ಕಾವ್ಯ ಭಾಗವತ

ಕಾವ್ಯ ಭಾಗವತ 118 : ಇಪ್ಪತ್ತನಾಲ್ಕು ಗುರುಗಳು – 3

Share Button

ಏಕಾದಶ ಸ್ಕಂದ – ಅಧ್ಯಾಯ – 2
ಇಪ್ಪತ್ತನಾಲ್ಕು ಗುರುಗಳು – 3

17. ಪಿಂಗಳೆ – ವೇಶ್ಯೆ, ತನಗೆ ಅಧಿಕಾಧಿಕ
ದ್ರವ್ಯಕೊಡುವ ವಿಟನ ಹುಡುಕಾಟದಲಿ
ಸೋತು ಬಸವಳಿದು ನಿರಾಶೆಯಿಂದಿರೆ
ತನ್ನ ಹೃದಯದಲ್ಲಿರ್ಪ ರಮಣನ ಇರುವಿಕೆಯ
ಅರಿವಾಗೆ ಭಗವಂತನೊಡನೆ ಮಾತ್ರವೇ ರಮಿಸಿ
ಸುಖಪಡುವೆನೆಂದು ನಿಶ್ಚಯಿಸಿ ನಿಶ್ಚಿಂತಳಾದುದ ಕಂಡು
ಆಸೆಯೇ ಮಹಾ ದುಖಃ ಹೇತುವು
ನಿರಾಸೆಯೇ ಮರಮ ಸುಖವು ಎಂಬುದು ತಿಳಿದೆ

18. ಕುರುರ ಪಕ್ಷಿ – ಕುರುರ ಪಕ್ಷಿಯೊಂದು
ಚಿಕ್ಕಮಾಂಸದ ತುಂಡೊಂದ ಬಾಯಲ್ಲಿ ಕಚ್ಚಿ ಹಿಡಿದು
ಇತರ ಪಕ್ಷಿಗಳಿಗೆ ಭಯಪಡುತ್ತ ನಿಶ್ಚಿಂತೆಯಲಿ
ತಿನ್ನಲೂ ತಿಳಿಯಲಾರದೆ ದಕ್ಕಿಸಿಕೊಳ್ಳಲೂ
ಆಗದೆ ಕಂಪಿಸುತ್ತಿರೆ
ಗಿಡುಗವೊಂದು ಹಾರಿಬಂದು ಮಾಂಸದ ತುಂಡ ಅಪಹರಿಸೆ
ಕುರುವ ಪಕ್ಷಿಯ ಚಿಂತೆ ಭಯ ದೂರವಾಗೆ
ಒಂದು ವಸ್ತು ನಮ್ಮದೆಂಬ ಅಭಿಮಾನವಿರೆ
ಭಯ ಕಾಡುವುದು, ಅಭಿಮಾನ ಬಿಡೆ
ಭಯವಿಲ್ಲವೆಂಬದರಿತೆ ಕುರುರಪಕ್ಷಿಯಿಂ

19. ಹಸುಗೂಸು – ಸಣ್ಣಮಗುವಿನಿಂದ ಮಾನಾವಮಾನಗಳ
ವಿಷಯದಿ ನಿರ್ಲಕ್ಷವ ಕಲಿತೆ
ಆತ್ಮಧ್ಯಾನದಿ ಸದಾ ಪರಮಾತ್ಮನ
ಸಾಕ್ಷಾತ್ಕರಿಸಿಕೊಳ್ಳಬಲ್ಲ ಯೋಗಿ
ಈ ಯೋಗಿ, ಈ ಸಣ್ಣಮಗುವಕಂಡು
ಸದಾ ಪರಮಾನಂದದಿರುವುದವರಿಂದ ಕಲಿತೆ

20. ಕುಮಾರಿ ತನ್ನ ನೋಡಲು ಬಂದ ವರನಿಗೆ
ಆತಿಥ್ಯಮಾಡಲು ಒಳಮನೆಯಲಿ
ಭತ್ತವ ಕುಟ್ಟಲು ಕೈಬಳೆಗಳ ಸದ್ದನಡಗಿಸಲು
ಒಂದೊಂದೇ ಬಳೆಯ ತೊಟ್ಟು ಅಕ್ಕಿಯ ಸಿದ್ಧಪಡಿಸಿ
ಆತಿಥ್ಯಮಾಡಿ ತನ್ನ ಬಡತನ ತಿಳಿಯಲಾರದಂತೆ
ಮಾಡಿದ ಪರಿಯಲಿ, ಯೋಗಿಯು ಕುಮಾರಿಯ ಕೈಕಡಗದಂತೆ
ಏಕಾಂಗಿಯಾಗಿ ಅನುಪಯುಕ್ತ ಮಾತಲಿ ವಿನಾಕಾರಣ
ಕಲಹಕೆ ಆಸ್ಪದವಿಲ್ಲದಿರೆ ಯೋಗಸಿದ್ದಿಸುವುದು

21. ಬಾಣಗಾರನು ಬಾಣದ ಅಲಗಿಗೆ ಹದನೀಡಿ
ಹರಿತ ಮಾಡುವಾಗ ಏಕಾಗ್ರತೆಯಲ್ಲಿರುವ ಪರಿ
ಮನುಜನು ವೈರಾಗ್ಯವನು ಪಡೆದು
ಆಸನ ಜಯ, ಶ್ವಾಸ ಜಯವ ಸಾಧಿಸಿ
ಭಗವಂತನಲಿ ಮನವ ನೆಲೆಗೊಳಿಸಿ
ರಜಸ್ತಮೋಗುಣಗಳಡಗಿ ಸತ್ವಗುಣ ತಲೆಯೆತ್ತಿ
ಭಗವಂತನಲಿ ಲೀನವಾಗುವುದ
ಬಾಣಗಾರನಿಂದ ಕಲಿತೆ

22. ಹಾವು ಗೆದ್ದಲುಗಳು ಕಟ್ಟಿದ ಮನೆಯಲಿ ವಾಸಿಸಿ
ಕಾಲಯಾಪನೆ ಮಾಡ್ಪ ತೆರದಿ
ಯೋಗಿಯು ಏಕಾಂಗಿಯಾಗಿ ಮಿತಭಾಷಿಯಾಗಿ
ಇತರ ಗೃಹಸ್ಥರ ಗೃಹದಲಿ ಕಾಲಯಾಪನೆ
ಮಾಬೇಕೆಂಬುದ ಸರ್ಪದಿಂ ಕಲಿತೆ

23. ಜೇಡರ ಹುಳು ತನ್ನ ನಾಭಿಯಲೇ ದಾರವ ನಿರ್ಮಿಸಿ
ಗೂಡಕಟ್ಟಿ ಕೊನೆಗೆ ನೂಲನ್ನು ತನ್ನಲ್ಲೇ ಅಡಗಿಸಿಟ್ಟ ಪರಿ
ಪರಮಾತ್ಮ ತನ್ನ ಮಾಯೆಯಲಿ ಮಹತತ್ವವ ಸೃಷ್ಟಿಸಿ
ಸತ್ಯ ರಜಸ್ಥಮೋಗುಣಗಳ ಉಪಕರಣಗಳಾಗಿ ಸ್ವೀಕರಿಸಿ
ಈ ಜಗವ ನಿರ್ಮಿಸಿ ಕೊನೆಯಲಿ ಕಾಲರೂಪಿಯಾಗಿ
ಸಕಲವ ತನ್ನಲ್ಲೇ ಅಡಗಿಸಿಕೊಳ್ಳುವುದ
ಜೇಡರಹುಳುವಿನಿಂದರಿತೆ

24. ಕಣಜದ ಹುಳು ತನ್ನ ಆಧಾರಕೆ ಬೇರೊಂದು
ಹಸಿರು ಹುಳವ ತಂದದಕೆ ಆಹಾರ ನೀಡುತ
ಕೊಂಡಿಯಿಂದ ಚುಚ್ಚುತಿರೆ
ಹಸಿರು ಕೀಟ ಭೀತಿಯಲಿ
ಸದಾ ಕಣಜವ ಧ್ಯಾನಿಸುತ್ತಿರೆ
ಕೊನೆಗದೂ ಕಣಜವಾಗುವ ಪರಿ
ಮನುಜ ಭಯದಿಂದಾಗಲೀ, ದ್ವೇಷದಿಂದಾಗಲೀ
ಸ್ನೇಹದಿಂದಾಗಲೀ ಭಗವಂತನ ದಿವ್ಯರೂಪ
ದಿವ್ಯನಾಮಗಳಲ್ಲಿ ನಿರತನಾಗಿರೆ
ಭಗವಸ್ಸಾನಿಧ್ಯವ ಪಡೆವನೆಂಬುದ
ಕಣಜದ ಹುಳುವಿನಿಂದ ಕಲಿತೆ

ಈ ಇಪ್ಪತ್ತನಾಲ್ಕು ಗುರುಗಳಲ್ಲದೆ
ಈ ಮನುಜ ದೇಹದಿಂದಲೂ
ಕಲಿತುದು ಅಪಾರ

ದೇಹಕ್ಕೆ ಹೇಗೆ ಉತ್ಪತ್ತಿಯುಂಟೋ
ವಿನಾಶವೂ ಉಂಟು
ವಿಷಯ ವೈರಾಗ್ಯ ತತ್ವಜ್ಞಾನವ ನೀಡ್ಪ
ದೇಹವ ಅಲಕ್ಷಿಸದೆ ಮರಣಾನಂತರ
ನಾಯಿ ನರಿ ಕೀಟಗಳಿಗೆ ಆಹಾರವಾಗುವ
ದೇಹದ ಬಗ್ಗೆ ಅಭಿಮಾನವೂ ಬೇಡ
ದೇಹ ತ್ಯಜಿಸಿ ಕರ್ಮ ಬೀಜಗಳ ಹಿಂದೆ ಬಿಟ್ಟು
ಸೃಷ್ಟಿನಿಯಮದಲಿ ಮರಗಿಡ ಕ್ರಿಮಿಕೀಟ
ಪಶುಪಕ್ಷಿಗಳಾಗಿ ದೇಹಗಳ ಪಡೆದು
ಬಹುಜನ್ಮದ ಪುಣ್ಯದಿಂ ಪಡೆವ ಮಾನವ ಜನ್ಮದಿ
ವಿಷಯ ಸುಖಕೆ ಬಲಿಯಾಗಿ ಮುಕ್ತಿ ಸಾಧನೆಗಡ್ಡಿಯಾಗಿರೆ
ಅನೇಕ ವಿಧದಿ ವೈರಾಗ್ಯ ಸಾಧಿಸಿ ಜ್ಞಾನ ದೃಷ್ಟಿಯ ಗಳಿಸಿ
ಆತ್ಮಸ್ವರೂಪವ ಸಾಕ್ಷಾತ್ಕರಿಸಿ ಅಹಂಕಾರ ಮಮಕಾರಗಳ
ಹುಟ್ಟಡಗಿಸಿ ಜ್ಞಾನರತ್ನವ ಸಂಗ್ರಹಿಸಿ ಸಮಚಿತ್ತನಾಗಿ
ಅಂತ್ಯದಲಿ ಮುಕ್ತಿಯ ಪಡೆವುದೇ ಈ ಜನುಮದುದ್ದೇಶ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=46083

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *