(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
09/09/2025 ರಂದು ಬಾಲಿಯಲ್ಲಿ ನಮ್ಮ ಪ್ರವಾಸದ ಕೊನೆಯ ದಿನ. ಅಂದು ಮುಂಜಾನೆ, ಸಣ್ಣಗೆ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಎಚ್ಚರವಾಯಿತು. ಬಾಲಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಿರಂತರವಾಗಿ ಮಳೆ ಸುರಿಯುವುದು ಬಹಳ ಅಪರೂಪ, ಕೆಲವೊಮ್ಮೆ ಹೀಗೆ ರಚ್ಚೆ ಹಿಡಿದ ಮಳೆ ವಾರಗಟ್ಟಲೆ ಇರುತ್ತದೆ ಎಂದು ಹೋಂ ಸ್ಟೇ ಯ ಸಿಬ್ಬಂದಿ ಹೇಳಿದರು. ಆಗಲೇ ನಮ್ಮ ಪಟ್ಟಿಯಲ್ಲಿದ್ದ ಹೆಚ್ಚಿನ ಸ್ಥಳಗಳಿಗೆ ಭೇಟಿ ಕೊಟ್ಟಾದ ಕಾರಣ, ಅಂದು ಸಾಧ್ಯವಿರುವಷ್ಟು ಸ್ಥಳಗಳಿಗೆ ಭೇಟಿ ಕೊಟ್ಟರಾಯಿತು ಎಂದು ನಿರ್ಧರಿಸಿದೆವು.
ಬೆಳಗಿನ ಉಪಾಹಾರವಾಗಿ ಬಿಸಿ ಬಿಸಿ ಪೊಂಗಲ್ ಬಡಿಸಿದ ರಾಕೇಶ್ ಅವರು ಮಧ್ಯಾಹ್ನದ ಊಟಕ್ಕೆ ಅನ್ನ, ಹುಳಿ, ಪಲ್ಯ, ಮಜ್ಜಿಗೆ ಸಿದ್ದಪಡಿಸಿ ವ್ಯಾನ್ ನಲ್ಲಿ ಇರಿಸಿದರು. ಮಳೆಯ ಸಿಂಚನದೊಂದಿಗೆ ಮೊದಲು ಹತ್ತಿರದಲ್ಲಿ ಇದ್ದ ದೊಡ್ಡ ಮಾರುಕಟ್ಟೆಗೆ ಹೋದೆವು. ಹೂವು, ಹಣ್ಣು, ದಿನಸಿ, ಪೂಜಾ ವಸ್ತುಗಳು, ತೆಂಗಿನ ಗರಿ ಹಾಗೂ ಬಿದಿರಿನ ಕರಕುಶಲ ವಸ್ತುಗಳು, ನಾನಾ ತರದ ಗೃಹೋಪಯೋಗಿ ವಸ್ತುಗಳಿದ್ದ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಸಮ್ಮಿಶ್ರ ಸುವಾಸನೆ ಆವರಿಸಿತ್ತು. ಆವರಣ ಸ್ವಚ್ಚವಾಗಿತ್ತು. ಮಳೆ ಇದ್ದ ಕಾರಣ ಜನ ಅಲ್ಲಲ್ಲಿ ನಿಂತಿದ್ದರು. ಕೆಲವು ದಶಕಗಳ ಮೊದಲು ಮೈಸೂರಿನ ದೇವರಾಜ ಮಾರುಕಟ್ಟೆ ಹೀಗೆಯೇ ಇತ್ತು ಅನಿಸಿತು. ನಾವು ಕೆಲವರು ಸ್ಥಳೀಯ ಹಣ್ಣುಗಳು, ಅಗರಬತ್ತಿ ಇತ್ಯಾದಿ ಸಣ್ಣ ಪುಟ್ಟ ವ್ಯಾಪಾರ ಮಾಡಿದೆವು. ಇಲ್ಲಿ ಕ್ರೆಡಿಟ್ ಕಾರ್ಡ್ ಕೆಲಸ ಮಾಡಲಿಲ್ಲ. ಇಂಡೋನೇಶ್ಯಾದ ರೂಪಾಯಿಗಳನ್ನೇ ಕೊಡಬೇಕಿತ್ತು.
ತೆಗೆನುಂಗನ್ ಜಲಪಾತ
ಅಂದು ಬಾಲಿಯಲ್ಲಿ ನಮ್ಮ ಪ್ರವಾಸದ ಕೊನೆಯ ದಿನ ಎಂಬ ಪ್ರಜ್ಞೆಯಿಂದ ನಾವು ನಮ್ಮ ಪಟ್ಟಿಯಲ್ಲಿ ಮೂರನೆಯ ದಿನಕ್ಕೆ ನಿಗದಿಯಾಗಿದ್ದ ತೆಗೆನುಂಗನ್ ಜಲಪಾತಕ್ಕೆ ಕರೆದುಕೊಂಡು ಹೋಗಲಿಲ್ಲವೇಕೆ, ಎಂಬ ಇಂಗಿತದಿಂದ ಮಾರ್ಗದರ್ಶಿ ಮುದ್ದಣನಿಗೆ ಜ್ಞಾಪಿಸಿದೆವು. ಅದಕ್ಕೇನಂತೆ, ಹತ್ತಿರದಲ್ಲಿಯೇ ಇದೆ, ಈವತ್ತು ಹೋದರಾಯಿತು ಎಂದ. ನಾವುಗಳೋ ಗೆದ್ದೆವೆಂಬಂತೆ ಬೀಗಿದೆವು. ಸುಮಾರು ಅರ್ಧ ಗಂಟೆ ಪ್ರಯಾಣಿಸಿ, ಬಾಲಿಯ ಪೆಟಾನು ನದಿಯು ಸೃಷ್ಟಿಸಿದ ‘ತೆಗೆನುಂಗನ್ ಜಲಪಾತ Tegenugun Falls’ ತಲಪಿದಾಗ ಇಷ್ಟೇನಾ ಅನಿಸಿದ್ದು ಸುಳ್ಳಲ್ಲ. ಅದೊಂದು ಚಿಕ್ಕ ಜಲಪಾತ. ನಮ್ಮ ಕರಾವಳಿ, ಮಲೆನಾಡುಗಳಲ್ಲಿ ಮಳೆಗಾಲದಲ್ಲಿ ಇಂತಹ ಹಲವಾರು ಹೆಸರಿಲ್ಲದ ಜಲಪಾತಗಳು ಸೃಷ್ಟಿಯಾಗುತ್ತವೆ. ಆದರೆ, ಇವರು ಚಿಕ್ಕ ಜಲಪಾತದ ಪಕ್ಕದಲ್ಲಿ ತೂಗು ಸೇತುವೆ, ಹಕ್ಕಿ ಗೂಡಿನಂತಹ ರಚನೆಗಳು , ಉದ್ಯಾನ ಇತ್ಯಾದಿ ಅಚ್ಚುಕಟ್ಟಾಗಿ ನಿರ್ಮಿಸಿ ಸೊಗಸಾದ ಪ್ರವಾಸಿ ಆಕರ್ಷಣೆಯಾಗಿ ಮಾಡಿದ್ದಾರೆ. ಇದಕ್ಕಾಗಿ ನಮ್ಮ ಮೆಚ್ಚುಗೆ.
ನಮ್ಮ ಪ್ರಯಾಣ ಮುಂದುವರಿದು ಪುರಾ ಪೇಶ ದೇವಾಲಯ, ಪುರ ದಾಸರ್, ಪುರಾ ಬಟುವ ಎಂಬ ದೇವಾಲಯಗಳಿಗೂ ಭೇಟಿ ಕೊಟ್ಟೆವು. ಹೆಚ್ಚಿನ ದೇವಾಲಯದ ವಾಸ್ತು ಸ್ವರೂಪ ಒಂದೇ ಬಗೆಯದಾಗಿದ್ದು,
ನಾವು ಅದಾಗಲೇ ನೋಡಿದ್ದ ದೇವಾಲಯಗಳಂತೆಯೇ ಬಿಡಿ ಬಿಡಿಯಾದ ಗುಡಿಗಳ ಸಮುಚ್ಚಯವಾಗಿದ್ದುವು. ನಿರಂತರವಾಗಿ ಸುರಿಯುತ್ತಿದ್ದ ಮಳೆ, ಭಾಷೆಯ ತೊಡಕು, ನಮಗೆ ಉಚ್ಚರಿಸಲು ಕಷ್ಟವಾಗುವ ಹೆಸರುಗಳಿಂದಾಗಿ ಹೆಚ್ಚಿನ ವಿವರ ತಿಳಿಯಲೂ ಆಸಕ್ತಿ ಇಲ್ಲವಾಗಿತ್ತು. ಪುರಾ ಬಟುವಾ ದೇವಾಲಯದ ಆವರಣದಲ್ಲಿ ವಿಶಾಲವಾದ ಕೆರೆಯಿತ್ತು. ನಾವು ಮೊದಲು ನೋಡಿದ್ದ ‘ತೀರ್ಥ’ ಎಂಪುಲ್’ ನಂತೆ ಇಲ್ಲಿಯೂ ನಲ್ಲಿಗಳ ಮೂಲಕ ನೀರನ್ನು ಹರಿಸಿದ್ದರು. ಅಲ್ಲಿ ಒಂದೆರಡು ಕಡೆ ಸ್ಥಳೀಯ ಹಣವೂ ಇತ್ತು. ನದಿ,ಕೆರೆಗಳಿಗೆ ಹಣ ಹಾಕುವ ಪದ್ಧತಿ ಅಲ್ಲಿಯೂ ಇದೆ ಎಂದಾಯಿತು.
‘ನೈಪಿ'(Nyepi)
ಬಾಲಿಯವರು ತಮ್ಮ ‘ಶಕ ವರ್ಷ’ದ ಆರಂಭ ದಿನವನ್ನು ‘ನೈಪಿ’ ಎಂದು ಕರೆಯುತ್ತಾರೆ. ಆ ದಿನವನ್ನು ‘ನಿಶ್ಶಬ್ದ ದಿನ’ ವನ್ನಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಮವಾಸ್ಯೆಯಂದು ನಿಗದಿಪಡಿಸುತ್ತಾರೆ. ಈ ದಿನದ ವಿಶೇಷವೇನೆಂದರೆ , ಇಡೀ ದ್ವೀಪದಲ್ಲಿ ಎಲ್ಲಾ ಪ್ರಯಾಣ, ವಾಣಿಜ್ಯ, ಸಾರಿಗೆ, ಶಾಲಾ, ಕಾಲೇಜು,ಆಫೀಸು, ಮನೋರಂಜನೆ, ಟಿವಿ, ವಿಮಾನ ನಿಲ್ದಾಣ…..ಹೀಗೆ ಪ್ರತಿಯೊಂದೂ ತಟಸ್ಥವಾಗುತ್ತದೆ. ಜನರು ೨೪ ಗಂಟೆಗಳ ಕಾಲ ನಿಶ್ಶಬ್ದವಾಗಿ ಯಾವುದೇ ದೈನಂದಿನ ಕೆಲಸಗಳನ್ನು ಮಾಡದೆ, ಏನೂ ಮಾತನಾಡದೆ, ದೇವಾರಾಧನೆ ಮಾಡುತ್ತಾ ಕಾಲ ಕಳೆಯುತ್ತಾರೆ. ದುಷ್ಟ ಶಕ್ತಿಗಳನ್ನು ದೂರವಿರಿಸಿ, ಮುಂಬರುವ ವರ್ಷಕ್ಕಾಗಿ ಇಡೀ ದ್ವೀಪವನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಇದು ಎಂಬು ಅವರ ನಂಬಿಕೆ. ಇಂತಹ ವಿಶೇಷದಿನದ ಅನುಭವ ಪಡೆಯಬೇಕೆಂದು ಇತ್ತೀಚೆಗೆ ವಿದೇಶಿಗರು ಬರುತ್ತಾರಂತೆ. ಅವರೂ ನಿಶ್ಶಬ್ದ ದಿನದ ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ. ಕ್ಯಾಲೆಂಡರ್ ವರ್ಷದ ಮೊದಲ ಕ್ಷಣ ಆರಂಭವಾಗುವ ವರೆಗೂ ಧ್ವನಿವರ್ಧಕದಲ್ಲಿ ಹಾಡು ಬಿತ್ತರಿಸಿ ಹಾಡಿ ಕುಣಿಯುವ ಪ್ರವೃತ್ತಿ ವ್ಯಾಪಕವಾಗಿರುವ ಈ ದಿನಗಳಲ್ಲಿ ಇದು ನಿಜಕ್ಕೂ ಅದ್ಭುತ.
ಇಂಡೋನೇಶ್ಯಾದಲ್ಲಿ ಬಾಲಿಯವರು ‘ಸಂತೋಷದಿಂದ ಬಾಳುವವರು’ ಎಂದು ಖ್ಯಾತರಂತೆ. ನಾವು ಅಲ್ಲಿದ್ದ ಸಮಯ ಎಲ್ಲೆಡೆಯೂ ನಗುಮುಖದವರೇ ಕಾಣಿಸಿದ್ದರು. ಕೃಷಿ ಮತ್ತು ಪ್ರವಾಸೋದ್ಯಮ ಇವರ ಮುಖ್ಯ ಆದಾಯದ ಮೂಲ. ಪ್ರವಾಸಿಗಳನ್ನು ಆದರದಿಂದ ಕಾಣುತ್ತಾರೆ. ಏನಾದರೂ ಕೇಳಿದರೆ ವಿನೀತ ದೇಹಭಾಷೆಯಿಂದ, ನಗುಮುಖದಿಂದ ಉತ್ತರಿಸುತ್ತಾರೆ. ಅಲ್ಲಿ ನಾವಿದ್ದಷ್ತು ದಿನಗಳಲ್ಲಿ ಸ್ಥಳೀಯ ಪರಸ್ಪರ ಏರುದನಿಯಲ್ಲಿ ಮಾತನಾಡುವುದು, ವ್ಯಾಪಾರಕ್ಕಾಗಿ ಕಿರುಚಾಡುವುದು, ರಸ್ತೆಯಲ್ಲಿ ತಳ್ಳಿಕೊಂಡು ಹೋಗುವುದು ಇತ್ಯಾದಿ ನನ್ನ ಗಮನಕ್ಕೆ ಬಂದಿಲ್ಲ. ಒಟ್ಟಿನಲ್ಲಿ ಸರಳ ಜೀವನ, ಶಿಸ್ತಿನ ದೇವತಾರಾಧನೆ, ಕೂಡುಕುಟುಂಬದ ಸಂಸ್ಕೃತಿ, ಹಂಚಿ ಬಾಳುವ ಪದ್ಧತಿ, ಪ್ರಕೃತಿಯ ಆರಾಧನೆ ಮತ್ತು ಸಂರಕ್ಷಣೆ, ಅತಿ ನಿರೀಕ್ಷೆ ಇಲ್ಲದ ಮಧ್ಯಮ ವರ್ಗದ ಜೀವನ ಶೈಲಿ ಇವರ ನೆಮ್ಮದಿಯ ಸೂಚ್ಯಂಕಕ್ಕೆ ಕಾರಣವಾಗಿರಬಹುದು ಅನಿಸಿತು.
ಮಳೆ ನಮ್ಮನ್ನು ಹಿಂಬಾಲಿಸುತ್ತಲೇ ಇತ್ತು. ನಮ್ಮ ದೇಶದ ಕರಾವಳಿಯ ಮುಸಲ ಧಾರೆ ಮಳೆ, ಬಯಲುಸೀಮೆಯ ಸೋನೆಮಳೆ, ಮುಂಗಾರಿನ ಮಿಂಚು ಗುಡುಗಿನ ಹಿಮ್ಮೇಳದ ಅಬ್ಬರದ ಮಳೆ, ಗಾಳಿಯ ಭೋರ್ಗರೆತದೊಂದಿಗಿನ ಎರಚಲು ಮಳೆ, ಹಿಮಾಲಯದ ಮಂಜಿನ ಮಳೆ ನೋಡಿದ್ದ ನನಗೆ, ಕಳೆದ ೨೪ ಗಂಟೆಗಳಿಂದ ನಿರಂತರವಾಗಿ ಆಕಾಶದಲ್ಲಿ ಶವರ್ ಬಾತ್ ಇದೆಯೋ ಎಂಬಂತೆ ಒಂದೇ ಗತಿಯಲ್ಲಿ ಸರಳ ರೇಖೆಯಂತೆ ಸುರಿಯುತ್ತಿದ್ದ ಮಳೆ ನೋಡಿ ಅಚ್ಚರಿಯಾಯಿತು. ಸಂಜೆಯಾಯಿತು, ರಾತ್ರಿಯಾಯಿತು. ಇದೇ ರೀತಿ ಮಳೆ ಬಂದರೆ ನಾಳೆ ನಮಗೆ ಬೆಂಗಳೂರಿಗೆ ಹೊರಡಲಿರುವ ವಿಮಾನ ರದ್ದಾಗಬಹುದೇ ಎಂಬ ಆತಂಕದಲ್ಲಿಯೇ ನಿದ್ರಿಸಿದೆವು.
ಮರುದಿನ (10/09/2025) ಬೆಳಗ್ಗೆ ಕಾಫಿ ಕುಡಿದು , ಲಗೇಜು ಸಮೇತ ಸಿದ್ಧರಾಗಿ, ‘ಅಮರ್ಥ’ ಹೋಂ ಸ್ಟೇಯ ಮಾಲಿಕರಿಗೆ ಧನ್ಯವಾದ ಹೇಳಿ ವಿಮಾನ ನಿಲ್ದಾಣಕ್ಕೆ ಹೊರಟೆವು. ಮಳೆ ಇನ್ನೂ ಸುರಿಯುತ್ತಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ತೊಂದರೆಯೇನಿಲ್ಲ ಎಂದು ಗೊತ್ತಾಯಿತು. ಬಾಲಿಯ ವಿಮಾನ ನಿಲ್ದಾಣ ತಲಪಿದ ಮೇಲೆ ಅದುವರೆಗೆ ನಮ್ಮೊಂದಿಗೆ ಇದ್ದ ಮಾರ್ಗದರ್ಶಿ ಮುದ್ದಣನಿಗೆ ಕಿರುಕಾಣಿಕೆ ಕೊಟ್ಟು ಬೀಳ್ಕೊಂಡೆವು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆಗಿ ಸುತ್ತಾಡುತ್ತಿದ್ದಾಗ ಅಲ್ಲಲ್ಲಿ ಆಂಜನೇಯ, ಕುಂಭಕರ್ಣ ಮೊದಲಾದ ಮೂರ್ತಿಗಳು ಕಾಣಸಿಕ್ಕಿದುವು. ಒಂದೆಡೆ ಬಣ್ಣದ ವೇಷ ತೊಟ್ಟ ವ್ಯಕ್ತಿ ನಗುಮುಖದಿಂದ ಸ್ವಾಗತಿಸಿದರು. ಅವರೊಂದಿಗೆ ಪ್ರವಾಸಿಗರು ಫೊಟೊ ಕ್ಲಿಕ್ಕಿಸುತ್ತಿದ್ದರು. ಆತ ‘ರಾವಣ’ ಪಾತ್ರಧಾರಿಯಂತೆ. ರಾವಣ ಇಷ್ಟು ಸೌಮ್ಯವಾಗಿರುತ್ತಾನೆಯೇ ಎಂದು ನಗುತ್ತಾ, ನಾವು ಕೆಲವರು ಅವರ ಜೊತೆಗೆ ಫೊಟೊ ಕ್ಲಿಕ್ಕಿಸಿಕೊಂಡೆವು.
ರಾಕೇಶ್ ಅವರು ಪ್ಯಾಕ್ ಮಾಡಿ ಕೊಟ್ಟಿದ್ದ ಉಪ್ಪಿಟ್ಟು ತಿಂದು ವಿಮಾನ ನಿಲ್ದಾಣದಲ್ಲಿ ಕಾಫಿ ಖರೀದಿಸಿ ಕುಡಿದೆವು. ಅಲ್ಲಿಂದ ಬೆಳಗ್ಗೆ 1030 ಗಂಟೆಗೆ ಹೊರಟ ವಿಮಾನವು ಭಾರತೀಯ ಸಮಯ ಮಧ್ಯಾಹ್ನ 0300 ಗಂಟೆಗೆ ಬೆಂಗಳೂರು ತಲಪಿಸಿತು. ಅಲ್ಲಿಂದ ಮೈಸೂರಿನ ನಮ್ಮ ಮನೆಗೆ ತಲಪಿದಾಗ ಒಂದು ವಾರದ ‘ಬಾಲಿ ಪ್ರವಾಸ’ ಯಶಸ್ವಿಯಾಗಿ ಕೊನೆಗೊಂಡಿತು.
ಈ ಪ್ರವಾಸವನ್ನು ಸೊಗಸಾಗಿ ನಿರ್ವಹಿಸಿದ ಹಿಮಾಲಯ ದರ್ಶನ್ ನ ಸಂಸ್ಥೆಯ ರೂವಾರಿಗಳಾದ ಶ್ರೀ ಕೃಷ್ಣಮೂರ್ತಿ, ಶ್ರೀಮತಿ ತಾರಾ ದಂಪತಿಗಳಿಗೆ ಧನ್ಯವಾದಗಳು. ಶುಚಿ-ರುಚಿಯಾದ ಭೋಜನ ತಯಾರಿಯ ಹೊಣೆ ಹೊತ್ತು ನಮ್ಮೆಲ್ಲರ ಅರೋಗ್ಯಕ್ಕೆ ತೊಂದರೆಯಾಗದಂತೆ ನೋಡಿಕೊಂಡ ಶ್ರೀ ರಾಕೇಶ್ ಅವರಿಗೆ ಧನ್ಯವಾದಗಳು. ಒಂದು ವಾರದ ಪ್ರವಾಸದಲ್ಲಿ ಸ್ನೇಹಮಯಿಗಳಾಗಿ ಸಂತಸವನ್ನು ಹೆಚ್ಚಿಸಿದ ಎಲ್ಲಾ ಸಹಪ್ರವಾಸಿಗರಿಗೆ ನಮನಗಳು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44422
–ಹೇಮಮಾಲಾ.ಬಿ. ಮೈಸೂರು


