ಪೌರಾಣಿಕ ಕತೆ

ಕಾವ್ಯ ಭಾಗವತ 112 : ಮೋಕ್ಷಪ್ರದ ನಾರಾಯಣ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – ೧೩
ಮೋಕ್ಷಪ್ರದ ನಾರಾಯಣ

ರುಂಡಮಾಲೆ ಸರ್ಪಾಭರಣ ಚರ್ಮಾಂಬರ ಧಾರಿ
ಶಿವನಾರಾಧಿಪ ಭಕುತರು ಶ್ರೀಮಂತಿಕೆ
ಭೋಗಭಾಗ್ಯವ ಪಡೆದು ಸುಖವಾಗಿರೆ
ಲಕ್ಷ್ಮೀಪತಿ ಶ್ರೀಮನ್ನಾರಾಯಣನ
ಭಜಿಪ ಭಕ್ತಜನರು ದಾರಿದ್ಯವ್ಯಾಧಿಯಲಿ
ತೊಳಲುತ್ತಿರುವ ಪರಿಯ ವಿಚಿತ್ರವ
ಅರಿಯಲಾರದೆ ಪರೀಕ್ಷಿತರಾಜ
ಶುಕಬ್ರಹ್ಮಶ್ರೀಗಳ ಬಳಿ
ಮನದ ಸಂಶಯವ ಅರುಹೆ

ಶುಕ ಮುನಿಗಳು
ನೋಡು ರಾಜೇಂದ್ರ, ಪಾರ್ವತೀಪತಿ ಮಹಾದೇವ
ವೈಚಾರಿಕ ತೃಜಸ ತಾಮರಸವೆಂಬ
ಮೂರು ಅಹಂಕಾರಗಳು ಕೂಡಿದ
ತಮೋಗುಣ ಸ್ಭಭಾವಿ
ಈ ಅಹಂಕಾರಗಳಿಗೆ ಬೇರೆ ಬೇರೆ
ಅಧಿದೇವತೆಗಳಿದ್ದು ಮನುಜ ಪೂಜಿಪ ದೇವತೆ
ತನ್ನ ಸ್ವಾದೀನದಲ್ಲಿರ್ಪ ಭೋಗೈಶ್ವರ್ಯವ
ಭಕ್ತರಿಗೆ ದಯಪಾಲಿಪ

ಶ್ರೀವಿಷ್ಣು ಜ್ಞಾನೈಶ್ವರ್ಯಗಳಿಂದ ತುಂಬಿದ ಸರ್ವಜ್ಞ
ಅವನನುಗ್ರಹಕೆ ಪಾತ್ರರಾದವರ
ಧನಭೋಗಾಧಿ ಸಾಮಗ್ರಿಗಳ ಅಪಹರಿಸೆ
ಭಕ್ತನ ದಾರಿದ್ರ್ಯದೆಸೆಯು ಅಧಿಕವಾಗಿ
ಸ್ವಜನರು ದೂರವಾಗಿ ಲೌಕಿಕದಲ್ಲಿ
ವಿರಕ್ತನಾಗಿ ಹರಿಭಕ್ತಜನರ ಸಹವಾಸದಿಂ
ಮನಶುದ್ಧಿಗೆ ಪ್ರಯತ್ನಿಸಿ ಸಂಸಾರದಿ ನಿವೃತ್ತಿ
ಬುದ್ದಿ ಹುಟ್ಟಿ ಶಾಶ್ವತ ಸುಖಸಾಧನ
ಮುಕ್ತಿಮಾರ್ಗದಿ ನಡೆಯೆ ಕಾಲಕ್ರಮದಿ
ಸದ್ಗತಿಯ ಪಡೆದು ಜನ್ಮ ಸಾರ್ಥಕವ ಪಡೆವನು

ರುದ್ರಾದಿ ದೇವತೆಗಳು ತಮ್ಮ ಭಕ್ತರಿಗೆ
ಶೀಘ್ರದಲಿ ಭೋಗೈಶ್ವರ್ಯಗಳ ಒದಗಿಸೆ
ಮದ ಮಾತ್ಸರ್ಯಗಳೂ ಲೋಭಗುಣವೂ ಹೆಚ್ಚಿ
ಮನುಜ ಮಾರ್ಗವನು ತಪ್ಪಿ ನಷ್ಟನಾಗುವುನು

ಶಕುನಿ ಪುತ್ರ ವೃಕ ಘೋರ ತಪಸ್ಸಲಿ
ತನ್ನ ಶಿರವ ಕತ್ತರಿಸಿ ಹೋಮಾಗ್ನಿಗೆ
ಅರ್ಪಿಸಲನುವಾಗೆ ಶಿವ ತಡೆದು ಅವನಿಗಿತ್ತ
ಯಾರ ಶಿರದ ಮೇಲೆ ಅವ ಕೈಯಿಟ್ಟರೂ
ಭಸ್ಮವಾಗಲೆಂಬ ವರವ
ಶಿವನ ಮೇಲೇ ಪರೀಕ್ಷಿಸಹೊರಟಾಗ
ಶಿವ ಆಪತ್ತಿನಿಂದ ನಿವೃತ್ತಿ ಬಯಸಿ
ವೈಕುಂಠಕೆ ಬರಲು
ವಿಷ್ಣು ವಟುವಿನ ರೂಪ ಧರಿಸಿ
ವೃಕರಾಕ್ಷಸನಿಗೆ ಶಿವ ವಂಚಕನು
ಅವನ ಮಾತ ನಂಬದಿರು ಎಂದೂ
ಬೇಕಿದಲ್ಲಿ ನೀನೇ ಪರೀಕ್ಷಿಸಿಕೋ
ನಿನ್ನ ತಲೆಯಿದೆಯೆಲ್ಲಾ ಎಂದಾಗ
ಹರಿಯ ಮೃದು ಮಾತಿಗೆ ಮರುಳಾಗಿ
ದುರುಳ ರಕ್ಕಸ ತನ್ನ ತಲೆಯ ಮೇಲೆ
ಕೈಯಿಟ್ಟುಕೊಂಡು ಭಸ್ಮನಾದ

ಸರಸ್ವತೀ ನದೀ ತೀರದಿ
ಸತ್ರಯಾಗದಿ ನಿರತ ಋಷಿಗಳ ಗೋಷ್ಠಿಯಲಿ
ತ್ರಿಮೂರ್ತಿಗಳಲಿ ಶ್ರೇಷ್ಟರಾದವರು ಯಾರೆಂದು ಚರ್ಚಿಸಿ
ಬ್ರಹ್ಮಪುತ್ರ ಭೃಗುವಿಗೆ ಪರೀಕ್ಷಿಸಿ ತಿಳಿಸಬೇಕೆಂದು ಪ್ರಾರ್ಥಿಸಿದರು

ಭೃಗುವು ಮೊದಲು ಬ್ರಹ್ಮ ಸಭೆಗೆ ಹೋಗಿ ಸುಮ್ಮನೆ ನಿಲ್ಲಲು ಬ್ರಹ್ಮನು
ತನ್ನ ವಂದಿಸದೆ, ಸ್ತೋತ್ರ ಮಾಡದೆ ನಿಂತವನ ಕಂಡು ಕೋಪ ಪ್ರದರ್ಶಿಸಲು
ಭ್ರಗುವು ನಂತರದಿ ಕೈಲಾಸದಿ ರುದ್ರ ಸಭೆಯ ಪ್ರವೇಶಿಸೆ
ಮುಂದೆ ಆಲಂಗಿಸಲು ಬಂದ ಮಹದೇವನ
ಅಂಗ ಸ್ಪರ್ಶಿಸಲು ಸಮ್ಮತಿಸದಿರೆ
ರುದ್ರ ಕ್ರೋಧದಿ ತ್ರಿಶೂಲವನ್ನೆತ್ತಿ ಅವನೆಡೆ ಧಾವಿಸೆ
ಭೃಗು ಮಹರ್ಷಿ ಅವನ ತಪ್ಪಿಸಿ ವೈಕುಂಠಕೆ ಬಂದನು
ಅಲ್ಲಿ ವಿಷ್ಣುವು ಶೇಷಶಾಯಿಯಾಗಿ ಸುಖನಿದ್ರೆಯಲ್ಲಿರೆ
ಲಕ್ಷ್ಮೀನಿವಾಸ ಸ್ಥಾನವಾದ ಅವನ ವಕ್ಷಸ್ಥಳದ ಮೇಲೆ
ತನ್ನ ಕಾಲಿನಿಂದೊದೆದನು

ವಿಷ್ಣು ಒಡನೆ ಹಾಸಿಗೆಯಿಂದೆದ್ದು ಮಹರ್ಷಿಯ ಪಾದಕೆ ವಂದಿಸಿ
ಅಘ್ಯಪಾದ್ಯಾದಿಗಳನಿತ್ತು ಪೂಜಿಸಿದನು
ಭೃಗು ಮಹರ್ಷಿ ಸತ್ರಯಾಗಶಾಲೆಗೆ ಮರಳಿ ಬಂದು
ನೆರೆದಿರ್ಪ ಮಹರ್ಷಿಗಳಿಗೆ
ತ್ರಿಮೂರ್ತಿಗಳಲಿ ಶ್ರೀವಿಷ್ಣುವೇ ಸರ್ವೋತ್ತಮನು
ಜಗಕೆ ತಾಳ್ಮೆ ವಿನಯ ಸದ್ಗುಣಗಳ
ಧರ್ಮ ವೈರಾಗ್ಯ ಜ್ಞಾನದ ತಿಳಿವು ನೀಡುತ್ತಾ
ಭಕ್ತಾಭೀಷ್ಟ ವರಪ್ರದನೂ ಸಮಚಿತ್ತನೂ ಆದ
ಶ್ರೀವಿಷ್ಣುಮೂರ್ತಿಯೇ ಪರಮಗತಿ ಎಂದರುಹಿದನು

ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
  https://surahonne.com/?p=45785

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *