(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮುಂದಿನದ್ದೆಲ್ಲ ಪ್ರಯಾಣಕ್ಕೆ ಬೇಕಾದ ಸಿದ್ಧತೆ. ತನ್ನ ರಜೆಯನ್ನು ಮುಂದುವರಿಸಿದಳು. ಈಗಾಗಲೇ ಒಂದೆರಡು ಸಾರಿ ಹೋಗಿಬಂದಿದ್ದರಿಂದ ಕಷ್ಟವಾಗಲಾರದು ಎಂದುಕೊಂಡಳು. ಉತ್ತರ ಅಮೆರಿಕಾದ ಅತಿ ದೊಡ್ಡ ನಗರ ಬೋಸ್ಟನ್. ಹಲವಾರು ಕಾರಣಗಳಿಂದ ಕಾಲಕಾಲಕ್ಕೆ ಬದಲಾವಣೆಗಳನ್ನು ಹೊಂದಿ ಈಗ ಒಂದು ಸ್ಥಿರತೆಯನ್ನು ಕಂಡುಕೊಂಡಿದೆ. ಅಲ್ಲಿರುವ ಶಿಕ್ಷಣ ಕೇಂದ್ರಗಳಿಗೆ ಶಿಕ್ಷಣಾರ್ಥಿಗಳಾಗಿ ಬರುವವರ ಸಂಖ್ಯೆಯೂ ಹೆಚ್ಚಿದೆ. ಅಲ್ಲಿ ಕಲಿಯುವುದೂ ಕೆಲಸ ಮಾಡುವುದೂ ಒಂದು ಪ್ರತಿಷ್ಠೆಯ ಸಂಗತಿಯಾಗಿದೆ. ಅಂತಹ ವಿದ್ಯಾಲಯದಲ್ಲಿ ಕಲಿತು ಮಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ಬಹಳ ವಿಶೇಷವಾದ ಸಂಗತಿ. ತನ್ನ ಮಗಳ ಸಾಧನೆಯ ಬಗ್ಗೆ ಹೆಮ್ಮೆಯೆನಿಸಿತು. ಯಾವುದೋ ಪೂರ್ವಾಗ್ರಹ ಪೀಡಿತ ಕಾರಣವಿಟ್ಟುಕೊಂಡು ಮಕ್ಕಳ ಮನಸ್ಸನ್ನು ನೋಯಿಸಿಬಿಟ್ಟೆ. ಇನ್ನು ಮುಂದೆ ಯಾವ ಕಾರಣಕ್ಕೂ ದುಡುಕಿ ಮಾತನಾಡಿ ಮಕ್ಕಳನ್ನು ನೋಯಿಸಬಾರದೆಂದು ಸಂಕಲ್ಪ ಮಾಡಿಕೊಂಡಳು.
ಎಲ್ಲ ಸಿದ್ಧತೆಗಳನ್ನು ಮುಗಿಸಿದ ಭಾರ್ಗವಿ ಸಿದ್ಧಾರ್ಥನಿಗೆ ತಾನು ಹೊರಡುವ ದಿನಾಂಕ, ವೇಳೆ ಎಲ್ಲವನ್ನೂ ಫೋನ್ ಮೂಲಕ ತಿಳಿಸಿದಳು. ಒಂದು ವಾರದ ಮಟ್ಟಿಗೆ ಹೋಗಿಬರುವ ವ್ಯವಸ್ಥೆಯಾಗಿದೆ. ಮಧ್ಯದಲ್ಲಿ ಸಾಧ್ಯವಾದರೆ ಬಂದು ಹೋದರೆ ಉತ್ತಮ. ಹಾಗೆಂದು ನಾನೇನೂ ನಿಮಗೆ ಆದೇಶಿಸುತ್ತಿಲ್ಲ. ಕೇಳಿಕೊಳ್ಳುತ್ತಿದ್ದೇನೆ. ಮನೆಯ ಕೀ ನಿಮ್ಮಬಳಿಯೂ ಒಂದಿದ್ದರೆ ಒಳ್ಳೆಯದು. ಮೈಸೂರಿಗೇನಾದರೂ ಬಂದರೆ ಹಾಗೇ ಮನೆಯ ಕಡೆ ನೋಡಿ ಹೋಗಬಹುದು ಎಂಬ ಕಾರಣಕ್ಕೆ ಹೇಳುತ್ತಿದ್ದೇನೆ ಎಂಬ ಮಾತನ್ನೂ ಸೇರಿಸಿದಳು. ಭಾರ್ಗವಿಯ ಮನವಿಗೆ “ಆಯಿತು ನೋಡುತ್ತೇನೆ, ತೀರಾ ಬರಲಾಗದಿದ್ದರೆ ಬಾಡಿಗೆಮನೆಯ ಓನರ್ ಇದ್ದಾರಲ್ಲಾ ಅವರಿಂದಲೇ ಪಡೆದುಕೊಳ್ಳುತ್ತೇನೆ. ನೀನು ಜಾಗ್ರತೆಯಾಗಿ ಹೋಗಿಬಾ” ಎಂದು ಹೇಳಿದನು ಸಿದ್ಧಾರ್ಥ.
ಏನಾಯಿತು ಈ ಮನುಷ್ಯನಿಗೆ ! ತಾನು ಬರಲಾಗದಿದ್ದರೆ ನಿನ್ನನ್ನು ಬೀಳ್ಕೊಡಲು ಏರ್‌ಪೋರ್ಟಿಗೆ ಬರುತ್ತೇನೆ ಎಂಬ ಒಂದು ಪದ ಕೂಡ ಅವನಿಂದ ಬರಲಿಲ್ಲವಲ್ಲ. ಅಂಥಹ ರಾಜಕಾರ್ಯ ಏನಿರಬಹುದು? ಛೇ.. ಯೋಚಿಸಿದಷ್ಟೂ ತಲೆ ಕೆಡುತ್ತದೆ. ಮೊದಲೆಲ್ಲ ಊರಿಗೆ ಹೋಗಿಬನ್ನಿ ಎಂದರೂ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ತಮಗೇನಾದರೂ ಹಣಕಾಸಿನ ಅಗತ್ಯ ಬಿದ್ದಾಗ ಸವಾರಿ ಇತ್ತಕಡೆಗೆ ಚಿತ್ತೈಸುತ್ತಿತ್ತು. ಈಗ ವ್ಯಾಪಾರ ಸಾಪಾರ ಎಲ್ಲ ಅವತಾರಗಳೂ ಮುಗಿದಿವೆ. ಊರಲ್ಲೇನು ಕಡಿಯುತ್ತೇನೆಂದು ಇತ್ತಕಡೆ ಬರುವುದೇ ಕಷ್ಟವಾಗಿದೆ. ಅವರಿವರ ಬಾಯಲ್ಲಿ ಕೇಳಿಬರುವಂತೆ ಬಂದರೂ ಇಲ್ಲಿಗೆ ಬಾರದೆ ಪೇರಿಕೀಳುತ್ತಾರಂತೆ. ಬಹುದೂರ ಕ್ರಮಿಸಿಬಿಟ್ಟಿದ್ದೇನೆ. ಮಕ್ಕಳ ಜವಾಬ್ದಾರಿ ಮುಗಿಯುವವರೆಗೂ ತುಟಿ ಎರಡು ಮಾಡದೇ ಇರಬೇಕು. ಸಮಾಜ ಎಷ್ಟು ಮುಂದುವರಿದಿದೆ ಎಂದುಕೊಂಡರೂ ಮಕ್ಕಳಿಗೆ ಸಂಬಂಧ ಬೆಳೆಸುವಾಗ ಮೂಲೆಮೂಲೆಗಳನ್ನೂ ಹುಡುಕುತ್ತದೆ.
ತನಗೆ ತಿಳಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡ ಭಾರ್ಗವಿಗೆ ಹೊರಡುವ ದಿನ ಬಂದೇಬಿಟ್ಟಿತು. ಬೆಂಗಳೂರಿನವರೆಗೂ ಜೊತೆಯಾಗಿಯೇ ಬಂದ ಗೆಳತಿ ಸುಮನಾಳ ಒಡನಾಟ ಬೇಸರ ನೀಗಿತ್ತಾದರೂ ಒಳ ಮನದಲ್ಲಿ ಕೊನೆಯ ಪಕ್ಷ ಏರ್‌ಪೋರ್ಟ್ಗಾದರೂ ಅಣ್ಣ ಬಾಲಕೃಷ್ಣನೊಡನೆ ಸಿದ್ಧಾರ್ಥ ಬರಬಹುದೆಂದು ನಿರೀಕ್ಷಿಸಿದವಳಿಗೆ ಅಲ್ಲಿ ಅಣ್ಣನೊಬ್ಬನೇ ಕಂಡಾಗ ಮನಸ್ಸು ಪಿಚ್ಚೆನ್ನಿಸಿತು.
ಹೀಗೆ ನಿರಾಸೆಯ ಬುತ್ತಿಯನ್ನು ಬಲವಂತವಾಗಿ ಮನದಿಂದ ದೂಡುತ್ತಲೇ ವಿಮಾನ ಹತ್ತಿ ಮಗಳಿದ್ದ ಸ್ಥಳ ತಲುಪಿದಳು ಭಾರ್ಗವಿ. ಎಲ್ಲ ಫಾರ್ಮಾಲಿಟಿಗಳನ್ನು ಮುಗಿಸಿ ಹೊರಬಂದವಳಿಗೆ ವೈಟಿಂಗ್ ರೂಮಿನಲ್ಲಿ ಕಾಯುತ್ತಿದ್ದ ಮಗಳು ಮಾನಸ ಕಂಡಳು. ಕೂಡಲೇ ತನ್ನೆಲ್ಲ ಬೇಸರ, ನಿರಾಸೆಗಳನ್ನು ಪಕ್ಕಕ್ಕಿಟ್ಟು ಲಗ್ಗೇಜಿಗಳೊಂದಿಗೆ ಅವಳಿದ್ದ ಜಾಗಕ್ಕೆ ಧಾವಿಸಿದಳು.
ತನ್ನ ತಾಯಿಯ ಕೈಲಿದ್ದ ಸೂಟ್‌ಕೇಸನ್ನು ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಅವರ ಕೈ ಹಿಡಿದುಕೊಂಡು ಗೊತ್ತುಪಡಿಸಿಕೊಂಡು ಬಂದಿದ್ದ ಟ್ಯಾಕ್ಸಿಯಲ್ಲಿ ತನ್ನ ನಿವಾಸಕ್ಕೆ ಕರೆದುಕೊಂಡು ಹೋದಳು ಮಾನಸಾ.
“ನಿನ್ನ ಜೊತೆ ಕಳೆದ ಬಾರಿ ಬಂದಾಗ ಇದ್ದಳಲ್ಲ ಬಾರತೀಯ ಹುಡುಗಿ ದೀಕ್ಷಾ ಹೇಗಿದ್ದಾಳೆ?” ಎಂದು ವಿಚಾರಿಸಿದಳು ಭಾರ್ಗವಿ.
ಹೂ..ಅವಳಾ ಇಲ್ಲಿಗೆ ಬಂದಾಗ ಅಮಾಯಕಳಂತಿದ್ದವಳು ಈಗ ನಂಬಲಿಕ್ಕಾಗದಷ್ಟು ರೀತಿಯಲ್ಲಿ ಬದಲಾಗಿದ್ದಾಳೆ. ಅವಳ ಅಟಿಟ್ಯೂಡ್ ಇಷ್ಟವಾಗದೇ ನಾನೇ ಅವಳಿಂದ ದೂರಾಗಿ ಬಿಡಿಸಿಕೊಂಡಿದ್ದೇನೆ. ಇದನ್ನೆಲ್ಲ ಅಮ್ಮನಿಗೆ ಹೇಳುವುದು ಏಕೆಂದು ಯೋಚಿಸಿ “ಅಮ್ಮಾ ಸರಿಯಾಗಿ ನೋಡಿ ಕಳೆದ ಸಾರಿ ಬಂದಾಗ ಇದ್ದ ಮನೆಯೇ ಬೇರೆ ಇದೇ ಬೇರೆ” ಎಂದಳು.
“ಓ..ಹೌದಾ ! ನಾನು ಗಮನಿಸಲೇ ಇಲ್ಲ. ಹೆಚ್ಚು ವ್ಯತ್ಯಾಸ ಕಂಡುಬರಲಿಲ್ಲವಲ್ಲ, ಗೊತ್ತಾಗಲಿಲ್ಲ. ಆ ಹುಡುಗಿ?” ಮತ್ತೆ ಪ್ರಶ್ನಿಸಿದಳು ಭಾರ್ಗವಿ.
“ಆಕೆಗೆ ಅವಳ ಕಾಲೇಜಿನಲ್ಲೇ ಓದುತ್ತಿರುವ ಮತ್ತಿಬ್ಬರು ಗೆಳತಿಯರು ಸಿಕ್ಕರು. ಮೊದಲು ನಾನಿದ್ದ ಮನೆಯಲ್ಲೇ ಇರಲು ಇಷ್ಟಪಟ್ಟರು. ಅದಕ್ಕೆ ನಾನೇ ಬದಲಾಯಿಸಿಕೊಂಡೆ. ಅದಕ್ಕಿಂತ ಇದು ಚಿಕ್ಕದು, ಸಣ್ಣದೊಂದು ರೂಮಿದೆ, ನನಗೊಬ್ಬಳಿಗೆ ಸಾಕು..ಗ್ರಾಜುಯೇಷನ್ ಮುಗಿದು ಅಪಾಯಿಂಟ್‌ಮೆಂಟ್ ಸಿಕ್ಕಾಗ ಬೇರೆಯೇ ಮನೆ ಸಿಗುತ್ತದೆ. ಬನ್ನಿ ಫ್ರೆಷಪ್ ಆಗಿ” ಎಂದು ರೂಮಿಗೆ ಲಗ್ಗೇಜ್ ಸಾಗಿಸಿ ಕಿಚನ್ ಕಡೆ ನಡೆದಳು ಮಾನಸಾ.
ಚಪಾತಿ, ಬದನೆಕಾಯಿ ಟೊಮ್ಯಾಟೋ ಪಲ್ಯ, ತಿಳಿಸಾರು, ಮೊಸರು ಅನ್ನ ರುಚಿಯಾಗಿತ್ತು. ಪ್ಲೇನಿನಲ್ಲಿ ಕೊಟ್ಟ ಊಟ ಭಾರ್ಗವಿಗೆ ಹಿಡಿಸದೆ ಬರಿಯ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಳು. ಅದರಿಂದಲೇನೋ ಇಷ್ಟಪಟ್ಟು ಊಟಮಾಡಿದಳು. ಹಾಗೇ ಬರುವ ಮೊದಲು ಮಗಳನ್ನು ಏನಾದರೂ ತರಬೇಕೇ? ಎಂದು ಕೇಳಿದಾಗ ಅವಳು ಇಲ್ಲಿ ಎಲ್ಲವೂ ಸಿಗುತ್ತದೆ. ನೀವು ಆರಾಮವಾಗಿ ಬನ್ನಿ. ಇಲ್ಲಿನ ರೇಟುಗಳನ್ನು ಇಂಡಿಯಾದ ರೇಟುಗಳೊಂದಿಗೆ ಹೋಲಿಸಿ ನೋಡಿ ಸಂಕಟಪಡುವುದು ಬೇಡ. ಎಲ್ಲಿ ಇರುತ್ತೇವೋ ಅಲ್ಲಿಗೆ ಹೊಂದಿಕೊಳ್ಳುವುದೇ ಸೂಕ್ತ ಎಂದು ನನಗೇ ಉಪದೇಶ ನೀಡಿದ್ದಳು. ಅದು ನೆನಪಾಯಿತು. ಹೌದು ಅವಳು ಹೇಳುವುದರಲ್ಲೂ ಸತ್ಯವಿದೆ. ಸುಮ್ಮನೆ ಹೋಲಿಕೆ ಮಾಡಿ ಲೆಕ್ಕಾಚಾರ ಮಾಡುವುದರಲ್ಲೇ ಕಾಲಹರಣ ಮಾಡುತ್ತ ಚಿಂತೆಗೀಡಾಗುವುದಕ್ಕಿಂತ ಇದ್ದುದರಲ್ಲೇ ನೆಮ್ಮದಿ ತಂದುಕೊಂಡು ಇರುವುದುತ್ತಮ ಎಂದುಕೊಂಡಳು. ಆನಂತರ ಮಗಳೊಡನೆ ಸ್ವಲ್ಪ ಅದೂ ಇದೂ ಮಾತನಾಡಿದಳು. ಮಾನಸಾಳೂ ಸಹ ತನ್ನ ಸಾಧನೆಯ ಬಗ್ಗೆ ಅಮ್ಮನಿಗೆ ತಿಳಿಸುತ್ತ ಮುಂದೆ ಮಾಡಲು ಉದ್ದೇಶಿಸಿರುವ ತೀರ್ಮಾನಗಳ ಬಗ್ಗೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡಳು. ಹಾಗೇ ಅವರಿಗೆ ವಿಶ್ರಾಂತಿ ಪಡೆಯಲು ಹೇಳಿ ತನ್ನ ಕೆಲಸಗಳತ್ತ ಗಮನಕೊಡಲು ರೂಮಿನಿಂದ ಹೊರಬಿದ್ದಳು.
ಮಗಳು ಹೋದಮೇಲೆ ಭಾರ್ಗವಿಯ ಗಮನಕ್ಕೆ ಬಂದ ಅಂಶವೆಂದರೆ ಒಂದೇ ಒಂದು ಮಾತು ಸಿದ್ಧಾರ್ಥನ ಬಗ್ಗೆ ಕೇಳದೇ ಇರುವುದು. ಬಹುಶಃ ಅಕ್ಕ ತಂಗಿಯರಿಬ್ಬರೂ ಮಾತನಾಡಿಕೊಂಡಿರಬಹುದು. ಅಥವಾ ಅವರಪ್ಪನೇ ಫೋನ್ ಮಾಡಿ ಹೇಳಿರಬಹುದು. ಇಲ್ಲ ನನಗೆ ಬೇಸರವಾಗಬಹುದೆಂದೂ ಇರಬಹುದು. ಅವೆಲ್ಲವೂ ಪಕ್ಕಕ್ಕೋಗಿ ನಿದ್ರಾದೇವಿ ಅವಳನ್ನಾವರಿಸಿದಳು.
ಸಮಾರಂಭದಲ್ಲಿ ಅತಿ ಉತ್ಸಾಹ ಹುರುಪಿನಿಂದ ಭಾಗವಹಿಸಿದ ಭಾರ್ಗವಿಗೆ ಆ ದಿನ ಸಿದ್ದಾರ್ಥನಿಂದ ಅಭಿನಂದನೆಯ ಮೆಸೇಜ್ ಬಂದದ್ದು ಸಂತಸದ ಸಂಗತಿಯಾಗಿತ್ತು. ಆತ ಬಾರದಿದ್ದರೂ ಸಮಾರಂಭದ ಹೊತ್ತಿಗಾದರೂ ಮಗಳನ್ನು ಅಭಿನಂದಿಸುವ ಮನಸ್ಸಾಯಿತಲ್ಲಾ ಎಂದು ಸಮಾಧಾನಪಟ್ಟಳು. ಮೊದಲು ನೋಡಿದ್ದ ಸ್ಥಳಗಳೇ ಆದರೂ ಮಗಳು ಕರೆದಾಗ ಬೇಸರ ವ್ಯಕ್ತಪಡಿಸದೆ ಹೋಗಿಬಂದಳು. ಒಂದು ವಾರ ಕಳೆದುಹೋದದ್ದೇ ತಿಳಿಯಲಿಲ್ಲ. ಅಲ್ಲಿಂದಲೇ ಹಿರಿಯ ಮಗಳ ಜೊತೆ ಫೋನಿನಲ್ಲಿ ಮಾತುಕತೆಯಾಡಿದಳು. ಸದ್ಯಕ್ಕೆ ಮಾನಸ ಹಿಂದಕ್ಕೆ ಬರುವ ಆಲೋಚನೆ ಇಲ್ಲವೆಂದು ತಿಳಿದ ಭಾರ್ಗವಿ ಮತ್ತೊಮ್ಮೆ ಮಗಳನ್ನು ಅಭಿನಂದಿಸಿ ಹಿಂದಿರುಗಿ ಬಂದುಬಿಟ್ಟಳು.
ಹಿಂದಿರುಗಿ ಬಂದ ಭಾರ್ಗವಿಗೆ ಸಿದ್ಧಾರ್ಥ ಒಮ್ಮೆಯೂ ಮೈಸೂರಿಗೆ ಬಂದಿಲ್ಲ ಎಂಬ ಸಂಗತಿ ಅಚ್ಚರಿಯನ್ನುಂಟುಮಾಡಿತು. ಒಂದುವೇಳೆ ಬಂದಿದ್ದರೂ ಮನೆಗೆ ಬರದೆ ತನ್ನ ಪಟಾಲಂ ಜೊತೆಗೆ ಠಿಕಾಣಿ ಹೂಡಿ ಹೋಗಿರಬಹುದು. ಇಲ್ಲಿಗೆ ಅವರನ್ನೆಲ್ಲ ಕರೆತಂದರೆ ಗುಲ್ಲಾಗುವದೆಂಬ ಕಾರಣದಿಂದ ಬಂದಿರಲಾರರು. ಮೇಲಾಗಿ ನಾನೇನು ತಿಂಗಳುಗಟ್ಟಲೆ ಹೋಗಿರಲಿಲ್ಲವಲ್ಲ. ಕೇವಲ ಒಂದು ವಾರದ ಮಟ್ಟಿಗೆ ಹೋಗಿದ್ದೆ. ಊರಿನಲ್ಲಿ ಏನಾದರೂ ಕೆಲಸ ಇದ್ದಿರಬಹುದು. ಇತ್ತೀಚೆಗೆ ಅತ್ತೆಯವರ ಆರೋಗ್ಯವೂ ಅಷ್ಟಕ್ಕಷ್ಟೇ ಇದೆ. ಜೊತೆಗೆ ತಮ್ಮ ಮೊಮ್ಮಗಳು ಗಂಡನನ್ನು ಕಳೆದುಕೊಂಡು ಮಗನನ್ನು ಕಟ್ಟಿಕೊಂಡು ಒದ್ದಾಡುತ್ತಿರುವ ಸ್ಥಿತಿಯೂ ಅವರನ್ನು ಮತ್ತಷ್ಟು ಮೆತ್ತಗೆ ಮಾಡಿದೆ. ಮದುವೆಯಾಗದೆ ಉಳಿದ ಮತ್ತೊಬ್ಬ ಮಗಳ ಚಿಂತೆ, ಮಗನು ಜಮೀನೆಲ್ಲವನ್ನೂ ಗೇಣಿಗೆ ಕೊಟ್ಟು ಪೂಟ್ ಲಾಯರಿ ತರಹ ಓಡಾಡುತ್ತಿದ್ದಾನೆ. ತನ್ನದೇ ಬದುಕನ್ನು ಕಟ್ಟಿಕೊಂಡು ನಗರದಲ್ಲಿದ್ದು ಒಬ್ಬಳೇ ಒದ್ದಾಡುತ್ತ ವಿರಳವಾಗಿ ಅತಿಥಿಯಂತೆ ಬಂದುಹೋಗುವ ಸೊಸೆ ಭಾರ್ಗವಿ. ಒಂದೇ ಎರಡೇ ಚಿಂತೆಗಳು. ಹೀಗೆಲ್ಲ ಆಲೋಚಿಸುತ್ತ ತನಗೆ ತಾನೇ ಸಮಾಧಾನ ಪಟ್ಟುಕೊಂಡಳು. ಆದರೂ ಮಗಳಿಗೆ ಅಭಿನಂದಿಸುವ ಸಂದರ್ಭದಲ್ಲಿ ಔಪಚಾರಿಕವಾಗಿ ಒಂದೆರಡು ಮಾತನಾಡಿದ್ದು ಬಿಟ್ಟರೆ ಮತ್ತೆ ಗಂಡ ನನಗೆಂದೇ ಫೋನ್ ಮಾಡದೇ ಇದ್ದದ್ದು ನೆನಪಾಯಿತು. ನಾನೇ ಫೋನ್ ಮಾಡಿ ಅಂಥಹ ರಾಜಕಾರ್ಯವೇನಿದೆ ಎಂದು ಕೇಳಲೇ? ಅಥವಾ ಒಂದು ಹೆಜ್ಜೆ ಊರಿಗೇ ಹೋಗಿ ಬಂದುಬಿಡಲೇ? ನಾನಾಗಿ ಮೇಲೆ ಬಿದ್ದು ಕೇಳುವ, ಕಾಳಜಿ ವಹಿಸುವ ದರ್ದು ಏನಿದೆ. ಕಾದು ನೋಡೋಣ ಎಂದುಕೊಂಡು ತನ್ನ ಕೆಲಸ ಕಾರ್ಯಗಳ ಕಡೆಗೆ ಗಮನ ಹರಿಸಿದಳು. ಇಲ್ಲಿಗೆ ಹಿಂತಿರುಗಿ ಬಂದ ವಿಚಾರವನ್ನು ಮಕ್ಕಳು ತಿಳಿಸಿದ್ದೇವೆಂದು ಹೇಳಿದ್ದರಿಂದ ಹೆಚ್ಚಿನ ಆಸಕ್ತಿ ತೋರದೆ ಸುಮ್ಮನಾದಳು ಭಾರ್ಗವಿ.
ಇತ್ತ ಸುಮನಾಳ ತಾಯಿಯ ಆಸ್ಪತ್ರೆ –ಮನೆ ಓಡಾಟ ಜೋರಾಗಿಯೇ ನಡೆದಿತ್ತು. ಆ ಹೆಣ್ಣುಮಕ್ಕಳು ಅದರ ಬಗ್ಗೆ ಹೆಚ್ಚು ಮಾತುಗಳನ್ನಾಡುವುದಾಗಲೀ ಚರ್ಚಿಸಿ ಬೇಸರ ಪಟ್ಟುಕೊಳ್ಳುವುದನ್ನೂ ಬಿಟ್ಟುಬಿಟ್ಟರು. ಅವರಿರುವವರೆಗೂ ಇದೆಲ್ಲ ಅವರುಗಳಿಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದು ಒಬ್ಬರಿಗೊಬ್ಬರು ಸಮಯ ಹೊಂದಿಸಿಕೊಂಡು ಹೆತ್ತಮ್ಮನನ್ನು ನೋಡಿಕೊಳ್ಳತೊಡಗಿದರು. ಈ ವ್ಯವಸ್ಥೆ ಅವರುಗಳ ಅವಸ್ಥೆ ಕಂಡ ಭಾರ್ಗವಿ ತನ್ನ ಸ್ನೇಹಿತೆಯ ನೆರವಿಗೆ ಆಗಾಗ್ಗೆ ಧಾವಿಸುತ್ತಿದ್ದಳು. ಅವರ ತಾಯಿ ಏನಾದರೂ ಕೊಂಕು ಮಾತನಾಡಿದರೂ ಕಿವಿಗೆ ಹಾಕಿಕೊಳ್ಳದೆ ಪ್ರತಿಕ್ರಯಿಸದೆ ಹೋಗಿಬರುವುದನ್ನು ರೂಢಿಸಿಕೊಂಡಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45789

-ಬಿ.ಆರ್.ನಾಗರತ್ನ, ಮೈಸೂರು

