ಟಾಬೋ ಮೊನಾಸ್ಟ್ರಿ (Tabo Monastery)
ಆಗಸ್ಟ್ 09,2026 ರ ಮುಂಜಾನೆ ನಮ್ಮ ಕೊಠಡಿಯ ಬಾಲ್ಕನಿಯಿಂದ ನೋಡಿದಾಗ, ಪರಿಸರ ಚೆನ್ನಾಗಿದೆ ಅನಿಸಿತು. ಶೋಭನಾ, ಲಕ್ಷ್ಮಿ ಮತ್ತು ನಾನು ಸ್ವಲ್ಪ ವಾಯುವಿಹಾರ ಮಾಡೋಣ ಎಂದು ಹೊರಟೆವು. ಹೋಟೆಲ್ ನ ಅವರಣದಲ್ಲಿ ಸೇಬು, ಆಪ್ರಿಕೋಟ್ ನಂತಹ ಗಿಡ ಮರಗಳಿದ್ದು ಹಸಿರಾಗಿತ್ತು. ಆದರೆ ಹೊರಗಡೆಯ ಕಿರಿದಾದ ರಸ್ತೆ ಧೂಳುಮಯವಾಗಿತ್ತು. ರಸ್ತೆಯೂ ಕಿರಿದಾಗಿದ್ದು, ಒಂದೊಂದೇ ಲಾರಿಗಳು ಬರತೊಡಗಿದಾಗ ಎದ್ದೇಳುವ ಬೂದು ಬಣ್ಣದ ಧೂಳಿಗೆ ಮೂಗು ಮುಚ್ಚುವಂತಾಗಿ, ನಮ್ಮ ವಾಯುವಿಹಾರವನ್ನು ಬೇಗನೇ ನಿಲ್ಲಿಸಿದೆವು. ಕಿರಿದಾದ ಆ ಬೀದಿಯಲ್ಲಿ ಹಲವಾರು ಹೋಂ ಸ್ಟೇಗಳಿದ್ದು, ದೊಡ್ಡದಾದ ಹೋಟೆಲ್ ಗಳೂ ಇದ್ದುವು. ಅಷ್ಟೇನೂ ಜನವಸತಿ ಇಲ್ಲದ ಜಾಗದಲ್ಲಿ, ಇವುಗಳನ್ನು ನೋಡಿದಾಗ ಪ್ರವಾಸೋದ್ಯಮ ಇವರ ಆದಾಯದ ಪ್ರಮುಖ ಮೂಲ ಇರಬಹುದು ಎನಿಸಿತು.
ಎಂದಿನಂತೆ, ಬೆಳಗಿನ ಉಪಾಹಾರ, ಕಾಫಿಸೇವನೆಯ ನಂತರ ಹತ್ತಿರದಲ್ಲಿದ್ದ ‘ ಟಾಬೋ ಮೊನಾಸ್ಟ್ರಿ’ಗೆ (Tabo Monastery) ನಡೆದುಕೊಂಡು ಹೋದೆವು. “ಹಿಮಾಲಯದ ಅಜಂತಾ” ಎಂದು ಕರೆಯಲ್ಪಡುವ ಈ ಟಾಬೋ ಮೊನಾಸ್ಟ್ರಿಯು ಸ್ಪಿತಿ ಜಿಲ್ಲೆಯಲ್ಲಿರುವ ಅತ್ಯಂತ ಪ್ರಾಚೀನ ಬೌದ್ಧ ಮಠವಾಗಿದ್ದು, ಯುನೆಸ್ಕೋದಿಂದ ಮಾನ್ಯತೆಯನ್ನು ಪಡೆದಿದೆ . ಕ್ರಿ.ಶ. 996 ರಲ್ಲಿ ಟಿಬೆಟಿಯನ್ ರಾಜ ಯಶೆ-ಓ (Yeshe-Ö ) ಅವರು ಟಾಬೋ ಮೊನಾಸ್ಟ್ರಿಯನ್ನು ನಿರ್ಮಿಸಿದರಂತೆ. ಇದು ಸುಮಾರು 10010 ಅಡಿ ಎತ್ತರದಲ್ಲಿದೆ. ದೃಢವಾದ ಮಣ್ಣಿನ ಗೋಡೆಗಳನ್ನು ಹೊಂದಿರುವ ಈ ಮಠವು ಸಾವಿರಾರು ವರ್ಷಗಳಿಂದ ಹಿಮಾಲಯದ ಪ್ರಕೃತಿ ವಿಕೋಪಗಳನ್ನು ಎದುರಿಸಿಯೂ ನವೀಕರಣಗೊಂಡು ಸುಸ್ಥಿತಿಯಲ್ಲಿದೆ. ಇಲ್ಲಿ ಹಲವಾರು ಸಣ್ಣ ಸ್ತೂಪಗಳು, ಗುಡಿಗಳು ಇವೆ. ವಿಶಾಲವಾದ ಸಭಾಂಗಣವಿದ್ದು, ಅಲ್ಲಿಯ ಗೋಡೆಗಳಲ್ಲಿ ಸೊಗಸಾದ ವರ್ಣಚಿತ್ರಗಳಿವೆ. ಮಠದ ಹಿಂಭಾಗದ ಕಡಿದಾದ ಬೆಟ್ಟಗಳ ಮೇಲೆ ಬೌದ್ಧ ಭಿಕ್ಷುಗಳು ಧ್ಯಾನ ಮಾಡುತ್ತಿದ್ದ ಪ್ರಾಕೃತಿಕ ಗುಹೆಗಳಿವೆ. ದಲೈ ಲಾಮಾ ಅವರು ಇಲ್ಲಿಗೆ ಹಲವಾರು ಬಾರಿ ಭೇಟಿ ಕೊಟ್ಟಿದ್ದರಂತೆ.
ಮಠದ ಆವರಣದಲ್ಲಿ ಮತ್ತು ಹೊರಗಡೆ ಇದ್ದ ಒಂದೆರಡು ಅಂಗಡಿಗಳಲ್ಲಿ ಬೌದ್ಧರು ಪ್ರಾರ್ಥನೆಯ ಸಂದರ್ಭದಲ್ಲಿ ಬಳಸುವ ಪೂಜಾ ವಸ್ತುಗಳು, ಫೊಟೊಗಳು, ಉಣ್ಣೆಯ ಶಾಲುಗಳು ಹಾಗೂ ವಿವಿಧ ಸ್ಮರಣಿಕೆಗಳು ಇದ್ದುವು. ನಾವು ಕೆಲವರು ಸ್ಥಳೀಯ ಫೋಟೊಗಳು, ಪ್ರಿಜ್ಜಿನ ಮೇಲೆ ಅಂಟಿಸುವ ಅಯಸ್ಕಾಂತ ಇತ್ಯಾದಿ ಸಣ್ಣ ಪುಟ್ಟ ವ್ಯಾಪಾರ ಮಾಡಿದೆವು.
ನನಗೆ ಬೌದ್ಧ ಧರ್ಮ, ಬೋಧಿಸತ್ವ, ಪದ್ಮ ಸಂಭವ ಮೊದಲಾದ ಹಲವಾರು ಪೂಜನೀಯರ ಬಗ್ಗೆ ಅತಿ ಕಡಿಮೆ ಜ್ಞಾನ. ಮೊನಾಸ್ಟ್ರಿಗಳಲ್ಲಿ , ನಮ್ಮ ದೇವಸ್ಥಾನಗಳಂತೆ ‘ಸ್ಥಳ ಪುರಾಣ’ ತಿಳಿಸುವ ಅರ್ಚಕರು ಇರಲಿಲ್ಲ. ಬುದ್ಧ, ಪದ್ಮಸಂಭವ , ಲಾಮಾ ಗುರುಗಳು ಇವರೆಲ್ಲರ ಮೂರ್ತಿಗಳ ಸ್ವರೂಪ ಹಾಗೂ ಮಠಗಳ ನಿರ್ಮಾಣದಲ್ಲಿ ಬಹುತೇಕ ಸಾಮ್ಯತೆ ಇದ್ದುವು. ಸುಮಾರಾಗಿ ಇದೇ ಭೂ ವೈವಿಧ್ಯವನ್ನು ಹೋಲುವ ಹಾಗೂ ಹಲವಾರು ಮೊನಾಸ್ಟ್ರಿಗಳಿರುವ ಲೇಹ್ – ಲಡಾಕ್ ಗೆ ಈ ಮೊದಲು ಭೇಟಿ ಕೊಟ್ಟಿದ್ದೆ; ಪರ್ವತ ಪ್ರದೇಶದ ಒಣಹವೆ, ಕಡಿಮೆಯಾಗುತ್ತಿರುವ ಹಸಿರು ಸಸ್ಯಗಳು ಚಳಿಯ ಜೊತೆಗೆ ಶುಷ್ಕ ವಾತಾವರಣವನ್ನು ಸೃಷ್ಟಿಸಿದ್ದುವು. ಇವೆಲ್ಲಾ ಒಟ್ಟಾಗಿ ಆಸಕ್ತಿ ಕಡಿಮೆಯಾಗಿತ್ತೋ ಅಥವಾ ಮೌಂಟೇನ್ ಸಿಕ್ ನೆಸ್ಸ್ ನ ಆರಂಭವಾಗಿತ್ತೋ ತಿಳಿಯದು, ಟಾಬೋ ಮಠದಿಂದ ಹೋಟೆಲ್ ಗೆ ಬರುವಷ್ಟರಲ್ಲಿ ಸ್ವಲ್ಪ ಸುಸ್ತು ಹಾಗೂ ನಿರಾಸಕ್ತಿ ಮೂಡಿತ್ತು.
ಪುನ: ಹೋಟೆಲ್ ಗೆ ಬಂದು ನಮ್ಮ ಮುಂದಿನ ಗಮ್ಯ ಸ್ಥಾನದ ಕಡೆಗೆ ಹೊರಟೆವು. ಕಿರಿದಾಗಿದ್ದ ದಾರಿಯುದ್ದಕ್ಕೂ ಸ್ಪಿತಿ ನದಿ ಜೊತೆಯಾಗಿತ್ತು.
ಧನ್ಕರ್ ಗೊಂಪಾ
‘ಟಾಬೋ’ ನಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನಿಂದ ‘ಧನ್ಕರ್ ಗೊಂಪಾ’ ಅಥವಾ ಮೊನಾಸ್ಟ್ರಿಗೆ 32 ಕಿಮೀ ದೂರ. ಕಿರಿದಾದ ರಸ್ತೆಯನ್ನು ನಿಧಾನಗತಿಯ ಪ್ರಯಾಣವಾದ ಕಾರಣ ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ ‘ಧನ್ಕರ್ ಹಳ್ಳಿ’ ತಲಪಿದೆವು. ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿರುವ ‘ಧನ್ಕರ್ ಮೊನಾಸ್ಟ್ರಿ’ಯು ಸಮುದ್ರ ಮಟ್ಟದಿಂದ ಸುಮಾರು 12,774 ಅಡಿ ಎತ್ತರದಲ್ಲಿದೆ. ಈ ಗೊಂಪಾದ ಅಕ್ಕಪಕ್ಕ ಬೆಟ್ಟಗಳಿವೆ, ಒಂದು ಪಾರ್ಶ್ವದಲ್ಲಿ ಸ್ಪಿಟಿ ಮತ್ತು ಪಿನ್ ನದಿಗಳ ಸಂಗಮ ಕಾಣಿಸುತ್ತದೆ. 12ನೆಯ ಶತಮಾನದಲ್ಲಿ ಕಟ್ಟಲಾದ ಈ ಮೊನಾಸ್ಟ್ರಿಯು ೧೭ ನೇ ಶತಮಾನದದಲ್ಲಿ ಸ್ಪಿಟಿ ಕಣಿವೆಯ ಅಂದಿನ ‘ನೊನೊ’ ವಂಶದ ರಾಜರ ಅರಮನೆಯಾಗಿತ್ತು. ಸ್ಥಳೀಯ ಭಾಷೆಯಲ್ಲಿ ‘ಧಂಗ್’ ಎಂದರೆ ಬಂಡೆ ಮತ್ತು ‘ಕರ್’ ಎಂದರೆ ಕೋಟೆ ಎಂಬ ಅರ್ಥವಂತೆ . ಆದ್ದರಿಂದ ಧನ್ಕರ್ ಎಂದರೆ “ಬಂಡೆಯ ಮೇಲಿನ ಕೋಟೆ” ಎಂಬ ಅರ್ಥ ಕೊಡುತ್ತದೆ.
ಸೀ ಬಕ್ ಥೋರ್ನ್ ಚಹಾ
ಮೊನಾಸ್ಟ್ರಿಯ ಮುಖ್ಯದ್ವಾರದ ಸಮೀಪ ಒಂದಿಬ್ಬರು ಮಹಿಳೆಯರು ಸ್ಥಳೀಯ ಕರಕುಶಲ ವಸ್ತುಗಳು ಮತ್ತು ‘ ಸೀಬಕ್ ಥೋರ್ನ್ ಟೀ’ ಎಂಬ ಒಣಗಿಸಿದ ಚಹಾಪುಡಿಯ ಪ್ಯಾಕೆಟ್ ಗಳನ್ನು ಮಾರುತ್ತಿದ್ದರು. ಈ ಸ್ಥಳೀಯ ಚಹಾ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ಓದಿದ್ದೆ.
ಈ ಮೊನಾಸ್ಟ್ರಿಯ ಒಳಗೆ ಸ್ವಲ್ಪ ಇಕ್ಕಟ್ಟಾದ ಕವಲುದಾರಿಗಳಿದ್ದುವು. ಒಂದು ಅಂತಸ್ತಿನಲ್ಲಿ ಬುದ್ಧನ ಮತ್ತು ಅನುಯಾಯಿಗಳ ಪ್ರತಿಮೆಗಳು, ಬೌದ್ಧ ಧರ್ಮದ ಬರಹಗಳು ಇತ್ಯಾದಿ ಇದ್ದುವು. ಅವುಗಳನ್ನು ನೋಡಿ ಶೋಭನಾ ಮತ್ತು ನಾನು ಹೊರಗೆ ಬಂದೆವು. ತಂಡದ ಇತರರು ಇನ್ನೊಂದು ಕವಲುದಾರಿಯಲ್ಲಿ ಹೋಗಿ ಮೇಲಿನ ಅಂತಸ್ತಿಗೂ ಹೋದರು. ನಮಗೆ ಸಾಕು ಎನಿಸಿ ಪಕ್ಕದಲ್ಲಿದ್ದ ಚಹಾ ಅಂಗಡಿಯಾತನಲ್ಲಿ ‘ಸೀ ಬಕ್ ಥೋರ್ನ್ ಚಹಾ’ ತಯಾರಿಸಿಕೊಡಬಹುದೇ, ನಮಗೆ ಇದರ ರುಚಿ ಗೊತ್ತಿಲ್ಲದ ಕಾರಣ ಅರ್ಧ ಕಪ್ ಕೊಡಿ, ಇಷ್ಟವಾದರೆ ಖರೀದಿಸುತ್ತೇವೆ ಅಂದೆವು. ಅವರು ನಗುನಗುತ್ತಾ ‘ಚಾಯ್ ಬನಾವೂಂಗಾ’ ಎನ್ನುತ್ತಾ, ಸ್ಟವ್ ಮೆಲೆ ಎರಡು ಲೋಟ ನೀರಿಟ್ಟು, ಒಂದೆರಡು ಸ್ಪೂನ್ ಒಣಗಿಸಿದ ಹಣ್ಣುಗಳನ್ನು ಹಾಕಿ, ಕುದಿಸಿ, ಶೋಧಿಸಿ, ಸಕ್ಕರೆ ಹಾಕಿ ಚಹಾ ಮಾಡಿ ಕೊಟ್ಟರು. ಹುಳಿ-ಸಿಹಿ ಮಿಶ್ರಿತ ರುಚಿಯ ಹಳದಿ ಬಣ್ಣದ ಹರ್ಬಲ್ ಚಹಾ ಚೆನ್ನಾಗಿತ್ತು. ಆ ಟೀ ಶಾಪ್ ನಲ್ಲಿ ನಾನೂ ಫೊಟೊ ಕ್ಲಿಕ್ಕಿಸಿದ್ದಾಯಿತು.
ಹಿಮಾಲಯದ ಆಡಿನ ಮಮ್ಮಿ
ಅಷ್ಟರಲ್ಲಿ ನಮ್ಮ ತಂಡದ ಇತರರು ಬಂದರು. ಇನ್ನೊಂದು ಕವಲುದಾರಿಯಲ್ಲಿ ಹೋದರೆಂದೂ, ಅಲ್ಲಿ ಒಂದು ಮಮ್ಮಿಫೈಡ್ ಆಡನ್ನು ತೂಗುಹಾಕಿದ್ದರೆಂದೂ ಗೊತ್ತಾಯಿತು. ಇದನ್ನು ನಾವು ನೋಡಿಲ್ಲವಲ್ಲ ಎನ್ನುತ್ತಾ, ನಾವಿಬ್ಬರು ಪುನ: ಮೊನಾಸ್ಟ್ರಿ ಕಡೆಗೆ ಹೋದೆವು. ಮೊನಾಸ್ಟ್ರಿಯ ಒಳಗಿನ ಇನ್ನೊಂದು ಕವಲಿನ ಮೂಲಕ ಮೇಲೆ ಹೋದಾಗ ಅಲ್ಲಿ ಒಂದು ಸಂರಕ್ಷಿಸಲ್ಪಟ್ಟ ಹಿಮಾಲಯದಲ್ಲಿ ಕಾಣಿಸುವ ವನ್ಯ ಆಡಿನ ದೇಹವನ್ನು ತೂಗು ಹಾಕಿರುವುದು ಕಾಣಿಸಿತು. ಇಲ್ಲಿ ಆಡಿನ ದೇಹವನ್ನು ಯಾಕಾಗಿ ಇರಿಸಿದ್ದಾರೆ ಎಂದು ಗೂಗಲ್ ನಲ್ಲಿ ಹುಡುಕಿದಾಗ ವಿಭಿನ್ನ ಮಾಹಿತಿಗಳು ದೊರೆತುವು. ಒಂದು ಮಾಹಿತಿ ಪ್ರಕಾರ , ಆಡು ಟಿಬೆಟಿಯನ್ ಬೌದ್ಧರ ಪ್ರಕಾರ ಪವಿತ್ರವಾದ ಪ್ರಾಣಿ. ಅದನ್ನು ಪ್ರೀತಿಯಿಂದ ‘ದೋಲ್ಮಾ’ ಎಂದು ಕರೆಯುತ್ತಿದ್ದರಂತೆ. ಮೊನಾಸ್ಟ್ರಿಯ ಆವರಣದಲ್ಲಿ ಸತ್ತ ಕಾರಣ, ಪವಿತ್ರ ಭಾವನೆಯಿಂದ ಅಲ್ಲಿ ತೂಗು ಹಾಕಿದ್ದಾರೆ. ಇನ್ನೊಂದು ಮಾಹಿತಿಯ ಟಿಬೆಟಿಯನ್ ತಾಂತ್ರಿಕ ವಿದ್ಯೆಗಾಗಿ ಆಡನ್ನು ಬಳಸಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ, ಸಾವಿರಾರು ವರ್ಷಗಳ ಹಿಂದೆ ಆ ಅಡು ಸ್ಥಳೀಯರನ್ನು ಈಗ ಮೊನಾಸ್ಟ್ರಿ ಇರುವಲ್ಲಿಗೆ ಕರೆತಂದಿತ್ತಂತೆ. ಆ ನೆನಪಿಗಾಗಿ ಅದರ ದೇಹವನ್ನು ಸಂರಕ್ಷಿಸಿ ಇರಿಸಲಾಗಿದೆ. ಒಟ್ಟಿನಲ್ಲಿ, ಹಿಮಾಲಯದ ಅತಿಶೀತ, ಒಣ ವಾತಾವರಣದಿಂದಾಗಿ, ಅದು ನೂರಾರು ವರ್ಷಗಳಿಂದಲೂ ಕೆಡದೆ ಉಳಿದುಕೊಂಡಿದೆ ಎಂಬುದು ಕಣ್ಣಿಗೆ ಕಾಣುವ ಸತ್ಯ.
ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46321
(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು



