ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 3
ಶ್ರೀಕೃಷ್ಣ ಬಾಲ ಲೀಲೆ – 1
ಕಾಯಲು ಇಟ್ಟ ಹಾಲಿನ ಮಡಿಕೆಯನ್ನುರುಳಿಸಿ
ಹಾಲು ಕರೆಯುವ ಮುನ್ನವೇ
ಕರುಗಳ ಕಣ್ಣೆಗಳ ಬಿಚ್ಚಿ
ಹಸುಗಳ ಬಳಿಗೆ ಬಿಟ್ಟು
ಅವುಗಳೆಲ್ಲ ಹಾಲನು ಕುಡಿಸಿ
ಮನೆಯಲಿರ್ಪ ಮೊಸರು ಬೆಣ್ಣೆಗಳೆಲ್ಲ
ಸೂರೆ ಮಾಡಿ
ಕೋತಿ ಬೆಕ್ಕುಗಳಿಗದನುಣಿಸಿ
ನಲಿವ ಕೃಷ್ಣನ ತುಂಟಾಟ ಮಿತಿ ಮೀರಿ
ಗೋಕುಲದ ನಾರಿಯರೆಲ್ಲ
ಕಳ್ಳ ಕೃಷ್ಣರ ಹಿಡಿದು
ಯಶೋದೆಯಬಳಿಗಾಗಮಿಸೆ
ಎಲ್ಲ ಕೃಷ್ಣರೂ ಮಾಯವಾಗಿ
ಯಶೋದೆಯ ಹಿಂದೆ ನಗುಮೊಗದೆ ನಿಂತಿರೆ
ಏನ ಹೇಳಲೂ ಬಾಯಿ ಬಾರದೆ
ನಾರಿಯರು ಹಿಂತಿರುಗಿದ ಪರಿ
ಕೃಷ ಮಾಯೆಯೇ ಸರಿ
ಅಂತರಿಕ್ಷದಿ ಥಳಥಳಿಸುತ್ತಿಹ
ಚಂದ್ರಮನ ಬಯಸಿ
ಅಮ್ಮನಾಣತಿಯಂತೆ
ಆಕಾಶಕೆ ಚಾಚಿದ ಕೃಷ್ಣನ
ಕೈಯಲಿ ಚಂದ್ರ ಬಿಂಬವ ಕಂಡು
ಚಕಿತಗೊಂಡ ಯಶೋದೆಯೆಡೆ
ಮಗದೊಮ್ಮೆ ಹುಸಿನಗೆಯ ಬೀರಿ
ಚಂದ್ರಬಿಂಬವ ಅಂತರಿಕ್ಷದೆಡೆ
ಕಳುಹಿದ ಶ್ರೀ ಕೃಷ್ಣ
ಕೃಷ್ಣ ಮಣ್ಣು ತಿಂದನೆಂದು ದೂರಿದ
ಬಲರಾಮ ಮತ್ತಿತರ ಗೋಪಲಾಕರ ನುಡಿ ಕೇಳಿ
ಬಾಯ್ತೆರೆಸೆ ಕೃಷ್ಣನ ಬಾಯಲ್ಲಿ
ಯಶೋದೆ ಕಂಡ ಅದ್ಭುತ ವರ್ಣನಾತೀತ
ಭೂಮ್ಯಾಂತರಿಕ್ಷ ದಿಕ್ಕುಗಳು
ಸಪ್ತಸಾಗರ ನದಿ ಪರ್ವತಗಳು
ಸೂರ್ಯ ಚಂದ್ರ ನಕ್ಷತ್ರಗಳು
ಎಲ್ಲವನು ತನ್ನ ಬಾಯಲ್ಲಿ ತೋರ್ಸಿಪ್ಪ ಬಾಲಕ
ಅಂತರಾತ್ಮ ಪರಮಾತ್ಮನ
ಸಹಜ ಶಕ್ತಿ ಎಂದರಿತ ಯಶೋದೆ
ಕ್ಷಣಕಾಲ ಪ್ರಜ್ಞೆತಪ್ಪಿ ಪುನಃ ಪ್ರಜ್ಞೆಯಲಿ ಬರಲಾಗಿ
ಪರಸ್ಪರ ರೂಪಜ್ಞಾನ ಮರೆಯಾಯ್ತು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44269

-ಎಂ. ಆರ್. ಆನಂದ, ಮೈಸೂರು

