ಲಹರಿ

ನಮ್ಮ ಸಂತೋಷದ ಕೀಲಿಕೈ ನಮ್ಮಲ್ಲಿಯೇ ಇರಲಿ

Share Button

ಹಲವಾರು ಬಾರಿ ನಾವು ನಮ್ಮ ಖುಷಿ, ಸಂತೋಷವನ್ನು ಇತರರ ಪ್ರತಿಕ್ರಿಯೆಗಳ ಮೇಲೆ ಕಟ್ಟಿಕೊಳ್ಳುತ್ತೇವೆ. ಯಾರಾದರೂ ನಮ್ಮನ್ನು ಮೆಚ್ಚಿ ಹೊಗಳಿಕೆಯ ಮಾತನಾಡಿದರೆ ಸಂತೋಷ, ತೆಗಳಿದರೆ, ಟೀಕಿಸಿದರೆ ದು:ಖ, ಖಿನ್ನತೆ ಉಂಟಾಗುತ್ತದೆ. ಯಾಕೆ ಹೀಗೆ? ಮನುಷ್ಯ ಹುಟ್ಟಿದಂದಿನಿಂದಲೇ ಆತನೊಡನೆ ಒಂದು ಆಳವಾದ ಬಯಕೆ, ಇಚ್ಛೆ ಆವರಿಸಿರುತ್ತದೆ. ತಾನು ಇತರರಿಂದ ಗುರುತಿಸಲ್ಪಡಬೇಕು, ತನ್ನ ಸಾಮರ್ಥ್ಯವನ್ನು ಮೆಚ್ಚಬೇಕು, ಇತ್ಯಾದಿ. ಕಾಲ ಬದಲಾದರೂ, ಜೀವನ ಶೈಲಿಯಲ್ಲಿ ಮಾರ್ಪಾಡಾದರೂ, ಮಾನವನ ಈ ಮೂಲಭೂತ ಹಂಬಲ ಮಾತ್ರ ಬದಲಾಗಿಲ್ಲ. ನೀವು ಗಮನಿಸಿರಬಹುದು. ಚಿಕ್ಕ ಮಗು ಎಲ್ಲರ ಗಮನ ಸೆಳೆಯಲು ಸುಮ್ಮನೆ ಅಳುತ್ತದೆ. ತಾನು ನಕ್ಕಾಗ, ತನ್ನ ಮೊದಲ ಹೆಜ್ಜೆಯನ್ನು ಇಟ್ಟಾಗ ಅಥವಾ ತೊದಲು ಮಾತಿಗೆ, ಮೆಚ್ಚುಗೆ ನಿರೀಕ್ಷಿಸುತ್ತದೆ. ಬಾಲ್ಯದಲ್ಲಿ ತಾಯಿಯ ಒಂದು ಮೆಚ್ಚುಗೆ ನೋಟಕ್ಕೆ ಖುಷಿ ಪಟ್ಟರೆ, ಶಾಲೆಯಲ್ಲಿ ಶಿಕ್ಷಕರಿಂದ ಸಿಗುವ ಪ್ರಶಂಸೆಯ ನುಡಿಗೆ ಹರ್ಷ ಪಡುತ್ತೇವೆ. ಬೆಳೆದು ದೊಡ್ಡವರಾದಂತೆ, ಈ ಬಯಕೆಗಳು ಹೊಸ ರೂಪ ಪಡೆಯುತ್ತವೆ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಯ, ಸಹೋದ್ಯೋಗಿಗಳ ಮೆಚ್ಚುಗೆ, ಮನೆಯವರಿಂದ ಒಳ್ಳೆ ಕೆಲಸಕ್ಕೆ ಪ್ರಶಂಸೆ, ಸ್ನೇಹಿತರಿಂದಲೂ ಗೌರವವನ್ನು ನಿರೀಕ್ಷಿಸುತ್ತೇವೆ. ಬೇರೆಯವರು ನಮ್ಮನ್ನು ಗುರುತಿಸಬೇಕೆಂಬ ಹಂಬಲ, ಬಯಕೆ- ಇದೊಂದು ಸಹಜ ಸ್ವಭಾವ ಪ್ರಕ್ರಿಯೆ.

ಬಹಳಷ್ಟು ಬಾರಿ ನಾವು ಸಂತೋಷವನ್ನು ಇತರರ ಅನುಮೋದನೆಯಲ್ಲಿ ಹುಡುಕುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಸಾಧನೆಗಳನ್ನು ಯಾರಾದರೂ ಗುರುತಿಸಲಿ, ನನ್ನ ಅಸ್ತಿತ್ವಕ್ಕೆ ಒಂದು ಬೆಲೆ ಕೊಡಲಿ ಎಂಬ ಭಾವನೆ ಇದ್ದೇ ಇರುತ್ತದೆ. ತಮ್ಮನ್ನು ಇತರರು ಮೆಚ್ಚಬೇಕು, ಹೊಗಳಬೇಕು ಎಂಬ ಆಸೆ ಇರುತ್ತದೆ. ಹೊಸ ಉಡುಪು ತೊಟ್ಟಾಗ, ವಾಹನ ಖರೀದಿಸಿದಾಗ, ಏನಾದರೂ ಹೊಸ ವಸ್ತು ಕೊಂಡಾಗ, ಅಥವಾ ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ, ತುಂಬಾ ಒಳ್ಳೆಯವರು ಎಂದು ಹೇಳಿದಾಗ ಮನಸ್ಸಿಗೆ ಖುಷಿಯಾಗುತ್ತದೆ. ಒಂದು ಹೊಸ ರುಚಿ ಮಾಡಿದಾಗ ಮನೆಯವರು ಮೆಚ್ಚಿ ಹೊಗಳಲಿ ಎಂದು ನಿರೀಕ್ಷಿಸುತ್ತೇವೆ. ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಪ್ರತೀ ಪೋಸ್ಟ್ಗೆ ಸಿಗುವ ಒಂದು ಲೈಕ್, ಕಮೆಂಟ್ ಹಾಗೂ ಶೇರ್ ಕೂಡ ಕ್ಷಣಿಕ ಸಂತೋಷವನ್ನು ನೀಡುತ್ತದೆ. ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ನಮಗೆ ನಮ್ಮ ಮೇಲೆ ನಂಬಿಕೆ, ಭರವಸೆ ಮೂಡುತ್ತದೆ.

ವಾಸ್ತವವಾಗಿ ಗುರುತಿಸಿಕೊಳ್ಳುವ ಮತ್ತು ಮೆಚ್ಚುಗೆ ಪಡೆಯುವ ಈ ಹಂಬಲ ಮನುಷ್ಯನ ಸಹಜ ಮನೋಭಾವವೇ ಹೌದು. ಯಾಕೆಂದರೆ ನಾವು ಮಾಡಿದ ಒಳ್ಳೆ ಕಾರ್ಯ, ಸಾಧನೆಯನ್ನು ಗುರುತಿಸಿದಾಗ, ನಿಜಕ್ಕೂ ನಾವು ಖುಷಿ ಪಡುತ್ತೇವೆ ಮತ್ತು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಕೆಲವೊಮ್ಮೆ ಈ ಮೆಚ್ಚುಗೆಯ ಅವಶ್ಯಕತೆ ಅಧಿಕವಾಗುತ್ತಿದ್ದಂತೆ, ನಮ್ಮ ಬದುಕಿನ ಸ್ವರೂಪವೇ ಬದಲಾಗುತ್ತದೆ. ಈ ಹೊಗಳಿಕೆಯ ನಿರೀಕ್ಷೆಗಳು ಸಮಸ್ಯೆಯಾಗುವುದು ಯಾವಾಗ ಎಂದರೆ, ನಮ್ಮ ಪ್ರೇರಣೆ, ಕೆಲಸ ಮಾಡಲು ಇರುವ ಮುತುವರ್ಜಿ ಹಾಗೂ ಆಸಕ್ತಿ ಸಂಪೂರ್ಣವಾಗಿ ಬೇರೆಯವರ ಒಪ್ಪಿಗೆ ಹಾಗೂ ದೃಡೀಕರಣದ ಮೇಲೆ ಅವಲಂಬಿತವಾದಾಗ ಮಾತ್ರ. ಆತ್ಮವಿಶ್ವಾಸದ ಕೊರತೆಯಿಂದ ನಾವು ನಮ್ಮನ್ನು ಮೆಚ್ಚಿಕೊಳ್ಳಲು ಹಿಂದೇಟು ಹಾಕುತ್ತೇವೆ. ಸ್ವಲ್ಪ ಮಟ್ಟಿನ ಕೀಳರಿಮೆ ಕೂಡಾ ಇರುತ್ತದೆ. ‘ನಾನು ಚೆನ್ನಾಗಿಲ್ಲ, ನನ್ನ ಡ್ರೆಸ್ ಚೆನ್ನಾಗಿಲ್ಲ. ನನ್ನನ್ನು ಯಾರೂ ಇಷ್ಟ ಪಡೊಲ್ಲ, ನನಗೇ ಸೋಲು ಕಟ್ಟಿಟ್ಟ ಬುತ್ತಿ, -ಹೀಗೆಲ್ಲಾ ನಕಾರಾತ್ಮಕ ಭಾವನೆಯಿಂದ ಬಳಲುತ್ತಿರುತ್ತೇವೆ. ಟೀಕಿಸುವವರೇ ಅಧಿಕವಾಗಿರುವ ಈಗಿನ ಕಾಲದಲ್ಲಿ ನಮಗೆ ಬಲ ಬರುವುದು ಬೇರೆಯವರ ವ್ಯಾಲಿಡೇಶನ್ ಸಿಕ್ಕಾಗ ಮಾತ್ರ.

ಒಂದು ಕಾಲದಲ್ಲಿ ನನ್ನ ಸಂತೋಷವೂ, ಆತ್ಮ ವಿಶ್ವಾಸವೂ ಇತರರ ಮೆಚ್ಚುಗೆಯ ಮೇಲೆ ಅವಲಂಬಿತವಾಗಿತ್ತು. ಒಂದು ಒಳ್ಳೆಯ ಮಾತು, ಪ್ರಶಂಸೆ ಸಿಕ್ಕಾಗ ಖುಷಿ, ಯಾರೂ ಪ್ರತಿಕ್ರಿಯಿಸದಿದ್ದಾಗ ಮನಸ್ಸಿಗೆ ಬೇಸರವಾಗುತ್ತಿತ್ತು. ಕೆಲವೊಮ್ಮೆ ನನ್ನ ಆಲೋಚನೆಗಳು, ನಿರ್ಧಾರಗಳೂ ಇತರರ ಅಭಿಪ್ರಾಯದಂತೆ ಬದಲಾಗುತ್ತಿತ್ತು. ಒಂದು ಬಾರಿ, ನಾನು ಬಹಳ ವರ್ಷಗಳ ಹಿಂದೆ ಖರೀದಿಸಿದ ನನಗೆ ತುಂಬಾ ಇಷ್ಟವಾದ ಸೀರೆ ಹಳತಾಯಿತೆಂದು ಉಡದೆ ಹಾಗೆಯೇ ಇಟ್ಟಿದ್ದೆ. ಕೊನೆಯ ಬಾರಿ ಉಟ್ಟು ಮತ್ತೆ ಬೇಕಾದರೆ ಏನಾದರೂ ಮಾಡೋಣ ಅಂದು ಕೊಂಡು ಆ ದಿನ ಉಟ್ಟಿದ್ದೆ. ಪರಿಚಿತರೊಬ್ಬರು ನನ್ನನ್ನು ನೋಡಿದೊಡನೆಯೇ, “ತುಂಬಾ ಚೆನ್ನಾಗಿದೆ ಈ ಸಾರಿ, ಈ ಕಲರ್ ನಿಮಗೆ ಚೆನ್ನಾಗಿ ಸೂಟ್ ಆಗುತ್ತದೆ” ಎಂದರು. ನನಗೆ ಸಂತೋಷವಾಯಿತಲ್ಲದೆ, ಆಶರ್ಯವೂ ಆಯಿತು. ‘ಓಹೋ, ಹಾಗಾದರೆ ಇನ್ನೂ ಈ ಸೀರೆಯನ್ನು ಸ್ವಲ್ಪ ಕಾಲ ಉಡಬಹುದು’ ಎಂದು ಭಾವಿಸಿ, ಪುನ: ಕಪಾಟಿನಲ್ಲಿ ಇಡಲು ನಿಶ್ಚಯಿಸಿದೆ. ಇನ್ನೊಂದು ಸಂದರ್ಭದಲ್ಲಿ ಮದುವೆ ಸಮಾರಂಭಕ್ಕೆಂದು ಹೊಲಿಸಿದ ಹೊಸ ರವಿಕೆ, ಸರಿಯಾಗಿ ಫಿಟ್ ಆಗದೆ ಲೂಸ್ ಆಗುತ್ತಿತ್ತು. ಅಸಮಧಾನದಿಂದಲೇ ಹೊರಟಾಗ, ಅಲ್ಲಿದ್ದ ನನ್ನ ಸಂಬಂಧಿಕರೊಬ್ಬರು, “ಬ್ಲೌಸ್ ಚೆನ್ನಾಗಿ ಹೊಲಿದಿದ್ದಾರೆ. ನಿಮ್ಮ ಟೈಲರ್ ಯಾರು?” ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದಾಗ ತೃಪ್ತಿಯಿಂದ ನನ್ನ ಆತ್ಮವಿಶ್ವಾಸ ಗರಿಕೆದರಿತ್ತು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ನಾನು ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಕೊಟ್ಟು ನನ್ನ ನಿಲುವನ್ನು ಬದಲಿಸಿದ್ದೆ.

ಹಾಗೆಯೇ ಕಾಲೇಜಿನಲ್ಲಿರುವಾಗ ನಮ್ಮ ವಿಭಾಗದ ವತಿಯಿಂದ ಕಾರ್ಯಕ್ರಮವೇನಾದರೂ ಏರ್ಪಡಿಸಿದಾಗ ಕೊನೆಯವರೆಗೂ ತುಂಬಾ ಆತಂಕದಲ್ಲಿ ಇರುತ್ತೇವೆ. ಆಗ ಯಾರಾದರೂ ಸಹೋದ್ಯೋಗಿ ಬಂದು, “ಮೇಡಂ, ಕಾರ್ಯಕ್ರಮ ಸೂಪರ್ ಆಗಿತ್ತು.” ಎಂದಾಗ ಆತಂಕ, ಒತ್ತಡ ಮಾಯವಾಗಿ ಸಂತೋಷದಿಂದ ನಿಟ್ಟುಸಿರು ಬಿಡುತ್ತಿದ್ದೆ. ವಿದ್ಯಾರ್ಥಿಗಳೂ “ಮೇಡಂ ಪ್ರೋಗ್ರಾಮ್ ಸಕ್ಸೆಸ್” ಅಂದಾಗ ತುಂಬಾ ಸಮಾಧಾನವಾಗುತ್ತಿತ್ತು. ಮನೆಯಲ್ಲೂ ಒಳ್ಳೆಯ ಅಡಿಗೆ ಮಾಡಿದಾಗ ‘ಚೆನ್ನಾಗಿದೆ’ಎಂಬ ಮಾತನ್ನು ನಿರೀಕ್ಷಿಸುತ್ತಿದ್ದೆ. ಯಾರೂ ಏನೂ ಪ್ರತಿಕ್ರಿಯಿಸದಿದ್ದಾಗ, ಅಡಿಗೆ ಚೆನ್ನಾಗಿಲ್ಲವೋ ಎಂದು ನೊಂದುಕೊಳ್ಳುತ್ತಿದ್ದೆ. ಯಾರಾದರೂ ತುಂಬಾ ದಪ್ಪವಾಗಿದ್ದೀರಿ, ಅಂದರೆ ಮರುದಿನವೇ ವಾಕಿಂಗ್, ವ್ಯಾಯಾಮ ಶುರುವಾಗುತ್ತಿತ್ತು. ಹೀಗೆಯೇ ಬೇರೆಯವರ ಅಭಿಪ್ರಾಯಗಳು ನನ್ನ ಸಂತೋಷವನ್ನು ನಿರ್ಧರಿಸುತ್ತಿತ್ತು. ಒಂದು ದಿನ ನನ್ನೊಳಗೇ ಪ್ರಶ್ನೆ ಮೂಡಿತು. “ನಾನು ಯಾಕೆ ಸ್ವಂತ ಅಭಿಪ್ರಾಯ ಹೊಂದಬಾರದು? ನನ್ನ ಸಂತೋಷವನ್ನು ಬೇರೆಯವರು ಯಾಕೆ ನಿರ್ಧಾರ ಮಾಡಬೇಕು? ನನ್ನ ಮನಸ್ಸು, ನನ್ನ ಜೀವನ, ನನ್ನ ಸಂತೋಷ ನನ್ನ ಕೈಯಲ್ಲಿದೆ. ನನ್ನ ಮನಸ್ಥಿತಿಯ ಜವಾಬ್ದಾರಿ ನನ್ನ ಮೇಲಿದೆ. ಯಾರಾದರೂ ಹೊಗಳಿದರೂ, ಮೆಚ್ಚಿಕೊಂಡರೂ, ಒಳ್ಳೆಯ ಮಾತು ಆಡಿದರೂ ಅದನ್ನು ಸ್ವೀಕರಿಸಿ, ಅಂತಿಮವಾಗಿ ನಮ್ಮ ನಿಲುವನ್ನು ಬದಲಾಯಿಸದೆ, ನಮಗೆ ಹೇಗೆ ಸೂಕ್ತವಾಗಿ ಅನಿಸುತ್ತದೆಯೋ ಅದನ್ನೇ ಇನ್ನು ಮುಂದೆ ಮಾಡಬೇಕು, ನನ್ನ ಸಂತೋಷದ ಹಕ್ಕನ್ನು ಯಾರಿಗೂ ಕೊಡಲಾರೆ” ಎಂದು ತೀರ್ಮಾನಿಸಿದೆ. ನಮ್ಮನ್ನು ನಾವೇ ಮೊದಲು ಮೆಚ್ಚಬೇಕು, ನಾನು ಮಾಡಿದ ಕೆಲಸ ಆತ್ಮತೃಪ್ತಿಯಾಗುವುದಿದ್ದರೆ ಸಾಕು. ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡಿದಾಗ ಚಪ್ಪಾಳೆ ಸಿಗಬೇಕೆಂದಿಲ್ಲ. ನಮ್ಮನ್ನು ನಾವು ಪ್ರಶಂಸಿಸಲು ಕಲಿತಾಗ ಮಾತ್ರ, ಇನ್ನೊಬ್ಬರಿಂದ ನಿರೀಕ್ಷಿಸುವ ಮೆಚ್ಚುಗೆಯ ಅಗತ್ಯ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ ಎಂದು ಕ್ರಮೇಣ ನನಗೆ ಅರಿವಾಯಿತು.

ನಿಮ್ಮ ಅನುಭವಕ್ಕೆ ಬಂದಿರಬಹುದು. ನಮ್ಮೊಂದಿಗೆ ಸ್ನೇಹದಿಂದಲೇ ಇರುವ ಅನೇಕ ಜನರು ನಮ್ಮ ನಡುವೆ ಇರುತ್ತಾರೆ. ಒಮ್ಮೆಯೂ ನಮ್ಮನ್ನು ಕುರಿತು ಒಂದು ಮೆಚ್ಚುಗೆಯ ಮಾತು ಕೂಡಾ ಆಡಿರುವುದಿಲ್ಲ. ಬದಲಿಗೆ ಏನಾದರೊಂದು ತಪ್ಪಾದರೆ, ಎಲ್ಲರಿಗಿಂತ ಮೊದಲೇ ಗುರುತಿಸಿ, ನಮ್ಮನ್ನು ಎಲ್ಲರ ಮುಂದೆ ಕುಗ್ಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. “ನಿನಗೆ ಇದನ್ನು ಮಾಡಲು ಸಾಧ್ಯವಿಲ್ಲ, ನಿನ್ನಿಂದಾಗದು” ಎಂದು ಹೇಳುವವರೇ ಅಧಿಕ. ಆದ್ದರಿಂದ, ಇಂತಹ ಮಾತುಗಳಿಗೆ ಕಿವಿಗೊಡದೆ ನಿಮ್ಮ ಒಳಗಿನ ಧ್ವನಿಯನ್ನು ಆಲಿಸಿ, ಎಲ್ಲರೂ ನಿಮ್ಮನ್ನು ದ್ವೇಷಿಸಿದರೂ ನೀವು ನಿಮ್ಮನ್ನು ಪ್ರೀತಿಸಿ. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಇತರರು ಗಮನಿಸದೆ ಇದ್ದರೂ, ನಮ್ಮ ಪ್ರತಿಭೆಗಳಿಗೆ ಚಪ್ಪಾಳೆ ತಟ್ಟದಿದ್ದರೂ, ನಮ್ಮನ್ನು ನಾವು ಗೌರವಿಸುವುದು ಅವಶ್ಯಕ. ನಮ್ಮ ಜೀವನದ ಮೌಲ್ಯಗಳಿಗೆ ಬೆಲೆ ಬರುವುದು ಇತರರ ಚಪ್ಪಾಳೆಯಿಂದಲ್ಲ. ಬದಲಿಗೆ, ನಮ್ಮನ್ನು ನಾವೆಷ್ಟು ಪ್ರಾಮಾಣಿಕವಾಗಿ ಅರಿತುಕೊಂಡಿದ್ದೇವೆ ಎಂಬುದರ ಮೇಲೆ ಇರುತ್ತದೆ. ಇಲ್ಲಿ ನಾವು ಅರಿಯಬೇಕಾದ ವಿಷಯ ಏನೆಂದರೆ ನಮ್ಮ ಮೌಲ್ಯಗಳನ್ನು ಇತರರು ಅಳೆಯಬೇಕಾಗಿಲ್ಲ. ನಾವು ಮಾಡಿದ ಕೆಲಸ ನಮಗೆ ತೃಪ್ತಿಯಾದರೆ ಸಾಕು. ನಮ್ಮ ಅಂತರಂಗದ ಕಣ್ಣುಗಳನ್ನು ಬಿಡಿಸಿ ನೋಡಿದಾಗ ನಮಗೆ ಸಿಗುವ ಸಂತೃಪ್ತಿಯೇ ನಾವು ನಮಗೆ ಕೊಡುವ ದೊಡ್ಡ ಪ್ರಶಂಸೆ. ನಮ್ಮನ್ನು ಗುರುತಿಸುವ ಮೊದಲ ವ್ಯಕ್ತಿ ನಾವೇ ಆಗಬೇಕು. ಇತರರಿಂದ ಮಾನ್ಯತೆಯನ್ನು ನಿರೀಕ್ಷಿಸುವ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಂಡಲ್ಲಿ, ನಾವು ನಡೆದು ಬಂದ ಹಾದಿ, ನಮ್ಮ ಪರಿಶ್ರಮ ನಮಗೇ ಅರಿವಾದಾಗ ಬದುಕು ಹಗುರವಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲಿ ಮುಖ್ಯವಾದ ಒಪ್ಪಿಗೆ ಹೊರಗಿನಿಂದ ಅಲ್ಲ. ಅದು ನಮ್ಮಿಂದಲೇ ಬರಬೇಕು. ಎಲ್ಲರಿಂದಲೂ ಮೆಚ್ಚಿಸಿಕೊಳ್ಳಬೇಕೆಂಬ ಹಂಬಲವನ್ನು ಬಿಟ್ಟು, ನಮ್ಮ ಬಗ್ಗೆ ನಾವೇ ಯೋಚಿಸಬೇಕು. ನಾವು ಏನು ಮಾಡಬೇಕು, ಹೇಗಿರಬೇಕು ಮುಂತಾದುವುಗಳನ್ನು ನಾವೇ ನಿರ್ಧರಿಸುವುದು ಉತ್ತಮ. ಅದನ್ನು ಬಿಟ್ಟು ಬೇರೆಯವರ ಮಾತಿನಂತೆ ನಡಕೊಂಡರೆ, ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂದರೆ ನಮ್ಮ ಬದುಕಿಗೆ ಬೆಲೆ ಇರುವುದಿಲ್ಲ. ನಮ್ಮ ಕೆಲಸಗಳು ನಾವು ಮೆಚ್ಚುವಂತಿರಬೇಕು. ನಮ್ಮ ಮನಸಾಕ್ಷಿಗೆ ಒಪುö್ಪವಂತಿರಬೇಕು. ನಿಜವಾದ ಸಂತೋಷ ನಮ್ಮ ಸ್ವ-ಅನುಮೋದನೆಯಲ್ಲಿಯೇ ಇದೆ.

ಯಾರಾದರೂ ನಮ್ಮನ್ನು ಕುರಿತು ಒಳ್ಳೆ ಮಾತು ಆಡಿದಾಗ ಇಡೀ ದಿನ ಪಾಸಿಟಿವ್ ಆಗಿ ಇರುತ್ತೇವೆ. ಟೀಕಿಸಿದಾಗ, ದಿನಪೂರ್ತಿ ಡಿಪ್ರೆಶನ್‌ಗೆ ಹೋಗುತ್ತೇವೆ. ಕುಗ್ಗಲು, ಹತಾಶರಾಗಲು ಅರೆ ಘಳಿಗೆ ಸಾಕು. ಇನ್ನೊಬ್ಬರ ಟೀಕೆಯು ನಮ್ಮ ಆತ್ಮಬಲವನ್ನು ಕುಗ್ಗಿಸದಿರಲಿ. ಸ್ವತ: ನಾನೇ ಇದನ್ನು ಅನುಭವಿಸಿದ್ದೇನೆ. ಅಪರೂಪಕೊಮ್ಮೆ ಹೊಗಳಿಕೆ ಸಿಕ್ಕಿದ್ದಲ್ಲಿ, ಸಹಜವಾಗಿಯೇ ಮನಸ್ಸಿಗೆ ಖುಷಿಯಾದರೂ ಅದುವೇ ನಮ್ಮ ಸಂತೋಷವನ್ನು ನಿರ್ಧರಿಸುವ ಮಾನದಂಡವಾಗಬಾರದು ಎಂಬ ಸತ್ಯವನ್ನು ಅರಿತ್ತಿದ್ದೇನೆ. ಯಾರೋ ನಮ್ಮನ್ನು ಹುರಿದುಂಬಿಸಬೇಕು, ಹೊಗಳಬೇಕು ಎಂದು ನಾವು ಯಾಕೆ ಕಾಯುವುದು? ಯಾವ ಕೆಲಸವನ್ನು ಮಾಡಿದಾಗಲೂ ಅದನ್ನು ಪ್ರೀತಿಯಿಂದ ಆನಂದಿಸುವ ಗುಣವನ್ನು ರೂಢಿಸಿಕೊಂಡಾಗಲೇ ನೆಮ್ಮದಿಯ ಬದುಕು ನಮ್ಮದಾಗುವುದು. ನಮ್ಮ ಸಂತೋಷಕ್ಕೆ ಇತರರ ಮಾನ್ಯತೆ ಬೇಕಾಗಿಲ್ಲ. ನಮ್ಮ ಸಂತೋಷದ ಕೀಲಿಕೈಯನ್ನು ನಾವೇ ಭದ್ರವಾಗಿ ಇಟ್ಟುಕೊಳ್ಳೋಣ. ಬೇರೆಯವರ ಚಪ್ಪಾಳೆ ಇಲ್ಲದೆಯೂ, ನಮ್ಮ ನಂಬಿಕೆ, ಶ್ರಮ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಸಂತೋಷವನ್ನು ಕಂಡುಕೊಳ್ಳೋಣ. ಇತರರ ಮಾನ್ಯತೆಯಿಂದ ನಮಗೆ ಸಿಗುವ ಸಂತೋಷ ಬರೀ ಕ್ಷಣಿಕ, ತಾತ್ಕಾಲಿಕ ಎನ್ನುವುದನ್ನು ನೆನಪಿಡಿ. ಇತರರ ಮಾನ್ಯತೆಯಾಚೆ ಆತ್ಮಸಂತೋಷವನ್ನು ಹುಡುಕೋಣ. ಉತ್ತಮ ಮನಸ್ಥಿತಿಯಿಂದ ಸಂತೋಷವನ್ನು ರೂಪಿಸಿಕೊಂಡು ಸಂಭ್ರಮದ ಬದುಕನ್ನು ನಮ್ಮದಾಗಿಸೋಣ ಅಲ್ಲವೇ?

-ಶೈಲಾರಾಣಿ ಬೋಳಾರ್ , ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *