ಕಾವ್ಯದ ಗೂಡಲ್ಲಿ ನವ್ಯತೆ ಬೆರೆಯುತ
ಹೊಸತನದಲ್ಲಿ ಕವಿತೆಯ ಬರೆಯುತ
ಮನದ ಭಾವನೆಗಳನ್ನ ಹೊರ ಹಾಕುತ
ಕವಿತೆಯಲ್ಲಿ ಹೇಳೋಣ ಮನದ ಇಂಗಿತ
ಮನದ ಭಾವನೆಗಳು ಹೊರ ಹೊಮ್ಮಲಿ
ಅಕ್ಷರ ರೂಪವ ಪಡೆದು ಪ್ರಕಟವಾಗಲಿ
ಓದುಗರ ಮನೆ ಮನವನ್ನು ತಲುಪಲಿ
ಹೊಸ ಹೊಸ ಚಿಂತನೆಗೆ ದಾರಿಯಾಗಲಿ
ಬಾಳ ದಾರಿಯಲ್ಲಿ ಹೊಸ ಮಿಂಚ ಹರಿಸಲಿ
ಮನದ ಬೀದಿಯ ತುಂಬಾ ಬೆಳಕಾಗಿ ಚಿಮ್ಮಲಿ
ಹೊಸತೊಂದು ಭಾವನಾಲೋಕ ತೆರೆದುಕೊಳ್ಳಲಿ
ನವ ವಿಚಾರಧಾರೆ ಹೆಚ್ಚು ಹೆಚ್ಚು ಹರಿದು ಬರಲಿ
ಕೇವಲ ಪ್ರಕೃತಿಯ ಬಣ್ಣನೆ ಒಂದೇ ಸಾಲದು
ಹೆಣ್ಣಿನ ವರ್ಣನೆಗಷ್ಟೇ ಸೀಮಿತವಾಗಬಾರದು
ಜಗದ ವಾಸ್ತವದ ಅರಿವನ್ನು ತೊರೆಯಬಾರದು
ಕಣ್ಣಿಗೆ ಕಾಣದ ಸತ್ಯವನ್ನೂ ಮರೆಯಬಾರದು
ಆಗುಹೋಗುಗಳ ಮೇಲೆ ಬೆಳಕ ಚೆಲ್ಲಬೇಕು
ಕಷ್ಟ ಸುಖಕ್ಕೆ ಮನ ಮಿಡಿಯುವಂತಿರಬೇಕು
ಪ್ರತಿ ಓದುಗರ ಮನದ ಒಳಗಣ್ಣ ತೆರೆಸಬೇಕು
ವಾಸ್ತವದ ನೋಟವ ಕಣ್ಣೆದಿರು ಇಡಬೇಕು
–ನಾಗರಾಜ್ ಜಿ. ಎನ್. ಬಾಡ,ಕುಮಟ.

