ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಹೀಗೇ ಮತ್ತಷ್ಟು ಸಮಯ ಕಳೆದುಹೋಯಿತು. ತಾನು ಹಾಕಿದ್ದ ದೀರ್ಘ ರಜೆ ಮುಗಿದ ಮೇಲೆ ಕೆಲಸಕ್ಕೆ ಹಾಜರಾಗಿ ಪೆಂಡಿಂಗ್ ಇರುವ ಕೆಲಸಗಳನ್ನು ಮುಕ್ತಾಯ ಗೊಳಿಸಿ ನಿವೃತ್ತಿಗೆ ಉಳಿದಿರುವ ದಿನಗಳನ್ನು ಲೆಕ್ಕಹಾಕತೊಡಗಿದಳು. ಮಧ್ಯದಲ್ಲಿ ಮಗಳು ಮಾನಿನಿ ಬಂದು ಹೋಗುವುದು ನಡೆದಿತ್ತು. ಅವಳೊಡನೆ ಮಾತುಕತೆ, ಅವಳಿಗೆ ಅಡುಗೆಗೆ ಬೇಕಾದ ಕೆಲವು ಪುಡಿಗಳನ್ನು ತಯಾರಿಸಿ ಕೊಡುವುದು, ಚಿಕ್ಕ ಮಗಳು ಮಾನಸಾಳ ಮುಂದಿನ ಯೋಜನೆಗಾಗಿ ಸಿದ್ಧತೆಗಳು ಮುಗಿದು ಸಕಾರಾತ್ಮಕ ಹೆಜ್ಜೆ ಇಟ್ಟಿರುವ ಸುದ್ಧಿ, ಇತ್ಯಾದಿ ಸಂಗತಿಗಳನ್ನು ಕೇಳಿ ಖುಷಿ ಪಟ್ಟಳು ಭಾರ್ಗವಿ. ತಡೆಯಲಾರದೆ ಸಿದ್ಧಾರ್ಥನಿಗೆ ಈ ವಿಷಯವಾಗಿ ಫೋನ್ ಮಾಡಿದಾಗ ನನಗೆಲ್ಲ ತಿಳಿದಿದೆ, ಮಗಳು ಫೋನ್ ಮಾಡಿದ್ದಳೆಂದು ಚುಟುಕಾಗಿ ಉತ್ತರಿಸಿದ. ಇದರಿಂದ ಭಾರ್ಗವಿಗೆ ಮನಸ್ಸಿನಲ್ಲಿ ನೋವುಂಟಾಯಿತು. ಏಕೆ ನಾನು ಅಷ್ಟೊಂದು ಬೇಡವಾಗಿದ್ದೀನಾ? ನನ್ನ ಅಭಿಲಾಷೆಯನ್ನು ಈಡೇರಿಸಿಕೊಂಡು ಈಗಿರುವ ಮಟ್ಟ ಮುಟ್ಟಲು ಕಾರಣರಾಗಿದ್ದಾರೆ, ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಎಲ್ಲವೂ ಸತ್ಯ. ಅದಕ್ಕೆ ಬದಲಾಗಿ ನಾನು ಅವರು ಕೇಳಿದ್ದಕ್ಕೆಲ್ಲ ತಾಳಹಾಕಿ ಜೊತೆಯಲ್ಲಿ ನಿಂತು ತನು, ಮನ, ಧನವನ್ನೆಲ್ಲ ವಿನಿಯೋಗಿಸಿದ್ದು ಸುಳ್ಳಲ್ಲವಲ್ಲ. ಅವರು ತಮ್ಮ ಪ್ರಯತ್ನದಲ್ಲಿ ಏಳಿಗೆ ಕಾಣದಿದ್ದರೆ ಅದು ನನ್ನ ತಪ್ಪೇ. ಸಾಲದ ಹೊರೆ ತಲೆಮೇಲೆ ಬಿದ್ದಾಗಲೂ ಒಂದೂ ಮಾತನಾಡದೆ ನಾನೇ ತೀರಿಸಿದ್ದು, ಅದಕ್ಕಾಗಿ ಪಟ್ಟ ಬವಣೆಯನ್ನು ಮರೆಯಲಾಗುತ್ತದೆಯೇ. ಮಕ್ಕಳಿಗೊಂದು ನೆಲೆ ದೊರಕಿಸಿಕೊಟ್ಟು ಶೇಷಾಯುಷ್ಯವನ್ನು ಕಳೆಯುವುದು ಅವರ ಜೊತೆಯಲ್ಲಿ ಅಲ್ಲವೇ. ಮೊದಲಿಗಿಂತ ಆಗಲೇ ಬಾಳಸಂಗಾತಿಯ ಒಡನಾಟದ ಅಗತ್ಯ ಬಹಳ. ಮುಂದಿನ ಸಾರಿ ಊರಿಗೆ ಬಂದಾಗ ಇವೆಲ್ಲವನ್ನು ಕುಳಿತು ಮಾತನಾಡಬೇಕು. ಎಂದೆಲ್ಲ ಯೋಜನೆ ಸಿದ್ಧಪಡಿಸಿಟ್ಟುಕೊಂಡಳು.

ನಿವೃತ್ತಿಯ ದಿನ ಹತ್ತಿರವಾಗಿಯೇಬಿಟ್ಟಿತು. ಸ್ಟಾಫಿನವರು ತನ್ನ ಬೀಳ್ಕೊಡುಗೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ “ಮೇಡಂ ಆ ದಿನ ನಿಮ್ಮವರು ಮತ್ತು ಮಕ್ಕಳನ್ನು ಕರೆದುಕೊಂಡು ಬನ್ನಿ” ಎಂದು ಕೋರಿದರು. ಅವರುಗಳು ಮುಂದಿಟ್ಟ ಬೇಡಿಕೆಯನ್ನು ಕೇಳಿ ಭಾರ್ಗವಿ “ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ಅವರುಗಳಿಗೂ ತಿಳಿಸುತ್ತೇನೆ. ಅವರವರ ಕಾರ್ಯಗಳ ಬಾಹುಳ್ಯತೆ ಏನಿದೆಯೋ ಅದನ್ನು ನೋಡಿಕೊಂಡು ಸಮಯ ಹೊಂದಿಸಿಕೊಂಡು ಬಂದುಹೋಗುವ ಸಾಧ್ಯತೆಯಿದ್ದರೆ ಬರುತ್ತಾರೆ. ಹಾಗೆಲ್ಲ ಅವರನ್ನು ಒತ್ತಾಯ ಮಾಡಲಾಗದು” ಎಂದುತ್ತರ ಹೇಳಿದಳು ಭಾರ್ಗವಿ.

“ಇದೇನು ಮೇಡಂ ಹೀಗೆ ಹೇಳುತ್ತಿದ್ದೀರಿ, ಇಷ್ಟು ವರ್ಷ ಕೆಲಸ ಮಾಡಿ ಅದೂ ಶಿಕ್ಷಣಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಾಗಿ ಎಲ್ಲಿ ಹಾಕಿದರಲ್ಲಿಗೆ ಹೋಗಿ ದಕ್ಷತೆಯಿಂದ ಸೇವೆಸಲ್ಲಿಸಿ ಇನ್ನೊಬ್ಬರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದೀರಿ. ಈ ಹಂತ ಮುಟ್ಟಲು ತೆರೆಮರೆಯಲ್ಲಿ ಇದ್ದುಕೊಂಡು ಹೆಗಲೆಣೆಯಾಗಿ ನಿಂತ ನಿಮ್ಮ ಸಂಗಾತಿಯನ್ನು ನಾವೆಲ್ಲ ಒಮ್ಮೆ ನೋಡಬೇಡವೇ? ಮೇಲಾಗಿ ನಿಮ್ಮ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಅಗಾಧ ಸಾಧನೆ ಮಾಡಿ ಬೆಳೆಯುವ ಮಕ್ಕಳಿಗೆಲ್ಲ ಸ್ಫೂರ್ತಿದಾಯಕರಾಗಿದ್ದಾರೆ. ಇತ್ತೀಚೆಗಷ್ಟೇ ವಿದೇಶದಲ್ಲಿ ಅಭ್ಯಾಸ ನಡೆಸಿ ಪದವಿ ಪಡೆದ ಮಗಳ ಗ್ರಾಜುಯೇಷನ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೀರಿ. ಮತ್ತೊಬ್ಬ ಮಗಳು ವಿದೇಶದಿಂದ ಹಿಂತಿರುಗಿ ಬಂದು ಇಲ್ಲಿಯೇ ಒಳ್ಳೆಯ ಹೆಸರು ಮಾಡಿರುವ ಕಂಪನಿಯಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂಥಹ ಮಕ್ಕಳನ್ನು ಹೊಂದುವ ಸೌಭಾಗ್ಯ ಎಷ್ಟು ಜನ ತಂದೆತಾಯಿಗಳಿಗೆ ಸಿಗಬಹುದು. ಅವರನ್ನು ನಾವೂ ಒಮ್ಮೆ ನೋಡಬಹುದಲ್ಲ. ಒಂದು ದಿನ ಬಿಡುವು ಮಾಡಿಕೊಂಡು ಬರಲು ತಿಳಿಸಿ.” ಎಂದು ವಿನೀತರಾಗಿ ಕೇಳಿಕೊಂಡ ಸಿಬ್ಬಂದಿಗಳಲ್ಲಿ ಹಿರಿಯರಾದ ವೆಂಕಟಗಿರಿಗೌಡರ ಕಡೆ ಕಿರುಗಣ್ಣಿನಿಂದ ನೋಡಿದ ಭಾರ್ಗವಿಗೆ ಮೈಮೇಲೆ ಮುಳ್ಳುಗಳೆದ್ದವು.

ಹಿಂದೊಮ್ಮೆ ಇದೇ ಮನುಷ್ಯ ಬೆನ್ನಹಿಂದೆ ತನ್ನ ಬಗ್ಗೆ ತುಚ್ಛವಾಗಿ ‘ಕಟ್ಟಿಕೊಂಡವನೋ ಇಟ್ಟುಕೊಂಡವನೋ ತಿಳಿದರ‍್ಯಾರು. ಮಕ್ಕಳಂತೆ ಯಾರಿಗೋ’ ಎಂಬೆಲ್ಲ ಹೊಲಸು ಭಾಷೆಯಲ್ಲಿ ಮಾತನಾಡಿದ್ದ ಇದೇ ಮನುಷ್ಯ ಈಗ ಇಲ್ಲಿ ಎಲ್ಲರ ಮುಂದೆ ನಾಟಕವಾಡುತ್ತಿದ್ದಾನೆ. ಕುಹಕ ವ್ಯಂಗ್ಯ ಇಲ್ಲದ ಸುದ್ಧಿಗೊಂದು ಗುದ್ದುಕೊಡುವ, ಕಡ್ಡಿಯನ್ನು ಗುಡ್ಡ ಮಾಡುವ ಈ ಹೊಲಸು ನಾಲಿಗೆಯ ಮನುಷ್ಯ ಯಾರಿಗೆ ಗೊತ್ತಿಲ್ಲ. ಈತ ಶಿಕ್ಷಣದ ಕ್ಷೇತ್ರಗಳಲ್ಲಾಗಲೀ, ಶಿಕ್ಷಕರ ತರಬೇತಿ ಕೇಂದ್ರಗಳಲ್ಲಾಗಲೀ ಒಂದಲ್ಲ ಒಂದು ರೀತಿಯಲ್ಲಿ ಕೊಡುತ್ತಿದ್ದ ಕಾಟವನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖಳೇ ನಾನು. ಅವನು ಪ್ರಭಾವೀ ವ್ಯಕ್ತಿ ಎದುರು ಹಾಕಿಕೊಳ್ಳುವುದು ಬೇಡವೆಂದು ಸುಮ್ಮನೆ ಸಹಿಸುತ್ತಿದ್ದೆ. ಇವನ ಸ್ವಭಾವ ಕಂಡಿದ್ದ ಬಹುತೇಕರು ಅವನ ಮಾತುಗಳಲ್ಲಿ ಯಾವುದನ್ನೂ ನಂಬುತ್ತಿರಲಿಲ್ಲ. ಹೀಗಾಗಿ ನನ್ನಂತಹ ಎಷ್ಟೋ ಮಹಿಳಾ ನೌಕರರು ಬಚಾವಾಗುತ್ತಿದ್ದರು.

“ಮೇಡಂ ಏಕೆ ಏನೂ ಹೇಳುತ್ತಿಲ್ಲ” ಎಂದು ಮತ್ತೆಮತ್ತೆ ಕೆದಕಿದಾಗ “ಆಯಿತು ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮೆಲ್ಲ ಅನುಮಾನಗಳನ್ನು ಪರಿಹರಿಸಲಿಕ್ಕಾದರೂ ಖಂಡಿತ ಕರೆದುಕೊಂಡು ಬರುತ್ತೇನೆ” ಎಂದು ಹೇಳಿದಳು. ಅಲ್ಲಿಂದ ಕಾಲು ತೆಗೆದಳು ಭಾರ್ಗವಿ.

ಮನೆಗೆ ಬಂದ ಭಾರ್ಗವಿ ತನ್ನೆಲ್ಲ ಬಿಗುಮಾನ ಬದಿಗಿಟ್ಟು ಸಿದ್ದಾರ್ಥನಿಗೆ ಫೋನ್ ಮಾಡಿದಳು. ವಿಷಯ ಕೇಳಿದ ಸಿದ್ದಾರ್ಥ “ಓ..ನಿನ್ನೆ ಮೊನ್ನೆ ಕೆಲಸಕ್ಕೆ ಸೇರಿದಂತೆ ಕಾಣಿಸುತ್ತಿದೆ. ಆಗಲೇ ರಿಟೈರ್ಡ್ ಆಗುತ್ತಿದ್ದೀಯಾ, ಖಂಡಿತ ಬರುತ್ತೇನೆ.” ಎಂದನು ಭಾರ್ಗವಿಗೆ ಕುಣಿಯುವಷ್ಟು ಸಂತೋಷವಾಯಿತು. ಹಾಗೆಯೇ ಮಗಳಿಗೆ, ಅಣ್ಣ ಅತ್ತಿಗೆಯರಿಗೂ ಫೋನ್ ಮಾಡಿ ವಿಷಯ ತಿಳಿಸಿದಳು. ಅಲ್ಲಿಂದಲೂ ಸಕಾರಾತ್ಮಕವಾದ ಉತ್ತರ ಕೇಳಿ ಅವಳ ಮನಸ್ಸಿಗೆ ನೆಮ್ಮದಿಯಾಯಿತು.

ಭಾರ್ಗವಿಯ ನಿವೃತ್ತಿಯ ಹಿಂದಿನ ದಿನವೇ ಬೆಳಗ್ಗೆಯೇ ಸಿದ್ಧಾರ್ಥ ಹಾಜರಾದವನೇ “ನಿನ್ನ ಅಣ್ಣ ಅತ್ತಿಗೆ ಮಧ್ಯಾನ್ಹದ ಹೊತ್ತಿಗೆ ಬರುತ್ತಾರಂತೆ. ಯಾರನ್ನೋ ನೋಡಿ ಮಾತನಾಡಿಸಿಕೊಂಡು ಬರುತ್ತೇನೆಂದರು” ಎಂದನು.

“ಹೌದೇ ಸರಿ, ತಿಂಡಿ ತಿನ್ನಿ” ಎಂದಳು. “ಎಲ್ಲಾ ಆಗಿದೆ, ಸ್ವಲ್ಪ ಹೊತ್ತು ಬಿಟ್ಟು ಟೀ ಮಾಡುವೆಯಂತೆ. ಬಾ ಇಲ್ಲಿ ನಿನ್ನೊಡನೆ ಸ್ವಲ್ಪ ಮಾತನಾಡುವುದಿದೆ. ಅವರೆಲ್ಲ ಬಂದಾಗ ಆಗುವುದಿಲ್ಲ” ಎಂದನು. ಆಯಿತೆಂದು ಸಿದ್ಧಾರ್ಥನ ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತು “ಏನು ವಿಷಯ ಹೇಳಿ” ಎಂದು ಕೇಳಿದಳು.

“ಏನಿಲ್ಲ ನೀನು ರಿಟೈರ್ ಆದಮೇಲೆ ಸರ್ಕಾರದಿಂದ ಎಷ್ಟು ಹಣ ದೊರೆಯಬಹುದು? ಅಂದರೆ ಗ್ರಾಚೂಟಿ, ಪ್ರಾವಿಡೆಂಟ್ ಫಂಡ್ ಇತ್ಯಾದಿಗಳು” ಎಂದು ಕೇಳಿದ ಸಿದ್ಧಾರ್ಥ.
ಅವನ ಮಾತಿನ ವರಸೆಯಲ್ಲಿ ಯಾವುದಕ್ಕೋ ಏಟು ಹಾಕುವ ಹಿನ್ನೆಲೆಯ ಸೂಕ್ಷ್ಮತೆ ಮೂಗಿಗೆ ತಾಗಿತು. ಭಾರ್ಗವಿ “ಸರಿಯಾಗಿ ಎಷ್ಟೆಂದು ನಿರ್ದಿಷ್ಟವಾಗಿ ಹೇಗೆ ಹೇಳಲಿ, ಅಲ್ಲದೆ ನೀವು ಬಿಸಿನೆಸ್‌ಗೆಂದು ಬ್ಯಾಂಕ್‌ಲೋನ್ ತೆಗೆದುಕೊಂಡಾಗ, ಬ್ಯಾಂಕಿನಿಂದ ಒತ್ತಡ ಬಂದಾಗ ತೆಗೆದ ಲೋನ್, ಮನೆಕಟ್ಟುವಾಗ ಸ್ವಲ್ಪ ಮಟ್ಟಿಗೆ ತೆಗೆದ ಲೋನ್ ಇವೆಲ್ಲ ಕಟ್ಟಾಗಿ..”
ಅಷ್ಟರಲ್ಲಿ ಕಾಲಿಂಗ್‌ಬೆಲ್ ಸದ್ದಾಯಿತು. ಜೊತೆಯಲ್ಲೇ ಭಾರ್ಗವಿ ಎಂಬ ಕರೆ ಕೇಳಿಸಿತು. ಅವರಿಬ್ಬರ ಸಂಭಾಷಣೆಗೆ ತೆರೆ ಬಿತ್ತು. ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು ಎಂಬಂತೆ ತಡಮಾಡದೆ ಕುಳಿತಲ್ಲಿಂದ ಎದ್ದು ಬಾಲಣ್ಣ ಬಂದಾಂತ ಕಾಣುತ್ತೆ ಎಂದು ಬಾಗಿಲು ತೆರೆಯಲು ದಾವಿಸಿದಳು.

‘ಥತ್ತೇರಿ ಕಿ, ಕಬಾಬ್ ಮೆ ಹಡ್ಡಿ’ ಅಂತ ಸರಿಯಾದ ಸಮಯಕ್ಕೆ ಬಂದೇಬಿಟ್ಟ. ಹೇಗಾದರೂ ಮಾಡಿ ಅವಳಿಗೆ ಬರುವ ಹಣದಲ್ಲಿ ಸ್ವಲ್ಪಭಾಗವನ್ನು ಇತ್ತಕಡೆಗೆ ಎಳೆದುಕೊಳ್ಳಲು ಅವಳನ್ನು ಒಪ್ಪಿಸೋಣವೆಂದುಕೊಂಡರೆ.. ಛೇ..ಮೇಲೆ ಮಾತ್ರ ದೇಶಾವರಿ ನಗುತ್ತಾ “ಬಾಲೂ ಮಧ್ಯಾನ್ಹ ಬರುತ್ತೇವೆ ಎಂದಿದ್ದೆಯಲ್ಲಾ, ಬಾ..ಬಾ.” ಎಂದು ಅವನನ್ನು ಆಹ್ವಾನಿಸಿದ ಸಿದ್ಧಾರ್ಥ.

“ಹೂ ಇವಳ ಗೆಳತಿಯ ಮನೆಗೆ ನಾಳೆಗೆ ಹೋದರಾಯಿತೆಂದು ತೀರ್ಮಾನಿಸಿ ನೇರವಾಗಿ ಇಲ್ಲಿಗೇ ಬಂದುಬಿಟ್ಟೆವು. ನೀನು ಬಂದು ಎಷ್ಟೊತ್ತಾಯಿತು?” ಎಂದು ಕೇಳುತ್ತಾ ಕೈಯಲ್ಲಿದ್ದ ಚೀಲಗಳನ್ನು ಗೋಡೆಗೆ ಒರಗಿಸಿಟ್ಟ ಬಾಲಕೃಷ್ಣ. ಅವನ ಹಿಂದೆಯೇ ಸೂಟ್‌ಕೇಸ್ ಹಿಡಿದು ಬಂದ ದೇವಿಕಾ ಭಾರ್ಗವಿ ಮತ್ತು ಸಿದ್ಧಾರ್ಥನ ಕಡೆ ತಿರುಗಿ “ಚೆನ್ನಾಗಿದ್ದೀರಾ?” ಎಂದು ವಿಚಾರಿಸಿದಳು.
“ಹೂಂ ಬಾ..ಬಾ.. ಎಷ್ಟು ಕಾಲವಾಯ್ತು ನೀವು ಇಲ್ಲಿಗೆ ಬಂದು, ಬಾಲಣ್ಣನೇನೋ ಬಂದು ಹೋಗುತ್ತಿರುತ್ತಾನೆ. ನೀವೇ ಬಹಳ ಅಪರೂಪ. ಇತ್ತೀಚೆಗೆ ಬಾಲಣ್ಣನೂ ಅಷ್ಟೇ. ಹಾ.. ಟವೆಲ್ ತೊಗೋಳ್ಳಿ, ಕೈಕಾಲು ಮುಖ ತೊಳೆದು ಬನ್ನಿ ತಿಂಡಿ ತಿನ್ನುವಿರಂತೆ” ಎಂದು ಕರೆದಳು ಭಾರ್ಗವಿ.

“ಅದೆಲ್ಲಾ ಆಗಿದೆ, ಸ್ವಲ್ಪ ಹೊತ್ತು ಬಿಟ್ಟು ಟೀ ಕುಡಿಯೋಣ. ಈ ಸಾಮಾನುಗಳನ್ನು ತೆಗೆದು ಒಳಗಿಡು” ಎಂದು ದೇವಿಕಾಳಿಗೆ ಮತ್ತು ಭಾರ್ಗವಿಗೆ ಹೇಳಿ ಗೆಳೆಯ ಸಿದ್ಧಾರ್ಥನೊಡನೆ ಮಾತುಕತೆಗೆ ತೊಡಗಿದನು.
ಗೆಳೆಯನೊಡನೆ ಮಾತನಾಡುತ್ತಲೇ ಸಿದ್ಧಾರ್ಥ ಓರೆಗಣ್ಣಿನಿಂದ ಅವನು ಊರಿನಿಂದ ತಂದಿದ್ದ ವಸ್ತುಗಳನ್ನು ಗಮನಿಸುತ್ತಿದ್ದ. ಬಾಳೆಗೊನೆ, ತರಕಾರಿಗಳು, ಕಡಲೇಕಾಯಿ, ತೆಂಗಿನಕಾಯಿ, ಒಣಮೆಣಸಿನಕಾಯಿ, ಹುಣಸೇಹಣ್ಣು, ಜೊತೆಗೆ ತಿಂಡಿಯಿದ್ದ ಡಬ್ಬಿ ಇವೆಲ್ಲವನ್ನೂ ನೋಡಿ ಬರಿಗೈಯಲ್ಲಿ ಬಂದಿದ್ದ ಆತನಿಗೆ ಪಿಚ್ಚೆನ್ನಿಸಿತು. ಇಲ್ಲಿಗೆ ಹೊರಡುವಾಗ ಅವರಮ್ಮ ಹೇಳಿದ ಮಾತುಗಳು ನೆನಪಿಗೆ ಬಂದವು. ಒಂದಿಷ್ಟು ರಾಗಿ, ಅಕ್ಕಿ, ಒಣಮೆಣಸಿನಕಾಯಿ, ಕೊಬ್ಬರಿ ಚೀಲಕ್ಕೆ ಹಾಕಿಕೊಡುತ್ತೇನೆ. ತೆಗೆದುಕೊಂಡು ಹೋಗು ಎಂದಿದ್ದಕ್ಕೆ “ಏ ಅವಳೇನೂ ಬೇಕಂತ ಹೇಳಿಲ್ಲ, ಸುಮ್ಮನೆ ಏಕೆ?” ಎಂದುಬಂದಿದ್ದ ಸಿದ್ಧಾರ್ಥ. ಒಂದೇ ಒಂದು ಕ್ಷಣ ಇಂಥಹ ವಿಷಯಗಳನ್ನೇನೂ ಭಾರ್ಗವಿ ತಲೆಗೆ ಹಾಕಿಕೊಳ್ಳುವುದಿಲ್ಲ. ನನ್ನಣ್ಣನನ್ನು ನೋಡಿ ನಿಮ್ಮನ್ನು ನೋಡಿಕೊಳ್ಳಿ ಎಂದು ಯಾವತ್ತೂ ಹಂಗಿಸಿ ಮಾತನಾಡಿಲ್ಲ. ಎಂದುಕೊಂಡು ತನಗೆ ತಾನೇ ಸಮಾಧಾನ ಪಟ್ಟುಕೊಂಡು ಮಾತನ್ನು ಮುಂದುವರಿಸುವುದರಲ್ಲಿ ಮಗ್ನನಾದ ಸಿದ್ಧಾರ್ಥ.

ಸ್ವಲ್ಪವೇ ಹೊತ್ತಿನಲ್ಲಿ ಟೀ ಕಪ್ಪುಗಳು ಮತ್ತು ಚಕ್ಕುಲಿ, ಕಜ್ಜಾಯಗಳನ್ನು ಇಟ್ಟುಕೊಂಡು ತಟ್ಟೆಯೊಂದಿಗೆ ಭಾರ್ಗವಿ, ದೇವಿಕಾ ಬಂದರು. ಅವರಿಬ್ಬರ ಮುಂದಿಟ್ಟು “ಅಪ್ಪ, ಅಮ್ಮ, ಮಕ್ಕಳು ಹೇಗಿದ್ದಾರೆ?” ಎಂದು ಭಾರ್ಗವಿ ಕೇಳಿದಳು.

“ಹಾ..ಮಕ್ಕಳು ಚೆನ್ನಾಗಿದ್ದಾರೆ, ಅಪ್ಪನಿಗಂತೂ ದಿನಬೆಳಗಾದರೆ ನಿನ್ನ ಸಾಧನೆ, ಮೊಮ್ಮಕ್ಕಳ ಸಾಧನೆಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಬರೀ ಗುಣಗಾನವನ್ನೇ ಮಾಡುತ್ತಿರುತ್ತಾರೆ. ನಿಮ್ಮಗಳ ವಿಷಯವೆಂದರೆ ಅವರಿಗೆ ಬೆಲ್ಲದಂತೆ ಸಿಹಿ. ಜೊತೆಗೆ ಅಳಿಯ ಸಿದ್ಧಾರ್ಥ ತೋರಿದ ವಿಶಾಲವಾದ ಹೃದಯವಂತಿಕೆಯ ಬಗ್ಗೆ. ಅವನು ಮನಸ್ಸು ಮಾಡದಿದ್ದರೆ ಇವೆಲ್ಲ ಸಾಧ್ಯವಿತ್ತೇ? ಅಂತ ಕೊಂಡಾಡುತ್ತಿರುತ್ತಾರೆ” ಎಂದು ಹೇಳಿದ ಬಾಲು. “ಅಂದ ಹಾಗೆ ನೀವು ಯಾವಾಗ ಊರಿಗೆ ಶಿಫ್ಟ್ ಆಗುತ್ತೀರಿ?” ಎಂಬ ಪ್ರಶ್ನೆಯನ್ನು ತಂಗಿಗೆ ಕೇಳಿದ.

ತನ್ನ ಹೆಂಡತಿ ಮಕ್ಕಳ ಗುಣಗಾನ ಮಾಡುವುದರ ಜೊತೆಗೆ ಅದಕ್ಕೆ ಕಾರಣೀಭೂತನೆಂದು ತನ್ನನ್ನೂ ಮಾವನವರು ಹೊಗಳಿದ್ದು ಸಿದ್ಧಾರ್ಥನಿಗೆ ಖುಷಿ ತಂದುಕೊಟ್ಟಿತು. ಆದರೆ ಗೆಳೆಯ ಬಾಲು ಕೊನೆಯಲ್ಲಿ ಕೇಳಿದ ಪ್ರಶ್ನೆ ಅವನನ್ನು ಗಲಿಬಿಲಿಗೆ ನೂಕಿತು. ಊರಿಗೆ ಶಿಫ್ಟೇ ! ಭಾರ್ಗವಿ ನನಗೆ ಹೇಳಲೇ ಇಲ್ಲವಲ್ಲ. ಈ ಸಂಗತಿ ನನ್ನ ಕಿವಿಗೇ ಬಿದ್ದಿಲ್ಲ. ಹಾಗಾದರೆ ಇವರೆಲ್ಲ ಏನನ್ನೋ ತೀರ್ಮಾನ ಮಾಡಿಕೊಂಡ ಹಾಗಿದೆ. ಇವಳ್ಯಾಕೆ ಅಲ್ಲಿಗೆ ಹೋಗ್ತಾಳೆ. ತಡೆಯಲಾಗದೆ “ಭಾರ್ಗವಿ, ಬಾಲು ಏನು ಹೇಳುತ್ತಿದ್ದಾನೆ. ನೀನು ಅಲ್ಲಿಗೆ ! ಮಕ್ಕಳಿಗೆ ಹಳ್ಳಿಯೇ ಪಸಂದು ಬಂದಿಲ್ಲ. ಅಲ್ಲದೆ ಮಗಳು ಬೆಂಗಳೂರಿನಲ್ಲೇ ಕೆಲಸದಲ್ಲಿದ್ದಾಳೆ. ಮತ್ತೊಬ್ಬಳು ಪರದೇಶದಲ್ಲಿದ್ದಾಳೆ. ಅವರುಗಳ ಓಡಾಟಕ್ಕೆ ಸಿಟಿಯೇ ಸರಿ. ಎಂದಾದರೂ ಒಂದು ದಿನ ಬಂದು ಹೋಗಲು ಆದೀತು. ಅದು ಬಿಟ್ಟು ಪರ್ಮನೆಂಟಾಗಿ..”

ಸಿದ್ಧಾಥನ ಮಾತುಗಳು ಪೂರೈಸುವ ಮೊದಲೇ ಬಾಲುವಿನ ಹೆಂಡತಿ ದೇವಿಕಾ “ಅಲ್ಲಾ ಭಾವಾ, ಭಾರ್ಗವಿ ಅಕ್ಕ ರಿಟೈರ್ಡ್ ಆದಮೇಲೆ ಇಲ್ಲಿ ಕೂತು ಏನು ಮಾಡ್ತಾರೆ. ಹುಡುಗರೇನೋ ಬೆಳೆದಿದ್ದಾರೆ, ವiದುವೆಯಾಗಿ ಹೋಗುವವರು. ಅವರೊಡನೆ ಇವರದ್ದೇನು ಕೆಲಸವಿರುತ್ತೆ? ನಮ್ಮೂರಿಗೆ ಬಂದರೆ ಸುತ್ತಮುತ್ತ ಹಳ್ಳಿಗಳಲ್ಲಿರುವ ಹೆಣ್ಣುಮಕ್ಕಳಿಗೆ ಒಂದಿಷ್ಟು ಏನಾದರೂ ಕಲಿಸಿಕೊಟ್ಟು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬಹುದು. ಶಿಕ್ಷಣ ಕ್ಷೇತ್ರದಲ್ಲೇ ದುಡಿದಿರುವ ಇವರಿಗೆ ವಯಸ್ಕರ ಕಲಿಕೆ ಮತ್ತು ಬೇರೆ ತರಹದ ತರಬೇತಿಗಳ ಅರಿವಿರುತ್ತದೆ. ಅವೆಲ್ಲವನ್ನೂ ಮಾಡಬಹುದು. ನಾನೂ ಜೊತೆಗೂಡುತ್ತೇನೆ ಎಂದು ಹೇಳಿದ್ದೇನೆ ಏಕೆ ಭಾರ್ಗವಿ ಅಕ್ಕ ನಿಮ್ಮೊಡನೆ ಈ ಸಂಗತಿಗಳನ್ನು ಹೇಳಿಲ್ಲವೇ?” ಎಂದಳು ದೇವಿಕಾ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45839

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *