ಪೌರಾಣಿಕ ಕತೆ

ಕಾವ್ಯ ಭಾಗವತ 113 : ಮುಸಲೋತ್ಪತ್ತಿ

Share Button

ಏಕಾದಶ ಸ್ಕಂದ – ಅಧ್ಯಾಯ – 1
ಮುಸಲೋತ್ಪತ್ತಿ

ಭೂಭಾರ ಹರಣೋದ್ಧೇಶದಿ ಶ್ರೀಕೃಷ್ಣ ಪರಮಾತ್ಮ
ವಸುದೇವ ದೇವಕಿಯರಲಿ ಅವತರಿಸಿ
ಬಾಲ್ಯದಿಂದಾರಂಭಿಸಿ ಪೂತನೀ ಶಕಟಾಸುರಾದಿ
ದುರುಳ ದಾನವರನ್ನೂ ಮುಷ್ಟಿಕ ಚಾಣೂರ ಕಂಸನೇ
ಮುಂತಾದ ಪ್ರಜಾಪೀಡಿತರನ್ನೂ ಸಂಹರಿಸಿ
ಕುರುಕ್ಷೇತ್ರ ರಣರಂಗದಿ ಮದಾಂಧರಾದ ಕೌರವರ
ದುಷ್ಟ ಕ್ಷತ್ರಿಯ ಬಳಗವನ್ನೂ
ಕೇವಲ ಹದಿನೆಂಟು ದಿನದಿ ಹದಿನೆಂಟು
ಅಕ್ಷೊಹಣಿ ಸೈನ್ಯ ಸಾಗರವ
ಪಾಂಡವರ ನಿಮಿತ್ತ ಮಾತ್ರದಿ ಸ್ವೀಕರಿಸಿ
ಬತ್ತಿಸಿದನಾದರೂ ತನ್ನವತಾರ ಕಾರ್ಯ
ಪೂರ್ಣವಾಗಿಲ್ಲವೆಂದು ತಿಳಿದು
ತನ್ನ ಬೆಂಬಲದಿ ಕೊಬ್ಬಿರುವ
ಯಾದವ ಪರಿವಾರವೂ ಲಯವಾಗಬೇಕೆಂಬ
ಚಿಂತನೆಯು ನಿಸ್ಸಂಗಿ ಕೃಷ್ಣನ ಗ್ರಹಿಕೆಯಾಗಿರೆ
ಯದುಕುಲ ನಾಶಕ್ಕೆ
ಕಾಡಿನಲಿ ಬಿದಿರುಗಳ ತಿಕ್ಕಾಟಕ್ಕೆ ಹುಟ್ಟುವ ಬೆಂಕಿಯೇ
ಕಾಳ್ಗಿಚ್ಚಾಗಿ ಸಂಪೂರ್ಣ ಮೆಳೆಯನ್ನು ಧಹಿಸುವಂತೆ
ಮಹಾವೀರರೂ ಗರ್ವಿಗಳೂ ಆದ ಯಾದವರಲಿ
ಪರಸ್ಪರ ಉದ್ಭವಿಸುವ ದ್ವೇಷ ವೈಷಮ್ಯಗಳೇ
ಅವರ ನಿಶ್ಯೇಷವಾಗಿಸಲು ಉಪಾಯವೆಂದರಿತು
ಸರ್ವರ್ಜ್ಞಮೂರ್ತಿ ಕೃಷ್ಣ
ಮಹಾಪರಾಕ್ರಮಿಗಳಾದವರನ್ನು ನಿಗ್ರಹಿಸಲು
ಸ್ವಯೂಧಕಲಹವೇ ಉಪಾಯವೆಂದರಿತು ನಿಶ್ಚಯಿಸೆ
ಹರಿಸಂಕಲ್ಪದಿ ಪ್ರಭಾವಿತರಾಗಿ
ವಸಿಷ್ಟ ವಾಮದೇವ ಅತ್ರಿ ವಿಶ್ವಾಮಿತ್ರರಾದಿಯಾಗಿ
ಮಹರ್ಷಿಗಳು ದ್ವಾರಕೆಯ ಸಮೀಪದ
ಪಿಂಡಾರಕ ಪುಣ್ಯಕ್ಷೇತ್ರಕೆ ಆಗಮಿಸಲು
ಯಾದವ ಪರಿವಾರವೂ ಆಗಮಿಸಿ
ಪುಣ್ಯತೀರ್ಥ ಸ್ನಾನಕೆ ಅಲ್ಲೇ ನೆರೆದಿರೆ
ನಾರುವಸ್ತ್ರ ಕೃಷ್ಣಾಜಿನ ದಂಡ ಕಮಂಡಲ
ತುಳಸೀ ಮಣಿಮಾಲೆ ಭೂಷಿತರಾದ ಮಹರ್ಷಿಗಳ
ಬಾಹ್ಯವೇಷಗಳು ಮದಾಂಧರೂ ಅಜ್ಞಾನಿಗಳೂ ಆದ
ಕೆಲ ಯಾದವ ಕುಮಾರರಿಗೆ ಬಹುವಿಚಿತ್ರವಾಗಿ ತೋರೆ
ಸಾಧುಸ್ವಭಾವದ ಋಷಿಮುನಿಗಳ
ಅಪಹಾಸ್ಯ ಅವಹೇಳನಕೆ ಗುರಿಯಾಗಿಸಿ
ವಿನೋದಕಾರ್ಯವನ್ನಾಚರಿಸಲು
ಜಾಂಬುವತೀ ಪುತ್ರ ಸಾಂಬಗೆ ಸ್ತ್ರೀರೂಪ ಅಳವಡಿಸಿ
ಕಪಟ ವಿನಯ ವಿಧೇಯತೆಗಳ ಪ್ರದರ್ಶಿಸುತ
ಯುವತಿಯು ಗರ್ಭಿಣಿಯಾಗಿರೆ ಅವಳ
ಗರ್ಭದಿ ಹುಟ್ಟುವ ಮಗು ಗಂಡೋ ಹೆಣ್ಣೊ
ತಿಳಿಸಬೇಕೆಂದು ಮಹರ್ಷಿಗಳ ಪ್ರಾರ್ಥಿಸಿದ
ಯಾದವರ ಮೋಸದ ಆಚರಣೆಯ ತಿಳಿದು
ಕೋಪಗೊಂಡು ದುರುಳರೂ ಮದಾಂಧರೂ ಆದ
ಯಾದವ ವಂಶ ನಾಶಕಾರಿಯಾದ
ಒಂದು ಮುಸಲವು ಈ ಗರ್ಭದಿ ಜನಿಸುವುದೆಂದರು

ಮಹರ್ಷಿಗಳ ಬಿರುನುಡಿಗಳ ಕೇಳಿ
ಖಿನ್ನರಾಗಿ ಯಾದವರು ಬೇರೆಡೆಗೆ ಹೋಗಿ
ಸಾಂಬನ ಬಟ್ಟೆಗಳ ಬಿಚ್ಚಿ ನೋಡೆ
ಅಲ್ಲೊಂದು ಭಯಂಕರ ಮುಳ್ಳುಗಳಿಂದ ಕೂಡಿದ
ಉಕ್ಕಿನ ಒನಕೆಯ ಕಂಡು ನಡುಗಿಹೋದರು

ಎಲ್ಲ ಯಾದವರೂ ಉಗ್ರಸೇನರಾಜನ ಬಳಿಗೈದು
ತಮ್ಮ ಕಪಟಾಚರಣೆಯಿಂದ ದುರಂತ ಫಲಪ್ರಾಪ್ತಿಯ
ವಿಚಾರ ತಿಳಿಸೆ, ಉಗ್ರಸೇನ ದೈವಸಂಕಲ್ಪದಲ್ಲಿದುದು
ನಡೆಯದೇ ತಪ್ಪದು ಪ್ರಕೃತ ಈ ಮುಸಲವ ಅರೆದು
ಚೂರ್ಣಮಾಡಿ ಸಮುದ್ರಜಲದಲಿ ಕದಡಿಬಿಡಿ
ಎಂದಾಜ್ಞಾಪಿಸಿದನು

ಕದಡಿದ ಪುಡಿಯೆಲ್ಲಾ ದಡಕೆ ಕೊಚ್ಚಿಬಂದು
ಕಾಲಕ್ರಮದಿ ಹೊಡಕೆಗಳಾಗಿ ಬೆಳೆದವು
ಎಷ್ಟೇ ಕೊಯ್ದರೂ ಸವೆಯದ ಒನಕೆಯ
ಕೊನೆಯ ಚೂರೊಂದನು ಮೀನೊಂದು ನುಂಗಿ
ಅದ ಹಿಡಿದ ಬೆಸ್ತಗೆ ಲೋಹದ ಚೂರು ಸಿಗಲು
ಅದ ಬಾಣದ ಅಲಗನ್ನಾಗಿ ಮಾಡಿಟ್ಟುಕೊಂಡನವ

ಕೃಷ್ಣ ಸಂಕಲ್ಪಾನುಸಾರದಿ ಯಾದವಕುಲ ನಾಶ ಕಾರಣವು
ಈ ಪರಿ ಸಿದ್ಧವಾಯಿತು

ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
  https://surahonne.com/?p=45785

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *