ಮಧ್ಯಮ ವರ್ಗದ- ಕನಸು ವಾಸ್ತವಗಳ ನೈಜ ಚಿತ್ರಣ
ಪುಟ್ಟ ಊರು- ಕೇರಿಗಳ ಜನ ದೊಡ್ಡ ಕನಸುಗಳೊಂದಿಗೆ ಕನಸು- ವಾಸ್ತವಗಳ ನಡುವೆ ಸಂತೆ ಕಟ್ಟಿಕೊಂಡು ಜೀವಿಸುವಾಗಿನ ಹಲವು ಮಜಲುಗಳನ್ನು ಬಿಂಬಿಸುತ್ತ, ಎಲ್ಲ ಜನಪ್ರಿಯ ಮತ್ತು ಪ್ರಸಿದ್ಧ ಕಾದಂಬರಿಗಳ ಸಾಲಿನಲ್ಲಿ ಸಾಗಿದಂತೆ, ಮೊದಮೊದಲಿಗೆ ಕಾಣುವ ‘ನೀಲಿನಕ್ಷೆ’ ಕಾದಂಬರಿಯೂ ಆಗೀಗ ಅನಿರೀಕ್ಷಿತ ಘಟನೆಗಳನ್ನು ಕಾಣಿಸುವ ಮೂಲಕವೇ ಓದುಗರ ಆಸಕ್ತಿಯನ್ನು ಓದಿನ ವೇಗವನ್ನೂ ಕೊನೆವರೆಗೂ ಹಿಡಿದಿಟ್ಟುಕೊಳ್ಳುವ ಜಾಣ್ಮೆಯನ್ನು ಕಾಣಿಸಿದೆ. ಸುಂದರ ಸುಲಲಿತ ಭಾಷಾ ಸಂಪತ್ತು, ವಿವರಗಳಲ್ಲಿನ ಧಾರಾಳ ಕಾವ್ಯಮಯ ಶೈಲಿ, ಸಿ.ಎನ್. ಮುಕ್ತಾ, ಸಾಯಿಸುತೆ, ತ್ರಿವೇಣಿಯವರ ಕಾದಂಬರಿ ಲೋಕದ ಓದಿನ ನೆನಪುಗಳನ್ನ ಮತ್ತೆ ಮತ್ತೆ ಮೂಡಿಸುವ ಸರಿಸುಮಾರು ದಶಕಗಳ ಹಿಂದಿನ ಕನ್ನಡ ಕಾವ್ಯ ಮತ್ತು ನಿಧಾನಕ್ಕೆ ತೆರಕೊಳ್ಳುವ ಮುಂಬೈ ಪ್ರಪಂಚವು ಓದುವ ಖುಷಿಯ ಜೊತೆಗೆ ಪುಟ್ಟ ಊರಿನ ಸುಕುಮಾರಿಯೊಂದು ತನ್ನ ಅನನ್ಯ ಸೌಂದರ್ಯದಿಂದಾಗಿಯೇ ಎಂಥೆಂತ ಕ್ರೌರ್ಯ, ಕೊರಕಲಿನ ಹಾದಿ, ಕಡುಕಷ್ಟದ ಏಕಾಂತದ ದಿನಗಳನ್ನು ಕಾಣುವ ಪರಿಸ್ಥಿತಿಯನ್ನು ಅತ್ಯಂತ ಸಹಜವಾಗಿಯೇ ನಿರೂಪಿಸಿ ಜಾಳಾಗದಂತೇ ಪೂರ್ವಾಗ್ರಹ ರಹಿತವಾಗಿ ನಿರ್ವಹಿಸಿ ಕಾದಂಬರಿಯ ನೇಯ್ಗೆಯಲ್ಲಿ ಗೆದ್ದಿದ್ದಾರೆ. ಪ್ರಾಥಮಿಕ ಶಾಲೆಯ ಕಾಲದಿಂದಲೂ ನನಗೆ ಕಾದಂಬರಿಗಳ ಓದು ಅಚ್ಚುಮೆಚ್ಚು. ಹಾಗಾಗಿ ಲೇಖಕ ಕಥೆಯೊಳಗೆ ನುಗ್ಗಿ ಪಾತ್ರಗಳನ್ನ ನಿರ್ದೇಶಿಸಿದರೆ ನನಗೆ ಇಷ್ಟವಾಗದು ಎಂದೆ ಖಡಾಖಂಡಿತ ಹೇಳಬಲ್ಲೆ. ‘ನೀಲಿನಕ್ಷೆ’ ಈ ಹಿನ್ನೆಲೆಯಲ್ಲೇ ನನಗಿಷ್ಟವಾಯಿತು.
ಹಳ್ಳಿಯಲ್ಲಿ ಜಾತಿ, ಸಂಪ್ರದಾಯಗಳ ಹೊದಿಕೆಯಲ್ಲಿರುವ ವರ್ಗ ಸಂಘರ್ಷಕ್ಕೆ ಬಾಲ್ಯದ ಮುಗ್ಧ ಮನಸೂ ಒಂದು ಪರದೆ. ಆದರೆ, ನೀಲಿನಕ್ಷೆಯ ಸರಯೂ ತನ್ನ ಹದಿನಾರರ ಹೊಸ್ತಿಲಲ್ಲಿ ಕಾಣುವ ಮುಂಬೈ ಪ್ರಪಂಚ ವರ್ಗ ಸಂಘರ್ಷಗಳನ್ನ, ಭೇದಗಳ ಕಟು ವಾಸ್ತವವನ್ನ ತರ್ಕಬದ್ಧವಾಗಿ ಓದುಗರಿಗೂ ಕಾಣಿಸುತ್ತದೆ. ಕಾಲಕಾಲಕ್ಕೂ ಎದುರಾಗುವ, ಸಂಪ್ರದಾಯಿಕತೆಯ ಸೆರಗಿನಡಿಯ ಕೌಟುಂಬಿಕ-ಕ್ರೌರ್ಯದ ವಿವಿಧ ಮಜಲುಗಳನ್ನ ಆಧುನಿಕ ಸ್ತ್ರೀ ಸಂವೇದನೆ, ಸ್ವಾತಂತ್ರ್ಯಗಳ ಪಾತಳಿಯಲ್ಲಿಟ್ಟು ಸರಯೂಳ ವಿವಿಧ ದೈನಿಕಗಳ ಚಿತ್ರಣಗಳೊಂದಿಗೇ ಬೆಳವಣಿಗೆಯ ದಾಖಲೆ, ಕಡತಗಳ ಮಾದರಿಯಲ್ಲೇ ನವಿರಾಗಿ ಆದರೆ, ನಿಖರವಾಗಿ ನಿರೂಪಿಸಿದ್ದಾರೆ.
ಕೌಟುಂಬಿಕ ಸಂಘರ್ಷಗಳಲ್ಲಿ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳಲು ಮೌನ ಹೋರಾಟವನ್ನೇ ಜೀವನ ಶೈಲಿಯಾಗಿಸಿಕೊಳ್ಳುವ ಸರಯೂ, ತನ್ನ ಮಹತ್ವಾಕಾಂಕ್ಷಿಯನ್ನ ಹಂತ ಹಂತವಾಗಿ ಸಾಧಿಸುತ್ತಾಳೆ. ಮೇಲ್ನೋಟದ ಕಣ್ಣು ಕುಕ್ಕುವ ಸೆಲೆಬ್ರಿಟಿ ಜೀವಿಗಳ ಹಿಂದಿರಬಹುದಾದ ಒತ್ತಡಗಳನ್ನ ಸರಯೂ ಪ್ರಪಂಚದ ಚಿತ್ರಣಗಳ ಮೂಲಕ ನಮಗೆ, ಲೇಖಕಿ ಅಮಿತಾ ಭಾಗ್ವತ್ ರವರು ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿ ಓದು ನಿಧಾನಕ್ಕೆ ವಿವಿಧ ವಿಶಿಷ್ಟ ಆಯಾಮಗಳನ್ನ ಓದುಗನಲ್ಲಿ ನಿರ್ಮಿಸುತ್ತದೆ. ಉದಾಹರಣೆಗೆ.
ಸರಯೂ ಬದುಕಿನ ದಿಕ್ಕನ್ನೇ ಬದಲಿಸಿ, ಕಂಗಾಲಾಗಿಸುವ, ಅವಳು ಪ್ರೀತಿಸಿದ್ದ ವಿಶಾಲ್ ತಾಯಿಯನ್ನ ಅವಳ ಸ್ವಾರ್ಥದ ಗುಣವನ್ನ ಪೋಷಿಸಿದ್ದ ಕೌಟುಂಬಿಕ ಹಿನ್ನೆಲೆಯನ್ನ ಅತ್ಯಂತ ನಾಜೂಕಾಗಿ ಪೂರ್ವಗ್ರಹ ರಹಿತವಾಗಿ ಒಂದು ಪಾತ್ರ ಪರಿಚಯದ ಸಂದರ್ಭದಲ್ಲಿ ಸಹಜವಾಗಿ ಕಟ್ಟಿಕೊಡುವ ಲೇಖಕಿಯ ಪ್ರಾಜ್ಞ ನಿರ್ವಹಣೆ ಇಷ್ಟವಾಯಿತು. ಇದು ಹೇಗೆ… ಎಂದು ಗೆರೆ ಕೊರೆದಂತೆ ಯಾರ ನಿರ್ಧಾರಗಳನ್ನು, ಅಥವಾ ಯಾವ ಜೀವನ ಶೈಲಿಯನ್ನೂ ಒಂದು ನೀತಿ ಸಂಹಿತೆಯಲ್ಲಿ ಕಟ್ಟಕೂಡದು ಎಂಬ ಎಚ್ಚರವನ್ನ ಕಾದು ಓದುಗರಿಗೆ ನೀಡಿದ ‘ನೀಲಿನಕ್ಷೆ’ ಓದುವಾಗ ನಮ್ಮನ್ನ ಇನ್ನಷ್ಟು ಮಾನವೀಯಗೊಳಿಸುತ್ತ, ಇನ್ನಷ್ಟು ಬುದ್ಧಿವಂತರನ್ನೂ ತರ್ಕಬದ್ಧರನ್ನೂ ಆಗಿಸುತ್ತದೆ.
ಕಾಲಕಾಲಕ್ಕೂ ಹೆಣ್ಣು ಕುಲವನ್ನ ಕಾಡುತ್ತಾ ಬಂದಿರುವ ಪಾವಿತ್ರ್ಯದ ಪರಿಕಲ್ಪನೆಯ ಸಮಾನತೆಯ ಆದ್ಯತೆಗಳನ್ನ ತಮ್ಮದೇ ರೀತಿಯಲ್ಲಿ ವಾಸ್ತವದ ನೆಲೆಗಟ್ಟಿನಲ್ಲಿ ಇಲ್ಲಿನ ಸ್ತ್ರೀ ಪಾತ್ರಗಳು ಶೋಧಿಸಿದರೆ, ಪುರುಷ ಪಾತ್ರಗಳು ಸರಿ ತಪ್ಪುಗಳ ಸನ್ನಿವೇಶಗಳ ಆಚೆಯೂ ಮಧ್ಯಮವರ್ಗ-ಮೇಲ್ವರ್ಗಗಳ ಮಿತಿಗಳನ್ನ ಮೀರಿ ಸಹಜವಾಗಿ ಜೀವಂತವಾಗಿ ನಿರೂಪಣೆಗೊಂಡಿದ್ದಾರೆ.
ಇವೆಲ್ಲ ಆಯಾಮಗಳನ್ನ ಆಧರಿಸಿ ನೋಡಿದರೆ ಸಾಹಿತ್ಯಪ್ರಿಯರ ಸಂಗ್ರಹಕ್ಕೆ ಸಲ್ಲುವ ಎಲ್ಲ ಗುಣಗಳನ್ನು ನಿಸ್ಸಂಶಯವಾಗಿ ಹೊಂದಿದೆ. ಹಾಗಾಗಿ ಈ ಮಳೆಗಾಲದ ಓದಿಗೆ ನಿಮ್ಮ ಕೈಗೆ `ನೀಲಿನಕ್ಷೆ’ ಬರಲೆಂದು ಆಶಿಸುವೆ.

ಡಾ|| ರಶ್ಮಿ ಕಬ್ಬಗಾರು


