ಲಹರಿ

ಒಡವೆ-ಬೇಡ ನಿನ್ನ ಗೊಡವೆ

Share Button

ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಮನಸನರಿತು ನಡೆಯುವ ಸತಿ ಪತಿಯರಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ—ತ್ರಿಪದಿ ಬ್ರಹ್ಮ ಸರ್ವಜ್ಞನ ವಚನ ಯಾಕೋ ಇತ್ತೀಚೆಗೆ ನನ್ನನ್ನು ಪ್ರತಿದಿನ ಗುಯ್ಗೂಡುವ ಹಾಗೆ ಮಾಡಿದೆ.

ನಾನು ಚಿಕ್ಕವಳಿದ್ದಾಗಿನಿಂದಲೂ ಈ ಸರ್ವಜ್ಞನ ವಚನ ಕೇಳುತ್ತಿದ್ದೆ.. ಆದರೆ ಆಗ ಅದರ ಆಳ ನನಗೆ ಅರ್ಥವಾಗಿರಲಿಲ್ಲ. ಆದರೆ ಈಗ ನನ್ನ ವಯಸ್ಸಿನ ಪಕ್ವತೆಯಿಂದಲೋ ಏನೋ ನನ್ನಲ್ಲಿ ಹೊಸ ಆಧ್ಯಾತ್ಮಿಕ ಪರಿವರ್ತನೆ ಎಂಬಂತೆ ಇದರ ಒಳಾರ್ಥ ಅರಿವಿಗೆ ಬಂದಂತಿದೆ. ಹಾಗಾಗಿ ಕೆಲವು ವಿಚಾರಗಳು ನನಗೆ ಹೊಸ ಅರ್ಥವನ್ನು ಸೃಷ್ಟಿಸಿದೆ.

ನಾನು ಏನು ಹೇಳಲು ಹೊರಟಿದ್ದೇನೆ ಅಂದರೆ…ಯಾಕೋ ಇತ್ತೀಚೆಗೆ ನನ್ನ ಅಲ್ಪ ಸ್ವಲ್ಪ ಒಡವೇನೂ ಮೈ ಮೇಲೆ ಇದ್ದರೆ ಭಾರ ಅನ್ಸೋಕ್ ಶುರುವಾಗಿದೆ . ಕೊರಳಲ್ಲೋ, ಕೈಯಲ್ಲೋ , ಒಟ್ಟಿನಲ್ಲಿ ಮೈಮೇಲೆ ಚಿನ್ನದ ಮೆರುಗಿಗಿಂತಲೂ ಅಲ್ಮಿರಾದಲ್ಲಿ ಬೆಚ್ಚಗೆ, ಭದ್ರತೆಯ ಕವಚದಲ್ಲಿ ಇದ್ದರೆ ಚೆನ್ನ ಅನಿಸಿಬಿಟ್ಟಿದೆ.. ಚಿನ್ನದ ಮೇಲಿನ ಮೋಹಕ್ಕಿಂತ, ಚಿನ್ನದಿಂದ ಚಿಂತೆ ಜಾಸ್ತಿ ಅನ್ನಿಸ್ಲಿಕ್ಕೆ ಶುರುವಾಗಿದೆ. ಅಲಂಕಾರಿಕ ಆಭರಣಕ್ಕಿಂತ, ಆರಾಮನೆ ಹೆಚ್ಚು ಪ್ರಿಯವಾಗಿದೆ. ನನ್ನ ತಾರುಣ್ಯದಲ್ಲಿ ನನಗೆ ಆಭರಣಗಳ ಬಗ್ಗೆ ಇದ್ದ ಭಾವನೆಗಳು, ಹುಚ್ಚುತನಗಳು, ಉನ್ಮಾದಗಳು ಎಲ್ಲವೂ ಈಗ ಪ್ರತಿದಿಕ್ಕುಗಳಾಗಿ ಬದಲಾಗಿರುವ ಬಗ್ಗೆ ಹೇಳುವ ಪ್ರಯತ್ನ. ಒಟ್ಟಿನಲ್ಲಿ ಚಿನ್ನದ ಆಭರಣಗಳ ಮೇಲಿನ ಆಕರ್ಷಣೆ ಕಮ್ಮಿಯಾಗಿಬಿಟ್ಟಿದೆ ಕಣ್ರಿ.

ಚಿನ್ನದ ಒಡವೆ ಅನ್ನೋದು ಬರೀ ವಾಣಿಜ್ಯ ಸರಕಷ್ಟೇ ಅಲ್ಲ. ವಿಶೇಷವಾಗಿ ಭಾರತೀಯ ಹೆಣ್ಣಿಗೆ, ಚಿನ್ನದ ಜೊತೆ ಒಂದು ಭಾವನಾತ್ಮಕ ನಂಟೇ ಇರುತ್ತದೆ. ಚಿನ್ನ ಅಂದರೇ ಅಂತರಂಗದ ಮಿಡಿತ. ಮದುವೆಯ ಸಂದರ್ಭದಲ್ಲಿ ತಾಯಿಯವರು ಹಾಕಿದ ಮೊದಲ ಸರ… ಅಜ್ಜಿ ಕೊಟ್ಟ ಬಳೆ…ನನ್ನ ಮೊದಲ ಸಂಬಳದಿಂದ ಮಾಡಿಸಿದ ಉಂಗುರ.. ಮದುವೆಗೆ ಗಂಡನ ಮನೆಯಿಂದ ಬಂದ ಒಡವೆ… ಮಕ್ಕಳು ಹುಟ್ಟಿದಾಗ ಮಾಡಿಸಿದ ಸರ… ಹೀಗೆ, ಪ್ರತಿಯೊಂದು ಒಡವೆಯ ಹಿಂದೆಯೂ ಒಂದೊಂದು ನೆನಪು ಇರುತ್ತದೆ. ಒಂದೊಂದು ಸಂಬಂಧ ಇರುತ್ತದೆ. ಒಂದೊಂದು ಭಾವನೆ ಇರುತ್ತದೆ. ಹಾಗಾಗಿ ಹೆಣ್ಣುಮಕ್ಕಳಿಗೆ ಚಿನ್ನದ ಮೇಲೆ ಪ್ರೀತಿ ಇರೋದು ತಪ್ಪೇನಿಲ್ಲ. ಯೌವನದಲ್ಲಿ ಹೊಸ ಸೀರೆ ಕಂಡರೆ ಕಣ್ಣು ಅದರ ಮೇಲಿರುತ್ತದೆ. ಹೊಸ ಡಿಸೈನ್‌ನ ಒಡವೆ ಕಂಡರೆ ಮನಸ್ಸು ಅದರ ಹಿಂದೆ ಹೋಗುತ್ತದೆ. ಅಮ್ಮಂದಿರು ತಮ್ಮ ಹೆಣ್ಣು ಮಕ್ಕಳಿಗೆ ಯಾವಾಗಲೂ ಹೇಳ್ತಿದ್ದಿದ್ದೂ ಅದೇ ಅಲ್ವಾ. ದುಂದು ವೆಚ್ಚ ಮಾಡಬೇಡ. ಚಿನ್ನ ತೊಗೊಂಡು ಇಟ್ಕೊ, ಕಷ್ಟಕ್ಕೆ ಆಗುತ್ತೆ ಎಂದು.

ನಾನೂ ಎಲ್ಲಾ ಹೆಣ್ಣು ಮಕ್ಕಳಂತೆ ಇದ್ದ ಬದ್ದ ದುಡ್ಡನ್ನು ಕೂಡಿಹಾಕಿ ಅಲ್ಪ ಸ್ವಲ್ಪ ಒಡವೆನೂ ಮಾಡಿಸಿಕೊಂಡೆ. ಆವಾಗ ನನ್ನ ಮನಸ್ಸಿನಲ್ಲಿ ಚಿನ್ನದ ಬಗ್ಗೆ ಬೇರೆಯೇ ಭಾವವಿತ್ತು. “ಇದು ನನ್ನ ಬಳಿ ಇರಬೇಕು…”“ಇದಕ್ಕಿಂತ ಸ್ವಲ್ಪ ವಿಭಿನ್ನವಾದ ಡಿಸೈನ್ ಬೇಕು…”“ಎಲ್ಲರೂ ನನ್ನ ಬಳೆಯನ್ನೇ ನೋಡಬೇಕು…”ಎಲ್ಲಿ ಮಾಡ್ಸ್ಕೊಂಡೆ? “ ಎಷ್ಟು ಗ್ರಾಂ ಇದೆ” ಅಂತ ಕೇಳಬೇಕು ಅನ್ನೋ ಆಸೆ ಇತ್ತು. ಬಂಡವಾಳ ಹೂಡಿಕೆಯೂ ಆಯಿತು, ಭವಿಷ್ಯದ ಭರವಸೆಯ ಬೀಜವೂ ಆಯಿತು ಎನ್ನುವ ನೆಮ್ಮದಿಯ ಭಾವ.

ಮದುವೆ ಸಮಾರಂಭ ಇರಲಿ, ಹುಟ್ಟುಹಬ್ಬ ಇರಲಿ, ವರಮಹಾಲಕ್ಷ್ಮಿ ಹಬ್ಬ ಇರಲಿ, ಮನೆ ಗೃಹಪ್ರವೇಶ ಇರಲಿ, ಆಫೀಸ್ ಫಂಕ್ಷನ್ಸ್ ಇರಲಿ..ಹೆಣ್ಣುಮಕ್ಕಳಿಗೆ ಅದರದ್ದೇ ಆದ ಒಂದು ಸಂಭ್ರಮ ಇರುತ್ತೆ.
ಅದಕ್ಕಿಂತಲೂ ದೊಡ್ಡ ಸಂಭ್ರಮ ಏನು ಗೊತ್ತಾ? “ಇವತ್ತು ಯಾವ ಸೀರೆ ಉಡೋದು?”
ಸೀರೆ ತೆಗೆದುಕೊಂಡ ಮೇಲೆ ಮತ್ತೊಂದು ಪ್ರಶ್ನೆ—“ಈ ಸೀರೆಗೆ ಯಾವ ಒಡವೆ ಹಾಕೋದು?”
ಅದೂ ಸಾಮಾನ್ಯವಾದ ಒಡವೆಯಲ್ಲ! ಈ ಕಾಂಜೀವರಂ ಸೀರೆಗೆ ಕಾಸಿನ ಸರ ಚೆನ್ನಾಗಿರುತ್ತೆ. ಈ ಸರಕ್ಕೆ ಲಕ್ಷ್ಮಿ ಪೆಂಡೆಂಟ್ ಇದ್ರಂತೂ ಸೂಪರ್. ಈ ಮೈಸೂರು ಸಿಲ್ಕ್ ಸೀರೆಗೆ ಮುತ್ತಿನ ಸೆಟ್ ಅಥವಾ ಕೆಂಪು ಹರಳಿನ ಸೆಟ್ಟು ಗ್ರಾಂಡ್ ಆಗಿ ಕಾಣುತ್ತೆ. ಬನಾರಸ್ ಸೀರೆಗಂತೂ ಹವಳದ ಸೆಟ್ ಬಿಟ್ಟರೆ ಯಾವುದೂ ಸರಿ ಹೊಂದೋದೆ ಇಲ್ಲ. ಮತ್ತೆ ಮನಸು ಹೇಳೋಕ್ಕೆ ಶುರುವಾಗುತ್ತೆ , ಯಾಕೋ ಯಾವುದೂ ಮ್ಯಾಚೆ ಆಗ್ತಿಲ್ಲ.. ಒಟ್ಟಿನಲ್ಲಿ, ಸೀರೆ ಒಂದಾದರೆ ಅದಕ್ಕೆ ಹೊಂದುವ ಒಡವೆಗಳ ಲೆಕ್ಕ ಮಾತ್ರ ಹತ್ತು! ತಲೆ ಗೊಂದಲಗಳ ಗೂಡಾಗಿ ಬಿಡುತ್ತೆ. ಕಡೆಗೇ, ತಲೆನೋವೇ ಬೇಡ ಅಂತ ಗಂಡನ ಕೋರ್ಟ್ಗೆ ಬಾಲ್ ಹಾಕಿಬಿಡೋದು!

ಒಂದು ಸೀರೆ ಉಟ್ಟ್ಕೊಂಡು ಕನ್ನಡಿಯ ಮುಂದೆ ನಿಂತು, “ಇದಕ್ಕೆ ಈ ಸರ ಚೆನ್ನಾಗಿರುತ್ತಾ? ಅಥವಾ ಆ ಸರ ಚೆನ್ನಾಗಿರುತ್ತಾ?” ಎಂದು ಅರ್ಧ ಗಂಟೆ ಯೋಚಿಸುವಷ್ಟು ಆಸಕ್ತಿ, ಉತ್ಸಾಹ, ಸಂಭ್ರಮ. ಹಿಂದಿನ ದಿನದಿಂದಲೇ ತಯಾರಿ ಶುರುವಾಗುತ್ತಿತ್ತು. ಇದು ಬರೀ ಅಲಂಕಾರದ ಆಸೆಯಷ್ಟೇ ಅಲ್ಲ, ಹೆಣ್ಣಿಗೆ ಚಿನ್ನದ ಜೊತೆ ಒಂದು ಭಾವನಾತ್ಮಕ ನಂಟು ಅಲ್ಲದೆ ಇನ್ನೇನೂ. ಈ ತರಹದ ಅಂಟು ನನಗೂ ಇತ್ತು.

ಇದರ ಜೊತೆಗೆ ಇನ್ನೊಂದು ವಿಚಿತ್ರವಾದ ಹುಚ್ಚು . ಯಾವ ಪರಿ ಹುಚ್ಚು ಎಂದರೇ “ನನಗೆ ಒಂದು ಒಳ್ಳೆಯ ಬಳೆ ಮಾಡಿಸಿಕೊಳ್ಳಬೇಕು!” ಬಳೆ ಅಂದರೆ ಸಣ್ಣ ಬಳೆ ಬೇಡ. “ಕೈಗೆ ಹಾಕಿಕೊಂಡಾಗ ಎದ್ದುಕಾಣಬೇಕು.ಗಟ್ಟಿಯಾಗಿರಬೇಕು. ಎಲ್ಲರೂ ಕುತೂಹಲದಿಂದ ಕೇಳಬೇಕು. ಅಮ್ಮನ ಬಳಿ ಇರುವ ಮೆಣಸಿನ ಪ್ಯಾಟರ್ನ್ ಚೆನ್ನಾಗಿ ಕಾಣುತ್ತೆ. ಒಂದೊಂದು ಬಳೆ ಕನಿಷ್ಠ ಇಪ್ಪತ್ತು ಗ್ರಾಂ ಇರಬೇಕು!”ಇಪ್ಪತ್ತು ಗ್ರಾಂ! ಒಂದು ಬಳೆ ಇಪ್ಪತ್ತು ಗ್ರಾಂ ಅಂದರೆ ಸಾಕು. ಎರಡು ಕೈಗೆ ಹಾಕಿದರೆ ನಲವತ್ತು ಗ್ರಾಂ. ಆದರೆ ಆಗ ಯಾರೂ ಅದನ್ನು ತೂಕ ಅಂತ ಯೋಚಿಸುವುದಿಲ್ಲ.“ಅಯ್ಯೋ, ಎಷ್ಟು ಚೆನ್ನಾಗಿ ಕಾಣುತ್ತೆ!”ಯಾರಾದರೂ ನೋಡಿದರೆ ನಿಜವಾದ ದಪ್ಪ ಕರಿ ಮೆಣಸು ನೋಡಿದ ಹಾಗೆ ಕೈ ತುಂಬಾ ಇರಬೇಕು.

ಅಷ್ಟೇ! ಅದಕ್ಕಾಗಿ ಸಾಲ ಮಾಡಿಯಾದರೂ ಸರಿ, ಪೈಸೆಗೆ ಪೈಸೆ ಕೂಡಿಸಿಯಾದರೂ ಸರಿ, ವರ್ಷಗಟ್ಟಲೆ ಉಳಿಸಿಯಾದರೂ ಸರಿ, ಈಎಂಐ ಕಟ್ಟಿಯಾದರೂ ಸರಿ ಮಾಡಿಸಿಕೊಳ್ಳಬೇಕು. ಏಕೆಂದರೆ ಆಗ ನಮ್ಮ ಮನಸ್ಸಿನಲ್ಲಿ ಇನ್ನೊಂದು ಭಾವನೆ ಇರುತ್ತೆ. ಇರಲಿ ಏನಾದರೂ ಕಷ್ಟ ಬಂದರೆ?”“ಅವತ್ತು ಈ ಚಿನ್ನ ನಮ್ಮ ಕೈ ಹಿಡಿಯುತ್ತೆ.” ತಪ್ಪೇನಲ್ಲ. ಇನ್ನು ಅಕ್ಕಸಾಲಿಗ ಹೆಚ್ಚು ಕಮ್ಮಿ ಮಾಡಿಬಿಟ್ಟರೆ, ನೋಡಬೇಕು ನಮ್ಮ ಕೂಗಾಟ.. ಹಾರಾಟ!
ಚಿನ್ನ ನಮ್ಮ ಸಂಸ್ಕೃತಿಯಲ್ಲಿ ಕೇವಲ ಅಲಂಕಾರವಲ್ಲ; ಒಂದು ರೀತಿಯ ಭದ್ರತೆಯ ಭರವಸೆಯೂ ಹೌದು. ಹಾಗಾಗಿ ತಾರುಣ್ಯದಲ್ಲಿ ನಾವು ಸಾಧ್ಯವಾದಷ್ಟು ಒಳ್ಳೆಯ, ಗಟ್ಟಿಯಾದ, ಭಾರವಾದ ಒಡವೆಗಳನ್ನು ಮಾಡಿಸಿಕೊಳ್ಳುತ್ತೇವೆ. ಆಗ ನಮಗೆ ಚಿನ್ನ ಭಾರ ಅನ್ನಿಸುವುದಿಲ್ಲ. 
ಚಿನ್ನವೇ ನಮ್ಮ ಭದ್ರತೆ ಅನ್ನಿಸುತ್ತದೆ.

ಆದರೆ…ಈಗ..ಕಾಲ ಯಾರನ್ನೂ ಬಿಡುವುದಿಲ್ಲ. ವಯಸ್ಸು ಮುಂದೆ ಸಾಗುತ್ತೆ .ಒಂದು ದಿನ ಅದೇ ಇಪ್ಪತ್ತು ಗ್ರಾಂನ ಬಳೆ, ಲಕ್ಷ್ಮಿ ಕಾಸಿನ ಹಾರ, ಜೋಮಾಲೆ, ಮುತ್ತಿನ ಜುಮುಕಿ ಅಲಮಾರಿಯಿಂದ ತೆಗೆದು ಕೈಗೆ ಹಾಕಿಕೊಳ್ಳುತ್ತೇವೆ. ಮೊದಲು ಒಂದು ನಿಮಿಷ ಚೆನ್ನಾಗಿರುತ್ತೆ. ಎರಡು ನಿಮಿಷ ಚೆನ್ನಾಗಿರುತ್ತೆ. ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಕತ್ತು ಹೇಳುತ್ತೆ—ತುಂಬಾ ಭಾರ ,ಅಮ್ಮಾ… ಸಾಕು., ಈ ಒಡವೆ ಸಹವಾಸ. ಯಾವಾಗ ಮನೆಗೆ ಹೋಗಿ ಬಿಚ್ಚಿಬಿಡುತ್ತೇನೋ ! ಈ ಒಡವೆ ಗೊಡವೇನೆ ಬೇಡ. ಹಾಯಾಗಿ ಇರಬೇಕಪ್ಪ ಅಂತ ಅನಿಸೋಕೆ ಶುರುವಾಗೊತ್ತೆ. ಇನ್ನೊಂದು ತರ ಜಿಜ್ಞಾಸೆ ,ಈ ವಯಸ್ಸಿನಲ್ಲಿ ಜುಮುಕಿ ಹಾಕೊಂಡ್ರೆ ನೋಡಿದವರು ಏನು ಅನ್ಕೊಂಡ್ತಾರೆ. ಆಗ ಗೊತ್ತಾಗುತ್ತೆ…ಒಡವೆ ಬದಲಾಗಿಲ್ಲ.
 ಚಿನ್ನ ಬದಲಾಗಿಲ್ಲ. 
ಬದಲಾಗಿರುವುದು ನಾವು! ತಾರುಣ್ಯದಲ್ಲಿ ನಮ್ಮ ದೇಹಕ್ಕೆ ಆಭರಣಗಳ ಭಾರ ಗೊತ್ತಾಗುವುದಿಲ್ಲ. ಇದೆ ನನಗೂ ಆಗ್ತಿರೋದು.

ವಯಸ್ಸಾದ ಮೇಲೆ ನಮ್ಮದೇ ಶರೀರ ನಮಗೆ ಭಾರ ಅನ್ನಿಸೋಕೆ ಶುರುವಾಗುತ್ತೆ. ಕಿವಿಗೆ ಓಲೆ ಭಾರ. ಕುತ್ತಿಗೆಗೆ ಸರ ಭಾರ. ಕೈಗೆ ಬಳೆ ಭಾರ. ಹಾಗಾಗಿ ವಯಸ್ಸಾದಂತೆ ಚಿನ್ನದ ಬೆಲೆ ಕಡಿಮೆಯಾಗೋದಿಲ್ಲ. ಆದರೆ ಚಿನ್ನದ ಜೊತೆ ನಮ್ಮ ಸಂಬಂಧ ಮಾತ್ರ ಬದಲಾಗುತ್ತದೆ.

ಮೆಟ್ಟಿಲು ಹತ್ತೋದು ಭಾರ. ಕೆಳಗೆ ಬಾಗೋದು ಭಾರ. ಬೆಳಗ್ಗೆ ಎದ್ದು ಹಾಸಿಗೆಯಿಂದ ಏಳೋದು ಕೂಡ ಕೆಲವೊಮ್ಮೆ ದೊಡ್ಡ ಪ್ರಾಜೆಕ್ಟ್! ಅಂತಹ ಸಮಯದಲ್ಲಿ ತಾರುಣ್ಯದಲ್ಲಿ ತುಂಬಾ ಇಷ್ಟಪಟ್ಟು ಮಾಡಿಸಿಕೊಂಡಿದ್ದ ಒಡವೆಗಳೆಲ್ಲ ಒಂದೊಂದಾಗಿ ನಮಗೆ ಹೇಳೋಕೆ ಶುರು ಮಾಡುತ್ತವೆ—
“ನಮ್ಮನ್ನೂ ಈಗ ಯಾಕೆ ಇಷ್ಟು ಜೋಪಾನ ಮಾಡ್ತಾ ಇದ್ದೀಯಾ? ಹೊರಗೆ ಪ್ರದರ್ಶಿಸುವುದಿಲ್ಲವೇ? ಆಗ ನನಗೆ ಒಂದು ಸತ್ಯ ಅರ್ಥವಾಯಿತು. ತಾರುಣ್ಯದಲ್ಲಿ ನಾವು ಸಂಗ್ರಹಿಸುವುದರಲ್ಲಿ ಸಂತೋಷ ಕಂಡಿದ್ದೆವು. ವಯಸ್ಸಾದ ಮೇಲೆ ಬಿಡುವುದರಲ್ಲಿ ಸಂತೋಷ ಹುಡುಕುತ್ತೇವೆ.
ಆಗ—
“ಇನ್ನೊಂದು ಬಳೆ ಮಾಡಿಸಿಕೊಳ್ಳಬೇಕು.”
ಈಗ—
“ಇದ್ದ ಎರಡು ಬಳೆಯೇ ಸಾಕು!”
ಆಗ—“ಒಡವೆ ಭದ್ರತೆ ಮನಸಿಗೆ ಹಗುರ”
ಈಗ: “ಒಡವೆಯ ಸುರಕ್ಷತೆ ಮನಸಿಗೆ ಭಾರ”
“ದೊಡ್ಡ ಮನೆ ಬೇಕು.”
ಈಗ—
“ಮೆಟ್ಟಿಲು ಕಡಿಮೆ ಇದ್ದರೆ ಸಾಕು!”
ಒಮ್ಮೆ—
“ಇದು ನನಗೆ ಬೇಕು.”ಎನ್ನುವ ಮನಸ್ಸು, ನಂತರ—“ಇದ್ದದ್ದೇ ಸಾಕು.”ಎನ್ನುತ್ತದೆ.
ಒಮ್ಮೆ—“ಎಲ್ಲರಿಗಿಂತ ವಿಭಿನ್ನವಾಗಿ ಕಾಣಬೇಕು.”ಎನ್ನುವ ಆಸೆ, ನಂತರ—“ನನಗೆ ಆರಾಮವಾಗಿದ್ದರೆ ಸಾಕು.” ಎನ್ನುವ ಬುದ್ಧಿಯಾಗುತ್ತದೆ.

ಬಹುಶಃ ಜೀವನದ ಅನುಭವ ಅಂದರೆ ಇದೇ ಇರಬೇಕು. ಯೌವನದಲ್ಲಿ ನಾವು ವಸ್ತುಗಳನ್ನು ಸಂಗ್ರಹಿಸುತ್ತೇವೆ .
ವಯಸ್ಸಾದ ಮೇಲೆ ಅನುಭವಗಳನ್ನು ಸಂಗ್ರಹಿಸುತ್ತೇವೆ. ಅಂತಿಮವಾಗಿ…ಸೀರೆ ಇರಲಿ, ಒಡವೆ ಇರಲಿ, ಅವುಗಳೆಲ್ಲವೂ ನಮ್ಮ ಬದುಕನ್ನು ಸುಂದರಗೊಳಿಸಲಿ. ಆದರೆ ನಮ್ಮ ಬದುಕಿಗೆ ಭಾರವಾಗದಿರಲಿ. ನಮ್ಮ ಭಾರವನ್ನು ಕಡಿಮೆ ಮಾಡುವವರು ಯಾರು?


ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವವರು ಯಾರು?
 ನಮ್ಮ ಜೊತೆ ಸೌಹಾರ್ದಯುತವಾಗಿ ಬೆರೆಯುವವರು ಯಾರು? ಇಂತಹ ಆಂತರಿಕ ಸಂಬಂಧಗಳ ಸೌಂದರ್ಯ, ಆಲೋಚನಾ ಸೌಂದರ್ಯ, ಬೌದ್ಧಿಕ ಸೌಂದರ್ಯ, ಪ್ರಜ್ಞಾ ಸೌಂದರ್ಯದ ಮುಂದೆ ಒಡವೆಯ ಸೌಂದರ್ಯ ಕಳೆಗುಂದಿದೆ ಎನಿಸುತ್ತಿದೆ ಕಣ್ರಿ.ಉಳಿದದ್ದು? ಅಲಮಾರಿಯಲ್ಲಿರುವ ಚಿನ್ನದ ಒಡವೆ ತರ ಇರಲಿ. ನೆನಪಾಗಿ ಇರಲಿ. ಆದರೆ…ನಮ್ಮ ಬದುಕಿಗೆ ಅದು ಗೊಡವೆಯಾಗದಿದ್ದರೆ ಸಾಕು!

ನಿಮಗೆ ಏನು ಅನಿಸುತ್ತಿದೆ, ತಿಳಿಸ್ತೀರಾ?

ಹೆಬ್ಬಾಲೆ ವತ್ಸಲ ಸುರೇಶ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *