ನಾವು ಯಾವುದೇ ದೇವಸ್ಥಾನಕ್ಕೆ ಹೋದರೂ ಗರ್ಭಗುಡಿಯಲ್ಲಿ ದೇವರ ಹಿಂಬದಿಯ ಪ್ರಭಾವಳಿಯನ್ನು ಗಮನಿಸಿದರೆ ಅಲ್ಲಿ ವಿಚಿತ್ರವಾದ ರಾಕ್ಷಸ ಮುಖವೊಂದನ್ನು ಕಾಣಬಹುದು. ದೊಡ್ಡ ದೊಡ್ಡ
ಕಣ್ಣುಗಳು, ಕೋರೆ ದಾಡೆ ಹಾಗೂ ನಾಲಿಗೆಯನ್ನು ಚಾಚಿದ ಭಯಂಕರ ದೈತ್ಯ ಮುಖ ಅದು. ಗರ್ಭಗುಡಿಗಳಲ್ಲಿ ಮಾತ್ರವಲ್ಲ, ಕೆಲವು ಪ್ರಾಚೀನ ದೇವಾಲಯಗಳ ವಾಸ್ತು ಹಾಗೂ ಶಿಲ್ಪಶಾಸ್ತ್ರದ
ಭಾಗವಾಗಿ ಈ ರಾಕ್ಷಸ ಮುಖವನ್ನು ಅಲಂಕಾರಿಕ ವಸ್ತುವಾಗಿ ಬಳಸಿರುವುದನ್ನು ನೋಡಬಹುದು. ಹೊಸದಾಗಿ ಕಟ್ಟುತ್ತಿರುವ ಕಟ್ಟಡಗಳಲ್ಲಷ್ಟೇ ಅಲ್ಲದೆ ಯಾರ ದೃಷ್ಟಿಯೂ ತಾಕದಿರಲೆಂದು ಮನೆಗಳ
ಮೇಲೂ ಕಟ್ಟಿರುತ್ತಾರೆ. ಈ ರಾಕ್ಷಸ ಮುಖವನ್ನು ನಮ್ಮ ಸಂಸ್ಕೃತಿಯಲ್ಲಿ ‘ಕೀರ್ತಿಮುಖ ಎಂಬ ಅದ್ಭುತ ಸುಂದರ ಹೆಸರಿನಿಂದ ಕರೆಯಲಾಗಿದೆ. ರಕ್ಕಸನೊಬ್ಬನ ಮುಖ, ದೇಗುಲಗಳ ಗೋಡೆ ಹಾಗೂ ಗರ್ಭಗುಡಿಯ ಪ್ರಭಾವಳಿಯಲ್ಲಿ ಹೀಗೆ ಸ್ಥಾನ ಪಡೆದಿದ್ದರ ಹಿಂದೊಂದು ಬಹಳ ಕುತೂಹಲಕಾರಿಯಾದ ಕಥೆಯೂ ಇದೆ.
ಶಿವಪುರಾಣದಲ್ಲಿ ಬರುವ ಅಸುರರ ರಾಜ ಜಲಂಧರ. ಅವನೊಮ್ಮೆ ಶಿವನ ತಲೆಯ ಮೇಲೆ ಸದಾ ತಂಪು ಸೂಸುವ, ಪರಮಶಿವನ ಆಭರಣವೇ ಆಗಿರುವ ಚಂದ್ರನ ಮೇಲೆ ಕಣ್ಣು ಹಾಕುತ್ತಾನೆ. ಆ ಚಂದ್ರನನ್ನು ಕಿತ್ತು ತರುವಂತೆ ತನ್ನ ಪರಮ ಸ್ನೇಹಿತನಾಗಿದ್ದ ರಾಹುವಿಗೆ ಆದೇಶಿಸುತ್ತಾನೆ. ಜಲಂಧರನ ಆಜ್ಞೆಯಂತೆ ಚಂದ್ರನನ್ನು ತರಲು ಕೈಲಾಸಕ್ಕೆ ಹೊರಟ ರಾಹು, ಅದೇ ಚಂದ್ರನ ಬೆಳಕಿನಲ್ಲಿ
ಧ್ಯಾನಸ್ಥನಾಗಿದ್ದ ಶಿವನ ತಲೆಯ ಮೇಲಿರುವ ಚಂದ್ರನನ್ನು ಕಿತ್ತುಕೊಳ್ಳುವ ಸನ್ನಾಹದಲ್ಲಿ ಶಿವನ ಧ್ಯಾನಕ್ಕೆ ಭಂಗವುಂಟಾದಾಗ ಕುಪಿತನಾದ ಶಿವ, ತನ್ನ ಹಣೆಗಣ್ಣಿನಿಂದ ಅಗ್ನಿಜ್ವಾಲೆಗಳನ್ನು ಸ್ಫೋಟಿಸಿಬಿಡುತ್ತಾನೆ. ಶಿವ ಸ್ಫೋಟಿಸಿದ *ಆ ಅಗ್ನಿಜ್ವಾಲೆಗಳಿಂದ ‘ಸಿಂಹಮುಖಿ’ ಎಂಬ ಭಯಾನಕ ರಕ್ಕಸನೊಬ್ಬ ಹುಟ್ಟಿಕೊಂಡಾಗ, ತನ್ನ ತಪಸ್ಸಿಗೆ ಭಂಗ ತಂದ ರಾಹುವನ್ನು ನುಂಗಿಹಾಕುವಂತೆ ಆ *ಸಿಂಹಮುಖಿ* ರಕ್ಕಸನಿಗೆ ಪರಮೇಶ್ವರ ಆದೇಶಿಸುತ್ತಾನೆ.
ಇದರಿಂದ ನಡುಗಿ ಹೋದ ರಾಹು ಶಂಭುವಿಗೆ ಶರಣಾಗಿ ತನ್ನಿಂದಾದ ಅಪರಾಧವನ್ನು ಕ್ಷಮಿಸುವಂತೆ ಶಿವನನ್ನು ಪರಿಪರಿಯಾಗಿ ಬೇಡಿಕೊಳ್ಳಲು ಕರುಣಾಳುವಾದ ಶಿವ, ರಾಹುವನ್ನು ಕ್ಷಮಿಸಿ ಆತನನ್ನು
ಬಿಟ್ಟುಬಿಡುವಂತೆ ಸಿಂಹಮುಖಿಗೆ ಹೇಳುತ್ತಾನೆ. ಆದರೆ ಆ ಹೊತ್ತಿಗಾಗಲೇ ಭಯಾನಕ ಹಸಿವಿನಿಂದ ಚಡಪಡಿಸುತ್ತಿದ್ದ ಆ ಸಿಂಹಮುಖಿ ರಾಕ್ಷಸ ತನ್ನ ಹಸಿವು ನೀಗಿಸಿದರೆ ಮಾತ್ರ ರಾಹುವನ್ನು
ಬಿಟ್ಟುಬಿಡುವುದಾಗಿ ಶಿವನಿಗೆ ಹೇಳುತ್ತಾನೆ. ಆಗ ಪರಮೇಶ್ವರ, ‘‘ನಿನ್ನನ್ನೇ ನೀನು ತಿಂದು ಹಸಿವು ನೀಗಿಸಿಕೋ..!’’ ಎಂದು ಆದೇಶಿಸುತ್ತಾನೆ. ಶಿವನ ಆಜ್ಞೆಯಂತೆ ಆ ಸಿಂಹಮುಖಿ ತನ್ನದೇ ಕಾಲಿನ ಭಾಗದಿಂದ ಆರಂಭಿಸಿ ಒಂದೊಂದಾಗಿ ತನ್ನೆಲ್ಲ ಅವಯವಗಳನ್ನು ತಾನೇ ತಿನ್ನಲು ಆರಂಭಿಸುತ್ತಾ ತನ್ನ ಕೈಗಳನ್ನೂ ತಿಂದು ಮುಗಿಸುವ ಹೊತ್ತಿಗೆ ಶಿವ ತನ್ನ ಆಜ್ಞೆಯನ್ನು ಈ ಪರಿಯ ನಿಷ್ಠೆಯಿಂದ ಅಹಂರಹಿತವಾಗಿ ಪಾಲಿಸಿದ ಆ ರಕ್ಕಸನಿಗೆ ತಿನ್ನುವುದನ್ನು ನಿಲ್ಲಿಸುವಂತೆ ಸೂಚಿಸಿ, *ತನ್ನನ್ನು ತಾನು ಇಲ್ಲವಾಗಿಸಿಕೊಂಡ ಈ ರಕ್ಕಸನ ಉಳಿದುಕೊಂಡಿರುವ ಮುಖ ದೇಗುಲಗಳಲ್ಲಿ *ಕೀರ್ತಿಮುಖ* ವಾಗಿ ವಿರಾಜಿಸಲಿ ಎಂದು ಆಶೀರ್ವದಿಸಿದನಂತೆ.
ಶಿವಮಹಾಪುರಾಣದ ರುದ್ರಸಂಹಿತೆ, ಯುದ್ಧಖಂಡ, ೧೯ನೇ ಅಧ್ಯಾಯ, ೪೮–೪೯ನೇ ಶ್ಲೋಕಗಳು ಕೀರ್ತಿಮುಖನಿಗೆ ಶಿವನು ನೀಡಿದ ಹೆಸರನ್ನೂ, ದ್ವಾರಪಾಲಕನ ಸ್ಥಾನವನ್ನೂ ನೇರವಾಗಿ
ಹೇಳುತ್ತವೆ.
ಶಿವನು ಹೇಳುತ್ತಾನೆ:-
ತ್ವಂ ಕೀರ್ತಿಮುಖಸಂಜ್ಞೋ ಹಿ ಭವ ಮದ್ದ್ವಾರಕಃ ಸದಾ ।
ಮಹಾಗಣೋ ಮಹಾವೀರಃ ಸರ್ವದುಷ್ಟಭಯಂಕರಃ ||೪೮ ॥
ಅಂದರೆ:
“ನೀನು ಇನ್ನು ಮುಂದೆ ಕೀರ್ತಿಮುಖನೆಂಬ ಹೆಸರಿನಿಂದ ಪ್ರಸಿದ್ಧನಾಗು. ಸದಾ ನನ್ನ
ದ್ವಾರಪಾಲಕನಾಗಿರು. ಮಹಾಗಣನೂ ಮಹಾವೀರನೂ ಆಗಿದ್ದು, ಎಲ್ಲ ದುಷ್ಟರಿಗೂ ಭಯಂಕರನಾಗಿರು.”
ಮುಂದಿನ ಶ್ಲೋಕ:-
ಮತ್ಪ್ರಿಯಸ್ತ್ವಂ ಮದರ್ಚಾಯಾಂ ಸದಾ ಪೂಜ್ಯೋ ಹಿ ಮಜ್ಜನೈಃ ।
ತ್ವದರ್ಚಾಂ ಯೇ ನ ಕುರ್ವಂತಿ ನೈವ ತೇ ಮತ್ಪ್ರಿಯಂಕರಾಃ || ೪೯ ||
ಅರ್ಥ: “ನೀನು ನನಗೆ ಪ್ರಿಯನು. ನನ್ನನ್ನು ಪೂಜಿಸುವಾಗ ನನ್ನ ಭಕ್ತರು ನಿನ್ನನ್ನೂ ಸದಾ ಪೂಜಿಸಬೇಕು. ನಿನ್ನನ್ನು ಪೂಜಿಸದವರು ನನಗೆ ಪ್ರಿಯರಾದವರಲ್ಲ.”
ಕೀರ್ತಿಮುಖದ ಹಿಂದಿರುವ ಪೌರಾಣಿಕ ಕಥೆಗಳು ಅದೇನೇ ಇರಲಿ, ಅದು ಕೊಡುವ ಜೀವನ ಪಾಠ ಮತ್ತು ಸಂದೇಶ ಮಾತ್ರ ಅದ್ಭುತವಾದದ್ದು. .ನಮ್ಮ’ಆತ್ಮೋನ್ನತಿ’ಯಾಗಬೇಕಾದರೆ ತನ್ನ ದೇಹವನ್ನು ತಾನೇ ತಿಂದು ಮುಗಿಸಿದ ಆ ಅಸುರನಂತೆ ನಮ್ಮೊಳಗಿನ ‘ಅಹಂ’ ಅನ್ನು ನಾವೇ ನೀಗಿಸಿಕೊಳ್ಳಬೇಕು. ಆದ್ದರಿಂದ ಭಯಂಕರವಾದ ಕೀರ್ತಿಮುಖನೆಂದರೆ ಹೊರಗಿನ ದುಷ್ಟಶಕ್ತಿಗಳನ್ನು ಮಾತ್ರ ನುಂಗುವವನು
ಎಂದಲ್ಲ; ಒಳಗಿನ ಅಹಂಕಾರವನ್ನೂ ನುಂಗುವವನು. ಭೋಗ, ಅಹಂಕಾರ, ಸ್ವಾರ್ಥಗಳ ಆಗರವಾದ ದೇಹ ಈಗ ಅವನಿಗಿಲ್ಲ ದೇಹ ಕರಗಿದ ಮೇಲೆ ಉಳಿಯುವುದು ‘ಮುಖ’ ಮಾತ್ರ ತಾನೇ — ಆಗ ಅದು ದೇವರ ಕಡೆ ತಿರುಗಿಸಬೇಕಾದ ಚೈತನ್ಯ.
ಇಂಥ ಅದ್ಬುತ ಜೀವನ ಸಂದೇಶ ನೀಡುವ ಈ ಕೀರ್ತಿಮುಖ ದೇಗುಲಗಳ ಗೋಡೆಯನ್ನು ಅಲಂಕರಿಸಿದ್ದು ಗುಪ್ತರ ಕಾಲದಲ್ಲಿ ಸುಮಾರು 2500 ವರ್ಷಗಳ ಹಿಂದೆ ಎನ್ನುತ್ತಾರೆ. ಭಾರತೀಯ ವಾಸ್ತುಶಿಲ್ಪ
ಮಾತ್ರವಲ್ಲ, ಬೌದ್ಧರ ವಾಸ್ತುಶೈಲಿಯಲ್ಲೂ ಈ ಕೀರ್ತಿಮುಖವನ್ನು ಬಳಸಲಾಗಿದೆ. ಚೀನಾದಿಂದ ಹಿಡಿದು ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಲ್ಲೂ ಈ ಕೀರ್ತಿಮುಖ, ದೇಗುಲಗಳ ವಾಸ್ತುವಿನ್ಯಾಸದ
ಒಂದು ಭಾಗವಾಗಿ ಬಳಕೆಯಾಗಿದೆ. ಈ ಕೀರ್ತಿಮುಖವನ್ನು ಕಲ್ಯಾಣಿ ಚಾಲುಕ್ಯರು ತಾವು ನಿರ್ಮಿಸಿದ ದೇಗುಲಗಳಲ್ಲಿ ವಾಸ್ತು ಹಾಗೂ ಅಲಂಕಾರಿಕ ಭಾಗವಾಗಿ ಬಳಸುವುದಕ್ಕೆ ಆರಂಭಿಸಿದರು.
ಕೀರ್ತಿಮುಖ ಸ್ಥಿತನಾಗಿರುವುದು ದೇವತೆಯ ಪ್ರಭಾವಳಿಯ ಮೇಲ್ಭಾಗದಲ್ಲಿ- ದ್ವಾರರಕ್ಷಕನಾಗಿ, ರಕ್ಷಣಾಚಿಹ್ನೆಯಾಗಿ. ಅಶುಭ, ದುಷ್ಟದೃಷ್ಟಿ, ನಕಾರಾತ್ಮಕ ಪ್ರಭಾವಗಳು ದೇವತೆಯ ಸನ್ನಿಧಿಗೆ
ಪ್ರವೇಶಿಸದಂತೆ ತಡೆಯುವ ಅಪಮಾರ್ಜಕ ಚಿಹ್ನೆಯಾಗಿ. ಏಕೆಂದರೆ ದೇವತೆಯ ಮಹಿಮೆಯ ಮುಂದೆ ಅಹಂಕಾರದ ಲಯವಾಗಿಬಿಡಬೇಕು.
ಶಿಲ್ಪಗಳಲ್ಲಿ ಕೀರ್ತಿಮುಖನ ರೂಪದಲ್ಲಿ ಸಾಮಾನ್ಯವಾಗಿ:
- ಉಬ್ಬಿದ ಕಣ್ಣುಗಳು
- ಭ್ರೂಕುಟಿಯ ಕಠೋರತೆ
- ಬಿಚ್ಚಿದ ಬಾಯಿ
- ದೊಡ್ಡ ದಂತಗಳು
- ಸಿಂಹದಂಥ ಮುಖ
- ಕೆಲವೊಮ್ಮೆ ಕೊಂಬುಗಳು
- ಹೊರಚಾಚಿದ ಕಿವಿಗಳು ಇರುತ್ತವೆ
ಅಸ್ಸಾಂ ಮೊದಲಾದ ಪ್ರದೇಶಗಳ ಶಿಲ್ಪಗಳ ಅಧ್ಯಯನಗಳಲ್ಲಿ ಕೊಂಬು, ದಂತ, ಉಬ್ಬಿದ ಕಣ್ಣು, ಕಠೋರ ಭ್ರೂಭಂಗಿ, ಪಂಖಾಕಾರದ ಕಿವಿ ಮುಂತಾದ ಲಕ್ಷಣಗಳನ್ನು ದಾಖಲಿಸಲಾಗಿದೆ;
ಹೀಗಾಗಿ ಅದು ಮನುಷ್ಯನ ಸುಂದರ ಮುಖವೇ ಆಗಿರಬೇಕೆಂಬ ಉದ್ದೇಶವೇನಿಲ್ಲ. ಭಯ ಹುಟ್ಟಿಸುವ ಮುಖ ಅಂದರೆ ದುಷ್ಟತನಕ್ಕೆ ಭಯ, ಆದರೆ ಭಕ್ತನಿಗೆ ರಕ್ಷಣೆ. ಹಾಗಾದರೆ ದೇವತೆಯ ಹಿಂದಿನ ಪ್ರಭಾವಳಿಯಲ್ಲಿ ಕೀರ್ತಿಮುಖವನ್ನು ನೋಡಿದಾಗ ಏನು ಅರ್ಥಮಾಡಿಕೊಳ್ಳಬೇಕು?
ಅದರ ಬಾಯಿ — ದುಷ್ಟತನವನ್ನು ನುಂಗುವ ಶಕ್ತಿ.
ಅದರ ದಂತಗಳು — ದೌರ್ಷ್ಟ್ಯಕ್ಕೆ ಭಯ.
ಅದರ ಉಬ್ಬಿದ ಕಣ್ಣುಗಳು — ಜಾಗೃತ ಕಾವಲು.
ಅದರ ತನ್ನದೇ ದೇಹವನ್ನು ತಿನ್ನುವ ಕಥೆ — ಅಹಂಕಾರದ ವಿಲಯ.
ಅದರ ದ್ವಾರಸ್ಥಾನ — ದೇವಸನ್ನಿಧಿಗೆ ಪ್ರವೇಶಿಸುವ ಮುನ್ನದ ರಕ್ಷಣೆ.
ಅದರ ದೇವತೆಯ ಮೇಲಿನ ಸ್ಥಾನ — ದೈವಿಕ ತೇಜಸ್ಸಿನ ಅಧಿಪತ್ಯ.
ಒಟ್ಟಿನಲ್ಲಿ ಅದರ ಅರ್ಥವನ್ನು ಹೀಗೆ ಹಿಡಿಯಬಹುದು:
ಕೀರ್ತಿಮುಖ = ದೇವತೆಯ ಮಹಿಮೆಯ ದ್ವಾರಪಾಲಕ, ದುಷ್ಟಶಕ್ತಿಯನ್ನು ನುಂಗುವ ರಕ್ಷಕ, ಅಹಂಕಾರವನ್ನು ತನ್ನೊಳಗೇ ಕರಗಿಸಿಕೊಳ್ಳುವ ಸಂಕೇತ. ಹೀಗಾಗಿ ದೇವತೆಯ ಹಿಂದಿನ ಪ್ರಭಾವಳಿಯಲ್ಲಿ ಕೀರ್ತಿಮುಖ ಕಂಡಾಗ, ಅದೊಬ್ಬ ರಕ್ಕಸನ ಮುಖ ಎಂದು ಮಾತ್ರ ಹೇಳುವುದಕ್ಕಿಂತ, “ತನ್ನನ್ನೇ ತಾನು ತಿಂದು ದೇಹರಹಿತನಾದ ಶಿವಗಣ; ಶಿವನಿಂದ ದ್ವಾರಪಾಲಕನಾಗಿ ಅನುಗ್ರಹಿಸಲ್ಪಟ್ಟ ಕೀರ್ತಿಮುಖ — ದೇವಸನ್ನಿಧಿಯನ್ನು ಕಾಯುವ, ಅಶುಭವನ್ನು ನುಂಗುವ ಮತ್ತು ಅಹಂಕಾರದ ವಿಲಯವನ್ನು ಸೂಚಿಸುವ ಮಂಗಳಕರ ರಕ್ಷಣಾಚಿಹ್ನೆ”
ಕೀರ್ತಿಮುಖದ ಶಿಲ್ಪರೂಪದ ಪ್ರಾಚೀನ ಉದಾಹರಣೆಗಳು ಪುರಾಣಗಳಲ್ಲಿ ಅದರ ಕಥೆಯ ರೂಪುಗೊಳ್ಳುವ ಕಾಲಕ್ಕಿಂತ ಹಿಂದಿನವು ಎಂದು ಕಲಾ-ಇತಿಹಾಸದ ಸಂಶೋಧನೆ ಸೂಚಿಸುತ್ತದೆ. ಒಂದು ಅಧ್ಯಯನವು ಇದರ ಪ್ರಾರಂಭಿಕ ದೃಶ್ಯರೂಪವನ್ನು ಕ್ರಿ.ಶ. ಸುಮಾರು ಮೂರನೆಯ ಶತಮಾನದ ಬೌದ್ಧ ಕಲೆಯಲ್ಲಿಯೇ ಗುರುತಿಸುತ್ತದೆ. ನಂತರದ ಶೈವ ಪುರಾಣಕಥೆ ಆ ರೂಪಕ್ಕೆ ಜಲಂಧರ–ರಾಹು–ಶಿವನ ಕಥೆಯ ಮೂಲಕ ಒಂದು ಪೌರಾಣಿಕ ಗುರುತು ಮತ್ತು ಅರ್ಥ ನೀಡಿದೆ.
ಪ್ರಾಚೀನ ಭಾರತೀಯ ಕಲೆಯಲ್ಲಿ ಇದ್ದ ಒಂದು ಭಯಂಕರ ರಕ್ಷಣಾತ್ಮಕ ಮುಖರೂಪಕ್ಕೆ ಪುರಾಣವು ಕೀರ್ತಿಮುಖನ ಕಥೆಯನ್ನು ನೀಡಿದೆ. ಪುರಾಣಕಥೆ ಮತ್ತು ಶಿಲ್ಪರೂಪ ಪರಸ್ಪರ ಪೂರಕವಾಗಿ
ಒಂದನ್ನೊಂದು ಬಲಪಡಿಸಿಕೊಂಡಿವೆ.

–ರತ್ನಾ ಮೂರ್ತಿ

