ಪ್ರವಾಸ

ಅಂಡಮಾನ್ ನಲ್ಲಿ ಅಡಿಯಿಟ್ಟು….ಹೆಜ್ಜೆ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತೀರಾ ಪುಟ್ಟ ಪ್ರದೇಶ, ಹೆಚ್ಚಿನ ಪ್ರದೇಶವು ಎತ್ತರೆತ್ತರ ಮರಗಳಿಂದ ಕೂಡಿದ ಕಾಡು ತುಂಬಿತ್ತು. ಅಲ್ಲಿರುವ, ಬೆರಳೆಣಿಕೆಯಷ್ಟು ಹೋಟೇಲ್ ಗಳಲ್ಲಿ ಸಸ್ಯಾಹಾರವನ್ನು ಹುಡುಕುತ್ತಾ, ಎಂಟುಗಂಟೆ ರಾತ್ರಿಯ ಅರೆಗತ್ತಲಿನಲ್ಲಿ ಹೊರಟವರಿಗೆ, ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ದೇವರೇ ವರ ನೀಡಿದಂತೆ, Sunset Restuarant ಎಂಬ ಚಿಕ್ಕ ಹೋಟೆಲ್ ನಲ್ಲಿ, ಅರ್ಧತಾಸು ಕಾಲಾವಕಾಶದಲ್ಲಿ ನಮಗಾಗಿ ಊಟ ಸಿದ್ಧಪಡಿಸಿಕೊಡುವುದಾಗಿ ಭರವಸೆ ಸಿಕ್ಕಾಗ, ಸ್ವರ್ಗಕ್ಕೆ ಮೂರೇ ಗೇಣು! ಅಲ್ಲಿ ಅನ್ನ, ತೋವೆ, ಪಲ್ಯ, ಮೊಸರಿನ ಮೃಷ್ಟಾನ್ನವನ್ನು ಸವಿದು, ರಾತ್ರಿ ನಡಿಗೆಯನ್ನು ಮುಗಿಸಿ ವಸತಿಗೃಹ ಸೇರಿದೆವು.

ಹವಳದ ದಿಬ್ಬದತ್ತ….

ಮರುದಿನ 17.2.2023ನೇ ಶುಕ್ರವಾರ…ಬೆಳಗ್ಗೆ 9:30ಕ್ಕೆ ಅಲ್ಲಿಂದ ಹೊರಡಬೇಕಿತ್ತು. ಸಾಮಾನುಗಳನ್ನು ಒಗ್ಗೂಡಿಸಿ ಹೊರಡುವುದರೊಳಗೆ ಜಿಟಿಜಿಟಿ ಮಳೆ ಪ್ರಾರಂಭವಾಗಬೇಕೇ?! ನಮ್ಮ ವಾಹನ ಬರಲು ಇನ್ನೂ ತಡವಿತ್ತು. ಶುಚಿಯಾಗಿರುವ ಪುಟ್ಟ ತಂಗುದಾಣವು, ಗಡಿಬಿಡಿಯಲ್ಲಿ ಹೊರಡುತ್ತಿರುವ ಪ್ರವಾಸಿಗರ ಗದ್ದಲದಿಂದ ತುಂಬಿತ್ತು. ಇಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ಹವಳದ ದಿಬ್ಬ, ನೈಸರ್ಗಿಕ ಹವಳದ ಕಮಾನುಗಳು ನೋಡಲೇ ಬೇಕಾದ ಸ್ಥಳಗಳೆಂದು ಸ್ಥಳೀಯರು ಹೇಳಿದರೂ, ಮಳೆಯಲ್ಲಿ ಅಲ್ಲಿಗೆ ಹೋಗುವುದು ಅಸಾಧ್ಯವೆಂದು ತಿಳಿದು ಬಹಳ ನಿರಾಸೆಯಾಯಿತು. ಅರ್ಧತಾಸಿನಲ್ಲಿ ಬಂದ ನಮ್ಮ ವಾಹನ ಚಾಲಕನಲ್ಲಿ, ಅರೆಬರೆ ಧೈರ್ಯದಿಂದಲೇ ಹವಳದ ದಿಬ್ಬದ ತಾಣಕ್ಕೆ ಹೋಗೋಣವೆಂದೆವು. ಸುಂದರ ಬಯಲು, ಗದ್ದೆ, ಕಾಡಿನ ನಡುವೆ ಸಾಗಿದ ನಮ್ಮ ಪಯಣ ಖುಷಿಕೊಟ್ಟಿತು. ಮಳೆಯ ರಭಸ ಜೋರಾಗತೊಡಗಿತು. ರಸ್ತೆಯ ಕೊನೆಯಲ್ಲಿದ್ದ ಸಣ್ಣಹೋಟೆಲಿನವರು ನಮಗೆ ಆಶ್ರಯ ನೀಡಿದರು. ಅಲ್ಲಿಂದ ಅನತಿ ದೂರದಲ್ಲಿರುವ ಹವಳ ದಿಬ್ಬದತ್ತ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ಮಳೆ ನಿಲ್ಲುವುದನ್ನೇ ಸ್ವಲ್ಪ ಹೊತ್ತು ಕಾಯುತ್ತಾ ಕುಳಿತಾಗ, ನಮಗೆ ಆಶ್ರಯ ಕೊಟ್ಟಿದ್ದ ಹೋಟೇಲ್ ಮಾಲೀಕರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಅವರ ಪೂರ್ವಾಪರವನ್ನು ಕೇಳಿದಾಗ ನಿಜಕ್ಕೂ ಅನುಕಂಪ ಉಕ್ಕಿಬಂದು ಮನಸ್ಸು ಮೌನವಾಯಿತು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಆನಂದದ ಕ್ಷಣದ ಜೊತೆಗೆಯೇ, ಪಾಕಿಸ್ಥಾನ ವಿಭಜನೆಯ ಮನಕಲಕುವ ದಿನ! ಪಾಕಿಸ್ಥಾನದಲ್ಲಿ ಹುಟ್ಟಿ ಬೆಳೆದ ಹಿಂದುಗಳು; ಇಲ್ಲಿದ್ದ ಸುಮಿತ್ರಾ ಮತ್ತು ಸುಬರ್ಣ ಅವರ ಹಿರಿಯರು. ಪಾಕಿಸ್ಥಾನ ವಿಭಜನೆಯ ಸಮಯದಲ್ಲಿ ಉತ್ತರ ಪ್ರದೇಶದ ರುದ್ರಪರದಲ್ಲಿದ್ದ ನಿರಾಶ್ರಿತರ ಶಿಬಿರದಲ್ಲಿ ಆರು ವರ್ಷಗಳನ್ನು ಕಳೆದರು. ಬಳಿಕ ಅವರನ್ನು ಅಂಡಮಾನಿಗೆ ಕರೆತರಲಾಯಿತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ನಡೆದ ಮಾತುಕತೆಯಿಂದ ಇವರಿಗೆ ಪುನರ್ವಸತಿ ಸವಲತ್ತನ್ನು ನೀಡಲಾಯಿತು. ಸಜ್ಜನರಾದ ಇವರು, ಆ ನಂತರದ ದಿನಗಳಲ್ಲಿ ಅಂಡಮಾನಿನಲ್ಲಿ ಇದೇ ಪುಟ್ಟ ಹೋಟೇಲನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಶುಭ ಹಾರೈಸಿ ಮುಂದಕ್ಕೆ ಹೊರಡಲು ತಯಾರಾದೆವು.

ಮಳೆಯ ರಭಸ ಕಡಿಮೆಯಾಗಿ ಸಣ್ಣ ಹನಿ ರೂಪನ್ನು ಪಡೆಯಿತು. ಹವಳದ ದಿಬ್ಬದತ್ತ ನಡೆಯಲು ನಮ್ಮಲ್ಲಿ ಒಂದು ಛತ್ರಿಯೂ ಇರಲಿಲ್ಲ. ಮಳೆ ಸುರಿಯುತ್ತಿರುವಾಗ ಬಂಡೆಕಲ್ಲುಗಳು ವಿಪರೀತ ಜಾರುವುದರಿಂದ ಆ ಸ್ಥಳವು ಬಹಳ ಅಪಾಯಕಾರಿ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು. ಆದರೆ ನಮ್ಮ ಉತ್ಸಾಹ, ಅವರ ಮಾತನ್ನು ಕಡೆಗಣಿಸಿ ಹೋಗಲು ಪ್ರೇರೇಪಿಸಿತು, ಅಂತೆಯೇ, ಮಗಳು ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಿಂದ ಎರಡು ಕೊಡೆಗಳನ್ನು ಖರೀದಿಸಿ ತಂದಳು. ಕಾಲು ನೋವಿನ ಕಾರಣದಿಂದ ನನ್ನ ಪತಿರಾಯರು ಹಿಂದುಳಿದರು. ನಾವು ಮೂರು ಮಂದಿ ದಿಬ್ಬದತ್ತ ಹೊರಟೇಬಿಟ್ಟೆವು… ಗಂಟೆ ಹತ್ತೂವರೆ….

ಸೊಗಸಾದ ಕಾಲುದಾರಿ ಪಕ್ಕದಲ್ಲಿ ಮಾವು, ಅನನಾಸು ಇತ್ಯಾದಿಗಳನ್ನು ಮಾರಾಟ ಮಾಡುವ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕುಳಿತಿದ್ದ ಹೆಂಗೆಳೆಯರು ಗಿರಾಕಿಗಳನ್ನು ತಮ್ಮತ್ತ ಸೆಳೆದು ವ್ಯಾಪಾರ ಕುದುರಿಸಲು ಹರಸಾಹಸ ಪಡುತ್ತಿದ್ದರು. ನಾವು ಹಿಂತಿರುಗುವ ಹಾದಿಯಲ್ಲಿ ಖರೀದಿಸುವುದಾಗಿ ಭರವಸೆಯನ್ನಿತ್ತು, ಹವಳದ ದಿಬ್ಬದಲ್ಲಿ ಅದರ ಇರುವಿಕೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಹೋಗುವುದು ವ್ಯರ್ಥವೆಂದು ಬಗೆದು, ಅವರ ಸಹಾಯದಿಂದಲೇ ಗೈಡ್ ಒಬ್ಬನನ್ನು ಆರಿಸಿ ನಮ್ಮೊಡನೆ ಕರೆದೊಯ್ದೆವು…ಅವನೇ ರೋಹಿತ್.

ಮುಂದಕ್ಕೆ, ಸಮುದ್ರ ತೀರದತ್ತ ತಲಪಲು ಕಾಲುದಾರಿ ಮುಗಿದು ಇಳಿಜಾರು ದಾರಿ ಪ್ರಾರಂಭವಾಯಿತು. ಇಲ್ಲಿ ಇಳಿಯಲು ಸರಿಯಾಗಿ ಮೆಟ್ಟಲುಗಳು ಇಲ್ಲದೆ, ನೀರಿನಿಂದ ತೊಯ್ದ ಬರೀ ಜಾರುಬಂಡೆ, ಕೆಸರು ಮಣ್ಣು… ಇಕ್ಕೆಲಗಳಲ್ಲಿ ಆಳೆತ್ತರ ಬೆಳೆದ ಪೊದೆ ಸಸ್ಯಗಳು. ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿತ್ತು. ಇಲ್ಲಿಯೂ ಪ್ರವಾಸಿ ತಾಣಗಳ ಉತ್ತಮ ನಿರ್ವಹಣೆಯ ಕೊರತೆ ಎದ್ದು ತೋರುತ್ತದೆ. ನಡೆಯುತ್ತಾ, ಇಪ್ಪತ್ತು ಅಡಿಗಳಷ್ಟು ದೂರ ಮಾತ್ರ… ತೀರ ತಲಪಿಯಾಯ್ತು ಎಂದುಕೊಂಡರೆ, ಇಲ್ಲಿ ಇನ್ನೂ ಅಧ್ವಾನ! ಮರಳಿನ ಬದಲು ವಿಚಿತ್ರ ರೀತಿಯ ಸಮತಟ್ಟಾದ ಕಪ್ಪು ಬಂಡೆಯಂತಿದ್ದರೂ ಅದು ಪೂರ್ತಿ ಒರಟಾದ ಚೂಪಾದ ಮೊಳೆಗಳಿಂದ ಕೂಡಿದ ತಳದಂತಿತ್ತು… ಭೀಷ್ಮನ ಶರಶಯ್ಯೆಯಂತೆ! ಮುಳ್ಳಿನ ರಚನೆಗಳ ಮಧ್ಯದಲ್ಲಿ ಅತ್ಯಂತ ನುಣುಪಾದ ಕಲ್ಲಿನ ರಚನೆಯು ಹೆಜ್ಜೆ ಇಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ಉಂಟುಮಾಡಿತ್ತು! ಶೂ ಹಾಕಿದ್ದ ಮಕ್ಕಳಿಬ್ಬರೂ ನಡೆದು ಮುಂದೆ ಹೋದರೆ, ಚಪ್ಪಲಿ ಧಾರಿಣಿಯಾದ ನನಗಂತೂ ಒಂದು ಹೆಜ್ಜೆ ಇಡುವಾಗಲೇ ಭರತನಾಟ್ಯ ಮಾಡುವಂತಾಯ್ತು!

ರೋಹಿತ್ ನನ್ನ ಪರಿಸ್ಥಿತಿ ನೋಡಿ ಹಿಂತಿರುಗುವ ಸಲಹೆ ನೀಡುತ್ತಾ, ಮೊದಲು ಬಂದಿದ್ದ ಪ್ರವಾಸಿಗರು  ನಡೆಯುವ ಸಾಹಸ ಮಾಡಿ ಕಾಲು, ಸೊಂಟ ಮುರಿದುಕೊಂಡು ಹಿಂತಿರುಗಿದ ಕಥೆಯನ್ನೂ ಹೇಳಿದ.  ಭಯವಾದರೂ, ನಾನು ಮುಂದಕ್ಕೆ ಹೋಗಲೇ ಬೇಕೆಂದು ನಿಶ್ಚೈಸಿಯಾಗಿತ್ತು. ಆದ್ದರಿಂದ, ರೋಹಿತ್ ಬೇರೆ ದಾರಿ ಇಲ್ಲದೆ ಅವನ ವಿಶೇಷ ತರಹದ ಶೂವನ್ನು ನನಗೆ ಹಾಕಲು ಸೂಚಿಸಿದ. ಆದರೆ ಅದು ದೊಡ್ಡ ಅಳೆಯತೆಯದಾಗಿದ್ದು ಆ ಯೋಚನೆ ಬಿಡಬೇಕಾಯಿತು.   ಚಪ್ಪಲಿ ತೆಗೆದು ಬರಿಗಾಲಲ್ಲಿ ನಡೆಯಲು ಸಲಹೆ ನೀಡಿದ. ಅಂತೆಯೇ, ಚೂಪಾದ ಮುಳ್ಳಿನಂತಹ ರಚನೆ ಮೇಲೆ ಸುಮಾರು  ಐವತ್ತು ಮೀಟರ್ ದೂರ ನಡೆಯಲು ಸಜ್ಜಾಗಿ ಮೊದಲ ಹೆಜ್ಜೆ ಇರಿಸುವಷ್ಟರಲ್ಲೇ, ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲವೆಂಬುದು ಖಾತ್ರಿಯಾಯಿತು. ಮುಂದಿನ ಗುರಿ ತಲಪಲು ನಾನೇ ಬೇರೆ ಯೋಜನೆಯನ್ನು ರೂಪಿಸಿದೆ. ಪಾದವನ್ನು ನೇರವಾಗಿರಿಸದೆ, ಅಡ್ಡಲಾಗಿರಿಸಿ ಪ್ರಯತ್ನಿಸಿದಾಗ ಪರವಾಗಿಲ್ಲ ಅನಿಸಿತು. ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ…. ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲಿ ಮುಂದಿನ ಸಮತಟ್ಟಾದ ಬಂಡೆಯ ಬಳಿ ತಲಪಿದಾಗ ಏನೋ ಸಾಧಿಸಿದ ಖುಷಿ! ಆದರೆ, ಹಿಂತಿರುಗಿ ನೋಡಿದಾಗ, ಪುನ: ಇದೇ ಹಾದಿಯಲ್ಲಿ ಹೋಗಬೇಕಾದ ಅನಿವಾರ್ಯತೆ ನೆನೆದು ಭಯದಿಂದ ಎದೆ ಡವಡವ..!!

(ಮುಂದುವರಿಯುವುದು…)
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ:  https://surahonne.com/?p=45777

-ಶಂಕರಿ ಶರ್ಮ, ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *