ಮನುಷ್ಯನಾಗಿ ಹುಟ್ಟಿದ ಮೇಲೆ
ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ಘಟನೆಯಾದರೂ ಇರಬೇಕು
ವೇದಿಕೆ ಏರಿದಾಗಲೋ
ನಾಲ್ಕು ಜನ ಸೇರಿದಾಗಲೋ
ನಿನಗಂತೂ ಅಳಿಯದ ಚರಿತ್ರೆಯನ್ನು ಹೇಳುವ ಬದುಕು ಇರಬೇಕು
ಇಲ್ಲದ ಮಾತುಗಳಲ್ಲ
ಇದ್ದದ್ದನ್ನು ಇದ್ದ ಹಾಗೆ, ನಡೆದದ್ದನ್ನು ನಡೆದ ಹಾಗೆ
ಹತ್ತು ಜನರ ಮುಂದೆ ತಲೆಎತ್ತಿ ನಿಂತು ಹೇಳುವ
ಒಂದು ಘನವಾದ ಸತ್ಯ ನಿನ್ನ ಜೀವನಕ್ಕಿರಬೇಕು.
ಬಲಿಷ್ಠನನ್ನು ಎದುರಿಸಿದ ಧಿಕ್ಕಾರವೋ
ಹತ್ತು ಜನರ ಹಕ್ಕಿಗಾಗಿ ಮುಷ್ಟಿಯೆತ್ತಿದ ಹೋರಾಟವೋ
ನಿನ್ನ ಹೆಸರು ಕೇಳಿದರೆ ನಡುಗುವ ಕ್ಷಣವೋ ಒಂದು ಇರಬೇಕು.
ಜನರಿಗಾಗಿ ಹೋರಾಟ ಮಾಡಿದಂತೆಯೋ
ಜೈಲಿನಲ್ಲಿ ಕೊರಗಿದಂತೆಯೋ
ಬೀದಿಗಳಲ್ಲಿ ಲಾಠಿ ಏಟು ತಿಂದಂತೆಯೋ
ಹೋರಾಟದ ಸ್ಪರ್ಶವಿದ್ದರೆ ಬದುಕಿಗೊಂದು ಬೆಲೆ.
ಕಾಡಿನಲ್ಲಿ ಅಣ್ಣಂದಿರಿಗಾಗಿ ಸೌದೆ ಹೊತ್ತ ನೆನಪೋ
ಪೊಲೀಸರು ಬೆನ್ನಟ್ಟಿದರೆ ಒಣಹುಲ್ಲಿನ ಬಣವೆಯಲ್ಲಿ
ತಲೆಮರೆಸಿಕೊಂಡ ನೆನಪೋ
ಯಾವುದಾದರೂ ಒಂದು ಯುದ್ಧದ ಕಾಲವನ್ನು
ನಿನ್ನ ಒಡಲಲ್ಲಿ ಮೂಟೆ ಕಟ್ಟಿಕೊಳ್ಳಬೇಕು.
ಬೆಳಿಗ್ಗೆ ಎದ್ದು
ಗಡಿಯಾರದ ಮುಳ್ಳಿನಂತೆ ಕೆಲಸ ಮಾಡುವುದಷ್ಟೇ ಅಲ್ಲ
ಕನಿಷ್ಠ ಒಂದು ಗಂಟೆಯಾದರೂ
ನಿನ್ನ ಪುಟವನ್ನು ವಿಶೇಷವಾಗಿ ಬರೆದುಕೊಳ್ಳಲು ಬಳಸಬೇಕು.
ನಾಲ್ಕು ರಸ್ತೆಗಳ ಸಂಧಿಯಲ್ಲಿ
ವಿಗ್ರಹಗಳನ್ನು ಸುಮ್ಮನೆ ನಿಲ್ಲಿಸುವುದಿಲ್ಲ
ಸುಮ್ಮನೆ ಜಯಂತಿ, ವರ್ಧಂತಿಗಳಿಗೆ ಬಂದು ಹಾರ ಹಾಕುವುದಿಲ್ಲ
ಸಮಾಜಕ್ಕೆ ಹೆಗಲಾಗಿ ನಿಂತಾಗಲೇ
ಘನವಾದ ಚರಿತ್ರೆ ಲಿಖಿಸಲ್ಪಡುತ್ತದೆ.
ತೆಲುಗು ಮೂಲ : ಅವನಿಶ್ರೀ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

