ಪ್ರವಾಸ

ಅಂಡಮಾನ್ ನಲ್ಲಿ ಅಡಿಯಿಟ್ಟು….ಹೆಜ್ಜೆ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಹವಳದ ಅದ್ಭುತ ಜಗತ್ತಿನಲ್ಲಿ……

ಅಬ್ಬಾ…ಅಂತೂ ನಾವು ಹವಳದ ದಿಬ್ಬದ ಮುಂದಿದ್ದೆವು! ಬಂದದ್ದಕ್ಕೆ ಸಾರ್ಥಕವೆನಿಸಿತು. ಮುಂದೆ ವಿಶಾಲವಾಗಿ ಹರಡಿರುವ ಸ್ವಚ್ಛ ನೀಲಿ ಜಲದ ಭೋರ್ಗರೆತ ಕಿವಿಗಪ್ಪಳಿಸುತ್ತಿತ್ತು. ಇಲ್ಲಿ ಮರಳದಂಡೆಯ ಬದಲು ಸಮತಟ್ಟಾದ ಕಪ್ಪು ಶಿಲಾ ಬಂಡೆಗೆ ತೆರೆಗಳು ಅಪ್ಪಳಿಸುತ್ತಿದ್ದವು. ಎಡಭಾಗಕ್ಕೆ ಎತ್ತರದಲ್ಲಿ ಹಸಿರು ಪಾಚಿ ಬೆಳೆದಿರುವ ಕಮಾನಿನಾಕೃತಿಯು ಇಲ್ಲಿಯ ಪ್ರಸಿದ್ಧ ಹವಳದ ಕಮಾನು ಎಂದು ತಿಳಿಯಿತು. ಹವಳದ ಬಣ್ಣದಿಂದ ಕಂಗೊಳಿಸುವ ಕಮಾನನ್ನು ನಿರೀಕ್ಷಿಸಿದ್ದ ನನಗೆ ನಿಜಕ್ಕೂ ನಿರಾಸೆಯಾಯಿತು.

ಹವಳಗಳು  ‘ಪಾಲಿಪ್ಸ್` ಎಂಬ ಮೃದು ದೇಹದ ಅತ್ಯಂತ ಸೂಕ್ಷ್ಮ ಸಮುದ್ರ ಜೀವಿಗಳಿಂದ ಬೆಳೆಯುತ್ತವೆ. ಈ ಜೀವಿಗಳು ಸಮುದ್ರದ ನೀರಿನಿಂದ ಕ್ಯಾಲ್ಸಿಯಂ ಹೀರಿಕೊಂಡು ತಮ್ಮ ರಕ್ಷಣೆಗಾಗಿ ಗಟ್ಟಿಯಾದ ಸುಣ್ಣದ ಕಲ್ಲಿನ ಕವಚವನ್ನು ನಿರ್ಮಿಸಿಕೊಳ್ಳುತ್ತವೆ. ಇವುಗಳ ಒಳಗೆ ಏಕಕೋಶ ಜೀವಿಯಾದ ಒಂದು ವಿಶೇಷ ತರಹದ ಪಾಚಿ ಬೆಳೆದಿರುತ್ತದೆ. ಇದು ಸೂರ್ಯನ ಬೆಳಕನ್ನು ಬಳಸಿ ದ್ಯುತಿಸಂಶ್ಲೇಷಣಾ ಕ್ರಿಯೆಯ ಮೂಲಕ ಹವಳಕ್ಕೆ ಆಹಾರ ಮತ್ತು ಶಕ್ತಿಯನ್ನು ನೀಡುತ್ತದೆ. ಪ್ರತಿಯಾಗಿ ಪಾಚಿಗೆ ಹವಳವು ರಕ್ಷಣೆ ನೀಡುತ್ತದೆ. ಈ ರೀತಿ ಪ್ರಕೃತಿಯಲ್ಲಿ ಕೊಡು ಕೊಳ್ಳುವಿಕೆಯ ಚಕ್ರ ಸುತ್ತುತ್ತಿರುತ್ತದೆ. ಈ ಪಾಚಿಯಿಂದಲೇ ಹವಳವು ಸುಂದರವಾದ ಬಣ್ಣವನ್ನು ಪಡೆಯುತ್ತದೆ. ಒಂದು ಪಾಲಿಪ್ ಸತ್ತಾಗ ಅದು ಅಲ್ಲೇ ಗಟ್ಟಿಯಾಗಿ ಉಳಿದು, ಅದರ ಮೇಲೆಯೇ ಹೊಸ ಪಾಲಿಪ್ ಗಳು ಬೆಳೆಯುತ್ತವೆ. ಈ ಪ್ರಕ್ರಿಯೆಯು ಬಹಳ ನಿಧಾನ ಗತಿಯಲ್ಲಿ ಸಾವಿರಾರು ವರ್ಷಗಳ ಕಾಲ ನಡೆಯುತ್ತಿರುತ್ತದೆ. ಹೀಗೆ ಹಲವಾರು ವರ್ಷಗಳ ಕಾಲ ಒಂದು ಕವಚದ ಮೇಲೆ ಇನ್ನೊಂದು ಕವಚ ಸೇರುತ್ತಾ ಕ್ರಮೇಣ ಬೃಹತ್ ಹವಳದ ಬಂಡೆಗಳಾಗಿ ರೂಪುಗೊಳ್ಳುತ್ತವೆ. ಹವಳ ಬೆಳೆಯುವ ಪ್ರದೇಶದಲ್ಲಿ ಸೂರ್ಯನ ಕಿರಣ, ಅಲ್ಲಿಯ ವಾತಾವರಣ, ಸಮುದ್ರದ ನೀರಿನ ಹರಿವು ಇತ್ಯಾದಿಗಳು ಸರಿಯಾದ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಆದ್ದರಿಂದಲೇ ಜಗತ್ತಿನಲ್ಲಿ ಕೇವಲ ಕೆಲವೇ ಕಡೆಗಳಲ್ಲಿ ಮಾತ್ರ ಹವಳದ ಬೆಳವಣಿಗೆಯನ್ನು ಕಾಣಬಹುದು. ಇಲ್ಲಿ ಸುಮಾರು ಐವತ್ತು ಚ.ಮೀ. ಪ್ರದೇಶದಲ್ಲಿ ಮಾತ್ರ ಹವಳ ಬೆಳೆಯುತ್ತದೆ. ರೋಹಿತ್ ನಮ್ಮನ್ನು ಬಹಳ ಜಾಗರೂಕತೆಯಿಂದ ಮುಂದಕ್ಕೆ ಕರೆದೊಯ್ಯುತ್ತಿದ್ದಾನೆ… ನೀವೂ ಬನ್ನಿ, ಹೋಗೋಣ… ಏನಿದೆ ನೋಡೋಣ.

ಆಹಾ… ಏನು ಹೇಳಲಿ…?! ಆ ಪುಟ್ಟ ಜಾಗವು ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದು  ಅದ್ಭುತವನ್ನು ತೆರೆದು ತೋರಿಸಿದ್ದಂತೂ ನಿಜ! ತೆರೆಗಳು ಬಡಿದು ಹರಿದು, ಅಲ್ಲಲ್ಲಿ ಇರುವ ಪುಟ್ಟ ತೊಟ್ಟಿಗಳಂತಹ ಬಂಡೆಯ ರಚನೆಯಲ್ಲಿ ಸಂಗ್ರಹವಾದ ನೀರಿನಲ್ಲಿ, ಪ್ರತಿಯೊಂದರಲ್ಲೂ  ಬೇರೆ ಬೇರೆ ಬಣ್ಣದ ಮೀನುಗಳ ದೊಡ್ಡ ಹಿಂಡಿನ ಕಣ್ಣುಮುಚ್ಚಾಲೆಯಾಟ! ಸಣ್ಣ ದೊಡ್ಡ ಹವಳದ ರಚನೆಯ ಹಂತಗಳು ಅಲ್ಲಲ್ಲಿ ಕಾಣುತ್ತಿವೆ! ಮುಂದಕ್ಕೆ ಸ್ವಲ್ಪ ದೊಡ್ಡದಾದ ತೊಟ್ಟಿಯತ್ತ ಸಾಗಿದ ರೋಹಿತ್,  ಅವನ ಬಳಿ ಇದ್ದ ಬಿಸ್ಕತ್ತನ್ನು ಪುಡಿಮಾಡಿ ನೀರಿಗೆಸೆದು ತಕ್ಷಣ ನಮ್ಮನ್ನು ಆ ನೀರಿಗಿಳಿಯಲು ಸೂಚಿಸಿದ. ಏನಪ್ಪಾ ಇದು, ಇಷ್ಟು ಶುಚಿಯಾದ ನೀರಿಗೆ ಬಿಸ್ಕತ್ತು ಹಾಕಿ ಗಲೀಜು ಮಾಡುತ್ತಿದ್ದಾನಲ್ಲಾ ಎಂದು ಯೋಚಿಸುತ್ತಾ ಮೊಣಕಾಲು ಮಟ್ಟವಿದ್ದ ನೀರಿನಲ್ಲಿ ಇಳಿದಾಗ ಏನು ಹೇಳಲಿ..?! ಬಣ್ಣಬಣ್ಣದ ನೂರಾರು ಮೀನುಗಳ ಹಿಂಡೇ ಮೇಲಕ್ಕೆ ಬಂದು ಕ್ಷಣಾರ್ಧದಲ್ಲಿ ಅವುಗಳನ್ನು ಖಾಲಿ ಮಾಡಿ ಮಾಯವಾದವು! ಈ ನೋಟವು ಎಂದಿಗೂ ಮರೆಯಲಾಗದ ಅದ್ಭುತ ಕ್ಷಣವಾಗಿತ್ತು! ನಾನಿಲ್ಲಿ ಬರದಿದ್ದರೆ ಏನನ್ನು ಕಳಕೊಳ್ಳುತ್ತಿದ್ದೆ ಎಂಬುದನ್ನು ನೆನೆದು ಭಾವುಕಳಾದೆ. ಒಂದೆರಡು ಕಡೆಗಳಲ್ಲಿ ರೋಹಿತ್ ಪ್ರಯತ್ನಿಸಿದರೂ ಮೀನುಗಳು ಹೊರಬರದೆ ಸತಾಯಿಸಿದವು. ಇಂತಹುದೇ ತಾಣಗಳು ಇಲ್ಲಿಂದ ಮೂರ್ನಾಕ್ಕು ಕಿ. ಮೀ. ಅಂತರದಲ್ಲಿಇನ್ನೆರಡು ಕಡೆಗಳಲ್ಲಿ ಇವೆಯಾದರೂ, ಮಳೆಯ ಕಾರಣದಿಂದ ಪ್ರವಾಸಿಗರಿಗೆ ಅಲ್ಲಿಯ ಭೇಟಿಗೆ ನಿರ್ಬಂಧವಿತ್ತು. ನಮ್ಮ ಅದೃಷ್ಟದಿಂದ ಈ ಒಂದು ತಾಣದ ವೀಕ್ಷಣೆಯು, ಅಂಡಮಾನ್ ಪ್ರವಾಸದ ಅತ್ಯಮೂಲ್ಯ ಕ್ಷಣಗಳನ್ನಾಗಿಸಲು ಸಾಧ್ಯವಾಯಿತು! ಅಲ್ಲಿಂದ ಹಿಂತಿರುಗಿ ಮಧ್ಯಾಹ್ನದ  ರುಚಿ ಶುಚಿಯಾದ ಸರಳ ಊಟವನ್ನು ಸುಮಿತ್ರಾ ಅವರ ಹೋಟೇಲಿನಲ್ಲಿ ಮುಗಿಸಿ, ಮಧ್ಯಾಹ್ನ 3:30ಕ್ಕೆ ಭರತ್ ಪುರ ಕಿನಾರೆಯಿಂದ ಪೋರ್ಟ್ ಬ್ಲೇಯರ್ ನತ್ತ ಹೊರಡಲಿರುವ ಸಮುದ್ರ ನಾವೆಯನ್ನು ತಲಪಲು ಬೇಗನೆ ಹೊರಟೆವು.

ಕಾಲಾಪಾನಿಯ ಬಂದೀಖಾನೆಯತ್ತ…

ಮರುದಿನ ಫೆಬ್ರವರಿ 18,  ಅಂಡಮಾನಿನಲ್ಲಿ ಕೊನೆಯ ದಿನ. ಸೆಲ್ಯುಲರ್ ಜೈಲನ್ನು ಹಗಲು ಹೊತ್ತಿನಲ್ಲಿ ಸರಿಯಾಗಿ ವೀಕ್ಷಿಸಲು ಬೆಳಗ್ಗೆ 10ಗಂಟೆಗೆ ಹೊರಟೆವು. ಪ್ರವಾಸಿಗರ ದಟ್ಟಣೆ ಕಡಿಮೆಯಿತ್ತು. ಒಳಗಡೆಗೆ ಹೋದಾಗ ಅಚ್ಚರಿಯಾಯ್ತು!, ರಾತ್ರಿಯ ದೀಪದ ಬೆಳಕಿನಲ್ಲಿ ನೋಡಿದ್ದ ದೃಶ್ಯ, ಕಲ್ಪನೆಗಿಂತ ಈ ನೋಟ ತೀರಾ ಭಿನ್ನವಾಗಿತ್ತು. ಜೈಲಿನ ಕಟ್ಟಡದ ಮುಂಭಾಗದಲ್ಲಿ ಗೋಡೆಗಳಿಲ್ಲದ ಸಣ್ಣ ಕಟ್ಟಡದೊಳಗೆ, ಕೈದಿಗಳನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿದ್ದ ದೃಶ್ಯಗಳ ಮೂರ್ತರೂಪದ ಮಾನವಾಕೃತಿ ರಚನೆಯನ್ನು ಪ್ರವಾಸಿಗರ ಮುಂದೆ ತೆರೆದಿಡಲಾಗಿದೆ. ಗಾಣಕ್ಕೆ ಎತ್ತಿನ ಬದಲು ಕಟ್ಟಿದ ಕೈದಿಗೆ ಕೊಡುವ ಛಡಿ ಏಟುಗಳು ನಮಗೇ ಬೀಳುವಂತೆ ಭಾಸವಾಗುತ್ತದೆ. ಬಾಯಾರಿ ನೀರಿಗಾಗಿ ಅಂಗಲಾಚಿದಾಗ ಕೊಡುವ ಶಿಕ್ಷೆಯನ್ನು ನೋಡಿದಾಗ, ಕೈ ಕಾಲುಗಳನ್ನು ದಪ್ಪನೆಯ ಕಬ್ಬಿಣದ ಸರಪಳಿಯಿಂದ ಬಿಗಿದು ನೀಡುವ ಚಿತ್ರಹಿಂಸೆಯನ್ನು ಕಂಡಾಗ ಹೃದಯ ಬಿರಿಯುತ್ತದೆ…ಮನಸ್ಸು  ದಿಗಿಲುಗೊಳ್ಳುತ್ತದೆ. ಸಾದಾ ರಾಜಕೀಯ ಕೈದಿಗಳಿಗೆ ಇಂತಹ ಅಮಾನವೀಯ, ಅಸಹನೀಯವಾದ ಕ್ರೂರ ಶಿಕ್ಷೆಗಳನ್ನು ನೀಡುತ್ತಿದ್ದ ಆಂಗ್ಲರ ವಿಕೃತ ಮನೋಸ್ಥಿತಿಯು ಇಲ್ಲಿ ಅನಾವರಣವರಣಗೊಂಡಿದೆ. ಇಲ್ಲಿರುವ ಪ್ರತಿಯೊಂದು ಕಲಾಕೃತಿಯೂ ಸಹಜತೆಯಿಂದ ಕೂಡಿದ್ದು ನೋಡುಗರ ಮನವನ್ನು ಇನ್ನಿಲ್ಲದಂತೆ ಕಲಕುತ್ತದೆ.

ಪಕ್ಕದ ಸಣ್ಣಕೋಣೆಯತ್ತ ನೋಡಿದರೆ ಹೃದಯ ಬಿರಿಯುವಂತಹ ವೇದನೆ… ಕಣ್ಣು ಹಾಯಿಸಲೇ ಭಯ! ಇದುವೇ ಕೈದಿಗಳನ್ನು ಗಲ್ಲಿಗೇರಿಸುವ ಸ್ಥಳ. ಸಾವಿರಾರು ಆತ್ಮಗಳು ಪಿಸುಗುಟ್ಟಿದಂತೆನಿಸಿ, ಇದರ ಬಗ್ಗೆ ಏನು ಹೇಳಲೂ ಶಬ್ದಗಳು ಸಿಗುತ್ತಿಲ್ಲ. ಬರೇ ಮೌನವೇ ಮಾತಾಗಿ ಕಣ್ಣೀರು ಹರಿಯತೊಡಗುತ್ತದೆ. ಅದನ್ನು ಒರೆಸಿಕೊಳ್ಳುತ್ತಾ ಮುಂದಕ್ಕೆ ಎಡಪಕ್ಕದಲ್ಲಿರುವ ಜೈಲಿನತ್ತ ಸಾಗೋಣ…

ಇಲ್ಲಿ, ಬಂದೀಖಾನೆಯ ಪ್ರತಿ ಕೋಣೆಯೂ ತನ್ನ ಕತೆಯನ್ನು ಉಸುರುವ ಧ್ವನಿ ನಿರಂತರ ಕಿವಿಗಪ್ಪಳಿಸುತ್ತದೆ. ಕೈದಿಗೆ ತಟ್ಟೆಯ ಬದಲು ಖಾಲಿ ನೆಲದಲ್ಲಿರುವ ತಟ್ಟೆಯಾಕಾರದ ಜಾಗದಲ್ಲಿಯೇ ನೀಡುತ್ತಿದ್ದ ಅತ್ಯಲ್ಪ ಆಹಾರ, ಮಲಗಲು ಸಾಧ್ಯವಾಗದಷ್ಟು ಇಕ್ಕಟ್ಟಾದ ಕೋಣೆಗಳು, ಉಸಿರಾಟಕ್ಕೆ ಬೇಕಾದ ಗಾಳಿಗಾಗಿ ಅತೀ ಎತ್ತರದಲ್ಲಿರುವ ಸಣ್ಣ ಕಿಟಿಕಿ, ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೂ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ರಚಿಸಿದ ಬಾಗಿಲು , ಬೀಗ ಹಾಗೂ ಬೀಗದ ಕೈ, ಗಾರೆಯಿಲ್ಲದೆ ಬರಿಯ ಕೆಂಪುಕಲ್ಲಿನಲ್ಲಿ ಕಟ್ಟಿದ ಗೋಡೆಗಳು… ಇವುಗಳನ್ನೆಲ್ಲಾ ನೋಡುತ್ತಿದ್ದಂತೆ ದು:ಖ ಉಮ್ಮಳಿಸಿ ಬಂದು ಅದೆಷ್ಟೋ ಪ್ರವಾಸಿಗರು ಬಿಕ್ಕಿಬಿಕ್ಕಿ ಅಳುತ್ತಿರುವುದು ಕಾಣುತ್ತದೆ… ಇದು ಚಲನಚಿತ್ರದ ಕಥೆಯಲ್ಲ, ವಾಸ್ತವ ಎಂಬುದನ್ನು ಖಂಡಿತವಾಗಿಯೂ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಟ್ಟಡದ ಅಗಾಧತೆಯನ್ನಾಗಲಿ, ವಾಸ್ತುಶಿಲ್ಪವನ್ನಾಗಲಿ ನೋಡಿ ಆನಂದಪಡುವ ಮನಸ್ಥಿತಿ ಉಳಿಯುವುದಿಲ್ಲ. ಆದರೂ ವಾಸ್ತವದತ್ತ ನಡೆಯಲೇ ಬೇಕಲ್ಲಾ. ವೀರಸಾವರ್ಕರ್ ಅವರನ್ನು ಇರಿಸಿದ್ದ ಮೂರನೇ ಅಂತಸ್ತಿನಲ್ಲಿರುವ ಕೋಣೆಯಲ್ಲಿ ಉರಿಸಿಟ್ಟಿದ್ದ ನಂದಾದೀಪಕ್ಕೆ ನಮಿಸಿ,  ಮೇಲಂತಸ್ತಿನ ವರೆಗೆ ಹೋಗಿ, ರಭಸವಾಗಿ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ, ಅಲ್ಲಿಂದ ದೂರ ದಿಗಂತದ ವರೆಗೂ ಚಾಚಿದ ಅಗಾಧ ಜಲರಾಶಿಯ ವೈಭವನ್ನು ಕಣ್ತುಂಬಿಕೊಂಡೆವಾದರೂ ಹಿಂತಿರುಗುವಾಗ ಮನಸ್ಸು ಭಾರವಾಗಿತ್ತು.

ಸಂಜೆ ಏಳು ಗಂಟೆಗೆ ನಮ್ಮ ಹೋಟೇಲ್ ನ ಸಮೀಪದಲ್ಲಿರುವ ಸಭಾಗೃಹದಲ್ಲಿ ಪ್ರಸಿದ್ಧ ಹಾಸ್ಯಪಟು ದೀಪು ಶ್ರೀವಾಸ್ತವ್ ಅವರ ಕಾರ್ಯಕ್ರಮವಿರುವ ಬಗ್ಗೆ ಡ್ರೈವರ್ ರಘು ಹೇಳಿದ್ದ. ತುಂಬು ಉತ್ಸಾಹದಿಂದಲೇ ಕಾರ್ಯಕ್ರಮಕ್ಕೆ ಹಾಜರಾದೆವು. ಅಂಡಮಾನಿನ ಮೇಯರ್ ಮಮತಾ ಹಾಗೂ ಶಾಸಕರಾದ ಕುಲದೀಪ ಶರ್ಮರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗನ್ನಿತ್ತಿತು. ಸುಮಾರು ಅರ್ಧ ಗಂಟೆಯ ಶ್ರೀವಾಸ್ತವ್ ಅವರ ಹಾಸ್ಯ ಕಾರ್ಯಕ್ರಮವು ಸಭಿಕರಿಗೆ ಮನೋರಂಜನೆಯನ್ನು ನೀಡುವುದರಲ್ಲಿ ಯಶಸ್ವಿಯಾಯಿತು.

ಮರುದಿನ ಬೆಳ್ಳಂಬೆಳಗ್ಗೆ ಪೋರ್ಟ್ ಬ್ಲೇಯರ್ ನಿಂದ ವಿಮಾನವೇರಿ ಊರ ಕಡೆಗೆ ಪಯಣಿಸಿದಾಗ, ಹಲವು ವರ್ಷಗಳ ನಮ್ಮ ಆಸೆ ಪೂರೈಸಿದ ತೃಪ್ತಿಯ ಜೊತೆ  ಖುಷಿ ಮತ್ತು ನೋವಿನ ಮಿಶ್ರಭಾವದ ಅನುಭವವನ್ನು ನೀಡಿದ ನಮ್ಮ ಅಂಡಮಾನ್ ಪ್ರವಾಸವು ಅವಿಸ್ಮರಣೀಯವಾಗಿರುವುದಂತೂ ದಿಟ.

(ಮುಗಿಯಿತು)
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ:  https://surahonne.com/?p=45832

-ಶಂಕರಿ ಶರ್ಮ, ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *