು. 1+0+8=9, 108 ನ್ನು 9 ರಿಂದ ಭಾಗಿಸಿದಾಗ ಉತ್ತರ 12.  ಸಂಸ್ಕೃತದಲ್ಲಿ ‘ಹರ್ಷ’ ಎಂದರೆ ಸಂತೋಷ ಮತ್ತು ‘ದಾ’ ಎಂದರೆ ಕೊಡುವುದು, ಅಂದರೆ “ಸಂತೋಷವನ್ನು ನೀಡುವ ಸಂಖ್ಯೆ” ಎಂದು ಇದರ ಅರ್ಥ. ಇದನ್ನು ನಿವೇನ್ ಸಂಖ್ಯೆ (Niven Number) ಎಂದೂ ಕರೆಯುತ್ತಾರೆ.  ಒಟ್ಟಿನಲ್ಲಿ ಯೋಗ, ಧರ್ಮ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಹಿಡಿದು, ದೈವಿಕ ದೃಷ್ಟಿಯವರೆಗೂ 108 ಸಂಖ್ಯೆ ಸನಾತನ ಧರ್ಮದೊಂದಿಗೆ ಅವಿನಾಭಾವ ನಂಟು ಹೊಂದಿದ್ದು ಮಂಗಳಕರ ಸಂಖ್ಯೆ ಅನ್ನುವುದರಲ್ಲಿ ಅನುಮಾನವೇ ಇಲ್ಲ.

ಡಾ. ಕೃಷ್ಣಪ್ರಭ ಎಂ, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *