Source : Wikipedia
ಪ್ರವಾಸ

ಕಮಂಡಲು ಗಣಪತಿ

Share Button

ವಕ್ರತುಂಡ ಮಹಾಕಾಯ, ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ

ಈ ಮಂತ್ರವನ್ನು ಪಠಿಸುತ್ತಿರುವಳು ಮತ್ಯಾರೂ ಅಲ್ಲ ಸಾಕ್ಷಾತ್ ದೇವಿ ಪಾರ್ವತಿ. ತನ್ನ ತಪಸ್ಸಿನಲ್ಲಿ ವಿಘ್ನ ಬಾರದಿರಲೆಂದು ತನ್ನ ಮಗ ಗಣಪನನ್ನು ನೆನೆಯುತ್ತಿರುವಳು ಮಾತೆ. ಕೈಲಾಸ ಪರ್ವತದಲ್ಲಿ ತನ್ನ ಪತಿ ಈಶ್ವರನೊಂದಿಗೆ ನೆಲೆಯಾಗಿದ್ದ ಗೌರಿಯು ಭೂಲೋಕಕ್ಕೆ ಬಂದದ್ದಾದರೂ ಏಕೆ ಅಂತೀರಾ? ‘ಸಾಡೇ ಸಾತಿ’ ಅಂದರೆ ಶನಿಯ ವಕ್ರದೃಷ್ಟಿ ಹಿಮವಂತನ ಮಗಳಾದ ಗಿರಿಜೆಯ ಮೇಲೆ ಬಿದ್ದಿತು. ಈ ದೋಷವನ್ನು ಪರಿಹರಿಸಿಕೊಳ್ಳಲು ಭೂಲೋಕಕ್ಕೆ ಬಂದು ತಪಸ್ಸಿಗೆ ಕುಳಿತಳು ಪರ್ವತನ ಪುತ್ರಿ ಪಾರ್ವತಿ. ಯಾವುದೇ ವಿಘ್ನ ಬಾರದಿರಲೆಂದು ಮೊದಲ ಪೂಜೆಯನ್ನು ವಿಘ್ನೇಶ್ವರನಿಗೆ ಸಮರ್ಪಿಸುವಳು. ಪಾರ್ವತಿಯು ಗಣಪನ ಪೂಜೆ ಮಾಡಲು ಕುಳಿತ ಪುರಾತನವಾದ ಪವಿತ್ರ ಕ್ಷೇತ್ರವೇ ಈ ಕಮಂಡಲು ಗಣಪತಿಯ ಅಲಯ. ಗಣಪತಿಗೆ ಕಮಂಡಲು ಗಣಪತಿ ಎಂಬ ಹೆಸರು ಬಂದದ್ದು ಹೇಗೆ? ಪಾರ್ವತಿಯು ಗಣಪನ ಪೂಜೆ ಮಾಡಲು ಕುಳಿತಾಗ, ಅವಳಿಗೆ ಪವಿತ್ರ ಜಲ ಬೇಕಿತ್ತು. ಆಗ ಬ್ರಹ್ಮದೇವನು ದೇವಿಯ ಪೂಜೆಗೆ ಅಡಚಣೆಯಾಗದಿರಲು ತನ್ನ ಕಮಂಡಲುವಿನಿಂದ ತೀರ್ಥವನ್ನು ಧಾರೆ ಧಾರೆಯಾಗಿ ಧರೆಗೆ ಇಳಿಸುತ್ತಾನೆ. ಗಣಪನ ಪಾದದಡಿಯಿಂದ ಕಮಂಡಲುವಿನ ಆಕಾರದಲ್ಲಿರುವ ಕಲ್ಲಿನ ಒರತೆಯಿಂದ ನೀರಿನ ಬುಗ್ಗೆ ಚಿಮ್ಮುತ್ತಿರುವುದನ್ನು ನಾವು ಇಂದಿಗೂ ನೋಡಬಹುದು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿರುವ ಕೆಸವೆ ಗ್ರಾಮದಲ್ಲಿ ‘ಕಮಂಡಲು ಗಣಪತಿ’ ದೇಗುಲವಿದೆ. ನನ್ನ ಗೆಳತಿ ವೀಣಾ ದಟ್ಟ ಅರಣ್ಯದ ಮಧ್ಯೆ ಇರುವ ಈ ಸುಂದರವಾದ ದೇಗುಲದ ಬಗ್ಗೆ ತಿಳಿಸಿದಾಗ, ನನಗೂ ಈ ದೇಗುಲವನ್ನು ನೋಡುವ ಹಂಬಲ ಉಂಟಾಯಿತು. ಪ್ರಕೃತಿಪ್ರೇಮಿಯಾದ ನನ್ನ ಪತಿರಾಯರು ಈ ದೇಗುಲವನ್ನು ನೋಡಲು ನನ್ನ ಜೊತೆಯಾದರು. ಮುಂಜಾನೆ ಏಳು ಗಂಟೆಗೆ ಶಿವಮೊಗ್ಗಾದಿಂದ ಹೊರಟವರು, ಎನ್.ಅರ್.ಪುರದಲ್ಲಿ ಉಪಹಾರ ಮುಗಿಸಿ ನಮ್ಮ ಪಯಣ ಮುಂದುವರೆಸಿದೆವು. ಗೂಗಲಣ್ಣ ಶಿವಮೊಗ್ಗಾದಿಂದ ೭೬ ಕಿ.ಮೀ ದೂರದಲ್ಲಿರುವ ಈ ದೇಗುಲಕ್ಕೆ ದಾರಿ ತೋರಲು ಸಿದ್ದನಾಗಿದ್ದ. ಕೊಪ್ಪ ತಲುಪಿದಾಗ ಹತ್ತು ಗಂಟೆಯಾಗಿತ್ತು. ಅಲ್ಲಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿತ್ತು ಕಮಂಡಲು ಗಣಪತಿಯ ಆಲಯ. ಹಸಿರಿನ ಮಧ್ಯೆ ಸಾಗುವ ಹಾದಿ, ಮೈಮನವೆಲ್ಲಾ ಉಲ್ಲಾಸದಿಂದ ಹಕ್ಕಿಯ ಹಾಗೆ ಹಾರುತ್ತಿತ್ತು. ಪ್ರಶಾಂತವಾದ ಪರಿಸರ, ದೇಗುಲದ ಮುಂದಿದ್ದ ಕೊಳದಲ್ಲಿ ದೇಗುಲದಿಂದ ಹರಿವ ನೈಸರ್ಗಿಕ ನೀರಿನ ಚಿಲುಮೆ ಧಾರೆ ಧಾರೆಯಾಗಿ ಚಿಮ್ಮುತ್ತಿತ್ತು. ಹಲವು ಭಕ್ತರು ಆ ನೀರಿನ ಧಾರೆಯಲ್ಲಿ ಮಿಂದು ಗಣಪತಿಯ ದರ್ಶನಕ್ಕೆ ತೆರಳುತ್ತಿದ್ದರು.

ಬನ್ನಿ, ಕಮಂಡಲು ಗಣಪತಿ ದೇಗುಲದ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ – ಈ ಪುಣ್ಯಕ್ಷೇತ್ರವು ಸಾವಿರ ವರ್ಷಗಳಿಗಿಂತ ಪುರಾತನವಾದುದು. ಇದು ವಸಿಷ್ಠ ಮಹರ್ಷಿಗಳ ಆಶ್ರಮವಾಗಿತ್ತು. ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ಶನಿ ದೋಷಕ್ಕೆ ಏಳುವರ್ಷಗಳ ಕಾಲ ತುತ್ತಾದ ಪಾರ್ವತಿಯು, ಶನಿಕಾಟದಿಂದ ಮುಕ್ತಳಾಗಲು, ಶಿವನ ಅಣತಿಯಂತೆ ಭೂಲೋಕಕ್ಕೆ ಆಗಮಿಸುವಳು. ನಾರದರ ಸಲಹೆಯಂತೆ ರಮಣಿಯವಾದ ನಿಸರ್ಗದ ಮಧ್ಯೆ ಇರುವ ಮೃಗವಧೆಯಲ್ಲಿ ತಪಸ್ಸು ಮಾಡಲು ನಿರ್ಧರಿಸುತ್ತಾಳೆ. ಶನಿದೋಷ ಪರಿಹಾರಕ್ಕಾಗಿ ತಪಸ್ಸನ್ನು ಆಚರಿಸುವ ಮೊದಲು, ಈ ಸ್ಥಳಕ್ಕೆ ಹತ್ತಿರದಲ್ಲಿರುವ ಕೆಸವೆ ಗ್ರಾಮದಲ್ಲಿ ಗಣಪತಿಯ ಪ್ರತಿಷ್ಠಾಪನೆ ಮಾಡುತ್ತಾಳೆ. ತಪಸ್ಸು ಕೈಗೊಳ್ಳಲು ಸಿದ್ದಳಾದ ಪಾರ್ವತೀದೇವಿಯು, ಗಣಪತಿಗೆ ಅಭಿಷೇಕ ಮಾಡಲು ಪವಿತ್ರ ಜಲಕ್ಕಾಗಿ ಬ್ರಹ್ಮನನ್ನು ಪ್ರಾರ್ಥಿಸುತ್ತಾಳೆ. ಆಗ ಬ್ರಹ್ಮನು ತನ್ನ ಕಮಂಡಲುವಿನಿಂದ ನೀರನ್ನು ಹರಿಸುತ್ತಾನೆ. ಈ ತೀರ್ಥಕ್ಕೆ ಬ್ರಾಹ್ಮೀ ತೀರ್ಥ ಎಂದು ಕರೆಯಲಾಗುತ್ತದೆ, ಇದು ಬ್ರಾಹ್ಮೀನದಿಯ ಉಗಮಸ್ಥಾನ ಎಂದೂ ಗುರುತಿಸಲಾಗಿದೆ. ಈ ಜಲಧಾರೆಯು ವರ್ಷವಿಡೀ ಹರಿಯುತ್ತಲೇ ಇದ್ದು, ದೇಗುಲದ ಮುಂಭಾಗದಲ್ಲಿ ಚಿಮ್ಮುವ ಜಲಧಾರೆಯಲ್ಲಿ ಸ್ನಾನ ಮಾಡಿ ಗಣಪತಿಗೆ ಪೂಜೆ ಸಲ್ಲಿಸಿದರೆ ಶನಿದೋಷ ನಿವಾರಣೆಯಾಗುವುದು ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ. ಈ ತೀರ್ಥವನ್ನು ಮಕ್ಕಳಿಗೆ ೨೧ ದಿನಗಳ ಕಾಲ ಕುಡಿಸುವುದರಿಂದ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಾಗುವುದು ಎಂಬ ನಂಬಿಕೆಯೂ ಇದೆ.

ಈ ಪುರಾಣಪ್ರಸಿದ್ಧ ದೇಗುಲವು ಹಲವಾರು ವಿಶೇಷತೆಗಳನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಕುಳಿತಿರುವ ಗಣಪತಿಯ ಮೂರ್ತಿಯನ್ನು ದೇಗುಲಗಳಲ್ಲಿ ಅರ್ಚಿಸುತ್ತೇವೆ, ಅಪರೂಪಕ್ಕೊಮ್ಮೆ ನಿಂತಿರುವ ಗಣಪತಿಯ ವಿಗ್ರಹಗಳೂ ಇದ್ದು ಭಕ್ತರಿಂದ ಪೂಜಿಸಲ್ಪಡುತ್ತವೆ. ಆದರೆ ಈ ದೇಗುಲದಲ್ಲಿ ಯೋಗಮುದ್ರೆಯಲ್ಲಿರುವ ಗಣಪತಿ ವಿಗ್ರಹವು ನಮ್ಮನ್ನೆಲ್ಲಾ ಹರಸುತ್ತಾ ಇರುವುದೊಂದು ವಿಶೇಷ. ಈ ದೇಗುಲದ ವಾಸ್ತುಶಿಲ್ಪವು ಕಣ್ಮನ ಸೆಳೆಯುವಂತಿದ್ದು, ಕೆಳದಿ ನಾಯಕರ ಕೊಡುಗೆಯೆಂದು ಪುರಾತನಶಾಸ್ತ್ರಜ್ಞರು ಗುರುತಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ‘ನಮ್ಮನ್ನಾಳುತ್ತಿದ್ದ ಬ್ರಿಟಿಷರು ೧೯೨೬ ರಲ್ಲಿ ಈ ದೇಗುಲದ ಜೀರ್ಣೋದ್ಧಾರಕ್ಕಾಗಿ ೧.೨೬ ರೂಗಳನ್ನು ನೀಡಿದ ದಾಖಲೆ ದೊರೆತಿದೆ.’

ಕಮಂಡಲು ಗಣಪತಿ ದೇಗುಲದ ಪಕ್ಕದಲ್ಲಿ ಯಜ್ಞ ಯಾಗಾದಿಗಳನ್ನು ಆಚರಿಸಲು ಯಜ್ಞಕುಂಡಗಳೂ ಇದ್ದು, ಭಕ್ತರು ಪಾಲ್ಗೊಳ್ಳಬಹುದಾಗಿದೆ. ಗಣಪತಿಯ ಪಾದದಡಿಯಲ್ಲಿ ಸದಾ ಚಿಮ್ಮುವ ಪವಿತ್ರವಾದ ಬ್ರಾಹ್ಮೀತೀರ್ಥಕ್ಕೆ ನಾಣ್ಯಗಳನ್ನು ಅರ್ಪಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲಾ ಸಿದ್ದಿಸುವುವು ಎಂಬುದು ಭಕ್ತರ ನಂಬಿಕೆ. ಈ ಆಚರಣೆ ಹೊರದೇಶಗಳಲ್ಲಿಯೂ ಇರುವುದನ್ನು ಕಾಣುತ್ತೇವೆ. ಬಹುಶಃ, ಜಲಾರಾಧನೆ ಎಲ್ಲಾ ಸಂಸ್ಕೃತಿಗಳಲ್ಲೂ ಕಂಡುಬರುವ ಸಂಗತಿ. ಸುಂದರವಾದ ಪ್ರಕೃತಿಯ ಮಡಿಲಲ್ಲಿ ನಮ್ಮ ಹಿರಿಯರು ದೇಗುಲಗಳನ್ನು ನಿರ್ಮಿಸಿರುವುದು ಗಮನಾರ್ಹ. ಗಣಪತಿಯ ಪೂಜೆಯೊಟ್ಟಿಗೆ ಪ್ರಕೃತಿ ಆರಾಧನೆಯೂ ಸಾಂಗವಾಗಿ ಇಲ್ಲಿ ನೆರವೇರುತ್ತಿದೆ. ದೇಗುಲದ ಬಲಬದಿಯಲ್ಲಿ ಒಂದು ಸಭಾಭವನವೂ ಇದ್ದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಅರಣ್ಯದ ಮಡಿಲಲ್ಲಿರುವ ಈ ದೇಗುಲದ ಮುಂದೆ ನಿಂತರೆ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ತಾನೇ ತಾನಾಗಿ ಮೂಡುವುದು.

ಇಲ್ಲಿನ ಪುರೋಹಿತರು ಹೇಳುವಂತೆ, ‘ಭಕ್ತರು ಹತ್ತು ಗಂಟೆಯ ಒಳಗೆ ಬ್ರಾಹ್ಮೀ ನದಿಯ ಚಿಲುಮೆಯಲ್ಲಿ ಮಿಂದು ಗಣಪತಿಯ ಪೂಜೆಯಲ್ಲಿ ಪಾಲ್ಗೊಳ್ಳಬೇಕು. ಹನ್ನೆರೆಡು ಗಂಟೆಗೆ ಮಹಾಮಂಗಳಾರತಿ ನೆರವೇರುವುದು. ನಂತರದಲ್ಲಿ ಸೂರ್ಯದೇವನು ಇಳಿಮುಖನಾಗುವುದರಿಂದು ಗಣಪತಿಯ ಪೂಜೆಯನ್ನು ಮಾಡುವುದಿಲ್ಲ. ಇಲ್ಲಿ ಭಕ್ತರ ಅಪೇಕ್ಷೆಯಂತೆ ಗಣಪತಿಗೆ ಪಂಚಾಮೃತ ಅಭಿಷೇಕ, ಜೀನುತುಪ್ಪದ ಅಭಿಷೇಕ ಮಾಡಲಾಗುವುದು. ವಿಶೇಷವಾದ ಪೂಜೆಗಳನ್ನು ಸಂಕಷ್ಟ ಚತುರ್ಥಿಯಂದು ಹಾಗೂ ಗಣೇಶ ಚತುರ್ಥಿಯಂದು ಮಾಡಲಾಗುವುದು.

ಇಂತಹ ಸುಂದರವಾದ ದೇಗುಲವನ್ನು ನೋಡಿ ಹಿಂತಿರುಗುವಾಗ ಮನದಲ್ಲಿ ಮೂಡಿದ ಭಾವಗಳು – ನಮ್ಮ ಹಿರಿಯರು ದೇಗುಲ ಕಟ್ಟಲು ಆಯ್ಕೆ ಮಾಡಿದ ಇಂತಹ ಸುಂದರವಾದ ಸ್ಥಳಗಳನ್ನು ಮೆಚ್ಚಲೇಬೇಕು. ಇಲ್ಲಿ ಸುತ್ತಲು ಹಸಿರಿದ್ದು, ಪವಿತ್ರವಾದ ಬ್ರಾಹ್ಮೀ ನದಿಯೂ ಇದ್ದು ಮನಸ್ಸಿಗೆ ಮುದ ನೀಡುತ್ತಿದೆ. ದೇಗುಲದ ಮುಂದೆ ‘ಪ್ಲಾಸ್ಟಿಕ್ ಬಳಸಬೇಡಿ, ಸ್ವಚ್ಛತೆಯನ್ನು ಕಾಪಾಡಿ’ ಎಂಬ ಫಲಕಗಳೂ ನಮ್ಮನ್ನು ಎಚ್ಚರಿಸುತ್ತಿವೆ. ಹುಷಾರ್, ನಿಯಮಗಳನ್ನು ಮುರಿದರೆ, ಇಲ್ಲಿ ರೆಂಬೆಯಿಂದ ರೆಂಬೆಗೆ ಜಿಗಿಯುವ ವಾನರಸೈನ್ಯವು ನಿಮ್ಮ ಮೇಲೆ ಕಣ್ಗಾವಲು ಇಟ್ಟಿದೆ. ಶನಿದೋಷ ಎಂಬುದು ನಮ್ಮ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳ ಸಂಕೇತವಷ್ಟೇ. ಇಂತಹ ಸ್ಥಳಕ್ಕೆ ಬಂದು, ನೈಸರ್ಗಿಕ ನೀರಿನ ಚಿಲುಮೆಯಲ್ಲಿ ಮಿಂದು, ಗಣಪತಿಗೆ ಪೂಜೆ ಸಲ್ಲಿಸಿದರೆ, ಎಂತಹ ಕಷ್ಟಗಳನ್ನಾದರೂ ಎದುರಿಸುವ ಛಲ, ಧೈರ್ಯ, ಆತ್ಮವಿಶ್ವಾಸ ಬಂದೀತು ಅಲ್ಲವೆ?

ಡಾ.ಗಾಯತ್ರಿದೇವಿ ಸಜ್ಜನ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *