ತೊದಲುವುದು ತಪ್ಪಲ್ಲ ; ಊನವೂ ಅಲ್ಲ !
ಅದು ಮಾತಿನ ಮತ್ತೊಂದು ರೂಪ ಸ್ವರೂಪ !!
ಪದ ಮತ್ತು ಅರ್ಥದ ನಡುವಿನ ಮೌನವೇ ತೊದಲು ;
ನಾಲಗೆಯ ಇನ್ನೊಂದು ತೆರನ ತಡವಾದ ಹೊರಳು
ಹಾಗೆಯೇ ,
ಪದ ಮತ್ತು ಕ್ರಿಯೆಯ ನಡುವೆ
ನಿಂತು ಹೊರಡುವ ಘನಮೌನವೇ ಕುಂಟು ;
ಇಂಥವರೂ ನಮ್ಮ ನಿಮ್ಮ ನಡುವೆ ಉಂಟು !
ಭಾಷೆಗೂ ಮುನ್ನ ತೊದಲು ಬಂದಿತೋ
ಭಾಷೆಯ ನಂತರವೋ ? ಹೇಳುವಿರಾ !
ಇದೊಂದು ಉಪಭಾಷೆಯೋ ಅಥವಾ ಸ್ವತಃ ಭಾಷೆಯೋ?
ಭಾಷಾಕೋವಿದರೂ ತೊದಲುವಂಥ ಪ್ರತಿ ಪ್ರಶ್ನೆಯೋ !
ಪ್ರತಿ ತೊದಲೂ ಅರ್ಥಗಳ ದೇವರಿಗೆ ನಾವು
ನಿಷ್ಠೆಯಿಂದ ಅರ್ಪಿಸುವ ಒಂದು ನಿಶ್ಶಬ್ದ ಬಲಿ
ಸಂಪೂರ್ಣ ಜನಾಂಗವೊಂದು ತೊದಲಿದಾಗ
ರೂಪಿತವಹುದು ಮಾತೃಭಾಷೆ , ಇದನು ತಿಳಿ !
ನಮ್ಮದೂ ಹಾಗೆಯೇ , ನಮ್ಮ ಸೃಷ್ಟಿಸುವ ಕ್ಷಣದಲಿ
ಭಗವಂತನೂ ತೊದಲಿರಬೇಕು , ಅದರ ಫಲವೇ
ನಾವಾಡುವ ಪ್ರತಿ ಪದಕೂ ಬಹು ವಿಧಾರ್ಥಗಳ ಛಾಯೆ
ಅವನುಚ್ಚರಿಸುವುದೆಲ್ಲ ತೊದಲೇ , ಕಾವ್ಯದಂಥ ಮಾಯೆ !
“ವಿಕ್ಕು” ಎಂಬ ಕವಿತೆಯ ಮೂಲ ಮಲಯಾಳಂ ಮತ್ತು ಇಂಗ್ಲಿಷ್ ತರ್ಜುಮೆ :
ಕೆ ಸಚ್ಚಿದಾನಂದನ್, ಮಲಯಾಳಂ ಕವಿ
ಕನ್ನಡೀಕರಣ : ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

