ಪ್ರವಾಸ

ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ ..ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಿನ್ನಾವೂರು-ಭೂಕುಸಿತ-ಸಾಂಗ್ಲಾ

ನಮ್ಮ ಪ್ರಯಾಣ  ನಾರ್ಖಂಡ್ ನಿಂದ ಸುಮಾರು 160 ಕಿಮೀ ದೂರದಲ್ಲಿರುವ ‘ಸಾಂಗ್ಲಾ’ ದತ್ತ ಮುಂದುವರೆಯಿತು.  ಕಾಡುದಾರಿ, ಬಂಡೆಗಳನ್ನು ಕೊರೆದು ಮಾಡಿದ ರಸ್ತೆ, ದಾರಿಯಲ್ಲಿ ಹಲವೆಡೆ ಕಾಣಸಿಗುತಿದ್ದ  ಸಟ್ಲೆಜ್ ನದಿ,  ಯಾವುದೇ  ಕ್ಷಣದಲ್ಲಿ  ನಮ್ಮ ತಲೆ ಮೇಲೆ ಬೀಳಬಹುದು ಎಂಬಂತೆ ಹೆದರಿಸುತ್ತಿದ್ದ  ಬೃಹತ್ ಬಂಡೆಗಳು, ನಮ್ಮ ವಾಹನ ಅಕಸ್ಮಾತ್ ಆಗಿ ಕಣಿವೆಗೆ ಬಿದ್ದರೆ ಮೇಲೆತ್ತಲೂ ಸಾಧ್ಯವಿಲ್ಲದಷ್ಟು ಆಳವಾದ ಪ್ರಪಾತಗಳು, ಇವುಗಳ ನಡುವೆ ಅಲ್ಲಲ್ಲಿ ಹೆಸರಿಲ್ಲದ  ಸಣ್ಣ-ಪುಟ್ಟ ಜಲಪಾತಗಳು, ಸೇಬಿನ ತೋಟಗಳು……ಇವನ್ನೆಲ್ಲಾ ಗಮನಿಸುತ್ತಾ ನಿಧಾನವಾಗಿ ಸಾಗಿದೆವು.  ಈ ನಡುವೆ ನಾವಿದ್ದ ಟೆಂಪೋ ಟ್ರಾವೆಲರ್ ನಲ್ಲಿ ಏನೋ ಸಮಸ್ಯೆ ಇತ್ತೆಂದು ಅದರ ರಿಪೇರಿಗಾಗಿ ಸುಮಾರು ಒಂದು ಗಂಟೆ ವ್ಯಯವಾಯಿತು.  ಇದರಿಂದಾಗಿ ಜೊತೆಯಾಗಿ ಬಂದ ಇನ್ನೊಂದು ವಾಹನವೂ ಕಾಯುವಂತಾಯಿತು.

ಹಿಮಾಲಯದ ಪ್ರವಾಸದಲ್ಲಿ, ಕೆಲವೊಮ್ಮೆ   ಗಮ್ಯ ಸ್ಥಾನಕ್ಕಿಂತ ಪ್ರಯಾಣದ ದಾರಿಯೇ ಹೆಚ್ಚು ಆಕರ್ಷಕವಾಗಿರುತ್ತದೆ ಹಾಗೂ ಪ್ರಯಾಣ ಬಲು ರೋಚಕವಾಗಿರುತ್ತದೆ. ಇಲ್ಲಿ ಅದ್ಭುತವಾದ ರಸ್ತೆಗಳನ್ನು ನಿರ್ಮಿಸುವ  ಬಾರ್‍ಡರ್ ರೋಡ್ ಆರ್ಗನೈಸೇಶನ್ ನವರ  ಇಂಜಿನಿಯರಿಂಗ್  ಸಾಮರ್ಥ್ಯಕ್ಕೆ ಹೃತ್ಪೂರ್ವಕ ನಮನಗಳು. ಹಾಗೆಯೇ ಇಂತಹ ರಸ್ತೆಗಳಲ್ಲಿ ಸುರಕ್ಷಿತವಾಗಿ ಪ್ರವಾಸಿಗರನ್ನು ಕರೆದೊಯ್ಯುವ ಚಾಲಕರ ಕೌಶಲ್ಯಕ್ಕೆ  ಹ್ಯಾಟ್ಸ್ ಆಫ್ ಸೆಲ್ಯೂಟ್ !   

ದಾರಿ ಮಧ್ಯೆ ಡಾಬಾ ಒಂದರಲ್ಲಿ ಊಟವಾಯಿತು. ಸಣ್ಣಗೆ ಮಳೆ ಹನಿಯುತಿತ್ತು. ಇದ್ದಕ್ಕಿದ್ದಂತೆ ನಮ್ಮ ಡ್ರೈವರ್  ವಾಹನ ನಿಲ್ಲಿಸಿ ‘ಓ  ಕುಚ್ ಹೋ ಗಯಾ’ ಎನ್ನುತ್ತಾ ಕೆಳಗಿಳಿದರು. ನಾವೂ ಕೆಳಗಿಳಿದು ಅತ್ತಿತ್ತ ನೋಡಿದೆವು. ಅದು ‘ಕಿನ್ನಾವೂರು’ ಎಂಬಲ್ಲಿಗೆ ಸಮೀಪದ ಜಾಗ.  ರಸ್ತೆಯ ಮಟ್ಟದಿಂದ ಕೆಳಗೆ  ಚೆಂದದ ಮಠವೊಂದಿತ್ತು. ಸ್ವಲ್ಪ ದೂರದಲ್ಲಿ ಜಲಪಾತವೊಂದಿತ್ತು. ಫೊಟೋ ತೆಗೆಯಲು ಅನುಕೂಲ ಕಲ್ಪಿಸಲು ಗಾಡಿ ನಿಲ್ಲಿಸಿರಬಹುದೆಂದು ಅಂದುಕೊಂಡು ಕೆಳಗೆ ಇಳಿದಾಗ,  ಬೇರೆಯೇ ವಿಷಯವಿದೆ ಎಂದು ಗೊತ್ತಾಯಿತು.  ಒಂದು ಕಿಮೀ ದೂರದಲ್ಲಿ  ಬೆಟ್ಟದಿಂದ  ಕಲ್ಲು-ಮಣ್ಣು ಕುಸಿದು ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತವಾಗಿತ್ತು. ಕಿರಿದಾದ ಆ ರಸ್ತೆಯಲ್ಲಿ , ಎರಡೂ ಕಡೆಯಿಂದ ವಾಹನಗಳು ಸಾಲುಗಟ್ಟಿದ್ದುವು. ಆಗಲೇ ಸಂಜೆ ನಾಲ್ಕು ಗಂಟೆಯಾಗಿತ್ತು. 

ವಿಷಯ ತಿಳಿದುಕೊಂಡು ಬಂದ ಡ್ರೈವರ್ ರೋಹಿತ್ ಹೇಳಿದ ಪ್ರಕಾರ, ”ಬೆಳಗ್ಗೆಯೇ ಭೂಕುಸಿತ ಆಗಿತ್ತು. ರಸ್ತೆ ತೆರವು ಮಾಡಲು  ಪ್ರಯತ್ನಿಸುತ್ತಿದ್ದಾರೆ.  ಇನ್ನು ಸಂಜೆಯೊಳಗೆ ‘ಸಾಂಗ್ಲಾ’ ತಲಪುವುದು ಅಸಾಧ್ಯ. ಬೇರೆ ರಸ್ತೆಯೊಂದು ಇದೆಯಾದರೂ, ಅಲ್ಲಿ ಲಾರಿಯೊಂದು ಸಿಕ್ಕಿಹಾಕೊಂಡು  ಆ ರಸ್ತೆಯೂ ಬ್ಲಾಕ್ ಆಗಿದೆ, ಬಹುಶ: ರಾತ್ರಿ ಇಲ್ಲಿಯೇ ಎಲ್ಲಾದರೂ ವಸತಿ ವ್ಯವಸ್ಥೆ ಮಾಡಬೇಕಾಗಬಹುದು …ನಿಮ್ಮ ಲೀಡರ್  ಪರ್ಯಾಯ ವ್ಯವಸ್ಥೆ ಮಾಡಲು ಹೇಳಿ” ಎಂದಾಗ  ದಿಗಿಲಾಯಿತು.  

‘ಟ್ರಾವೆಲ್ ಫಾರ್ ಯು’  ಸಂಸ್ಥೆಯ ಶ್ರೀ ಬಾಲಕೃಷ್ಣ ಮತ್ತಿ ಶ್ರೀ ಗಣೇಶ ಗಟ್ಟಿ ಅದಾಗಲೇ  ಯಾರೋ ಪೋಲೀಸರು, ಚೆಕ್ ಪೋಸ್ಟ್ ಇತ್ಯಾದಿ ಸಂಪರ್ಕಿಸಿ ಮಾಹಿತಿ  ಪಡೆಯುತ್ತಾ ಅಕಸ್ಮಾತ್ ವಾಹನ ಮುಂದೆ ಹೋಗದಿದ್ದರೆ ಏನು ಮಾಡುವುದು ಎಂದು ಪರ್ಯಾಯ  ಯೋಜನೆಗಳನ್ನು ಪರಿಶೀಲಿಸುತ್ತಿದ್ದರು.  ನಮಗೆ  ಜವಾಬ್ದಾರಿ ಇಲ್ಲದೆ ಇದ್ದುದರಿಂದ ಹಾಗೂ ಪರಿಸರ ಬಹಳ ಸೊಗಸಾಗಿದ್ದುದರಿಂದ, ಚಿಂತಿಸಿ ಫಲವಿಲ್ಲ ಎಂದು ಗೊತ್ತಿದ್ದುದರಿಂದ ,   ಈ ಸ್ಥಳದಲ್ಲಿಯೂ   ಆರಾಮವಾಗಿ ಫೊಟೋ ಕ್ಲಿಕ್ಕಿಸುತ್ತಾ, ವಾಯುವಿಹಾರ ಮಾಡುತ್ತಾ, ಪರಸ್ಪರ ಪರಿಚಯಿಸಿಕೊಳ್ಳುತ್ತಾ , ನಾವು ತಂದಿದ್ದ ಕುರುಕಲು ತಿನಿಸುಗಳನ್ನು ಹಂಚಿ ತಿನ್ನುತ್ತಾ ಕಾಲಕ್ಷೇಪ ಮಾಡಿದೆವು. 

ಅಂತೂ,  ಸುಮಾರು ಎರಡು ಗಂಟೆಗಳ ಕಾಯುವಿಕೆಯ ನಂತರ ರಸ್ತೆ ತೆರವಾಗಿ ವಾಹನ ಸಂಚಾರ ಸುಗಮವಾಯಿತು.   ದಾರಿ ಮಧ್ಯೆ ,  ‘ತಿರಂಡಾ’ ಎಂಬಲ್ಲಿ ಇದ್ದ   ಸುಂದರವಾದ  ಗುಡಿಗೆ  ಭೇಟಿ ಕೊಟ್ಟುದಾಯಿತು.  ಮುಂದುವರೆದು,  ಮುಖ್ಯರಸ್ತೆ ದಾಟಿ, ಕಚ್ಚಾರಸ್ತೆಗೆ ಇಳಿದು, ಸೇಬಿನ ತೋಟದ ಮಧ್ಯೆ ಸಾಗಿ, ವಾಹನದಿಂದಲೇ ಕೈಚಾಚಿ ಕೈಗೆ ಸಿಕ್ಕಿದ  ಒಂದೆರೆಡು ಸೇಬು ಹಣ್ಣುಗಳನ್ನು  ಕಿತ್ತುಕೊಂಡು,  ರಾತ್ರಿ 1030 ಕ್ಕೆ ‘ಸಾಂಗ್ಲಾ’ದಲ್ಲಿರುವ ಹೋಟೆಲ್ ಗ್ರೀನ್ ಪ್ಲಾಜ಼ಾ ತಲಪಿದೆವು.  ಅನಂತರ ಊಟ ಮಾಡಿ ವಿಶ್ರಾಂತಿ.

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *