(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾರತದ ಕೊನೆಯ ಹಳ್ಳಿ ಚಿತ್ಕುಲ್.
07/08/2026 ರ ಮುಂಜಾನೆ ‘ಸಾಂಗ್ಲಾ’ದಲ್ಲಿ ತೆಳುವಾಗಿ ಮಂಜು ಕವಿದಿತ್ತು. ನಾವು ಕೆಲವರು ಅಕ್ಕಪಕ್ಕದ ದಾರಿಗಳಲ್ಲಿ ವಾಕಿಂಗ್ ಮಾಡೋಣ ಎಂದು ಹೊರಟೆವಾದರೂ, ಇದು ಟಿಬೆಟ್ ಗಡಿ ಪ್ರದೇಶ, ಇಲ್ಲಿ ಒಬ್ಬೊಬ್ಬರೇ ವಾಯುವಿಹಾರ ಮಾಡುವುದು ಸುರಕ್ಷಿತವಲ್ಲ ಎಂದು ಹೋಟೆಲಿನ ಸಿಬ್ಬಂದಿ ತಿಳಿಸಿದರು. ಬೆಳಗಿನ ಉಪಾಹಾರಕ್ಕೆ ಪೋಹಾ, ಬ್ರೆಡ್ ಸಾಂಡ್ವಿಚ್, ಆಲೂ ಪರೋಟ, ಬಾಳೆಹಣ್ಣು ಇದ್ದುವು. ಉಪಾಹಾರದ ನಂತರ ‘ಸಾಂಗ್ಲಾ’ದಿಂದ ಅಂದಾಜು 22 ಕಿಮೀ ದೂರದಲ್ಲಿ , ಟಿಬೆಟ್ ಭಾರತದ ಗಡಿಯಲ್ಲಿರುವ ‘ಚಿತ್ಕುಲಾ’ದ ಕಡೆಗೆ ಹೊರಟೆವು. ಈ ದಾರಿಯುದ್ದಕ್ಕೂ ‘ಬಸ್ಪಾ’ ನದಿ ಕಾಣಸಿಗುತ್ತದೆ. ಹಿಮಾಲಯದ ಬಹುತೇಕ ನದಿಗಳಂತೆ ಈ ನದಿಯ ನೀರು ಕೂಡಾ ಸ್ವಲ್ಪ ಬೂದು/ಕಪ್ಪು ಮಿಶ್ರಿತ ಬಣ್ಣದಲ್ಲಿ ಕಾಣಿಸುತ್ತಿತ್ತು.
ಈ ಭಾಗದಲ್ಲಿ, ಸಮುದ್ರ ಮಟ್ಟದಿಂದ 11230 ಅಡಿ ಎತ್ತರದಲ್ಲಿ, ಜನವಸತಿಯುಳ್ಳ ಭಾರತದ ಕೊನೆಯ ಹಳ್ಳಿ ಚಿತ್ಕುಲ್. ಇಲ್ಲಿ ಸುಮಾರು 70-100 ಮನೆಗಳಿವೆಯಂತೆ. ವರ್ಷದ 6 ತಿಂಗಳು ಇಲ್ಲಿ ಅತಿಯಾದ ಚಳಿ ಇರುವುದರಿಂದ ಜನರು ಶಿಮ್ಲಾದ ಕಡೆ ಹೋಗುತ್ತಾರಂತೆ. ಇಲ್ಲಿಯ ಜನರು ‘ಕಿನ್ನೌರಿ’ ಎಂಬ ಸಮುದಾಯದವರು. ಸ್ಥಳೀಯ ಜನರು ಧರಿಸುವ ಹಸಿರು/ನೇರಳೆ ಬಣ್ಣದ ಸ್ಥಳೀಯ ‘ಕಿನ್ನೌರಿ ಟೋಪಿ’ ಸೊಗಸಾಗಿತ್ತು. ಕೃಷಿ, ಹೈನುಗಾರಿಕೆ ಮತ್ತು ಇತ್ತೀಚೆಗೆ ಪ್ರವಾಸೋದ್ಯಮ ಸ್ಥಳೀಯರ ಆದಾಯದ ಮೂಲ. ಇವರು ಭಾರತೀಯ ಮತ್ತು ಟಿಬೆಟ್ ನ ಮಿಶ್ರ ಸಂಸ್ಕೃತಿಯನ್ನು ಪಾಲಿಸುತ್ತಾರೆ. ಕಲ್ಲು ಚಪ್ಪಡಿಗಳನ್ನು ಹೊದಿಸಿದ ಪುಟ್ಟ ಮನೆಗಳು, ಚಿಕ್ಕದಾದ ಗಲ್ಲಿಗಳು, ನಾಲ್ಕಾರು ಸಣ್ಣ ಅಂಗಡಿಗಳು, ಒಂದು ಅರಣ್ಯ ಇಲಾಖೆಯ ಕಛೇರಿ, ಒಂದು ಪೋಸ್ಟ್ ಆಫೀಸ್, ‘ಮತಿ ಮಾತಾ ಮಂದಿರ್ ಅಥವಾ ಚಿತ್ಕುಲ್ ಮಾತಾ ಮಂದಿರ್’ , ‘ಕಗ್ಯುಪ್ ಮೊನಾಸ್ಟ್ರಿ’, ಆಗಾಗ ಬಂದು ಹೋಗುವ ಸೇನಾ ವಾಹನಗಳು, ಪಕ್ಕದಲ್ಲಿ ನಿರ್ಲಿಪ್ತವಾಗಿ ಹರಿಯುವ ಬಸ್ಪಾ ನದಿ….. ನಗರಜೀವನದ ಯಾವುದೇ ಧಾವಂತ ಇಲ್ಲಿ ಇರಲಿಲ್ಲ. ಅದೇಕೋ, ಆ ನೆಲದಲ್ಲಿ ಕಾಲಿಟ್ಟ ನಾವೂ, ಸ್ಥಳ ಮಹಿಮೆ ಎಂಬಂತೆ ಕಾಲದ ಪರಿವೆಯಿಲ್ಲದೆ ನಿಧಾನವಾಗಿ , ನಿರುದ್ವಿಗ್ನವಾಗಿ ಹಳ್ಳಿಯಲ್ಲಿ ಸುತ್ತಾಡಿದೆವು. ನದೀ ತೀರಕ್ಕೆ ನಡೆದುಕೊಂಡು ಹೋದೆವು. ಅಂಗಡಿಯೊಂದರಲ್ಲಿ ಕಾಣಸಿಕ್ಕಿದ ಒಂದಿಬ್ಬರು ಗಡಿ ಭದ್ರತಾ ಯೋಧರ ಬಳಿ ಮಾತನಾಡಿದೆವು. ಅವರಲ್ಲಿ ಒಬ್ಬರು ಬೆಳಗಾವಿಯ ಕನ್ನಡಿಗರು, ಬಹಳ ಸಂತೋಷದಿಂದ ಕನ್ನಡದಲ್ಲಿ ಮಾತನಾಡಿದರು.
ಹಿಂತಿರುಗಿ ಬರುವಾಗ ದಾರಿಯಲ್ಲಿ ಸಿಕ್ಕಿದ ಚಹಾ/ಕಾಫಿ ಸೇವನೆಗಾಗಿ ಡಾಬಾವೊಂದರ ಮುಂದೆ ನಮ್ಮ ವಾಹನಗಳನ್ನು ನಿಲ್ಲಿಸಿದರು. ನಮ್ಮ ತಂಡದ ಬಹುಮುಖ ಪ್ರತಿಭೆ ಅಲ್ಲಿ ಅನಾವರಣಗೊಂಡಿತು. ಡಾ.ಪ್ರಹ್ಲಾದ ರಾವ್, ಶ್ರೀಮತಿ ಹೀರಾ ಜಯತೀರ್ಥ, ಶ್ರೀಮತಿ ಪಾವನಿ… …ಮೊದಲಾದವರು ಸುಶ್ರ್ಯಾವ್ಯವಾಗಿ ಹಾಡಿದರು. ಇವರ ಹಾಡಿಗೆ ತಂಡದ ಕೆಲವರ ನರ್ತನ ಸಾಥ್ ಕೊಟ್ಟಿತು. ಗಣೇಶ್ಗ ಗಟ್ಟಿಯವರ ನೇತೃತ್ವದಲ್ಲಿ ಕರಾವಳಿಯ ‘ಹುಲಿ ನೃತ್ಯ’ವೂ ರಂಗೇರಿತು. ಹತ್ತು ನಿಮಿಷದ ಹಾಡುಗಾರಿಕೆ ಎಂದು ಆರಂಭವಾದ ಈ ಕಾರ್ಯಕ್ರಮ, ಸುಮಾರು ಒಂದು ಗಂಟೆಗೂ ಮುಂದುವರಿಯಿತು. ಅಲ್ಲಿಯ ಹೋಟೆಲ್ ನ ಮಾಲೀಕ ಹಾಗೂ ಸಿಬ್ಬಂದಿಯವರೂ ದಿಢೀರೆಂದು ರೂಪಿತವಾದ ಈ ಸಂಗೀತ -ನರ್ತನ ಕಾರ್ಯಕ್ರಮವನ್ನು ಬಹುವಾಗಿ ಆನಂದಿಸಿ, ವೀಡಿಯೋ ಮಾಡುತ್ತಿದ್ದರು.
‘ಪಿಂಕ್ ಆದವೋ ..ಓಗ್ಲಾ ಪಿಂಕ್ ಆದವೋ….’
‘ರಾಕ್ ಚಮ್’ (Rakccham) ಎಂಬ ಸ್ಥಳದಲ್ಲಿದ್ದ, ಆ ಕಾಫಿ ಶಾಪ್ ನ ಆಸುಪಾಸಿನಲ್ಲಿರುವ ಹೊಲಗಳಲ್ಲಿ , ತಿಳಿಗುಲಾಬಿ ಬಣ್ಣದ ಹೂಗಳಿದ್ದ ಪುಟ್ಟ ಸಸಿಗಳು ಕಂಗೊಳಿಸುತ್ತಿದ್ದುವು. ಇದು ಯಾವ ಬೆಳೆ ಎಂದು ಕೇಳಿದಾಗ ಸ್ಥಳೀಯ ಭಾಷೆಯಲ್ಲಿ ಓಗ್ಲಾ ಎಂದು ಕರೆಯಲ್ಪಡುವ ಒಂದು ವಿಧದ ಧಾನ್ಯ ಎಂದು ಗೊತ್ತಾಯಿತು. ಇಂಗ್ಲಿಷ್ ನಲ್ಲಿ ಬಕ್ ವೀಟ್ (Buck Wheat) ಎಂಬ ಹೆಸರಿನ ಈ ಸಸ್ಯಗಳು ಸಾಂಗ್ಲಾ ಕಣಿವೆಯಲ್ಲಿ ಪ್ರಮುಖವಾಗಿ ಬೆಳೆಯುತ್ತದೆಯಂತೆ. ‘ಓಗ್ಲಾ’ ಸಸಿಗಳು ಆಗಸ್ಟ್ ತಿಂಗಳಲ್ಲಿ ಹೂ ಬಿಡುವುದರಿಂದ, ನಮಗೆ ಸಾಂಗ್ಲಾ ಕಣಿವೆಯ ದಾರಿಯಲ್ಲಿ ಅಲ್ಲಲ್ಲಿ ‘ಪಿಂಕ್ ‘ ಆದ ಹೊಲಗಳು ಕಾಣಿಸಿ, ನಮ್ಮ ಕಣ್ಣಿಗೆ ಮುದ ಕೊಟ್ಟವು.
ಗ್ಲುಟೀನ್ ರಹಿತವಾದ, ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಧಾನ್ಯದ ಹಿಟ್ಟಿಗೆ ‘ಕುಟ್ಟು ಕಾ ಅಟ್ಟಾ’ ಎಂದು ಕರೆಯುತ್ತಾರಂತೆ. ಇದನ್ನು ಬಳಸಿ ರೊಟ್ಟಿ, ಚಪಾತಿ, ಕೇಕ್, ಚೀಲಾ ಎಂಬ ದೋಸೆಯಂತಹ ತಿನಿಸು ಮೊದಲಾದವುಗಳನ್ನು ತಯಾರಿಸುತ್ತಾರಂತೆ. ಉತ್ತರ ಭಾರತದಲ್ಲಿ, ನವರಾತ್ರಿಯ ಸಮಯದಲ್ಲಿ ಮಹಿಳೆಯರು ಆಚರಿಸುವ ಪ್ರಮುಖ ಹಬ್ಬವಾದ ‘ಕರ್ವಾ ಚೌತ್’ ಹಬ್ಬದ ನಂತರ ಉಪವಾಸವನ್ನು ಮುಗಿಸಲು ‘ಕುಟ್ಟು ಕಾ ಅಟ್ಟಾ’ ದಿಂದ ರೊಟ್ಟಿಯನ್ನು ತಯಾರಿಸಿ ತಿನ್ನುವ ಪದ್ಧತಿ ಇರುವುದರಿಂದ ಇದಕ್ಕೆ ‘ ವ್ರತ್ ಕಾ ಅಟ್ಟಾ’ ಎಂಬ ಹೆಸರೂ ಇದೆ.
ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46068
(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು



