ಬಾಲ್ಯದ ದಸರಾ ದಿನಗಳು ಎಂದೆಂದಿಗೂ ಮನಸ್ಸಿಗೆ ಮುದ ನೀಡುವ ಮರೆಯಲಾಗದ ಸುಂದರ ನೆನಪುಗಳು ಅಂದರೆ ಖಂಡಿತಾ ತಪ್ಪಾಗಲಾರದು. ಎಪ್ಪತ್ತು, ಎಂಬತ್ತರ ದಶಕದಲ್ಲಿ ದಸರಾ ಹಬ್ಬದ ಸಂಭ್ರಮವೇ ವಿಭಿನ್ನವಾಗಿತ್ತು. ಪರೀಕ್ಷೆಗಳು ಮುಗಿದು, ನಮಗೆಲ್ಲಾ ಸುಮಾರು ಒಂದು ತಿಂಗಳುಗಳ ಕಾಲ ದಸರಾ ರಜಾ ದೊರಕುತ್ತಿತ್ತು. ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ದೂರದರ್ಶನ, ಮೊಬೈಲ್ ಇಲ್ಲದ ಆ ಕಾಲದಲ್ಲಿ ರಜಾದಿನಗಳು ನಮ್ಮ ಪಾಲಿನ ಸ್ವರ್ಗವಾಗಿತ್ತು. ಎಲ್ಲಾ ಹಬ್ಬಗಳನ್ನು ಆಚರಿಸುವ ನಮಗೆ, ದಸರಾ ಒಂದು ವಿಶೇಷ ಹಬ್ಬವಾಗಿತ್ತು. ಆಗ ನಮ್ಮ ಮನೆಯ ಸುತ್ತಮುತ್ತ ಎಲ್ಲಾ ಜಾತಿಯವರೂ ಇದ್ದರು. ಯಾರಲ್ಲೂ ಭೇದ -ಭಾವ ಇರಲಿಲ್ಲ. ಯಾವುದೇ ಹಬ್ಬವಿರಲಿ, ಕುಣಿದು, ಕುಪ್ಪಳಿಸುತ್ತಿದ್ದೆವು. ಅದರಲ್ಲೂ ದಸರಾ ಹಬ್ಬವನ್ನು ನಾವೆಲ್ಲರೂ ಕುತೂಹಲ, ಸಂತೋಷ ಹಾಗೂ ಉತ್ಸಾಹದಿಂದಲೇ ಎದುರು ನೋಡುತ್ತಿದ್ದೆವು.
ದಸರಾ ಶುರುವಾದ ಕೂಡಲೇ ಹೊಸ ಬಟ್ಟೆ ಖರೀದಿಸುತ್ತಿದ್ದೆವು. ದೇವಸ್ಥಾನಗಳಿಗೆ ಭೇಟಿ, ಸ್ನೇಹಿತರೊಂದಿಗೆ ದಿನಾ ಸಾಯಂಕಾಲ ವಿವಿಧ ರೀತಿಯ ಮನೋರಂಜನೆಗಳನ್ನು ನೋಡಲು ಹೋಗುತ್ತಿದ್ದೆವು. ದಸರಾ ಹಬ್ಬದಂದು ಮನೆಯ ಹಿರಿಯರು ಮಕ್ಕಳಿಗೆಲ್ಲಾ ಹಣ ಕೊಡುವ ಸಂಪ್ರದಾಯ ಇತ್ತು. ಜಾತ್ರೆಗೆ ಹೋಗಿ ನಮಗೆ ಬೇಕಾದ ಆಟಿಕೆ ಖರೀದಿಸಿ, ತಂಟೆಗುಳ್ಳ, ಸುಕುನುಂಡೆ, ಸೋಜಿ, ಚರ್ಮುರಿ, ಹೀಗೆ ಬೇಕಾಬಿಟ್ಟಿ ತಿಂಡಿ ತಿನ್ನುತ್ತಿದ್ದೆವು. ಆಗಿನ ಕಾಲದಲ್ಲಿ ಬರುವ ತರಹಾವಾರಿ ವೇಷಗಳನ್ನು ನೋಡುವ ಸಡಗರವೇ ವಿಶೇಷ ರೀತಿಯದಾಗಿತ್ತು. ಆ ದಿನಗಳಲ್ಲಿ ದಸರಾ ಹಬ್ಬದ ವೇಳೆ ಯಾವುದೇ ರೀತಿಯ ವೇಷಧಾರಣೆಗೆ ನಿರ್ಬಂಧ ಇರಲಿಲ್ಲ. ಮಕ್ಕಳು, ಯುವಕರು, ಹಿರಿಯರು- ಎಲ್ಲರೂ ತಮಗೆ ಬೇಕಾದ ಇಷ್ಟಪಟ್ಟ ವೇಷ ಹಾಕುತ್ತಿದ್ದರು. ಬೊಂಬೆ ವೇಷ, ಹಾಲಿನ ವೇಷ, ದೇವರ ವೇಷ, ಪೌರಾಣಿಕ ಪಾತ್ರ, ಕೊರಗರ ವೇಷ, ಜೋಕರ್, ನಾರದ ವೇಷ, ಅನಾರ್ಕಲಿ, ಸಿರಿವೇಷ, ಭೂತ ವೇಷ, ಕರಡಿ, ಹುಲಿ ಹೀಗೆ ಭಿನ್ನ ಭಿನ್ನ ವೇಷಧಾರಣೆ ಮಾಡಿ ಜನರನ್ನು ಮನರಂಜಿಸುತ್ತಿದ್ದರು. ಮನೆಮನೆಗಳಲ್ಲಿ, ಬೀದಿಬೀದಿಗಳಲ್ಲಿ ಈ ವೇಷಗಳು ವಿಶೇಷ ಆಕರ್ಷಣೆಯಾಗಿದ್ದವು. ವೇಷಧಾರರಿಗೆ ಇದ್ದ ಸ್ವಾತಂತ್ರ್ಯವು ಹಬ್ಬದ ಸಡಗರವನ್ನು ಇನ್ನಷ್ಟು ಆಕರ್ಷಕವಾಗಿಯೂ, ಜೀವಂತವಾಗಿಯೂ ಇರಿಸುತ್ತಿತ್ತು. ನಾವೆಲ್ಲಾ ಮಕ್ಕಳು ಹುಲಿ, ಕರಡಿಯ ಬ್ಯಾಂಡ್ನ ಶಬ್ಧ ಕೇಳಿದೊಡನೆಯೇ ಮನೆಯೊಳಗಿನಿಂದ ಓಡಿ ಬರುತ್ತಿದ್ದೆವು. ಪ್ರತಿಮನೆಗಳಿಗೂ ಆ ವೇಷಗಳ ಹಿಂದೆ ಗುಂಪಾಗಿ ಹೋಗುತ್ತಿದ್ದೆವು. ಕೊನೆಗೆ ನಮ್ಮ ಮನೆಗೂ ಕರೆದುಕೊಂದು ಬಂದು ಮನೆಯವರ ಬೈಗುಳಕ್ಕೆ ಗುರಿಯಾಗುತ್ತಿದ್ದೆವು. ಅಂದಿನ ದಸರಾ ವೇಷಗಳ ಗೆಜ್ಜೆಯ ನಾದ, ಪೈಂಟ್ ವಾಸನೆ, ರಾಕ್ಷಸನ ಅಬ್ಬರ ಇಂದಿಗೂ ಮರೆಯಲಸಾಧ್ಯ. ನವರಾತ್ರಿಯಂದು ಮತ್ತು ವಿಜಯದಶಮಿಯಂದು ನಡೆಯುವ ರಥೋತ್ಸವದಲ್ಲಿ ಎಲ್ಲರೂ ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತಿದ್ದರು. ದಸರಾ ಪ್ರತಿಯೋರ್ವ ನಾಗರಿಕನ ಹಬ್ಬವಾಗಿತ್ತು. ದಸರಾ ಹಬ್ಬವು ಬರೀ ದೇವರ ಆರಾಧನೆಯಾಗಿರದೆ, ಬಂಧುಗಳು, ಸ್ನೇಹಿತರು, ನೆರೆಹೊರೆಯವರು ಎಲ್ಲರೂ ಒಂದೆಡೆ ಸೇರಿ ಸಂತೋಷವನ್ನು ಹಂಚಿಕೊಳ್ಳುವ ಸುಸಂದರ್ಭವೂ ಆಗಿತ್ತು. ಆಗ ಹೆಚ್ಚಿನ ಸೌಲಭ್ಯಗಳು ಇರಲಿಲ್ಲವಾದರೂ, ಇದ್ದದ್ದರಲ್ಲಿಯೇ ಖುಷಿಪಡುವ ಮನೋಭಾವವಿತ್ತು.
ಕಾಲ ಬದಲಾದಂತೆ ದಸರಾ ಹಬ್ಬದ ಸ್ವರೂಪವೇ ಬದಲಾಯಿತು. ಅಂದಿನ ದಸರಾಕ್ಕೂ ಇಂದಿನ ದಸರಾಕ್ಕೂ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದು. ಇಂದು ಬಹು ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ದಸರಾ ಹಬ್ಬ ಬರುವ ಮೊದಲೇ ಇಡೀ ನಗರವನ್ನೇ ಬಗೆಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಬೃಹತ್ ಕಟ್ಔಟ್ಗಳು, ಬಣ್ಣ ಬಣ್ಣದ ದೀಪಾಲಂಕಾರಗಳು, ತಳಿರು ತೋರಣಗಳಿಂದ ರಸ್ತೆಗಳು ಕಂಗೊಳಿಸುವುದನ್ನು ಕಾಣಬಹುದು. ಆಧುನಿಕ ತಂತ್ರಜ್ಞಾನದೊಂದಿಗೆ ಇಂದಿನ ದಸರಾ ಹಬ್ಬದ ವೈಭವವೇ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಈಗ ನಾವು ನೋಡುವ ಭವ್ಯ ಅಲಂಕಾರಗಳೊಂದಿಗೆ ಕಂಗೊಳಿಸುವ ದೇವಾಲಯಗಳು, ಬಗೆಬಗೆಯ ತಂಡದವರು ನಡೆಸಿಕೊಡುವ ಹುಲಿವೇಷದ ಊದುಪೂಜೆಯ ಅಬ್ಬರ, ನಾಡಿನ ಮೂಲೆಮೂಲೆಯಿಂದ ಆಗಮಿಸುವ ಭಕ್ತಿಯಿಂದ ತುಂಬಿದ ಜನಸಾಗರ, ನೋಡಲು ಎರಡು ಕಣ್ಣುಗಳೇ ಸಾಲದಂತಿರುವ ಭವ್ಯ ಶೋಭಾಯಾತ್ರೆಯ ಸೊಗಸು, ವಿವಿಧ ನಮೂನೆಯ ಟ್ಯಾಬ್ಲೋಗಳು, ದಿನವಿಡೀ ಜರಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಹಬ್ಬಕ್ಕೆ ಹೊಸ ಆಯಾಮವನ್ನೇ ನೀಡಿದೆ.
ಇಂದು ದಸರಾ ಹಬ್ಬದ ಸಂದರ್ಭದಲ್ಲಿ ಹಿಂದಿನಂತೆ ಎಲ್ಲರೂ ತಮ್ಮ ಇಷ್ಟದ ವೇಷ ಧರಿಸುವ ಸ್ವಾತಂತ್ರ್ಯ ಇಲ್ಲ. ಕೆಲವೊಂದು ನಿಯಮಗಳು ಹಾಗೂ ನಿರ್ಬಂಧಗಳ ಕಾರಣದಿಂದಾಗಿ ವೇಷಗಳ ಸಂಖ್ಯೆ ಕಡಿಮೆಯಾಗುವುದನ್ನು ಕಾಣಬಹುದು. ಸಾಮಾಜಿಕ ನಿಯಮಗಳಿಂದಾಗಿ ಈ ಸಂಪ್ರದಾಯ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆದರೆ ಹುಲಿವೇಷ, ಸ್ತೀ ವೇಷ, ಕರಡಿ ಕುಣಿತ, ಯಕ್ಷಗಾನ ಪಾತ್ರಧಾರಿ ಇನ್ನಿತರ ವೇಷಗಳನ್ನು ಕಾಣಬಹುದು. ದಸರಾ ಹಬ್ಬದ ಪ್ರಮುಖ ಆಕರ್ಷಣೆಯೇ ಹುಲಿಕುಣಿತ. ಇದು ನಮ್ಮ ಸಂಸ್ಕೃತಿಯ ವೈಶಿಷ್ಟವನ್ನು ತೋರಿಸುವುದರ ಜೊತೆಗೆ, ಹಬ್ಬದ ಸಂಭ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ನುರಿತ ಕಲಾವಿದರು, ಯುವಕರು ಹುಲಿ ವೇಷ ಧರಿಸಿ, ಆಯ್ದ ಕಡೆಗಳಲ್ಲಿ ಮಾತ್ರವೇ ಕುಣಿಯುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಹುಲಿ ವೇಷ ಸ್ಪರ್ಧೆ ಏರ್ಪಡಿಸುತ್ತಾರೆ. ಮಹಿಳಾ ಹುಲಿವೇಷಧಾರಣೆಯೂ ವಿಶೇಷ ಆಕರ್ಷಣೆ. ಈ ಕಲೆಯು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಸಂಸ್ಕೃತಿಯ ಪರಂಪರೆಯನ್ನು ಉಳಿಸುವ ಸಾಧನವಾಗಿದೆ.
ಬದಲಾವಣೆ ಅನಿವಾರ್ಯ. ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಒಂದು ಕಾಲದಲ್ಲಿ ಸರಳತೆಯ ಪ್ರತೀಕವಾಗಿದ್ದ ಈ ಹಬ್ಬವು, ಇಂದು ಅದ್ದೂರಿ, ಅದ್ಭುತ, ವೈಭವದಿಂದ ಕೂಡಿದ ಹಬ್ಬವಾಗಿದ್ದು, ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಈ ಬದಲಾವಣೆಗಳ ನಡುವೆಯೂ ದಸರಾ ಹಬ್ಬದ ಮೂಲ ಸಂದೇಶವಾದ ಧರ್ಮದ ವಿಜಯ, ಭಕ್ತಿ, ನಂಬಿಕೆ, ಸಾಂಸ್ಕೃತಿಕ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಉಳಿಸಿಕೊಂಡಿದ್ದು, ಸಮಾಜದ ಏಕತೆ ಹಾಗೂ ಸಂಸ್ಕೃತಿಯ ಮಹತ್ವವನ್ನು ಸಾರುತ್ತದೆ. ಒಟ್ಟಿನಲ್ಲಿ ಬಾಲ್ಯದ ದಸರಾದ ಸರಳ ಸಂಭ್ರಮವು ನಮ್ಮ ಮನಸ್ಸಿನಲ್ಲಿ ಸುಪ್ತವಾಗಿದ್ದು, ಗತಕಾಲದ ಮಧುರ ಕ್ಷಣಗಳನ್ನು ನೆನಪಿಗೆ ತರುತ್ತಲೇ ಇರುತ್ತವೆ. ಇಂದಿನ ದಸರಾ ಹಬ್ಬವು ತನ್ನ ವೈಭವ, ಭವ್ಯತೆ ಹಾಗೂ ಅದ್ದೂರಿಯಿಂದ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದು, ನೋಡುಗರ ಕಣ್ಮನಗಳನ್ನು ಸೆಳೆಯುತ್ತಾ, ಬೆರಗನ್ನು ಹುಟ್ಟಿಸುವ ಸುಂದರ ನೆನಪುಗಳಾಗಿವೆ. ಪ್ರತಿವರ್ಷ ದಸರಾ ಹಬ್ಬ ಬರುವಾಗ, ಬಾಲ್ಯದ ನೆನಪುಗಳೂ ಜೀವಂತವಾಗಿ ಮನಸ್ಸಿಗೆ ಸಿಹಿ ಸ್ಪರ್ಶ ನೀಡುತ್ತವೆ.

ಶೈಲಾರಾಣಿ ಬೋಳಾರ್, ಮಂಗಳೂರು

