ಅಂದಾನೊಂದು ಕಾಲದಲ್ಲಿ ರೇಡಿಯೋ ಇರುತ್ತಿದ್ದದ್ದು ಒಂದೆರಡು ಮನೆಗಳಲ್ಲಿ ಮಾತ್ರ. ಆದರೇನು ರೇಡಿಯೋ ಇಲ್ಲದ ಮನೆಯವರಿಗೂ ಸುದ್ದಿಗಳ ಕೊರತೆಯಿರಲಿಲ್ಲ. ಬೆಳಿಗ್ಗೆ ಬಾವಿ ಕಟ್ಟೆ ಬಳಿಗೆ ಹೋದರೆ ಸಾಕು—ದೇಶದ ಸುದ್ದಿ, ಊರಿನ ಸುದ್ದಿ, ಪಕ್ಕದ ಮನೆಯ ಸುದ್ದಿ, ನಿನ್ನೆ ರಾತ್ರಿ ನಡೆದ ಜಗಳ, ಮೊನ್ನೆ ಬಂದ ನೆಂಟ, ನಾಳೆ ನಡೆಯಲಿರುವ ಮದುವೆ—ಎಲ್ಲವೂ ಬಣ್ಣಬಣ್ಣಬಳಿದುಕೊಂಡು ಷಡ್ರಸಗಳನ್ನೂ ತುಂಬಿಕೊಂಡು ಒಂದೇ ಗಂಟೆಯಲ್ಲಿ ಪ್ರವಾಹದ ನೀರಿನಂತೆ ಊರನ್ನು ಆವರಿಸಿಕೊಳ್ಳುತ್ತಿತ್ತು. ಇಡೀ ದಿನದ ಸುದ್ದಿಗೆ ಗ್ರಾಸವಾಗುತ್ತಿದ್ದವು.
ಪ್ರತಿ ಊರಿನ ಆಗಿನ ಅಸಲಿ ಆಕಾಶವಾಣಿ ಎಂದರೆ ಬಾವಿ ಕಟ್ಟೆಗಳೆ!
ಬೆಳಿಗ್ಗೆ ಕೋಳಿ ಕೂಗುವುದಕ್ಕೂ ಮುಂಚೆಯೇ ಯಾರಾದರೂ ಒಬ್ಬರು ಕೊಡ ಹಿಡಿದು ಬಾವಿಯ ಕಡೆ ಹೊರಟಿರುತ್ತಿದ್ದರು.
“ಏನಮ್ಮಾ, ಇಷ್ಟು ಬೆಳ್ಳಂಬೆಳಿಗ್ಗೆ?”
“ನೀರು ಸೇದೋಕೆ.”
“ನೀರು ಸೇದೋಕ್ಕಲ್ದೆ ಬಾವಿಗೇ ನೀರು ತುಂಬಿಸೋದಕ್ಕೆ ಯಾರಾದ್ರೂ ಹೋಗ್ತಾರಾ? ನಿನ್ನೆ ಸೇದಿದ ನೀರು ನಿನ್ನೆ ರಾತ್ರೀನೇ ಮುಗಿದ್ಹೋಯ್ತಾ!!?”
“ಅಲ್ಲ. ಅದೂ….”
ಅನ್ನುವಷ್ಟರಲ್ಲಿ ಇನ್ನೊಬ್ಬಳು ಬಂದುಬಿಟ್ಟರೆ, ಮಾತಿನ ದಿಕ್ಕೇ ಬದಲಾಗುತ್ತಿತ್ತು.
“ನಿನ್ನೆ ನಿಮ್ಸೊಸೆ ತೌರ್ಮನೆಗೆ ಹೋದ್ಳಂತೆ?”
“ಹೌದು.”
“ಏನಾಯ್ತು?”
“ಏನೂ ಆಗಿಲ್ಲ.”
“ಏನೂ ಆಗಿಲ್ಲಾಂದ್ರೆ ಇಷ್ಟ್ಬೇಗ ಯಾಕ್ಹೋದ್ಲೂ?
ಅವಳು ‘ಏನೂ ಆಗಿಲ್ಲ’ ಎಂದರೂ, ಬಾವಿ ಕಟ್ಟೆಗೆ ಬರುತ್ತಿದ್ದವರ ಮುಖದಲ್ಲಿ ಮಾತ್ರ ‘ಏನೋ ಆಗಿದೆ, ಏನೇನೋ ಆಗಿದೆ. ಏನೇನೋ ಆಗಿಯೇಬಿಟ್ಟಿದೆ’ ಎಂಬ ತೀರ್ಮಾನವಾಗಿ, ಆಗಿಬಿಟ್ಟಿದೆ ಎಂದುಕೊಂಡ ವಿಷಯ ಕೈಕಾಲು ರೆಕ್ಕೆ ಪಡೆದುಕೊಂಡು ಇಡೀ ಊರಿನಲ್ಲಿ ಹಾರಾಡಲು ಶುರುವಾಗುತ್ತಿತ್ತು!
ಬಾವಿ ಕಟ್ಟೆಯ ಬಳಿ ಕೊಡಗಳಿಗಿಂತ ಬಾಯಿ ಕಿವಿಗಳೇ ಜಾಸ್ತಿ.
ಬಾವಿ ಕಟ್ಟೆಯ ಇನ್ನೊಂದು ವಿಶೇಷವೆಂದರೆ ಸುದ್ದಿ ಹರಡುವ ವೇಗ. ಬೆಳಿಗ್ಗೆ :
“ನಮ್ಮ ಪಕ್ಕದ್ ಮನೆ ಹುಡುಗನ್ಗೆ ಮದ್ವೆಗೆ ಹುಡ್ಗಿ ನೋಡ್ತಿದಾರಂತೆ”
ಹತ್ತು ನಿಮಿಷಕ್ಕೆ ಸುದ್ದಿ:
“ಹುಡುಗ ಹುಡುಗೀನ ನೋಡಿ ಒಪ್ಪಿದಾನಂತೆ.”
ಮಧ್ಯಾಹ್ನಕ್ಕೆ:
“ಹುಡುಗನ ಮದುವೆ ನಿಶ್ಚಯವಾಗಿದೆಯಂತೆ, ಹುಡುಗಿಯ ಮನೆಯವರು ಬಂದು ನೋಡಿ ಹೋಗಿದ್ದಾರಂತೆ.”
ಸಂಜೆಗೆ:
“ಮದುವೆ ದಿನಾಂಕವೂ ಗೊತ್ತಾಗಿದೆ!”
ಮುಂದಿನ ದಿನಕ್ಕೆ:
“ಮದುವೆ ನಿಶ್ಚಯವಾಗುವುದಕ್ಕೆ ಮೊದಲೇ ಅವರಿಬ್ರಿಗೂ ಮೊದ್ಲೇ ಗೊತ್ತಿತ್ತಂತೆ!”
ಹೀಗೆ ಸುದ್ದಿಯ ಗಾಳಿ ಧೂಳು ಎಲೆ ತರಗೆಲೆಗಳೆಲ್ಲವನ್ನೂ ಕೂಡಿಸಿಕೊಂಡು ವೇಗವಾಗಿ ಸುಳಿದು ಸುತ್ತಾಡುತ್ತಿತ್ತು.
ಬಾವಿ ಕಟ್ಟೆ ಹೆಂಗಸರದ್ದೇ ಎಂದುಕೊಂಡರೆ ತಪ್ಪು. ಸ್ವಲ್ಪ ದೂರದಲ್ಲಿ ಹುಡುಗರ ಗುಂಪು. ಅವರಿಗೆ ನೀರು ಸೇದಿಕೊಂಡು ಕೊಡ ಹೊತ್ತೊಯ್ಯವ ಕೆಲಸವೇನೂ ಇರೊಲ್ಲ.
ಆದ್ರೂ ಪ್ರತಿದಿನ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಹಾಜರಿ.
ಯಾರನ್ನಾದ್ರೂ “ಇಲ್ಲೇನ್ಮಾಡ್ತಿದೀಯೋ? ಪ್ರತಿದಿನ ಇಲ್ಲ್ಯಾಕೆ ಬರ್ತೀಯ?” ಎಂದು ಕೇಳಿದರೆ,
“ ಅದೂ… ಅದೂ..ನಮ್ಮನೆ ಹಸು… ಇಲ್ಲಿಗ್ಬರ್ತಿರುತ್ತಲ್ಲಾ… ಅದಕ್ಕೇ…”
“ನಿಮ್ಮನೆ ಹಸು ಯಾವಾಗ್ನಿಂದ ಜಡೆ ಹಾಕ್ಕೊಂಡು, ಬಳೆ ತೊಟ್ಟು ಬಾವಿಗೆ ನೀರ್ಸೇದೋಕೆ ಬರ್ತಿದೆ?” ಎಂದು ವ್ಯಂಗ್ಯವಾಗಿ ಕೇಳಿದರೆ, ಹುಡುಗ ಪೆಚ್ಚುಪೆಚ್ಚಾಗಿ “ಬೆ ಬೆ ಬೇ* ಎನ್ನುತ್ತಿದ್ದಂತೆ ಬಾವಿ ಕಟ್ಟೆಯ ಹೆಂಗಸರ ಮುಖದಲ್ಲಿ ಏಕಕಾಲದಲ್ಲಿ ಗೊಳ್ಳನೆ ಸಿಡಿವ ನಗು. ಅವನು ತಲೆತಗ್ಗಿಸಿಕೊಂಡು ಹೊರಟುಹೋಗುತ್ತಿದ್ದ.
ಹಿಂದಿನಿಂದ ಯಾರೋ, “ಹಸು ಬಂದರೆ ಕರೆಯಪ್ಪಾ!” ಎಂದರೆ ಮತ್ತೊಂದು ಸುತ್ತು ನಗು!
ಆದರೆ ಆ ಬಾವಿ ಕಟ್ಟೆಯ ನಗುವಿನಲ್ಲೇ ಒಂದು ಮಮತೆ ಇತ್ತು.
ಯಾರ ಮನೆಯಲ್ಲಾದರೂ ಹೆರಿಗೆ ಎಂದರೆ ಎಲ್ಲರೂ ಓಡುತ್ತಿದ್ದರು. ಯಾರಿಗಾದರೂ ಕಾಯಿಲೆ ಎಂದರೆ ಮನೆಯ ಕೆಲಸ ಹಂಚಿಕೊಳ್ಳುತ್ತಿದ್ದರು. ಯಾರಾದರೂ ಗಂಡನ ಜೊತೆ ಜಗಳ ಮಾಡಿಕೊಂಡು ಕಣ್ಣೀರು ಹಾಕಿಕೊಂಡು ಬಂದರೆ, ನೀರು ಸೇದುವುದಕ್ಕಿಂತ ಮೊದಲು ಮನಸ್ಸಿನ ದುಗುಡದ ನೀರು ಹೊರಬರುತ್ತಿತ್ತು.
“ಅಳ್ಬೇಡ. ಗಂಡಸ್ರೇ ಹಾಗೆ. ಎರಡ್ದಿನ ಬಿಟ್ಟು ಮಾತಾಡ್ತಾನೆ ಬಿಡು.”
“ನಿಜವಾ?”
“ನನ್ನ ಗಂಡನ್ನ ನೋಡಿ ಹೇಳ್ತಿದ್ದೀನಿ!”
ಅಷ್ಟೇ. ದುಃಖದಲ್ಲಿದ್ದವಳಿಗೂ ನಗು ಬರುತ್ತಿತ್ತು.
ಹೀಗೆ ಬಾವಿ ಕಟ್ಟೆ ಕೇವಲ ನೀರು ಸೇದುವ ಜಾಗವಾಗಿರಲಿಲ್ಲ. ಅದು ನಮ್ಮ ಊರಿನ ಸುದ್ದಿ ಇಲಾಖೆ, ಮಹಿಳಾ ಸಂಘ, ನ್ಯಾಯಾಲಯ, ಮನರಂಜನಾ ಕೇಂದ್ರ, ಅಡುಗೆ ಹಾಡುಗಳ ವಿನಿಮಯ ಕಲಿಕೆಯ ಸಾಂಸ್ಕೃತಿಕ ವೇದಿಕೆ, ಸಲಹಾ ಸಮಿತಿ, ಕೆಲವೊಮ್ಮೆ ಪ್ರೇಮಿಗಳ ಗುಪ್ತ ಕಚೇರಿ—ಎಲ್ಲವೂ ಆಗಿತ್ತು!
ಒಂದು ಕೊಡ ನೀರಿಗೆ ಇಳಿಯುತ್ತಿತ್ತು. ಹತ್ತು ಮಾತುಗಳು ಮೇಲೆ ಬರುತ್ತಿದ್ದವು.
ಒಂದು ಕೊಡ ತುಂಬುತ್ತಿತ್ತು. ಹತ್ತು ಮನಸ್ಸುಗಳ ದುಃಖಗಳು ಖಾಲಿಯಾಗುತ್ತಿದ್ದವು.
“ಊರಿಗೆ ಬಂದೋಳು ನೀರಿಗೆ ಬರ್ದೇ ಇರ್ತಾಳ್ಯೇ?”
ಎಂಬ ಗಾದೆ ಈಗ ಹೇಳಿದರೆ, “ಊರಿಗೆ ಬಂದೋಳು ನೀರಿಗ್ಯಾಕೆ ಬರ್ಬೇಕು? ಮನೇಲಿ ನಲ್ಲಿ, ಓವರ್‌ಹೆಡ್ ಟ್ಯಾಂಕ್ ಇರೊಲ್ವೇ!” ಎನ್ನುವಂತೆ ಇಂದಿನ ಹುಡುಗಿಯರು ನಮ್ಮನ್ನೇ ವಿಚಿತ್ರವಾಗಿ ನೋಡಬಹುದು. ಕೇಳಬಹುದು. ಆದರೆ ನಮ್ಮ ಕಾಲದಲ್ಲಿ ಈ ಗಾದೆ ಅಕ್ಷರಶಃ ಸತ್ಯವಾಗಿತ್ರು. ಊರಿಗೆ ಹೊಸದಾಗಿ ಸೊಸೆಯಾಗಿ ಬಂದವಳಾಗಲಿ, ತವರಿಗೆ ಬಂದ ಮಗಳಾಗಲಿ, ನೆಂಟರ ಮನೆಗೆ ಬಂದಅತಿಥಿಯಾಗಲಿ , ಬಾವಿಕಟ್ಟೆಗೆ ಹೋಗದೆ ಇದ್ದರೆ ಊರಿನ ಪರಿಚಯವೇ ಪೂರ್ಣವಾಗುತ್ತಿರಲಿಲ್ಲ!
ಆ ಕಾಲದಲ್ಲಿ ಕೆಲಕೆಲವು ಊರುಗಳಲ್ಲಿ ಕೆರೆ ಇಲ್ಲ, ನದಿ ಇಲ್ಲ, ನಲ್ಲಿಯ ಮಾತಂತೂ ಬಿಡಿ. ನೀರಿನ ಒಂದೇ ಸ್ರೋತ ಬಾವಿಯೇ. ಅದೇ ಊರಿನ ಜಲಗಂಗೆ. ಬೆಳಗಾಗುವುದೇ ಬಾವಿಕಟ್ಟೆಯ ಸದ್ದುಗಳಿಂದ. ಒಂದು ಕಡೆ ಕೊಡಗಳ ಕಣಕಣ ಸದ್ದು, ಇನ್ನೊಂದು ಕಡೆ ಹೆಂಗಸರ ಮಾತು, ಮತ್ತೊಂದು ಕಡೆ ಹಗ್ಗದ ಸರಸರ. ಕೊಡ ಬಾವಿಗೆ ಇಳಿಸಿ ನೀರು ಸೇದುವಾಗ—
“ಜೀರ್.ಜೀರ್ ಜೀರ್.. ಜಿರಕ್…”
ಆ ಸದ್ದಿಗೇ ಒಂದು ಲಯವಿತ್ತು. ಇಂದಿನ ನಲ್ಲಿಯನ್ನು ತಿರುಗಿಸಿದರೆ “ಸರ್ರ್” ಎಂದು ನೀರು ಬಂದುಬಿಡುತ್ತದೆ. ಆಗ ಒಂದು ಕೊಡ ನೀರು ಸೇದುವುದಕ್ಕೂ ಪ್ರಕೃತಿ ತನ್ನದೇ ಒಂದು ಸಂಗೀತ ಕಾರ್ಯಕ್ರಮ ನಡೆಸುತ್ತಿತ್ತು!
ತುಂಬಿದ ಕೊಡಗಳನ್ನು ತಲೆಯ ಮೇಲೋ, ಸೊಂಟದಲ್ಲೋ ಅಥವಾ ಎರಡೂ ಕಡೆ ಹೊತ್ತು ಮನೆಗೆ ಬರಬೇಕು. ಹಂಡೆ ಮಾತ್ರ ಮನೆಯಲ್ಲೇ ಮಹಾರಾಣಿಯಂತೆ ಕುಳಿತಿರುತ್ತಿತ್ತು. ಬಾವಿಗೆ ಹೋಗುವುದು ಕೊಡದ ಕೆಲಸ; ಮನೆಗೆ ಬಂದ ಮೇಲೆ ಆ ಕೊಡದ ನೀರು, ಕಲ್ಲಿನ ಅಥವಾ ಸಿಮೆಂಟಿನ ತೊಟ್ಟಿಗೆ ಅಥವಾ ದೊಡ್ಡ ಹಂಡೆಗೆ ಸೇರುತ್ತಿತ್ತು. ಮತ್ತೆ ಖಾಲಿ ಕೊಡದೊಂದಿಗೆ ಬಾವಿಗೆ!
ಹೀಗೆ ಒಂದಲ್ಲ, ಎರಡಲ್ಲ—ಎಷ್ಟೋ ಸುತ್ತು!
ಆದರೆ ಅಸಲಿ ರೋಚಕತೆ ಉಂಟಾಗುತ್ತಿದ್ದುದು ಗಟ್ಟಿಯಾಗಿ ಹಗ್ಗದಿಂದ ಬಂಧಿಸದ ಕೊಡ ಅಕಸ್ಮಾತ್ತಾ ಬಾವಿಗೆ ಬಿದ್ದುಬಿಟ್ಟಾಗ!
ಒಬ್ಬಳ ಕೊಡ ಕೈತಪ್ಪಿ ‘ಡಬಕ್ ಕ್ಲಕ್!’ ಎಂದು ಬಾವಿಯೊಳಗೆ ಬಿದ್ದುಹೋಯಿತೆಂದರೆ, “ಅಯ್ಯೋ, ಕೊಡ ಬಿತ್ತು!” ಎನ್ನುವುದು ಅವಳೊಬ್ಬಳ ದುಃಖವಾಗಿರುತ್ತಿರಲಿಲ್ಲ. ಬಾವಿಕಟ್ಟೆಯಲ್ಲಿದ್ದ ಎಲ್ಲರಿಗೂ ಅದು ತಕ್ಷಣದ ರಾಷ್ಟ್ರೀಯ ಸಮಸ್ಯೆ!
“ಪಾತಾಳಗರಡಿ ತಗೊಂಬರ್ತೀನಿ!”ಎಂದು ಯಾರೋ ಓಡುತ್ತಾರೆ.
ಹಗ್ಗದ ತುದಿಯಲ್ಲಿ ಪಾತಾಳಗರಡಿ ಕಟ್ಟಿ, ಬಾವಿಗೆ ಇಳಿಸಿ, ಬಟ್ಟೆ ಜಾಲಾಡಿದಂತೆ ಸುತ್ತಿಸಿ ಸುತ್ತಿಸಿ ಜಾಲಾಡಿ ಕೆಳಗೆ ಬಿದ್ದ ಕೊಡವನ್ನು ಹುಡುಕಿ ಹಿಡಿಯಬೇಕು. ಮೇಲಿದ್ದವರು ಹಗ್ಗ ಎಳೆಯುತ್ತಾರೆ; ಕೆಳಗಿದ್ದ ಪಾತಾಳಗರಡಿ ತನ್ನ ಕರ್ತವ್ಯ ಮುಗಿಸಿರುತ್ತದೆ. ಪಾತಾಳಗರಡಿಯ ಕೊಕ್ಕೆಗೆ ಸಿಕ್ಕಿ ಹಾಕಿಕೊಂಡಿದ್ದ ಕೊಡ ರಾಜಗಾಂಭಿರ್ಯದಿಂದ ಲಾಸ್ಯವಾಡುತ್ತಾ ಮೇಲೆ ಬಂದರೆ—ಅದು ಕೇವಲ ಒಂದು ಪಾತ್ರೆ ವಾಪಸ್ಸಾದ ಸಂತೋಷವಲ್ಲ; ಒಂದು ಮನೆಯ ಆರ್ಥಿಕ ಬಜೆಟ್ ಉಳಿದ ಸಂಭ್ರಮ!
ಪಾತಾಳಗರಡಿಗೂ ಸಿಗದಿದ್ದರೆ?
“ಮುಳುಗುಕಾರನನ್ನು ಕರೀರಿ!”
ಅವನು ಬಂದರೆ ಸಾಕು, ಬಾವಿಕಟ್ಟೆಯ ವಾತಾವರಣವೇ ಬದಲಾಗುತ್ತಿತ್ತು. ಗಟ್ಟಿಯಾಗಿ ಕಚ್ಚೆ ಕಟ್ಟಿ, ಉಸಿರು ಬಿಗಿಹಿಡಿದು ಬಾವಿಗೆ ಇಳಿದು, ತಳಕ್ಕೆ ಹೋಗಿ, ಕಳೆದುಹೋದ ಕೊಡವನ್ನೋ ಬಕೀಟನ್ನೋ ಹುಡುಕಿ ತರುವ ಅವನ ಸಾಹಸ ನೋಡಲು ಸುತ್ತಲೂ ಮಕ್ಕಳು, ಜನ. ಅವನು ಮೇಲಕ್ಕೆ ಬಂದಾಗ ಪಾತ್ರೆ ಸಿಕ್ಕಿತೋ, ಇಲ್ಲವೋ—ಆದರೆ ಪ್ರೇಕ್ಷಕರಿಗೆ ಮಾತ್ರ ಒಂದು ರೋಚಕ ಸಾಹಸ ಚಿತ್ರ. ಅವನೊಬ್ಬ ಹೀರೋ!
ಬಾವಿಕಟ್ಟೆ ನೀರಿನ ಜಾಗ ಮಾತ್ರವೇ? ಅಲ್ಲಲ್ಲ. ಅದು ಊರಿನ ವಾರ್ತಾ ಪ್ರಸಾರ ಕೇಂದ್ರವೂ ಹೌದು!
“ ನಿಮಗೆ ಗೊತ್ತಾ? ಎಂದು ಒಂದು ಕೊಡ ನೀರು ಸೇದುವಷ್ಟರಲ್ಲಿ ನಾಲ್ಕು ಮನೆಗಳ ಸುದ್ದಿ, ಐದು ಮನೆಯ ವಿಚಾರ, ಆರು ಮನೆಯ ಅನುಮಾನ—ಎಲ್ಲವೂ ಊರಿನಲ್ಲಿ ಪ್ರಚಾರಪಡೆಯಲು ಸುತ್ತು ಹೊಡೆದುಬರುತ್ತಿದ್ದವು.
ಆದರೆ ಬಾವಿಕಟ್ಟೆಯ ಮಾತುಗಳೆಲ್ಲ ಹರಟೆಯೇ ಆಗಿರಲಿಲ್ಲ. ಅದು ಊರಿನ ಸಹಕಾರದ ಕೇಂದ್ರವೂ ಆಗಿತ್ತು. ಯಾರ ಮನೆಯಲ್ಲಾದರೂ ಕಷ್ಟ ಬಂದರೆ ಸುದ್ದಿ ಮೊದಲು ಬಾವಿಕಟ್ಟೆಗೆ ಬರುತ್ತಿತ್ತು; ಅಲ್ಲಿಂದ ಅದು ನಾಲ್ಕು ಮನೆಗಳಿಗೆ ಹೋಗಿ, ಅವಶ್ಯ ನೆರವು ಆ ಮನೆಗೆ ತಲುಪುತ್ತಿತ್ತು. ಯಾರದೇ ಮನೆಯ ಮದುವೆ, ಸೀಮಂತ, ಹಬ್ಬ, ಶುಭಕಾರ್ಯಗಳ ಸಂತೋಷವೂ, ಕಷ್ಟಸುಖಗಳ ಹಂಚಿಕೆಯೂ ಅಲ್ಲಿಯೇ ಆಗುತ್ತಿತ್ತು.
ಹೆರಿಗೆಯಾದ ಹೆಂಗಸು ಎರಡು–ಮೂರು ತಿಂಗಳಾದ ಮೇಲೆ ಗಂಗೆ ಪೂಜೆ ಮಾಡಿ, ಆಮೇಲಷ್ಟೇ ಹೊರಗೆ ಹೋಗುವ ಶಾಸ್ತ್ರ. ಆ ದಿನ ಬಾವಿಯ ನೀರು ಕೇವಲ ನೀರಾಗಿರುತ್ತಿರಲಿಲ್ಲ; ಪಾವನ ಪವಿತ್ರ ಗಂಗೆಯ ಪ್ರತೀಕ. ಪೂಜೆ, ಶುದ್ಧಿ, ಹೊಸ ಜೀವನದ ಆರಂಭ—ಇವೆಲ್ಲದರ ನಡುವೆ ಬಾವಿ ಮೌನವಾಗಿ ನಿಂತಿರುತ್ತಿತ್ತು.
ಬಾವಿ ಕಟ್ಟೆಯ ಮೇಲೆ ನಗು ಇತ್ತು; ಹರಟೆ ಇತ್ತು; ಚುರುಕು ಮಾತು ಇತ್ತು. ಆದರೆ ಜೀವನದ ಕಹಿ ನೆರಳುಗಳೂ ಅದಕ್ಕೆ ಗೊತ್ತಿದ್ದವು. ಕಷ್ಟಗಳಿಂದ ಜರ್ಜರಿತರಾದ ಕೆಲವರು ಅದೇ ಬಾವಿಯನ್ನು ತಮ್ಮ ಕೊನೆಯ ದಾರಿಯನ್ನಾಗಿ ಮಾಡಿಕೊಂಡ ದುಃಖದ ಘಟನೆಗಳೂ ಊರಿನಲ್ಲಿ ನಡೆದಿದ್ದವು. ಆದ್ದರಿಂದ ಬಾವಿ ಎಂದರೆ ಕೇವಲ ನೀರನ್ನು ಕೊಡುವ ಜಾಗವಲ್ಲ; ಮನುಷ್ಯರ ಬದುಕಿನ ಸುಖ–ದುಃಖಗಳನ್ನೆಲ್ಲ ತನ್ನೊಳಗೆ ಪ್ರತಿಬಿಂಬಿಸಿಕೊಂಡ ಮೌನ ಸಾಕ್ಷಿ.
ಬಾವಿಕಟ್ಟೆಯ ಮೇಲೆ ಕುಳಿತು ಹೆಂಗಸರು ಮಾತನಾಡುತ್ತಿದ್ದಾಗ, ಅವರ ಕೈಗಳು ಕೊಡ ಎಳೆಯುತ್ತಿದ್ದವು; ಬಾಯಿ ಊರಿನ ಸುದ್ದಿಗಳನ್ನು ಎಳೆಯುತ್ತಿತ್ತು; ಮನಸ್ಸು ಮಾತ್ರ ಒಬ್ಬರ ಕಷ್ಟವನ್ನು ಮತ್ತೊಬ್ಬರ ಕಷ್ಟದ ಜೊತೆ ತೂಗುತ್ತಿತ್ತು. ಒಂದು ಮನೆಯ ನಗು ಇನ್ನೊಂದು ಮನೆಯಲ್ಲೂ ಮೊಳಗುತ್ತಿತ್ತು. ಒಂದು ಮನೆಯ ಕಣ್ಣೀರನ್ನು ನಾಲ್ಕು ಮನೆಗಳ ಸೆರಗು ಒರೆಸುತ್ತಿತ್ತು. ಇಂದು ಮನೆಯೊಳಗೇ ನಲ್ಲಿಯನ್ನು ತಿರುಗಿಸಿದರೆ ಧಾರಾಳವಾಗಿ ನೀರು ಬರುತ್ತದೆ. ಯಾರನ್ನೂ ಕೇಳಬೇಕಿಲ್ಲ. ಯಾರ ಸುದ್ದಿಯೂ ತಿಳಿಯಬೇಕಿಲ್ಲ. ಯಾರ ದುಃಖವೂ ಯಾರಿಗೂ ಗೊತ್ತಾಗಬೇಕಿಲ್ಲ.
ಅಂದು ನೀರು ತರಲು ಬಾವಿಗೆ ಹೋಗಬೇಕಾಗಿತ್ತು; ಮಾತು ತರಲು ಬಾವಿ ಕಟ್ಟೆಗೆ ಹೋಗಬೇಕಾಗಿತ್ತು. ನೀರು ಕೊಡಗಳಲ್ಲಿ ಮನೆಗೆ ಬರುತ್ತಿತ್ತು. ನಗು, ಸುದ್ದಿ, ಸ್ನೇಹ, ಸಾಂತ್ವನ—ಮನಸ್ಸನ್ನು ತುಂಬಿಕೊಂಡು ಮನೆಗೆ ಬರುತ್ತಿತ್ತು. ಬಾವಿ ಒಣಗಿದ ಮೇಲೆ ಊರಿಗೆ ನೀರಿನ ಕೊರತೆಯಾಯಿತು. ಆದರೆ ಬಾವಿ ಕಟ್ಟೆಗಳು ಮಾಯವಾದ ಮೇಲೆ ಊರಿಗೆ ಮಾತಿನ ಕೊರತೆ, ಜನಗಳಿಗೆ ಸಂಬಂಧದ ಕೊರತೆ. ಮನೆಯೊಳಗೇ ನಲ್ಲಿ. ಬೇಕಾದಾಗ ತಿರುಗಿಸಿದರೆ ಸಾಕು. ಕೊಡ ಹಗ್ಗಗಳ ಕಸರತ್ತು ಇಲ್ಲ. “ಜೀರ್ ಜಿರಕ್” ಇಲ್ಲ. ಪಾತಾಳಗರಡಿ ಇಲ್ಲ. ಮುಳುಗುಕಾರನ ಸಾಹಸ ಬೇಕಿಲ್ಲ.
ಅದಕ್ಕಿಂತ ಮುಖ್ಯವಾಗಿ—“ಊರಿಗೆ ಬಂದೋಳು ನೀರಿಗೆ ಬರದೇ ಇರ್ತಾಳ್ಯೇ?” ಎಂಬ ಗಾದೆಗೆ ಈಗ ಅರ್ಥವೇ ಇಲ್ಲದೆ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು “ಎಂಬ ಗಾದೆಯೂ ಅರ್ಥಹೀನವಾಗಿ ಬೆಲೆಕಳೆದುಕೊಳ್ಳುತ್ತಿದೆಯೇನೋ.
ಆಗ ನೀರು ಮನೆಗೆ ಬರುತ್ತಿದ್ದದ್ದು ಕೊಡದಲ್ಲಿ. ಅದರ ಜೊತೆಗೆ ಊರಿನ ಸುದ್ದಿಯೂ ಬರುತ್ತಿತ್ತು, ನೆಂಟಸ್ತಿಕೆಯೂ ಬರುತ್ತಿತ್ತು, ನಗುವೂ ಬರುತ್ತಿತ್ತು, ಕಷ್ಟದ ಸಂಗತಿಯೂ ಬರುತ್ತಿತ್ತು, ಸಹಾಯದ ಹಸ್ತಗಳೂ ಒದಗುತ್ತಿದ್ದವು. ಇಂದು ನೀರು ನಲ್ಲಿ ಮೂಲಕ ಬರುತ್ತದೆ. ಆದರೆ ಆ ಬಾವಿಕಟ್ಟೆಯ ಲಹರಿ ಎಲ್ಲಿಂದ ಬರಬೇಕು?
ಬಾವಿಗಳು ಮುಚ್ಚಿಹೋಗಬಹುದು. ಕೊಡಗಳು ಮಾಯವಾಗಬಹುದು. ಹಗ್ಗಗಳು ಇತಿಹಾಸವಾಗಬಹುದು. ಆದರೆ “ಜೀರ್ ಜೀರ್ ಜೀರ್.. ಜಿರಕ್…” ಎಂದು ಬಾವಿಯೊಳಗೆ ನೀರು ತುಂಬುತ್ತಿದ್ದ ಆ ಸದ್ದು—ಒಮ್ಮೆ ಕಿವಿಗೆ ಬಿದ್ದವರಿಗೆ—ಅದು ಕೇವಲ ನೀರಿನ ಸದ್ದಲ್ಲ; ಒಂದು ಕಾಲದ ದಿನನಿತ್ಯದ ಹೃದಯಬಡಿತ. ಈ ರೂಪದಲ್ಲಿ “ಬಾವಿ” ಬಾವಿಯಾಗುಳಿಯದೆ, ಬಾವಿ ಕಟ್ಟೆಯ ಸುತ್ತ ರೂಪುಗೊಂಡಿದ್ದ ಮನುಷ್ಯರ ಬದುಕಿನ ಕೇಂದ್ರವಾಗಿರುತ್ತಿತ್ತು. ಅದಕ್ಕೇ ಆ ಗಾದೆ.
ಈಗಲೂ ಬಾವಿಗಳನ್ನು ತೋಡಿದರೂ ಅದು ಬೋರ್‌ವೆಲ್! ಪಂಪು ಅಳವಡಿಸಿ ಸ್ವಿಚ್ ಹಾಕಿದರೆ ಸಾಕು. ಈಗ ಬಾವಿಯ ನೀರಿನ ಆ ದಿನಗಳನ್ನು ನೆನೆಸಿಕೊಂಡರೆ ಆರಂಭದಿಂದ ಕೊನೆಯ “ಜೀರ್ ಜೀರ್ ಜಿರಕ್”ವರೆಗೆ ಒಂದು ನಿರಂತರ ನೆನಪಿನ ಲಹರಿ ಬರುತ್ತದೆ.
-ರತ್ನಾ ಮೂರ್ತಿ

