ವಿಸ್ಮಯ ಜಗತ್ತು

ಕುಕೂರ್ ತಿಹಾರ್

Share Button

ಮೊಬೈಲ್ ತೆರೆದರೆ ಸಾಕು- ಫೇಸ್ಬುಕ್, ಇನ್ಸ್ಟಾಗ್ರಾಮ್ ಪುಟಗಳಲ್ಲಿ ಪುಂಖಾನುಪುಂಖವಾಗಿ ಬರುತ್ತಿರುವ ರೀಲ್ಸುಗಳಿಗೇನೂ ಬರವಿಲ್ಲ. ಸ್ವಲ್ಪ ಸಮಯ ಸಿಕ್ಕಾಗ ಕೆಲವೊಂದು ರೀಲ್ಸುಗಳನ್ನು ನೋಡುವುದಂಟು ನಾನು. ನವಂಬರ್ 9 ರಂದು ಓರ್ವ ವೃದ್ಧ ಮಹಿಳೆ, ಒಂದು ನಾಯಿಗೆ ತಿಲಕ ಹಚ್ಚಿ, ಹೂಮಾಲೆ ಹಾಕಿ, ತಿಂಡಿ ತಿನಿಸುಗಳನ್ನು ತಿನ್ನಿಸುವ ರೀಲ್ಸ್ ನೋಡಿದೆ. ನಾಯಿಯೆಂದರೆ ತುಂಬಾ ಪ್ರೀತಿ ಇರಬೇಕು ಅಂದುಕೊಂಡೆ. ಸ್ವಲ್ಪ ಹೊತ್ತಿನ ಬಳಿಕ ಒಂದು ಯೂಟ್ಯೂಬ್ ವಿಡಿಯೋದ ಕೊಂಡಿಯೊಂದು ಕಂಡಿತು. ಆ ವಿಡಿಯೋದಲ್ಲಿ, ನಾಯಿಗಳನ್ನು ಸಾಲಾಗಿ ನಿಲ್ಲಿಸಿ, ಅವುಗಳಿಗೆ ತಿಲಕ ಹಚ್ಚಿ, ಹೂಮಾಲೆ ಹಾಕಿ, ಬಳಿಕ ನಾಯಿಗಳಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ತಿನ್ನಿಸಿ ಖುಷಿಪಡುವ ಜನರನ್ನು ಕಂಡೆ. ಹಾಗೂ ಆ ವಿಡಿಯೋದ ಶೀರ್ಷಿಕೆ ಕುಕೂರ್ ತಿಹಾರ್ ಎಂದಿತ್ತು. ಸ್ವಾಭಾವಿಕವಾಗಿಯೇ ಕುಕೂರ್ ತಿಹಾರ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಕುಕೂರ್ ತಿಹಾರ್ ಅನ್ನುವ ಒಂದು ವಿಶಿಷ್ಟ ಆಚರಣೆಯ ಬಗ್ಗೆ ಹಲವು ವಿಚಾರಗಳನ್ನು ಗೂಗಲ್ ತೆರೆದಿಟ್ಟಿತು. ಹಾಗಾಗಿ ಈ ಲೇಖನದ ಪೂರ್ತಿ ಹಕ್ಕು ಗೂಗಲಿನದ್ದು ಅನ್ನುವುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.

ನೇಪಾಳದಲ್ಲಿ ತಿಹಾರ್ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್ ಅಥವಾ ನವೆಂಬರ್) ಐದು ದಿನ ಆಚರಿಸುತ್ತಾರೆ. ದೀಪಾವಳಿ ಹಬ್ಬವನ್ನು ಹೋಲುವ ಈ ತಿಹಾರ್ ಹಬ್ಬದಲ್ಲಿ ದೀಪಗಳನ್ನು ಹಚ್ಚಿ ಬೆಳಗುವುದರ ಜೊತೆಗೆ ಕಾಗೆ, ನಾಯಿ, ಗೋಮಾತೆ, ಎತ್ತು ಮೊದಲಾದ ಪ್ರಾಣಿಗಳನ್ನು ಬೇರೆ ಬೇರೆ ದಿನ ಪೂಜಿಸುತ್ತಾರೆ. ಎರಡನೇ ದಿನದಂದು ಆಚರಿಸುವ ಕುಕೂರ್ ತಿಹಾರ್ ಒಂದು ವಿಶಿಷ್ಟ, ಭಾವನಾತ್ಮಕ, ಹೃದಯಸ್ಪರ್ಶಿ ಹಬ್ಬವಾಗಿದೆ. ನೇಪಾಳಿ ಭಾಷೆಯಲ್ಲಿ ‘ಕುಕೂರ್’ ಎಂದರೆ ನಾಯಿ ಎಂದರ್ಥ. ಈ ದಿನ ನಾಯಿಗಳನ್ನು ಅತ್ಯಂತ ಶ್ರದ್ಧೆ ಮತ್ತು ಗೌರವದಿಂದ ಪೂಜಿಸಲಾಗುತ್ತದೆ. ಕೇವಲ ಮನೆಗಳಲ್ಲಿರುವ ಸಾಕುನಾಯಿಗಳನ್ನು ಮಾತ್ರವಲ್ಲದೆ ಬೀದಿನಾಯಿಗಳನ್ನು ಕೂಡಾ ಈ ಹಬ್ಬದಂದು ಪೂಜಿಸಲಾಗುತ್ತದೆ. ಅಲ್ಲದೆ ನೇಪಾಳದ ಪೊಲೀಸ್ ಮತ್ತು ಸೇನಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ವಾನ ದಳದ ನಾಯಿಗಳಿಗೆ ಅಧಿಕೃತವಾಗಿ ಗೌರವ ಸಲ್ಲಿಸುವ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಅಪರಾಧ ಪತ್ತೆ ಹಾಗೂ ದೇಶದ ರಕ್ಷಣೆಯಲ್ಲಿ ಅವುಗಳ ಸೇವೆಯನ್ನು ಈ ದಿನ ಸ್ಮರಿಸಲಾಗುತ್ತದೆ.

ಕುಕೂರ್ ತಿಹಾರ್ ಹಬ್ಬದ ಸಂದರ್ಭದಲ್ಲಿ ನಾಯಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡು ಅವುಗಳ ಹಣೆ ಮತ್ತು ಪಂಜಾಗಳಿಗೆ ಕೆಂಪು ಬಣ್ಣದ ತಿಲಕ (ಟೀಕಾ) ಇಟ್ಟ ಬಳಿಕ ಅವುಗಳ ಕುತ್ತಿಗೆಗೆ ಚೆಂಡು ಹೂವಿನ ಹಾರಗಳನ್ನು ಹಾಕುತ್ತಾರೆ. ನಾಯಿಗಳ ತಲೆಯ ಮೇಲೆ ಹೂವಿನ ಎಸಳುಗಳನ್ನು ಉದುರಿಸುವರು ಸಹಾ. ಪೂಜೆಯ ನಂತರ ನಾಯಿಗಳಿಗೆ ವಿಶೇಷ ಆಹಾರ ನೀಡುವುದು ಪದ್ಧತಿಯಾಗಿ ಬೆಳೆದು ಬಂದಿದೆ. ನಾಯಿಗಳಿಗೆ ಇಷ್ಟವಾಗುವ ಮಾಂಸ, ಹಾಲು, ಮೊಟ್ಟೆ, ಹಾಲಿನ ಅನ್ನ (ಖೀರ್) ಹಾಗೂ ನೇಪಾಳದ ಸಾಂಪ್ರದಾಯಿಕ ಆಹಾರಗಳನ್ನು ನೀಡುತ್ತಾರೆ.

ಮಹಾಭಾರತದ 17 ನೆಯ ಪರ್ವದಲ್ಲಿ ಪಾಂಡವರ ಮಹಾಪ್ರಸ್ಥಾನದ ವಿವರವಿದೆ. ಯುಧಿಷ್ಠಿರ (ಧರ್ಮರಾಯ) ಪರೀಕ್ಷಿತನಿಗೆ ಪಟ್ಟಕಟ್ಟಿ, ತನ್ನ ಸಹೋದರರಾದ ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ದ್ರೌಪದಿಯೊಡಗೂಡಿ ಹಿಮಾಲಯದ ಕಡೆ ತಮ್ಮ ಅಂತಿಮ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ನಾಯಿಯೊಂದು ಅವರನ್ನು ಹಿಂಬಾಲಿಸುತ್ತದೆ. ಆ ಪ್ರಯಾಣದ ಹಾದಿಯಲ್ಲಿ ದ್ರೌಪದಿ ಮತ್ತು ಐವರು ಸಹೋದರರು ಒಬ್ಬೊಬ್ಬರಾಗಿ ಮರಣ ಹೊಂದುತ್ತಾರೆ. ಕೊನೆಯಲ್ಲಿ ಯುಧಿಷ್ಠಿರನ ಜೊತೆ ನಾಯಿ ಮಾತ್ರ ಉಳಿಯುತ್ತದೆ.

ಯುಧಿಷ್ಠಿರನನ್ನು ಸ್ವರ್ಗಲೋಕಕ್ಕೆ ಕರೆದೊಯ್ಯಲು ಇಂದ್ರನು ಸಿದ್ಧನಾದಾಗ ನಾಯಿಯನ್ನು ಕೂಡಾ ತನ್ನೊಂದಿಗೆ ಬರಲು ಅನುಮತಿಸಿದರೆ ಮಾತ್ರ ಸ್ವರ್ಗಲೋಕಕ್ಕೆ ಬರುವುದಾಗಿ ತಿಳಿಸುತ್ತಾನೆ. ಕೊನೆಗೆ ನಾಯಿಯ ರೂಪದಲ್ಲಿ ಬಂದದ್ದು ಯಮಧರ್ಮನೆಂದು ಯುಧಿಷ್ಠಿರನಿಗೆ ಗೊತ್ತಾಗುತ್ತದೆ. ಈ ಕಥೆಯೂ ಒಂದು ಕಾರಣವಿರಬಹುದೋ ಏನೋ! ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ನಾಯಿಗಳನ್ನು ಯಮರಾಜನ (ಮೃತ್ಯು ದೇವತೆ) ದೂತರು ಮತ್ತು ರಕ್ಷಕರು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಾಯಿಗಳನ್ನು ಪ್ರಸನ್ನಗೊಳಿಸುವುದರಿಂದ ಯಮರಾಜನು ತೃಪ್ತನಾಗುತ್ತಾನೆ ಎಂಬ ನಂಬಿಕೆ ಇದೆ. ಅಲ್ಲದೆ, ಇವುಗಳನ್ನು ಭೈರವ ದೇವರ ವಾಹನವೆಂದೂ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಕುಕೂರ್ ತಿಹಾರ್ ಹಬ್ಬದಲ್ಲಿ ನಾಯಿಗಳನ್ನು ಪೂಜಿಸಲಾಗುತ್ತದೆ.

ಮೂಕಪ್ರಾಣಿಯಾದ ನಾಯಿಯ ನಿಷ್ಠೆ, ಸ್ವಾಮಿಭಕ್ತಿ, ರಕ್ಷಣಾ ಮನೋಭಾವ ಮುಂತಾದವುಗಳನ್ನು ಸ್ಮರಿಸಿ ಅವುಗಳನ್ನು ಪೂಜಿಸುವ ಈ ಪರಿಪಾಠ ಹಬ್ಬದ ನೆಪದಲ್ಲಿಯಾದರೂ ಮಾನವರಿಗೆ ಪ್ರಾಣಿಗಳ ಮೇಲೆ ಇರುವ ಕಾಳಜಿ, ದಯೆ, ನಂಬಿಕೆಗಳ ಅನಾವರಣವೆಂದರೂ ತಪ್ಪಾಗಲಾರದು. ಕೇವಲ ಹಬ್ಬದ ದಿನ ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ಮೂಕಪ್ರಾಣಿಗಳ ಮೇಲೆ ಕಾಳಜಿ, ದಯೆ ಇರಲೆಂಬುದು ಆಶಯ. ಭಾರತದಲ್ಲಿಯೂ ಉತ್ತರ ಬಂಗಾಳ, ಸಿಕ್ಕಿಂ, ಡಾರ್ಜಿಲಿಂಗ್ ಮುಂತಾದ ಕಡೆಗಳಲ್ಲಿ ಹಾಗೂ ನವದೆಹಲಿಯಲ್ಲಿರುವ ನೇಪಾಳದ ರಾಯಭಾರ ಕಛೇರಿಯಲ್ಲಿಯೂ ಕುಕೂರ್ ತಿಹಾರ್ ಹಬ್ಬವನ್ನು ಆಚರಿಸುವರು. ಪ್ರಾಣಿ ದಯಾ ಸಂಘಗಳು, ಪ್ರಾಣಿ-ಕಲ್ಯಾಣ ಗುಂಪುಗಳು ಈ ದಿನದ ಮಹತ್ವವನ್ನು ಎತ್ತಿ ಹಿಡಿದು ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತವೆ.

ನಾನು ಸಣ್ಣವಳಿರುವಾಗ ಕೇಳಿದ ಮಾತು. ನಮ್ಮ ಕಡೆ ಕೋಪದಲ್ಲಿ ಬಯ್ಯುವಾಗ ‘ನಾಯಿದ ಮಗ’ (ನಾಯಿಯ ಮಗ) ಎಂಬ ಪದ ಪ್ರಯೋಗ ಮಾಡುವುದು ಜಾಸ್ತಿ. ನಾಯಿ ಅಂತ ಬೈದರೆ ಬೇಸರಿಸಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ ನಾ ಎಂದರೆ ನಾರಾಯಣ, ಯೀ ಎಂದರೆ ಈಶ್ವರ- ಎರಡು ದೇವರ ಹೆಸರು ಕೂಡಾ ‘ನಾಯಿ’ ಯಲ್ಲಿ ಇರುವ ಕಾರಣ ನಾಯಿ ಅಂದರೆ ದೇವರು ಅಂತ ಹೇಳುತ್ತಿದ್ದರು. ಇಂತಹ ನಂಬಿಕೆಗೆ ಪೂರಕವಾಗಿ ನಾಯಿಗೂ ಪೂಜೆ ಮಾಡುವ ಹಬ್ಬವೊಂದಿದೆ ಅಂತ ಈಗ ತಿಳಿದಾಗ ತುಂಬಾ ಅಚ್ಚರಿಯೂ ಜೊತೆಗೆ ಖುಷಿಯೂ ಆಯಿತು. ಒಟ್ಟಿನಲ್ಲಿ ಹೇಳುವುದಾದರೆ ಕುಕೂರ್ ತಿಹಾರ್ ಹಬ್ಬವು ವಿಶೇಷ ಆಚರಣೆಯೇ ಸರಿ.

–ಡಾ. ಕೃಷ್ಣಪ್ರಭ ಎಂ, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *