ಎಲ್ಲೂ ಪಯಣಿಸದೇ ನೆಲದಲೇ ಬೇರು ಕಚ್ಚಿದಂತೆ ನಿಂತಲ್ಲಿಯೇ ಕುಂತಾಗ
ಪುಸ್ತಕವೊಂದರ ಪುಟಗಳಲಿ ನೀ ಮೊಗವಿಟ್ಟು ಓದದೇ ಮಗುಮ್ಮಾದಾಗ
ಜೀವಭಾವದ ಏರಿಳಿತಗಳ ಸಶಬ್ದಕೆ ಕಿವಿಗೊಡದೆ ಅಸೂಕ್ಷ್ಮ ಮತಿಯಾದಾಗ
ಸ್ವತಃ ನಿನ್ನನು ಯಾವ ಪರಾಮರ್ಶೆಗೂ ಒಳಪಡಿಸಿ ಕೊಳ್ಳದೇ ಸ್ಥಗಿತವಾದಾಗ
ನಿನ್ನಮೂಲ್ಯ ಆತ್ಮಗೌರವವನು ಹರಾಜಿಗಿಟ್ಟು ಬೇಕಾಬಿಟ್ಟಿ ಬದುಕಿ ಬಿಟ್ಟಾಗ
ಸಹಬಾಳ್ವೆ ಮರೆತು ಏಕಾಕಿತನದ ಗೋಡೆ ಕಟ್ಟಿಕೊಂಡು ವಾಸ ಮಾಡುವಾಗ
ನಿಸ್ತೇಜವೆನಿಪ ಹಳೆಯ ಪ್ರವೃತ್ತಿಗಳಿಗೇ ಲಗತ್ತಾಗಿ ಅದರ ಗುಲಾಮನಾದಾಗ
ಹೊಸದಾರಿಯನು ಅನ್ವೇಷಿಸದೇ ಹಳೆಯ ದಾರಿಯಲೇ ನಡೆದು ಬಿಟ್ಟಾಗ
ಹೊಸತಿಗೆ ತುಡಿಯದೇ ಹೊಸ ಸ್ನೇಹಕ್ಕೆ ಮಿಡಿಯದೇ ನಿಂತ ನೀರಾದಾಗ
ಜೀವಿತದಲಿ ಘಟಿಸುವ ಏನೆಲ್ಲಾ ಸಂಭವಗಳಿಗೆ ಒಳಿತು ಕೆಡುಕುಗಳಿಗೆ
ಮುಖಾಮುಖಿಯಾಗದೇ ಸತ್ವ ಕಳೆದುಕೊಂಡು ಅಧೀರನಾದಾಗ
ತೀವ್ರತರ ಭಾವಗಳ ಹೃದಯಪೂರ್ವಕವಾಗಿ ಸ್ವೀಕರಿಸದೇ ಹೋದಾಗ
ಸುರಕ್ಷಿತ ವಲಯದಿಂದೀಚೆ ಬಂದು ಅಪರಿಚಿತಕ್ಕೆ ಎದುರಾಗದಿದ್ದಾಗ
ಮಾಡುವ ಕೆಲಸದಲಿ ತೃಪ್ತಿ ಕಾಣದೆ ನೀರಸವೇ ಯಾಂತ್ರಿಕವಾದಾಗ
ಕನಸುಗಳ ಕಚಗುಳಿಗೆ ಸ್ವಲ್ಪವಾದರೂ ಭಾವುಕವಾಗದೇ ಹೋದಾಗ
ಕನಿಷ್ಠ ಒಮ್ಮೆಯಾದರೂ ಎದೆಯ ಪಿಸುದನಿಗೆ ಓಗೊಡದೇ ಇದ್ದಾಗ
ಬುದ್ಧಿ ತರ್ಕಿಸುವ ಎಲ್ಲವನೂ ತೆಗೆದಿರಿಸಿ,
ಕರುಳ ಕೂಗಿಗೆ ಸ್ಪಂದಿಸದೇ ಹೋದಾಗ
ನಿನಗೆ ನೀನೇ ಅಪರಿಚಿತನಾಗಿ ಬಿಟ್ಟಾಗ
ನಿಧಾನವಾಗಿ ನೀ ಸಾಯಲಾರಂಭಿಸುವೆ !
ಮೂಲ : ಚಿಲಿ ದೇಶದ ರಾಷ್ಟ್ರೀಯ ಕವಿ ಪಾಬ್ಲೊ ನೆರೂಡಾ
ಇಂಗ್ಲಿಷ್ ಅವತರಣಿಕೆ : ಮಾರ್ತಾ ಮೆಡಿರೋಸ್
ಕನ್ನಡಕ್ಕೆ : ಡಾ. ಹೆಚ್ ಎನ್ ಮಂಜುರಾಜ್, ಮೈಸೂರು


