ಲಹರಿ

 ತಲೆಮಾರು : ಭಾಗ -1

Share Button

ಸತ್ಯಂ ವದ, ಧರ್ಮಂ ಚರ, ಸ್ವಾಧ್ಯಾಯಾನ್ಮಾ ಪ್ರಮದಃ.” ತೈತ್ತಿರೀಯ ಉಪನಿಷತ್ತಿನ ಈ ಮೂರು ಮಾತುಗಳು ಕೇವಲ ನೀತಿವಾಕ್ಯಗಳಲ್ಲ; ಒಂದು ಸಂಪೂರ್ಣ ಜೀವನಕ್ಕೆ ಮಾರ್ಗದರ್ಶನ ನೀಡುವ ಮಹತ್ವದ ಸಂದೇಶಗಳು. ನನಗೆ ಸತ್ಯವೆಂದು ಅನ್ನಿಸಿದ್ದನ್ನು, ನನ್ನ ತಿಳುವಳಿಕೆ ಮತ್ತು ಅನುಭವಕ್ಕೆ ನಿಲುಕಿದ ಸತ್ಯವನ್ನು ಪ್ರಾಮಾಣಿಕವಾಗಿ ಹೇಳಬೇಕು ಎಂಬ ಉದ್ದೇಶದಿಂದಲೇ ಈ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಅಲ್ಲೊಂದು ಕುಟುಂಬ. ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಕುಟುಂಬ ಕಣ್ರಿ. ಏಕೆಂದರೆ ಆ ಮನೆಯಲ್ಲಿ ಒಂದಲ್ಲ, ಎರಡಲ್ಲ… ಮೂರು ತಲೆಮಾರಿನ ಮಂದಿ ಒಟ್ಟಿಗೆ ಮನೆಯಲ್ಲಿ ವಾಸವಿದ್ದಾರೆ. ಆ ಮನೆಯ ಹಿರಿಯರು ಸಾವಿತ್ರಮ್ಮ ಮತ್ತು ಅವರ ಪತಿ ಸುಬ್ರಾಯರು. ವಯಸ್ಸು ಎಷ್ಟೇ ಆಗಿದ್ದರೂ, ಜೀವನೋತ್ಸಾಹ ಕಿಂಚಿತ್ತು ಕಡಿಮೆಯಾಗಿರಲಿಲ್ಲ. ಸಾವಿತ್ರಮ್ಮ ಹತ್ತಿ- ಬತ್ತಿ ಮಾಡ್ಕೊಂಡು, ಟಿವಿ ಧಾರಾವಾಹಿ ನೋಡ್ಕೊಂಡು, ಮಂಡಿನೋವಿನ ಭಾಧೆಯನ್ನು ತಾಳಿಕೊಂಡು, ತಮಗಾಗುವ ಸಣ್ಣ ಪುಟ್ಟ ಸಹಾಯ ಮಾಡಿಕೊಂಡು ಸಮಯ ಕಳ್ಕೊಳ್ಳುತ್ತಿದ್ದರು.

ಸುಬ್ರಾಯರು ತೊಂಭತ್ತರ ಗಡಿ ದಾಟಿದ್ದು ಇನ್ನೂ ಅವರ ಮುಖ  ಸ್ವಲ್ಪವೂ ಸುಕ್ಕು ಬಾರದೆ ತೇಜಸ್ಸಿನಿಂದ ಹೊಳೆಯುತ್ತಿತ್ತು. ಜೀವನವನ್ನು ಹಗುರಾಗಿ ಸ್ವೀಕರಿಸಿ ಯಾವುದಕ್ಕೂ ಹೆಚ್ಚು ಚಿಂತೆ ಮಾಡದೇ, ತೃಪ್ತಿದಾಯಕ ಜೀವನವೇ ತನ್ನ ಯಶಸ್ಸಿನ ಗುಟ್ಟು ಎನ್ನುವುದನ್ನು ನಂಬಿ ಕಾಲ ಹಾಕುತ್ತಿದ್ದ ಶಿಸ್ತಿನ ಸಿಪಾಯಿ.  ಸೂರ್ಯ ಹುಟ್ಟೋದು ಸ್ವಲ್ಪ ತಡವಾಗಬಹುದು, ಆದರೆ ಸುಬ್ಬರಾಯರ ನಿತ್ಯ ಕರ್ಮಗಳು ಸಾಂಗವಾಗಿ ನಡೆಯುತ್ತಿದ್ದವು. ಅವರ ಪಿಂಚಣಿಯಲ್ಲಿ ಸ್ವಲ್ಪ ಭಾಗವನ್ನು ತಮ್ಮ ಔಷಧೋಪಚಾರಕ್ಕೆ ಉಳಿಸಿಕೊಂಡು ಮಿಕ್ಕಿದ್ದನ್ನು ಸೊಸೆಗೆ ಸಂಸಾರ ಭರಿಸಲು ನೆರವಾಗುತ್ತಿದ್ದರು. ತಮ್ಮ ಮೂರು ಮಕ್ಕಳ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಿ ವಿಶ್ರಾಂತಿ ಜೀವನವನ್ನು ಮಕ್ಕಳು ಮೊಮ್ಮಕ್ಕಳೊಡನೆ ಹಾಯಾಗಿ ಕಳೆಯುತ್ತಿದ್ದರು. ಅವರ ಮಗ ಸುರೇಶ,  ಅವನ ಹೆಂಡತಿ ಶಾರದೆ.  ಸುರೇಶ ಸರ್ಕಾರಿ ನೌಕರಿಯಲ್ಲಿ ಸೇವೆ ಮಾಡುತ್ತಿದ್ದಾನೆ. ಕೆಲಸದ ಜವಾಬ್ದಾರಿಯೊಂದಿಗೆ ಹೆಂಡತಿ ಶಾರದೆಗೆ ಮನೆ ಸಂಭಾಳಿಸುವುದರಲ್ಲಿ ನೆರವಾಗುತ್ತಿದ್ದನು. ಶಾರದೆ ಗಮಕ ಕಲಾವಿದೆ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ ಕಥೆ ಕಾದಂಬರಿ ಬರೆಯುತ್ತಾ ಮನೆಯ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಳು. ಒಳ್ಳೆಯ ಸುಸಂಕೃತ ಮನೆಯ ಹುಡುಗಿಯಾಗಿದ್ದು ತನ್ನ ತಂದೆ-ತಾಯಿಗೂ ಒಳ್ಳೆಯ ಹೆಸರು ತಂದಿದ್ದು ಸೇರಿದ ಮನೆಗೂ ನೆಚ್ಚಿನ ಸೊಸೆಯಾಗಿದ್ದಳು.ಸುರೇಶ-ಶಾರದೆ ದಂಪತಿಗೆ ಇಬ್ಬರೂ ಮಕ್ಕಳು, ಸುಹಾಸ ಹಾಗೂ ಸುಪ್ರಿಯ. ಸುಹಾಸ ಎಂಬಿಎ ಮುಗಿಸಿ ಫೈನಾನ್ಸಿಯಲ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಸುಪ್ರಿಯಾ ಸಾಫ್ಟ್ವೇರ್ ಎಂಜಿನಿಯರ್ ಆಗಿ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿರುತ್ತಾಳೆ.

ಸುಖಿ ಕುಟುಂಬ ಎಂದೇ ಹೇಳಬಹುದು. ಎಲ್ಲರ ನಡುವೆ ಪ್ರೀತಿ, ಗೌರವ,ಅನ್ಯೋನ್ಯತೆ, ಕಾಳಜಿ ಎಲ್ಲವೂ ಇದೆ. ಹೊರಗಿನವರಿಗೆ ಸ್ವಲ್ಪ ಅಸೂಯೆ ಪಡುವಷ್ಟರ ಮಟ್ಟಿಗೆ ಈ ಸಂಸಾರ ಆದರ್ಶವಾಗಿತ್ತು. ಆದರೆ,ಈ ಮನೆಯ ನಾಲ್ಕು ಗೋಡೆಗಳ ಒಳಗಿನ ಬದುಕಿನ ನಂಬಿಕೆಗಳ ಬಗ್ಗೆಯ ನಿಜವಾದ ಕಥಾ ಸ್ಥಿತಿ ಭಿನ್ನವೇ ಆಗಿತ್ತು.

ಸಾವಿತ್ರಮ್ಮ ಎಲ್.ಎಸ್. ಓದಿಕೊಂಡಿದ್ದರು. ಅಲ್ಪಸ್ವಲ್ಪ ಇಂಗ್ಲಿಷನ್ನೂ ಓದಲು, ಬರೆಯಲು ಕಲಿತಿದ್ದರು. ನಾಲ್ಕು ಅಣ್ಣಂದಿರ ನಂತರ ಹುಟ್ಟಿದ ಮಗಳಾಗಿದ್ದ ಸಾವಿತ್ರಮ್ಮನವರಿಗೆ ಮುಂದೆ ಓದುವ ಬಯಕೆ ಇದ್ದರೂ, ಇನ್ನೂ ಮೈನೆರೆಯದ ಅಪ್ರಾಪ್ತ ವಯಸ್ಸಿನಲ್ಲೇ ವಧು ಪರೀಕ್ಷೆ ಮಾಡಿಸಿದ್ದರು ಅವರ ತಾಯಿ ನರಸಮ್ಮನವರು. ಕೇವಲ ಹದಿಮೂರು ವರ್ಷ ವಯಸ್ಸಿಗೆ ಮದುವೆ ಮಾಡಿ, ಸುಬ್ರಾಯರ ಮನೆಗೆ ಕಳುಹಿಸಿಕೊಟ್ಟರು.ಹೀಗೆ ಹದಿಮೂರು ವರ್ಷಕ್ಕೇ ಸಾವಿತ್ರಮ್ಮ ಸುಬ್ರಾಯರ ಮಡದಿಯಾಗಿ, ಎಳೆಕುವರಿಯಾಗಿ ಅಡ್ಡಾಡುವ ವಯಸ್ಸಿನಲ್ಲೂ ಪರಿಪಕ್ವತೆಯನ್ನು ಮೆರೆದು ಆದರ್ಶ ಹೆಂಡತಿಯಾಗಿ, ಪ್ರಬುದ್ಧ ಸೊಸೆಯಾದರು. ಬಾಲ್ಯ ಇನ್ನೂ ಮುಗಿಯುವ ಮುನ್ನವೇ ಸಂಸಾರದ ಹೊಣೆಗಾರಿಕೆ ಅವರ ಹೆಗಲೇರಿತು. ಸಾವಿತ್ರಮ್ಮ ಆ ಸಂಸಾರವನ್ನು ಬಹಳ ಚೆನ್ನಾಗಿಯೇ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.

ಮದುವೆಯಾಗಿ ಬಂದ ಸಾವಿತ್ರಮ್ಮ, ಮೂರು ಮಕ್ಕಳ ತಾಯಿಯಾಗಿ ಮಾತೃಪ್ರೇಮವನ್ನು ಮಕ್ಕಳಿಗೆ ಧಾರೆಯೆರೆಯುತ್ತಾ, ಗಂಡನ ಬೇಕು–ಬೇಡಗಳನ್ನು ಅರಿತು, ಅವರ ಪ್ರತಿಯೊಂದು ಅಗತ್ಯವನ್ನೂ ನೋಡಿಕೊಳ್ಳುತ್ತಾ, ಸುಬ್ರಾಯರ ಹೆಗಲಿಗೆ ಹೆಗಲಾಗಿ ನಿಂತರು .ಮಕ್ಕಳನ್ನೂ ಬಹಳ ಅಚ್ಚುಕಟ್ಟಾಗಿ ಬೆಳೆಸಿದರು. ತಮ್ಮ ಶಕ್ತಿಯಾನುಸಾರ ಅವರಿಗೆ ವಿದ್ಯಾಭ್ಯಾಸ ಕೊಡಿಸಿ, ಅವರು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸುವಂತೆ ಮಾಡುವಲ್ಲಿ ಸಾವಿತ್ರಮ್ಮನ ಕೊಡುಗೆ ಅಪಾರವಾಗಿತ್ತು. ಆದರೂ ಸಾವಿತ್ರಮ್ಮ ತನ್ನ ಗಂಡನಿಂದ ಯಾವುದೇ ಪ್ರಶಂಸೆ ಅಪೇಕ್ಷಿಸಲಿಲ್ಲ, ಅದನ್ನೂ ನಿರೀಕ್ಷಿಸಲೂ ಇಲ್ಲ.

ಸಾಂಪ್ರದಾಯಿಕ ಕುಟುಂಬದಿಂದ ಬಂದವರಾಗಿದ್ದರಿಂದ, ಹಬ್ಬ–ಹರಿದಿನಗಳಾಗಲಿ, ಆಚಾರ–ವಿಚಾರಗಳಾಗಲಿ ಯಾವುದಕ್ಕೂ ಧಕ್ಕೆ ಬರದಂತೆ ಮನೆಯ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದರು. ಮನೆಯಲ್ಲಿ ಕೆಲಸದವರೂ ಇರಲಿಲ್ಲ. ಹಾಗಾಗಿ ಇಡೀ ಮನೆಯ ಜವಾಬ್ದಾರಿಯೂ ಅವರದೇ. ಗಂಡನಿಗೆ ಹೊತ್ತು–ಹೊತ್ತಿಗೆ ಊಟ–ತಿಂಡಿ ಮಾಡಿಕೊಡುವುದರಿಂದ ಹಿಡಿದು, ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು, ಅತ್ತೆ–ಮಾವಂದಿರನ್ನು ನೋಡಿಕೊಳ್ಳುವುದು—ಹೀಗೆ ಮನೆಯ ಪ್ರತಿಯೊಂದು ಜವಾಬ್ದಾರಿಯನ್ನೂ ಅವರು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಸುಬ್ರಾಯರು ತನ್ನ ಹೆಂಡತಿಯನ್ನು ಯಾವತ್ತೂ ಗಮನಿಸಲೇ ಇಲ್ಲ. ಅವರ ಬೇಕು-ಬೇಡಗಳನ್ನು ತಿಳಿಯಲು ಪ್ರಯತ್ನಿಸಲೂ ಇಲ್ಲ.

ಸಾವಿತ್ರಮ್ಮನ ಮನಸ್ಸಿನಲ್ಲಿ ಮದುವೆ, ಸಂಸಾರ ಎಂದರೆ ಕೇವಲ ಒಂದು ಸಂಬಂಧವಾಗಿರಲಿಲ್ಲ; ಅದು ಒಂದು ಜವಾಬ್ದಾರಿ, ಒಂದು ಕರ್ತವ್ಯ, ಒಂದು ವಾಗ್ದಾನ ಎಂಬ ಭಾವನೆ ಇತ್ತು. ಮದುವೆ ಎನ್ನುವುದು ಒಂದು ಪವಿತ್ರ ಬಂಧನ. ಲಕ್ಷ್ಮಿ-ನಾರಾಯಣರಂತೆ ತಮ್ಮ ದಾಂಪತ್ಯ ಪವಿತ್ರವಾಗಿರಬೇಕು. ತಾನು ಮುತ್ತೈದೆಯಾಗಿಯೇ ಸಾಯಬೇಕೆಂಬುದು ಅವರ ನಿತ್ಯ ಪ್ರಾರ್ಥನೆಯಾಗಿತ್ತು. ತಾಯಿ ಹೇಳಿಕೊಟ್ಟು ಕಳುಹಿಸಿದ ಸುಖ ಸಂಸಾರದ ಉಪದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಗಂಡನ ಮನೆಯಲ್ಲಿ ಒಳ್ಳೆಯ ಹೆಸರನ್ನು ತರಬೇಕು, ತನ್ನಿಂದಾಗಿ ಯಾರಿಗೂ ನೋವಾಗಬಾರದು ಎಂಬುದೇ ಅವರ ಜೀವನದ ಧ್ಯೇಯವಾಗಿತ್ತು. ಅದಕ್ಕಾಗಿ ಅವರು ಒಬ್ಬ ಉತ್ತಮ ಮಡದಿಯಾಗಿ, ಪ್ರೀತಿಯ ತಾಯಿಯಾಗಿ, ಜವಾಬ್ದಾರಿಯುತ ಸೊಸೆಯಾಗಿ ತಮ್ಮ ಸಂಸಾರವನ್ನು ನಿಭಾಯಿಸುತ್ತಾ ಬಂದರು. ಗಂಡನನ್ನು ಅನುಸರಿಕೊಂಡು ಹೋಗುವುದಷ್ಟೇ ಅವರ ಆದ್ಯತೆಯಾಗಿತ್ತು.

ಆದರೆ ಈ ಎಲ್ಲದರ ನಡುವೆ ಸಾವಿತ್ರಮ್ಮನ ಜೀವನದ ಮತ್ತೊಂದು ಮುಖವೂ ಇತ್ತು. ಅವರಿಗೆ ಸಾಮಾಜಿಕ ಜೀವನಕ್ಕೆ ಅವಕಾಶವೇ ಇರಲಿಲ್ಲ. ಹೊರಗಿನ ಪ್ರಪಂಚವನ್ನು ನೋಡಲು, ಜನರೊಂದಿಗೆ ಬೆರೆಯಲು, ತಮ್ಮದೇ ಆದ ಅನುಭವಗಳನ್ನು ಪಡೆದುಕೊಳ್ಳಲು ಅವರಿಗೆ ಅವಕಾಶ ಸಿಗಲಿಲ್ಲ. ಮಾಡಿಕೊಳ್ಳುವ ಮನಸ್ಥಿತಿಯು ಇರಲಿಲ್ಲ. ಸ್ನೇಹಿತರೂ ಬಹಳ ಸೀಮಿತ. ಮನೆಯೇ ಅವರ ಪ್ರಪಂಚವಾಗಿತ್ತು; ಗಂಡ, ಮಕ್ಕಳು, ಅತ್ತೆ–ಮಾವಂದಿರು , ಬಂಧು-ಬಳಗ ಮತ್ತು ಮನೆಯ ಜವಾಬ್ದಾರಿಗಳೇ ಅವರ ಬದುಕಿನ ಆದ್ಯತೆಯಾಗಿತ್ತು. ತಮಗೆಂದು ಯಾವತ್ತೂ ಸಮಯ ಮಾಡಿಕೊಳ್ಳಲೇ ಇಲ್ಲ. ಹೀಗಾಗಿ ಸಂಸಾರದ ಅನುಭವ ಅವರಿಗೆ ಅಪಾರವಾಗಿದ್ದರೂ, ಸಂಸಾರದ ಹೊರಗಿನ ಬದುಕಿನ ಅನುಭವ ಅವರಿಗೆ ಬಹಳ ಕಡಿಮೆ ಇತ್ತು. ಹೊರಗಿನ ಪ್ರಪಂಚ ಹೇಗಿದೆ, ಜನರ ಬದುಕು ಹೇಗೆ ಬದಲಾಗುತ್ತಿದೆ, ಸಂಬಂಧಗಳ ಸ್ವರೂಪ ಹೇಗೆ ಬದಲಾಗುತ್ತಿದೆ—ಇವೆಲ್ಲವನ್ನು ನೇರವಾಗಿ ಅನುಭವಿಸುವ ಅವಕಾಶ ಸಾವಿತ್ರಮ್ಮನಿಗೆ ದೊರೆತಿರಲಿಲ್ಲ. ಅವರ ಬದುಕು ಮನೆಯ ನಾಲ್ಕು ಗೋಡೆಗಳೊಳಗೆ ಸಂಪೂರ್ಣವಾಗಿತ್ತು. ಮಕ್ಕಳ ವಿದ್ಯಾಭ್ಯಾಸ, ಅವರ ಮದುವೆ ಮುಂಜಿ, ಬಾಣಂತನ… ಹೀಗೆ ಸಂಸಾರದ ಜವಾಬ್ದಾರಿಗಳಲ್ಲಿ  ಅವರ ಆಯುಸ್ಸಿನ ಮುಕ್ಕಾಲು ಭಾಗ ಕಳೆದು ಹೋಗಿತ್ತು. ಮೊಮ್ಮಕ್ಕಳ ಸಾಂಗತ್ಯವೇ ಅವರಿಗೆ ತಮ್ಮ ಸಂಧ್ಯಾ ಕಾಲದಲ್ಲಿ ನೆಮ್ಮದಿ, ಸಂಭ್ರಮದ ಪ್ರಪಂಚವಾಗಿತ್ತು.

ಇನ್ನು ಸಾವಿತ್ರಮ್ಮನ ಸೊಸೆ ಶಾರದಾ. ಶಾರದಾ ಪದವೀಧರೆಯಾಗಿದ್ದು, ಗಮಕ ಕಲಾವಿದೆಯಾಗಿದ್ದಳು. ಸಂಗೀತದಲ್ಲಿಯೂ ಅವಳಿಗೆ ಅಪಾರವಾದ ಆಸಕ್ತಿ. ತಂದೆ–ತಾಯಿಯ ಆಸೆಯಂತೆ, ಅವರು ನೋಡಿದ ಸಂಬಂಧವನ್ನೇ ತಾನು ಒಪ್ಪಿ  ಮದುವೆಯಾಗಿ ಸುರೇಶನ ಪತ್ನಿಯಾಗಿ ಈ ಮನೆಗೆ ಬಂದಳು. ತನ್ನ ತಂದೆ–ತಾಯಿಗಳು ಹೇಗೆ ಆದರ್ಶಮಯವಾದ ಸಂಸಾರವನ್ನು ನಡೆಸಿಕೊಂಡು ಬಂದಿದ್ದರೋ, ಅದೇ ರೀತಿಯಲ್ಲಿ ತಾನೂ ತನ್ನ ಸಂಸಾರವನ್ನು ಆದರ್ಶವಾಗಿ ಕಟ್ಟಿಕೊಳ್ಳಬೇಕು ಎಂಬುದು ಅವಳ ಮನದಾಳದ ಬಯಕೆಯಾಗಿತ್ತು. ಸುರೇಶ ಕೂಡ ಅವಳ ಯೋಚನೆಗಳನ್ನು ಸಾಕಾರಗೊಳಿಸಲು ಅನುವು ಮಾಡಿಕೊಡುತ್ತಿದ್ದ.

ಆದರೆ ಸಾವಿತ್ರಮ್ಮನಿಗಿಂತ ಶಾರದಾಳ ಕಾಲ ಮತ್ತು ಆಲೋಚನಾ ಪ್ರಪಂಚ ಸ್ವಲ್ಪ ಭಿನ್ನವಾಗಿತ್ತು. ಕಾಲದ ಬದಲಾವಣೆಯೊಂದಿಗೆ ಹೊರಗಿನ ಪ್ರಪಂಚವೂ ಬದಲಾಗುತ್ತಿರುವುದನ್ನು ಅವಳು ಅರಿತುಕೊಂಡಿದ್ದಳು. ಸಾಮಾಜಿಕ ಜೀವನದ ಬಗ್ಗೆ ಅವಳಿಗೆ ಸ್ವಲ್ಪ ಆಸಕ್ತಿಯೂ ಇತ್ತು. ಮದುವೆ, ಕುಟುಂಬ ಮತ್ತು ಗಂಡ–ಹೆಂಡತಿಯ ಸಂಬಂಧಗಳ ಬಗ್ಗೆ ಸಮಾಜದಲ್ಲಿ ಮೂಡಿಬರುತ್ತಿದ್ದ ಹೊಸ ವ್ಯಾಖ್ಯಾನಗಳನ್ನು ಅವಳು ಗಮನಿಸುತ್ತಿದ್ದಳು. ಅವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತನ್ನದೇ ಆದ ವಿವೇಚನೆಯಿಂದ ವಿಮರ್ಶಿಸುವ ಮನೋಭಾವವೂ ಅವಳಿಗಿತ್ತು.

ಶಾರದಾಳಿಗೆ ಮದುವೆ ಎಂದರೆ ಕೇವಲ ಗಂಡನನ್ನು ಅನುಸರಿಸಿಕೊಂಡು ಹೋಗುವ ವ್ಯವಸ್ಥೆಯಾಗಿರಲಿಲ್ಲ. ಮದುವೆ ಒಂದು ಸಂಸ್ಥೆ; ಆ ಸಂಸ್ಥೆಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಸರಿಸಮಾನರು ಎಂಬ ನಂಬಿಕೆ ಅವಳದು. ಒಬ್ಬರನ್ನೊಬ್ಬರು ಗೌರವಿಸಬೇಕು, ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಬೇಕು. ಅದೇ ಸಂದರ್ಭದಲ್ಲಿ ಗಂಡನ ಗೌರವ ಮತ್ತು ಮರ್ಯಾದೆ ಯಾವತ್ತೂ ಕುಂದದಂತೆ, ಅಗತ್ಯವಿದ್ದಾಗ ಅವನಿಗೆ ಬೆಂಬಲವಾಗಿ, ರಕ್ಷಣಾತ್ಮಕವಾಗಿ ನಿಲ್ಲಬೇಕು ಎಂಬುದೂ ಅವಳ ದೃಢವಾದ ನಂಬಿಕೆಯಾಗಿತ್ತು.

ಹಾಗೆಂದ ಮಾತ್ರಕ್ಕೆ ಅವಳು ತನ್ನ ತಂದೆ–ತಾಯಿಗಳು ಹಾಕಿಕೊಟ್ಟ ಮಾರ್ಗವನ್ನು ತಿರಸ್ಕರಿಸಿದವಳಲ್ಲ. ಬದಲಾಗಿ, ಅವರು ಕಲಿಸಿಕೊಟ್ಟ ಕುಟುಂಬದ ಮೌಲ್ಯಗಳನ್ನು ಉಳಿಸಿಕೊಂಡೇ, ಬದಲಾಗುತ್ತಿರುವ ಕಾಲದ ಅರಿವನ್ನೂ ತನ್ನೊಳಗೆ ಬೆಳೆಸಿಕೊಂಡಿದ್ದಳು. ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ಒಂದು ಸಮತೋಲನವನ್ನು ಕಂಡುಕೊಳ್ಳಬೇಕು ಎಂಬುದು ಅವಳ ಜೀವನದ ದೃಷ್ಟಿಕೋನವಾಗಿತ್ತು.

ಹೀಗಾಗಿ ಶಾರದಾಳೂ ತನ್ನ ಮನೆಯಲ್ಲಿ ಒಬ್ಬ ಆದರ್ಶ ಗೃಹಿಣಿಯಾಗಿಯೇ ಬದುಕುತ್ತಿದ್ದಳು. ಮದುವೆಯ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಳು. ಗಂಡನನ್ನು ಪ್ರೀತಿಸುತ್ತಾ, ಗೌರವಿಸುತ್ತಾ, ಅವನಿಗೆ ಬೆಂಬಲವಾಗಿ ನಿಲ್ಲುತ್ತಾ, ತನ್ನದೇ ಆದ ವ್ಯಕ್ತಿತ್ವವನ್ನೂ ಉಳಿಸಿಕೊಂಡು, ಪರಸ್ಪರ ಗೌರವ, ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ನಿಂತ ದಾಂಪತ್ಯ ಜೀವನವನ್ನು ನಡೆಸಬೇಕು ಎಂಬುದು ಅವಳ ನಂಬಿಕೆಯಾಗಿತ್ತು.

ಶಾರದಾಳಿಗೆ ಶಾಲಾ ದಿನಗಳಿಂದಲೇ ಉತ್ತಮ ಸ್ನೇಹಿತರ ಬಳಗವಿತ್ತು. ಸಮಾಜದಲ್ಲಿ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು, ತನ್ನ ಪ್ರತಿಭೆಯ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳಬೇಕು ಎಂಬ ಆಸೆಯೂ ಅವಳಿಗಿತ್ತು. ಅದಕ್ಕೆ ಸುರೇಶನ ಸಂಪೂರ್ಣ ಬೆಂಬಲವೂ ದೊರೆಯುತ್ತಿತ್ತು. ಗಂಡನ ಪ್ರೋತ್ಸಾಹ ಮತ್ತು ಬೆಂಬಲದಿಂದಲೇ ತನ್ನ ಪ್ರತಿಭೆಯನ್ನು ಬೆಳೆಸಿಕೊಂಡು, ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ತನ್ನದೇ ಆದ ಗುರುತನ್ನು ಮೂಡಿಸಿಕೊಳ್ಳುವ ಅವಕಾಶ ಅವಳಿಗೆ ದೊರೆಯಿತು. ಹೀಗಾಗಿ ಶಾರದಾಳ ಸಂಸಾರ ಅವಳನ್ನು ಬಂಧಿಸಿರಲಿಲ್ಲ; ಬದಲಾಗಿ ಅವಳ ವ್ಯಕ್ತಿತ್ವವನ್ನು ಮತ್ತಷ್ಟು ಅರಳಿಸುವಂತಿತ್ತು. ಸಂಸಾರ ಮತ್ತು ವೈಯಕ್ತಿಕ ಬದುಕು—ಇವೆರಡರ ನಡುವೆ ಒಂದು ಸುಂದರವಾದ ಸಮತೋಲನವನ್ನು ಅವಳು ಕಂಡುಕೊಂಡಿದ್ದಳು.ಅದೇ ಸಮತೋಲನವನ್ನು ತನ್ನ ಮಕ್ಕಳ ಬದುಕಿನಲ್ಲೂ ಬೆಳೆಸಬೇಕೆಂಬುದು ಅವಳ ಆಶಯವಾಗಿತ್ತು. ಸಂಪ್ರದಾಯದ ಮೌಲ್ಯಗಳನ್ನು ಕಳೆದುಕೊಳ್ಳದೆ, ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವಂತಹ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಿದಳು. ಅವರಿಗೆ ವಿದ್ಯಾಭ್ಯಾಸ, ಸಂಸ್ಕಾರ ಮತ್ತು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ—ಮೂರನ್ನೂ ಸಮಾನವಾಗಿ ನೀಡಬೇಕು ಎಂಬ ದೃಷ್ಟಿಯಿಂದ, ಬಹಳ ಪ್ರೀತಿ ಮತ್ತು ಶ್ರದ್ಧೆಯಿಂದ ಅವರನ್ನು ಬೆಳೆಸಿದಳು.

ಶಾರದಾಳ ಒಬ್ಬಳೇ ಮಗಳು ಸುಪ್ರಿಯಾ. ಅವಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವಳ ಶಿಕ್ಷಣದ ಜೊತೆಗೆ, ಹಾಸ್ಟೆಲ್ ಜೀವನವೂ ಮಹತ್ವದ ಪಾತ್ರ ವಹಿಸಿತು. ಪಿ.ಯು.ಸಿ. ಮುಗಿಸಿದ ನಂತರ, ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಂದುವರಿಸಲು ಹತ್ತಿರದ ಮತ್ತೊಂದು ಊರಿನಲ್ಲಿ ಅವಳಿಗೆ ಸೀಟು ದೊರೆಯಿತು. ಹಾಗಾಗಿ ಮೊದಲ ಬಾರಿಗೆ ಅವಳು ಮನೆಯಿಂದ ದೂರವಾಗಿ ಹಾಸ್ಟೆಲ್‌ನಲ್ಲಿ ಉಳಿಯಬೇಕಾಯಿತು. ಆರಂಭದಲ್ಲಿ ಆ ಹೊಸ ಬದುಕು ಅವಳಿಗೆ ಸ್ವಲ್ಪ ವಿಭಿನ್ನವಾಗಿ, ಅಪರಿಚಿತವಾಗಿ ಕಂಡರೂ, ಅಲ್ಲಿನ ವಾತಾವರಣಕ್ಕೆ ನಿಧಾನವಾಗಿ ಹೊಂದಿಕೊಂಡಳು. ಬೇರೆ ಬೇರೆ ಊರು, ಕುಟುಂಬ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿಕೊಂಡು, ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಹಾಸ್ಟೆಲ್ ಜೀವನ ಅವಳಿಗೆ ಮನೆಯ ಹೊರಗಿನ ಒಂದು ವಿಶಾಲವಾದ ಪ್ರಪಂಚವನ್ನು ಪರಿಚಯಿಸಿತು. ಶ್ರೀಮಂತರು, ಮಧ್ಯಮ ವರ್ಗದವರು, ಬಡ ಕುಟುಂಬಗಳಿಂದ ಬಂದವರುಹೀಗೆ ವಿವಿಧ ಹಿನ್ನೆಲೆಯ ಜನರನ್ನು ಹತ್ತಿರದಿಂದ ನೋಡುವ ಅವಕಾಶ ಅವಳಿಗೆ ದೊರೆಯಿತು. ಅವರ ಜೀವನಶೈಲಿ, ಸ್ವಾತಂತ್ರ್ಯದ ಕುರಿತಾದ ಅವರ ಕಲ್ಪನೆಗಳು, ಸಂಬಂಧಗಳ ಬಗ್ಗೆ ಅವರ ಅಭಿಪ್ರಾಯಗಳು—ಇವೆಲ್ಲವೂ ಒಂದೊಂದಾಗಿ ಸುಪ್ರಿಯಾಳ ಮನಸ್ಸಿನ ಮೇಲೆ ಪ್ರಭಾವ ಬೀರತೊಡಗಿದವು.

(ಮುಂದುವರಿಯುವುದು)

ಹೆಬ್ಬಾಲೆ ವತ್ಸಲಾ ಸುರೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *