ಪರಾಗ

ಬಿಳಿಗೋಡೆ : ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಡಾಕ್ಟ್ರೇ… ಪ್ರತಿದಿನ ಹೀಗೆ, ಬೆಳಗ್ಗೆ ಸಂಜೆ ಕೂಗಾಡ್ತಾರೆ, ಸದಾ ಈ ಗೋಡೆಯತ್ತಲೇ ಅವರ ದೃಷ್ಠಿ, ಅವರು ಕೂಗಿಕೊಂಡಾಗ ನಮಗೆ ಕೈಕಾಲೆಲ್ಲ ಅದುರಿ ಕೆಳಗಡೆ ಓಡಿ ಬರುತ್ತೇವೆ, ಏನೇನೋ ಬಡ ಬಡಿಸ್ತಾರೆ” ಸತೀಶ ತನ್ನ ಅಪ್ಪನ ಬಗ್ಗೆ ವೈದ್ಯರಿಗೆ ವಿವರಣೆ ನೀಡಿದ. ಒಂದಷ್ಟು ಪರೀಕ್ಷೆಗಳು, ಕೌನ್ಸಿಲಿಂಗ್ ಮಾಡಿದ ವೈದ್ಯರು “ಇವೆಲ್ಲಾ ವಯೋಸಹಜ ವರ್ತನೆಗಳು, ಅವರ ಸುಪ್ತ ಮನಸ್ಸಿನಲ್ಲಿ ನೂರೆಂಟು ಆಲೋಚನೆಗಳು, ಒಂದಷ್ಟು ತಪ್ಪುಕಲ್ಪನೆಗಳು, ಹಲವು ಪಶ್ಚಾತಾಪಗಳು ಕಾಡುತ್ತಿರುತ್ತವೆ, ಯಾರೊಂದಿಗೂ ಅವರಿಗೆ ಹೇಳಲು ಆಗದೆ ಅದನ್ನು ಈ ರೀತಿ ಹೊರಗೆ ಹಾಕುತ್ತಾರೆ, ನಾನು ಕೊಟ್ಟಿರುವ ಮಾತ್ರೆ ಔಷಧಿಗಳನ್ನು ತಪ್ಪದೇ ಕೊಡಿ ಎಲ್ಲಾ ಸರಿಹೋಗುತ್ತದೆ” ಎಂದು ಹೇಳಿ ಹೊರಟರು.

ವೈದ್ಯರು ಹೋದಬಳಿಕ ಎಲ್ಲವೂ ತಿಳಿಯಾಯಿತು. ಮಗಸೊಸೆ ಮೇಲಿನ ಕೋಣೆ ಸೇರಿಕೊಂಡರು, ಮಾತ್ರೆಗಳು ನಂಜುಂಡನ ಹೊಟ್ಟೆಗೆ ಜೊತೆಗೆ ಒಂದಷ್ಟು ಕಪಾಟಿನ ಡಬ್ಬಿಯೊಳಗೆ! ವೈದ್ಯರು ಹೇಳಿದ್ದು ಅಕ್ಷರಶ: ಸತ್ಯ. ನಂಜುಂಡನಿಗೆ ಕಾಡುತ್ತಿವೆ ನೆನಪುಗಳು, ಮರುಕಳಿಸುತ್ತಿವೆ ಮಾಡಿದ ಕರ್ಮ, ಹಿಂಸಿಸುತ್ತಿವೆ ಹಳೆಯ ಗಾಯಗಳು! ಆದರೆ ಈತನಿಗೆ ಪಶ್ಚಾತ್ತಾಪ ಮಾತ್ರ ಏಕಾಗುತ್ತಿಲ್ಲ, ತಾನು ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಒಪ್ಪಿಕೊಳ್ಳಲು ಮನಸ್ಸಾಗುತ್ತಿಲ್ಲ. ಏನೆಲ್ಲಾ ವಿಚಿತ್ರಗಳಿಗೆ ಕಾರಣವಾಗಿದ್ದಾನೆ ಈ ನಂಜುಂಡ.

ನಂಜುಂಡಿ ತನ್ನ ಕೋಣೆಯ ಸುತ್ತ ‘ಹೊಲಸು’ ವಸ್ತುಗಳಿವೆ ಎಂದು ಅರಚುತ್ತಿದ್ದಾನಲ್ಲ ್ಲ, ಅದಕ್ಕೆ ಕಾರಣ ಯಾರು? ದೇವರ ಪಟ ಹಾಕಲು ಸೊಸೆ ಗೋಡೆಗೆ ಮೊಳೆ ಹೊಡೆಯುತ್ತಿದ್ದಾಳೆ ಎಂದು ಆ ಪಟವನ್ನೇ ಅಂದು ಕಿತ್ತೆಸೆದಿದ್ದ್ದ. ಈಗ ಬರೀ ಗೋಡೆಯನ್ನೇ ನೋಡಿ ಕೂರುವ ದೌರ್ಭಾಗ್ಯ ಬಂದೊದಗಿದೆ!

ಮನೆಯಲ್ಲಿ ಸಡಗರ ಸಂಭ್ರಮದಿಂದ ಪೂಜೆ ಪುನಸ್ಕಾರಮಾಡೋಣವೆಂದರೆ ನೆಂಟರಿಷ್ಟರನ್ನು ಕರೆಯುವಂತಿಲ್ಲ ಎಂದು ಷರತ್ತು ಹಾಕಿದ್ದ, ಈಗ ಮೂಲೆಯಲ್ಲಿ ಮಲಗಿರುವ ಈತನನ್ನು ನೋಡಲು ಯಾರೊಬ್ಬರೂ ಮನೆಗೆ ಬರುತ್ತಿಲ್ಲ. ನನ್ನನ್ನು ಬಿಟ್ಟರೆ ಮತ್ಯಾರೂ ಬುದ್ಧಿವಂತರಲ್ಲ ಎಂದು ಅಹಂನಿಂದ ಮೆರೆದಿದ್ದ, ಸರ್ಕಾರಿ ನೌಕರಿ ಹೊಂದಿರುವ ನಾನೇ ಶ್ರೇಷ್ಠ ಉಳಿದವರೆಲ್ಲ ಕನಿಷ್ಠ ಎಂದು ತಾತ್ಸರಿಸಿದ್ದ, ಎಂಭತ್ತಾದರೂ ಗಟ್ಟಿಮುಟ್ಟಿಯಾಗಿದ್ದೇನೆ, ಆರೋಗ್ಯವಾಗಿದ್ದೇನೆ ಎಂದು ಗರ್ವದಿಂದ ಮೆರೆದಿದ್ದ. ‘ನನಗೆ ಸಾವೇ ಇಲ್ಲ ನನ್ನನ್ನು ಬಿಟ್ಟರೆ ಮತ್ಯಾರಿಲ್ಲ’ ಎಂದು ಆವೇಶಭರಿತನಾಗಿದ್ದ. ಆದರೆ ಏನಾಯಿತು ಈಗ? ಕಿಲೋಮೀಟರುಗಟ್ಟಲೆ ವಾಯುವಿಹಾರಕ್ಕೆ ಹೋಗುತ್ತಿದ್ದವನು ಇಂದು ಒಂದು ಹೆಜ್ಜೆ ಇಡಲೂ ಆಗುತ್ತಿಲ್ಲ!

ಯೋಗ, ಧ್ಯಾನ, ಪ್ರಾಣಾಯಾಮ ಎಂದು ಸಮಯ ಕಳೆದದ್ದೇನು, ಹಣ್ಣು ತರಕಾರಿ ತಿಂದು ತೇಗಿದ್ದೇನು. ದೇಹದ ಆರೋಗ್ಯಕ್ಕೆ ಬೇಕಾದ್ದನ್ನಷ್ಟೇ ನೋಡಿಕೊಂಡ ನಂಜುಂಡಿ ಆದರೆ ಮನದ ಆರೋಗ್ಯವನ್ನು ಹಾಳುಮಾಡಿಕೊಂಡೇ ಬಿಟ್ಟ! ಸಮಾಜದಲ್ಲಿ ಒಬ್ಬರಿಗೊಬ್ಬರಿಗೆ ಆಗಲು ಮರೆತ, ಸ್ವಾರ್ಥ ಬದುಕಿನೊಳಗೆ ಹೊಕ್ಕು ಕೇವಲ ಅವನ ದೇಹದೊಂದಿಗೆ ಮಾತ್ರವೇ ಸುಖವಾದ ಬದುಕು ಕಟ್ಟಿಕೊಂಡ.

ನಿವೃತ್ತಿಯ ಜೀವನ ಸವಿಜೇನಂತಿರುತ್ತದೆ ಎಂದುಕೊಂಡಿದ್ದ ಹೆಂಡತಿಗೆ ಅದು ಭಯಂಕರತೆ ತಂದೊಡ್ಡಿತು. ಸದಾ ಅವಳನ್ನು ಚುಚ್ಚುಮಾತುಗಳಿಂದ ಹಂಗಿಸುವುದು, ಅವಳ ಆರೋಗ್ಯವನ್ನು ತನ್ನ ಆರೋಗ್ಯದೊಂದಿಗೆ ಹೋಲಿಸಿಕೊಂಡು ಗೇಲಿಮಾಡುವುದು, ಕುಹಕವಾಡುವುದು ಇಂತವನ್ನೇ ಮಾಡಿದ. ಅಕ್ಕ ಪಕ್ಕದವರೊಂದಿಗೆ ಹಗೆತನ, ಹೋದಲ್ಲಿ ಬಂದಲ್ಲಿ ಜಗಳ, ಸಂಬಂಧಿಕರೊಂದಿಗೆ ಮೌನ ಇವೇ ನಂಜುಂಡಿಯ ಹಿತಶತೃಗಳಾದವು.

ನಂಜುಂಡಿಯ ಮನದ ಮಾತುಗಳು ಕೋಣೆಯ ತುಂಬ ಗಿರಕಿಹೊಡೆಯತೊಡಗಿದವು. ಸೊಸೆಯ ಕೈಹಿಡಿದು ‘ಕ್ಷಮಿಸುಬಿಡು ತಾಯೆ’ ಎಂದು ಕೇಳಬೇಕೆಂಬ ಹಂಬಲ ಆದರೆ ಇಷ್ಟಾದರೂ ಅಹಂ ಅಡ್ಡಿಪಡಿಸುತ್ತಿದೆ. ಸೇವಾ ಮನೋಭಾವ ಹೊತ್ತಿರುವ ಅವರುಗಳ ಮೇಲೆ ಆಸ್ತಿಪಾಸ್ತಿಗಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಸಂಶಯ ಪಿಶಾಚಿ ಆವರಿಸಿಕೊಂಡು ಬಿಟ್ಟಿದೆ!

ನೀವೂ ಬೇಡ ನಿಮ್ಮ ಹಂಗೂ ಬೇಡ ಎಂದು ಇಪ್ಪತ್ತು ವರುಷದ ಹಿಂದೆಯೇ ಮನೆಬಿಟ್ಟು ಹೋಗಿದ್ದವರನ್ನು ನಂಜುಂಡಿಯೇ ಕಾಡಿಬೇಡಿ ಮನೆಗೆ ಬರುವಂತೆ ಮಾಡಿದ್ದ. ಬಂದನಂತರವಾದರೂ ಒಟ್ಟಿಗೆ ಇರಲು ಒಪ್ಪಿದನೆ ಇಲ್ಲ. ‘ನಿಮ್ಮಷ್ಟಕ್ಕೆ ನೀವು ಮೇಲಿರಬೇಕು, ನಮ್ಮಗಳ ತಂಟೆಗೆ ಬರುವಂತಿಲ್ಲ, ಸಮಾಜದ ಕಣ್ಣಿಗೆ ನಾವು ಒಂದೇ ಮನೆಯಲ್ಲಿದ್ದೇವೆ ಆದರೆ ನಮ್ಮ ಪ್ರೈವೆಸಿಗೆ ನೀವು ಬರುವಂತಿಲ್ಲ’ ಎಂದೆಲ್ಲಾ ಹೇಳಿದ್ದ್ದ. ಮಗ ಜೋರು ಮಾಡಿದರೂ ಸೊಸೆ ಯಾವುದಕ್ಕೂ ಬೇಡ ಎನ್ನಲಿಲ್ಲ. ಪ್ರತೀ ದಿನ ಪ್ರತೀ ಕ್ಷಣ ಮನೆಯ ಒಳಿತಿಗಾಗಿಯೇ ಶ್ರಮಿಸಿದಳು. ‘ಹೊರಗಿನಿಂದ ಬಂದವಳು ನೀನು’ ಎಂದು ಅವಳನ್ನು ನಿಂದಿಸಿದ್ದನು. ನಕ್ಕು ಆಕೆ ‘ನಿಮ್ಮಮ್ಮ ಕೂಡ ಹೊರಗಿನವರೇ, ನಿಮ್ಮ ಹೆಂಡತಿಯೂ ಸಹ ಹೊರಗಿನವರೇ ತಾನೇ ಮಾವ’ ಎಂದು ‘ಶಾಲಿನಲ್ಲಿ ಸುತ್ತಿಕೊಂಡು ಹೊಡೆದಂತೆ’ ಹೇಳಿದ್ದಳು.

ಸದಾ ಮೊಂಡು ವಾದವಿವಾದಗಳಲ್ಲೇ ನಿವೃತ್ತಿಯ ಬದುಕನ್ನು ಕಳೆದದ್ದಾಯಿತು. ಆಸ್ಪತ್ರೆ ಸೇರಿದ ಬೀಗರನ್ನು ತುಚ್ಛವಾಗಿ ಕಂಡು ಅವರ ಸಾವಿಗೂ ಹೋಗದ ಕೀಳು ಮನಸ್ಥಿತಿ ತಂದುಕೊಂಡದ್ದಾಯಿತು! ಆಸ್ತಿವಿಚಾರಕ್ಕಾಗಿ ತಾಯಿಯೊಂದಿಗೆ ವೈಮನಸ್ಯ ಕಟ್ಟಿಕೊಂಡು ಕೊನೆಯ ವರೆಗೂ ಅವಳನ್ನು ನೋಡಲೂ ಹೋಗದ ಪಾಪಿ ನಾನಾದೆ ಎಂದು ಚಡಪಡಿಸಿದ್ದೂ ಆಯಿತು! ಚಿಕ್ಕಪ್ಪ ಎಂದು ಬಂದ ಅಣ್ಣನ ಮಕ್ಕಳನ್ನು ತಿರಸ್ಕಾರವಾಗಿ ಕಂಡದ್ದಾಯಿತು. ಹಾಸಿಗೆ ಹಿಡಿದ ಅಣ್ಣನನ್ನು ‘ಪರಾವಲಂಬಿ’ ಎಂದು ಕೊಂಕು ಮಾತನಾಡಿ ಅವಮಾನಿಸಿದ್ದಾಯಿತು, ಮಾವ ಎಂದು ಬಂದ ಮಕ್ಕಳನ್ನು ಮೂಲೆಗುಂಪು ಮಾಡಿದ್ದಾಯಿತು. ಯಾರನ್ನೂ ಹತ್ತಿರ ಸೇರಿಸದ ‘ಒಂಟಿ ಪಿಶಾಚಿ’ ಇಂದು ಮಂಚದ ಮೇಲೆ ಮಲಗಿ ನಕ್ಷತ್ರವನ್ನೂ ಎಣಿಸಲಾಗದೆ ಗೋಡೆಯೊಳಗೆ ಬಂಧಿಯಾಗಿ ಮಲಗಿದ್ದಾಗಿದೆ!.

ಯಾವ ಪುರುಷಾರ್ಥಕ್ಕಾಗಿ ‘ಶತಾಯುಷಿ’ಯಾಗಬೇಕು? ಕೊರಡಿನಂತೆ ಬಿದ್ದವನನ್ನು ಪ್ರೀತಿಯಿಂದ ಮಾತನಾಡಿಸಲು ಮಗ ಸೊಸೆ ಬಿಟ್ಟರೆ ಮತ್ತಿನ್ಯಾರಿದ್ದಾರೆ? ಮಗಳು ಅಳಿಯ ಅವರ ಬದುಕು ಕಟ್ಟಿಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ಇನ್ನು ಮೊಮ್ಮಕ್ಕಳಂತು ವಿದೇಶ ಸೇರಿದ್ದಾಗಿದೆ. ಮರಿಮಗುವನ್ನು ನೋಡುವ ಆಸೆ ಮಾಯಾಜಿಂಕೆಯೇ ಸರಿ. ಇಷ್ಟು ವರುಷಗಳು ಬದುಕಿದ್ದು ಪ್ರಯೋಜನವೇನು? ಮುಂದೆ ಬದುಕಿ ಮಾಡುವುದಾದರೂ ಏನು?

ಎದುರು ಮನೆ ವೆಂಕಟೇಶನ ಮನೆಯಲ್ಲಿ ಸದಾ ಮಕ್ಕಳು ಮೊಮ್ಮಕ್ಕಳ ಗದ್ದಲವೋ ಗದ್ದಲ. ವಾರಕ್ಕೊಂದು ಕೂಟ, ತಿಂಗಳಿಗೊಂದು ಸಮಾರಂಭ, ವರುಷಕ್ಕೊಂದು ಪ್ರವಾಸ ಮಾಡಿಕೊಂಡು ತಮ್ಮ ಕೊನೆಯ ಕ್ಷಣಗಳನ್ನು ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಹೋದತಿಂಗಳು ಎಲ್ಲರೂ ಸೇರಿಕೊಂಡು ಆತನಿಗೆ ‘ಕನಕಾಭಿಷೇಕ’ ಮಾಡಿದರು. ‘ವೆಂಕಟೇಶ ಮನೆತುಂಬ ಪಿತ ಪಿತ ಅಂತ ಮಕ್ಕಳು ಮಾಡಿಕೊಂಡಿದ್ದಾನೆ ಅಸಹ್ಯ’ ಎಂದು ಈ ನಂಜುಂಡಿ ಹಂಗಿಸಿದ್ದನಲ್ಲವೇ? ಆದರೆ ಆತ ನಕ್ಕು ‘ನಿಮ್ಮ ಹಾಗೆ ನಾವು ಬುದ್ದಿವಂತರಲ್ಲ ಸ್ವಾಮಿ, ಏನೋ ದೇವರು ಕೊಟ್ಟಿದ್ದಾನೆ’ ಎಂದಾಗ ಕೃತಕ ನಗೆ ನಕ್ಕು ಇತ್ತ ಬಂದಿದ್ದ.

“ನಂಜುಂಡಸ್ವಾಮಿಯವರೇ ನಮ್ಮ ಬಡಾವಣೆಯಲ್ಲಿ ಎಲ್ಲರೂ ಸೇರಿ ಒಂದು ಸಾಹಿತ್ಯ ಕೂಟ ಮಾಡೋಣ ಅಂದುಕೊಂಡಿದ್ದೇವೆ. ಹೇಗೂ ನೀವು ಒಂದಷ್ಟು ಕತೆ ಕಾದಂಬರಿ ಆರೋಗ್ಯಪುಸ್ತಕ ಎಂದು ಓದುತ್ತಲೇ ಇರುತ್ತೀರಿ, ಬನ್ನಿ ಎಲ್ಲರೂ ಸೇರಿ ಕೂಟಮಾಡಿಕೊಂಡು ಬೆರೆಯೋಣ” ಎಂದು ಆಹ್ವಾನಕೊಟ್ಟಾಗ ನಂಜುಂಡಿ ಹೌಹಾರಿದ್ದ. “ಯಾವ ಯಾವೋ ಎಲ್ಲೆಲ್ಲಿಂದಲೋ ಬರುತ್ವೆ, ಅದೆಲ್ಲ ನಂಗೆ ಸರಿಹೋಗಲ್ಲ, ನನ್ನ ಪಾಡಿಗೆ ನಾನು ಓದಿಕೊಳ್ಳುತ್ತೇನೆ ಕ್ಷಮಿಸಿ” ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದ್ದ. ಸಮಾಜದಲ್ಲಿ ಒಟ್ಟಾಗಿ ಬಾಳುವ ಶಕ್ತಿಯನ್ನೇ ಕಳೆದುಕೊಂಡು ಬಿಟ್ಟನಾ ಈ ನಂಜುಂಡಿ? ಸಮಾನ ಮನಸ್ಕರೊಂದಿಗೆ ಬೆರೆಯುವ ಬುದ್ಧಿಯೂ ಇಲ್ಲವಾಯಿತಾ? ಎಲ್ಲವನ್ನೂ ‘ಬಿಳಿಗೋಡೆ’ ತೋರಿಸುತ್ತಿದೆ. ಈಗ ನಂಜುಂಡಿ ಹಣೆ ಹಣೆ ಚಚ್ಚಿಕೊಳ್ಳತೊಡಗಿದ.

ಮಂಚದಲ್ಲಿ ಮಲಗಿಕೊಂಡೆ ನಂಜುಂಡಿ ತನಗೆ ತಾನೇ ಅಂದುಕೊಂಡ, ಹಾಗಾದರೆ ನನ್ನಲ್ಲಿ ಒಳ್ಳೆಯತನಗಳೇ ಇರಲಿಲ್ಲವೇ? ಎಷ್ಟೆಲ್ಲ ಮಿತ್ರರಿಗೆ ಸಹಾಯ ಮಾಡಿದ್ದೇನೆ, ವೃತ್ತಿಜೀವನದ ಬಂಧುಗಳಿಗೆ ಸಾಂತ್ವಾನ, ಸಹಕಾರ ಕೊಟ್ಟಿದ್ದೇನೆ. ತೋಟ ನೋಡಿಕೊಳ್ಳಲು ಸಹಾಯವಾಗಲಿ ಎಂದು ಬಂದ ಸಂಬಳವನ್ನೆಲ್ಲಾ ಅಣ್ಣನ ಮನೆಗೆ ಕಳಿಸಿದ್ದೇನೆ, ಬೆಳೆ ನಾಶವಾಗಿದೆ ಎಂದು ಸುದ್ಧಿ ತಿಳಿದ ಕೂಡಲೇ ಕೂಡಿಟ್ಟ ಕಾಸನ್ನೆಲ್ಲಾ ಕೊಟ್ಟಿದ್ದೇನೆ. ನಿರಾಶ್ರಿತರಾಗಿ ಬಂದ ಅಕ್ಕನ ಮಕ್ಕಳಿಗೆ ನೌಕರಿ ಕೊಡಿಸಿ ಕಾಲಮೇಲೆ ನಿಲ್ಲುವಂತೆ ನೋಡಿಕೊಂಡಿದ್ದೇನೆ. ಹಾಗಾದರೆ ಅವುಗಳಿಗೆ ಬೆಲೆ ಇಲ್ಲವೇ.

ಕೊನೆಗಾಲದಲ್ಲಿ ಶ್ಲೋಕ, ಭಜನೆ ಮಾಡಿದರೆ ಮಾತ್ರವೇ ದೇವರು ಒಳ್ಳೆಯದು ಮಾಡುವುದಾ? ಇಲ್ಲ ನನಗೆ ಯಾವ ಮಂತ್ರವೂ ಗೊತ್ತಿಲ್ಲ, ನನಗೆ ಗೊತ್ತಿದ್ದ ಮಂತ್ರ ಅದೊಂದೆ ‘ನನ್ನ ಕರ್ತವ್ಯ’ ಅವುಗಳನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಮಾಡುವ ಕೆಲಸ ಬಿಟ್ಟು ಗುಡಿಗೋಪುರಗಳ ಮುಂದೆ ನಿಲ್ಲುವ ಜಾಯಮಾನ ನನ್ನದಲ್ಲ, ಮನದಲ್ಲಿ ಹೊಲಸು ತುಂಬಿಕೊಂಡು ಬಾಯಲ್ಲಿ ವೇದ ಉಪನಿಷತ್ತು ಹೇಳುವಷ್ಟು ಶಿಷ್ಟಾಚಾರ ನನಗಿಲ್ಲ, ತೋರ್ಪಾಟಿಕೆಯ ಪೂಜೆ ನಾ ಮಾಡಲಾರೆ, ನೋಟುಗಳ ಹಾರ ಹಾಕಿ ನನ್ನ ಮನೆಯಲ್ಲಿ ಇಷ್ಟಿದೆ ನೋಡಿ ಎಂದು ಹೇಳಲಾರೆ, ಬೇಡ, ನನಗೆ ನಿನ್ನ ಕಾಳಜಿಯೂ ಬೇಡ, ನಾನು ನಿನ್ನ ಗೋಗರೆಯುವುದೂ ಇಲ್ಲ, ನಾನು ಹೀಗೆ ಈ ಗೋಡೆಗಳೊಂದಿಗೇ ಬದುಕು ಸಾಗಿಸುತ್ತೇನೆ, ನನ್ನ ಗುಂಡಿಗೆ ಗಟ್ಟಿ ಇರುವವರೆಗೂ ನನ್ನ ನಿರ್ಧಾರಗಳನ್ನು ಬಿಡುವುದಿಲ್ಲ, ನೀನು ದಿನವೂ ಬಂದು ಕಾಡಿದರೂ ಅಡ್ಡಿ ಇಲ್ಲ. ಎಷ್ಟು ಕಾಡಿಸುತ್ತೀಯೋ ಕಾಡಿಸು, ‘ಪಾಪಿ ಚಿರಾಯು’ ಎಂದಾದರೂ ಹೇಳು ‘ಗಟ್ಟಿ ಪಿಂಡ’ ಎಂದಾದರೂ ಕೂಗು. ನಾನು ಹೀಗೆ ಇರುತ್ತೇನೆ. “ನಂಜುಂಡಿಯ ಚೀರಾಟ ಮತ್ತೆ ಮೇಲಿನ ಕೋಣೆಗೆ ರಾಚಿತು”

ದಡಗುಟ್ಟಿಕೊಂಡು ಬಂದ ಮಗಸೊಸೆಯನ್ನು ನೋಡಿ ನಂಜುಂಡಿ ಮನದೊಳಗೆ ಗಹಗಹಸಿ ನಕ್ಕ. ನನ್ನ ಒಂದು ಕೂಗಿಗೇ ಈ ಇಬ್ಬರು ಬಿಟ್ಟ ಕೆಲಸ ಬಿಟ್ಟು ನನ್ನ ಕಾಲಬುಡಕ್ಕೆ ಬರುತ್ತಾರೆ. ಎಷ್ಟು ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆ ನಾನು ಎಂದು ಅಹಂ ಒಂದುಕಡೆ ಬೆನ್ನುತಟ್ಟಿಕೊಂಡಿತು. ಮತ್ತೊಂದು ಕಡೆ ಮನಸ್ಸು ಕರಗಿ ಕಣ್ಣಾಲಿಗಳು ಒದ್ದೆಯಾದವು. ಅಯ್ಯೋ ಇಡೀ ಜೀವಮಾನವೇ ತೇಯ್ದು ಬಿಟ್ಟಿರಲ್ಲ. ಮದುವೆಯಾಗಿ ಮೂವತ್ತು ವರುಷವಾಗುತ್ತಾ ಬಂತು. ಊರು ಕೇರಿ ಎಂದು ಸುತ್ತಲಿಲ್ಲ, ಮದುವೆ ಮುಂಜಿ ಎಂದು ಹೋಗಲಿಲ್ಲ, ಈ ಬಿಳಿಗೋಡೆಗಳ ಮಧ್ಯೆ ನಾನೊಂದು ರೀತಿ ಬಂಧಿಯಾದರೆ ನೀವುಗಳು ಮತ್ತೊಂದು ರೀತಿಯಲ್ಲಿ ನನ್ನೊಂದಿಗೆ ಬಂಧಿಯಾಗಿದ್ದೀರಿ. ಎಷ್ಟು ಸುಲಭವಾಗಿತ್ತು ನಿಮಗೆ? ಆರಾಮವಾಗಿ ಕರೆದುಕೊಂಡು ಹೋಗಿ ವೃದ್ದಾಶ್ರಮಕ್ಕೋ, ಓಲ್ಡ್ ಕೇರ್ ಸೆಂಟರ್ ಎಂದು ಹೇಳಿಕೊಳ್ಳುವ ಮತ್ಯಾವುದಕ್ಕೋ ಸೇರಿಸಬಹುದಿತ್ತು. ಆದರೆ ನೀವುಗಳು ಎಂದೂ ಆ ಬಗ್ಗೆ ಯೋಚಿಸಲೂ ಇಲ್ಲ.

ಪಿಂಚಣಿದಾರರ ಸಭೆಯಲ್ಲಿ ಎಷ್ಟೆಲ್ಲಾ ವಿಚಾರಗಳು ಬರುತ್ತಿದ್ದವು. ತಿನ್ನಲು ಕೊಡದ ಸೊಸೆ, ಮನೆಯಿಂದಾಚೆ ನೂಕುವ ಮಕ್ಕಳು, ವಿಚಿತ್ರವಾಗಿ ನಡೆಸಿಕೊಳ್ಳುವ ಮೊಮ್ಮಕ್ಕಳು ಇವುಗಳನ್ನೆಲ್ಲ ಕೇಳಿ ನನ್ನವರೂ ಹೀಗೆ ಮಾಡುತ್ತಾರೇನೋ ಎಂದು ಭಯಪಟ್ಟಿದ್ದೆ. ಆದರೆ ಅದ್ಯಾವುದಕ್ಕೂ ಮಗ ಸೊಸೆ ಅವಕಾಶ ಕೊಡಲಿಲ್ಲ. ತೊಂಭತ್ತರ ಹೊಸ್ತಿಲಲ್ಲಿದ್ದಾಗಲೂ ‘ಈ ಮನೆ, ನನ್ನ ಎಲ್ಲಾ ಆಸ್ತಿಯನ್ನೂ ಯಾವುದಾದರೂ ಅನಾಥಾಶ್ರಮಕ್ಕೆ ಬರೆಯುತ್ತೇನೆ’ ಎಂದು ಹೆದರಿಸಿದ್ದೆ, ಅವುಗಳಿಗೆ ಆಸೆಯನ್ನೇ ಪಡಲಿಲ್ಲ ಇವರು! ಪಿಂಚಣಿಯ ಹಣವನ್ನೆಲ್ಲಾ ನನಗಿಷ್ಟ ಬಂದವರಿಗೆ ಕೊಡುತ್ತಾ ಮನಸ್ಸಿಗೆ ಬಂದಂತೆ ಖರ್ಚುಮಾಡಿದೆ ಅದಕ್ಕೂ ಪ್ರಶ್ನೆ ಮಾಡಲಿಲ್ಲ. ಹಾಗಾದರೆ ಮಗಸೊಸೆ ನನ್ನಿಂದ ಏನನ್ನು ಅಪೇಕ್ಷಿಸಿದ್ದರು? ಹೌದು ಕೇವಲ ಹಿಡಿ ಪ್ರೀತಿ, ಆ ಪ್ರೀತಿ ವಾತ್ಸಲ್ಯ ಮಮಕಾರ ಕೊಡುವಲ್ಲಿ ನಾನು ಸೋತುಹೋದೆ, ಮಗ ಸೊಸೆಯ ಮುಂದೆ ಬೆತ್ತಲಾದೆ, ಅವರ ಕೈಂಕರ್ಯದ ಮುಂದೆ ಮಂಡಿಯೂರಬೇಕಿದೆ ನಾನು. ನಂಜುಂಡಿಯ ಮನಸ್ಸು ಮೂಕವೇದನೆ ಅನುಭವಿಸತೊಡಗಿತು.

ಏ ಗೋಡೆಯೇ ನೀನು ನನ್ನನ್ನು ಎಷ್ಟು ಬೇಕಾದರೂ ನಿಂದಿಸು, ತಿರಸ್ಕರಿಸು, ಸ್ವೀಕರಿಸುತ್ತೇನೆ. ಸಾಕಾಗಿದೆ ನನಗೆ ಈ ಜನ್ಮ. ಇನ್ನು ಮುಂದೆ ನಿನ್ನನ್ನು ತುಚ್ಛವಾಗಿ ಕಾಣುವುದಿಲ್ಲ ಬದಲಿಗೆ ಪ್ರೀತಿಸುತ್ತೇನೆ. ತಳ್ಳುತ್ತೇನೆ, ನೂಕುತ್ತೇನೆ ಎಂದು ಹೇಳುವುದಿಲ್ಲ, ದಯವಿಟ್ಟು ನನ್ನ ಬದುಕಿನಲ್ಲಿ ಘಟಿಸಿದ ‘ಒಳ್ಳೆಯ’ ಚಿತ್ರಗಳಿದ್ದರೆ ತೋರಿಸು. ನಾನು ಅಷ್ಟೋ ಇಷ್ಟೋ ಮಾಡಿದ ಪುಣ್ಯದ ಕೆಲಸಗಳನ್ನು ಪ್ರಶಂಸಿಸು. ನಂಜುಂಡಿ ಮುಂದಿರುವ ‘ಬಿಳಿಗೋಡೆ’ಗೆ ಕೈಮುಗಿದು ಕೇಳಿಕೊಂಡ! ಈ ಬಾರಿ ನಂಜುಂಡ ಚೀರಲಿಲ್ಲ, ಶಾಂತವಾದ.

ಹಕ್ಕಿಗಳ ಚಿಲಿಪಿಲಿನಾದ ಸುಮಧುರವಾಗಿ ಕೇಳುತ್ತಿದೆ, ಎಲ್ಲೋ ಮಂಗಳಕರನಾದ ಹೊಮ್ಮು ತ್ತಿರುವಂತೆ ನಂಜುಂಡನಿಗೆ ಭಾಸವಾಗುತ್ತಿದೆ. ನಿಧಾನವಾಗಿ ಕಣ್ಣುತೆರೆದ. ಕೋಣೆಯೊಳಗಿದ್ದ ‘ಹೊಲಸು’ ವಸ್ತುಗಳೆಲ್ಲಾ ಹಿಂದೆ ಸರಿದಿದ್ದವು, ಎಲ್ಲವೂ ಶುಭ್ರ! ಹಚ್ಚ ಹಸಿರು ಕಣ್ಣಿಗೆ ತಂಪಿನ ಸ್ನಾನ ಮಾಡಿಸುತ್ತಿವೆ.

‘ಬಿಳಿಯಗೋಡೆ’ಯ ಮೇಲೆ ಸುಂದರವಾದ ಮಗುವೊಂದು ಅಂಬೆಗಾಲಿಟ್ಟುಕೊಂಡು ಇತ್ತಲೇ ಬರುತ್ತಿದೆ. ಬಂಧುಬಾಂದವರೆಲ್ಲಾ ಸೇರಿ ‘ಹ್ಯಾಪಿ ಬರ್ತ್ಡೇ ಅಜ್ಜ’ ಎಂದು, ಶುಭಾಶಯಗಳು ಚಿಕ್ಕಪ್ಪ, ಶುಭಾಶಯಗಳು ದೊಡ್ಡಪ್ಪ, ಶುಭಾಶಯಗಳು ಮಾವಯ್ಯ ಎಂದು ಬಾಯಿತುಂಬಾ ಹರಸುತ್ತಿದ್ದಾರೆ. ಅಂಬೆಗಾಲಿಡುತ್ತಾ ಬಂದ ಮರಿಮಗು ಕನಕಾಭಿಷೇಕ ಮಾಡಲು ಮುತ್ತಜ್ಜನ ಮಂಡಿಯ ಮೇಲೆ ಕುಳಿತುಕೊಳ್ಳಲು ತವಕಿಸುತ್ತಿದೆ. ನಂಜುಂಡನ ಮೊಗದಲ್ಲಿ ಮುಗುಳ್ನಗೆ ಆವರಿಸಿತು. ಎಲ್ಲವೂ ಕನಸಾಗದಿರಲಿ ಎಂದು ಚಿವುಟಿಕೊಂಡ. ಇಲ್ಲ ಇದು ಕನಸಲ್ಲ, ನಿಜಕ್ಕೂ ಇದು ನನಸೇ.

ಮಂಡಿ ನೋವಾಗಿದ್ದರೂ ಕೋಲು ಹಿಡಿದು ನಡೆಯುತ್ತಾ ಬಂದು ಶುಭಹಾರೈಸುವ ಅಣ್ಣನ ಮಗಳು, ವೀಲ್ ಚೇರ್‌ನ ಸಹಾಯದಿಂದ ಬಂದು ‘ಚೆನ್ನಾಗಿದ್ದೀರಾ ಮಾವಯ್ಯ’ ಎಂದ ಅಕ್ಕನ ಮಗ, ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟಗಳು ಇವೆ, ಆದರೂ ಒಟ್ಟಿಗೆ ಸೇರುವ ಆಸೆಯಿಂದ ಕಷ್ಟಪಟ್ಟು ಇಷ್ಟಪಟ್ಟು ಬಂದಿದ್ದಾರೆ.

ಆದರೆ ನಾನು? ಯಾರು ಎಷ್ಟೇ ಕರೆದರೂ ಯಾವುದೇ ಸಮಾರಂಭಕ್ಕೂ ಹೋಗುತ್ತಿರಲಿಲ್ಲ, ಕರೆಯಲು ಬರುತ್ತಾರೆ ಎಂದು ತಿಳಿದ ಕೂಡಲೇ ‘ನೆವ’ ಹುಡುಕಿಟ್ಟುಕೊಂಡು ‘ಬರಲು ಸಾಧ್ಯವಿಲ್ಲ’ ಎನ್ನುತ್ತಿದ್ದದ್ದು ಎಲ್ಲವೂ ನೆನಪಾಯಿತು. ಎಲ್ಲರೂ ಸೇರಿ ಸಂಭ್ರಮದಿಂದ ನನ್ನ ಹುಟ್ಟುಹಬ್ಬ ಆಚರಿಸಲು ಸೇರಿದ್ದಾರೆ! ಈ ಬಾರಿ ನಂಜುಂಡನ ಕೈ ನಡುಗುತ್ತಿಲ್ಲ, ಜೋರಾಗಿ ಕಿರುಚಲೂ ಇಲ್ಲ. ಬಂಧುಬಾಂಧವರನ್ನೆಲ್ಲಾ ಬಾಯಿ ತುಂಬಾ ಮಾತನಾಡಿಸಿದ, ಎಲ್ಲರೂ ಬಂದು ಆಶೀರ್ವಾದ ಬೇಡಿದಾಗ ಮನ:ಪೂರ್ವಕವಾಗಿ ಹರಸಿದ. ನಂಜುಂಡನ ಮೊಗದಲ್ಲಿನ ಮಂದಹಾಸ ಕಂಡು ಸತೀಶ ಸವಿತಾ ಕರಗಿಹೋದರು.

ಇಂತಹದೊಂದು ಅದ್ಭುತ ದಿನ ತಮ್ಮದಾಗಿದ್ದಕ್ಕೆ ಧನ್ಯತಾಭಾವ ಇಬ್ಬರಲ್ಲೂ ಆವರಿಸಿಕೊಂಡಿತು. ದಂಪತಿಗಳಿಬ್ಬರೂ ಹೋಗಿ ನಂಜುಂಡನಿಂದ ಆಶೀರ್ವಾದ ಪಡೆದರು.

“ಶತಮಾನಂ ಭವತಿ ಶತಾಯು ಪುರುಷ: ಶತೇಂದ್ರಿಯ:” ಎಂಬ ಮಂತ್ರಘೋಷ ನಂಜುಂಡನ ಕಿವಿಗೆ ಇಂಪಾಗಿ ಕೇಳತೊಡಗಿತು. ಸುಖವಾಗಿ ಬಾಳಿ ಎಂದು ಮನಸ್ಸು ತೃಪ್ತಿಯಿಂದ ಆಶೀರ್ವದಿಸಿತು. ‘ಬಿಳಿಗೋಡೆ’ ನಂಜುಂಡನ ದೀರ್ಘಾಯುಷ್ಯದ ಚಿತ್ರಣವನ್ನು ಹಸನಾಗಿ ತೊರಲು ಪ್ರಾರಂಭಿಸಿತು. ನಂಜುಂಡ ದಿನವೂ ‘ಬಿಳಿಗೋಡೆ’ಯೊಂದಿಗೆ ಬಾಂಧವ್ಯದಿಂದ ಮಾತನಾಡುತ್ತ ತನ್ನ ಕೊನೆಯನ್ನು ವಿಶೇಷವಾಗಿಸಿಕೊಂಡ.

ಈ ಕತೆಯ ಮೊದಲಿನ ಭಾಗ ಇಲ್ಲಿದೆ : https://surahonne.com/?p=46282

(ಮುಗಿಯಿತು)

–ಗಾಯತ್ರಿ ಸುಂದರೇಶ್, ಮೈಸೂರು
(ತ್ರಿವೇಣಿ ಮನೋವೈಜ್ಞಾನಿಕ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕತೆ (2026))

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *