ಲಹರಿ

ಪರಸ್ಪರಾನುರೂಪತೆ- ಜಗದ ಅಚ್ಚರಿ

Share Button

ಯಾವುದೋ ಸಮಾರಂಭಕ್ಕೆ ಹೋಗಿದ್ದಾಗ ನಡೆದ ಘಟನೆಯಿದು. ಕೈ ತುಂಬಾ ಗಾಜಿನ ಬಳೆಗಳನ್ನು ಧರಿಸಿದ್ದೆ. ನನ್ನ ಪರಿಚಿತೆಯೊಬ್ಬಳು ಆ ಬಳೆಗಳನ್ನು ಕಂಡು “ಬಳೆಗಳೇನೋ ಚೆನ್ನಾಗಿವೆ. ಆದರೆ ಬಳೆಗಳನ್ನು ಜೋಡಿಸಿದ್ದು ಸರಿಯಾಗಿಲ್ಲ” ಅಂದಳು. ಗಾಜಿನ ಬಳೆಗಳ ಜೊತೆಗೆ ಎರಡೂ ಬದಿಗಳಲ್ಲಿ ಒಂದೇ ರೀತಿ ಇರುವ ಚಿನ್ನದ (ಚಿನ್ನದಂತೆ ತೋರುವ ಗಿಲೀಟಾದರೂ ಸರಿ) ಬಳೆಗಳಿದ್ದರೆ ಚಂದ ಕಾಣುತ್ತದೆ” ಅಂದಳು. ನಾನು ನಸು ನಕ್ಕೆ. ನಾನು ಆ ಬಗ್ಗೆ ಯೋಚಿಸಿಯೂ ಇರಲಿಲ್ಲ. ಧರಿಸುವ ಅಲಂಕಾರ ಸಾಧನಗಳು ಹೀಗೆಯೇ ಇರಬೇಕು ಅಂತ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದು ನನ್ನ ಜಾಯಮಾನವೂ ಅಲ್ಲ. ಆದರೆ ಅವಳಂದ ಮಾತು ನನ್ನಲ್ಲಿ ಹೊಳಹೊಂದನ್ನು ಮೂಡಿಸಿದ್ದಂತೂ ಸತ್ಯ.

ನಮ್ಮ ದೇಹವನ್ನೇ ಅಥವಾ ಯಾವುದೇ ಜೀವಿಗಳ ದೇಹವನ್ನೇ ತೆಗೆದುಕೊಳ್ಳಿ (ಅಕಶೇರುಕಗಳನ್ನಲ್ಲ- ಬೇಕಾದಂತೆ ಆಕಾರ ಬದಲಾಯಿಸಬಲ್ಲ ಜೀವಿ ಅಮೀಬಾ ಅಂತ ಪ್ರಾಥಮಿಕ ಶಾಲೆಯಲ್ಲಿಯೇ ಓದಿದ ನೆನಪು ಇದೆ ಈಗಲೂ!). ದೇಹದ ಎಡ ಹಾಗೂ ಬಲ ಭಾಗಗಳ ನಡುವೆ ಸಮರೂಪತೆ ಇದ್ದೇ ಇದೆ ತಾನೆ! ದೇಹದಲ್ಲಿ ಏನಾದರೂ ವ್ಯತ್ಯಯವಿದ್ದರೆ, ಅದು ಎಲ್ಲರ ಗಮನಕ್ಕೂ ಬಂದೇ ಬರುತ್ತದೆ. “ಏ, ಅವಳ ಬಲಕಣ್ಣು ಚಿಕ್ಕದಿದೆ”, “ಅವನ ಎಡ ಬದಿಯ ಕಿವಿ ನೋಡು, ಸಣ್ಣದಿದೆ”, “ಆಕೆಯ ಬಲಗೈಯಲ್ಲಿ ಆರು ಬೆರಳು ಇದೆ”, “ಅವನ ಕಾಲಿನ ನಾಲ್ಕನೇ ಬೆರಳು ನೋಡಾ, ಉಳಿದ ಬೆರಳಿನಂತಿಲ್ಲ”, “ಅವಳ ಎಡಕಾಲು ಸ್ವಲ್ಪ ಗಿಡ್ಡ ಅನ್ನಿಸ್ತದೆ, ಸ್ವಲ್ಪ ಕುಂಟಿಕೊಂಡು ನಡೆಯುತ್ತಾಳೆ”…. ಇದು ಕೇವಲ ಕೆಲವೇ ಕೆಲವು ಉದಾಹರಣೆಗಳು. ದೇಹದ ಎಲ್ಲಾ ಭಾಗಗಳು (ಯಾವುದೇ ಬದಿಯ)ಎಲ್ಲರಿಗೂ ಇರುವಂತೆ ಇದ್ದರೆ ಸರಿ. ಸ್ವಲ್ಪ ಬೇರೆ ಇದ್ದರೆ ನಮ್ಮ ಗಮನ ಅತ್ತ ಕಡೆ  ಹೋಗುವುದು. ಹಾಗೆಯೇ ಎಲ್ಲವೂ ಸರಿ ಇದ್ದಾಗ ಅದರ ಪ್ರಾಮುಖ್ಯತೆ ನಮಗೆ ಗೊತ್ತಾಗುವುದಿಲ್ಲ. ಆದರೆ ವ್ಯತ್ಯಯ ಇರುವವರನ್ನು ಕಂಡಾಗ ಛೇ! ಪಾಪ! ಅನ್ನಿಸುತ್ತದೆ.

ಎಲ್ಲರ ಹಾಗೇ ಇಲ್ಲ ಅನ್ನುವುದು ದೊಡ್ಡ ವಿಷಯವಾಗುತ್ತದೆ. ಪ್ರಾಣಿ ಪಕ್ಷಿಗಳು, ಜಲಚರಗಳು, ಸರೀಸೃಪಗಳು, ಕ್ರಿಮಿಕೀಟಗಳು,.. ಪ್ರತಿಯೊಂದರ ದೇಹ ರಚನೆಯಲ್ಲಿಯೂ ಸಮರೂಪತೆ ಅಥವಾ symmetry ಇದ್ದಂತೆ ಕಾಣಿಸುತ್ತದೆ. ಸಮರೂಪತೆ ಇದ್ದಾಗ ಪರಿಪೂರ್ಣತೆ ಅನ್ನುವ ಭಾವನೆ.  ಪ್ರತಿಯೊದಕ್ಕೂ ಲೆಕ್ಕವಿದೆ. ಖಚಿತ ಸಂಖ್ಯೆ ಇದೆ. ಹಾಗಾಗಿಯೇ ಎರಡು ತಲೆ ಒಂದೇ ದೇಹವಿರುವ ಮಗು (ಸಯಾಮೀ ಅವಳಿಗಳು) ಜನಿಸಿದರೆ ಸುದ್ದಿಯಾಗುತ್ತದೆ. ಒಂದಕ್ಕಂತ ಹೆಚ್ಚು ಮಗು ಏಕ ಕಾಲದಲ್ಲಿ ಜನಿಸಿದರೆ ಅದು ಸುದ್ದಿಯಾಗುತ್ತದೆ. ಪುರಾಣವನ್ನೇ ತೆಗೆದುಕೊಳ್ಳಿ. ತ್ರಿನೇತ್ರ, ತ್ರಿಮೂರ್ತಿ ರೂಪ ದತ್ತಾತ್ರೇಯ, ಗಜವದನ, ಚತುರ್ಮುಖ ಬ್ರಹ್ಮ, ದಶಕಂಠ ರಾವಣ ಬೇರೆಯದಾಗಿ, ವಿಭಿನ್ನವಾಗಿ ತೋರುತ್ತಾರೆ. ಅವರು ಎಲ್ಲರಿಗಿಂತ ಭಿನ್ನ- ಮುಖ ಚಹರೆಯಲ್ಲೂ, ಗುಣದಲ್ಲೂ!

ಸಹಸ್ರಪದಿ, ಶತಪದಿಗಳು, ಕೀಟಗಳು ,… ಇವೆಲ್ಲವುಗಳ ದೇಹದಲ್ಲಿರುವ ಕಾಲುಗಳ ಸಂಖ್ಯೆ ಒಂದೇ ರೀತಿ ಇರುತ್ತದೆ. ಅಲ್ಲಿಯೂ ಸಮರೂಪತೆ. ಶತಪದಿಗಳ ಕಾಲುಗಳ ನಡುವಿನ ಅಂತರವೂ  ಒಂದೇ ರೀತಿ ಇರುತ್ತದೆ. ಸಮತೋಲನ ಬೇಕಾದರೆ ಸಮರೂಪತೆ ಇರಲೇ ಬೇಕು. ಹಾಗಾಗಿಯೇ ಅಂಗರಚನೆಯಲ್ಲಿ ಸಾಮ್ಯತೆ, ಸಾದೃಶ್ಯತೆ.

ಸಸ್ಯ ಪ್ರಪಂಚಕ್ಕೆ ಬಂದರೂ ಪರಸ್ಪರ ಅನುರೂಪತೆಯನ್ನು ಗಮನಿಸುತ್ತೇವೆ. ದ್ವಿದಳ ಧಾನ್ಯಗಳು ಮೊಳಕೆ ಒಡೆಯುವಾಗಲೂ ಎರಡೂ ಬದಿಯಲ್ಲಿ ಸಮರೂಪತೆ. ಒಂದು ಗಿಡದಲ್ಲಿ ಸಾವಿರ ಹೂವುಗಳಿದ್ದರೂ, ಅರಳುವ ಹೂವುಗಳಲ್ಲಿ ಸಮರೂಪತೆ. ಹೂವಿನ ಎಸಳುಗಳ ಸಂಖ್ಯೆ, ಎಸಳುಗಳ ನಡುವಿನ ಅಂತರ, ಎಸಳುಗಳ ನಡುವಿನ ಕೋನ, ಎಸಳುಗಳ ಆಕಾರ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಇವನ್ನೆಲ್ಲಾ ಕಂಡಾಗ ಅಚ್ಚರಿ. ಎಲೆಗಳ ಆಕಾರ, ಗಾತ್ರದಲ್ಲೂ ಹೀಗೆಯೇ ಸಾಮ್ಯತೆ ಇರುತ್ತದೆ. ಹೂವುಗಳ ಬಗ್ಗೆ ಬರೆಯುವಾಗ ಒಂದು ವಿಷಯ ನೆನಪಿಗೆ ಬರುತ್ತಿದೆ. ನಮ್ಮ ತುಳುನಾಡಿನಲ್ಲಿ, ದುರ್ಗಾದೇವಿಯ ಆರಾಧನೆ ಮಾಡಲು ದುರ್ಗಾ ಪೂಜೆ, ಅಥವಾ ತ್ರಿಕಾಲ ಪೂಜೆ ಮಾಡುವಾಗ ದುರ್ಗೆಗೆ ಇಷ್ಟವೆಂದು ಕಿಸ್ಕಾರ ಹೂವುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಗುಡ್ಡಗಳಲ್ಲಿ ಬೆಳೆಯುವ ಕಿಸ್ಕಾರ ಹೂವುಗಳಿಗೆ  ನಾಲ್ಕು ಎಸಳುಗಳು ಇರುತ್ತವೆ. ಹೂವುಗಳನ್ನು ಬಿಡಿಸುವಾಗ ಐದು ಎಸಳಿನ ಕಿಸ್ಕಾರ ಹೂವು ಸಿಕ್ಕಿತೆಂದರೆ “ಐದು ಎಸಳಿನ ಕಿಸ್ಕಾರ ಹೂವು ದೇವಿಗೆ ವಿಶೇಷ” ಅನ್ನುತ್ತಾ ಆ ಹೂವುಗಳನ್ನು  ಬೇರೆಯೇ ತೆಗೆದಿಡುವ ಪದ್ಧತಿಯನ್ನು ಬಾಲ್ಯದಿಂದಲೇ ನೋಡಿದ ನೆನಪು.

ಸೃಷ್ಟಿಯ ಸೊಬಗಿಗೆ ತಲೆದೂಗಲೇ ಬೇಕು, ತಲೆ ಬಾಗಲೇ ಬೇಕು. ಹೂಗಳ ನಡುವಿರುವ ಬೇರೆ ಬಣ್ಣದ ಭಾಗವನ್ನು ಕಂಡಾಗ “ಯಾರಿಟ್ಟರು ಈ ಚುಕ್ಕೀ” ಅಂತನ್ನಿಸಿದರೆ ಹೂಗಳಲ್ಲಿರುವ ಬಣ್ಣಗಳ ಹೊಂದಾಣಿಕೆ ಕಂಡಾಗ “ಇಷ್ಟೊಂದು ಸಮರೂಪತೆಯನ್ನು ಕಾಯ್ದುಕೊಂಡು ಯಾರು ತುಂಬಿದರು ಈ ಬಣ್ಣ” ಅಂತ ಅನ್ನಿಸುತ್ತದೆ. ಒಂದು ಗಿಡದಲ್ಲಿರುವ ಹೂವುಗಳು ನೋಡಲು ಒಂದೇ ತೆರನಾಗಿರುತ್ತವೆ, ಒಂದೇ ರೀತಿ ಪರಿಮಳ ಹೊಂದಿರುತ್ತವೆ. ಒಂದಕ್ಕೆ ಜಾಸ್ತಿ ಪರಿಮಳ ಇನ್ನೊಂದು ಕಡಿಮೆ ಅನ್ನುವುದುಂಟೇ? ಪರಸ್ಪರ ಅನುರೂಪತೆ, ಸಮರೂಪತೆ ಎದ್ದು ಕಾಣುತ್ತದೆ.

ಈ ಸಮರೂಪತೆ ಅನ್ನುವುದು ಎಲ್ಲಾ ಕಡೆ ಇರುವಂತಹ ವಿಷಯ. ಎಲ್ಲರಿಗಿಂತ ಭಿನ್ನವಾಗಿ ತೋರಬೇಕೆಂದು ಕೆಲವರು ಹೊಸ ಹೊಸ ವಿನ್ಯಾಸದ ದಿರಿಸುಗಳನ್ನು ಧರಿಸುತ್ತಾರೆ. ಆ ವಿಷಯ ನಮಗೆ ಬೇಡ. ಉದಾಹರಣೆಗೆ Formal Dress ನ್ನೇ ತೆಗೆದುಕೊಳ್ಳುವ. ಯಾರಾದರೂ ತನ್ನ ಅಂಗಿಯ ಒಂದು ಕೈ ಗಿಡ್ಡ ಹಾಗೂ ಇನ್ನೊಂದು ಕೈ ಉದ್ದ ಹೊಲಿಸುವುದಿಲ್ಲ. ಪ್ಯಾಂಟಿನ ಒಂದು ಕಾಲು ಚಡ್ಡಿಯಷ್ಟು ಗಿಡ್ಡ ಹಾಗೂ ಇನ್ನೊಂದು ಕಾಲು ಉದ್ದ ಹೊಲಿಸುವುದಿಲ್ಲ. ಇಲ್ಲೂ ಸಮರೂಪತೆ. ಯಾರಾದರೂ ಆ ರೀತಿ ವ್ಯತ್ಯಾಸವಿರುವ ದಿರಿಸು ಧರಿಸಿದ್ದರೆ “ಅವನಿಗೇನೋ ಸರಿಯಿಲ್ಲ“ ಅನ್ನದೆ ಇರುತ್ತಾರೆಯೇ? ಕಾಲಿಗೆ ಚಪ್ಪಲಿ ಹಾಕಿದರಾಯಿತು ಅಂದುಕೊಂಡು ಒಂದೊಂದು ಕಾಲಿಗೆ ಒಂದೊಂದು ಬಗೆಯ ಚಪ್ಪಲಿ ಹಾಕಿಕೊಂಡರೆ ಏನನ್ನುತ್ತಾರೆ?ನಾನು ಯಾರಿಗೂ ಕ್ಯಾರೇ ಅನ್ನುವುದಿಲ್ಲ ಎಂದುಕೊಂಡರೂ ನಗೆಪಾಟಲಿಗೆ ಗುರಿಯಾಗುವುದು ತಪ್ಪದು. ಎರಡು ಕಿವಿಗಳಿಗೆ ಒಂದೇ ರೀತಿಯ ಕಿವಿಯೋಲೆ ಯಾಕೆ ಧರಿಸಬೇಕು ಅಂತ ಒಂದು ಕಿವಿಗೆ ಒಂದು ರೀತಿಯ ಓಲೆ, ಇನ್ನೊಂದು ಕಿವಿಗೆ ಇನ್ನೊಂದು ರೀತಿಯ ಓಲೆ ಇಟ್ಟರೆ ಹೇಗಿರುತ್ತದೆ?

ಅನುರೂಪತೆಯ ಬಗ್ಗೆ ಬರೆಯಹೊರಟರೆ ಎಷ್ಟೂ ಇದೆ!

ನಾವು ಭೌತಶಾಸ್ತ್ರ ಅಥವಾ ಋಣ ವಿದ್ಯುತ್ ಕಣ ತಂತ್ರಜ್ಞಾನ (ಎಲೆಕ್ಟ್ರಾನಿಕ್ಸ್ ಕಣ್ರೀ ) ಕಲಿಸುವಾಗ  IC- Integrated Circuits ಬಗ್ಗೆ ಕಲಿಸುತ್ತೇವೆ. ಅದರಲ್ಲಿ ಒಂದು IC 741. ಅದಕ್ಕೆ ಎಂಟು ಪಿನ್ ಇರುವುದು. ಆ ಕಡೆ ನಾಲ್ಕು, ಈ ಕಡೆ ನಾಲ್ಕು ಪಿನ್. ಆ ಎಂಟು ಪಿನ್ ಗಳಲ್ಲಿ ಎಂಟನೇ ಪಿನ್ ಗೆ ನಿರ್ದಿಷ್ಟ ಕೆಲಸವಿಲ್ಲ. ಸುಮ್ಮನೆ ಅನುರೂಪತೆ ಕಾಪಾಡಲು ಮಾತ್ರ. ಒಬ್ಬರು ಉಪನ್ಯಾಸಕರು ಒಂದು ವರ್ಷ   ” IC 741 ನಲ್ಲಿ ಎಂಟನೇ ಪಿನ್ ನ ಪ್ರಾಮುಖ್ಯತೆಯನ್ನು ಬರೆಯಿರಿ” ಅಂತ ಒಂದು ಪ್ರಶ್ನೆ ಕೇಳಿಯೇ ಬಿಟ್ಟರು.

ಸಮಾರಂಭ ನಡೆಯುವ ಸಭಾಂಗಣದಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯಲ್ಲಿಯೂ ಪರಸ್ಪರ ಅನುರೂಪತೆ ಇರುತ್ತದೆ. ಸಭಾಂಗಣದ ಒಂದೇ ಬದಿಯಲ್ಲಿ ಕುರ್ಚಿಗಳನ್ನು ಹಾಕಿ, ಇನ್ನೊಂದು ಬದಿಯನ್ನು ಖಾಲಿ ಬಿಡುವುದನ್ನು ಎಲ್ಲಾದರೂ ಕಂಡಿದ್ದೀರಾ? ಆ ತರಹ ಇದೆ ಎಂದಾದರೆ ಅದೇನೋ ಲೋಪದಂತೆ, ಏನೋ ತಪ್ಪಿದಂತೆ ಕಾಣುತ್ತದೆ. ಯಾಕಪ್ಪಾ ಹೀಗೆ ಮಾಡಿದ್ದಾರೆ ಅಂತ ಅನಿಸುತ್ತದೆ. ಈ ನನ್ನ ಲೇಖನದ ಸಾಲುಗಳ ನಡುವಿನ ಅಂತರ, ಪುಟದ ಉದ್ದ, ಅಗಲ, ಎತ್ತರಗಳಲ್ಲಿಯೂ ಸಾಮ್ಯತೆ ಇದ್ದರೆ ಚಂದ ಕಾಣುತ್ತದೆ. ಅಲ್ವೇ?

ಒಟ್ಟಿನಲ್ಲಿ ಈ ಸಾದೃಶ್ಯತೆ, ಸಮರೂಪತೆ, ಪರಸ್ಪರಾನುರೂಪತೆ ಜಗದ ಅಚ್ಚರಿಯೇ ಹೌದು. ವ್ಯವಸ್ಥಿತ ರೀತಿ, ಶಿಸ್ತಿನ ಪಾಠವನ್ನು ನಮಗೆ ಅರಿವಿಲ್ಲದೇ ಕಲಿಸುತ್ತದೆ. ಏನಂತೀರಾ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *