ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 21

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾರ್ಗವಿ ಮಗಳು ಮಾಲಿನಿಗೊಂದು ಮೆಸೇಜ್ ಹಾಕಿ ಸಿಕ್ಕಿದ ರಿಕ್ಷಾ ಹತ್ತಿ ಸುಮನಾಳ ಮನೆಯತ್ತ ಹೊರಟಳು. ಮತ್ತೆ ಮತ್ತೆ ಅವಳ ಮನಸ್ಸು ಹಿಂದಿನ ರಾತ್ರಿಯ ವಿಚಾರದತ್ತಲೇ ಸುತ್ತತೊಡಗಿತು. ಎಂಥಹ ತಪ್ಪು ಹೆಜ್ಜೆ ಇಟ್ಟುಬಿಟ್ಟಿರಿ ಸಿದ್ಧಾರ್ಥ, ಮಕ್ಕಳು ನಿಮ್ಮ ಕಣ್ಮುಂದೆ ಬರಲಿಲ್ಲವೇ? ಅವರ ಜವಾಬ್ದಾರಿಗಳು ಇನ್ನೂ ಮುಗಿದಿಲ್ಲ. ಈಗ ಪ್ರಶ್ನೆ ಕೇಳಿದವರಿಗೆ ನಾನೇನೆಂದು ಉತ್ತರಿಸಲಿ. ಜನರು ನಾನು ನನ್ನ ಕೆಲಸ ಮತ್ತು ಮಕ್ಕಳ ಕಡೆ ಗಮನ ಹರಿಸುವುದರಲ್ಲಿ ನಿಮ್ಮನ್ನು ಕಡೆಗಣಿಸಿದೆನೆಂದು ಆರೋಪಿಸುವುದಿಲ್ಲವೇ? ಹಾಗೆಂದೂ ನಾನು ನಿಮ್ಮ ಬಗ್ಗೆ ಬೇಜವಾಬ್ದಾರಿಯಿಂದ ನಡೆದೇ ಇಲ್ಲ. ಬೀಸುವ ಎಲ್ಲರ ಚಾಟಿಗೆ ನನ್ನನ್ನು ಗುರಿಯಾಗುವಂತೆ ಮಾಡಿದಿರಿ. ನಿಮ್ಮ ಆಲಸ್ಯತನ, ಬೇಕಿಲ್ಲದ ಉಸಾಬರಿ ಮೈಮೇಲೆ ಹಾಕಿಕೊಂಡು ಅಲೆದಾಡುವುದು, ಎಲ್ಲದರಲ್ಲೂ ಉಡಾಫೆತನಗಳ ಬಗ್ಗೆ ಅಸಮಾಧಾನವಿದ್ದುದು ನಿಜ. ಆದರೆ ಎಂದೂ ನಿಮ್ಮನ್ನು ಕಡೆಗಣಿಸಿರಲಿಲ್ಲ. ನಿಮ್ಮ ಅವಗುಣಗಳನ್ನು ಎಲ್ಲೂ ಯಾರಮುಂದೆಯೂ ಬಿಟ್ಟುಕೊಟ್ಟಿರಲಿಲ್ಲ. ನಿಮ್ಮ ಕಾರುಬಾರುಗಳಿಗೆಲ್ಲ ತಲೆಕೊಟ್ಟೇ ಸಹಿಸಿಕೊಂಡು ಎಲ್ಲ ಓರೆಕೋರೆಗಳನ್ನು ಸರಿಪಡಿಸಿದೆ. ಆದರೂ ನನ್ನನ್ನು ಬಲಿಪಶು ಮಾಡಿಬಿಟ್ಟಿರಲ್ಲ. ಹೋಗಲಿ ನನ್ನದೇನೋ ಮುಗಿದ ಆಧ್ಯಾಯವೆಂದು ಪಕ್ಕಕ್ಕೆ ತಳ್ಳಬಹುದಾದರೂ ನಿಮ್ಮ ಮಕ್ಕಳ ಬಗ್ಗೆ ಚಿಂತಿಸಲಿಲ್ಲವಲ್ಲ. ಊರಿಗೆ ಬಂದು ಪಂಚಾಯಿತಿ…. .. ಛೇ ನಿಮ್ಮ ಮುಖನೋಡಲೂ ಇವಾಗ ಹೇಸಿಗೆಯಾಗುತ್ತಿದೆ. ಏನು ಮಾಡಲಿ.

“ಏ ಭಾರ್ಗವಿ ಎಲ್ಲ ಹೋಗುತ್ತಿದ್ದೀ? ಎಂಬ ಕೂಗಿಗೆ ಎಚ್ಚೆತ್ತವಳೇ ರಿಕ್ಷಾದವನನ್ನು “ಹಲೋ ಸ್ವಲ್ಪ ಹಿಂದಕ್ಕೆ ತೆಗೆದುಕೊಳ್ಳಿ, ಯಾವುದೋ ಯೋಚನೆಯಲ್ಲಿ ಮುಂದೆ ಬಂದುಬಿಟ್ಟೆ ಗೊತ್ತಾಗಲಿಲ್ಲ.” ಎಂದು ಕೇಳಿದಳು.

ಅವನು “ನಾನೂ ಅಂದುಕೊಂಡೆ ಅಮ್ಮಾವರು ಆ ಸಾವಿನ ಮನೆಯ ಮುಂದೆ ಯಾಕೆ ನಿಲ್ಲಿಸಲಿಲ್ಲ ಎಂದು? ಬೆಳಗ್ಗೆ ನಾನಾಗಲೇ ಯಾರೋ ಒಬ್ಬರನ್ನು ಅಲ್ಲಿಗೇ ಕರೆದುಕೊಂಡು ಬಂದಿದ್ದೆ. ನೀವೇನೂ ಹೇಳಲಿಲ್ಲವಲ್ಲ ಅದಕ್ಕೆ ಮುಂದಕ್ಕೆ ಹೋದೆ” ಎಂದು ಹಿಂದಕ್ಕೆ ಕರೆತಂದು ಅವಳನ್ನು ಮನೆಯ ಮುಂದೆ ಇಳಿಸಿ ಹಣ ಪಡೆದು ಹೋದನು.

“ಅಲ್ಲವೇ ಭಾರ್ಗವಿ ಇವತ್ತು ಇಲ್ಲಿಗೆ ಬರುತ್ತಿದ್ದೀಯಾ, ಸುದ್ಧಿ ಕೇಳುತ್ತಿದ್ದಂತೆ ಯಾಕೆ ಅಪ್‌ಸೆಟ್ ಆಗಿಬಿಟ್ಟೆಯಾ? ಬಾ..ಬಾ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡ. ನಮ್ಮಮ್ಮ ಹೇಗೆ ನೆಮ್ಮದಿಯಾಗಿ ಮಲಗಿದ್ದಾರೆಂದು ತೋರಿಸುತ್ತೇನೆ.” ಎಂದ ಕೈ ಹಿಡಿದು ಭಾರ್ಗವಿಯನ್ನು ಮನೆಯೊಳಕ್ಕೆ ಕರೆದುಕೊಂಡು ಹೋದಳು ಸುಮನಾ.

ವೆರಾಂಡಾ ದಾಟಿ ಮುಂದೆ ಹೋಗುತ್ತಿದ್ದಂತೆ ಇದ್ದ ವಿಶಾಲವಾದ ನಡುಮನೆಯ ಮಧ್ಯದಲ್ಲಿ ಒಂದು ದಿವಾನಾ. ಅದರ ಮೇಲೆ ಚಾಪೆಹಾಸಿತ್ತು. ಅದರಮೇಲೆ ಸುಮನಾಳ ತಾಯಿಯನ್ನು ಮಲಗಿಸಿದ್ದರು. ತಲೆಯ ಕಡೆ ಇರಿಸಿದ್ದ ಸ್ಟೂಲೊಂದರ ಮೇಲಿಟ್ಟಿದ್ದ ಹಣತೆ ಬೆಳಗುತ್ತಿತ್ತು. ಅದರ ಪಕ್ಕದ ಸ್ಟ್ಯಾಂಡಿನಲ್ಲಿ ಊದಿನ ಕಡ್ಡಿಗಳು ಉರಿಯುತ್ತಿದ್ದವು. ಸುಮನಾಳ ಅಪ್ಪ ಬದುಕಿದ್ದಾರೋ ಸತ್ತಿದ್ದಾರೋ ನಿಖರವಾಗಿ ಗೊತ್ತಿಲ್ಲದ ಕಾರಣ ಹಣೆಯಲ್ಲಿ ದೊಡ್ಡದಾದ ಕುಂಕುಮದ ಬೊಟ್ಟಿತ್ತು. ಎರಡೂ ಕೆನ್ನೆಗಳಿಗೆ ಅರಿಶಿನ ಬಳಿದಿದ್ದರು. ಕಿವಿಗಳಲ್ಲಿ ಮುತ್ತುಕೆಂಪಿನ ಓಲೆಗಳಿದ್ದವು. ಕತ್ತಿನಲ್ಲಿ ಎರಡೆಳೆ ಮಾಗಲ್ಯದ ಸರ ಇಣುಕುತ್ತಿತ್ತು. ಎರಡೂ ಕೈಗಳಲ್ಲಿ ಚಿನ್ನದ ಬಳೆಗಳ ಜೊತೆಗೆ ಹಸಿರು ಗಾಜಿನ ಬಳೆಗಳಿದ್ದವು. ಬೆರಳೊಂದರಲ್ಲಿ ಉಂಗುರ, ಕಾಲಿನಲ್ಲಿ ಬೆಳ್ಳಿಯ ಚೈನು, ಕಾಲುಂಗುರ. ಯಾವಾಗಲೂ ಕಾಟನ್ ಸೀರೆಯನ್ನು ಗರಿಮುರಿಯದ ಹಾಗೆ ಉಡುತ್ತಿದ್ದ ಅವರು ಎತ್ತರದ ನಿಲುವಿನ, ಒಳ್ಳೆಯ ಬಣ್ಣವಿದ್ದ ಮಾಸದ ಚೆಲುವಿನ ಹೆಂಗಸು. ಅವರನ್ನು ನೋಡಿದಾಗಲೆಲ್ಲ ಭಾರ್ಗವಿ ಸುಮನಾಳಿಗೆ “ನಿಮ್ಮಮ್ಮನನ್ನು ಒಂಟಿಯಾಗಿ ಎಲ್ಲಿಗೂ ಕಳುಹಿಸಬೇಡ, ಇಷ್ಟು ಚಿನ್ನ ಮೈಮೇಲೆ, ಏನಿಲ್ಲವೆಂದರೂ ನೂರೈವತ್ತು ಗ್ರಾಂ ಇದೆ. ಕೈ ಚಳಕ ತೋರಿದವನಿಗೆ ಹಬ್ಬ.” ಎಂದು ತಮಾಷೆ ಮಾಡುತ್ತಿದ್ದಳು. ಅದಕ್ಕೆ ಸುಮನಾ ನಮ್ಮಪ್ಪ ಮನೆ ಬಿಟ್ಟು ಹೋದಾಗಿನಿಂದ ನಮ್ಮಮ್ಮ ಒಬ್ಬರೇ ಹೊರಕ್ಕೆ ಕಾಲ್ತೆಗೆದವರೇ ಅಲ್ಲ ಎಂದಿದ್ದಳು. ಏನಿದ್ದರೂ ಮನೆ ಬಿಟ್ಟರೆ ಆಸ್ಪತ್ರೆಯಷ್ಟೇ ಅವರ ಪ್ರಯಾಣ, ಅದೂ ಆಗ ನಾವು ಯಾರಾದರೂ ಕಾವಲಿರುತ್ತಿದ್ದೆವು. ಅಲ್ಲೇನಾದರೂ ಟೆಸ್ಟಿಗೆ, ಸ್ಕ್ಯಾನಿಂಗ್
ಒಡವೆಗಳನ್ನು ತೆಗೆದರೆ ನಾವು ಅವನ್ನು ಹಿಡಿದುಕೊಳ್ಳುತ್ತಿದ್ದೆವು. ಹಿಂದಿರುಗಿದ ತಕ್ಷಣ ಅವೆಲ್ಲವನ್ನೂ ಧರಿಸಿಕೊಳ್ಳುತ್ತಿದ್ದರು. ಈಗಲೂ ಎಲ್ಲವನ್ನೂ ಧರಿಸಿಯೇ ಚಿರನಿದ್ರೆಗೆ ಜಾರಿದ್ದಾರೆ. ಯಾರೇನೇ ಒಯ್ದರೂ ಗೊತ್ತಾಗದ ಸ್ಥಿತಿಯಲ್ಲಿದ್ದಾರೆ. ಅಷ್ಟೇ ಅಲ್ಲವೇ ಜೀವನ ಎಂದುಕೊಳ್ಳುತ್ತಿದ್ದಂತೆ ಅವಳ ಪಕ್ಕದಲ್ಲಿದ್ದ ಸುಮನಾ “ನೋಡಿದೆಯಾ ಗೆಳತಿ ನಮ್ಮಮ್ಮ ಮಲಗಿರುವ ಠೀವಿ. ಸಾವಿನಲ್ಲೂ ಗತ್ತು ಉಳಿಸಿಕೊಂಡಿದ್ದಾರೆ ಅನ್ನಿಸುವುದಿಲ್ಲವೇ?” ಎಂದಳು.

“ಹೂ ..ಅದಿರಲಿ ಹೀಗೆ ಇದ್ದಕ್ಕಿದ್ದಂತೆ ಹೇಗಾಯ್ತು?”

“ಹೇಗೆಂದು ಹೇಳಲಿ, ನಮ್ಮ ಮನೆಯಲ್ಲಿ ರಾತ್ರಿಯ ಯಥಾಪ್ರಕಾರದ ಕೆಲಸಗಳು, ಅದು ನಿನಗೂ ಗೊತ್ತು. ಹೊರಗಡೆ ಅಂಗಳ ಗುಡಿಸಿ ರಂಗೋಲಿ ಹಾಕಿ, ಪೈಪು ಬಕೆಟ್ ತಂದು ಒಳಗಿಟ್ಟು ಗೇಟಿನಿಂದ ಹಿಡಿದು ಒಳ ಬಾಗಿಲಿನ ತನಕ ಬೀಗ ಹಾಕಿ ನನ್ನಮ್ಮನಿಗೆ ಮಾತ್ರ ಊಟಕೊಟ್ಟು ನಂತರ ನಾವೆಲ್ಲ ಊಟಮಾಡಿ ಮಿಕ್ಕ ಕೆಲಸಗಳನ್ನು ಮಾಡಿದೆವು. ಸ್ವಲ್ಪ ಹೊತ್ತು ಟಿ.ವಿ. ನೋಡಿದೆವು. ನಿನಗೆ ಹೇಳಿದ್ದೆನಲ್ಲ ಕ್ಷಮಾ, ರಜನಿ ಊರಿಗೆ ಹೋಗಿ ಬರುತ್ತಾರೆಂದು. ನೀನು ಮನೆ ತಲುಪುವುದರೊಳಗಾಗಿ ಇಬ್ಬರ ಆಗಮನವಾಗಿತ್ತು. ಕ್ಷಮಾಳಿಗೆ ಅರ್ಜೆಂಟಾಗಿ ಆಸ್ಪತ್ರೆಯಿಂದ ಕರೆಬಂತು. ಆಕೆ ಅಲ್ಲಿಗೆ ಹೋಗಿದ್ದಳು. ಏನೋ ಎಮರ್ಜೆನ್ಸಿ ಇನ್ನು ಬರುವುದು ಬೆಳಗ್ಗೆಯೇ ಅಂದುಕೊಂಡು ನಾನು ರಜನಿ ನನ್ನಮ್ಮನ ರೂಮಿನಲ್ಲಿದ್ದ ಮತ್ತೊಂದು ಮಂಚದ ಮೇಲೆ ಮಲಗಿಕೊಂಡೆವು. ಈ ಮೊದಲೇ ಏರ್ಪಾಡು ಮಾಡಿದಂತೆ ನಮ್ಮಮ್ಮ ಬಾತ್ರೂಮಿಗೆ ಹೋಗಬೇಕಾದರೆ ಒಬ್ಬರನ್ನೇ ಕಳುಹಿಸುತ್ತಿರಲಿಲ್ಲ. ಅವರು ಮಲಗಿದ್ದಲ್ಲೇ ಪಕ್ಕದಲ್ಲಿ ಒಂದು ಗಂಟೆ ನೇತುಹಾಕಿದ್ದೆವು. ದಾರ ಎಳೆದರೆ ಸದ್ದುಮಾಡುತ್ತಿತ್ತು. ಅಗ ಯಾರಾದರೊಬ್ಬರು ಅವರನ್ನು ಕರೆದುಕೊಂಡು ಹೋಗಿ ಬರುತ್ತಿದ್ದೆವು. ನೆನ್ನೆ ರಾತ್ರಿ ನಮ್ಮಿಬ್ಬರಿಗೂ ಎಚ್ಚರವಿಲ್ಲದಷ್ಟು ನಿದ್ರೆ. ರಾತ್ರಿಯ ಡ್ಯೂಟಿ ಮುಗಿಸಿಕೊಂಡು ಮನೆಗೆ ಬಂದ ಕ್ಷಮಾಳಿಂದ ಬಂದ ಮೊಬೈಲ್ ಸದ್ದೇ ನಮ್ಮನ್ನು ಎಚ್ಚರಿಸಿದ್ದು. ಗಡಿಬಿಡಿಯಿಂದ ಕಾಲ್ ರಿಸೀವ್ ಮಾಡಿದೆವು. “ಅಕ್ಕಾ ಗೇಟಿನ ಬೀಗ ತೆಗೆದಿಲ್ಲವಲ್ಲಾ, ಇನ್ನೂ ಎದ್ದಿಲ್ಲವಾ? ಅಮ್ಮ ಎದ್ದಿದ್ದರೆ ಇಷ್ಟೊತ್ತು ಮಲಗಲು ಬಿಡುತ್ತಿದ್ದರೇ? ಗಂಟೆ ಆಗಲೇ ಆರರ ಮೇಲಾಗಿದೆ” ಎಂದಳು.

ಅವಳು ಹೇಳಿದ್ದು ಕೇಳಿ ತಕ್ಷಣ ರಾತ್ರಿ ಒಂದು ಸಾರಿಯೂ ನಮ್ಮನ್ನು ಅಮ್ಮ ಎಬ್ಬಿಸದೆ ಇದ್ದದ್ದು ಆಶ್ಚರ್ಯವೆನಿಸಿತು. ರಜನಿ ಗೇಟಿನ ಬೀಗ ತೆಗೆಯಲು ಹೊರಗೋದಳು. ನಾನು ಅಮ್ಮನ ಹತ್ತಿರ ಹೋಗಿ ಅವರನ್ನು ಎಬ್ಬಿಸಲು ಕೂಗಿದೆ. ಇಲ್ಲ. ಅಲ್ಲಾಡಿಸಿದರೂ ಊಹುಂ ಯಾವ ಪ್ರತಿಕ್ರಿಯೆಯೂ ಇಲ್ಲ. ಗಾಭರಿಯಾಗಿ ಕ್ಷಮಾಳನ್ನು ಕರೆದೆ. ಅವಳು ಪರೀಕ್ಷೆ ಮಾಡಿದಳು. “ಇಲ್ಲ ಅಕ್ಕಾ ಅಮ್ಮ ಹೋಗಿಬಿಟ್ಟಿದ್ದಾರೆ, ಅಮ್ಮ ಇನ್ನಿಲ್ಲ. ಜೀವ ಹೋಗಿ ಏನಿಲ್ಲವೆಂದರೂ ಒಂದೆರಡು ಗಂಟೆಯಾದರೂ ಆಗಿರಬಹುದು” ಎಂದಳು. ನಮಗೆ ನಂಬಲಿಕ್ಕಾಗಲೇ ಇಲ್ಲ. ಮುಂದಿನ ಬೀದಿಯಲ್ಲಿರುವ ಡಾ.ಪ್ರಭುರವರನ್ನು ಕರೆತಂದೆ. ಅವರೂ ಪರೀಕ್ಷಿಸಿ ಕ್ಷಮಾ ಹೇಳಿದಂತೆ ಹೇಳಿ ಬಂಧುಬಳಗದವರಿಗೆ ತಿಳಿಸಲು ಹೇಳಿದರು. ಆನಂತರ ಒಬ್ಬೊಬ್ಬರಿಗೆ ಕಾಲ್ ಮಾಡುತ್ತ ಹೋದೆವು. ಅದರಂತೆ ನಿನಗೂ ಹೇಳಿದೆ. ಅಕ್ಕ ಭಾವ ಬಂದ ನಂತರ ಎಲ್ಲ ಮುಂದಿನ ಕೆಲಸಗಳೂ ಪ್ರಾರಂಭವಾಗಿವೆ. ಅಮ್ಮನ ಬೀರುವಿನ ಕೀ ಅವರ ತಲೆದಿಂಬಿನ ಕವರಿನೊಳಗಿತ್ತು. ಅದನ್ನು ತೆಗೆದು ಒಳಗಿಡೋಣವೆಂದು ಹೋದರೆ ಒಂದು ದೊಡ್ಡ ಕವರಿನಲ್ಲಿ ಅನೇಕ ಕಾಗದ ಪತ್ರಗಳಿದ್ದವು. ಅವುಗಳೇನು ಮುಖ್ಯವಾದುವೇ ಎಂದು ಒಂದು ಪತ್ರವನ್ನು ಬಿಡಿಸಿ ನೋಡಿದೆ. ಬೇರೆ ರೂಮಿಗೆ ಹೋಗಿ ಓದಿದೆ. ಏನು ಹೇಳಲಿ ಭಾರ್ಗವಿ ನಮಗೆ ಸಂಬಂಧಗಳನ್ನು ಕೇಳಿಕೊಂಡು ಬಂದಿದ್ದ ಪತ್ರವದು. ಅದರಲ್ಲಿದ್ದವೆಲ್ಲವೂ ಅಂತಹವುಗಳೇ ಎಂದು ಗೊತ್ತಾಯಿತು. ಅಮ್ಮ ದೈವಾಧೀನರಾದ ಕಾರಣ ತುಸು ದುಃಖವಾಯಿತು. ಆಮೇಲೆ ಅವುಗಳನ್ನು ಯಾರಕಣ್ಣಿಗೂ ಬೀಳದಂತೆ ನನ್ನ ಕಬ್ಬೋರ್ಡಿನಲ್ಲಿಟ್ಟು ಬೀಗಹಾಕಿದೆ. ಹಿರಿಯರು ಹೇಳುವಂತೆ ದೇವರು ತನ್ನ ಸೃಷ್ಟಿಯ ಜೀವಿಗಳೆಲ್ಲರ ಬಳಿ ತಾನು ಎಲ್ಲಾ ಕಡೆ ಇರಲು ಸಾಧ್ಯವಾಗದೆಂದು ತಾಯಿಯನ್ನು ಸೃಷ್ಟಿಸಿದನಂತೆ. ಆಕೆ ಹತ್ತಿರವಿದ್ದು ತನ್ನ ಮಕ್ಕಳ ಒಳಿತು, ಏಳಿಗೆಗೆ ಸಹಾಯ ಮಾಡಲೆಂದು. ಆದರೆ ನಮ್ಮದು ಖೋಟಾ ನಸೀಬು. ಇಂಥಹ ಅಮ್ಮ ಸಿಕ್ಕಿಬಿಟ್ಟಳು. ಅವಳು ನಮ್ಮ ಭವಿಷ್ಯವನ್ನೆಲ್ಲ ಭಧ್ರವಾಗಿ ಬೀಗಹಾಕಿ ಬಂಧಿಸಿಟ್ಟಿದ್ದಳು. ಅವರು ಕಟ್ಟಿಕೊಂಡಿದ್ದ ಒಬ್ಬ ಪುರುಷ ಮನೆಬಿಟ್ಟು ಹೋಗಿಬಿಟ್ಟನೆಂದು ಎಲ್ಲ ಗಂಡಸರೂ ಇಂಥಹವರೇ ಎಂಬ ತೀರ್ಮಾನಕ್ಕೆ ಬಂದ ನಮ್ಮ ಅಮ್ಮ ನಮಗ್ಯಾರಿಗೂ ಗಂಡುದಿಕ್ಕೇ ಸಿಗಬಾರದೆಂದು ಎಲ್ಲವನ್ನೂ ಮುಚ್ಚಿಟ್ಟು ಮೋಸಮಾಡಿದಳು. ನಮ್ಮದು ಹೋಗಲಿ ಕೊನೆಯವಳು ಕ್ಷಮಾಗಾದರೂ ಒಂದು ಮನೆ, ಸಂಗಾತಿ, ಸಂಸಾರವನ್ನು ದೊರಕಿಸಬೇಕಿತ್ತಲ್ಲವಾ. ಇಷ್ಟೊಂದು ನಿಷ್ಠುರವಾಗಿ ತಾವು ನಮ್ಮಿಂದ ಮೂರುಹೊತ್ತೂ ತೊತ್ತುಗಳಂತೆ ಸೇವೆ ಮಾಡಿಸಿಕೊಳ್ಳುವ ಸಲುವಾಗಿಯೇ ಹೀಗೆ ಮಾಡಿದರೆಂದು ಅನುಮಾನ ಈಗ ಬರುತ್ತಿದೆ. ರಜನಿಗೆ ಯಾರೋ ಒಬ್ಬರು ಇಷ್ಟಪಟ್ಟವರಿದ್ದರಂತೆ. ವಿಷಯ ಗೊತ್ತಾದಾಗ ನಾನೂ ನಿನಗೆ ಒತ್ತಾಸೆಯಾಗುತ್ತೇನೆ ಧೈರ್ಯ ಮಾಡಿ ಮದುವೆ ಮಾಡಿಕೋ ಎಂದಿದ್ದೆ. ಅವಳು ಏಕೋ ಹಿಂದೆಗೆದಳು. ನಮ್ಮ ಅಕ್ಕ ಭಾವನ ವಿಷಯ ಗೊತ್ತೇ ಇದೆಯಲ್ಲ ಅವರು ಯಾವುದಕ್ಕೂ ಮುಂದಾಗಿ ಪ್ರಯತ್ನ ಮಾಡಲಿಲ್ಲ. ನಾವು ಮೂವರೂ ತ್ರಿಕನ್ಯೆಯರಾಗಿಯೇ ನಮ್ಮಮ್ಮನ ಬುಡದಲ್ಲೇ ಉಳಿದುಬಿಟ್ಟೆವು. ಅವರು ನಮ್ಮನ್ನು ಮಾತೆಯರಾಗಲು ಬಿಡಲೇಯಿಲ್ಲ.” ಎಂದು ನಿಟ್ಟುಸಿರು ಬಿಟ್ಟಳು. ಅಷ್ಟರಲ್ಲಿ ಯಾರೋ ಕರೆದದ್ದರಿಂದ “ನೀನಿಲ್ಲೇ ಕುಳಿತುಕೋ ನಾ ಬಂದೆ” ಎಂದು ಹೇಳಿ ಕರೆಬಂದ ಕಡೆಗೆ ಹೋದಳು.

ಅತ್ತಿತ್ತ ಕಣ್ಣು ಹಾಯಿಸಿದ ಭಾರ್ಗವಿ ಸುಮನಾಳ ತಾಯಿಯ ದೇಹವನ್ನು ಮಲಗಿಸಿದ್ದ ಸ್ಥಳದ ಎದುರಿಗೆ ಹಾಕಿದ್ದ ಕುರ್ಚಿಗಳ ಸಾಲಿನಲ್ಲಿ ಒಂದು ಜಾಗ ಹಿಡಿದು ಕುಳಿತಳು. ಅವರೆಡೆಗೇ ದೃಷ್ಟಿ ಹಾಯಿಸುತ್ತಿದ್ದಳು. ಮನಸ್ಸಿನಲ್ಲಿ ವಿಪ್ಲವವೇ ನಡೆದಿತ್ತು. ಸುಮನಾ ಹೇಳಿದಂತೆ ನಾನೂ ಎಷ್ಟೋ ಸಾರಿ ಅಂದುಕೊಳ್ಳುತ್ತಿದ್ದೆ. ಆದರೀಗ ನೀವು ಆ ದಿನ ಆಸ್ಪತ್ರೆಯಲ್ಲಿ ಹೇಳಿದ ಮಾತುಗಳು ನೆನಪಿಗೆ ಬರುತ್ತಿವೆ. ಹೌದೌದು ಗಂಡಸರನ್ನು ನಂಬಬಾರದು. ಅದರ ಅನುಭವ ನಮ್ಮೊಡನೆ ಆದಾಗಲೇ ಅದರ ನಿಜದ ಅರಿವಾಗುವುದು. ಎಲ್ಲರೂ ಹಾಗಿರುವುದಿಲ್ಲ, ನಮ್ಮ ಪಾಲಿಗೆ ಬಂದವರು, ನಮ್ಮ ಕರ್ಮ ನಮ್ಮನ್ನು ಆವರಿಸಿಕೊಂಡಾಗ ಅದು ಸತ್ಯವಾಗುತ್ತದೆ. ಈಗ ನನಗೆ ಅದರ ಕಾವು, ಅದರ ಬಿಸಿ ತಟ್ಟುತ್ತಿದೆ ಎಂದು ಮುಖವನ್ನು ಸೆರಗಿನಲ್ಲಿ ಅಡಗಿಸಿಕೊಂಡು ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು.

ಅದನ್ನು ಗಮನಿಸಿದ ಸುಮನಾಳ ಸೋದರಿ ರಜನಿಗೆ ಅಚ್ಚರಿಯುಂಟಾಯಿತು. ಎಷ್ಟೋ ವರ್ಷಗಳಿಂದ ಭಾರ್ಗವಿಯ ಗುಣ ಸ್ವಭಾವಗಳನ್ನು ಆಕೆ ಕಂಡಿದ್ದಳು. ಎಂತಹ ಕಷ್ಟಬಂದಾಗಲೂ, ಯಾರೇನೇ ಅಂದರೂ, ಮನಸ್ಸಿನಲ್ಲಿ ಎಷ್ಟೇ ನೋವುಗಳಿದ್ದರೂ ಇನ್ನೊಬ್ಬರ ಮುಂದೆ ತನ್ನ ಅಸಹಾಯಕತೆಯನ್ನು ಬಹಿರಂಗವಾಗಿ ತೊರ್ಪಡಿಸಿಕೊಂಡವಳಲ್ಲ. ನಮ್ಮಮ್ಮನ ಸಾವು ಇವರನ್ನು ಅಷ್ಟೊಂದು ದುಃಖಿತಳನ್ನಾಗಿ ಮಾಡಿತೇ? ಇಲ್ಲ.. ಇಲ್ಲಿ ಆಗಬಾರದ್ದೇನೋ ಆಗಿದೆ. ಅವರ ಪತಿ ಎಡವಟ್ಟರಾಯ ಏನೋ ಕಿತಾಪತಿ ಮಾಡಿರಬಹುದು. ಅಕ್ಕ ಬೇರೆ ಇಲ್ಲಿನ ಕೆಲಸಗಳು ಮುಗಿದಮೇಲೆ ಊರಿಗೆ ಹೋಗುತ್ತಾರೆಂದು ಹೇಳುತ್ತಿದ್ದಳು. ಅಲ್ಲೇನಾದರೂ….. .., ಹೀಗೆ ಆಲೋಚಿಸುತ್ತಿರುವಾಗಲೆ ಭಾರ್ಗವಿಯ ಮಗಳು ಮಾಲಿನಿಯನ್ನು ಸುಮನಾ ಅಕ್ಕ ಕರೆದುಕೊಂಡು ಬರುತ್ತಿರುವುದು ಕಾಣಿಸಿತು. ತಾನೂ ಅವಳನ್ನು ಎದುರುಗೊಳ್ಳಲು ಹೊರನಡೆದಳು.

ರಜನಿಯನ್ನು ಕಂಡ ಮಾಲಿನಿ “ವೆರಿ ಸಾರಿ ಆಂಟೀ” ಎಂದಳು. “ಇಟ್ಸ್ ಓಕೇ ಪುಟ್ಟೀ” ಎಂದವಳೇ ನಿಮ್ಮ ಅಮ್ಮ ಇತ್ತೀಚೆಗೆ ಬದಲಾದಂತೆ ಕಾಣುತ್ತಾರೆಂದು ಅವರು ದುಃಖಿಸುತ್ತಿದ್ದ ಪರಿಯನ್ನು ಮಾಲಿನಿಯ ಕಿವಿಯಲ್ಲಿ ಪಿಸುಗುಟ್ಟಿ ತನ್ನ ಅನುಮಾನವನ್ನು ಅವಳ ಮುಂದೆ ವ್ಯಕ್ತಪಡಿಸಿದಳು. ಅದನ್ನು ಕೇಳಿ ಮಾಲಿನಿ ಮನೆಯ ಗುಟ್ಟನ್ನು ಹೊರಗೆ ಬಿಟ್ಟುಕೊಡದಂತೆ “ಹೂಂ ಆಂಟೀ, ನಿಮ್ಮ ಮಾತು ನಿಜ. ನಮ್ಮಮ್ಮ ತುಂಬ ಭಾವುಕರಾಗುತ್ತಿದ್ದಾರೆ. ಆಶ್ರಮದಲ್ಲಿ ಯಾರಿಗೇನೆ ಆದರೂ ಅದು ಆದದ್ದು ತಮಗೇ ಅನ್ನುವಷ್ಟು ಭಾವಿಸಿ ನೋಯುತ್ತಾರೆ. ಅವರನ್ನು ಒಬ್ಬರನ್ನೇ ಬಿಡಬಾರದೆನ್ನಿಸಿದೆ” ಎಂದಳು.

“ಇನ್ನೇನು ಸ್ವಲ್ಪ ದಿವಸ, ಅವರ ಕೆಲಸಗಳೆಲ್ಲ ಮುಗಿದ ಮೇಲೆ ಊರಿಗೆ ವಾಪಸ್ಸು ಹೋಗುವವರೆಗೆ. ಆಗ ಎಲ್ಲ ಸರಿಹೋಗುತ್ತದೆ ಬಿಡು. ಅಂದಹಾಗೆ ಸಾವಿನ ಮನೆಯಲ್ಲಿ ಹೀಗೆ ಹೇಳುತ್ತಿದ್ದೇನೆಂದು ಬೇಸರ ಮಾಡಿಕೊಳ್ಳಬೇಡ ಪುಟ್ಟೀ. ನೀವು ಅಕ್ಕತಂಗಿಯರಿಬ್ಬರೂ ನಿಮ್ಮ ಜೊತೆಗಾರರನ್ನು ಆರಿಸಿಕೊಂಡು ಬದುಕು ಕಟ್ಟಿಕೊಳ್ಳಿ. ಇದರಿಂದ ಅಮ್ಮನಿಗೆ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಅವರಿಗೆ ನಿಮ್ಮದೇ ಯೋಚನೆ” ಎಂದ ಹೇಳಿ ರಜನಿಯ ಮಾತಿಗೆ ಸುಮನಾಳೂ ದನಿಗೂಡಿಸಿ “ಹುಡುಕಿಕೊಂಡಿದ್ದರೆ ಹೇಳಿಬಿಡು, ನಾವು ನಿಮಗೆ ಒತ್ತಾಸೆಯಾಗ ನಿಲ್ಲುತ್ತೇವೆ. ಇಲ್ಲವೇ ನಿಮಗೆಂತಹ ಜೊತೆಗಾರರು ಬೇಕೆಂದು ತಿಳಿಸಿ, ಹುಡುಕಿಕೊಡುತ್ತೇವೆ” ಎಂದು ಹೇಳಿ ಒಳಕ್ಕೆ ಕರೆದುಕೊಂಡು ಬಂದಳು. ಯಾರ ಕಡೆಗೂ ಗಮನವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ದುಃಖಿಸುತ್ತ ಕುಳಿತಿದ್ದ ತಾಯಿಯನ್ನು ಕಂಡು ಮಾಲಿನಿಗೆ ಅಯ್ಯೋ ಎನಿಸಿತು. ಅವರ ಹತ್ತಿರ ಹೋಗಿ ಹೆಗಲಮೇಲೆ ಕೈಯಿಟ್ಟಳು. ಎಚ್ಚೆತ್ತುಕೊಂಡ ಭಾರ್ಗವಿ ಸೆರಗಿನಿಂದ ಕಣ್ಣೊರೆಸಿಕೊಂಡಳು.

ಸರಿ ಧಾರ್ಮಿಕ ರೀತ್ಯಾ ಶಾಸ್ತ್ರಗಳೆಲ್ಲ ಮುಗಿಯುವ ಹೊತ್ತಿಗೆ ಸಂಜೆ ಐದುಗಂಟೆಯ ಮೇಲಾಗಿತ್ತು. ಮಾಲಿನಿ ಗಮನಿಸಿದಂತೆ ತಾಯಿ ಒಂದರೆಡು ಸಲ ಕಾಫಿ ಕುಡಿದದ್ದು ಬಿಟ್ಟರೆ ಮತ್ತೇನೂ ಇಲ್ಲ. ಅವರು ಶುಗರ್ ಪೇಷೆಂಟ್ ಬೇರೆ, ಎನಾದರೂ ಹೆಚ್ಚುಕಮ್ಮಿಯಾದರೆ ಎಂದು ಆತಂಕಪಟ್ಟುಕೊಂಡು ಭಾರ್ಗವಿಯನ್ನು ಕರೆದುಕೊಂಡು ಮನೆಗೆ ಬಂದುಬಿಟ್ಟಳು. ಇಬ್ಬರೂ ಸ್ನಾನ ಮುಗಿಸಿದ ಮೇಲೆ ಹೊರಗಿನಿಂದ ಊಟ ತರಿಸಿ ಬೇಡವೆಂದರೂ ಕೇಳದೆ ಗದರಿಸಿ ಊಟ ಮಾಡುವಂತೆ ಬಲವಂತ ಮಾಡಿದಳು ಮಾಲಿನಿ.

ಭಾರ್ಗವಿಗೆ ಗಂಟಲಲ್ಲಿ ತುತ್ತು ಹೋಗಲು ನಿರಾಕರಿಸುತ್ತಿದ್ದರೂ ಮಗಳ ಹೆದರಿಕೆಯಿಂದ ಗುಕ್ಕಿಗೊಂದು ಸಾರಿ ನೀರು ಕುಡಿಯುತ್ತ ಹೇಗೋ ಊಟ ಮುಗಿಸಿದಳು. ಸ್ವಲ್ಪ ಹೊತ್ತಿನ ನಂತರ ತನ್ನ ರೂಮಿನ ಕಡೆ ನಡೆದಳು. ಈ ಅವಸ್ಥೆಯಲ್ಲಿ ತಾಯಿಯನ್ನು ಕಂಡ ಮಾಲಿನಿಯ ಕಣ್ಣುಗಳು ತುಂಬಿಕೊಂಡವು. ಸುಮನಾಳ ಮನೆಯಿಂದ ಬಂದ ನಂತರ ಒಂದೇ ಒಂದು ಮಾತನ್ನೂ ಆಡದೆ ಇದ್ದದ್ದು ಅವಳಿಗೆ ಹೊಟ್ಟೆಯಲ್ಲಿ ಸಂಕಟವಾಯಿತು. ತಾನೂ ಸೇರಿದಷ್ಟನ್ನು ತಿಂದು ಪಾತ್ರೆಗಳನ್ನು ಎತ್ತಿಟ್ಟು ಆಫೀಸಿನ ಕೆಲಸ ಮಾಡಲು ಮೂಡಿಲ್ಲದೆ ಲೈಟಾರಿಸಿಕೊಂಡು ತನ್ನ ರೂಮಿನ ಕಡೆಗೆ ಹೋದಳು ಮಾಲಿನಿ.

ರಾತ್ರಿಯ ಬೇಗುದಿ, ಹೊಟ್ಟೆಯೊಳಗಿನ ತಳಮಳ, ಬೆಳಗಿನಿಂದ ಆದ ಆಯಾಸ ಎಲ್ಲವೂ ಸೇರಿ ಜರ್ಝರಿತವಾಗಿದ್ದ ದೇಹ ಭಾರ್ಗವಿಯ ಹಿಡಿತಕ್ಕೆ ಸಿಕ್ಕದೆ ವಿಶ್ರಾಂತಿಗಾಗಿ ನಿದ್ರೆಯನ್ನವಲಂಬಿಸಿತು.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=46095

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *