ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 20

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಗಳ ಮಾತುಗಳು, ಒದಗಿಸಿದ ಸಾಕ್ಷ್ಯಾಧಾರಗಳಿಂದ ಭಾರ್ಗವಿಗೆ ಒಮ್ಮೆಗೇ ನೂರಾರು ಭರ್ಜಿಗಳು ತಿವಿದಂಥ ಅನುಭವವಾಯಿತು. ಓ..ಅದಕ್ಕೇ ಇರಬೇಕು ನಾನು ಊರಿಗೆ ಬರುವುದನ್ನು ಉದ್ದೇಶಪೂರ್ವಕವಾಗಿ ಆತ ತಡೆಯುತ್ತಿರುವುದು. ನಮ್ಮ ತವರಿನವರಿಗೆ ಯಾರಿಗೂ ವಿಷಯ ಗೊತ್ತಿಲ್ಲವೇ..ಎಲ್ಲವೂ ಅಯೋಮಯವಾಗಿದೆಯಲ್ಲ. ಯಾವುದಕ್ಕೂ ಯಾರನ್ನು ನಂಬುವುದು ಬಿಡುವುದು. ಎದೆಯುದ್ದ ಬೆಳೆದ ಮಕ್ಕಳಿರುವಾಗ ಇಂಥಹ ನಾಚಿಕೆಗೇಡಿನ ಕೆಲಸ. ಛೀ..ಹಿರಿಯರು ಇಂಥಹ ಕೆಲಸಕ್ಕೆ, ಇಂಥಹ ಸಂಬಂಧಕ್ಕೆ ಸಮ್ಮತಿ ನೀಡಿರುವರೇ? ಇದರಲ್ಲಿ ಏನೋ ಹುನ್ನಾರವಿದೆ. ಅತ್ತೆಯವರನ್ನು ಕೇಳಲೇ? ಅತ್ತಿಗೆಯ ಮಗಳೇ ಅವಳು ಮಂಗಳಾ, ಗಂಡ ಸತ್ತು ಒಂದೆರಡು ವರ್ಷ ಸುಮ್ಮನಿದ್ದು ಮತ್ತೊಂದು ಹೊಸ ಸಂಬಂಧಕ್ಕೆ ಜಿಗಿತವೇ. ಅದೇ ಮನೆಯಲ್ಲಿ ಮದುವೆಯಾಗಬೇಕಿರುವ ಹೆಣ್ಣುಮಗಳಿರುವಾಗ. ಭಾರ್ಗವಿಗೆ ತಲೆ ಸಿಡಿದು ಸಾವಿರ ಹೋಳಾಗುವಷ್ಟು ಶೂಲೆ. ಒಂದಿನಿತೂ ಸುಳಿವು ಗೊತ್ತಾಗದಂತೆ ನಡೆದಿದೆ. “ಅಯ್ಯೋ” ಎಂದು ಎರಡೂ ಕೈಯಲ್ಲಿ ಭದ್ರವಾಗಿ ತಲೆ ಹಿಡಿದುಕೊಂಡು “ಮಗಳೇ ಅವರೇನು ಹೇಳಿದರೋ..ನೀನೇನು ತಿಳಿದುಕೊಂಡೆಯೋ. ಅವರಿಬ್ಬರೂ ಚಿಕ್ಕಂದಿನಿಂದಲೂ ಜೊತೆಯಲ್ಲಿ ಸಲುಗೆಯಿಂದ ಬೆಳೆದವರು. ಏಕೋ ಏನೋ ಹಾಗಾಗಲು ಸಾಧ್ಯವಿಲ್ಲ. ನಾನು ವಿಚಾರಿಸುತ್ತೇನೆ. ನೀನು ಆತುರಪಟ್ಟು ಆ ಮನೆಗೆ ಹೋಗದೇ ಇದ್ದದ್ದೇ ಒಳ್ಳೆಯದಾಯಿತು. ನಿನ್ನ ಕೆಲಸ ನೋಡಿಕೋ” ಎಂದು ತನ್ನ ರೂಮಿಗೆ ಹೋಗಿಬಿಟ್ಟಳು ಭಾರ್ಗವಿ.

ತನ್ನ ಮದುವೆಯಾದಾಗಿನಿಂದ ಇಲ್ಲಿನವರೆಗೆ ನಡೆದ ಪ್ರಸಂಗಗಳೆಲ್ಲ ಆಗಾಗ್ಗೆ ಕಣ್ಮುಂದೆ ಬಂದಂತೆ ಈಗಲೂ ಅನುಭವವಾಯಿತು. ಈ ಪ್ರಸಂಗದಿಂದ ನಮ್ಮ ಮಕ್ಕಳಿಗೆ ಪರಿಣಾಮ ಏನಾಗಿರಬೇಡ. ನಾನು ಹಲವಾರು ಬಾರಿ ಸಿದ್ಧಾರ್ಥನ ಬಗ್ಗೆ ಕೇವಲವಾಗಿ, ಉದಾಸೀನವಾಗಿ ಮಾತನಾಡಿದಾಗಲೆಲ್ಲ ನನ್ನ ಮಕ್ಕಳು ಪಪ್ಪನ ಪರವಾಗಿ ನಿಲ್ಲುತ್ತಿದ್ದರು. ಈಗ ! ಛೇ ಅವರುಗಳು ಹೇಗಾದರೂ ಆಡಲಿ, ಈ ಪುಣ್ಯಾತ್ಮನಿಗೇನಾಗಿತ್ತು. ಬುದ್ಧಿ ಕತ್ತೆ ಕಾಯುತ್ತಿತ್ತೇ. ಹೇಗೋ ಸಾವರಿಸಿಕೊಂಡು ಇದುವರೆಗೆ ಬಂದಿದ್ದಾಯಿತು. ಇನ್ನು ಮಕ್ಕಳ ಕರ್ತವ್ಯ ನಿಭಾಯಿಸಿ ಜೊತೆಗಾರನೊಡನೆ ಮಿಕ್ಕ ಶೇಷಾಯುಷ್ಯವನ್ನು ಕಳೆಯಬೇಕೆಂದಿದ್ದಾಗ ಕೇಳಲಾಗದ, ಒಪ್ಪಿಕೊಳ್ಳಲಾಗದ ಸುದ್ಧಿ. ಅಣ್ಣ ಬಾಲುವಿಗೆ ಫೋನ್ ಮಾಡಿ ವಿಚಾರಿಸಲೇ? ಏನೆಂದು ಕೇಳುವುದು. (ಕಜ್ಜಿ ಇದ್ದವರಿಗೆ ಲಜ್ಜೆಯಿಲ್ಲ ಎಂದಾಗಿದೆಯಲ್ಲ.) ಮೂರೂ ಬಿಟ್ಟವರಿಗೆ ಏನು ಹೇಳುವುದು. ಹೊರಗಡೆ ಸದ್ದು ಬಾರದಂತೆ ಬಾಯಿಗೆ ಬಟ್ಟೆ ಅಡ್ಡವಿಟ್ಟುಕೊಂಡು ಬಿಕ್ಕಳಿಸಿದಳು ಭಾರ್ಗವಿ.

ಮತ್ತೊಂದು ರೂಮಿನಲ್ಲಿ ಲ್ಯಾಪ್‌ಟಾಪ್ ಮುಂದಿಟ್ಟುಕೊಂಡು ಕುಳಿತಿದ್ದರೂ ಕೆಲಸ ಮಾಡಲಾಗದೇ ಅದನ್ನು ಮುಚ್ಚಿಟ್ಟು ಹಾಗೇ ಮಂಚದ ಪಟ್ಟಿಗೆ ಒರಗಿ ಕುಳಿತಳು ಮಾಲಿನಿ. ವಿಷಯವೆಲ್ಲ ತಾಯಿಗೆ ರವಾನಿಸಿದ ಮೇಲೆ ಅವರ ಪರಿಸ್ಥಿತಿ, ಒಳಗೆ ದಾವಾಗ್ನಿ ಉರಿಯುತ್ತಿದ್ದರೂ ಮೇಲೆ ತಾನು ನಂಬಿಲ್ಲ, ನೀನೂ ತಪ್ಪು ತಿಳಿದಕೊಂಡಿದ್ದೀ ಎಂಬುದಾಗಿ ಅವರು ಕೊಟ್ಟ ವಿವರಣೆ ಎಲ್ಲವೂ ಅಸ್ಪಷ್ಟವಾಗಿ ಏನು ಮಾಡಬೇಕೆಂಬುದೇ ತೋಚದಂತಾಗಿ ಮನಸ್ಸು ವಿಚಲಿತಗೊಂಡಿತ್ತು. ಯಾವ ದಿಕ್ಕಿನಲ್ಲಿ ಯೋಚಿಸಿದರೂ ಪರಿಹಾರ ಕಾಣಲಿಲ್ಲ. ಹೆಣ್ಣು ಏನನ್ನು ಬೇಕಾದರೂ ಹಂಚಿಕೊಳ್ಳುತ್ತಾಳೆ ಆದರೆ ಕಟ್ಟಿಕೊಂಡ ಗಂಡನನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅಮ್ಮನ ಮನಸ್ಸು ಇದರಿಂದ ಎಷ್ಟು ಘಾಸಿಗೊಂಡಿರಬಹುದು. ನಾವು ಕಂಡಂತೆ ಅವರ ಬೇಜವಾಬ್ದಾರಿತನಕ್ಕೆ ಅಮ್ಮ ಪೇಚಾಡುತ್ತಿದ್ದರೇ ಹೊರತು ಜೊತೆಗಾರನನ್ನು ದೂರವಿಟ್ಟು ಎಂದೂ ಮಾತನಾಡಿರಲಿಲ್ಲ. ಅವರ ಬಗ್ಗೆ ಬೇಸರವಂತೂ ಇತ್ತು. ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕನಲುತ್ತಿದ್ದುದುಂಟು. ಇಲ್ಲಿ ಮನೆಯ ಹಿರಿಯರನ್ನು ಬಯ್ಯುವಹಾಗೇ ಇಲ್ಲ. ಎಕೆಂದರೆ ಪಪ್ಪ ಯಾರಿಗೂ ತಲೆ ಬಗ್ಗಿಸಿದ್ದನ್ನು ನಾವು ನೋಡೇ ಇಲ್ಲ. ತನಗೇನು ಬೇಕೋ ಅದನ್ನೆ ಮಾಡುವ ಆಸಾಮಿ ಅವರು. ಪಾಪ ಅಮ್ಮ ಎಲ್ಲ ಮುಗಿಯಿತು, ಈಗಲಾದರೂ ತನ್ನೂರಿಗೆ ಹೋಗುತ್ತೇನೆ, ಅಲ್ಲಿ ಸುತ್ತಮುತ್ತಲಿನ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುತ್ತೇನೆ ಎಂದೆಲ್ಲ ಯೋಜನೆ ಹಾಕೊಕೊಂಡಿದ್ದರಲ್ಲಾ. ಈಗ ಅವರೇ ಪಾತಾಳಕ್ಕೆ ಕುಸಿದಿದ್ದಾರೆ. ಇನ್ನೂ ಒಂದೆರಡು ದಿನ ರಜೆ ಹಾಕುತ್ತೇನೆ. ಊರಿಗೆ ಹೋಗಿ ಬರೋಣವೆಂದು ಅಮ್ಮನನ್ನು ಒಪ್ಪಿಸಬೇಕು ಎಂದುಕೊಳ್ಳುತ್ತ ನಿದ್ರೆಗೆ ಜಾರಿದಳು.

ಬೆಳಗ್ಗೆ ಮೊಬೈಲ್ ಸದ್ದು ಮಾಲಿನಿಯನ್ನು ಬಡಿದೆಬ್ಬಿಸಿತು. ಅದರೆ ಅದು ತನ್ನ ಮೊಬೈಲಿನಿಂದಲ್ಲ ಎಂದು ಗೊತ್ತಾಗುತ್ತಿದ್ದಂತೆ ಹಾಸಿಗೆಯಿಂದೆದ್ದು ರೂಮಿನಿಂದ ಹೊರಬಂದಳು. ಅಷ್ಟರಲ್ಲಿ ಮತ್ತೊಮ್ಮೆ ಸದ್ದಾಯಿತು. ಅಮ್ಮ ತಮ್ಮೊಡನೆ ರೂಮೊಳಕ್ಕೆ ತೆಗೆದುಕೊಂಡು ಹೋಗಿಲ್ಲ ಎಂದುಕೊಳ್ಳುತ್ತ ಹಾಲಿನಲ್ಲಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ನೋಡಿದಳು. ತಿಳಿಯಿತು ಅದು ಕೆಲಸದ ಗೌರಿಯದು. ತಡಮಾಡದೆ ಮುಂಬಾಗಿಲನ್ನು ತೆರೆದು ಗೇಟಿನ ಬೀಗ ತೆಗೆದಳು.

“ಏನು ಮಾಲಿನವ್ವ ನೀವು ಎದ್ದು ಬಂದಿದ್ದೀರಿ, ಅಮ್ಮ ಎದ್ದಿಲ್ಲವೇನು? ಹುಷಾರಾಗಿದ್ದಾರೆ ತಾನೇ?” ಎಂದು ವಿಚಾರಿಸಿದಳು. “ಹೂ ಗೌರಿ, ಅಮ್ಮ ಮಲಗಿದ್ದಾರೆ. ರಾತ್ರಿ ನನ್ನಗೂ ಲೇಟಾಗಿತ್ತು ಮಲಗಿದ್ದೆ. ಎಚ್ಚರವಾಗಲಿಲ್ಲ ಬಾ” ಎಂದು ಕರೆದಳು ಮಾಲಿನಿ.

“ಹೂಂ ನಿಮ್ಮದು ಬಿಡಿ, ಆ ಪೆಟ್ಟಿಗೆ ಮುಂದೆ ಕುಂತ್ರೆ ಹಗಲು ರಾತ್ರಿ ಯಾವುದೂ ಗೊತ್ತಾಗಕಿಲ್ಲ. ಅಮ್ಮ ಅಂಗಲ್ಲ ಬರ‍್ರನೆ ಎದ್ದುಬಿಡ್ತಾರೆ. ಕೆಲಸದಿಂದ ರಿಟೈರ್ ಆಗಿ ಮನೆಗೇ ಬಂದಮೇಲಂತೂ ಇನ್ನು ಚುರುಕಾಗಿಬಿಟ್ಟವ್ರೆ ಅಂತೀನಿ. ನಾನು ಬರೋವಷ್ಟರಲ್ಲಿ ತಯಾರಾಗಿ ಕೂತಿರುತ್ತಾರೆ. ಆಮೇಕೆ ನನ್ನ ಕೆಲಸ ಮುಗಿಸೋದೇ ತಡ ತಿಂಡಿಕೊಟ್ಟು ಬಾಗಿಲಿಗೆ ಬೀಗಹಾಕಿ ಇಲ್ಲಿಂದ ಪೇರಿ. ಬೋ ಸಂತೋಸವಾಗವ್ರೆ ಕನ್ರವ್ವಾ. ಅದೇನೋ ಈ ಮನೇನೂ ಬಾಡಿಗೆಗೆ ಕೊಟ್ಟು ಊರಿಗೋಗ್ತೀನಿ ಅಂತವ್ರೆ. ಅಲ್ಲಿ ಹೋಗಿ ನೀವೇನು ಮಾಡ್ತೀರಾ ಅಂತ ಕೇಳಿದ್ರೆ ನಿನ್ನಂಥೋರಿಗೆ ನಾಲ್ಕಕ್ಷರ ಕಲಿಸಿ ಅವರೂ ಒಂಚೂರು ಹಣ ಸಂಪಾದನೆ ಮಾಡೋಹಂಗೆ ತರಬೇತಿ ಮಾಡ್ತೀನಿ ಅಂತಾವ್ರೆ.. ಅದು ಸರಿ ನಮಗೆ ಬಾಳಾ ದುಃಖ ಆಗುತ್ತೆ ಮಾಲಿನಮ್ಮ. ಪಾಪ ಯಾರು ಹಡೆದ ತಾಯೀನೋ ಆಕೆ ನಮಗೆ ಬಾಳಾ ಒಗ್ಗೋಗವ್ರೆ. ಮೊದಲನೆ ಕೆಲಸದವಳು ಹೋದಮ್ಯಾಕೆ ನಾನಿಲ್ಲಿಗೆ ಬಂದದ್ದು. ಆದ್ರೂ ಬಾಳಾ ಉಪಕಾರ ಮಾಡವ್ರೆ ಕಣ್ರವ್ವಾ. ನನ್ನ ಮಗ ಉಂಡಾಡಿಗುಂಡನಂಗೆ ಊರೆಲ್ಲ ಅಲೀತಿದ್ದ. ಅವನ್ನ ಕರೆದು ತಲೆಗೆ ಓಗಂಗೆ ಬುದ್ಧಿಹೇಳಿ ಒಂದು ಫ್ಲಾಟಿನಾಗೆ ವಾಚ್‌ಮನ್ ಕೆಲಸ ಕೊಡಿಸವ್ರೆ. ಅಮೇಕೆ ನಮ್ಮ ಹುಡುಗೀಗೆ ಅದ್ಯಾವುದೊ ಆಶ್ರಮದಲ್ಲಿ ಅಡುಗೆ ಮಾಡೋರಿಗೆ ಸಹಾಯ ಮಾಡೋ ಕೆಲಸಕ್ಕೆ ಹಚ್ಚವ್ರೆ. ಅವರ ಮನೇಗೂ ಆಶ್ರಮಕ್ಕೂ ದೂರವೇನಿಲ್ಲ. ನಡೆದೇ ಹೋಗಿಬರಬೋದು. ಊಟತಿಂಡಿಗೆ ಅನುಕೂಲವಾಗಿ ಸ್ವಲ್ಪ ನೆಮ್ಮದಿ ಬಂದದೆ ಕಣವ್ವಾ. ಮತ್ತೆ ಅದೇನೋ ಬಿ.ಪಿ.ಎಲ್. ಕಾರ್ಡ್ ಇರೋರಿಗೆ ಮನೆ ಕಟ್ಟಿಕೊಳ್ಳೋಕೆ ಸ್ವಲ್ಪ ಹಣ ಕೊಡ್ತಾರಂತೆ ಸರ್ಕಾರದವರು. ಅದಕ್ಕೆ ಅರ್ಜಿ ಹಾಕಿಸವ್ರೆ. ನಮ್ಮ ಮಾವ ಇದ್ದಿದ್ದ ಮನೆ ಹಳೇದು. ಮಳೆಬಂದ್ರೆ ಸರ‍್ತದೆ. ಅರ್ಜಿ ಹಾಕಿದ ಹಣ ಬಂದ್ರೆ ಅದನ್ನ ಒಸಿ ರಿಪೇರಿ ಮಾಡಿಸಬೌದು. ನಮ್ಮದೇ ನೋಡಿಕೊತ ಕುಂತ್ರೆ ಅಯಿತದಾ ಬಿಡಿ. ಊರಿಗೆ ಹೋಗಲಿ, ಅಲ್ಲಿದ್ದರೆ ನಿಮ್ಮ ಪಪ್ಪಂಗೂ ಒಸಿ ತಿರಗಾಡೋದು ಕಮ್ಮಿಯಾಗ್ಬೋದು. ಆ ಕೆಲಸಕ್ಕೆ ಬಾರದೋರನ್ನು ಕಟ್ಟಿಕೊಂಡು ..ಬಿಡಿ ನಮಗ್ಯಾಕೆ ದೊಡ್ಡವರ ಸುದ್ಧಿ” ಎಂದು ತನ್ನ ಕೆಲಸದ ಕಡೆಗೆ ಗಮನ ಹರಿಸಲು ಹೋದವಳನ್ನೇ ಹಿಂಬಾಲಿಸಿದ ಮಾಲಿನಿ “ಏ ಗೌರಿ ತಪ್ಪು ತಿಳ್ಕೋಬ್ಯಾಡ, ಅದೇನೋ ನಮ್ಮ ಅಪ್ಪನ ಬಗ್ಗೆ” ಎಂದು ಪಿಸುದನಿಯಲ್ಲಿ ಪ್ರಶ್ನಿಸಿದಳು.

“ಓ ಅದಾ ನನಗೇನು ಅಷ್ಟು ಕಂಡಿಲ್ಲ ಕಣವ್ವಾ. ಹಿಂದೆ ನಿಮ್ಮನೇಲಿ ಕೆಲಸ ಮಾಡ್ತಿದ್ಲಲ್ಲಾ ಗಿರಿಜಾ ಅವಳು ಹೇಳಿದ್ದನ್ನು ಕೇಳಿದ್ದೆ ಅಷ್ಟೇ. ಎಷ್ಟೋ ಕಿತ ಅಮ್ಮನಿಗೆ ಹೇಳಿದ್ಲಂತೆ ಅವಳು. ಅವರೋ ನಂಬದೆ ಅವಳನ್ನೇ ಬೈದು ಕಳಿಸಿದ್ರಂತೆ. ಎಲ್ಲ ಓದೊದೋರು, ಅವರೇ ಹಂಗೆ ಮಾಡಿದ್ರೆ ಹೆಂಗೆ ಅಂತಿದ್ಲು. ನಾನು ಪೇಟೆಕಡೆ ಓಗಾಕಿಲ್ಲ ನನಗೆ ಗೊತ್ತಿಲ್ಲಮ್ಮ. ನಿಮ್ಮ ಅಪ್ಪವ್ರು ಸ್ವಲ್ಪ ಅಂಗಂಗೇಯಂತೆ, ಬಿಡಿ ನಾನು ಕಸ ಗುಡಿಸಲು ಹೋಗ್ಬೇಕು. ಒಂದುಮಾತು ಅವ್ವಾ ಊರಿಗೆ ಹೋಗೋವರ್ಗೂ ಆಗಾಗ್ಗೆ ಬರ‍್ತಾ ಇರ‍್ರೀ. ಈಗಲೂ ಇನ್ನೂ ವಸಿದಿನ ಇದ್ದು ಓಗಿ. ಅಮ್ಮನೂ ಒಬ್ಬರೇ ಇರ‍್ತಾರೆ.” ಎಂಬ ಮಾತು ಸೇರಿಸಿದಳು.

ಅಯ್ಯೋ ಇವರುಗಳ ಮಾತುಗಳ ಮೇಲೆ ಯಾವ ನಂಬಿಕೆ ಇಡೋದು. ಬ್ಯುಸಿನೆಸ್ ಅದೂ ಇದು ಅಂತ ಓಡಾಡುತ್ತಿದ್ದದ್ದು ನೋಡಿ ಏನೇನೊ ಕಲ್ಪಿಸಿಕೊಂಡವ್ರೆ. ಆದರೂ ಈಗಿನ ಬೆಳವಣಿಗೆ ಸಡನ್ನಾಗಿ ಆದದ್ದಲ್ಲ ಎಂಬ ಗುಮಾನಿಯಂತೂ ಬರುತ್ತಿದೆ. ಎಲ್ಲಿಗೆ ಮುಟ್ಟುತ್ತದೆಯೋ ಎಂದುಕೊಳ್ಳುತ್ತ ಬಾತ್‌ರೂಮಿನ ಕಡೆ ನಡೆದಳು ಮಾಲಿನಿ.

ಮೊಬೈಲ್ ಸದ್ದು ಮಾಡಿದ್ದು, ಮಗಳು ಎದ್ದು ಹೋಗಿದ್ದು, ಕೆಲಸದವಳ ಮಾತುಗಳು ಎಲ್ಲವೂ ಕಿವಿಮೇಲೆ ಬಿದ್ದರೂ ಏಳದೇ ಹಾಗೇ ಮಲಗಿದ್ದ ಭಾರ್ಗವಿಗೆ ರಾತ್ರಿ ಮಗಳು ಬಿತ್ತರಿಸಿದ ಸುದ್ಧಿಯಿಂದ ಅನುಭವಿಸಿದ ವೇದನೆ ಎಲ್ಲವೂ ನೆನಪಿಗೆ ಬಂತು. ಏನನ್ನೋ ನಿರ್ಧರಿಸಿದಂತೆ ಮೇಲೆದ್ದು ಹೊದಿಕೆಯನ್ನು ಮಡಿಸಿಟ್ಟು ಹಾಸಿಗೆಯನ್ನು ಸರಿಮಾಡಿ ರೂಮಿನಿಂದ ಹೊರಬಂದಳು.

ಬಾತ್‌ರೂಮಿನಿಂದ ಹೊರಬಿದ್ದ ಮಾಲಿನಿ ತಾಯಿಯನ್ನು ನೋಡಿದಳು. ಇಲ್ಲಿಗೆ ಬಂದ ದಿನದಿಂದ ಚೈತನ್ಯದ ಚಿಲುಮೆಯಂತೆ ಕಾಣಿಸಿದ ಅಮ್ಮ ಒಂದೇ ರಾತ್ರಿಗೆ ಆ ಖುಷಿಯೆಲ್ಲವನ್ನೂ ಆಪೋಷನ ತೆಗೆದುಕೊಂಡು ಬಿಟ್ಟಂತೆ ಹಿಂಡಿದ ಹಿಪ್ಪೆಯಾಗಿ ಕಂಡುಬಂದರು. “ಗುಡ್ ಮಾರ್ನಿಂಗ್ ಅಮ್ಮಾ, ಕಾಫಿ ಬೆರೆಸುತ್ತೇನೆ. ನಿಮಗೊಂದು ಕಪ್ಪು” ಎಂದಳು.

“ಬೇಡ ಮಗಳೇ ಸ್ನಾನ ಮುಗಿಸಿ ಬರುತ್ತೇನೆ. ನನಗೆ ಗಡಿಬಿಡಿಯಲ್ಲಿ ನಿನಗೆ ಹೇಳುವುದನ್ನು ಮರೆತುಬಿಟ್ಟೆ. ಸುಮನಾಳ ತಾಯಿಗೆ ಹುಷಾರಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಬೆಕಾಗುತ್ತೋ ಏನೋ ಎಂದಿದ್ದಳು. ಅವಳ ಇಬ್ಬರು ಸಿಸ್ರ‍್ಸ್ ಎಲ್ಲೋ ಹೋಗಿದ್ದಾರೆಂದು ಹೇಳಿದ ನೆನಪು. ಒಬ್ಬಳೇ ಆಗಿದ್ದೇನೆ ಬೇಗ ಬಾ ಎಂದು ಹೇಳಿದ್ದಳು ಹೋಗಬೇಕು. ಫ್ರಿಡ್ಜ್ನಲ್ಲಿ ದೋಸೆ ಹಿಟ್ಟಿದೆ ತೆಗದಿಡು. ತುರಿದ ಕಾಯಿದೆ ತೆಗೆದುಕೊಂಡು ಸ್ವಲ್ಪ ಚಟ್ಣಿಮಾಡಿಬಿಡು. ನಿನಗೆ ಗೌರಿಗೆ ಆಗುತ್ತೆ. ಮಧ್ಯಾನ್ಹ ಊಟಕ್ಕೆ ನನ್ನನ್ನು ಕಾಯಬೇಡ. ಏನಾದರೂ ಮಾಡಿಕೋ. ಇಲ್ಲವೇ ಆರ್ಡರ್ ಮಾಡಿ ತರಿಸಿಕೋ. ನಾನು ಸಂಜೆಗೆ ಬರುತ್ತೇನೆ.” ಎಂದು ಹೊರಟ ತಾಯಿಯನ್ನು ಕೈಹಿಡಿದು ಮಾಲಿನಿ “ಅಮ್ಮಾ ನೀವು ನಿಮ್ಮ ಮನದ ದುಗುಡ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಒಂದೆರಡು ದಿನ ರಜೆ ಹಾಕುತ್ತೇನೆ. ಊರಿಗೆ ಹೋಗಿ ಬಂದುಬಿಡೋಣ. ಈಗ ನಡೆಯಿರಿ” ಎಂದಳು ಮಾಲಿನಿ.

ಹೂ ನಿನ್ನ ಜೊತೆಯಲ್ಲದೆ ಇನ್ಯಾರ ಜೊತೆಯಲ್ಲಿ ಹೋಗಲಿ. ಆ ಕರ್ಮಕಾಂಡ ನಿಜವೇ ಆಗಿದ್ದಲ್ಲಿ ಕುಸಿದು ಬೀಳುವ ನನ್ನನ್ನು ಹಿಡಿದುಕೊಳ್ಳಲು ಯಾರಾದರೂ ಬೇಕಲ್ಲ ಎಂದು ಮನಸ್ಸಿನಲ್ಲಿ ಅಂದುಕೊAಡು ಬಾಹ್ಯದಲ್ಲಿ “ಇಲ್ಲಾ ಮಗಳೇ ಈಗ ಸದ್ಯಕ್ಕೆ ಬೇಡ. ನಾನು ತಿಳಿಸುತ್ತೇನೆ ಆಗ ಬರುವೆಯಂತೆ.” ಎಂದು ಕೈ ಬಿಡಿಸಿಕೊಂಡು ಬಾತ್‌ರೂಮಿಗೆ ಹೋದಳು ಭಾರ್ಗವಿ.

ತಾಯಿಯ ವರ್ತನೆ ಮಾಲಿನಿಗೆ ಅಚ್ಚರಿ ತಂದರೂ ಒತ್ತಾಯ ಮಾಡುವುದು ಬೇಡ ಎನ್ನಿಸಿತು. ಸರಿ ತಾಯಿಯು ಹೇಳಿದಂತೆಯೇ ಆಗಲಿ ಎಂದುಕೊಂಡು ಅಡುಗೆ ಮನೆಯತ್ತ ನಡೆದಳು. ಸ್ನಾನ ಪೂಜಾದಿಗಳನ್ನು ಪೂರೈಸಿ ಸಿದ್ಧವಾಗಿ ಬಂದಳು ಭಾರ್ಗವಿ. ಮತ್ತೇನೂ ಪ್ರಶ್ನೆ ಮಾಡದೆ ಮಾಲಿನಿ ತಾಯಿಗೆ ದೋಸೆ ಹಾಕಿ ತಾನೇ ಸಿದ್ಧಪಡಿಸಿದ್ದ ಚಟ್ಣಿಯನ್ನು ಬಡಿಸಿದಳು. ಹಾಗೇ ಕಾಫಿಯನ್ನೂ ಬೆರೆಸಿ ಟೇಬಲ್ಲಿನ ಮೇಲಿಟ್ಟಳು. “ನಾನೂ ಸುಮನಾ ಆಂಟಿ ಮನೆಗೆ ಬರುವ ಅಗತ್ಯವಿದ್ದರೆ ಫೋನ್ ಮಾಡಿ” ಎಂದು ಹೇಳಿದಳು.

ಹಾ..ಹೂ..ಎನ್ನದೆ ತಿಂಡಿತಿಂದು ಮುಗಿಸಿದ ಭಾರ್ಗವಿ ಮಗಳಿಗೆ ಮನೆಕಡೆ ಜೋಪಾನ ಎಂದು ಎಚ್ಚರಿಸಿ ಮುಂದಿನ ಮಾತಿಗೆ ಅವಕಾಶ ಕೊಡದೆ ಹೊರಟೇ ಬಿಟ್ಟಳು. ತಾಯಿಯನ್ನು ಕಳುಹಿಸಿ ಬಾಗಿಲು ಹಾಕಿ ಬಂದ ಮಾಲಿನಿ ಕೆಲಸದವಳಿಗೂ ತಿಂಡಿಕೊಟ್ಟು ಅವಳನ್ನೂ ಕಳಿಸಿ ತಾನೂ ಸೇರಿದಷ್ಟು ತಿಂದು ರಾತ್ರಿ ಮಾಡಲಾಗದಿದ್ದ ಕೆಲಸವನ್ನು ಕೈಗೆತ್ತಿಕೊಂಡಳು.

ಇತ್ತ ಮನೆಯಿಂದ ಹೊರಟ ಭಾರ್ಗವಿ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಮೊಬೈಲ್ ರಿಂಗಣಿಸಿತು. ಬಗಲಿನ ಚೀಲದಿಂದ ಮೊಬೈಲ್ ತೆಗೆದು ನೋಡಿದಳು ಸುಮನಾಳ ಕಾಲ್. ಸದ್ಯ ಅವಳೇ ಮಾಡಿದ್ದಾಳೆ. ಮನೆಯಲ್ಲಿದ್ದಾಳೆ ಏನೆಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಹಲೋ ಹಲೋ ಭಾರ್ಗವಿ ಎಂದದ್ದು ಕೇಳಿಸಿತು. “ಹಾ ..ಹೇಳು ಸುಮನ್ ನಾನು ನಿಮ್ಮ ಮನೆಗೇ ಹೊರಟಿದ್ದೆ.” ಎಂದಳು.
“ಆದಷ್ಟು ಬೇಗನೆ ಬಾ ನನ್ನ ಅಲ್ಲ, ನಮ್ಮಮ್ಮ ಇನ್ನಿಲ್ಲ” ಎಂದು ಸುದ್ಧಿ ಅರುಹಿದಳು.

ಅದನ್ನು ಕೇಳಿ ಭಾರ್ಗವಿ ಒಂದು ಕ್ಷಣ ಸ್ಥಬ್ದಳಾದಳು. ಹೂಂ ನನ್ನ ಅಂತರಂಗದ ದುಗುಡವನ್ನು ಹೊರಹಾಕಿ ಏನು ಮಾಡಬೇಕೆಂದು ಅವಳನ್ನೇ ಕೇಳೋಣವೆಂದು ಅಂದುಕೊಂಡಿದ್ದೆ. ಅದಕ್ಕೆ ಸಂಚಕಾರ ತಂದ ಆ ಭಗವಂತ. ಅದು ಒತ್ತಟ್ಟಿಗಿರಲಿ, ಇದ್ದಕ್ಕಿದ್ದಂತೆ ಏನಾಯ್ತು ಎಂದುಕೊಳ್ಳುತ್ತಿದ್ದಂತೆ “ಭಾರ್ಗವಿ ಕೇಳಿಸುತ್ತಿಲ್ಲವೇ?” ಎಂದಳು ಸುಮನಾ.

“ಹಾಂ ಕೇಳಿಸುತ್ತಿದೆ ಹೇಳು, ನೀನು ಹೇಳಿದ್ದನ್ನು ನಾನು ಬೇಗ ಅರಗಿಸಿಕೊಳ್ಳಲಾಗುತ್ತಿಲ್ಲ. ಮನೇಲಾ ಆಸ್ಪತ್ರೇಲಾ.. ರಜನಿ ಮತ್ತು ಕ್ಷಮಾ ಬಂದರಾ?” ಎಂದು ವಿಚಾರಿಸಿದಳು ಭಾರ್ಗವಿ.
“ಎಲ್ಲರೂ ಬಂದಿದ್ದಾರೆ, ಮೊದಲೆಲ್ಲ ಮಾತೆತ್ತಿದರೆ ಅಮ್ಮ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದರು. ಆದರೀಗ ನಮ್ಮ ನಿರೀಕ್ಷೆಯನ್ನು ಮೀರಿ ಪಟಾರನೆ ನಡೆದುಬಿಟ್ಟಿದ್ದಾರೆ. ಮನೆಗೇ ಬಾ.” ಎಂದು ಕಾಲ್ ಕಟ್ ಮಾಡಿದಳು ಸುಮನಾ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45970

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *