ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 4
ಬ್ರಹ್ಮ ಮಾಯೆಯ ಕೃಷ್ಣ ಮಾಯೆ
ಅಘಾಸುರನ ಬಾಯಿಂದ
ಎಲ್ಲ ಗೋಪಾಲಕರ ಗೋವುಗಳ ರಕ್ಷಿಸಿ
ನಂತರದಿ ತನ್ನ ಮಾಯೆಯಲಿ
ಎಲ್ಲ ಗೋಪಾಲಕರಲಿ ನೆಲೆಯಾಗಿದ್ದ
ಭಯಾಶ್ಚರ್ಯಗಳ ನಿವಾರಿಸಿ, ಮರೆಸಿ
ಮತ್ತೆ ಅವರೆಲ್ಲರೊಡಗೂಡಿ
ಕುಣಿಯುತ್ತ ಕುಪ್ಪಳಿಸುತ್ತ
ಸರೋವರದ ತೀರದಿ ಎಲ್ಲರೊಡನೆ
ಬುತ್ತಿಯನ್ನುಣ್ಣುತ ನಲಿವ ಕೃಷ್ಣ
ಸಕಲ ಬ್ರಹ್ಮಾದಿ ದೇವತೆಗಳಿಂದ
ಪೂಜಿತನಾಗಿ ಚತುರ್ದಶ ಭುವನ
ಚರಾಚರರಿಗೆ ಆಹಾರ ಪಾನೀಯಗಳನ್ನೊದಗಿಸಿ
ರಕ್ಷಿಪ ಲೋಕನಾಯಕ ಕೃಷ್ಣನ ಮಾಯೆಗೆ ಮಿತಿಯೆಲ್ಲಿ!
ಈ ಹರಿಮಾಯೆಯ ಕಂಡ ಬ್ರಹ್ಮದೇವ
ಬಾಲರೂಪೀ ದೇವನ ಪರೀಕ್ಷಿಸಲೆಣಿಸಿ
ಗೋಪಾಲಕರ ತಂಡವನ್ನೂ ಕರುಗಳ ಮಂದೆಯನ್ನೂ
ತನ್ನ ಮಾಯೆಯಿಂ ಮರೆಗೊಳಿಸಿದನು
ಗೋಪಾಲಕರ, ಗೋವುಗಳ ಕಾಣದ ಕೃಷ್ಣನಿಗೆ
ತಕ್ಷಣದಲಿ ಬ್ರಹ್ಮದೇವನ
ಮಾಯದಾಟವು ತಿಳಿಯಿತು
ಎಲ್ಲ ಗೋಪಾಲಕರ, ಗೋವುಗಳ
ತನ್ನ ಮಹಿಮೆಯಲಿ ಕೃಷ್ಣ ತೋರ್ಪಟ್ಟನು
ಗೋಪಾಲಕರ ಮನೆಯವರಿಗೆ
ಯಾವ ಅನುಮಾನವೂ ಬಾರದಿದ್ದರೂ
ಒಂದು ಅಪೂರ್ವ ಸ್ನೇಹ ಸೌಹಾರ್ದ
ತಲೆದೋರಿದ ಪರಿ
ಹಸುಗಳು ವಿಶೇಷ ಪ್ರೀತಿಯಲಿ
ಕರುಗಳ ಮೈಯ ನೆಕ್ಕುತ
ಸುಖಿಸುವ ಪರಿ
ಹರಿಮಾಯೆಯೇ ಸರಿ
ಗೋಪಾಲಕರು ಪಶುಗಳ ರೂಪದಲ್ಲಿರ್ಪ
ಕೃಷ್ಣನ ಮಾಯೆಯ ಒಂದು ಸಂವತ್ಸರದಂತ್ಯದಲಿ
ಕೃಷ್ಣನಿಂದ ತಿಳಿದ ಬಲರಾಮ
ಎಲ್ಲ ಗೋಪಾಲಕರೂ, ಗೋವುಗಳೂ
ಕೃಷ್ಣರೂಪದಲಿ ಕಂಡ ಮರ್ಮವನರಿತ
ಬ್ರಹ್ಮನಿಗೆ ತನ್ನ ಕ್ಷುದ್ರ ಮಾಯೆಯ ಅರಿಯುಂಟಾಗಿ
ಪಶ್ಚಾತಾಪದಲಿ ಹರಿಗೆ ನಮಿಸಿ
ಕ್ಷಮೆಯ ಬೇಡಿ ಬ್ರಹ್ಮಲೋಕವ ಸೇರಿದ
ಒಂದು ವರ್ಷ ಕಾಲಕಳೆದಿದ್ದರೂ
ಭಗವನ್ಮಾಯಾ ಮೋಹಿತರಾದ
ಗೋಪಾಲಕರಿಗೆ, ಗೋವುಗಳಿಗೆ
ಎಲ್ಲ ಕ್ರಿಯೆಗಳೂ ಆ ಕ್ಷಣದಿ
ಸಂಭವಿಸಿತೆಂದೆಣಿಸಿದುದು
ಮತ್ತದೇ ಕೃಷ್ಣಮಾಯೆ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44467

-ಎಂ. ಆರ್. ಆನಂದ, ಮೈಸೂರು

