ದ್ವಾದಶ ಸ್ಕಂದ – ಅಧ್ಯಾಯ – 1
ಸರ್ಪಯಾಗ ವೃತ್ತಾಂತ
ಋಷಿಪುತ್ರ ಶೃಂಗಿಯ ಶಾಪದಿಂ ಪ್ರೇರಿತ
ತಕ್ಷಕ ಸರ್ಪ ಪರೀಕ್ಷಿತರಾಜನ ಕಚ್ಚಿ ಕೊಲ್ಲಲು ಬರುತಿರೆ
ಮಾರ್ಗಮಧ್ಯದಿ ಕಶ್ಯಪ ಬ್ರಾಹ್ಮಣನ ಸಂಧಿಸೆ
ಬ್ರಾಹ್ಮಣ ಪರೀಕ್ಷಿತರಾಜನ ತನ್ನ ಸಾಮರ್ಥ್ಯದಿಂ ಉಳಿಸಿ
ವಿಶೇಷ ಧನಾರ್ಜನೆ ಮಾಡ್ವೆನೆಂದಾಗ
ತಕ್ಷಕ ಸಮೀಪದಲ್ಲಿದ್ದ ವಟವೃಕ್ಷವ ಕಚ್ಚಿ
ವಿಷದಿಂ ಭಸ್ಮ ಮಾಡುವೆನೆಂದು ಹೇಳಿ
ವೃಕ್ಷವ ಕಚ್ಚಿ ವಿಷವ ಸುರಿಸಲು
ಮರವು ಸಿಡಿಲು ಬಡಿದು ಭಸ್ಮವಾದಂತೆ
ಭಸ್ಮರಾಶಿಯಾಗಿ ಕುಪ್ಪೆಬಿದ್ದಿತು
ಕಶ್ಯಪ ಬ್ರಾಹ್ಮಣ ಶುದ್ಧಾಚಮನ ಮಾಡಿ
ಮರವ ಭೂಮಿಯ ಒಂದೆಡೆ ಸೇರಿಸಿ
ಮಂತ್ರಪಠನೆ ಮಾಡಿ ಮಂತ್ರೋದಕವ ಪ್ರೋಕ್ಷಿಸೆ
ಕ್ರಮವಾಗಿ ಅಂಕುರವಾಗಿ ಗಿಡವಾಗಿ ಮರವಾಗಿ
ಸಮಗ್ರ ವೃಕ್ಷವಾಗಿ ಕಂಗೊಳಿಸಲು
ತಕ್ಷಕ ಬೆರಗಿನಲಿ ಕಶ್ಯಪನಿಗೆ
ರಾಜನು ಇಂದು ಅವನ ಪ್ರಾರಬ್ಧ ಕರ್ಮದಿ
ಮುನಿಕುಮಾರನ ಶಾಪದಲಿ ಸಾಯುವುದು ವಿಧಿನಿಯಮ
ನಾನು ನಿನಗೆ ದ್ವಿಗುಣ ಧನವ ನೀಡುವೆನೆಂದು ಹೇಳಿ
ಕಶ್ಯಪ ಬ್ರಾಹ್ಮಣನ ಹಿಂದಿರುಗಿ ಕಳುಹಿಸಿ
ನಂತರದಿ ಭಯಂಕರ ಸರ್ಪರೂಪವ ಧರಿಸಿ
ರಾಜನ ಕೋಮಲಾಂಗವ ಕಚ್ಚಲು
ರಾಜ ಮೊದಲೇ ಯೋಗ ಸಮಾಧಿ ಸ್ಥಿತಿಯಲಿ
ದೇಹ ತ್ಯಾಗವ ಮಾಡಿ ಮುಕ್ತಾವಸ್ಥಗೆ ತಲುಪಿರೆ
ದೇಹಮಾತ್ರವಂ ವಿಷಾಗ್ನಿಯಿಂದ ಬೆಂದು ಬೂದಿಯಾಯಿತು
ಪರೀಕ್ಷಿತರಾಜನ ಪುತ್ರ ಜನಮೇಜಯ
ಪಿತನ ಮರಣದಿಂ ವ್ಯಗ್ರನಾಗಿ
ಸರ್ಪಜಾತಿಯ ನಿರ್ಮೂಲಗೊಳಿಸೆ
ಸರ್ಪಯಾಗವ ಮಾಡಲು ನಿರ್ಧರಿಸಿ
ಯೋಗದೀಕ್ಷೆಯನು ವಹಿಸಿ
ಮಂತ್ರ ಸಿದ್ಧ ಬ್ರಾಹ್ಮಣರೊಡಗೂಡಿ
ಸರ್ಪಯಾಗವ ಪ್ರಾರಂಭಿಸಿದನು
ʼಸ್ವಾಹಾʼ ಎಂದೊಡನೆಯೇ ಮಂತ್ರಶಕ್ತಿಯಿಂ ಆಕರ್ಷಿತವಾಗಿ
ನೂರಾರು ಸರ್ಪಗಳು ಹೋಮ ಕುಂಡದಿ ಬಿದ್ದು ಬೆಂದು ಹೋಗೆ
ತಕ್ಷಕ ಪ್ರಾಣಭಯದಿಂ ಇಂದ್ರನ ಮೊರೆಹೊದನು
ಇತ್ತಲಾಗಿ ಜನಮೇಜಯರಾಜ ತನ್ನ ದ್ರೋಹಿ ತಕ್ಷಕ
ಬಾರದಿರುವುದಕೆ ಜ್ಞಾನದೃಷ್ಟಿಯಿಂದ
ತಕ್ಷಕ ಇಂದ್ರನ ರಕ್ಷೆಯಲ್ಲಿರುವುದ ತಿಳಿದು
ಇಂದ್ರಸಹಿತವಾಗವನ ಹೋಮಕುಂಡಕೆ ಆಹ್ವಾನಿಸೆ
ತಕ್ಷಕ ಸಹಿತ ಇಂದ್ರನ ವಿಮಾನವು ಕದಲಿ ಹೊರಡಲು
ದಿಗಿಲುಗೊಂಡ ಇಂದ್ರ, ಗುರು ಬೃಹಸ್ಪತಾಚಾರ್ಯರ ಮೊರೆಹೋಗಲು
ಆಚಾರ್ಯರು ಯೋಗಶಾಲೆಗೆ ಬಂದು
ತಕ್ಷಕನು ನಿನ್ನಿಂದ ವಧಾರ್ಹನಲ್ಲ
ಸಕಲ ಪ್ರಾಣಿಗಳಿಗೆ ಜನನ ಮರಣ ಸ್ವರ್ಗ ನರಕಾದಿಗಳಿಗೆ
ಜನ್ಮಜನ್ಮಾಂತರದ ಪ್ರಾರಬ್ಧ ಕರ್ಮವೇ ಕಾರಣ
ಪರೀಕ್ಷಿತನ ಸಾವಿಗೆ ಮುನಿಕುಮಾರನ ಶಾಪವೂ ಕಾರಣ
ಎಲ್ಲದಕೂ ಭಗವನ್ಮಾಯೆಯೇ ಮೂಲ
ನಿನ್ನ ಈ ಯಾಗವೇನೂ ಪರಮಾರ್ಥ ಪ್ರಾಪ್ತಿಗಾಗಿ ಕೈಗೊಂಡ ಯಾಗವಲ್ಲ
ಇದು ಅಭಿಚಾರಕ ಕೃತ್ಯ
ಸಹಸ್ರ ನಿರಪರಾಧಿ ಸರ್ಪಗಳ ವಧೆಯಾಯಿತು
ಈ ಯಾಗವ ನಿಲ್ಲಿಸು
ಎಂಬ ದೇವಗುರುವಿನ ಸಲಹೆಯ ಮಾನ್ಯ ಮಾಡಿ
ಜನಮೇಜಯ ಸರ್ಪಯಾಗವ ಸಮಾಪ್ತಿ ಮಾಡಿದನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=46150

-ಎಂ. ಆರ್. ಆನಂದ, ಮೈಸೂರು

