(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಲೇಷ್ಯಾದಿಂದ ಥೈಲ್ಯಾಂಡಿನ ರಾಜಧಾನಿ ಬ್ಯಾಂಕಾಕ್‌ನ ‘ಸುವರ್ಣಭೂಮಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ’ ಬಂದಿಳಿದವರ ಮನಸ್ಸಿನ ತುಂಬಾ ಉತ್ಸಾಹ, ಉಲ್ಲಾಸದ ಅಲೆಗಳು ಹರಿದಾಡುತ್ತಿದ್ದವು. ಕೆಲವರಿಗೆ ಥಾಯ್ ಮಸಾಜ್ ಮಾಡಿಸಿಕೊಳ್ಳುವ ಹುಮ್ಮಸ್ಸು, ಹಲವರಿಗೆ ಸಮುದ್ರತೀರದಲ್ಲಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಪ್ಯಾರಾಸೈಲಿಂಗ್ ಮುಂತಾದ ಜಲಕ್ರೀಡೆಗಳನ್ನು ಆಡುವ ಹಂಬಲ ಮತ್ತೆ ಕೆಲವರಿಗೆ ಶಾಪಿಂಗ್ ಮಾಡುವ ಹುಚ್ಚು. ಬೆಂಗಳೂರಿನ ಹಲವೆಡೆ ‘ಥಾಯ್ ಮಸಾಜ್ ಸೆಂಟರ್’ ಎಂಬ ಫಲಕಗಳನ್ನು ನೋಡಿ, ನನಗೆ ಥಾಯ್ ಮಸಾಜ್ ಬಗ್ಗೆ ಕುತೂಹಲ ಮೂಡಿತ್ತು. ನಮ್ಮ ನಾಡಿನ ಬಹಳಷ್ಟು ಐ.ಟಿ., ಬಿ.ಟಿ. ಕಂಪೆನಿಗಳು ತಮ್ಮ ಉದ್ಯೋಗಿಗಳ ಮನರಂಜನೆಗಾಗಿ ರಜಾ ನೀಡಿ ಥೈಲ್ಯಾಂಡಿಗೆ ಕಳುಹಿಸುತ್ತಾರೆಂದು ನಮ್ಮ ಮ್ಯಾನೇಜರ್ ಹೇಳಿದಾಗ ನಮಗೆಲ್ಲಾ ಅಚ್ಚರಿಯಾಗಿತ್ತು. ಎಲ್ಲರಲ್ಲಿ ಸಂತಸದ ಬುಗ್ಗೆಗಳನ್ನು ಉಕ್ಕಿಸುವ ಈ ನಾಡಿನ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ –
ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಥೈಲ್ಯಾಂಡ್. ಆಗ್ನೇಯ ಏಷ್ಯಾದಲ್ಲಿರುವ ಈ ನಾಡು ‘ಲ್ಯಾಂಡ್ ಆಫ್ ಸ್ಮೈಲ್ಸ್ ’ ಅಂದರೆ ‘ನಗುವಿನ ತಾಣ’ ಎಂದೇ ಪ್ರಖ್ಯಾತವಾಗಿದೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ದ್ವೀಪಗಳು, ಸಾಗರದ ಮಧ್ಯೆ ಎದ್ದು ನಿಂತಿರುವ ಬೆಟ್ಟಗಳು, ಬೆಚ್ಚನೆಯ ಕಡಲ ತೀರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ವಿಭಿನ್ನ ಸಂಸ್ಕೃತಿಗಳ ತವರೂರಾದ ಥೈಲ್ಯಾಂಡಿನಲ್ಲಿ ಶೇಕಡ ತೊಂಭತ್ತೈದು ಜನರು ಬೌದ್ಧ ಧರ್ಮದ ಅನುಯಾಯಿಗಳು. ಈ ನಾಡಿನ ರಾಷ್ಟ್ರೀಯ ಲಾಂಛನ ಆನೆ, ಈ ನಾಡಿನ ಭೌಗೋಳಿಕ ಆಕಾರವೂ ಆನೆಯಾಕಾರವೇ ಇರುವುದು ಒಂದು ವಿಶೇಷವಾದ ಸಂಗತಿ.
ಜನಪ್ರಿಯ ಪ್ರವಾಸಿ ತಾಣವಾದ ಥೈಲ್ಯಾಂಡಿನಲ್ಲಿ ಸುಂದರವಾದ ಕಡಲತೀರಗಳು, ಪುರಾತನವಾದ ದೇಗುಲಗಳು ಇದ್ದು ಈ ನಾಡು ಅದ್ಭುತ ಸಂಸ್ಕೃತಿಯ ನೆಲೆವೀಡಾಗಿದೆ. ಬ್ಯಾಂಕಾಕಿನಲ್ಲಿ ಇರುವ ಸುಂದರವಾದ ವಾಸ್ತುಶಿಲ್ಪವುಳ್ಳ ರಾಜವಂಶದವರ ಪುರಾತನವಾದ ಅರಮನೆ ‘ಗ್ರ್ಯಾಂಡ್ ಪ್ಯಾಲೇಸ್’, ನದೀ ತೀರದಲ್ಲಿರುವ ದೇವಾಲಯ ‘ವಾಟ್ ಅರುಣ್’, ದೋಣಿಗಳ ಮೇಲೆ ವ್ಯಾಪಾರ ನಡೆಸುವ ತೇಲುವ ಮಾರುಕಟ್ಟೆಗಳು ಇತ್ಯಾದಿ. ಥೈಲ್ಯಾಂಡಿನ ಅತ್ಯಂತ ದೊಡ್ಡ ದ್ವೀಪವಾದ ‘ಪುಕೆಟ್’ ಕಡಲ ಕಿನಾರೆಯ ಸ್ವರ್ಗ. ಇಲ್ಲಿ ಪ್ರಶಾಂತವಾದ ಕಡಲ ತೀರಗಳಿವೆ, ವಾಟರ್ ಸ್ಪೋರ್ಟ್ ಗಳಿವೆ, ಬೆಟ್ಟದ ಮೇಲೆ ಬೃಹತ್ ಬುದ್ಧನ ವಿಗ್ರಹವಿದೆ. ‘ಪಟ್ಟಾಯ’ ನಗರವು ನೈಟ್‌ಲೈಫ್‌ಗೆ ಹಾಗೂ ಜಲಕ್ರೀಡೆಗಳಿಗೆ ಹೆಸರಾಗಿದೆ. ಇಲ್ಲಿರುವ ‘ಕೋಲಾರ್ನ್ ಹವಳದ ದ್ವೀಪ’ ಸುಣ್ಣದ ಕಲ್ಲಿನ ಬೆಟ್ಟಗಳಿಂದ ಕೂಡಿದ ಪ್ರಶಾಂತವಾದ ಪ್ರದೇಶ. ನೀಲ ವರ್ಣ ಪ್ರತಿಫಲಿಸುವ ಸಮುದ್ರ ಮತ್ತು ಬೆಟ್ಟಗಳು ಕಲಾವಿದನ ಕುಂಚದಿಂದ ಮೂಡಿ ಬಂದ ಕಲಾಕೃತಿಯಂತೆ ಕಾಣುತ್ತವೆ. ‘ಸ್ಯಾಂಕ್ಚುರಿ ಆಫ್ ಟ್ರುತ್’ ಸಂಪೂರ್ಣವಾಗಿ ಮರದಿಂದ ಕೆತ್ತಲಾದ ದೇಗುಲ. ಸಂಸ್ಕೃತಿ ಮತ್ತು ಪ್ರಕೃತಿಯನ್ನು ಬಿಂಬಿಸುವ ರಮಣೀಯವಾದ ‘ಚಿಯಾಂಗ್ ಮಾಯ್’ ನಗರದಲ್ಲಿ ನೂರಾರು ಪ್ರಾಚೀನ ಬೌದ್ಧ ದೇಗುಲಗಳಿವೆ. ಇಲ್ಲೊಂದು ಆನೆಗಳ ಸಂರಕ್ಷಣಾ ಕೇಂದ್ರವೂ ಇದೆ.
ನಾವು ಮೊದಲಿಗೆ ಥೈಲ್ಯಾಂಡಿನ ರಾಜವಂಶಸ್ಥರ ವಾಸಸ್ಥಾನವಾಗಿದ್ದ ‘ಗ್ರಾಂಡ್ ಪ್ಯಾಲೇಸ್’ ನೋಡಲು ಹೊರಟೆವು. ಈ ಭವ್ಯವಾದ ಅರಮನೆಯು ಬ್ಯಾಂಕಾಕಿನ ಚಾವೋ ಫ್ರಾಯಾ ನದಿ ತಟದಲ್ಲಿದೆ. ನಮ್ಮ ಪ್ರವಾಸಿ ತಂಡದ ಗೈಡ್ ಈ ಅರಮನೆಯ ಇತಿಹಾಸವನ್ನು ಹೇಳತೊಡಗಿದ, ‘1782 ರಲ್ಲಿ ನಿರ್ಮಿಸಲಾದ ಈ ಅರಮನೆಯು ಸುಮಾರು ನೂರೈವತ್ತು ವರ್ಷಗಳ ಕಾಲ ಥೈಲ್ಯಾಂಡ್ ರಾಜರ ವಾಸಸ್ಥಾನವಾಗಿತ್ತು, ಥಾಯ್ ಹಾಗೂ ಯೂರೋಪಿಯನ್ ಶೈಲಿಯ ವಾಸ್ತುಶಿಲ್ಪದ ಸಂಗಮವಾದ ‘ಚಕ್ರಿ ಮಹಾ ಪ್ರಸಾತ್ ಹಾಲ್’ ನಲ್ಲಿ ರಾಜವಂಶಸ್ಥರ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತವೆ. ಈ ಅರಮನೆಯು ಗೋಡೆಗಳ ಮೇಲಿರುವ ಚಿನ್ನದ ಕುಸುರಿ ಕೆಲಸ, ಗೋಪುರಗಳು, ಬಣ್ಣ ಬಣ್ಣದ ಗಾಜಿನ ಅಲಂಕಾರಿಕ ಚಿತ್ರಗಳು ಇವರ ಭವ್ಯವಾದ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ.. ಈ ಅರಮನೆಯ ಹೃದಯಭಾಗದಲ್ಲಿರುವ ಸುಂದರವಾದ ಪಚ್ಚೆಯ ಬುದ್ಧನ ವಿಗ್ರಹ ನೋಡುಗರ ಮನ ಸೆಳೆಯುವಂತಿದೆ. ಇಡೀ ವಿಗ್ರಹವನ್ನು ಹಸಿರು ವರ್ಣದ ಏಕಶಿಲೆಯಿಂದ ನಿರ್ಮಿಸಲಾಗಿದೆ. ಈ ವಿಗ್ರಹದ ಎತ್ತರ ಸುಮಾರು ಹತ್ತೊಂಬತ್ತು ಇಂಚುಗಳು. ಈ ಅಪರೂಪವಾದ ಪಚ್ಚೆಯ ಬುದ್ಧನ ವಿಗ್ರಹವನ್ನು ‘ವಾಟ್ ಫ್ರಾ ಕೈವ್’ ಎಂದು ಕರೆಯುವರು. ಥೈಲ್ಯಾಂಡಿನ ರಾಜವಂಶಸ್ಥರು ಈ ವಿಗ್ರಹದ ಚಿನ್ನದ ಉಡುಪನ್ನು ವರ್ಷಕ್ಕೆ ಮೂರು ಬಾರಿ ಬದಲಾಯಿಸುತ್ತಾರೆ, (ಮಳೆಗಾಲ, ಬೇಸಿಗೆ ಹಾಗೂ ಚಳಿಗಾಲ). ಈ ಅರಮನೆಯಲ್ಲಿರುವ ವಸ್ತು ಸಂಗ್ರಹಾಲಯ ಈ ರಾಜ ಮನೆತನದ ಭವ್ಯ ಇತಿಹಾಸ ಹಾಗೂ ಅದ್ಭುತ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.’ ನಮ್ಮ ಗೈಡ್‌ನ ಮಾತುಗಳನ್ನು ಕೇಳುತ್ತಾ ನಿಂತ ನನ್ನ ಕಣ್ಣ ಮುಂದೆ ಈ ಅರಸರು ಬಂದು ನಿಂತ ಹಾಗೆ ಎನ್ನಿಸಿತ್ತು.
ಈ ಅರಮನೆಯ ಸನಿಹದಲ್ಲಿರುವ ಮತ್ತೊಂದು ವಿಶಿಷ್ಠವಾದ ದೇಗುಲ ‘ವಾಟ್ ಅರುಣ್’. ಹಿಂದೂ ದೇವತೆ ಸೂರ್ಯನ ಸಾರಥಿಯಾದ ಅರುಣನ ಹೆಸರನ್ನು ಈ ದೇಗುಲಕ್ಕೆ ಇಡಲಾಗಿದೆ. ಒಂದಾನೊಂದು ಕಾಲದಲ್ಲಿ ಹಿಂದೂ ಪುರಾಣಗಳು ಈ ನಾಡಿನಾದ್ಯಂತ ಹರಡಿದ್ದಿರಬಹುದು. ಮುಂಜಾನೆ ಸೂರ್ಯನ ಕಿರಣಗಳು ಈ ದೇಗುಲದ ಮೇಲೆ ಬಿದ್ದಾಗ ಫಳಫಳನೇ ಹೊಳೆಯುವ ದೇಗುಲವನ್ನು ‘ಬೆಳಗಿನ ದೇಗುಲ’ವೆಂದೂ ಹೆಸರಿಸಿದ್ದಾರೆ. ಈ ದೇಗುಲದ ಮಧ್ಯಭಾಗದಲ್ಲಿ ಸುಮಾರು 80 ಅಡಿ ಗೋಪುರವಿದ್ದು, ಇದು ಖಮೇರ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ಗೋಪುರದ ಮೇಲೆ ಚೈನಾದ ಪಿಂಗಾಣಿ ಚೂರುಗಳಿಂದ ರಚಿಸಲಾದ ಸುಂದರವಾದ ಕಲಾಕೃತಿಗಳನ್ನು ಕಾಣಬಹುದು. ಗೋಪುರದ ಮೇಲ್ಭಾಗಕ್ಕೆ ಹೋಗಲು ಕಡಿದಾದ ಮೆಟ್ಟಿಲುಗಳು ಇದ್ದವು. ನಾವೂ ತುಸು ಶ್ರಮ ವಹಿಸಿ ಗೋಪುರದ ಮೇಲ್ಭಾಗಕ್ಕೆ ಹೋದೆವು. ಅಬ್ಬಾ, ಎಂತಹ ಸುಂದರವಾದ ದೃಶ್ಯ, ಚಾವೋ ಫ್ರಾಯಾ ನದಿಯ ವಿಹಂಗಮ ನೋಟ, ಸುತ್ತಮುತ್ತಲಿದ್ದ ನಗರಗಳು ನಮ್ಮ ಮನ ಸೆಳೆದಿದ್ದವು. ಅಲ್ಲಿದ್ದ ಸ್ಥಳೀಯರೊಬ್ಬರು, ‘ರಾತ್ರಿಯ ಸಮಯದಲ್ಲಿ ಈ ದೇಗುಲಕ್ಕೆ ದೀಪಾಲಂಕಾರ ಮಾಡುತ್ತಾರೆ, ಆಗ ನದಿಯ ನೀರಿನಲ್ಲಿ ಕಾಣುವ ಈ ದೇಗುಲದ ಸುಂದರವಾದ ಪ್ರತಿಬಿಂಬವನ್ನು ನೀವು ನೋಡಬೇಕು’ ಎಂದು ಹೇಳಿದರು. ಆದರೆ ನಮಗೆ ರಾತ್ರಿಯವರೆಗೆ ಕಾಯುವ ವ್ಯವಧಾನವಿರಲಿಲ್ಲ. ನಮ್ಮ ಕಲ್ಪನಾ ಲೋಕದಲ್ಲಿ ಈ ಅದ್ಭುತವಾದ ಬಿಂಬವನ್ನು ಕಾಣುತ್ತಾ ಅಲ್ಲಿಂದ ಮುಂದೆ ಹೊರಟೆವು.
ಅಲ್ಲಿಂಧ ನಾವು ‘ವಾಟ್ ಪೋ’ ದೇಗುಲಕ್ಕೆ ಬಂದೆವು. ಇದು ಅತ್ಯಂತ ಪುರಾತನವಾದ ದೇಗುಲ ಸಂಕೀರ್ಣ. ‘ಮಲಗಿರುವ ಬುದ್ಧನ ದೇಗುಲ’ ಸುಮಾರು 46 ಮಿಟರ್ ಉದ್ದ ಹಾಗೂ 15 ಮೀಟರ್ ಎತ್ತರವಿರುವ ಬೃಹತ್ ಬುದ್ಧನ ಪ್ರತಿಮೆ ಇದು. ಬುದ್ದನ ವಿಗ್ರಹದ ಪಾದಗಳ ಮೇಲೆ ಮುತ್ತಿನ ಚಿಪ್ಪುಗಳಿಂದ ಅಲಂಕರಿಸಲ್ಪಟ್ಟ ಕಲಾಕೃತಿಗಳು ಇವೆ. ಬುದ್ಧನು ನಿರ್ವಾಣಕ್ಕೆ ಹೋಗುವ ಮುನ್ನ ಈ ಭಂಗಿಯಲ್ಲಿ ಮಲಗಿರುವನು ಎಂಬ ನಂಬಿಕೆ ಬೌದ್ಧರಲ್ಲಿದೆ. ಈ ಸಂಕೀರ್ಣದಲ್ಲಿ ಸಾವಿರಕ್ಕೂ ಹೆಚ್ಚು ಬುದ್ಧನ ಪ್ರತಿಮೆಗಳಿದ್ದು, ಒಂದೊಂದು ಮೂರ್ತಿಯೂ ಒಂದೊಂದು ಭಂಗಿಯಲ್ಲಿದೆ. ಬಣ್ಣ ಬಣ್ಣದ ಪಿಂಗಾಣಿ ಚೂರುಗಳಿಂದ ಅಲಂಕರಿಸಲ್ಪಟ್ಟ 91 ಪುಟ್ಟ ಸ್ತೂಪಗಳು ಮತ್ತು ನಾಲ್ಕು ದೊಡ್ಡ ಸ್ತೂಪಗಳು ಇವೆ. ಈ ಸ್ಥಳವು ಥೈಲ್ಯಾಂಡಿನ ಮೊಟ್ಟ ಮೊದಲ ವಿಶ್ವವಿದ್ಯಾಲಯವಾಗಿತ್ತು. ಮತ್ತೊಂದು ವಿಶೇಷತೆ ಎಂದರೆ ಇದು ‘ಥಾಯ್ ಮಸಾಜ್’ನ ಜನ್ಮಸ್ಥಲ. ಇಲ್ಲಿ ಆಸಕ್ತರಿಗೆ ಮಸಾಜ್ ಕಲಿಸುವ ತರಬೇತಿ ಸಂಸ್ಥೆಗಳೂ ಇವೆ. ಮಸಾಜ್ ಮಾಡಿಸಿಕೊಳ್ಲಲು ಕಾತುರರಾಗಿದ್ದ ರಮೇಶ್ ತಮ್ಮ ಗೆಳೆಯರಾದ ಮೋಹನ್‌ರವರ ಜೊತೆ ಒಂದು ಮಸಾಜ್ ಕೇಂದ್ರವನ್ನು ಹೊಕ್ಕರು. ಒಂದು ಗಂಟೆಗೆ ಇನ್ನೂರು ಬಾಟ್, ಅದೂ ಕೇವಲ ಕಾಲುಗಳಿಗೆ ಮಾತ್ರ ಮಸಾಜ್ ಮಾಡಲು ಇದ್ದ ದರ ಎಂದು ಹೇಳಿದರು. ಮಸಾಜ್ ಮಾಡಿಸಿಕೊಂಡು ಬಂದವರನ್ನು, ಉಳಿದವರು ಲೇವಡಿ ಮಾಡುತ್ತಾ ನಗುವಿನ ಹೊನಲನ್ನೇ ಹರಿಸಿದರು. ‘ಥಾಯ್ ಮಸಾಜ್’ ವಿಶ್ವದೆಲ್ಲೆಡೆ ಹೆಸರು ಮಾಡಿರುವ ಪ್ರಖ್ಯಾತವಾದ ಮಸಾಜ್ ಎಂದು ನಮ್ಮ ಗೈಡ್ ಹೇಳಿದರು.
ನಾವು ಥೈಲ್ಯಾಂಡಿನಲ್ಲಿ ಗಮನಿಸಿದ ಪ್ರಮುಖವಾದ ಅಂಶವೆಂದರೆ – ಥೈಲ್ಯಾಂಡಿನ ಇತಿಹಾಸದಲ್ಲಿ ಭಾರತೀಯ ಸಂಸ್ಕೃತಿ, ಬೌದ್ಧ ಮತ್ತು ಹಿಂದೂ ಧರ್ಮ ಹಾಗೂ ವಾಸ್ತುಶಿಲ್ಪದ ಗಾಢ ಪ್ರಭಾವವನ್ನು ಗುರುತಿಸಬಹುದು. ಥೈಲ್ಯಾಂಡಿನ ಪುರಾತನ ಅರಮನೆಗಳು ಹಾಗೂ ದೇಗುಲಗಳು ಭಾರತೀಯ ವಾಸ್ತುಶಿಲ್ಪವನ್ನೇ ಹೋಲುತ್ತವೆ. ಹದಿಮೂರನೆಯ ಶತಮಾನದಲ್ಲಿದ್ದ ಸುಖೋಥೈ ಸಾಮ್ರಾಜ್ಯ ಥೈಲ್ಯಾಂಡಿನ ‘ಸುವರ್ಣಯುಗ’ ಎಂದೇ ಪರಿಗಣಿಸಲ್ಪಟ್ಟಿದೆ. ಅಂದು ಭಾರತದಲ್ಲಿ ನಡೆದ ‘ಭಕ್ತಿ ಚಳುವಳಿ’ ಮತ್ತು ‘ವಚನ ಸಾಹಿತ್ಯ’ ಸಮಾಜದ ಮೇಲೆ ಗಾಢ ಪ್ರಭಾವ ಬೀರಿದ್ದವು. ಶರಣರು ಮತ್ತು ಭಕ್ತಿಪಂಥದವರು ಹೇಗೆ ಸಮಾಜವನ್ನು ಸುಧಾರಿಸಲು ಶ್ರಮಿಸಿದರೋ ಹಾಗೆಯೇ ಥೈಲ್ಯಾಂಡಿನಲ್ಲಿ ಬೌದ್ಧ ಭಿಕ್ಷುಗಳು ಶಿಕ್ಷಣ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹದಿನಾಲ್ಕನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೆ ಥೈಲ್ಯಾಂಡನ್ನು ಆಳಿದ ಆಯುತ್ಥಾಯ ಸಾಮ್ರಾಜ್ಯದ ಅರಸರು ಸಶಕ್ತವಾದ ದೇಶವನ್ನು ಕಟ್ಟಿದ್ದರು. ಈ ಹೆಸರು ನಮ್ಮ ನಾಡಿನ ‘ಅಯೋಧ್ಯೆ’ಯನ್ನು ನೆನಪಿಸುವುದಲ್ಲವೇ? ಹೌದು, ಈ ವಿಷಯಕ್ಕೆ ಪೂರಕವಾದ ಮತ್ತೊಂದು ಸ್ವಾರಸ್ಯಕರವಾದ ಅಂಶವೆಂದರೆ–ಥೈಲ್ಯಾಂಡಿನ ಶುಭಾಶಯಗಳು ಸರ್ ಮಹಾಕಾವ್ಯ ‘ರಾಮಕೀನ್’ ನಮ್ಮ ಮಹಾಕಾವ್ಯ ‘ರಾಮಾಯಣ’ದ ರೂಪಾಂತರವಾಗಿದೆ. ಹದಿನೆಂಟನೇ ಶತಮಾನದಿಂದ ಆಳುತ್ತಿರುವ ರಾಜವಂಶದವರ ಹೆಸರು ‘ರಾಮ’ ಎಂದೇ. ಇಂದಿನ ರಾಜನ ಹೆಸರು ‘ರಾಮ x’ ಅಂದರೆ ಹತ್ತನೆಯ ರಾಮ. ಥೈಲ್ಯಾಂಡಿನ ಸಾಂಸ್ಕೃತಿಕ ನೃತ್ಯ ರೂಪಕಗಳು ರಾಮಾಯಣದಲ್ಲಿ ಬರುವ ಘಟನೆಗಳ ಆಧಾರದ ಮೇಲೆಯೇ ರೂಪುಗೊಂಡಿವೆ. ಪುರಾತನ ಕಾಲದಲ್ಲಿ ಭಾರತ ಮತ್ತು ಥೈಲ್ಯಾಂಡಿನ ನಡುವೆ ಇದ್ದ ಸಂಬಂಧ ಮತ್ತು ಬಾಂಧವ್ಯದ ಬಗ್ಗೆ ನನ್ನವರೊಡನೆ ಚರ್ಚಿಸುತ್ತಾ ನಾವು ವಸತಿಗೃಹಕ್ಕೆ ಹಿಂದಿರುಗಿದೆವು.
(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45278

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

