ಲಹರಿ

ಅಮೇರಿಕಾದಲ್ಲಿ ಪಂಚಾಮೃತ

Share Button

ಸೋಮಸುಂದರ್, ಶ್ರೀಕರನ್, ಬಾಲ ಸುಬ್ರಹ್ಮಣ್ಯ ಮತ್ತು ಮಹೇಶ, ಎಲ್ಲರೂ 60 ರ ಗಡಿ ದಾಟಿದ್ದು ಕುಚುಕು ಕುಚುಕು ಗೆಳೆಯರು . ಮಕ್ಕಳ ಜವಾಬ್ದಾರಿಯನ್ನು ಮುಗಿಸಿ ರಿಟೈರ್ಡ್ ಲೈಫ್ ನ್ನು ತಮಗೆ ಹೇಗೆ ಬೇಕೋ ಹಾಗೆ ರೂಪಿಸಿಕೊಂಡಿರುವ ತರುಣ ಮನಸಿನ ಮುದುಕರು.(ಕ್ಷಮೆ ಇರಲಿ-ಹಿರಿಯ ನಾಗರೀಕರು) ಮಕ್ಕಳೆಲ್ಲಾ  ದೂರದ ಅಮೆರಿಕದಲ್ಲಿ, ಕೆನಡಾದಲ್ಲಿ ಜೀವನ ಕಟ್ಟಿಕೊಂಡು ಇರುವವರು. ಮಕ್ಕಳು ಕರೆಯೋದನ್ನೇ ಕಾಯತ್ತಾ ಕುಳಿತಿರುವ ಅವರು ಕರೆ ಬಂದ ಕೂಡಲೇ ಮಕ್ಕಳನ್ನು ನೋಡೋ ನೆಪ ಕೊಟ್ಟು ಭಾರತೀಯ ಸ್ನೇಹಿತರಿಗೆ ಬೈ ಬೈ ಹೇಳಿ ಅಮೆರಿಕ, ಕೆನಡ ಅಂತ ಸುತ್ತಾಡೋ ಅಲೆಮಾರಿಗಳು. ನಾಲ್ವರು ನಿವೃತ್ತಿ ಜೀವನದಲ್ಲಿ ಮನಸು ಮತ್ತು ಮೈಯನ್ನು ಬಹಳ ಕ್ರಿಯಾಶೀಲವಾಗಿ ಇಟ್ಟುಕೊಳ್ಳೋ ದೃಷ್ಟಿಯಿಂದ  ಕೆಲವು ತಿಂಗಳಿಗೊಮ್ಮೆ ಮೈಸೂರಿನಲ್ಲೋ ಅಥವಾ ಬೆಂಗಳೂರಿನಲ್ಲೋ ಭೇಟಿಯಾಗಿ ಪ್ರಚಲಿತ ವಿದ್ಯಮಾನಗಳನ್ನು, ಚರ್ಚಿಸುತ್ತಾ, ವಿಶ್ಲೇಷಿಸುತ್ತಾ  ಕಾಲ ಕಳೆಯುತ್ತಿದ್ದರು. ಅವರು ಸೇರಿದಾಗ ಚರ್ಚೆಗೆ ಬಾರದ ವಿಷಯಗಳೇ ಇರುತ್ತಿರಲಿಲ್ಲ.  ಒಂದು ತರಹ , ಅವರ ಭೇಟಿ “ ಸಂಜೆಯ ಗ್ಲಾಸ್-ಸುದ್ದಿಯ ಕ್ಲಾಸ್” ಹರಟೆ ಅಡ್ಡವಾಗಿತ್ತು.

ಒಮ್ಮೆ ಆ ನಾಲ್ಕೂ ಗೆಳೆಯರಿಗೂ ಮಕ್ಕಳ ಮನೆಗೆ ಒಂದೇ ಸಮಯಕ್ಕೆ ವಿದೇಶಕ್ಕೆ ಹೋಗುವ ವಿಶೇಷ  ಸಂದರ್ಭ ಬಂದಿತ್ತು. ನಾಲ್ವರೂ ಬೇರೆ ಬೇರೆ ಊರುಗಳಲ್ಲಿ ಇದ್ದರೂ, ಪ್ರತಿದಿನ ಬೆಳಿಗ್ಗೆ  ಒಂದು ನಿರ್ದಿಷ್ಟ ಸಮಯದಲ್ಲಿ ಕಾನ್ಫರೆನ್ಸ್ ಕಾಲ್ ಮಾಡುತ್ತಿದ್ದರು.

ಮೊದಲ ದಿನದ ಮಾತುಕತೆ ಸಾಮಾನ್ಯ ಉಭಯ ಕುಶಲೋಪರಿಯಂತೆ ಪ್ರಾರಂಭಗೊಂಡಿತ್ತು.
“ಏನಪ್ಪಾ, ಅಮೆರಿಕದ ಚಳಿ ಹೇಗಿದೆ?” 
“ಚಳಿ ಏನು? ನಮ್ಮ ಮೈಸೂರೂ ಬೆಂಗಳೂರಿನಲ್ಲಿ ಈ ತರ ಚಳಿ ನೋಡೇ ಇಲ್ಲಪ್ಪ!

ಎರಡನೇ ದಿನದಿಂದ ಮಾತು ಬದಲಾಯಿತು.
“ಟ್ರಂಪ್ ಏನು ಮಾಡ್ತಿದ್ದಾನೆ ಗೊತ್ತಾ?”

ಮೂರನೇ ದಿನ—“H-1B ಬಗ್ಗೆ ಹೊಸ ಸುದ್ದಿ ನೋಡಿದಿಯಾ?”

ನಾಲ್ಕನೇ ದಿನ—
“ಅಮೆರಿಕದ ಆರ್ಥಿಕತೆ ಹೀಗೆ ಹೋದರೆ ಮುಂದೆ ಏನಾಗುತ್ತೋ?”

ಐದನೇ ದಿನ—“ಯುದ್ಧದ ಪರಿಸ್ಥಿತಿ ಯಾವಾಗ ಸುಧಾರಿಸುತ್ತೋ ?

ಆರನೇ ದಿನ—“ಭಾರತದ ಷೇರು ಮಾರುಕಟ್ಟೆ ಏನಾಗುತ್ತೆ?”

ಏಳನೇ ದಿನ—“ನಿನ್ನೆ ಇಂಡಿಯಾ ಕ್ರಿಕೆಟ್‌ನಲ್ಲಿ ಸೋತಿದ್ದು ಯಾಕೆ ಗೊತ್ತಾ?”
ಹೀಗೆ ನಾಲ್ಕು ನಿವೃತ್ತರು ದಿನವೂ ಪ್ರಪಂಚವನ್ನು ಸರಿಪಡಿಸುವ ಸುಧಾರಕರಂತೆ ಕಾನ್ಫರೆನ್ಸ್ ಕಾಲ್ ಮಾಡುತ್ತಿದ್ದರು.

ಒಮ್ಮೆ ಬಾಲಸುಬ್ರಹ್ಮಣ್ಯ ಹೇಳಿದ:
“ನೋಡಿ, ನಾವು ನಿವೃತ್ತಿಯಾದೋರು, ನಮಗ್ಯಾಕಪ್ಪ ಪ್ರಪಂಚದ ಉಸಾಬರಿ, ಮೊಮ್ಮಕ್ಕಳ ಜೊತೆ ಕಾಲ ಹಾಕ್ಕೊಂಡು ಸಮಯ ಕಳೆದರೆ ಸಾಕಪ್ಪ”
“ಹೌದು ,” ಎಂದ ಸೋಮಸುಂದರ.
“ಹೌದೌದು ” ಎಂದ ಮಹೇಶ.
“ಅಲ್ವಾ ಮತ್ತೆ.” ಎಂದ ಶ್ರೀಕರನ್.

ಮತ್ತೆ ಮರುದಿನ ಅದೇ ಸಮಯಕ್ಕೆ ಕಾನ್ಫರೆನ್ಸ್ ಕಾಲ್.
ಸೋಮಸುಂದರ್ ಶುರುಮಾಡಿದ:
“ ಟ್ರಂಪ್ ನಿನ್ನೆ ಹೇಳಿದ ಮಾತು ಕೇಳಿದ್ರಾ?”
ಮತ್ತೆ ಒಂದೂವರೆ ಗಂಟೆ ಚರ್ಚೆ!

ಸೋಮಸುಂದರನ ಮಗಳು ಪಕ್ಕದಲ್ಲೇ ನಿಂತು ಕೇಳುತ್ತಿದ್ದಳು.
“ಅಪ್ಪಾ, ನೀವು ನಿವೃತ್ತರಾಗಿದ್ದೀರಲ್ಲ?”
“ಹೌದು.”
“ಹಾಗಾದರೆ ಪ್ರತಿದಿನ ಇಷ್ಟು ರಾಜಕೀಯ ಯಾಕೆ ಚರ್ಚೆ ಮಾಡ್ತೀರಾ?”

ಸೋಮಸುಂದರ್ ಗಂಭೀರವಾಗಿ ಉತ್ತರಿಸಿದ.
“ನಾವು ರಾಜಕೀಯ ಮಾಡ್ತಿಲ್ಲಮ್ಮ. ರಾಜಕೀಯ ಪರಿಸ್ಥಿತಿಯ ವಿಶ್ಲೇಷಣೆ ಮಾಡ್ತಿದ್ದೀವಿ.”
“ನಿನ್ನೆ ಮೂರು ಗಂಟೆ H-1B ಬಗ್ಗೆ ಚರ್ಚೆ ಮಾಡಿದ್ದು?”
“ಅದು ಜಸ್ಟ್ ಪರಾಮರ್ಶೆ” .
“ಆಮೇಲೆ ಯುದ್ಧದ ಬಗ್ಗೆ?”
“ಅದು ಜಾಗತಿಕ ತರ್ಕವಿಮರ್ಶೆ.”
“ಕ್ರಿಕೆಟ್ ಬಗ್ಗೆ ಎರಡು ಗಂಟೆ?”
ಸೋಮಸುಂದರ್ ಸ್ವಲ್ಪ ತಡಕಾಡಿದ.
“ಅದು… ಹರಟೆ ಅಷ್ಟೇ !”

ಮರುದಿನ, ಸೇಮ್ ಟೈಮ್, ಫೋನ್ ಮತ್ತೆ ಮೊಳಗಿತು.
ಬಾಲ ಸುಬ್ರಹ್ಮಣ್ಯನ ಕಾನ್ಫರೆನ್ಸ್ ಕಾಲ್.
“ಬೇಗ ಬನ್ನಿ! ಹೊಸ ಸುದ್ದಿ ಬಂದಿದೆ!”
ಎಲ್ಲರೂ  ಓಡುತ್ತಾ ಕಾನ್ಫರೆನ್ಸ್ ಕಾಲ್ಗೆ ಜಾಯಿನ್ ಆದರು.
“ಏನಾಯ್ತು?”
“ಅಮೆರಿಕದ ಹೊಸ ಆರ್ಥಿಕ ನೀತಿ ಬಗ್ಗೆ ಸುದ್ದಿ ಬಂದಿದೆ.”
“ಹೌದಪ್ಪ, ನಾನೂ ನ್ಯೂಸ್ ಕೇಳ್ದೆ .”
ನಾಲ್ವರೂ ಮತ್ತೆ ಕಾನ್ಫರೆನ್ಸ್ ಕಾಲ್‌ನಲ್ಲಿ.

ಟ್ರಂಪ್ ಇತ್ತೀಚೆಗೆ “ ನಾನು ಮಾಡಿದ್ದನ್ನು ಜನರಿಗೆ ಸರಿಯಾಗಿ ವಿವರಿಸುವಲ್ಲಿ ತಪ್ಪಾಗಿದೆ” ಅಂತ ಹೇಳಿದ್ದಾರೆ, ಮಾಧ್ಯಮದವರಿಗೆ- “ ನನಗೆ ಒಳ್ಳೆಯ ಪ್ರಶ್ನೆಗಳನ್ನೇ ಕೇಳುತ್ತಿಲ್ಲ ಅಂತ ಬೇಸರಪಟ್ಟಿದ್ದಾರೆ”
“ ಟ್ರಂಪ್ ಮತ್ತೆ ಪ್ರಚಾರಕ್ಕೆ ಹೊರಟಿದ್ದಾರಂತೆ” “ ಬಿಡಪ್ಪ, ಟ್ರಂಪ್ ಏನು ಮಾತಾಡಿದ್ರೂ ನ್ಯೂಸ್ ಆಗುತ್ತೆ,  ನಾನು- ನೀನು ಮಾತಾಡಿದ್ರೆ ಏನಾಗುತ್ತೆ”
ಒಬ್ಬ ಅಮೆರಿಕದ ಆರ್ಥಿಕತೆಯನ್ನು ವಿಶ್ಲೇಷಿಸುತ್ತಿದ್ದ.
ಇನ್ನೊಬ್ಬ H-1B ಬಗ್ಗೆ ತನ್ನ ಅಭಿಪ್ರಾಯ ಹೇಳುತ್ತಿದ್ದ.
ಮೂರನೆಯವನು ಭಾರತದ ಆರ್ಥಿಕ ನೀತಿಯನ್ನು ಅಮೆರಿಕದ ಜೊತೆ ಹೋಲಿಸುತ್ತಿದ್ದ.
ನಾಲ್ಕನೆಯವನು ಮಧ್ಯೆ ಮಧ್ಯೆ, “ನಾನು ಮೊದಲೇ ಹೇಳಿದ್ದೆ!” ಎಂದು ಬೀಗುತ್ತಿದ್ದ.
“ ನೋಡ್ಬೇಕು ಈ ನವೆಂಬರ್ ಲ್ಲಿ ಟ್ರಂಪ್ ಭವಿಷ್ಯ ಏನಾಗುತ್ತೋ, ನೋಡೋಣ”

ಕೊನೆಗೆ ಶ್ರೀಕರ ಹೇಳಿದ,
“ನಮ್ಮ ಮಕ್ಕಳಿಗೆ ಇಷ್ಟು ಟೆನ್ಶನ್ ಇಲ್ಲ. ಅವರು ಕೆಲಸಕ್ಕೆ ಹೋಗ್ತಾರೆ, ಮನೆಗೆ ಬರ್ತಾರೆ, ಊಟ ಮಾಡ್ತಾರೆ, ಮಲಗುತ್ತಾರೆ. ನಾವು ಮಾತ್ರ ದಿನವಿಡೀ ಅಮೆರಿಕ, ಭಾರತ, ಟ್ರಂಪ್, H-1B, ಯುದ್ಧ, ಷೇರು ಮಾರುಕಟ್ಟೆ, ಕ್ರಿಕೆಟ್… ಎಲ್ಲದರ ಬಗ್ಗೆ ಯೋಚನೆ ಮಾಡ್ತಿದ್ದೀವಿ.”
ಎಲ್ಲರೂ ತಲೆಯಾಡಿಸಿದರು.
“ಅದೇ ನಿವೃತ್ತಿ ಜೀವನ!” ಟೈಮ್ ಹೇಗೆ ಕಳೆಯುವುದು. ಅಲ್ವಾ?
“ನಾವು ನಿವೃತ್ತರಾಗಿದ್ದು ಕೆಲಸದಿಂದ ಮಾತ್ರ. ಚಿಂತೆಯಿಂದ ಅಲ್ಲ!”

ಮಹೇಶ: ಹೌದೌದು, ನನ್ನ ಮಗ ಬೆಳಗ್ಗೆ ನಾನು ನನ್ನ ಹೆಂಡತಿ ಸೋಫಾ ಮೇಲೆ ಕುಳಿತು ಬಿಸಿ ಬಿಸಿ ಕಾಫಿ ಕುಡಿಯುವುದು ನೋಡಿ, “ 24 ಗಂಟೇ ಸಮಯ  ನಿಮ್ಮ ಕಂಟ್ರೋಲ್ ನಲ್ಲಿ ಇರುತ್ತಲ್ವಾ, ನಾವು ನೋಡಿ, ಮಳೆನೋ, ಚಳಿನೋ, ಬ್ಯಾಗ್ ತೊಗೊಂಡು ಹೋಗ್ತಾಯಿರಬೇಕು, ನಿಮ್ ಲೈಫೇ ಚೆನ್ನ, ಮಜಾ ಮಾಡಿ” ಅಂತ ಬೇಜಾರು ಮಾಡಿಕೊಂಡು ಆಫೀಸ್ಗೆ ಹೋಗ್ತಾನೆ “

ಸೋಮಸುಂದರ್ : ಅದಕ್ಕೇ ಹೇಳೋದು. ಮಕ್ಕಳ ಜೀವನದಲ್ಲಿ ಟೆಕ್ನಾಲಜಿ ಎಷ್ಟೇ ಮುಂದುವರಿದರೂ, ಟೈಮ್ ಅವರ ಕೈಯಲ್ಲಿಲ್ಲ! ಅವರ ಜೀವನದಲ್ಲಿ ಎಲ್ಲಾ ಎಟುಕಿಸಿದ್ದರೂ, time is very costly for them”

ಶ್ರೀಕರ : ಅವರ ಜೀವನದಲ್ಲಿ ಬಾಸ್ ಇದ್ದಾನೆ, ಟಾರ್ಗೆಟ್ ಇದೆ, ಮೀಟಿಂಗ್ ಇದೆ, ಡೆಡ್‌ಲೈನ್ ಇದೆ! ಹಿಮ ಬಿದ್ದರೂ ಕೆಲಸಕ್ಕೆ ಹೋಗಬೇಕು, ಮಳೆ ಬಂದರೂ ಕೆಲಸಕ್ಕೆ ಹೋಗಬೇಕು! ಮಾರ್ಕೆಟ್ ಬಿದ್ದರೂ ಆಫೀಸ್ಗೆ ಹೋಗಬೇಕು, ಯುದ್ಧ ಆಗ್ತಿದ್ದರೂ ಕೆಲಸಕ್ಕೆ ಹೋಗಬೇಕು!”

ಬಾಲ ಸುಬ್ರಹ್ಮಣ್ಯ : ನಮ್ಮ ಜೀವನದಲ್ಲಿ ನಾವೇ ಬಾಸ್, ನಾವೇ ಎಂಪ್ಲಾಯೀಸು ! ಕಾಫಿ ಕುಡಿಯೋ ಟೈಮ್ ನಮ್ಮದು, ಮಲಗೋ ಟೈಮ್ ನಮ್ಮದು, ಎದ್ದೇಳೋ ಟೈಮ್ ಕೂಡ ನಮ್ಮದು!

ಮಹೇಶ :  ಮಕ್ಕಳಿಗೆ ಅಮೆರಿಕದಲ್ಲಿ Work-Life Balance ಸಿಕ್ತಿಲ್ಲ, ಆಫೀಸ್ ನಲ್ಲಿ ಕಿರಿಕಿರಿ, ಕೆಲಸದ ಒತ್ತಡ. ನಮ್ ಮಕ್ಕಳು ಅಮೆರಿಕದಲ್ಲಿ 24 ಗಂಟೇನೂ ಗಡಿಯಾರದ ಜೊತೆ ಓಡುತ್ತಿರುತ್ತಾರೆ. ನಾವು ನಿವೃತ್ತರು ಗಡಿಯಾರ ನೋಡದೆ ಜೀವನ ಅನುಭವಿಸುತ್ತಿದ್ದೇವೆ. ಅವರದು ಡಾಲರ್ ಲೈಫ್, ನಮ್ಮದು ಕಾಫಿ ಲೈಫ್”

ಆ ದಿನದಿಂದ ಅವರು ತಮ್ಮ ಕಾನ್ಫರೆನ್ಸ್ ಕಾಲ್‌ಗೆ ಒಂದು ಹೊಸ ಹೆಸರು ಇಟ್ಟರು— “ವಿಶ್ವ ಸಮಸ್ಯೆಗಳ ನಿವೃತ್ತ ಪರಿಹಾರ ಸಮಿತಿ.”

ಪ್ರತಿ ದಿನ ಸಭೆಯಲ್ಲಿ ಅಜೆಂಡಾ ಏನಪ್ಪ ಅಂದರೆ

  1. ಟ್ರಂಪ್ ಏನು ಮಾಡುತ್ತಿದ್ದಾರೆ?
  2. H-1B ಏನಾಗುತ್ತದೆ?
  3. ಅಮೆರಿಕದ ಆರ್ಥಿಕತೆ ಹೇಗಿದೆ?
  4. ಭಾರತದಲ್ಲಿ ಏನಾಗುತ್ತಿದೆ?
  5. ಯುದ್ಧ ಎಲ್ಲಿಗೆ ಹೋಗುತ್ತದೆ?
  6. ಷೇರು ಮಾರುಕಟ್ಟೆ ಯಾವಾಗ ಏರಬಹುದು ?
  7. ಇಂಡಿಯಾ ಕ್ರಿಕೆಟ್ ತಂಡ ಏಕೆ ಸೋತಿತು?
  8. ಮತ್ತು ಕೊನೆಯದಾಗಿ…ಊಟ ತಿಂಡಿ ಹಾಗು ಇನ್ನಿತರ ವಿಚಾರ.

ಸೋಮಸುಂದರ್ ಕೇಳಿದ “ಏನಪ್ಪ ಮಹೇಶ, ಬೆಳಗಿನ ತಿಂಡಿ?”
ಮಹೇಶ: “ ಮಕ್ಕಳಿಗೆ ಇಷ್ಟ ಅಂತ ಪೂರಿ ಸಾಗು ಮಾಡಿದ್ವಿ”
ಶ್ರೀಕರ: “ ನಮ್ಮ ಮನೇಲಿ ಮೇಪಲ್ ಸಿರಪ್ ಜೊತೆಗೆ ಪಾನ್ ಕೇಕು “
ಬಾಲ ಸುಬ್ರಹ್ಮಣ್ಯ ಹೇಳಿದ  “ಇವತ್ತು ನಮ್ಮ ಮನೇಲಿ ಬೆಳಗಿನ ಉಪಹಾರ ಪಂಚಾಮೃತ,  ಮಾಡೋಕ್ಕೂ ಸುಲಭ, ಆರೋಗ್ಯಕ್ಕೂ ಒಳ್ಳೆದು”. ಆದರೆ ಇದಕ್ಕೆ ಯಾವ ಮಡಿಯೂ ಬೇಡ, ನೈವೇದ್ಯವಂತೂ ಬೇಡವೇ ಬೇಡ”
ಮಹೇಶ: “ಏನಪ್ಪಾ! ಭಾರತೀಯ ಸಂಸ್ಕೃತಿಯನ್ನ ಅಮೆರಿಕದಲ್ಲೂ ಪ್ರಚಾರ ಮಾಡ್ತಾ ಇದ್ದೀಯಲ್ಲ! ಪಂಚಾಮೃತವನ್ನು ಗ್ಲೋಬಲ್ ರೆಸಿಪಿ ಮಾಡ್ತಾ ಇದೀಯ, ಹಾಗಾದ್ರೆ ಪಂಚಾಮೃತ ಹೇಗೆ ಮಾಡ್ತೀಯಪ್ಪ? ನಮಗೂ ಹೇಳು. ನಾವೂ ಟ್ರೈ ಮಾಡ್ತೀವಿ!”

ಬಾಲಸುಬ್ರಹ್ಮಣ್ಯ ಜೋರಾಗಿ ನಕ್ಕು, “ಏನಿಲ್ಲಪ್ಪಾ…ನಮ ಕಡೆ ಪಂಚಾಮೃತ ಅಂದರೆ ಐದು ಪವಿತ್ರ ದ್ರವ್ಯಗಳ ಮಿಶ್ರಣ, ಅಂದರೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತೆ ಸಕ್ಕರೆ. ಆದರೆ ಅಮೇರಿಕನ್ ಪಂಚಾಮೃತದಲ್ಲಿ ಐದೇ ದ್ರವ್ಯ ಇರಬೇಕೆಂಬ ನಿಯಮವೇನಿಲ್ಲ,  very simple, ಅಡುಗೆ ಮನೇಲಿ ಏನೇನು ಇದೆಯೋ , ಅಂದರೆ  ಜೇನುತುಪ್ಪ, ಮೊಸರು, ಸಕ್ಕರೆ, ಹಣ್ಣು, ಇತ್ಯಾದಿ, ಆದರೆ ಎಲ್ಲಾದರ ಮೇಲೂ  ಆರ್ಗಾನಿಕ್ ಲೇಬಲ್ ಇರಬೇಕಷ್ಟೇ. ರೋಲ್ಡ್ ಓಟ್ಸ್ ಇರುತ್ತಲ್ಲ (ಅದೂ ಆರ್ಗಾನಿಕ್), ಅದನ್ನ ಹಾಕ್ಕೋಬೇಕು. ಮತ್ತೆ ಮನೇಲಿ ಯಾವ್ಯಾವ ಹಣ್ಣುಗಳಿರುತ್ತವೋ—ಬಾಳೆಹಣ್ಣು, ಕಿವಿ ಫ್ರೂಟ್, ಅವಕಾಡೋ , ಸೇಬು, ಚೆರ್ರಿ ಹಣ್ಣು, ದ್ರಾಕ್ಷಿ, ಪೇರಳೆ, ಪೀಚು, ಪ್ಲಮ್ ಎಲ್ಲ ಹಾಕ್ಕೋಬೇಕು. ಇನ್ನೂ ರುಚಿ ಬೇಕಾದ್ರೆ ದ್ರಾಕ್ಷಿ, ಗೋಡಂಬಿ, ಬಾದಾಮಿ, ಬೇರೆ ನಟ್ಸ್… ಎಲ್ಲವನ್ನೂ ಹಾಕಿ…”

“ಆಮೇಲೆ?” ಎಂದು ಮಹೇಶ ಕುತೂಹಲದಿಂದ ಕೇಳಿದ.
“ಇಲ್ಲಿ ಸಿಗೋ ಆ ಹಾಲು ಇದೆಯಲ್ಲ… ಹೋಲ್ ಮಿಲ್ಕ್!”
“ಹೌದು…”
“ಅದನ್ನ್ನೇ ಹಾಕಿ ಚೆನ್ನಾಗಿ ಕಲಸಿ… ಮೊಸರು ಬದಲಿಗೆ ಗ್ರೀಕ್ ಯೋಗರ್ಟ್ ಹಾಕಬಹುದು, ಸಕ್ಕರೆ ಬದಲಿಗೆ ಮೇಪಲ್ ಸಿರಪ್ ಹಾಕೋಬಹುದು. ಎಲ್ಲವನ್ನೂ ಚೆನ್ನಾಗಿ ಗೋಟಾಯಿಸಿಕ್ಕೊಂಡು ತಿನ್ನೋದಷ್ಟೇ!”
ಮಹೇಶ ಸ್ವಲ್ಪ ಹೊತ್ತು ಯೋಚಿಸಿ,
“ಲೋ ,ಇದು ಪಂಚಾಮೃತನಾ? ಇಲ್ಲ ಅಮೆರಿಕನ್ ಬ್ರೇಕ್‌ಫಾಸ್ಟಾ? ಅಥವಾ ಬ್ರಂಚಾ” ಎಂದು ಕೇಳಿದ. ಬಾಲಸುಬ್ರಹ್ಮಣ್ಯ ನಕ್ಕು,
“ಹೆಸರು ಏನೇ ಇರಲಿ ಬಿಡಪ್ಪಾ… ಹೊಟ್ಟೆ ತುಂಬಿದ್ರೆ ಅದೇ ಪ್ರಸಾದ!” ಎಂದ.

ಒಳಗಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಸೋಮಸುಂದರನ ಹೆಂಡತಿ ಸುಧಾ “ ದೇವರ ನೈವೇದ್ಯಕ್ಕೆ ಮಾಡುವ ಪಂಚಾಮೃತದ ಪಾವಿತ್ರ್ಯಕ್ಕೆ ಎಷ್ಟೊಂದು ಧಕ್ಕೆ!. ಅದು ನಮ್ಮ ಭಕ್ತಿ, ಸಂಪ್ರದಾಯದ ಸಂಕೇತ. ಅದನ್ನು ಅಮೇರಿಕನ್ ಶೈಲಿಗೆ ಬದಲಾಯಿಸುವ ಅಗತ್ಯವೇನಿದೆ? ಇಲ್ಲಿನ ಅಡುಗೆ ಪ್ರಯೋಗಗಳನ್ನೆಲ್ಲಾ ನಮ್ಮ ದೋಸೆ, ಚಪಾತಿ, ಪಲ್ಯಗಳ ಮೇಲೆ ಬೇಕಾದರೆ ಮಾಡಿ “ ಎಂದಳು.

ಸುಧಾಳ ಮಾತಿಗೆ ಎಲ್ಲರೂ ಗಹಗಹಿಸಿ ನಕ್ಕೂ, “ ಓಕೆ, ನಾಳೆ ಇದೆ ಸಮಯಕ್ಕೆ ಭೇಟಿಯಾಗೋಣ” ಎಂದು ಕಾನ್ಫರೆನ್ಸ್ ಕಾಲ್ ಆಫ್ ಮಾಡಿದರು.

–ವತ್ಸಲ ಸುರೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *