(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕವಿ ಶ್ರೀ ಕೆಎಸ್ ನರಸಿಂಹ ಸ್ವಾಮಿ ಅವರ ದೃಷ್ಟಿಯಲ್ಲಿ ಕವಿ ಕವಿತೆ ಮಾಲಿಕೆಯಲ್ಲಿ ಮುಂದಿನ ಕವಿತೆ ‘ಎದೆ ತುಂಬಾ ನಕ್ಷತ್ರ’ ಸಂಕಲನದ ‘ಕಿರಿಯ ಕವಿಗೆ _2′:
ಒಂದೆರಡು ಹೂಗಳನ್ನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು
ಎಲ್ಲವೂ ಅರ್ಥವಾಯಿತು ಎಂದು ಹೇಳದಿರು
ಕವಿತೆಗಸ್ವಷ್ಟತೆಯು ಒಂದು ಚೆಲುವು
ಕವನದ ಆರಂಭದಲ್ಲಿ ಕವಿ ಗಿಡದ ಮೇಲೆ ಒಂದೆರಡು ಹೂವನ್ನು ಬಿಡು ಎಂದು ಹೇಳುವ ಮೂಲಕ ಎಲ್ಲವನ್ನು ವಾಚ್ಯವಾಗಿಸದೆ ಓದುಗನ ಊಹೆಗೆ ಕೆಲವನ್ನು ಬಿಡಬೇಕು. ಪೂರ್ಣ ಅರ್ಥವಾಗದಿರುವಿಕೆ ಅಥವಾ ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುವಿಕೆ ಕವಿತೆಗೆ ಒಂದು ಚೆಲುವನ್ನು ತಂದುಕೊಡುತ್ತದೆ ಎಂದು ಸೂಚಿಸುತ್ತಾರೆ.
ಯುವಕವಿಗೆ ನೀನು ಹುಟ್ಟುವ ಮುಂಚೆ ಈ ಲೋಕ ಹೇಗಿತ್ತೆಂದು ನಾನು ಹೇಳಲು ಸಾಧ್ಯವಿಲ್ಲ. ಇಲ್ಲಿ ಯಾವುದು ಪೂರ್ಣ ಯಾವುದು ಅಪೂರ್ಣ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಅಭಾವದಿಂದಲೇ ಕವಿತೆ ಹುಟ್ಟಬಹುದು ಎಂದು ನುಡಿಯುತ್ತಾರೆ.
ಅಷ್ಟಿಷ್ಟು ಲೋಪವಿಲ್ಲದ ಕೃತಿಯನೇ ಕಾಣೆ
ಮುಖದ ಚೆಲುವಿಗೆ ಬೇಕು ಯಾವುದೋ ಕಲೆ,
ಮಿಂಚಿಗಾಸರೆ ಮುಗಿಲು ಸೂರ್ಯ ಸಾರಥಿ ಹೆಳುವ
ಬಿಸಿಲಲ್ಲೆ ಆಡುವನು ತುಂಟ ಹುಡುಗ
ಕವಿಯ ದೃಷ್ಟಿಯಲ್ಲಿ ಯಾವೊಂದು ಕೃತಿಯೂ ಲೋಪರಹಿತ ಎಂದು ಹೇಳಲು ಸಾಧ್ಯವೇ ಇಲ್ಲ .ಆದರೆ ಅದು ಆರೋಪವಲ್ಲ. ಚೆಲುವು ಎದ್ದು ಕಾಣಲು ಕಲೆಯು ಕಾರಣವಾಗುವಂತೆ ಲೋಪವು ಸಹ ಕೃತಿಗೆ ಮೆರುಗು ಕೊಡುತ್ತದೆ. ಪ್ರಪಂಚವನ್ನೆಲ್ಲ ಸುತ್ತುವ ಸೂರ್ಯನ ಸಾರಥಿ ಹೆಳವ .ಹಾಗೆಯೇ ಕರಿಮುಗಿಲು ಮಿಂಚಿಗೆ ಆಸರೆ ಎನ್ನುತ್ತಾ “ಬಿಸಿಲಲ್ಲಿ ಆಡುವನು ತುಂಟ ಹುಡುಗ” ಎಂಬ ರೂಪಕದ ಮೂಲಕ ವೈರುಧ್ಯಗಳ ಅನುಪಮ ಸೌಂದರ್ಯವನ್ನು ಎತ್ತಿ ಹಿಡಿಯುತ್ತಾರೆ.
ತಕ್ಕಡಿಯೇ ಏರುಪೇರಾಗುವುದು ಎನ್ನುವರು ಇನ್ನೊಂದರಲಿ ದೋಷ ಒಂದರ ಗುಣ
ಯಾರು ಯಾರೋ ಕುಳಿತು ಕೊಟ್ಟ ತೀರ್ಪೆಂತಿರಲಿ
ಕೃತಿಯ ಬೆಲೆಯೇ ಅಲ್ಲ ನೀಡಿದ ಹಣ
ನಿಜ! ಕವಿಯ ಮನದ ಭಾವದಿಂದುದಿಸಿ ಬಂದ ಕವಿತೆಗಳ ಕೃತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಮೂಲ್ಯ. ಹಾಗೆ ಯಾರೋ ಎಲ್ಲೋ ಕುಳಿತು ಕೊಟ್ಟ ತೀರ್ಪು ಕೃತೀಯ ಮೌಲ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ. ತಕ್ಕಡಿಯೇ ಏರುಪೇರು ಆಗಬಹುದು. ಅಂತೆಯೇ ಕವಿಯ ದೃಷ್ಟಿಯಲ್ಲಿ ಒಂದರಲ್ಲಿನ ದೋಷ ಮತ್ತೊಂದಕ್ಕೆ ಗುಣವಾಗಿ ಮಾರ್ಪಡುತ್ತದೆ. ಹಾಗಾಗಿ ಯಾವುದು ಮೇಲೂ ಅಲ್ಲ ಯಾವುದು ಕೀಳೂ ಅಲ್ಲ. ಇಲ್ಲಿ ಇವರದೇ ಮತ್ತೊಂದು ಕವಿತೆಯ ಸಾಲುಗಳು ನೆನಪಿಗೆ ಬರುತ್ತದೆ.
ಈ ಸಲವೂ ಕೂಡ ಕೋಗಿಲೆಗಿಲ್ಲ ಬಹುಮಾನ
ಸಂಗೀತ ಪಂಡಿತರ ಬಹುಮತದ ತೀರ್ಮಾನ
ಕೆಲವರಿಗೆ ಸಂತೋಷ ಕೆಲವರಿಗೆ ಅನುಮಾನ
ಇನ್ನು ಕೆಲವರಿಗಂತೂ ಅಡ್ಡಗೋಡೆಯ ದೀಪ
ಹಲವರಿಗೆ ಬಂದಿತ್ತು ಬೆಂಕಿ ಕಾರುವ ಕೋಪ
ಪ್ರಸಕ್ತ ಸಾಹಿತ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಈ ಸಾಲುಗಳು.
ಕವಿ ಹೃದಯ ಕಂಡುಕೊಳ್ಳುವುದು ಕವಿತೆಯ ಚೆಲುವ
ನಿನ್ನ ತಲೆಯಲ್ಲಿಲ್ಲ ಕವನದ ಸೆಲೆ
ಕವನವೆಂಬುದು ಹೃದಯದ ಅಂತರಾಳದಿಂದ ಹುಟ್ಟಿಬರುವ ಭಾವ. ಅದು ಬುದ್ದಿಯನ್ನು ಉಪಯೋಗಿಸಿ ಬರೆಯಲು ಸಾಧ್ಯವಿಲ್ಲ. ಹಾಗೆಯೇ ಕವಿ ಹೃದಯ ಮಾತ್ರ ಕವಿತೆಯ ಚೆಲುವನ್ನು ಕಂಡುಕೊಳ್ಳಲು ಸಾಧ್ಯ. ಹಾಗಾಗಿಯೇ ಯುವಕವಿಗೆ ಹಿರಿಯ ಕವಿಗಳು ಬರೀ ಶಾಸ್ತ್ರದ ಚೌಕಟ್ಟಿನಲ್ಲಿ ಸೀಮಿತವಾಗದಿರು ಕವಿತೆ ಎಂಬುದು ಕಲೆ ಅದು ಶಾಸ್ತ್ರವನ್ನು ಮೀರಿದ್ದು ಎಂಬ ಬುದ್ಧಿ ಮಾತು ಹೇಳುತ್ತಾರೆ.
ಕವಿತೆಯ ಈ ಕಡೆಯ ಸಾಲುಗಳನ್ನು ನೋಡಿ,
ಉಪಹಾರ ಮಂದಿರದ ಮೂಲೆ ಕುರ್ಚಿಗಳಲ್ಲಿ
ವಿಪರೀತ ಚರ್ಚೆಗಳು ನಡೆಯುತಿಹವು ಸಿಗರೇಟಿನ ಹೊಗೆಯಲ್ಲಿ ಎದ್ದು ಹೋಗುವ ಮಂದಿ
ಕವಿತೆಯ ವಿಮರ್ಶೆಯನು ಮಾಡುತಿಹರು
ಕವಿಯ ಕನಸಿನ ಕಲ್ಪನೆಯ ಕೂಸಾದ ಕವಿತೆ ಅವನಿಗೆ ಎಷ್ಟೊಂದು ಪ್ರಿಯವಾದದ್ದು, ಆದರೆ ಅದು ಉಪಹಾರ ಮಂದಿರದ ಮೂಲೆ ಕುರ್ಚಿಗಳಲ್ಲಿನ ಹರಟೆ ಚರ್ಚೆಗೆ ವಸ್ತುಗಳಾಗಿರುತ್ತದೆ, ಅದು ಸಿಗರೇಟಿನ ಹೊಗೆಯ ಮಧ್ಯೆ ಕವಿತೆ ವಿಮರ್ಶೆಯಾಗುತ್ತಿರುತ್ತದೆ. ಹೀಗೆ ಹೇಳುವಲ್ಲಿ ಕವಿ ತನ್ನ ಕನಸಿನ ಕೂಸು ಹಾದಿಯ ವಸ್ತು ಆಗಿಬಿಟ್ಟಿದೆ ಎನ್ನುವ ವಿಷಾದವನ್ನು ಧ್ವನಿಸುತ್ತದೆ.
ಈ ಕವನದ ಮೂಲಕ ಹಿರಿಯ ಕವಿಗಳು ಬರೆಯುವವರಿಗೆ ಅನೇಕ ಸಲಹೆ ಸೂಚನೆಗಳನ್ನು ಅನೇಕ ರೂಪಕಗಳ ಮೂಲಕ ಕೊಡುತ್ತಾರೆ. ಪ್ರಸ್ತುತ ಸಾಹಿತ್ಯ ಲೋಕದಲ್ಲಿನ ವಾಸ್ತವತೆಯನ್ನು ಬಿಡಿಸಿ ಹೇಳುತ್ತಾ ಮುಂದಿನ ಸಂದರ್ಭಗಳಿಗೆ ಅಣಿ ಮಾಡುವುದನ್ನೂ ಸಹ ಇಲ್ಲಿ ಕಾಣಬಹುದಾಗಿದೆ.
(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಬರಹ ಇಲ್ಲಿದೆ: https://surahonne.com/?p=45807

ಸುಜಾತಾ ರವೀಶ್ , ಮೈಸೂರು.

