ದಶಮ ಸ್ಕಂದ ಪೂರ್ವಾರ್ಧ – ಅಧ್ಯಾಯ – 4
ಧೇನುಕಾಸುರ ವಧೆ
ಬಲರಾಮ ಕೃಷ್ಣರು ಕೌಮಾರ ವಯಸ್ಸು ಕಳೆದು
ಪೌಗಂಡ ವಯಸ್ಸಿಗೆ ಬಂದು ವೃಂದಾವನದ
ಸಕಲ ಸ್ಥಳವ ತಮ್ಮ ಪಾದಸ್ಪರ್ಶದಿ ಪಾವನಗೊಳಿಸಿ
ಕೃಷ್ಣ ತನ್ನ ಕೊಳಲ ದನಿಯಿಂದ ಗೋವುಗಳಾಕರ್ಷಿಸಿ
ಮನೋಹರ ವನಪ್ರವೇಶವ ಹೊಕ್ಕು
ಯೋಗಿ ಜನರ ಮನದಂತೆ ಸ್ವಚ್ಛವಾದ ಸರೋವರದ
ಮಧ್ಯೆ ದಿವ್ಯ ತಾವರೆ ಪುಷ್ಪ ಫಲಪುಷ್ಪಗಳಿಂದ ಭರಿತವಾದ
ವೃಕ್ಷ ಸಮೂಹ ಪಕ್ಷಿಗಳು ದುಂಬಿಗಳು ಕಾಡುಮೃಗಗಳು
ವಿಹರಿಪ ತಾಣದಲಿ ಅಣ್ಣ ಬಲರಾಮ ವಿಶ್ರಮಿಸಲು ಮಲಗಿರೆ
ಅವನ ಕಾಲನೊತ್ತುತ ಒಮೊಮ್ಮೆ ಗೋಪಾಲಕನೊಬ್ಬನ
ತೊಡೆಯ ಮೇಲೆ ತಲೆಯಿಟ್ಟು ಕೃಷ್ಣ
ಗುಂಪಿಗೆಲ್ಲ ಚೇತನ ಕೇಂದ್ರವಾಗಿ ವಿಹರಿಸಿದ
ಸಮೀಪದ ತಾಳೆಯ ತೋಪಿನಲ್ಲಿರ್ಪ ರುಚಿಕರ ತಾಳೆಯ ಫಲಗಳ
ಭುಜಿಸಬೇಕೆಂಬ ಬಯಕೆಯಾದರೂ ಅಲ್ಲಿದ್ದ
ಧೇನುಕನೆಂಬ ಕತ್ತೆಯ ರೂಪದ ರಕ್ಕಸನ
ಕ್ರೂರತೆಗೆ ಬೆದರಿ ಗೋಪಬಾಲಕರು ಹಿಂಜರಿದರೂ
ಬಲರಾಮ ಕೃಷ್ಣರು ಆ ವನವ ಸೇರಿ
ಬಲರಾಮನು ತಾಳೆಯ ಮರವ ಬಲವಾಗಿ ಅಲುಗಾಡಿಸೆ
ತಾಳೆಯ ಹಣ್ಣುಗಳುದುರಿದ ಶಬ್ಧಕೆ
ಧೇನುಕ ಅಬ್ಬರದಿ ಬಲರಾಮನ ಒದೆಯೆ
ಅದಲೆಕ್ಕಿಸದೆ ಅವನ ಹಿಂಗಾಲುಗಳೆರಡನು ಹಿಡಿದು
ತನ್ನ ತಲೆಯ ಸುತ್ತ ಗಿರಗಿರನೆ ತಿರುಗಿಸೆ
ಉಸಿರುಗಟ್ಟಿ ಪ್ರಾಣಬಿಟ್ಟ ಧೇನುಕ
ನಾಯಕ ಧೇನುಕಾಸುರನಿಗಾದ ಗತಿಯ ಕಂಡು
ಆಕ್ರಮಿಸಿದ ಅವನ ಅನುಚರರನೂ
ಕೃಷ್ಣ ಬಲರಾಮರು ಯಮಪುರಿಗೆ ಕಳುಹಿಸಿದರು
ತಾಳೆಯ ವನವ ನಿಷ್ಕಂಟಕವನ್ನಾಗಿಸಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44491

-ಎಂ. ಆರ್. ಆನಂದ, ಮೈಸೂರು

