ಆಟೋಗಳ ಹಿಂಭಾಗದಲ್ಲಿರುವ ಬರಹಗಳನ್ನು ಗಮನಿಸುವುದು ನನ್ನ ಹಳೆಯ ಅಭ್ಯಾಸ. “ತಾಯಿಯೇ ದೇವರು”, “ಪ್ರೀತಿ ನೀನಿರದೇ ಹೇಗಿರಲಿ”, “ಸ್ವೀಟಿ ನೀ ಬಲು ಘಾಟಿ” ಇಂಥ ಸೈದ್ಧಾಂತಿಕ ಹಾಗೂ ಭಾವನಾತ್ಮಕ ಸಾಲುಗಳ ಮಧ್ಯೆ ಜೊತೆ ಜೊತೆಯಲ್ಲೇ ಕಣ್ಣಿಗೆ ಬೀಳುವ ಅತ್ಯಂತ ಪ್ರಮುಖ ಹಾಗೂ ತತ್ವಜ್ಞಾನದಂತಿರುವ ಘೋಷಣಾ ವಾಕ್ಯ – “ನಡುವೆ ಅಂತರವಿರಲಿ”. “ನನ್ನ ಹಿಂದೆಯೇ ಅಂಟಿದ ಹಾಗೆ ನಿಲ್ಲಬೇಡ, ಕೀಪ್ ಡಿಸ್ಟನ್ಸ್” ಎಂದು ಆಟೋ ತನ್ನ ಹಿಂದಿರುವ ವಾಹನಕ್ಕೆ ಎಚ್ಚರಿಕೆ ನೀಡುತ್ತಿದ್ದರೂ, ಮನುಷ್ಯರ ನಡುವಣ ಬಾಂಧವ್ಯ ಮತ್ತು ಸಂಬಂಧಗಳಿಗೂ ಅದು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಅಲ್ಲವೇ?
ಮೊದಲಿಗೆ ಈ ಅಂತರ ಎಂದರೇನು? ಎರಡು ಭೌತಿಕ ಚರ-ಅಚರ ವಸ್ತುಗಳ ಮಧ್ಯದಲ್ಲಿನ ದೂರ. ಅಚರ ವಸ್ತುಗಳ ಮಧ್ಯೆ ಇದು ಬದಲಾಗದ ಸ್ಥಿರ ದೂರ (constant). ಆದರೆ ಚರ ವಸ್ತುಗಳ ನಡುವಣ ದೂರ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಕರೋನ ಬಂದ ಮೇಲೆ ‘ಸಾಮಾಜಿಕ ಅಂತರ’ದ ಪರಿಕಲ್ಪನೆ ಬಂದು, ಆರೋಗ್ಯದ ಹಿತದೃಷ್ಟಿಯಿಂದ ಮನುಷ್ಯರ ನಡುವಿನ ಭೌತಿಕ ಅಂತರ ಹೆಚ್ಚಾಗುತ್ತ ನಡೆಯಿತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ವೈಜ್ಞಾನಿಕ ಆಧುನಿಕ ವಿಧಾನಗಳು ಜಗತ್ತನ್ನು ಜಾಗತಿಕ ಹಳ್ಳಿಯನ್ನಾಗಿಸಿ ಅಂಗೈಯಲ್ಲಿ ಪ್ರಪಂಚ ತೋರಿಸುತ್ತಿದ್ದರೆ, ಇನ್ನೊಂದೆಡೆ ಬಾಂಧವ್ಯ-ಸ್ನೇಹಗಳ ಅಂಟು ಮಾಸಿ, ನಂಟು ಕಡಿದು ಮನುಷ್ಯ ಏಕಾಂಗಿಯಾಗುವಂತೆ ಮಾಡುತ್ತಿವೆ.
ಆಟೋಗಳ ಹಿಂದೆ ಕೆಲವೊಮ್ಮೆ ಸಖತ್ ತಮಾಷೆಯಾದ, ಆದರೆ ಬದುಕಿನ ಕಟು ಸತ್ಯವನ್ನು ಹೇಳುವ ಸಾಲುಗಳು ಸಿಗುತ್ತವೆ. ಉದಾಹರಣೆಗೆ: “ಹಿಂದೆ ಬಂದರೆ ಪ್ರೀತಿ, ಡಿಕ್ಕಿ ಹೊಡೆದರೆ ಪೋಲಿಸ್ ಕೇಸು!” ಅಥವಾ “ನನ್ನ ಹತ್ತಿರ ಬಂದರೆ ಕಷ್ಟ, ದೂರ ನಿಂತರೆ ಇಷ್ಟ!”
ರಸ್ತೆಯಲ್ಲಿ ಸಂಚರಿಸುವಾಗ ನಾವು ಮುಂಭಾಗದ ವಾಹನಕ್ಕೆ ತೀರ ಹತ್ತಿರ ಹೋದರೆ ಅಪಘಾತ ಖಚಿತ. ಹಾಗೆಯೇ, ಜೀವನದಲ್ಲೂ ಅಷ್ಟೇ! ಯಾರೊಂದಿಗಾದರೂ ತೀರ ಹತ್ತಿರವಾಗಿ, ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದರೆ ಗಲಾಟೆ, ಪೊಲೀಸ್ ಕೇಸುಗಳ ಹಂತಕ್ಕೆ ತಲುಪಿದರೂ ಆಶ್ಚರ್ಯವಿಲ್ಲ. ಸಂಬಂಧಗಳಲ್ಲಿ ಗೌರವ ಉಳಿಯಬೇಕೆಂದರೆ ನಿರ್ದಿಷ್ಟ ಅಂತರವಿರಲೇಬೇಕು.
ಇದೇ ಆಟೋಗಳ ಹಿಂದೆ ಮತ್ತೊಂದು ರಸವತ್ತಾದ ಸಾಲು ಕಾಣಿಸುತ್ತದೆ: “ಸೈಡ್ ಕೊಟ್ರೆ ಸೇಫ್, ಇಲ್ಲದಿದ್ರೆ ನರಕದ ಗೇಟ್!”
ಬದುಕಿನಲ್ಲೂ ಅಷ್ಟೇ, ಎಲ್ಲವನ್ನೂ ನಾನೇ ಗೆಲ್ಲಬೇಕು, ಎಲ್ಲರ ಮೇಲೆಯೂ ನಾನೇ ಸವಾರಿ ಮಾಡಬೇಕು ಎಂದು ಹೊರಟರೆ ನೆಮ್ಮದಿ ಸಿಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಕೆಲವೊಮ್ಮೆ ‘ಸೈಡ್ ಕೊಟ್ಟು’ (ಬಿಟ್ಟುಕೊಟ್ಟು) ಹೋಗುವುದನ್ನು ಕಲಿಯಬೇಕು. ಸ್ನೇಹಸಂಬಂಧ, ರಕ್ತಸಂಬಂಧ, ವೃತ್ತಿ ಬಾಂಧವ್ಯ, ನೆರೆಹೊರೆಯವರ ವಿಶ್ವಾಸ ಹಾಗೂ ಕುಟುಂಬದ ಸಾಮರಸ್ಯ – ಎಲ್ಲದಕ್ಕೂ ಮುಕ್ತಮನಸ್ಸಿನ ನಡವಳಿಕೆ ಬೇಕೇಬೇಕು. ನೀರಿನಂತೆ ಹಾಕಿದ ಪಾತ್ರೆಯ ಆಕಾರ ಪಡೆಯುವ ಮನಸ್ಸಿರಬೇಕು. ಸಹಕಾರ, ಸಾಮರಸ್ಯ ಮತ್ತು ಒಪ್ಪಿಕೊಳ್ಳುವ ಗುಣ ಇರಬೇಕು, ನಿಜ.
ಆದರೆ ಈಗೀಗ ಈ ಸ್ವಾರ್ಥ ಸಮಾಜದಲ್ಲಿ ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವವರನ್ನು ಭಾವನಾತ್ಮಕವಾಗಿ ‘ಉಪಯೋಗಿಸಿಕೊಳ್ಳಲಾಗುತ್ತಿದೆ’. ಕೆಲವು ಆಟೋಗಳ ಮೇಲೆ ಬರೆದಿರುವ “ಬ್ಯೂಟಿ ಐತೆ, ಡ್ಯೂಟಿ ಇಲ್ಲ!” ಅಥವಾ “ನೋಡಿ ನಲಿ, ಹತ್ತಿ ಉರಿಬೇಡ!” ಎಂಬ ತಮಾಷೆಯ ಸಾಲುಗಳು ಇಲ್ಲಿ ನೆನಪಾಗುತ್ತವೆ. ಹೊರನೋಟಕ್ಕೆ ತುಂಬಾ ಒಳ್ಳೆಯವರಂತೆ, ಸುಂದರವಾಗಿ ಕಾಣುವ ಕೆಲವು ಸಂಬಂಧಗಳು ಒಳಹೊಕ್ಕು ನೋಡಿದಾಗ ಯಾವುದೇ ಕರ್ತವ್ಯ ಅಥವಾ ಪ್ರಾಮಾಣಿಕತೆ ಇಲ್ಲದೆ ಖಾಲಿಯಾಗಿರುತ್ತವೆ. ಇಲ್ಲಿ ಒಳ್ಳೆಯತನ ಅನ್ನುವುದು ದೌರ್ಬಲ್ಯದ ಸಂಕೇತವಾಗಿಬಿಟ್ಟಿದೆ!
ನಮ್ಮ ಒಳ್ಳೆಯತನವನ್ನು ನಾವು ಎಂದಿಗೂ ಬಿಡಬಾರದು. ಆದರೆ ಅದು ಇತರರಿಗೆ ನಮ್ಮನ್ನು ಮೆಟ್ಟಿ ನಿಲ್ಲುವ ದೌರ್ಬಲ್ಯವಾಗದಂತೆ ಎಚ್ಚರ ವಹಿಸಬೇಕು. ಸರ್ಪಕ್ಕೆ ಸನ್ಯಾಸಿ ಕೊಟ್ಟ ಉಪದೇಶದ ಕಥೆ (ಬುಸುಗುಟ್ಟು, ಆದರೆ ಕಚ್ಚಬೇಡ) ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆ ಮಾಡಲು ಒಂದು ರೀತಿಯ ಆರೋಗ್ಯಕರವಾದ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ. ಬದುಕು ಎಂದಿಗೂ ಸಂಪೂರ್ಣ ತೆರೆದ ಪುಸ್ತಕವಾಗಬಾರದು. ಹಾಗಾದಾಗ ಭಾವನೆಗಳ ಬೆತ್ತಲೆತನ ಅಸಹ್ಯ ಉಂಟುಮಾಡುತ್ತದೆ. ಅದಕ್ಕೆ ಸಂಬಂಧಗಳ ನಡುವಿನ ಅಂತರವೆಂಬ ಉಡುಪನ್ನು ತೊಡಿಸಬೇಕು. ಆಗ ಬಾಳೂ ರೋಚಕ; ಜೊತೆಗೆ ಬೇರೆಯವರ ಕೈಯಲ್ಲಿನ ಪಗಡೆಯಾಟದ ಕಾಯಿಗಳಾಗುವುದೂ ತಪ್ಪುತ್ತದೆ. ನಮ್ಮ ಬಲಹೀನತೆಗಳ ಮೇಲೆ ಬೇರೆಯವರು ಆಧಿಪತ್ಯ ಸಾಧಿಸುವುದಕ್ಕೂ ಆಸ್ಪದವಿರುವುದಿಲ್ಲ.
ಮತ್ತಷ್ಟು ಆಟೋಗಳ ಹಿಂಭಾಗದಲ್ಲಿ “ಅಮ್ಮನ ಪ್ರೀತಿ ನಂಬು, ಹುಡುಗಿ ನಂಬಿಕೆ ಬಿಡು… ಲೈಫ್ ಸೇಫ್!” ಅಥವಾ “ಓವರ್ಟೇಕ್ ಮಾಡೋ ಮುಂಚೆ ಯೋಚಿಸು, ನನಗೂ ನಾಲ್ಕು ವೀಲ್ ಇದೆ!” ಎಂಬ ತಮಾಷೆಯ ಸಾಲುಗಳಿರುತ್ತವೆ. ಇವುಗಳನ್ನು ಕೇವಲ ಹಾಸ್ಯವಾಗಿ ನೋಡದೆ ಯೋಚಿಸಿದರೆ, ಪ್ರತಿಯೊಬ್ಬರಿಗೂ ಅವರದ್ದೇ ಆದ ಸಾಮರ್ಥ್ಯ ಮತ್ತು ಸೀಮಿತತೆಗಳಿರುತ್ತವೆ ಎಂಬುದು ಅರ್ಥವಾಗುತ್ತದೆ. ನಮಗಿಂತ ಇತರರು ಕಮ್ಮಿ ಎಂದು ಭಾವಿಸಿ ಅವರ ಗಡಿಗಳನ್ನು ದಾಟಲು (ಓವರ್ಟೇಕ್ ಮಾಡಲು) ಯತ್ನಿಸಿದಾಗ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.
ಸ್ನೇಹಿತರಾಗಲಿ, ಬಂಧುಗಳಾಗಲಿ, ಪತಿ-ಸತಿ-ಮಕ್ಕಳಾಗಲಿ… ಪ್ರತಿಯೊಂದು ಸಂಬಂಧದ ಮಧ್ಯೆಯೂ ಒಂದು ಸೂಕ್ಷ್ಮ ‘ಲಕ್ಷ್ಮಣ ರೇಖೆ’ ಇರುತ್ತದೆ. ಅದನ್ನು ದಾಟಬಾರದು. ಕಟ್ಟಿರುವ ಬಂಧನದ ರೇಖೆಯ ಗಂಟನ್ನು ಅತಿಯಾದ ಹಕ್ಕಿನಿಂದ ಬಿಚ್ಚಬಾರದು. ಇದು ಪಾಲಿಸಬೇಕಾದ ಅಂತರದ ರೀತಿ. “Too much familiarity breeds contempt” (ಅತಿಯಾದ ನಿಕಟತೆ ತಿರಸ್ಕಾರಕ್ಕೆ ದಾರಿ) ಎಂಬ ಇಂಗ್ಲಿಷ್ ನಾಣ್ಣುಡಿ ಹೇಳುವುದೂ ಇದನ್ನೇ. “ಸಂಬಂಧಗಳ ಮಧ್ಯೆ ಸೂಕ್ತ ಅಂತರ ಕಾಯ್ದುಕೊಳ್ಳುವವನಿಗೆ ದುಃಖವಿಲ್ಲ”.
ಆಟೋಗಳ ಮೇಲಿನ “ವೇಗವಾಗಿ ಹೋದರೆ ಸ್ಮಶಾನ, ನಿಧಾನವಾಗಿ ಹೋದರೆ ಮನೆ!” ಎಂಬ ಮಾತು ಬದುಕಿನ ಧಾವಂತಕ್ಕೂ ಅನ್ವಯಿಸುತ್ತದೆ. ಸಂಬಂಧಗಳನ್ನು ಗಡಿಬಿಡಿಯಲ್ಲಿ ಬೆಳೆಸಿ, ಅತಿಯಾದ ನಿರೀಕ್ಷೆಗಳ ಭಾರ ಹೇರಿ ಹಾಳುಮಾಡಿಕೊಳ್ಳುವುದಕ್ಕಿಂತ, ನಿಧಾನವಾಗಿ, ಅಂತರ ಕಾಪಾಡಿಕೊಳ್ಳುತ್ತಾ ಗೌರವದಿಂದ ಮುನ್ನಡೆಸುವುದು ಜಾಣತನ.
ಎಲ್ಲರಲ್ಲೂ ಬೆರೆತು ಸ್ನೇಹ-ಪ್ರೀತಿ ತೋರಿಸುತ್ತಿರಬೇಕು. ಆದರೆ ಆಮೆ ಅಪಾಯ ಕಂಡಾಗ ಚಿಪ್ಪೊಳಗೆ ತಲೆ ತೂರಿಸಿಕೊಳ್ಳುವಂತೆ, ಬುದ್ಧಿ ಸಮತೆಯ ಜಾಗರೂಕತೆ ನಮ್ಮಲ್ಲಿರಬೇಕು. ಅದೇ ಅಂತರ ಕಾಪಾಡಿಕೊಳ್ಳುವ ಕಲೆ (The art of maintaining distance). ಆ ಕಲೆಯನ್ನು ಅರಿತ ಮನುಷ್ಯ ಯಾವುದನ್ನೂ ತನಗೆ ಅಂಟಿಸಿಕೊಳ್ಳದೆ, ಹಾಗೆಂದು ಯಾವುದನ್ನೂ ಸಂಪೂರ್ಣವಾಗಿ ಬಿಟ್ಟುಕೊಡದೆ, ಜಾಣ್ಮೆಯ, ತಮಾಷೆಯ ಮತ್ತು ಪ್ರಶಾಂತವಾದ ಜೀವನ ನಡೆಸಬಲ್ಲ.
ಏನಂತೀರಿ? ಹೂಂ ಅಂತೀರಾ ಊಹೂಂ ಅಂತೀರಾ?

–ಸುಜಾತಾ ರವೀಶ್

