ಸಂಪಾದಕೀಯ

ಚೆಲುವಿನ ತಾಣ ಮಲೆನಾಡು

Share Button

ಹೃದಯ ಹಾಡಿತ್ತು, ಮನಸ್ಸು ಗರಿಗೆದರಿ ಕುಣಿದಾಡಿತ್ತು, ಮಲೆನಾಡಿನ ಈ ಚೆಲುವನ್ನು ಕಂಡು. ನಾವು ಹೊರಟಿದ್ದು ಹೊರನಾಡಿನಲ್ಲಿ ನೆಲಸಿರುವ ಅನ್ನಪೂರ್ಣೆಯ ನೋಡಲು. ದಾರಿಯುದ್ಧಕ್ಕೂ ಕಂಗು ತೆಂಗುಗಳ ತೋಟಗಳು ತಂಗಾಳಿಗೆ ತೊನೆಯುತ್ತಾ ನಮಗೆ ಸ್ವಾಗತ ಬಯಸುತ್ತಿದ್ದವು. ಪೂನಾದ ಕಾಂಕ್ರೀಟ್ ಕಾಡಿನಲ್ಲಿ ಬೆಳೆದ ಮೊಮ್ಮಗಳು ಪೂಜಾ ಮಲೆನಾಡಿನ ಈ ಹಸಿರ ಸಿರಿಯನ್ನು ಕಣ್ಣರಳಿಸಿ ನೋಡುತ್ತಿದ್ದಳು. ರಬ್ಬರ್ ಮರಗಳಿಗೆ ತೂಗು ಹಾಕಿದ್ದ ಪ್ಲಾಸ್ಟಿಕ್ ಚೀಲಗಳನ್ನು ಕಂಡವಳು, ಯಾಕೆ ಹೀಗೆ ಮಾಡಿದ್ದಾರೆ? ಎಂದಳು. ನಾವು ಕಾರು ನಿಲ್ಲಿಸಿ ಅವಳನ್ನು ರಬ್ಬರ್ ಮರಗಳ ಸಮೀಪ ಕರೆದುಕೊಂಡು ಹೋದಾಗ ಅಲ್ಲಿ ಮರದಿಂದ ಜಿನುಗುತ್ತಿದ್ದ ರಸವನ್ನು ಶೇಖರಿಸಲೆಂದು ಕಟ್ಟಿದ್ದ ಚೀಲಗಳನ್ನು ಕಂಡು ಬೆಕ್ಕಸ ಬೆರಗಾದಳು. ಮುಂದೆ ಕಾಫಿ ತೋಟಗಳನ್ನು ಕಂಡಾಗ, ‘ತಾತ, ಇಲ್ಲಿ ಕಾರು ನಿಲ್ಲಿಸಿ, ನಾನು ಕಾಫಿ ಚರ‍್ರಿಗಳನ್ನು ನೋಡೇ ಇಲ್ಲ’ ಎಂದುಲಿದಳು ಸದಾ ಕಂಪ್ಯೂಟರ್ ಮುಂದೆ ಕೂರುವ ಬೆಡಗಿ. ಅವಳಿಗೆ ಫಿಲ್ಟರ್ ಕಾಫಿ ಎಂದರೆ ಪ್ರಾಣ, ಆದರೆ ಕಾಫಿ ತೋಟ ನೋಡಿರಲಿಲ್ಲ. ಕಾಫಿ ಗಿಡಗಳಿಂದ ಗೊಂಚಲು ಗೊಂಚಲಾಗಿ ತೂಗು ಬಿದ್ದಿದ್ದ ಕೆಂಪು ಕಪ್ಪು ಮಿಶ್ರಿತ ಕಾಫಿ ಹಣ್ಣುಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸುತ್ತಾ ಸಂಭ್ರಮಿಸಿದಳು. ಒಂದೆರೆಡು ಕಾಫಿ ಹಣ್ಣಿನ ಗೊಂಚಲುಗಳನ್ನು ಕಿತ್ತು ಮೆಲ್ಲಗೆ ತನ್ನ ಚೀಲಕ್ಕೆ ಸೇರಿಸಿದಳು. ನಾನು ಅಡಿಕೆ ಮರಗಳ ಮಧ್ಯೆಯಿದ್ದ ಕೋಕೋ ಗಿಡಗಳನ್ನು ತೋರಿಸಿ, ಅದರಲ್ಲಿ ಬಿಟ್ಟಿದ್ದ ಕೋಕೋ ಹಣ್ಣುಗಳನ್ನು ತೋರಿಸಿ, ಆ ಕೋಕೋ ಬೀಜಗಳನ್ನು ಚಾಕಲೇಟ್ ಮಾಡಲು ಬಳಸುತ್ತಾರೆ ಎಂದು ತಿಳಿಸಿದೆ. ಕೋಕೋ ಗಿಡದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿದಳು ಶಹರದಲ್ಲಿ ಬೆಳೆದಿದ್ದ ಹುಡುಗಿ.

ಹೋದ ವಾರ ಪೂನಾದಿಂದ ನನ್ನ ಮನೆಯವರ ಅಕ್ಕನ ಮಗಳು ಅನ್ನಪೂರ್ಣಾಳ ಕರೆ ಬಂದಿತ್ತು, ‘ಮಾಮ, ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇಡೀ ಕುಟುಂಬವನ್ನು ಹೊರನಾಡು, ಶೃಂಗೇರಿಗೆ ಕರೆದೊಯ್ದಿದ್ದಿರಿ. ಎಷ್ಟು ಖುಷಿಯಾಗಿತ್ತು. ಮತ್ತೊಮ್ಮೆ ಹೋಗೋಣ್ವಾ?’ ಎಂದು ಕೇಳಿದಾಗ ಇಲ್ಲ ಅನ್ನಲು ಹೇಗೆ ಸಾಧ್ಯ? ಹೊರನಾಡಿನ ದೇವಿ ಅನ್ನಪೂರ್ಣೆಯ ಹೆಸರು ಹೊತ್ತವಳು ಇವಳು, ಅಪರೂಪಕ್ಕೊಮ್ಮೆ ನಮ್ಮ ಊರಾಗಿದ್ದ ದಾವಣಗೆರೆಗೆ ಬರುತ್ತಿದ್ದಳು. ಮಗಳು ಪೂಜಾ ದೊಡ್ಡವಳಾಗಿದ್ದು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಳು. ಹತ್ತು ಹನ್ನೆರೆಡು ವರ್ಷಗಳಿಂದ ತನ್ನ ಮಗಳು ಪೂಜಾಳ ಓದು ಕೆಲಸದ ಜಂಜಾಟದಲ್ಲಿ ಅವಳಿಗೆ ಬಿಡುವೇ ಸಿಕ್ಕಿರಲಿಲ್ಲ. ‘ನೀವು ಯಾವಾಗ ಬರುವಿರೆಂದು ತಿಳಿಸಿದರೆ, ನಾವು ಶೃಂಗೇರಿ ಸಮೀಪದಲ್ಲಿರುವ ಹೋಮ್ ಸ್ಟೇ ಬುಕ್ ಮಾಡುತ್ತೇವೆ.’ ಎಂದು ಒಕ್ಕೊರಿಲಿನಲ್ಲಿ ಹೇಳಿದೆವು. ‘ಪೂಜಾಗೆ ಒಂದು ವಾರ ಕ್ರಿಸ್‌ಮಸ್ ರಜೆ ಇದೆ, ಡಿಸೆಂಬರ್ ೨೫ ರಂದು ಬರುತ್ತೇವೆ’ ಎಂದಾಗ ನಾವಿಬ್ಬರೂ ಸೇರಿ ನಾಲ್ಕು ದಿನಗಳ ಪ್ರವಾಸದ ಪಟ್ಟಿ ಮಾಡಿದೆವು. ಗಾಜನೂರಿನ ಬಳಿ ಇರುವ ನಮ್ಮ ತೋಟಕ್ಕೆ ಮೊದಲು ಕರೆದೊಯ್ಯಬೇಕೆಂಬ ಆಸೆ ನಮ್ಮನೆಯವರದು, ಹಾಗೆಯೇ ಆನೆಗಳ ಬೀಡಾದ ಸಕ್ರೆಬೈಲು, ತ್ಯಾವರೆಕೊಪ್ಪದ ಸಿಂಹಧಾಮಗಳಿಗೆ ಭೇಟಿ ನೀಡೋಣ ಎಂಬ ಸಲಹೆ ನನ್ನದು. ಅಪರೂಪಕ್ಕೆ ಬರುತ್ತಿರುವ ಸೊಸೆಗೆ ಊಟ ಉಪಚಾರದ ತಯಾರಿಯನ್ನು ಉತ್ಸಾಹದಿಂದ ಮಾಡಿದೆ. ಮುಂಜಾನೆ ಉಪಹಾರಕ್ಕೆ ದೋಸೆ ಇರಲಿ ಎಂದರು ದೋಸೆಪ್ರಿಯರಾದ ಪತಿರಾಯರು, ಮಧ್ಯಾಹ್ನ ತೋಟದಲ್ಲಿ ಪಲಾವ್, ಮೊಸರನ್ನದ ಊಟ ಇರಲಿ ಎಂದು ನಾನು ಸೇರಿಸಿದೆ. ರಾತ್ರಿಗೆ ಹೋಳಿಗೆ ತಯಾರಿ ನಡೆಸಿದೆ. ಮಗಳು ಅಪರ್ಣಾ ಶೃಂಗೇರಿಯಲ್ಲಿ ಹೋಮ್‌ಸ್ಟೇಯಲ್ಲಿ ಎರಡು ಕೊಠಡಿಗಳನ್ನು ಕಾದಿರಿಸಿದಳು.

ಹೀಗೆ ಹೊರಟಿತ್ತು ನಮ್ಮ ಸವಾರಿ ಹೊರನಾಡಿನತ್ತ, ದಾರಿಯಲ್ಲಿ ಬಾಳೆಹೊನ್ನೂರು ಮಠವನ್ನು ನೋಡಿ, ಜಗದ್ಗುರುಗಳ ಗದ್ದುಗೆಗೆ ಭಕ್ತಭಾವದಿಂದ ವಂದಿಸಿದೆವು. ಮಠದ ಆವರಣದಲ್ಲಿ ಒಂದು ಆನೆಯನ್ನು ಒಂದು ಪಂಜರದಲ್ಲಿ ಕೂಡಿ ಹಾಕಿದ್ದರು, ಇದು ಆನೆ ಇರಲಾರದು ಆನೆಯ ಪುತ್ಥಳಿ ಇರಬೇಕೆನ್ನುವ ಹೊತ್ತಿಗೆ ಅದು ತನ್ನ ಮೊರದಗಲ ಕಿವಿಗಳನ್ನು ಅಲ್ಲಾಡಿಸುತ್ತಾ, ಬಾಲ ಬೀಸಿತ್ತು. ಪೂಜಾ, ‘ಇಲ್ಲ ಅಜ್ಜಿ ಅದು ನಿಜವಾದ ಜೀವಂತ ಆನೆ’ ಎಂದಳು. ನಾನು, ‘ಛೇ ಅನೆಯನ್ನು ಯಾಕೆ ಹೀಗೆ ಪಂಜರದಲ್ಲಿ ಕೂಡಿ ಹಾಕಿದ್ದಾರೆ?’ ಎಂದು ಬೇಸರ ವ್ಯಕ್ತಪಡಿಸುತ್ತಾ ಆನೆಯ ಸನಿಹ ಹೋಗಿ ನೋಡಿದರೆ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಅದು ಜೀವಂತ ಆನೆ ಆಗಿರದೇ ಪುತ್ಥಳಿಯಾಗಿತ್ತು. ಅಷ್ಟು ಸಹಜವಾಗಿ ಆನೆಯನ್ನು ನಿರ್ಮಿಸಿದ ಕಲಾವಿದನಿಗೆ ಮನದಲ್ಲೇ ಅಭಿನಂದಿಸಿದೆವು.

ಹೊರನಾಡಿಗೆ ಹೋಗುವ ಹಾದಿಯಲ್ಲಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ಕಳಸೇಶ್ವರ ದೇಗುಲದ ದರ್ಶನ ಮಾಡದೆ ಇರಲು ಸಾಧ್ಯವೇ? ಈ ದೇಗುಲದ ವೈಶಿಷ್ಟ್ಯ ಏನೆಂದರೆ, ದೇಗುಲದ ಮುಂಬಾಗಿಲಲ್ಲಿ ಇರುವ ಗಂಡು ಮತ್ತು ಹೆಣ್ಣು ಗಣಪತಿಯ ವಿಗ್ರಹಗಳು. ಹತ್ತಾರು ಮೆಟ್ಟಿಲುಗಳನ್ನು ಹತ್ತಿ ಕಳಸೇಶ್ವರ ಮತ್ತು ಪಾರ್ವತಿಯ ರೂಪವಾದ ಸರ್ವಾಂಗ ಸುಂದರಿ ಅಮ್ಮನವರ ದರ್ಶನ ಮಾಡಿದೆವು. ಈ ದೇಗುಲದ ಗರ್ಭಗುಡಿಯು ಕಳಸ ಅಂದರೆ ಮಡಿಕೆಯ ಆಕಾರದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಕಳಸ ಎಂಬ ಹೆಸರು ಬಂತು ಎಂದು ಸ್ಥಳೀಯರು ಹೇಳುತ್ತಾರೆ. ಕಳಸದಿಂದ ಹೊರನಾಡಿನತ್ತ ಹೊರಟೆವು.


ಹೊರನಾಡಿನಲ್ಲಿ ಜನಸಾಗರವೇ ನೆರೆದಿತ್ತು. ಚಿಕ್ಕಮಗಳೂರಿನ ಕಳಸ ತಾಲ್ಲೂಕಿನ ಪ್ರಸಿದ್ದ ಶ್ರೀಕ್ಷೇತ್ರ ಹೊರನಾಡು. ಪಶ್ಚಿಮಘಟ್ಟದ ಮಡಿಲಲ್ಲಿರುವ ದೇಗುಲದಲ್ಲಿರುವ ಪ್ರತಿಷ್ಠಾಪಿಸಲ್ಪಟ್ಟಿರುವ ತಾಯಿ ಅನ್ನಪೂರ್ಣೆಯ ದರ್ಶನಕ್ಕಾಗಿ ಓಡೋಡಿ ಬಂದಿರುವಳು ಭದ್ರೆ. ಕುದುರೆಮುಖದ ಅರಣ್ಯದಲ್ಲಿ ಗಂಗಾಮೂಲವೆಂಬಲ್ಲಿ ತುಂಗೆ ನೇತ್ರಾವತಿಯರ ಜೊತೆಗೂಡಿ ಹುಟ್ಟಿಬಂದ ಭದ್ರೆಯ ಬಣ್ಣ ತುಸು ಕಪ್ಪು. ಬಹುಶಃ ಭದ್ರೆ ಸಾಗಿ ಬರುವ ಹಾದಿಯಲ್ಲಿ ಮಣ್ಣಿನ ಜೊತೆ ಕಬ್ಬಿಣದ ಅದಿರು ಇರುವುದರಿಂದ ಭದ್ರೆ ಕಪ್ಪಾದಳೇನೋ. ನಾವು ಭದ್ರಾ ಹೊಳೆಯಲ್ಲಿ ಕೈಕಾಲು ತೊಳೆದು ಅನ್ನಪೂರ್ಣೆಯ ದರ್ಶನ ಮಾಡಿದೆವು. ಸರ್ವಾಲಂಕಾರಭೂಷಿತಳಾದ ಅನ್ನಪೂರ್ಣೆ ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಶ್ರೀಚಕ್ರ ಹಾಗೂ ಗಾಯತ್ರಿಯನ್ನು ಹಿಡಿದು ತನ್ನ ಭಕ್ತರನ್ನು ಆಶೀರ್ವದಿಸುತ್ತಾ ನಿಂತಿದ್ದಳು. ಈ ಪ್ರದೇಶದ ಪೌರಾಣಿಕ ಹಿನ್ನೆಲೆಯೂ ರೋಚಕವಾಗಿದೆ – ಬ್ರಹ್ಮಹತ್ಯಾ ದೋಷದಿಂದ ಶಿವನನ್ನು ಪಾರು ಮಾಡಿದವಳು ಪಾರ್ವತಿಯ ಅವತಾರವಾದ ಅನ್ನಪೂರ್ಣೆಯೇ. ಮತ್ತೊಂದು ಐತಿಹ್ಯ ಹೀಗಿದೆ, ‘ಶಿವ ಪಾರ್ವತಿಯರ ಮದುವೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ದೇವಾನುದೇವತೆಗಳೂ ಕೈಲಾಸ ಪರ್ವತಕ್ಕೆ ಹೋಗಿದ್ದುದರಿಂದ ಭೂಮಿ ಉತ್ತರದೆಡೆ ವಾಲಿತ್ತಂತೆ. ಆಗ ಶಿವನು ಮಹರ್ಷಿಗಳಾದ ಅಗಸ್ತ್ಯರನ್ನು ಭಾರತದ ದಕ್ಷಿಣದೆಡೆ ತೆರಳಲು ಆದೇಶಿಸಿದರಂತೆ, ಆಗ ಅಗಸ್ತ್ಯರು ದಕ್ಷಿಣದತ್ತ ಬಂದಾಗ ಭೂಮಿಯು ಸಮಸ್ಥಿತಿಗೆ ಬಂದಿತಂತೆ. ಅಗಸ್ತ್ಯರು ಹೊರನಾಡಿನಲ್ಲಿ ಪಾರ್ವತಿಯ ಅಂಶವಾದ್ಲ ಅನ್ನಪೂರ್ಣೆಯನ್ನು ಸ್ಥಾಪಿಸಿ ಪೂಜಿಸಿದರಂತೆ. ಈ ದೇಗುಲದಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಲೇ ಇರುವುದು. ನಾವು ಅನ್ನ ಸಂತರ್ಪಣೆಗೆಂದು ಕಾಣಿಕೆ ಅರ್ಪಿಸಿ, ದೇಗುಲದ ಪ್ರಸಾದವನ್ನು ಸ್ವೀಕರಿಸಿ ಹೊರಬಂದೆವು. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಅಕ್ಕಿ, ಅಡಿಕೆ, ತೆಂಗು, ಬಾಳೆ, ಏಲಕ್ಕಿ ಮುಂತಾದವುಗಳನ್ನು ದೇವಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸುವುದು ಇಲ್ಲಿನ ವಾಡಿಕೆ.

ಹೊರನಾಡಿನಿಂದ ಕುದುರೆಮುಖ ಮಾರ್ಗವಾಗಿ ಶೃಂಗೇರಿಗೆ ಹೊರಟೆವು. ಕುದುರೆಮುಖ ಅಭಯಾರಣ್ಯದ ಚೆಕ್‌ಪೋಸ್ಟ್ನಲ್ಲಿ ನಮ್ಮ ರುಜು ಮಾಡಿದ ನಂತರವೇ ಅರಣ್ಯದೊಳಗೆ ಪ್ರವೇಶ. ಇಲ್ಲಿ ವನ್ಯಪ್ರಾಣಿಗಳಿರುವುದರಿಂದ ಎಲ್ಲಿಯೂ ನಿಮ್ಮ ವಾಹನವನ್ನು ನಿಲ್ಲಿಸಿ ಕೆಳಗಿಳಿಯಬೇಡಿ ಎಂಬ ಫಲಕಗಳು ಅಲ್ಲಲ್ಲಿ ಕಂಡು ಬಂದವು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಅಲ್ಲಲ್ಲಿ ಸಣ್ಣ ಪುಟ್ಟ ಜಲಪಾತಗಳು, ಪಕ್ಷಿಗಳ ಕಲರವ ಕೇಳುತ್ತಾ ಮೈ ಮರೆತೆವು. ಮುಂದೆ ಸಾಗಿದಂತೆ ಬೆಟ್ಟಗಳನ್ನು ಸವರಿ ಟೀ ಪ್ಲಾಂಟೇಶನ್‌ಗಳನ್ನು ಮಾಡಿದ್ದರು. ಅಲ್ಲೊಂದು ಟೀ ಸ್ಟಾಲ್ ಸಹ ಇತ್ತು. ಆ ವನಸಿರಿಯ ಮಧ್ಯೆ ಟೀ ಕುಡಿಯುವುದೇ ಒಂದು ವಿಶೇಷವಾದ ಅನುಭವ. ಎದುರಿಗೇ ಇದ್ದ ಗಣಪತಿಯ ದೇಗುಲದ ಮುಂದೆ ಒಂದು ಕಾರಂಜಿ ಇದ್ದು ಒಂದು ದೊಡ್ಡದಾದ ಇಲಿಯ ಆಕೃತಿಯನ್ನು ಮಾಡಿ ಅದರ ಬಾಯಿಯಿಂದ ನೀರು ಚಿಮ್ಮುವ ಹಾಗೆ ಮಾಡಿದ್ದರು. ಅಲ್ಲಿಗೆ ಬಂದಿದ್ದ ಪ್ರವಾಸಿಗರೆಲ್ಲಾ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ಕೆಲವು ಕಾರ್ಮಿಕರು ಟೀ ಸಸ್ಯದ ಚಿಗುರನ್ನು ಕಿತ್ತು ಬೆನ್ನಿಗೆ ಕಟ್ಟಿದ್ದ ಚೀಲದಲ್ಲಿ ಸಂಗ್ರಹಿಸುವುದನ್ನು ಅಚ್ಚರಿಯಿಂದ ನೋಡಿದೆವು, ಅವರು ಬೆಟ್ಟದ ಇಳಿಜಾರಿನಲ್ಲಿ ಸಲೀಸಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿಂದ ಮುಂದೆ ಸಾಗಿದಾಗ ಪಕ್ಕದಲ್ಲಿಯೇ ಒಂದು ತೂಗು ಸೇತುವೆ ಭದ್ರಾ ನದಿಯ ಮೇಲೆ ತೂಗಾಡುತ್ತಿತ್ತು. ನಮ್ಮ ವಾಹನವನ್ನು ನಿಲ್ಲಿಸಿ ಆ ತೂಗು ಸೇತುವೆಯ ಮೇಲೆ ಹೊರಟೆವು. ಭದ್ರಾ ನದಿ ತುಂಬಿ ಹರಿಯುತ್ತಿತ್ತು. ನದಿಯ ಇಕ್ಕೆಲಗಳಲ್ಲಿಯೂ ಕಾಫಿ, ಏಲಕ್ಕಿ, ಅಡಿಕೆ, ಮೆಣಸಿನ ಗಿಡಗಳ ತೋಟಗಳು ಇದ್ದವು. ನಮ್ಮ ಜೊತೆಗಿದ್ದ ಅನ್ನಪೂರ್ಣ, ‘ಅತ್ತೆ, ವಿಳೇದೆಲೆ ಸಸಿ ನೋಡ್ರಿ. ಎಷ್ಟೊಂದು ಇವೆ’ ಎನ್ನುತ್ತಾ ಅಡಿಕೆ ಮರಕ್ಕೆ ಹಬ್ಬಿದ್ದ ಬಳ್ಳಿಯಿಂದ ಒಂದು ಎಲೆಯನ್ನು ಕಿತ್ತು ಬಾಯಿಗೆ ಹಾಕಿದಳು, ‘ಅಬ್ಬಾ ಎಷ್ಟು ಖಾರ ಇದೆ’ ಎಂದು ಉದ್ಗಾರ ತೆಗೆದಳು. ನಾನು ನಗುತ್ತಾ, ‘ಅದು ವಿಳೇದೆಲೆ ಅಲ್ಲ, ಮೆಣಸಿನ ಬಳ್ಳಿ’ ಎಂದಾಗ ಬೇಸ್ತು ಬೀಳುವ ಸರದಿ ಅವಳದಾಗಿತ್ತು. ಅಡಿಕೆ ಮರದ ಬುಡದಲ್ಲಿ ಸೊಂಪಾಗಿ ಬೆಳೆದಿದ್ದ ಏಲಕ್ಕಿ ಗಿಡಗಳನ್ನೂ ತೋರಿಸಿದೆವು. ಪಟ್ಟಣಗಳಲ್ಲಿ ವಾಸಿಸುವ ಮಕ್ಕಳಿಗೆ ‘ಭತ್ತ, ರಾಗಿ, ಅಡಿಕೆ, ತೆಂಗು ಮುಂತಾದ ಸಸ್ಯಗಳ ಪರಿಚಯ ಮಾಡಬೇಕಾಗಿ ಬಂದಿರುವುದು ಬೇಸರದ ಸಂಗತಿಯೇ ಸರಿ.


ಈ ನದಿಗಳ ಜನ್ಮಸ್ಥಾನ ಎಲ್ಲಿದೆ ಎಂದು ಪೂಜಾ ಕೇಳಿದಾಗ, ನಾನು ನಮ್ಮ ಬಲಬದಿಯಲ್ಲಿದ್ದ ಗಂಗಾಮೂಲದ ಫಲಕವನ್ನು ತೊರಿಸಿದೆವು. ಈ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಗಂಗಾಮೂಲವೆಂಬ ಬೆಟ್ಟದಲ್ಲಿ ಇರುವ ಗುಹೆಗಳೇ ತುಂಗೆ, ಭದ್ರೆ ಮತ್ತು ನೇತ್ರಾವತಿಯರ ಉಗಮಸ್ಥಾನ. ಇದನ್ನು ವರಾಹ ಪರ್ವತವೆಂದೂ ಕರೆಯುತ್ತಾರೆ. ಇಲ್ಲಿರುವ ಜೀವ ವೈವಿಧ್ಯತೆ ಮತ್ತೆಲ್ಲಿಯೂ ಕಾಣಸಿಗುವುದಿಲ್ಲ, ಹಾಗೂ ಹೇರಳವಾದ ಖನಿಜ ಸಂಪತ್ತು ಲಭ್ಯ. ಚಾರಣಪ್ರಿಯರ ಸ್ವರ್ಗ, ನಿಸರ್ಗಪ್ರೇಮಿಗಳಿಗೆ ರಸದೌತಣ, ಧಾರ್ಮಿಕ ಮನೋಭಾವದವರಿಗೆ ಸ್ವರ್ಗವೇ ಸರಿ.

ನಾವು ಸಾಗಿದ ಹಾದಿಯುದ್ದಕ್ಕೂ ಭದ್ರೆ ನಮ್ಮ ಜೊತೆಗೇ ಹರಿದು ಬರುತ್ತಿದ್ದಳು. ಪೂಜಾ, ‘ಕಾರು ನಿಲ್ಲಿಸಿ ತಾತ’ ಎಂದು ಕೂಗು ಹಾಕಿದಳು. ನಮ್ಮ ಬಲಭಾಗದಲ್ಲಿದ್ದ ಬಂಡೆಗಳ ಮೇಲಿನಿಂದ ಧುಮ್ಮಿಕ್ಕುತ್ತಿದ್ದ ಜಲಪಾತ ನಯನ ಮನೋಹರವಾಗಿತ್ತು. ರಸ್ತೆಯ ಪಕ್ಕದಲ್ಲಿಯೇ ಇದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ಜಲಪಾತದ ಹೆಸರು ‘ಕಡಂಬಿ ಜಲಪಾತ’ ಇದು ಮೂವತ್ತು ಅಡಿ ಎತ್ತರದಿಂದ ಮೆಟ್ಟಿಲು ಮೆಟ್ಟಿಲಾಗಿರುವ ಬಂಡೆಗಳ ಮೇಲೆ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಈ ಜಲಪಾತದ ನೀರು ರಸ್ತೆಯಲ್ಲಿ ಸಾಗುವ ಪ್ರವಾಸಿಗರ ಮೇಲೆಯೂ ಚಿಮ್ಮುವುದು. ನಿಸರ್ಗಪ್ರಿಯಳಾದ ಪೂಜಾ ಜಲಪಾತದ ಮುಂದೆ ಮೌನವಾಗಿ ನಿಂತಳು. ಅವಳ ಫೋಟೋವನ್ನು ತೆಗೆದಾಗ ಕಂಡದ್ದು ಕಣ್ಣುಮುಚ್ಚಿ ಧ್ಯಾನಸ್ಥಳಾಗಿ ನಿಂತ ಹುಡುಗಿ. ಆಗಲೇ ಗಂಟೆ ಮೂರಾಗಿತ್ತು, ನಮಗೆ ಹನುಮನ ಗುಂಡಿ ಜಲಪಾತ ನೋಡುವ ತವಕ, ಕಾರಣ ಈ ಜಲಪಾತವನ್ನು ನಾಲ್ಕು ಗಂಟೆಯೊಳಗೇ ತಲುಪಬೇಕಿತ್ತು. ಇಲ್ಲವಾದರೆ ಒಳಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ.

ಹನುಮನಗುಂಡಿ ಜಲಪಾತ ತಲುಪಿದಾಗ ಗಂಟೆ ನಾಲ್ಕು ಹತ್ತು ನಿಮಿಷವಾಗಿತ್ತು. ಅಲ್ಲಿದ್ದ ಸೆಕ್ಯುರಿಟಿಯವರು ಈಗ ಹನುಮನಗುಂಡಿ ಜಲಪಾತ ನೋಡಲು ಟಿಕೆಟ್ ಕೊಡುವುದಿಲ್ಲ ಎಂದ, ಕೊನೆಗೆ ನಮ್ಮ ವಿನಂತಿಗೆ ಓಗೊಟ್ಟು, ಬೇಗ ಹೋಗಿ ಬನ್ನಿ ಎಂದು ಟಿಕೆಟ್ ನೀಡಿದ. ಒಬ್ಬರಿಗೆ 50 ರೂಗಳು. ಪುಟ್ಟ ಪುಟ್ಟ ಮೆಟ್ಟಿಲುಗಳು, ಕೆಲವು ಮೆಟ್ಟಿಲುಗಳು ಅಲ್ಲಲ್ಲಿ ಬಿದ್ದು ಹೋಗಿದ್ದವು. ಹುಷಾರಾಗಿ ಇಳಿಯಬೇಕಿತ್ತು. ಆದರೆ ಸಮಯಾವಕಾಶ ಇಲ್ಲದಿದ್ದುದರಿಂದ ನಾವು ಅವಸರ ಅವಸರವಾಗಿ ಇಳಿದೆವು. ಸುಮಾರು 250 ಮೆಟ್ಟಿಲುಗಳನ್ನು ಇಳಿದ ಮೇಲೆ ಜಲಪಾತದ ಸದ್ದು ಕೇಳುತ್ತಿತ್ತು. ಗಿಡ ಮರಗಳ ಮಧ್ಯೆ ಇದ್ದ ಜಲಪಾತ ಅಂತೂ ಇಂತೂ ಕೊನೆಗೂ ಕಣ್ಣಿಗೆ ಬಿತ್ತು. ಯಥಾಪ್ರಕಾರ ಕೆಲವು ಪಡ್ಡೆ ಹುಡುಗರು, ಅಲ್ಲಿ ಹಾಕಿದ್ದ ಕಬ್ಬಿಣದ ಬೇಲಿಯನ್ನೂ ಹಾರಿ ಜಲಪಾತದ ಅಡಿಯಲ್ಲಿದ್ದ ಬಂಡೆಗಳ ಮೇಲೆ ನಿಂತು ವಿವಿದ ಬಗೆಯ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಅಕಸ್ಮಾತ್ ಸ್ವಲ್ಪ ಎಚ್ಚರ ತಪ್ಪಿದರೂ ನೀರಿನಡಿಯಿದ್ದ ಪ್ರಪಾತಕ್ಕೆ ಬೀಳುವುದು ಗ್ಯಾರಂಟಿ. ಸೆಲ್ಫಿ ಹುಚ್ಚಿಗೆ ಬಲಿಯಾದ ಹಲವು ಅನಾಹುತಗಳನ್ನು ಕೇಳಿದ್ದೇವೆ. ಈ ಜಲಪಾತವನ್ನು ಸೂತನಬ್ಬಿ ಜಲಪಾತವೆಂದೂ ಕರೆಯುತ್ತಾರೆ. ಇದು ಮೆಟ್ಟಿಲು ಮೆಟ್ಟಿಲಾಗಿ 72 ಅಡಿ ಎತ್ತರದಿಂದ ಕೆಳಗೆ ಧುಮುಕುತ್ತದೆ. ಸುತ್ತಲೂ ಗಿಡಮರಗಳಿದ್ದು ಈ ಜಲಪಾತದ ಮೆರಗನ್ನು ಹೆಚ್ಚಿಸಿವೆ. ಇನ್ನೂ ಸ್ವಲ್ಪ ಸಮಯ ಇರಲು ಆಸೆ, ಆದರೆ ಪ್ರವೇಶ ದ್ವಾರ ಬಂದು ಮಾಡಿದರೆ ಎಂಬ ಆತಂಕ. ಮತ್ತೆ ಮೆಟ್ಟಿಲುಗಳನ್ನು ಏರುತ್ತಾ, ಉಸ್ ಉಸ್ ಎಂದು ಆಯಾಸ ಪರಿಹರಿಸಿ ಕೊಳ್ಳುತ್ತಾ ಮೇಲೆ ಬಂದೆವು. ಈ ಜಲಪಾತವನ್ನು ಹತ್ತಿ ಇಳಿಯಲು ಅರ್ಧ ಗಂಟೆ ಸಾಕು.

ಅಲ್ಲಿಂದ ನಾವು ಶೃಂಗೇರಿ ಕಡೆ ಹೊರಟೆವು. ಕಾರಿನಲ್ಲಿ ಪಯಣಿಸುವಾಗ ಮನದಲ್ಲಿ ಅಂದು ನಾವು ನೋಡಿದ್ದ ಪ್ರೇಕ್ಷಣೀಯ ಸ್ಥಳಗಳ ಮೆರವಣಿಗೆ ಹೊರಟಿತ್ತು. ಬಾಳೆಹೊನ್ನೂರಿನ ಜಗದ್ಗುರುಗಳ ಗದ್ದುಗೆ, ಕಳಸದ ದೇಗುಲ, ಹೊರನಾಡಿನ ಅನ್ನಪೂರ್ಣೆಯ ದರ್ಶನದ ಜೊತೆ ಜೊತೆಗೇ ನಿಸರ್ಗದ ಚೆಲುವು. ಎಲ್ಲಿ ನೋಡಿದರೂ ಹಸಿರುಡುಗೆ ತೊಟ್ಟ ಬೆಟ್ಟ ಗುಡ್ಡಗಳ ಸಾಲುಗಳು, ಬಂಡೆಗಳ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು, ಅಲ್ಲಲ್ಲಿ ಹರಿಯುವ ಹಳ್ಳಕೊಳ್ಳಗಳೂ, ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಗಳೂ, ಬಯಲುಗಳಲ್ಲಿ ಹುಲ್ಲು ಮೇಯುತ್ತಿದ್ದ ಜಿಂಕೆ, ಸಾರಂಗಗಳೂ, ಕಾಡುಕೋಣಗಳೂ ನಮ್ಮ ಮನದಲ್ಲಿ ಹರುಷದ ಬುಗ್ಗೆಯನ್ನೇ ಉಕ್ಕಿಸಿದ್ದವು. ಆಗ ದಾರಿಯಲ್ಲಿ ಹಾವೊಂದು ಸರಸರನೇ ನಮ್ಮ ಕಾರಿನ ಮುಂದೆ ಹಾದು ಹೋಯಿತು, ‘ಇದು ನಾವು ವಾಸಿಸುವ ತಾಣ ಎಚ್ಚರ’ ಎಂದು ಹೇಳುವಂತಿತ್ತು ನಾವೆಲ್ಲಾ ಒಮ್ಮೆ ‘ಆಹ್’ ಎಂದು ಉದ್ಗಾರ ತೆಗೆದೆವು. ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದ ಸುತ್ತ ಮುತ್ತ ಹಲವು ಚಾರಣಪಥಗಳು ಸಾಹಸಿಗಳಿಗೆ ಸವಾಲು ಹಾಕುವಂತಿವೆ. ಬನ್ನಿ, ಹೊರನಾಡಿನ ಅನ್ನಪೂರ್ಣೆಯ ದರ್ಶನದ ಜೊತೆ ಜೊತೆಗೇ ಕುದುರೆಮುಖ ಆಭಯಾರಣ್ಯದಲ್ಲಿರುವ ರಮ್ಯತಾಣಗಳನ್ನು ನೋಡಲು ಮರೆಯದಿರಿ.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *