ಪರಾಗ

ಬಿಳಿಗೋಡೆ : ಭಾಗ 1

Share Button

ಗಡಿಯಾರದ ಮುಳ್ಳು ಮಧ್ಯರಾತ್ರಿಯ ಎರಡಕ್ಕೆ ಸಮೀಪಿಸುತ್ತಿದೆ. ನಿಮಿಷದ ಮುಳ್ಳಿಗೂ ಸೆಕೆಂಡಿನ ಮುಳ್ಳಿಗೂ ಮುನಿಸೇನೋ ಎಂಬಂತೆ ನಿಧಾನಗತಿಯಲ್ಲಿ ಚಲಿಸುತ್ತಿವೆ. ಕಾಂಪೌಂಡಿನಾಚೆ ಬೀದಿ ನಾಯಿಗಳು ಊಳಿಡುತ್ತಾ ತಮ್ಮ ಇರುವಿಕೆಯನ್ನು ಕೇಳಿಸುತ್ತಿವೆ! ದೂರದಲ್ಲೆಲ್ಲೋ ಆಗೊಮ್ಮೆ ಈಗೊಮ್ಮೆ ಗೂರ್ಖನ ಶಿಳ್ಳೆಯ ಶಬ್ಧ ಕೂಡ. ನೀರವ ಮೌನದ ರಾತ್ರಿಯಲ್ಲಿ ಮನೆಯೊಳಗೆ ತುಸು ಸದ್ದಾದರೂ ಕೇಳಲೇಬೇಕು.

ಇತ್ತ ಮನೆಯೊಂದರಲ್ಲಿ ತನ್ನ ಇರುವಿಕೆಗಾಗಿ ಹರಸಾಹಸ ಪಡುತ್ತಿರುವ ‘ನಂಜುಂಡಿ’ಗೆ ನಿದ್ರೆಯ ‘ಸವಿ’ ಹೋಗಿ ವರುಷಗಳೇ ಕಳೆದಿವೆ! ಯಾವಾಗಲೋ ನಿದ್ರೆ ಮತ್ಯಾವಗಲೋ ಎಚ್ಚರ. ಕಣ್ಣುಬಿಟ್ಟಾಗ ಎದುರಿರುವ ಗಡಿಯಾರ ತೋರುವ ಸಮಯ ಬೆಳಗ್ಗೆಯದೋ ಸಂಜೆಯದೋ ತಿಳಿಯದು! ಹೀಗೆ ಮಲಗಿ ಆತ ಅದಾಗಲೇ ನಾಲ್ಕು ವಸಂತಗಳಾಗಿವೆ. ಈ ‘ವ್ಯರ್ಥ’ ಬದುಕಿಗೆ ಮುಂದಿನ ತಿಂಗಳು ತೊಂಭತ್ತನಾಲ್ಕು ತುಂಬುತ್ತದೆ ಎಂದು ಅವನ ಮನಸ್ಸು ಕಹಿಯಾಗಿ ಹೇಳುತ್ತಿದೆ! ಶತಾಯುಷಿಯಾಗುವ ಹಂಬಲ ಮನಸ್ಸಿಗಿದೆ ಆದರೆ ದೇಹಕ್ಕೆ?

ನಿರ್ಜೀವ ಕೊರಡೊಂದು ಅಟ್ಟದಲ್ಲಿ ಈತನೊಂದಿಗೇ ಜೀವಿಸುತ್ತಿದೆ ಮಲಗಿರುವ ನಂಜುಂಡಿಯನ್ನು ಪ್ರತಿ ಕ್ಷಣವೂ ಇಣುಕಿ ನೋಡಿ ನಗುತ್ತಿರುತ್ತದೆ. ‘ಅಪಹಾಸ್ಯದ ಪರಮಾವಧಿ ಎಂದು ಕಿರುಚಿ ಬಿಡುವ ಮನಸ್ಸು ನಂಜುಂಡಿಗೆ’ ‘ನೀನು ಹುಟ್ಟಿದಾಗ ನಂಜನಗೂಡಿನಲ್ಲಿ ಕೊಂಡದ್ದು ಮಗ’ ಎಂದು ಅವರಮ್ಮ ಹೇಳಿದ ನೆನಪು ಸುಮ್ಮನಿರುವಂತೆ ಮಾಡುತ್ತದೆ. ‘ಉಪಯೋಗಕ್ಕಿಲ್ಲ’ ಎಂದು ಅಟ್ಟಕ್ಕೆ ಎಸೆದದ್ದು ಇವನೇ ತಾನೆ? ಈಗ ಈತನ ಸರದಿ ಬಂದಿದೆ! ಮೂತ್ರಕ್ಕೆ ಹೋಗಬೇಕೆಂದು ಪ್ರಕೃತಿ ಕರೆಯುತ್ತಿದೆ, ಮೇಲೇಳಲು ಕಾಲು ಜಡ್ಡುಗಟ್ಟಿದೆ, ಸೊಂಟ ಸೊರಗಿದೆ, ಜೋರಾಗಿ ಕೂಗಲು ಉಸಿರೇ ಬರುತ್ತಿಲ್ಲ, ಮಂಪರು ಬೆಳಕಿನಲ್ಲಿ ಕಣ್ಣು ಅಸ್ಪಷ್ಟವಾಗಿ ಕಾಣುತ್ತಿದೆ, ಹೇಗೋ ಕಷ್ಟಪಟ್ಟು ಎದ್ದು ಕೂತದ್ದಾಯಿತು.

‘ಅಣ್ಣಾ…ನಿಮಗೆ ಡೈಪರ್ ಹಾಕಿದ್ದೇನೆ ನೀವು ಮೂತ್ರ ಬಂದರೆ ಅದರಲ್ಲೇ ಮಾಡಿಕೊಳ್ಳಿ ತೊಂದರೆ ಇಲ್ಲ’ ಎಂದು ಮಗ ಸತೀಶ ಹೇಳಿದ್ದು ನೆನಪಾಯಿತು. ಆದರೆ ಅದೇನೋ ಮುಜುಗರ, ಏನೋ ಸಂಕೋಚ ಜೊತೆಗೆ ಒಂದಷ್ಟು ಹಠ! ತನ್ನ ಹಠ ತಿಳಿದೇ ಮಗ ವ್ಯವಸ್ಥೆ ಮಾಡಿದ್ದಾನೆ ಎಂಬ ಅರಿವಾದರೂ ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಗಾದೆಯನ್ನು ಪಾಲಿಸುವ ಚಟ!

ಪಾಯಖಾನೆ ಮಾಡಲು ‘ಮೊಬೈಲ್ ಕಮೋಡ್’, ಮೂತ್ರಕ್ಕೆ ಹೋಗಲು ಸುಲಭವಾಗಲಿ ಎಂದು ಕ್ಯಾನ್, ವಾಂತಿ, ಕಫ ಬಂದರೆ ಉಗಿಯಲಿ ಎಂದು ಮಂಚದ ಪಕ್ಕದಲ್ಲೇ ವಾಶ್‌ಬೇಸಿನ್. ಅಯ್ಯೋ ಕರ್ಮವೇ ದಿನವಿಡೀ ಈ ‘ಹೊಲಸು’ ವಸ್ತುಗಳನ್ನೇ ನೋಡಿ ನೋಡಿ ರೋಸಿಹೋಗಿದ್ದೇನೆ ಇದನ್ನು ಬಿಟ್ಟು ಮತ್ತೇನನ್ನಾದರು ನೋಡಬೇಕಿದೆ ಎಂಬ ನಂಜುಂಡಿಯ ‘ಕೂಗು’ ಯಾರಿಗೂ ಕೇಳುತ್ತಿಲ್ಲ! ಪಕ್ಕದಲ್ಲಿದ್ದ ಊರುಗೋಲನ್ನು ಎಳೆದುಕೊಂಡು ನಿಧಾನವಾಗಿ ಎದ್ದುನಿಲ್ಲಲು ಮಾಡಿದ ಪ್ರಯತ್ನವೂ ವಿಫಲವಾಯಿತು. ಹಾಗೆಯೇ ದೊಸಕ್ಕನೇ ನೆಲಕ್ಕೆ ಉರುಳೇ ಬಿಟ್ಟ್ಟ. ಸುತ್ತಲೂ ಇದ್ದ ಆ ‘ಹೊಲಸು’ ವಸ್ತುಗಳೇ ಈಗ ಆಸರೆಯಾಗಬೇಕಿದೆ. ಕಮೋಡಿನ ಹಿಡಿ ಹಿಡಿದು ಮೇಲೇಳುವ ಪ್ರಯತ್ನ ಊಹುಂ ಆಗುತ್ತಿಲ್ಲ…ಕಣ್ಣು ಮಹಡಿಯತ್ತ ನೆಟ್ಟಿತ್ತು, ನಂಜುಂಡಿಯ ಬಾಯಿಯಿಂದ ಜೋರಾಗಿ ಸತೀಶ…ಸವಿತಾ ಎಂಬ ಆರ್ತನಾದ ತಂತಾನೇ ಹೊರಬಂತು.

ನಂಜುಂಡಿ ಕಣ್ಣು ಬಿಟ್ಟಾಗ ಗಡಿಯಾರ ಬೆಳಗಿನ ಎಂಟರ ಹತ್ತಿರವಿದೆ. ಅಕ್ಕ ಪಕ್ಕದಲ್ಲಿ ಮಗ ಸೊಸೆ ಇಬ್ಬರೂ ಯೋಧರ ಪಡೆಯಂತೆ ನಿಂತಿದ್ದಾರೆ. ಒಂದು ಕೈಯಲ್ಲಿ ಬಿಸಿನೀರು, ಮತ್ತೊಂದರಲ್ಲಿ ಕಾಫಿ ತಿಂಡಿ ಹಿಡಿದು ಸೊಸೆ ತನ್ನ ಮಾವ ನಂಜುಂಡಿಯ ಅಣತಿಗಾಗಿ ಕಾಯುತ್ತಿದ್ದಾಳೆ! ನಂಜುಂಡಿ ಮಾಡಿಕೊಂಡಿರುವ ಮಲಮೂತ್ರಗಳನ್ನು ಮಗ ಒರೆಸಿ ಫೆನಾಯಿಲ್ ಸಿಂಪಡಿಸಿ ಹೊಸ ಬೆಡ್‌ಶೀಟ್ ಹಾಸುತ್ತಿದ್ದಾನೆ. ಅವರಿಬ್ಬರ ಸೇವೆಯನ್ನು ಬೆರಗುಗಣ್ಣಿನಿಂದ ನೋಡುವುದಷ್ಟೇ ನಂಜುಂಡಿಯ ಕೆಲಸ. ನಂಜುಂಡಿ ಕಣ್ಣುಬಿಡುವುದನ್ನೇ ಕಾಯುತ್ತಿದ್ದಂತೆ ಹತ್ತಿರ ಬಂದ ಸೊಸೆ ‘ಮಾವ ಈಗ ಪರವಾಗಿಲ್ಲವಾ…ಹೊಟ್ಟೆಗೆ ಏನಾದರೂ ಕೊಡಲಾ’ ಎಂದು ಕೇಳಿದರೆ ಈತನ ಧಿಮಾಕು ವ್ಯಕ್ತಿತ್ವ ‘ನನಗೇನಾಗಿದೆ? ಚೆನ್ನಾಗೇ ಇದ್ದೇನೆ’ ಎಂದಿತು. ದೇಹ ಕೃಶವಾದರೂ ನಾಲಿಗೆ ಗಟ್ಟಿಯಾಗಿಯೇ ಇದೆ ಜೋರು ದನಿಗಂತೂ ಕಮ್ಮಿ ಇಲ್ಲ! ನಂಜುಂಡಿ ಎಷ್ಟೇ ಬೇಡಬೇಡವೆಂದರೂ ಗಂಡಹೆಂಡಿರಿಬ್ಬರೂ ಬಲವಂತದಿಂದ ತಿಂಡಿ ತಿನಿಸು ಪಾನೀಯಗಳ ಸೇವನೆ ಮಾಡಿಸಿ ಅಷ್ಟೇ ಪ್ರಮಾಣದಷ್ಟು ಮಾತ್ರೆಗಳನ್ನೂ ಸಹ ಹೊಟ್ಟೆಗೆ ತಲುಪಿಸಿಸಿಯೇ ಬಿಟ್ಟರು!

ಇಷ್ಟು ಹೊತ್ತು ಸದ್ದು ಗದ್ದಲವಿದ್ದ ಕೋಣೆ ಈಗ ನಿಶ್ಯಬ್ಧವಾಯಿತು. ನಂಜುಂಡಿಯ ಮಗ ಸೊಸೆ ಇಬ್ಬರೂ ತಮ್ಮ ತಮ್ಮ ಕೆಲಸಕಾರ್ಯಗಳಿಗಾಗಿ ಮನೆಯಿಂದಾಚೆ ಹೊರಟರು. ಮತ್ತೆ ಅದೇ ನೀರವ ಮೌನ. ರಾತ್ರಿಯೋ ಹಗಲು ಗೊತ್ತಾಗದ ಭಾವ. ನಂಜುಂಡಿಯ ಕೈಗಳು ಇದ್ದಕ್ಕಿದ್ದಂತೆ ಅದುರಲು ಪ್ರಾರಂಭಿಸಿದವು. ಕಣ್ಣುಗಳು ಎದುರಿನ ಗೋಡೆಯತ್ತ ನಾಟಿತು. ದಿನವೂ ನಂಜುಂಡಿಗೆ ಅಲ್ಲಿ ಬರುವ ದೃಶ್ಯಗಳು ಭಯಮೂಡಿಸುತ್ತಿವೆ. ‘ಬಿಳಿಗೋಡೆ’ಯ ಮೇಲೆ ಕಾಣುವ ಪ್ರತೀದೃಶ್ಯವೂ ನಿದಿರೆಯನ್ನು ಕೊಲ್ಲುತ್ತಿವೆ! ಎದ್ದುಹೋಗಿ ಆ ಗೋಡೆಯನ್ನು ಚಚ್ಚಿಬಿಡುವಷ್ಟು ಕೋಪ ಉಕ್ಕುತ್ತಿದೆ!

‘ಅರೆ ಯಾಕೆ ಹೀಗೆ? ಅದೇನು ಸುಳ್ಳು ಹೇಳುತ್ತಿಲ್ಲವಲ್ಲ, ಸತ್ಯವನ್ನೇ ಹೇಳುತ್ತಿವೆ ತಾನೆ’ ತನ್ನಷ್ಟಕ್ಕೇ ತಾನೇ ಅಂದುಕೊಂಡ. ಪ್ರತೀ ದಿನ ಕಾಡುವ ಆ ದೃಶ್ಯ ಈಗಾಗಲೇ ಗೋಡೆಯಲ್ಲಿ ಬಿತ್ತರವಾಗುತ್ತಿದೆ. ಬೇಡಬೇಡವೆಂದರೂ ‘ಬಿಳಿಗೋಡೆ’ಅದನ್ನು ಅಳಿಸುತ್ತಿಲ್ಲ, ಮತ್ತೆ ಮೂಡಿಬಂದೇ ಬಿಟ್ಟಿತು. ಬೇಡ, ನನ್ನಿಂದಾಗದು ತೋರಿಸದಿರು ಎಂದು ಎಷ್ಟೇ ಅರುಚಿದರೂ ಗೋಡೆ ತನ್ನ ಹಠ ಬಿಡಲಿಲ್ಲ, ನಂಜುಂಡಿಯ ದೃಷ್ಠಿ ಮುಚ್ಚಲಿಲ್ಲ!

***

‘ಏನೂಂದ್ರೆ…ನನ್ನ ಕೈಯಲ್ಲಿ ಏಳಕ್ಕೇ ಆಗ್ತಾ ಇಲ್ಲ ಸ್ವಲ್ಪ ನೀರು ಕೊಡ್ತೀರಾ’ ಎಂಬ ವಿಷಾದನೀಯ ಕೂಗು ಶೈಲಜಾಳ ಬಾಯಿಂದ ಪೇಲವವಾಗಿ ಕೇಳಿಬಂತು. ‘ಅಯ್ಯೋ ದರಿದ್ರವೇ…ನಿನ್ನಿಂದಾಗಿ ನನಗೆ ಸಾಕಾಗಿ ಹೋಗಿದೆ, ಆರುತಿಂಗಳಿಂದ ಸೇವೆ ಮಾಡಿಸ್ಕೋಳೋದೆ ಆಯ್ತಲ್ಲ, ಮಲಗಿದ್ದ ಜಾಗದಲ್ಲೇ ನಿನ್ನ ದರ್ಬಾರು, ಮಗಸೊಸೆ ಅನ್ಸುಕೊಂಡಿರೋವಕ್ಕು ಬುದ್ದಿ ಇಲ್ಲ, ಸೇವೆ ಮಾಡ್ತಾನೇ ಇವೆ, ನೀನು ಹಾಸಿಗೆ ಹಿಡಿದಿರೋದು ಸಂಬಂಧಿಕರಿಗೆಲ್ಲಾ ಖುಷಿ, ಇನ್ನೂ ಹೀಗೆ ಇರು, ನಿನ್ನನ್ನ ‘ನಾಯಿ ನಾಯಿ’ ತರ ನೋಡ್ತಾರೆ, ಸಾಕು ಮಾಡು ನಿನ್ನ ನಾಟಕ, ನಡೀ ಎದ್ದು ನೋಡೆ ಬಿಡ್ತೇನೆ ಏನಾಗುತ್ತೋ ಅಂತ’ ನಂಜುಂಡಿಯ ಆರ್ಭಟ ಕಾಯಿಲೆಯಿಂದ ನರಳುತ್ತಿರುವ ತನ್ನ ಹೆಂಡತಿ ಶೈಲಜಾಳ ಮುಂದೆ!

 ‘ಏಳಕ್ಕಾಗಲ್ಲ ಅಂದ್ರೆ…ನನ್ನ ಕಷ್ಟ ನಿಮಗೆಲ್ಲಿ ಅರ್ಥವಾಗುತ್ತೆ… ದೇವರೆ ಇಂತ ಕಷ್ಟ ಯಾರಿಗೂ ಬರಬಾರದಪ್ಪ, ನನ್ನ ಕಷ್ಟ ಇವರಿಗೆ ಸ್ವಲ್ಪ ಅರ್ಥಮಾಡ್ಸಪ್ಪ’ ಶೈಲಜಾಳಿಂದ ಮತ್ತೆ ಅದೇ ಕಾರುಣ್ಯದ ಬೇಡಿಕೆ! ‘ತಿನ್ನೋದು ಮಲಗೋದು, ಕೂತಜಾಗದಲ್ಲೇ ಛೀ..ಛೀ.ಹೊಲಸನ್ನೆಲ್ಲಾ ಮಡಿಕೊಳ್ಳೋದು ಎಂತ ಕರ್ಮವೇ ನಿಂದು’ ಹೆಂಡತಿಯ ಬೇಡಿಕೆಗೆ ನಂಜುಂಡಿಯ ಉತ್ತರ!

‘ಅಯ್ಯೋ ದೇವ್ರೆ ಸಾಕಪ್ಪ ನನ್ನನ್ನ ಮುತ್ತೈದೆಯಾಗಿ ಕರೆಸ್ಕೊಂಬಿಡು’ ಶೈಲಜಾಳ ಕೂಗಿಗೆ ದೇವರು ಅಸ್ತು ಎಂದೇ ಬಿಟ್ಟ ಆದರೆ ನಂಜುಂಡಿಗೆ?

ಹೆಂಡತಿಯ ಶಾಪವೋ ನಡೆಸಿಕೊಂಡ ಕರ್ಮವೋ ಗೊತ್ತಿಲ್ಲ ಈಗ ನಂಜುಂಡಿ ಈ ಸ್ಥಿತಿಯಲ್ಲಿದ್ದಾನೆೆ. ಪ್ರತೀ ದಿನ ಬಿಳಿಗೋಡೆಯ ಮೇಲೆ ಆತನ ಜೀವನದ ದೃಶ್ಯಗಳು ಬಂದು ನಂಜುಂಡಿಯನ್ನು ಕಾಡುತ್ತಿವೆ. ಯಾರಬಳಿಯೂ ಹೇಳಿಕೊಳ್ಳಲಾಗದ ಮೂಕ ವೇದನೆ ಆವರಿಸಿಕೊಂಡು ಬಿಟ್ಟಿದೆ.

ಐವತ್ತು ವರುಷ ಜೊತೆಗೂಡಿ ಸಂಸಾರಮಾಡಿ ಜೀವತೈದವಳ ಜೀವವನ್ನೇ ಚುಚ್ಚುಮಾತುಗಳಿಂದ ನುಂಗಿ ನೀರು ಕುಡಿದುಬಿಟ್ಟೆ, ಈಗ ಅದೇ ದೃಶ್ಯ ಥಕಥೈ ಥಕಥೈ ಎಂದು ಬಿಳಿಗೋಡೆಯಲ್ಲಿ ನನ್ನ ಮುಂದೆ ಹಿಂಸಿಸಿ ಕುಣಿಯುತ್ತಿದೆ. ಅವಳ ಆ ಕೊನೆಯ ಕ್ಷಣಗಳನ್ನು ನಾನು ರಾಕ್ಷಸನಂತೆ ವಿಜೃಂಭಿಸಿಬಿಟ್ಟೆನಲ್ಲಾ ಎಂತಹ ಪಾಪಿಯೂ ಮಾಡದ ಕೆಲಸ ನನ್ನಿಂದಾಯಿತಲ್ಲ ಎಂದು ನಂಜುಂಡಿ ಈಗ ಪ್ರತೀ ಕ್ಷಣ ಕೊರಗುತ್ತಿದ್ದಾನೆ. ಕೊರಗ ಬೇಡ ನಂಜುಂಡಿ ಸಾವಿಗೆ ಒಂದು ‘ನೆಪ’ ಬೇಕಷ್ಟೇ ಎಂದು ಎಲ್ಲರೂ ಆಗ ಸಮಾಧಾನ ಪಡಿಸಿದ್ದರು. ಆಗ ಇವನಿಗೆ ಏನೂ ಅನಿಸಿರಲಿಲ್ಲ, ಆದರೆ ನಾಲ್ಕುವರುಷದಿಂದ ಈ ಹಾಸಿಗೆ ಆ ಗೋಡೆ, ಸುತ್ತಲ ‘ಹೊಲಸು’ ವಸ್ತುಗಳು ದರಿದ್ರದ ಡೈಪರ್ ಎಲ್ಲವೂ ನಂಜುಂಡಿಯನ್ನು ನೋಡಿ ‘ಗೇಲಿ’ ಮಾಡುತ್ತಿವೆ.

ಬೇಡ, ಈ ಗೋಡೆಯೇ ಬೇಡ ತಳ್ಳಿಬಿಡುತ್ತೇನೆ, ಕೊಚ್ಚಿಬಿಡುತ್ತೇನೆ, ಕೆಡವಿಬಿಡುತ್ತೇನೆ, ಬೇಡ….ಜೋರಾಗಿ ಕೂಗಿಕೊಂಡ ನಂಜುಂಡಿ. ಗಾಬರಿಯಿಂದ ಕಣ್ಣುಬಿಟ್ಟರೆ ಅದೇ ಹಾಸಿಗೆ ಸುತ್ತಲೂ ಅದೇ ಸಾಮಾಗ್ರಿಗಳು ಜೊತೆಗೆ ಗಡಿಯಾರ! ಅದಂತೂ ತಪ್ಪದೇ ತನ್ನ ಕೆಲಸ ನಿರ್ವಹಿಸುತ್ತಿದೆ. ಈಗ ಸಂಜೆ ಐದರತ್ತ ಮುಖಮಾಡಿದೆ.

ಹೊರಗಿನಿಂದ ಬಾಗಿಲ ಬೀಗ ತೆಗೆದ ಶಬ್ಧ, ಮುಂಬಾಗಿಲಿನಿಂದ ನೇರವಾಗಿ ನಂಜುಂಡಿಯ ಕೋಣೆಯತ್ತಲೇ ಯಾರೋ ಬರುತ್ತಿರುವ ಹೆಜ್ಜೆಯ ಸಪ್ಪಳ. ಇನ್ಯಾರು ಬಂದಾರು ಇಷ್ಟುಹೊತ್ತಲ್ಲಿ? ಸೊಸೆ ಸವಿತಾಳೆ ಬಂದಿರಬೇಕೇನೋ ಎಂದು ಆತ ಅಂದುಕೊಳ್ಳುವಷ್ಟರಲ್ಲೇ ‘ಮಾವ… ಎಚ್ಚರವಾಗಿದ್ದಿರಾ, ‘ಆರೋಗ್ಯದರ್ಶಿನಿ’ ಪುಸ್ತಕ ಕೇಳಿದಿರಲ್ಲ ತಂದಿದ್ದೇನೆ ತಗೊಳಿ, ನೋಡಿ ಇಲ್ಲೇ ಕನ್ನಡಕ ಇದೆ, ಓದ್ತಾ ಇರಿ, ನಾನು ಹೋಗಿ ನಿಮಗೆ ತಿನ್ನೋದಕ್ಕೆ ಕುಡಿಯೋದಕ್ಕೆ ವ್ಯವಸ್ಥೆ ಮಾಡ್ತೀನಿ’ ಎಂದು ಅವಳು ಹೇಳುವ ಹೊತ್ತಿಗೆ ಅವಳ ಮೊಬೈಲ್ ಫೋನ್ ರಿಂಗಣಿಸಿತು. ‘ಮಾವ ಮಲಗಿದ್ದಾರೆ, ಆರಾಮವಾಗಿ ಬನ್ನಿ, ನೋ ಪ್ರಾಬ್ಲಂ’ ಮಗ ಸತೀಶ ಅತ್ತಲಿಂದ ಮಾತಾಡಿದ್ದು ಎಂದು ನಂಜುಂಡಿಗೆ ಗೊತ್ತಾಯಿತು. ಈ ದಿನದ ಮಟ್ಟಿಗೆ ಅಪ್ಪನ ಅಧ್ಯಾಯದ ಒಂದು ಪುಟ ಮುಗಿಯಿತು ಎಂದು ಮಗಸೊಸೆ ಇಬ್ಬರೂ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನಿದ್ದರೂ ರಾತ್ರಿಯ ಕತ್ತಲೆ ಓಡಿಸಿ ಬೆಳಕು ಕಾಣಿಸುವುದು, ಮತ್ತೊಂದು ಹೊಸಪುಟ ತೆರೆಯುವುದು ಎಂದು ನಂಜುಂಡಿ ಅಂದುಕೊಂಡ.

ಅಡಿಗೆಮನೆಯ ಕಾಯಕಕ್ಕೆ ಕೈ ಹಾಕುವ ಮುನ್ನ ಸವಿತಾ ನಂಜುಂಡಿಯ ರೂಮನ್ನೆಲ್ಲಾ ಸ್ವಚ್ಛಗೊಳಿಸಿದಳು. ಡೈಪರ್ ತೆಗೆದು ಕಸದಬುಟ್ಟಿಗೆ ಹಾಕಿ ಪಾಯಖಾನೆಯ ಕಮೋಡ್ ಜರುಗಿಸಿ ಸುತ್ತಲೂ ಸ್ವಚ್ಛಗೊಳಿಸಿದಳು. ಅವಳ ಮುಖದಲ್ಲಿ ಯಾವುದೇ ತರಹದ ಮುಜುಗರ ಬೇಸರ ಕಾಣಲಿಲ್ಲ. ಎಲ್ಲವನ್ನೂ ಮುಗಿಸಿ ಸವಿತಾ ಮೇಲಿನ ಕೋಣೆಗೆ ಹೋಗುತ್ತಿದ್ದಂತೆ ಎಲ್ಲವನ್ನೂ ಗಮನಿಸುತ್ತಿದ್ದ ನಂಜುಂಡಿಯ ಕೈಗಳು ಮತ್ತೆ ಅದುರಲು ಪ್ರಾರಂಭವಾದವು. ‘ಆರೋಗ್ಯದರ್ಶಿನಿ’ಯ ಪುಸ್ತಕ ಜಾರಿ ದೊಪ್ಪನೆ ಕೆಳಗೆ ಬಿತ್ತು! ಮತ್ತೆ ಬಿಳಿಗೋಡೆ ಗಹಗಹಿಸಿ ನಗಲು ಪ್ರಾರಂಭಿಸಿತು.
 —————————

ಏನೂಂದ್ರೆ ಸವಿತಾಗೆ ಮುಟ್ಟುನಿಂತಿದೆಯಂತೆ, ಬೆಳಗ್ಗೆ ಮೂತ್ರ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಾಳೆ” ಸೊಸೆಯ ಗರ್ಭ ನಿಂತ ವಿಚಾರವನ್ನು ಶೈಲಜಾ ನಂಜುಂಡಿಯೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದಳು. “ಏನು ಬೆಳಗ್ಗೆ ನಾನು ಬಚ್ಚಲು ಕೋಣೆಯಲ್ಲಿದ್ದಾಗ ಅಲ್ಲಿಟ್ಟಿದ್ದ ಬಾಟಲಿ ಕೊಡಿ ಅಂತ ತಗೊಂಡು ಹೋದಳಲ್ಲ ಅದು ಅವಳ ಮೂತ್ರವೇ, ಎಂತಾ ಹೆಂಗಸೇ ಅವಳು, ನನ್ನ ಕೈಯಲ್ಲಿ ಅವಳ ಮೂತ್ರದ ಬಾಟಲಿ ತೆಗೆಸಿದ್ದಾಳೆ ಹೊಲಸು ಬುದ್ದಿ, ಅಯ್ಯೋ ನನ್ನ ಮಾನ ಮರ್ಯಾದೆ ಎಲ್ಲಾ ಹಾಳಾಗಿ ಹೋಯಿತು” ಸೊಸೆ ಗರ್ಭಿಣಿ ಎಂದು ಸಂಭ್ರಮಿಸುವುದಕ್ಕಿಂತ ಅವಳು ಮೂತ್ರದ ಬಾಟಲಿ ತೆಗೆಸಿಬಿಟ್ಟಳು ಎಂಬ ಆರೋಪವೇ ನಂಜುಂಡಿಗೆ ವಿಪರೀತವಾಯಿತು.

“ಬಿಡ್ರಿ ಏನೋ ಆಸ್ಪತ್ರೆಗೆ ಹೋಗೋ ಗಡಿಬಿಡಿ ಗೊತ್ತಾಗಿಲ್ಲ ಅನ್ಸುತ್ತೆ” ಶೈಲಜಾ ಸೊಸೆಯ ಪರವಾಗಿ ವಕಾಲತ್ತು ವಹಿಸಿಕೊಂಡಳು. “ಮುಚ್ಚುಬಾಯಿ, ನಿಂಗೆ ಗೊತ್ತ, ಈಗ ಅವರ ಪರಿಸ್ಥಿತಿ ಹೇಗಿದೆ ಅಂತ, ನಿನ್ನ ಮಗ ಅನ್ನಿಸಿಕೊಂಡವನು ಕೆಲಸ ಇಲ್ಲದೇ ಬೀದಿ ಬೀದಿ ಅಲೀತಾ ಇದ್ದಾನೆ ಕೆಜಿ ಅಕ್ಕಿಗೆ ಹದಿನೆಂಟು ಇಪ್ಪತ್ತು ರೂಪಾಯಿ ಆಗಿದೆ ಇವರಿಬ್ಬರನ್ನ ಸಾಕೋದಲ್ಲದೆ ಮತ್ತೊಂದಕ್ಕೇ ಬೇರೆ ಆಮಂತ್ರಣವೋ, ಮೊದಲು ಆ ಹೊಲಸು ಹೋಗೋದಕ್ಕೆ ಏನು ಬೇಕೋ ಅದನ್ನ ಮಾಡು” ಸೊಸೆಯ ಗರ್ಭ ಬೇಡವೆಂದು ನಂಜುಂಡಿ ತೀರ್ಮಾನಿಸಿಯೇ ಬಿಟ್ಟ! “ಅಯ್ಯೋ ದೇವ್ರೇ ನನ್ನಿಂದ ಅವೆಲ್ಲ ಆಗೋಲ್ಲಪ್ಪ” ಗಂಡನ ಪ್ರತಿಕ್ರಿಯೆಗೆ ಶೈಲಜಾ ಮಾತಾಡಿಯೇ ಬಿಟ್ಟಳು!.”ಅತ್ತೆ, ಮಾವ, ನೀವೇನೂ ಚಿಂತೆ ಮಾಡಬೇಡಿ, ನಾನು ಡಾಕ್ಟರ್ ಜೊತೆ ಮಾತಾಡಿದ್ದೇನೆ, ಪರಿಸ್ಥಿತಿ ಹೇಳಿದ್ದೇನೆ, ಈಗಿನ್ನು ಒಂದುವಾರ ಆಗಿರೋದರಿಂದ ತೊಂದರೆ ಇಲ್ಲ, ಮಾತ್ರೆಯಲ್ಲೇ ಕರಗಿಸಬಹುದು ಅಂದಿದ್ದಾರೆ, ನಾನು ಈಗಾಗಲೇ ಮಾತ್ರೆ ನುಂಗಿದ್ದೇನೆ” ಸೊಸೆಯ ಶೀಘ್ರ ಪ್ರತಿಕ್ರಿಯೆಗೆ ಶೈಲಜಾ ಮರಗಟ್ಟಿಹೋದಳು. ದೇವರೇ ಗಂಡನನ್ನೇಕೆ ‘ಪಾಪಿ’ ಮಾಡಿದೆ ಎಂದು ಮೌನವಾಗಿ ರೋಧಿಸಿದಳು.

ಅಂದು ನಡೆದ ಘಟನೆಗಳೆಲ್ಲಾ ಮತ್ತೊಮ್ಮೆ ಪುನರಾವರ್ತನೆಗೊಂಡಂತೆ ಎಲ್ಲಾ ಚಿತ್ರಣಗಳು, ಸಂಭಾಷಣೆಗಳು ‘ಬಿಳಿಗೋಡೆ’ಯಲ್ಲಿ ಬಿತ್ತರವಾಗಿ ನಂಜುಂಡಿಯನ್ನು ನೋಡಿ ಗೇಲಿ ಮಾಡುತ್ತಿವೆ. ಆಗುತ್ತಿಲ್ಲ, ಆಗುತ್ತಲೇ ಇಲ್ಲ ಮತ್ತದೇ ಚೀರಾಟ, ಆರ್ತನಾದ, ಸಂಕಟ ನಂಜುಂಡಿಯ ಮನದ ಗೂಡಿನಿಂದ!
(ಮುಂದುವರಿಯುವುದು)

–ಗಾಯತ್ರಿ ಸುಂದರೇಶ್, ಮೈಸೂರು
(ತ್ರಿವೇಣಿ ಮನೋವೈಜ್ಞಾನಿಕ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕತೆ (2026))

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *