ಲಹರಿ

ಕನ್ನಡಕವೆಂಬ ಸು – ಲೋಚನ !

Share Button

ಕನ್ನಡ ಎಂಬ ಪದಕ್ಕೆ ‘ಕ’ ಪ್ರತ್ಯಯ ಸೇರಿಸಿದರೆ ಕನ್ನಡಕವಾಗುತ್ತದೆ. ಬೇರಾವ ಭಾಷೆಗೂ ಇದು ಸಾಧ್ಯವಾಗದು. ನಮ್ಮ ಹಿಂದಿನವರೆಲ್ಲಾ ಕನ್ನಡಕ ಎಂದೇ ಕರೆದು ಇದನ್ನು ತಮ್ಮ ನಿಜಕಣ್ಣುಗಳೆಂದು ಗೌರವ ಕೊಡುತ್ತಿದ್ದರು. ಈಗಿನಂತೆ ಸ್ಪೆಕ್ಸ್ ಎಂದು ಕರೆದು ಇಲ್ಲದ ಮರ್ಯಾದೆ ಕೊಡುತ್ತಿರಲಿಲ್ಲ. ಇಷ್ಟಕೂ ಈ ಸ್ಪೆಕ್ಸ್ ಎಂಬುದು ಸ್ಪೆಕ್ಟಕಲ್ಸ್ (Spectacles) ಎಂಬುದರ ಹ್ರಸ್ವರೂಪ. ಹಾಗೆಂದರೆ A pair of glasses ಎಂದು ನಿಘಂಟು ಹೇಳುತ್ತದೆ. ಎರಡೂ ಕಣ್ಣಿಗೆ ಇದು ಲಗತ್ತಾಗುವುದರಿಂದ ಸ್ಪೆಕ್ಟಕಲ್ಸ್ ಎಂದೇ ಉಚ್ಚರಿಸಬೇಕು; ‘ಸ್ಪೆಕ್ಟಕಲ್’ ಎಂದು ಹೇಳಬಾರದು. ಇದು ಇಂಗ್ಲಿಷಿನ ನಿಯಮ. ಈ ಎಲ್ಲ ತೊಡಕೇಕೆಂದು ಜನರು ಸ್ಟೈಲಾಗಿ ‘ಸ್ಪೆಕ್ಸ್’ ಎಂದೇ ಕರೆದು ಕೈ ತೊಳೆದುಕೊಳ್ಳುತ್ತಾರೆ. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಪ್ರಾರಂಭದಲ್ಲಿ ಇದು ಸಂಶೋಧಿತವಾದರೂ ಬರು ಬರುತ್ತಾ ಇದೇ ಫ್ಯಾಷನ್ನಿನ ವಸ್ತುವಾಯಿತು. ನಾವು ಪುಟ್ಟವರಿದ್ದಾಗ ‘ಕೂಲಿಂಗ್ ಗ್ಲಾಸ್’ ಹಾಕಿಕೊಂಡಿದ್ದಾರೆ ಎಂದರೆ ಅವರು ಸಿರಿವಂತರು, ರಸಿಕರು, ಜೀವನವನ್ನು ಎಂಜಾಯ್ ಮಾಡುವವರು ಎಂದೇ ಅರ್ಥವಿತ್ತು. ‘ತಂಪು ಕನ್ನಡಕ’ ಎಂದೇ ಕನ್ನಡದ ಪತ್ತೇದಾರಿ ಕಾದಂಬರಿಕಾರರು ಬರೆಯುತ್ತಿದ್ದರು. ನಮ್ಮ ತಂದೆಯ ಸೋದರಿಯೊಬ್ಬರ (ನನಗೆ ಅತ್ತೆ) ಹೆಸರು ಸುಲೋಚನ ಎಂದು. ಹತ್ತನೇ ತರಗತಿಯಲ್ಲಿದ್ದಾಗ ‘ಸುಲೋಚನ’ ಎಂದರೆ ಕನ್ನಡಕ ಎಂದರ್ಥವು ನಿಘಂಟಿನಲ್ಲಿ ಇದ್ದುದನ್ನು ಪತ್ತೆ ಮಾಡಿ ಪರಮಾಶ್ಚರ್ಯವಾಯಿತು. ಅದುವರೆಗೂ ನಾನು ಲೋಚನ ಎಂದರೆ ಕಣ್ಣು, ಸುಲೋಚನ ಎಂದರೆ ಒಳ್ಳೆಯ ಕಣ್ಣುಳ್ಳವಳು ಎಂದು ಪದಶಃ ಅರ್ಥ ತಿಳಿದು ಸುಮ್ಮನಾಗಿದ್ದೆ. ಮೀನಾಕ್ಷಿ ಎಂದರೆ ಮೀನಿನಂಥ ಕಣ್ಣುಳ್ಳವಳು, ಹರಿಣಾಕ್ಷಿ ಎಂದರೆ ಜಿಂಕೆಯಂಥ ಕಣ್ಣುಳ್ಳವಳು, ವಿಶಾಲಾಕ್ಷಿ ಎಂದರೆ ವಿಶಾಲವಾದ ಕಣ್ಣುಳ್ಳವಳು ಅದೇ ರೀತಿ ಜಲಜಾಕ್ಷಿ ಎಂದರೆ ‘ಸದಾ ನೀರಾಡುವ ಕಣ್ಣುಳ್ಳವಳು’ ಎಂದು ಕನ್ನಡ ಕ್ಲಾಸಿನಲ್ಲಿ ಸಹಪಾಠಿಗಳು ಮಾತಾಡಿಕೊಳ್ಳುತ್ತಿದ್ದೆವು. ಒಂದು ಪದದ ಆಧಾರದ ಮೇಲೆ ಅದೇ ರೀತಿಯ ಇನ್ನೊಂದಷ್ಟು ಪದಗಳನ್ನು ಹೇಳುವ ‘ಪದಗಳಾಟ’ ಆಡುತ್ತಿದ್ದೆವು. ಇದರಿಂದ ನಮ್ಮ ಸ್ವಂತ ಪದಕೋಶ ಶ್ರೀಮಂತವಾಯಿತೆಂದರೆ ಉತ್ಪ್ರೇಕ್ಷೆಯಲ್ಲ. ಸರ್ಕಾರಿ ಶಾಲೆಯಾದರೂ ಶಿಕ್ಷಕರು ನಿಷ್ಠೆಯಿಂದ ಕಲಿಸುತ್ತಿದ್ದರು. ನಾವೇ ದಡ್ಡ ಶಿಖಾಮಣಿಗಳು. ಒಂದು ಸಲ ಹೇಳಿದರೆ ನಮ್ಮ ತಲೆಗೆ ಹೋಗದಷ್ಟು ನಿಧಾನ ಕಲಿಕೆಯವರಾಗಿದ್ದೆವು. ಇಂದಿನ ಮಕ್ಕಳಂತೆ ನಾವೇನೂ ಚುರುಕು ಬುದ್ಧಿಯವರಾಗಿರಲಿಲ್ಲ. ಈಗಿನ ಮಕ್ಕಳೋ ಬಾಯಲ್ಲೇ ಬ್ರಹ್ಮಾಂಡವನ್ನಿಟ್ಟುಕೊಂಡು ಸಲಹುತ್ತಿರುತ್ತಾರೆ! ತರಗತಿಯಲ್ಲಿ ಕನ್ನಡ ಟೀಚರು ಉಕ್ತಲೇಖನ ಬರೆಸುತ್ತಿದ್ದರು. ಎದ್ದು ನಿಲ್ಲಿಸಿ, ಬಾಯಲ್ಲಿ ಸ್ಪಷ್ಟವಾಗಿ ಪದಗಳನ್ನು ಹೇಳಿಸುತ್ತಿದ್ದರು. ವಂಶಪಾರಂಪರ್ಯವಾಗಿ ಬಂದಿದ್ದ ಊನದಿಂದಲೋ ಅಪಾರ ಪ್ರಮಾಣದ ಕೀಳರಿಮೆಯಿಂದಲೋ ನಾನು ತೊದಲುತ್ತಿದ್ದೆ. ‘ಲೋ ಬಿಕ್ಕಲ’ ಎಂದೇ ನನ್ನನ್ನು ಸೀನಿಯರ್ ಹುಡುಗರು ಕರೆದು ಅಣಕಿಸುತ್ತಿದ್ದರು. ಅಂತಹುದರಲ್ಲಿ ಮೇಷ್ಟ್ರುಗಳು ನನ್ನೊಳಗೆ ವಿಶ್ವಾಸ ತುಂಬಿ, ಕಷ್ಟಕರ ಪದಗಳನ್ನು ಒಡೆದು ಉಚ್ಚರಿಸಿಸಿ ಹೇಳಿಸುವ ಹರಸಾಹಸ ಮಾಡುತ್ತಿದ್ದರು. ಅಂಥ ಬಿಕ್ಕಲನು ಈಗ ನಿರರ್ಗಳವಾಗಿ ಪಾಠ ಮಾಡುವ ಮೇಷ್ಟ್ರಾಗಿದ್ದೇನೆ ಎಂಬುದೇ ಬದುಕಿನ ಪವಾಡ! ‘ಪಶ್ಚಿಮ’ ಎಂಬ ಪದವನ್ನು ಉಚ್ಚರಿಸಲು ನನಗೆ ಬರದೇ ಹೋದಾಗ ಹತ್ತು ಸಲ ‘ಪಶ್’ ಎನ್ನು, ಆಮೇಲೆ ಹತ್ತು ಸಲ ‘ಚಿಮ’ ಎನ್ನು ಎಂದು ಪ್ರಾಕ್ಟೀಸು ಮಾಡಿಸಿ, ‘ಈಗ ಒಟ್ಟಿಗೆ ಜೋರಾಗಿ ಹೇಳು’ ಎಂದು ಆಜ್ಞೆ ಮಾಡಿ, ನನಗೆ ಈ ಪದ ಬಾಯಲ್ಲಿ ಬರುವಂತೆ ಮಾಡಿದ್ದು ತರಗತಿ ಶಿಕ್ಷಕರದೋ ನನ್ನದೋ ಒಟ್ಟಿನಲ್ಲಿ ಇಬ್ಬರದೂ ಸಾಹಸಗಾಥೆ. ಇರಲಿ.

ನಮ್ಮ ಕಾಲದಲ್ಲಿ ಕನ್ನಡಕ ಹಾಕಿಕೊಂಡು ಬಂದರೆಂದರೆ, ಅವರಿಗೆ ಕಣ್ಣಿನ ದೋಷವಿದೆ ಎಂದೇ ಅರ್ಥವಿತ್ತು. ಕೂಲಿಂಗ್ ಗ್ಲಾಸ್, ಗಾಗಲ್ಸ್ ಎಲ್ಲಾ ನಮ್ಮಂಥವರಿಗೆಲ್ಲಿ? ವಿದೇಶೀಯರು ಮೈಸೂರಿನ ರಸ್ತೆಗಳಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಅಲೆದಾಡುವಾಗ ಬಗೆ ಬಗೆಯ ಕನ್ನಡಕಗಳನ್ನು ಧರಿಸಿದ್ದನ್ನು ನೋಡುತ್ತಿದ್ದೆವು. ಆಗ ತಾನೇ ಫ್ಯಾಷನ್ನಿನ ಒಂದು ಭಾಗವಾಗಿ ಕನ್ನಡಕವು ಪರಿವರ್ತನೆಯಾಗಿತ್ತು. ಕನ್ನಡಕವನ್ನು ತಿರುಗಿಸುತ್ತಾ ಚಿತ್ರ ವಿಚಿತ್ರ ಭಂಗಿಗಳಲ್ಲಿ ಕೂಲಿಂಗ್ ಗ್ಲಾಸನ್ನು ಎಸೆದು ಕಣ್ಣಿಗೆ ಹಾಕಿಕೊಳ್ಳುತ್ತಿದ್ದ ಸಿನಿಮಾ ಸ್ಟಾರ್ ರಜನೀಕಾಂತರ ಹಾವಭಾವಗಳು ಮನೆ ಮಾತಾಗಿದ್ದವು. ‘ಆಂಗಿಕವಾದ ಕೋತಿಯಾಟಗಳೆಲ್ಲ ನಟನೆಯಲ್ಲ; ಅವೇನಿದ್ದರೂ ಗಮನ ಸೆಳೆಯುವ ಮಾಯ್ಕಟ್ಟು’ಗಳೆಂಬ ಪಕ್ವತೆ ನಮಗೆ ಆಗ ಇರಲಿಲ್ಲ. ಜಾತ್ರೆಯಲ್ಲಿ ಸಿಗುವ ಬಗೆ ಬಗೆಯ ಬಣ್ಣಗಳ ಪುಟ್ಟ ಕನ್ನಡಕವನ್ನು ಹಾಕಿಕೊಂಡು, ಮಬ್ಬಾದ ಬೆಳಕಿನಲ್ಲೇ ಅಡ್ಡಾಡುವ ಖಯಾಲಿ ಮಾತ್ರ ಮಕ್ಕಳಲ್ಲಿ ಇತ್ತು. ಇದು ಬಿಟ್ಟಂತೆ, ಖಾಸಗೀ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಹಲವರು ದಪ್ಪನೆಯ ಬೂದುಗಾಜಿನಂಥ ಕನ್ನಡಕಗಳನ್ನು ಹಾಕಿಕೊಂಡು ಓಡಾಡುವುದನ್ನು ಕಾಣುತ್ತಿದ್ದೆವು. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇಂಥ ದೃಷ್ಟಿದೋಷವಾಗಲೀ ಕನ್ನಡಕ ಹಾಕಿಕೊಂಡು ಬರುವುದಾಗಲೀ ಹೆಚ್ಚಿರುತ್ತಿರಲಿಲ್ಲ. ಇಡೀ ಶಾಲೆಗೆ ಒಬ್ಬಿಬ್ಬರಷ್ಟೇ ಇಂಥವರು. ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ತಿನ್ನಬೇಕೆಂದು ಶಾಲೆಗೆ ಬಂದಿದ್ದ ಓರ್ವ ವೈದ್ಯರು ಹೇಳಿದ್ದರು. ಮಡಿಯ ಕಾರಣವಾಗಿ ನಮ್ಮ ಮನೆಗಳಲ್ಲಿ ಈರುಳ್ಳಿ ಬೆಳ್ಳುಳ್ಳಿಗಳಿರಲಿ, ಕ್ಯಾರೆಟ್ ಬೀಟ್‌ರೂಟ್‌ಗಳನ್ನೂ ತರುತ್ತಿರಲಿಲ್ಲ. ಈರುಳ್ಳಿ, ಬೆಳ್ಳುಳ್ಳಿ ಮುಟ್ಟಬಾರದೆಂದೂ ಕ್ಯಾರೆಟ್ ಬೀಟ್‌ರೂಟ್‌ಗಳು ಮ್ಲೇಚ್ಛರ ತರಕಾರಿಗಳೆಂದೂ ನಿಷೇಧಿಸಿದ್ದ ಕಾಲವದು. ನಮ್ಮಜ್ಜಿ ಮನೆಯಲ್ಲಂತೂ ಅದರ ಹೆಸರೆತ್ತುವಂತಿರಲಿಲ್ಲ. ನಾವು ಕನ್ನೇಗೌಡನ ಕೊಪ್ಪಲು, ಜಯನಗರಗಳಲ್ಲಿ ಬಾಡಿಗೆ ಮನೆ ಹಿಡಿದಾಗ ಈರುಳ್ಳಿ, ಕ್ಯಾರೆಟ್‌ಗಳನ್ನು ತಿನ್ನಲು ಶುರುವಿಟ್ಟುಕೊಂಡಿದ್ದು. ಆ ಕಾಲದ ಕ್ರಾಂತಿಯೇ ಇದು. ಹಸಿ ಕ್ಯಾರೆಟ್ ತಿನ್ನುವುದು ನಮ್ಮ ಆಗಿನ ಪ್ರಿಯವಾದ ಹವ್ಯಾಸ. ‘ಅಡುಗೆಗೆಂದು ತಂದಿದ್ದು, ಹಸೀದೇ ತಿಂದು ಮುಗಿಸಬೇಡ’ ಎಂದು ನಮ್ಮಮ್ಮ ಬಯ್ಯುತ್ತಿದ್ದರು. ಅಂತೂ ವಂಶಪಾರಂಪರ್ಯವಾಗಿ ಬಂದ ತಲೆಶೂಲೆಯ ಕಾರಣವಾಗಿ ಕ್ರಮೇಣ ನನ್ನ ಕಣ್ಣಿನ ದೃಷ್ಟಿ ಮಂದವಾಯಿತೇ ವಿನಾ ಸದ್ಯ ಹುಟ್ಟಿನಿಂದ ಕಣ್ಣಿಗೆ ಕನ್ನಡಕ ಸಿಕ್ಕಿಸಿಕೊಳ್ಳುವ ಶಿಕ್ಷೆ ಲಭಿಸಲಿಲ್ಲ. ಮೈಗ್ರೇನ್ ರೋಗಿಗಳಿಗೆ ಕಾಲಕ್ರಮೇಣ ದೃಷ್ಟಿನರವು ದುರ್ಬಲವಾಗುವುದು. ಕಣ್ಣಿನ ಸಮಸ್ಯೆಯು ಹುಟ್ಟಿನಿಂದ ಇಲ್ಲವೆಂದು ದೃಢವಾದರೇನೇ ವೈದ್ಯರು ಅರೆತಲೆನೋವೆಂಬ ಹಣೆಪಟ್ಟಿ ಕಟ್ಟುವರು. ಜೊತೆಗೆ ವಿಪರೀತ ಓದುವ ಖಯಾಲಿಯಿಂದಲೂ ಕಣ್ಣದೃಷ್ಟಿಯ ತೀಕ್ಷ್ಣತೆಯನ್ನು ಕಳೆದುಕೊಂಡೆ. ಓದುವಾಗ ಅನುಸರಿಸಬೇಕಾದ ಬೆಳಕಿನ ವೈಜ್ಞಾನಿಕತೆಯೂ ನಮಗೆ ಆಗ ಗೊತ್ತಾಗುತ್ತಿರಲಿಲ್ಲ. ‘ನಮ್ಮ ಹಿಂದಿನಿಂದ ಬೆಳಕು ಬೀಳಬೇಕು, ಪ್ರಕಾಶಮಾನವಾದ ಬೆಳಕಿನಲ್ಲಿ ಓದಬೇಕು’ ಎಂಬ ಪರಿಜ್ಞಾನ ಇರಲಿಲ್ಲ. ಟಂಗ್‌ಸ್ಟನ್ ತಂತಿಯಿರುವ ಬಲ್ಬಿನ ಬೆಳಕು ಸಾಕಾಗುತ್ತಿರಲಿಲ್ಲ. ಕರೆಂಟು ಹೋದರೆ ಸೀಮೆಯೆಣ್ಣೆ ಬುಡ್ಡಿಯೇ ಗತಿ. ಹೀಗೆ ಓದುವ ಹುಚ್ಚಿಗೆ ಸಿಕ್ಕಿಕೊಂಡ ನಮ್ಮ ಪೀಳಿಗೆಗೆ ಬೆಳಕಿನ ವಿಜ್ಞಾನವು ಅರ್ಥವಾಗುವುದರೊಳಗೆ ಕಣ್ಣಿಗೆ ಕನ್ನಡಕ ಬಂದಿತ್ತು. ‘ಅಂಗವೈಕಲ್ಯಗಳನ್ನು ಎತ್ತಾಡಬಾರದು, ದೂಷಿಸಬಾರದು’ ಎಂಬ ತಿಳಿವಳಿಕೆ ಆಗ ನಮಗೆ ಇರಲಿಲ್ಲ. ಹಾಗಾಗಿ ಚಿಕ್ಕ ಪುಟ್ಟ ವಯೋಮಾನದಲ್ಲೇ ಕನ್ನಡಕ ಹಾಕಿಕೊಳ್ಳುವವರನ್ನು ‘ಸೋಡಾಬುಡ್ಡಿ’ ಎಂದು ಕರೆದು ಹಾಸ್ಯ ಮಾಡುತ್ತಿದ್ದರು. ಹಾಗೆ ಕರೆಸಿಕೊಳ್ಳುವವರೂ ಅಷ್ಟೇನೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ತಮ್ಮ ವೈಕಲ್ಯವನ್ನು ಒಪ್ಪಿಕೊಂಡಿದ್ದರು ಎನಿಸುತ್ತದೆ. ಅಂದರೆ ಆ ಕಾಲವು ಈಗಿನಂತೆ ಹೆಚ್ಚು ಸೆನ್ಸಿಟೀವ್ ಆಗಿರಲಿಲ್ಲ.

ಕಣ್ಣಿಗೆ ಕಣ್ಣಾಗಲು ಕಂಡು ಕೊಂಡ ಕನ್ನಡಕವು ಇಂದು ಬಹು ದೊಡ್ಡ ಉದ್ಯಮ. ಅದರ ಗ್ಲಾಸುಗಳು, ಫ್ರೇಮುಗಳು ಸಾವಿರಾರು ರೂಪಾಯಿ ಬೆಲೆ ಬಾಳುವಂಥವು. ಪ್ರೊಗ್ರೆಸಿವ್, ಟ್ರಾನ್ಸಿಷನ್ ಎಂದೆಲ್ಲಾ ಆವಿಷ್ಕಾರಗೊಂಡು ದುಬಾರಿಯಾಗಿವೆ. ದೃಷ್ಟಿದೋಷದಲ್ಲಿ ಪ್ರಮುಖವಾಗಿ ಎರಡು ಬಗೆ. ದೂರದೃಷ್ಟಿದೋಷ ಮತ್ತು ಸಮೀಪದೃಷ್ಟಿದೋಷ. ನಲವತ್ತಾದ ಮೇಲೆ ಬರುವುದು ಚಾಳೀಸು ಖಾಯಿಲೆ. ಹಿಂದಿಯಲ್ಲಿ ‘ಚಾಲೀಸ್’ ಎಂದರೆ ನಲವತ್ತು ಎಂದರ್ಥ. ನಲವತ್ತು ವರುಷವಾದ ಮೇಲೆ ನಮ್ಮ ಕಣ್ಣಿನ ದೃಷ್ಟಿನರಗಳು ನಿಶ್ಶಕ್ತಗೊಳ್ಳುವುದೇ ಇದಕ್ಕೆ ಕಾರಣ. ಈ ಚಾಲೀಸ್ ಎಂಬುದೇ ‘ಚಾಳೀಸು’ ಎಂದು ಅಪಭ್ರಂಶಗೊಂಡು, ಹಾಗೆಂದರೆ ಕನ್ನಡಕ ಎಂದರ್ಥ ಬಂದು ಬಿಟ್ಟಿದೆ. ‘ನನ್ನ ಕಣ್ಣು ನೋಡುದ್ಯಾ? ಇಲ್ಲೆಲ್ಲೋ ಇಟ್ಟಿದ್ದೆ’ ಎಂದೇ ನಮ್ಮ ಮನೆಗೆ ಬರುವ ಸಂಬಂಧಿಕರೊಬ್ಬರು ಕಾವ್ಯಾತ್ಮಕವಾಗಿ ಕರೆಯುತ್ತಿದ್ದರು.

ವಯಸಾದ ಮೇಲೆ ಕನ್ನಡಕವೇ ಕಣ್ಣು. ಇದನ್ನು ಬಹಳ ಮಂದಿ ವಯಸಾದವರು ಒಪ್ಪಿಕೊಳ್ಳುವುದಿಲ್ಲ. ಕಣ್ಣುಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಕನ್ನಡಕ ಬಳಸುವುದಿಲ್ಲ. ನನ್ನ ಸಹೋದ್ಯೋಗಿಯಾಗಿದ್ದವರೊಬ್ಬರು ಸುರಸುಂದರಾಂಗ. ಕಷ್ಟಪಟ್ಟು ಕಣ್ಣು ಕಿರಿದು ಮಾಡಿಕೊಂಡು ಓದುತ್ತಿದ್ದರೇ ವಿನಾ ಕನ್ನಡಕ ಬಳಸುತ್ತಿರಲಿಲ್ಲ. ಕನ್ನಡಕವನ್ನು ಅದರ ಜೊತೆಗೆ ಕೊಟ್ಟಿರುವ ಕಪ್ಪು ಕವರಿನ ಸಹಿತ ಜೇಬಿನಲ್ಲಿ ಇಟ್ಟುಕೊಂಡರೆ ವಯಸಾದವರೆಂದು ಜಗತ್ತು ಜರಿಯುತ್ತದೆ ಎಂಬ ಕೀಳರಿಮೆಯಿಂದಲೇ ದಿನ ದೂಡುತ್ತಿದ್ದರು. ನನ್ನಂಥವರ ಒತ್ತಾಯಕ್ಕೆ ಮಣಿದೋ ಇನ್ನು ಸಾಧ್ಯವಾಗದೆಂದೋ ಅಂತೂ ಕಣ್ ಪರೀಕ್ಷೆ ಮಾಡಿಸಿಕೊಂಡು ದುಬಾರಿ ಬೆಲೆಯ ಕನ್ನಡಕ ಬಳಸಲು ಶುರುಮಾಡಿದರು. ಆದರೆ ಅದು ಯಾಕೋ ಅದರ ಕವರು ಬಳಸದೇ ಷರಟಿನ ಕಾಲರ್ ಕೆಳಗಿನ ಎರಡು ಗುಂಡಿಗಳ ನಡುವೆ ಸಿಕ್ಕಿಸಿಕೊಂಡು ಓಡಾಡುವ ದುರಭ್ಯಾಸ ಬೆಳೆಸಿಕೊಂಡು, ಆಗಾಗ ಬಗ್ಗಿದಾಗ ಬೀಳಿಸಿಕೊಂಡು ಫಜೀತಿ ಪಡುತ್ತಿದ್ದರು. ಕನ್ನಡಕವನ್ನು ಅದಕೆಂದೇ ಮಾಡಲಾದ ಕವರಿನಲ್ಲಿ ಇಟ್ಟು, ಜೇಬಿನಲ್ಲಿ ಹಾಕಿಕೊಂಡರೆ ಬಿದ್ದರೂ ಏಟಾಗುವುದಿಲ್ಲ, ಕನ್ನಡಕಕ್ಕೆ ಗೀರು ಬೀಳುವುದಿಲ್ಲ, ಅದರ ಗ್ಲಾಸು ಶುಭ್ರವಾಗಿರುತ್ತದೆಂಬ ತಿಳಿವು ಇಂಥವರಲ್ಲಿ ಇಲ್ಲವೆಂದಲ್ಲ; ಹಾಗೆ ಇಟ್ಟುಕೊಂಡರೆ ಅಸಹ್ಯವಾಗಿ ಕಾಣಿಸುತ್ತದೆ, ಸೌಂದರ್ಯ ಮಸುಕಾಗುತ್ತದೆಂಬ ಮನೋಭ್ರಾಂತಿ. ನಮಗಾಗಿ ಬದುಕುವುದಕ್ಕಿಂತ ಇನ್ನೊಬ್ಬರಿಗಾಗಿ ಬದುಕುವ ಇಂಥ ಮನೋಧರ್ಮಗಳೇ ಜಗತ್ತಿನಲ್ಲಿ ಅಧಿಕ. ಯಾರು ಏನೆಂದುಕೊಂಡರೆ ನನಗೇನು? ನನ್ನ ಅನುಕೂಲ ಮತ್ತು ನನ್ನ ವ್ಯಾಕುಲ ಎಂಬ ಸುಡುವಾಸ್ತವ ಪ್ರಜ್ಞೆ ಹೊಂದಲು ಒಂದು ವಿಧವಾದ ಜೀವನಪಕ್ವತೆ ಬೇಕು, ಇದಕೆ ಸ್ವಲ್ಪ ವಯಸು ಜಾಸ್ತಿಯಾಗಬೇಕು. ವಯಸಾದಂತೆಲ್ಲಾ ನಾವು ಕಟ್ಟಿಕೊಂಡ ಹಲವು ಭ್ರಮೆಗಳು ಬಗೆಹರಿದು, ಲೋಕವು ಇನ್ನೂ ನಿಚ್ಚಳವಾಗಿ ಕಾಣಿಸಲು ತೊಡಗುವುದು. ‘ಭ್ರಮೆಗಳಾಚೆಗೆ ಬದುಕಿದೆ; ಅಂಥ ನೇರವಂತಿಕೆಯನ್ನು ನಾವಿನ್ನೂ ಹೊಂದಬೇಕಿದೆ’ ಎಂಬ ಜೀವನಸತ್ಯ ಮನವರಿಕೆಯಾಗುವುದು.

ಏಕೆಂದರೆ ಈಗಿನವೆಲ್ಲಾ ಬೆಲೆ ಬಾಳುವ ಕನ್ನಡಕಗಳೇ. ನಲವತ್ತು ಐವತ್ತಾದ ಮೇಲೆ ಇವೇ ನಮ್ಮ ನಿಜವಾದ ಕಣ್ಣುಗಳು. ಇವಿಲ್ಲದೇ ಓದಲು, ಬರೆಯಲು ಆಗುವುದಿಲ್ಲ. ಒಂದಲ್ಲ ಒಂದು ಬಗೆಯ ಓದು ಬರೆಹಗಳನ್ನು ನಾವು ಮಾಡಲೇಬೇಕಾಗುತ್ತದೆ. ಅಟಲೀಸ್ಟು ಸಹಿ ಹಾಕಲು, ದಿನಾಂಕ ನೋಡಲು ಕನ್ನಡಕ ಬಳಸುವಂಥ ಅನಿವಾರ‍್ಯಕ್ಕೆ ತುತ್ತಾಗಬೇಕಾಗುತ್ತದೆ. ಆಗ ನಮ್ಮ ನಮ್ಮ ಕನ್ನಡಕವೇ ಆಸರೆ. ಬೇರೊಬ್ಬರ ಕನ್ನಡಕವನ್ನು ಯಾವ ಕಾರಣಕ್ಕೂ ಬಳಸಬಾರದು, ನಮ್ಮ ದೃಷ್ಟಿಗೆ ಪೂರಕವಾಗಿ ಬೇಕಾದಂಥ ಪವರನ್ನು ನೇತ್ರತಜ್ಞರು ಪರೀಕ್ಷೆ ಮಾಡಿ ಕೊಟ್ಟಿರುತ್ತಾರೆ. ಇವೆಲ್ಲಾ ಕಾಮನ್ ಸೆನ್ಸು; ರಾಕೆಟ್ ಸೈನ್ಸಲ್ಲ. ಆದರೂ ನಮ್ಮ ಜನರು ಕನ್ನಡಕದ ವಿಚಾರದಲ್ಲಿ ವಿಪರೀತ ಬೇಜವಾಬ್ದಾರಿ ತೋರುತ್ತಾರೆ; ನಿಜನಯನವನ್ನು ಅಲಕ್ಷಿಸುತ್ತಾರೆ. ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಒಂದೇ ಕನ್ನಡಕದಲ್ಲಿ ಮೂರ್ನಾಲ್ಕು ಬಗೆಯ ಪರಿಹಾರವನ್ನು ಬ್ಲೆಂಡ್ ಮಾಡಿದ್ದಾರೆ. ಓದಲು, ಬರೆಯಲು ಅನುಕೂಲವಾಗುವಂತೆ ಅದಕ್ಕೆ ತಕ್ಕುದಾದ ಪವರ್, ದೂರದಲ್ಲಿರುವುದು ಸ್ಪಷ್ಟವಾಗಿ ಕಾಣುವಂಥ ಇನ್ನೊಂದು ಪವರ್, ಈ ‘ಬೈ ಫೋಕಲ್’ ಎದ್ದು ಕಾಣದ ರೀತಿಯಲ್ಲಿ ಅಂದರೆ ಎರಡು ಗ್ಲಾಸುಗಳು ಜಾಯಿನ್ನಾದ ವಕ್ರರೇಖೆಯು ಕಾಣದ ಹಾಗೆ ಗ್ಲಾಸನ್ನು ಜೋಡಿಸಿಡುವ ತಂತ್ರ. ಕೆಳಗೆ ನೋಡಿ ಮೇಲೆ ನೋಡುವಾಗ ನಮಗೆ ಅಸ್ಪಷ್ಟತೆ ಎದುರಾಗಬಾರದೆಂಬ ಕಾರಣಕ್ಕೆ ಈ ಸೌಲಭ್ಯ ಬೇಕೇ ಬೇಕು. ಇದನ್ನು ‘ಇಂಟರ್ ಮೀಡಿಯಾ’ ಎನ್ನುತ್ತಾರೆ. ಕೆಳಗಿನ ಭಾಗ, ಮಧ್ಯಭಾಗ ಮತ್ತು ಮೇಲ್ಭಾಗ ಈ ಮೂರೂ ಸ್ಪಷ್ಟವಾಗಿ ಕಾಣುವಂತಾಗಬೇಕು; ಕ್ಷಣಮಾತ್ರವೂ ಕಣ್ಣಿಗೆ ಅಸಹಜವಾಗಬಾರದು! ಓದುವಾಗ ತಕ್ಷಣ ಕತ್ತೆತ್ತಿ ಮೇಲೆ ನೋಡಿದರೂ ದೃಷ್ಟಿ ಮಸುಕಾಗಬಾರದು ಎಂಬುದಕ್ಕಾಗಿ ಇಂಥ ಪ್ರೊಗ್ರೆಸಿವ್ ಗ್ಲಾಸ್ ಬೇಕು. ಇದು ದುಬಾರಿ. ಜೊತೆಗೆ ಟ್ರಾನ್ಸಿಷನ್ ಎಂಬ ಇನ್ನೊಂದು ಅನುಕೂಲ. ಬಿಸಿಲು ಇಲ್ಲದೇ ಇದ್ದಾಗ ಸಾದಾ ಕನ್ನಡಕವಾಗಿ, ಬಿಸಿಲಿಗೆ ಹೋದಂತೆ ಅದು ಕೂಲಿಂಗ್ ಗ್ಲಾಸಾಗಿ ಪರಿವರ್ತನೆಗೊಳ್ಳುವುದು. ಇನ್ನು ವಾಹನ ಚಲಾಯಿಸುವಾಗ ಮತ್ತು ಕಂಪ್ಯೂಟರ್ ಬಳಸುವಾಗ ಬೇಕಾಗುವ ಹೆಚ್ಚಿನ ಅನುಕೂಲಾತ್ಮಕ ರಕ್ಷಾ ಕವಚ – ಇದನ್ನು ಸಹ ನನ್ನ ಒಂದೇ ಕನ್ನಡಕದಲ್ಲಿ ಸೇರ್ಪಡೆ ಮಾಡಿದ್ದಾರೆ. ಇನ್ನಿದರ ಜೊತೆಗೆ ಆ್ಯಂಟಿ ರಿಫ್ಲೆಕ್ಟಿವ್, ಬ್ಲೂ ಲೈಟ್ ಫಿಲ್ಟರ್, ಯುವಿ ಪ್ರೊಟೆಕ್ಷನ್, ಸ್ಕ್ರಾಚ್ ರೆಸಿಸ್ಟೆನ್ಸ್ ಮುಂತಾದ ಕೋಟಿಂಗ್‌ಗಳು ಸಹ ಲಭ್ಯ. ಅಂತಾರಾಷ್ಟ್ರೀಯ ಗುಣಮಟ್ಟದ ವಿದೇಶೀಯ ಲೆನ್ಸುಗಳು ತುಟ್ಟಿ. ಜರ್ಮನಿಯ ಕಾರ್ಲ್ ಜೆ಼ಸ್, ಅಮೆರಿಕದ ಅಮೆರಿಕನ್ ಆಪ್ಟಿಕಲ್, ಜಪಾನಿನ ಹೊಯ ಮತ್ತು ನಿಕೊನ್, ಇಸ್ರೇಲಿನ ಶಮಿರ್, ಫ್ರಾನ್ಸಿನ ಎಸ್ಲರ್ ಮೊದಲಾದ ಕಂಪೆನಿಗಳ ಲೆನ್ಸು ದುಬಾರಿ ಬೆಲೆಯವು. ಆದರೆ ಅಷ್ಟೇ ಉತ್ಕೃಷ್ಟ ಗುಣಮಟ್ಟದಿಂದ ಕೂಡಿರುವಂಥವು.

ಇನ್ನು ಕನ್ನಡಕದ ಫ್ರೇಮು ಸಹ ಬಹಳವೇ ಮುಖ್ಯ. ಸಪೂರವಾದ ಹಗೂರಾದ (Light weight) ಆದರೆ ಗಟ್ಟಿಮುಟ್ಟಾದ ಆಕರ್ಷಕ ಫ್ರೇಮುಗಳು ಸಹ ದುಬಾರಿ. ನಾನು ಬಳಸುವ ಕನ್ನಡಕದ ಬೆಲೆ ಮೂವತ್ತು ಸಾವಿರ ರೂಗಳದ್ದು. ಈಗ ನೀವೇ ಹೇಳಿ: ಕಣ್ಣೀಗೆ ಕಣ್ಣಾದ ಈ ದುಬಾರಿ ಬೆಲೆಯ ಕನ್ನಡಕವನ್ನು ಕಣ್ಣಿನಷ್ಟೇ ಜೋಪಾನ ಮಾಡಬೇಕಲ್ಲವೇ? ಮೃದುವಾದ ಕವರಿಲ್ಲದೇ ಹಾಗೆಯೇ ಇಡುವುದು, ಒಂದೇ ಕೈಯ್ಯಿಂದ ತೆಗೆಯಲು ಪ್ರಯತ್ನಿಸುವುದು, ಅದಕೆಂದೇ ಇರುವ ಲೋಶನ್ನಿನಲ್ಲಿ ಆಗಿಂದಾಗ್ಗೆ ಒರೆಸಿ, ಅದಕೆಂದೇ ಕೊಡಲಾದ ಮೃದುಬಟ್ಟೆಯಿಂದ ಒರೆಸುವುದು, ಸ್ಕ್ರಾಚು ಅಂದರೆ ಗೀರಾಗದ ಹಾಗೆ ಸುರಕ್ಷಿತವಾಗಿರಿಸಿಕೊಳ್ಳುವುದು, ಒಂದು ಸ್ಥಳದಲ್ಲಿ ತಪ್ಪದೇ ಅಲ್ಲಿಯೇ ಇಡುವ ಸದಭ್ಯಾಸ ರೂಢಿಸಿಕೊಳ್ಳುವುದು, ಪ್ರಯಾಣ ಸಂದರ್ಭದಲ್ಲಿ ಜೇಬಿನಲ್ಲಿಟ್ಟರೆ ಹತ್ತುವಾಗ ಇಳಿಯುವಾಗ ಅಪ್ಪಚ್ಚಿಯಾಗದಂತೆ ನೋಡಿಕೊಳ್ಳುವ ಕಾರಣಕ್ಕೆ ಅದಕೆಂದೇ ಕೊಡ ಮಾಡಲಾದ ಬಾಕ್ಸಿನಲ್ಲಿ ಹಾಕಿಟ್ಟು ಒಯ್ಯುವುದು, ಹೀಗೆ ಮಗುವಿನಂತೆ ಜೋಪಾನ ಮಾಡಿಕೊಳ್ಳದೇ ಹೋದರೆ ಅದು ನಮ್ಮ ದಡ್ಡತನವಷ್ಟೇ. ಮುಖ್ಯವಾಗಿ ವರುಷಕ್ಕೊಮ್ಮೆ ನೇತ್ರಪರೀಕ್ಷೆ ಮಾಡಿಸಿಕೊಂಡು, ‘ಪವರು ಸರಿಯಿದೆಯೇ?’ ಎಂದು ತಿಳಿಯುವುದು ಸಹ ಮುಖ್ಯ. ನಮಗೆ ಬೇಕಾದ ಸರಿಯಾದ ಪವರನ್ನು ತಜ್ಞರು ಪರೀಕ್ಷೆಗಳ ಮೂಲಕ ನಿಗದಿಗೊಳಿಸುತ್ತಾರೆ. ಪವರು ಕಡಮೆಯಾದರೆ ಅಕ್ಷರಗಳು ಮಸುಕಾಗಿ ಕಣ್ಣಿಗೆ ಹಿಂಸೆಯಾಗುತ್ತದೆ; ಪವರು ಹೆಚ್ಚಾದರೂ ಹಿಂಸೆಯಾಗುತ್ತದೆ. ರೆಗ್ಯುಲರಾಗಿ ಕನ್ನಡಕ ಬಳಸದೇ ಹೋದರೆ ನಮ್ಮ ಕಣ್ಣಿನ ದೃಷ್ಟಿ ಸಾಮರ್ಥ್ಯ ಕಡಮೆಯಾಗಿ, ಹೆಚ್ಚಿನ ಪವರು ಬೇಕಾಗುವ ಗ್ಲಾಸನ್ನು ಹೊಂದಬೇಕಾಗುತ್ತದೆ. ಕನ್ನಡಕ ಬಳಸಿದರೆ ಅದಕ್ಕೆ ಅಡಿಕ್ಟ್ ಆಗುತ್ತೇವೆಂಬ ಮೂರ್ಖತನದ ನಿರ್ಣಯದಲ್ಲಿ ಕೆಲವರಿದ್ದು, ಇಂಥವರು ಕೊನೆಗೆ ವಿಧಿಯಿಲ್ಲದೇ ಹೆಚ್ಚು ಪವರ್ ಇರುವ ಗ್ಲಾಸನ್ನು ಬಳಸಲೇಬೇಕಾದ ದುರಂತಕ್ಕೆ ಒಳಗಾಗುವರು.

ಈಗಂತೂ ಬಹುಪಾಲು ಮಂದಿಗೆ ಡಯಾಬಿಟೀಸು. ಭಾರತವು ಮಧುಮೇಹಿ ರೋಗಿಗಳ ತವರೂರೆಂದೇ ಖ್ಯಾತಿ. ಸಕ್ಕರೆ ಖಾಯಿಲೆಗೂ ಕನ್ನಡಕಕ್ಕೂ ಸಹ ಸಂಬಂಧ. ಬೇರೆ ಬೇರೆ ಕಾರಣಗಳಿಗಾಗಿ ವೈದ್ಯರು ಕನ್ನಡಕವನ್ನು ಸಜೆಸ್ಟ್ ಮಾಡುತ್ತಾರೆ. ಹಿಂದಿನ ಕಾಲದಲ್ಲೇನೋ ಅಂದಚೆಂದವಿಲ್ಲದ ಸೋಡಾ ಗ್ಲಾಸುಗಳೇ ಇದ್ದವು. ಹೆಣ್ಣುಮಕ್ಕಳು ಕನ್ನಡಕ ಹಾಕಿಕೊಂಡಿದ್ದರೆ ಅವರ ಮದುವೆಯು ತಡವಾಗಿ ಆಗುತ್ತಿತ್ತು. ಬಂದ ವರಮಹಾಶಯರು ‘ಅರ್ಧಂಬರ್ಧ ಕುರುಡಿ’ ಎಂದು ಒಪ್ಪುತ್ತಲೇ ಇರಲಿಲ್ಲ. ಈಗ ಹಾಗಲ್ಲ. ದೃಷ್ಟಿಮಾಂದ್ಯಕ್ಕೂ ಫ್ಯಾಷನ್ನಿಗೂ ಒಂದೇ ರೀತಿಯ ಕನ್ನಡಕ. ಬಹುಪಾಲು ಮಂದಿಯು ಕನ್ನಡಕ ಬಳಸುವುದರಿಂದ ಇದೇ ಸಚಿತ್ರವಾಗಿ ಕನ್ನಡಕ ಬಳಸದವರೇ ವಿಚಿತ್ರವಾಗಿ ಕಾಣುವ ಕಾಲ. ‘ಹೆಣ್ಣಿನ ಕಣ್ಣ ದೃಷ್ಟಿ ಸಮರ್ಪಕವಾಗಿದೆಯೇ?’ ಎಂದು ಪರೀಕ್ಷಿಸಲು ನಮ್ಮ ತಾಯಿಯವರ ಕಾಲದಲ್ಲಿ ವಧುಪರೀಕ್ಷೆಯ ನೆಪದಲ್ಲಿ ಸೂಜಿದಾರ ತೆಗೆದುಕೊಂಡು ಹೋಗುತ್ತಿದ್ದರಂತೆ. ಕಾಫಿ ಕೊಡುವಾಗ ಅವಳ ಕಾಲುಗಳನ್ನೊಮ್ಮೆ ಗಮನಿಸುವುದು, ಹಾಡು ಹೇಳಿಸುವುದರ ಮೂಲಕ ಅವಳ ಕಂಠಪರೀಕ್ಷೆ, ಸೂಜಿಗೆ ದಾರ ಪೋಣಿಸೆನ್ನುವ ಮೂಲಕ ಅವಳ ನೇತ್ರಪರೀಕ್ಷೆ ಹೀಗೆ ವಧುಪರೀಕ್ಷೆಯು ಸಾಂಗವಾಗಿ ನಡೆಯುತ್ತಿತ್ತಂತೆ. ಈಗ ಎಲ್ಲವೂ ಬದಲಾಗಿದೆ. ಬದಲಾಗಬೇಕು ಮತ್ತು ಹೆಣ್ಣುಮಕ್ಕಳ ಆತ್ಮಗೌರವಕ್ಕೆ ಧಕ್ಕೆ ತರುವ ಯಾವುದೂ ಸಂಪ್ರದಾಯದ ಹೆಸರಿನಲ್ಲಿ ನಡೆಯಬಾರದು. ಈಗಿನ ಪರಿಸ್ಥಿತಿಯಲ್ಲಿ ಮದುವೆಗೆ ಹೆಣ್ಣುಮಕ್ಕಳು ಸಿಕ್ಕರೆ ಸಾಕು ಎಂಬಂತಾಗಿದೆ. ಬಹುಪಾಲು ಹೆಣ್ಣುಮಕ್ಕಳು ಹೆಚ್ಚು ಓದಿಕೊಂಡು ವಿದ್ಯಾವಂತೆಯರಾಗಿ, ಉದ್ಯೋಗಸ್ಥರಾಗಿ ‘ಹೈಪ್ರೊಫೈಲ್’ ಆಗಿದ್ದಾರೆ. ಈ ಪ್ರೊಫೈಲಿಗೆ ಮ್ಯಾಚಾಗುವ ಗಂಡುಮಕ್ಕಳು ಸಿಗುತ್ತಿಲ್ಲ! ವರದಕ್ಷಿಣೆ ಇರಲಿ, ಕನ್ಯಾಶುಲ್ಕ ಕೊಟ್ಟು ವಿವಾಹವಾಗಬೇಕಾದ ಅನಿವಾರ‍್ಯ ಎದುರಾಗಿದೆ. ಹೆಚ್ಚು ಓದಿರದ, ಒಳ್ಳೆಯ ಸಂಬಳ ಸಿಗದಂಥ ಉದ್ಯೋಗದಲ್ಲಿರುವ ಗಂಡುಗಳಿಗೆ ಮದುವೆಗಾಗಿ ಹೆಣ್ಣು ಸಿಗುತ್ತಿಲ್ಲವೆಂಬ ಗೋಳು ಸರ್ವವೇದ್ಯ. ಹಿಂದಿನ ಕಾಲಘಟ್ಟದ ಸಿನಿಮಾಗಳ ಹಾಸ್ಯ ಸನ್ನಿವೇಶಗಳಲ್ಲಿ ಉಬ್ಬುಹಲ್ಲಿರುವ ದಪ್ಪನೆಯ ಕನ್ನಡಕ ತೊಟ್ಟ ದಢೂತಿ ಹೆಣ್ಣುಮಕ್ಕಳನ್ನು ತೋರಿಸಿ ಅಣಕ ಮಾಡುತ್ತಿದ್ದರು. ವಾಂಶಿಕವಾಗಿ ಬಂದ ನೇತ್ರದೋಷಕ್ಕೆ ಯಾರು ಹೊಣೆ? ಇಂಥವರು ಧರಿಸುವ ಕನ್ನಡಕವನ್ನೂ ಆಡಿಕೊಳ್ಳುತ್ತಿದ್ದರು. ಇದೀಗ ಡಿಜಿಟಲ್ ಕಾಲ. ಎಲ್ಲವೂ ಸ್ಮಾರ್ಟ್. ಕನ್ನಡಕವೂ ಸ್ಮಾರ್ಟ್ ಆಗಿದೆ. ತೆಳುವಾದ ಕನ್ನಡಕಗಳಾದರೂ ಹೆಚ್ಚು ಪವರನ್ನು ಹೊಂದಿರುವಂಥವಾಗಿವೆ. ಯಾರದು ಎಷ್ಟು ಪವರು? ಎಂದು ಮೇಲ್ನೋಟಕ್ಕೆ ಗೊತ್ತಾಗುವುದೇ ಇಲ್ಲ. ಒಂದಂತೂ ಸತ್ಯ: ದುಬಾರಿಯಾದಷ್ಟೂ ಹಗೂರವಾಗಿರುತ್ತವೆ. ನೋಸ್ ಪ್ಯಾಡ್ ಇರುವ ಮತ್ತು ಇಲ್ಲದಿರುವ ಎಂದು ಎರಡು ರೀತಿಯ ಫ್ರೇಮುಗಳು ದೊರೆಯುತ್ತವೆ. ನೋಸ್ ಪ್ಯಾಡ್ ಇರುವ ಫ್ರೇಮಾದರೆ ಆಗಿಂದಾಗ್ಗೆ ನೋಸ್ ಪ್ಯಾಡುಗಳನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕಣ್ಣಕಸವೋ, ಜಿನುಗುವ ಮೇಣದಂಥ ಜಿಡ್ಡೋ, ಧೂಳೋ ಎಲ್ಲವೂ ಸೇರಿ ಕಮಟಾಗುತ್ತದೆ ಮತ್ತು ನೋಸ್‌ಪ್ಯಾಡು ಗಟ್ಟಿಯಾಗಿ ಬಿಡುತ್ತದೆ. ಅಂದರೆ ಕನ್ನಡಕವನ್ನು ಮೇನ್‌ಟೇನ್ ಮಾಡುವುದೊಂದು ಕಲೆ ಮತ್ತು ವಿಜ್ಞಾನ. ಸುಮ್ಮನೆ ಕಣ್ಣಿಗೆ ಸಿಕ್ಕಿಸಿಕೊಂಡು ಬಿಟ್ಟರೆ ಆಗದು. ಪ್ರತಿ ಬಾರಿಯೂ ತೆಳುವಾದ ಮೃದುಬಟ್ಟೆಯಿಂದಲೇ ಶುಚಿಗೊಳಿಸಬೇಕಿಲ್ಲ; ಕನ್ನಡಕವನ್ನು ಒಮ್ಮೆ ಈಚೆ ತೆಗೆದು, ನಮ್ಮ ಬಾಯಿಂದ ಉಸಿರನ್ನು ಜೋರಾಗಿ ಬಿಟ್ಟರೆ ಗ್ಲಾಸು ಕ್ಲೀನಾಗುತ್ತದೆ. ಕನ್ನಡಕದ ಗ್ಲಾಸನ್ನು ಕೈಯಿಂದ ಮುಟ್ಟಬಾರದೆಂಬ ಪರಿಜ್ಞಾನವೂ ಕೆಲವರಿಗಿಲ್ಲ. ಹೇಗೋ ಅಡ್ಡಂ ತಿಡ್ಡಂ ಬದುಕುವ ಜನರಿಗೆ ಕನ್ನಡಕದ ಸೂಕ್ಷ್ಮತೆಯು ಅರಿವಾಗುವುದಿಲ್ಲ. ಎಲ್ಲೋ ಇಟ್ಟು ಹುಡುಕುವುದು, ಕವರ್ ಹಾಕದೇ ಕೈಚೀಲದೊಳಗಿಟ್ಟು ಬಿಡುವುದು, ಉಲ್ಟಾಪಲ್ಟಾ ಇಡುವುದು ಹೀಗೆ ಸುಲೋಚನೆಗೆ ಮರ್ಯಾದೆಯನ್ನೇ ಕೊಡುವುದಿಲ್ಲ. ಇಂಥವರನ್ನು ಕಂಡರೆ ನನಗಾಗುವುದಿಲ್ಲ. ಇದು ಪರೋಕ್ಷವಾಗಿ ಅವರು ಬದುಕುವ ರೀತಿನೀತಿಗಳನ್ನೂ ಬದುಕನ್ನು ಅವರು ಪರಿಭಾವಿಸಿದ ರಿವಾಜನ್ನೂ ಹೇಳುವಂಥವು. ಸಹಿ ಹಾಕುವಾಗ ಯಾರದೋ ಕನ್ನಡಕಕ್ಕೆ ಗೋಗರೆಯುವುದು, ಮನೆಯ ಯಾರ‍್ಯಾರದೋ ಕನ್ನಡಕವನ್ನು ಹಾಕಿಕೊಂಡು ಅಲೆದಾಡುವುದು ಇವೆಲ್ಲ ಅಶಿಸ್ತು. ಹುಟ್ಟಿಬಿಟ್ಟಿದ್ದೇವೆ; ಸಾಯುವತನಕ ಬದುಕಿರುತ್ತೇವೆ’ ಎಂಬ ಉಡಾಳ ಬುದ್ಧಿಯವರೇ ಹೀಗೆ ಕನ್ನಡಕಕ್ಕೆ ಸೂಕ್ತ ಗೌರವವನ್ನು ಕೊಡುವುದಿಲ್ಲ. ನೇತ್ರಪರೀಕ್ಷೆಯನ್ನು ಮುಂದಕ್ಕೆ ಹಾಕುವುದು, ‘ಕನ್ನಡಕ ಬಳಸಿ’ ಎಂಬ ತಜ್ಞರ ಸಲಹೆಯನ್ನು ಪಾಲಿಸದಿರುವುದು ಇವೆಲ್ಲ ಅವರ ಬೇಜವಾಬ್ದಾರಿಯನ್ನು ಸೂಚಿಸುವಂಥವು. ಬುದ್ಧಿವಂತಿಕೆ ಕಡಮೆಯಿದ್ದರೂ ಪರವಾಗಿಲ್ಲ; ಆದರೆ ಇಂಥ ಅಶಿಸ್ತು ಮತ್ತು ಅನಾಗರಿಕ ಮಂದಿಯೊಂದಿಗೆ ಬದುಕಲಾಗದು ಎಂದು ನಾನು ಎಷ್ಟೋ ಸಲ ಅಂದುಕೊಳ್ಳುತ್ತಿರುತ್ತೇನೆ. ದೇವರು ಕೊಟ್ಟಿದ್ದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ಕನಿಷ್ಟ ಪ್ರಜ್ಞೆ ಇಲ್ಲದವರಿವರು.

ತೀರಾ ಸೌಂದರ್ಯಪ್ರಜ್ಞೆಗೆ ಬೆಲೆ ಕೊಡುವವರಿಗೆ ಮತ್ತು ತಲೆ ಕೆಡಿಸಿಕೊಂಡವರಿಗೆ ಕಾಂಟಾಕ್ಟ್ ಲೆನ್ಸು ಇದ್ದೇ ಇದೆ. ಆದರೆ ಇದನ್ನು ನಿರ್ವಹಣೆ ಮಾಡುವುದಂತೂ ಭಯಂಕರ ಕಷ್ಟ. ಮರೆಯದೇ ಪ್ರತಿ ರಾತ್ರಿ ಮಲಗುವ ಮುಂಚೆ ಅವನ್ನು ಕಣ್ಣಿನಿಂದ ಈಚೆ ತೆಗೆದು ಅದಕೆಂದೇ ಕೊಡಮಾಡಲಾದ ರಕ್ಷಾಕವಚದಲ್ಲಿ ಹಾಕಿಡಬೇಕು ಮತ್ತು ಇದು ವಿಪರೀತ ದುಬಾರಿ ಬೆಲೆ ಕೂಡ. ಕನ್ನಡಕ ಹಾಕಿಕೊಂಡರೆ ತನ್ನ ವಯಸು ಹೆಚ್ಚಾಗಿ ಕಾಣುತ್ತದೆಂಬ ಕೀಳರಿಮೆ ಇರುವವರು ಮತ್ತು ಅತಿ ಸಿರಿವಂತರು ಇದನ್ನು ಕೊಳ್ಳುತ್ತಾರೆ. ನಮ್ಮ ತಂದೆಯ ಕಡೆಯ ದೂರದ ಸಂಬಂಧಿಕರೊಬ್ಬರು ಬಹುಕೋಟಿ ಒಡೆಯರು. ಅದೆಷ್ಟೋ ಲಕ್ಷ ಖರ್ಚು ಮಾಡಿ, ಕಣ್ಣಾಪರೇಷನ್ನು ಮಾಡಿಸಿಕೊಂಡಿದ್ದಾರೆ. ಎಪ್ಪತ್ತರಲ್ಲಿ ಇಪ್ಪತ್ತರ ಕಣ್ಣಾಗಿದೆ ಈಗ’ ಎಂದು ಹೇಳಿಕೊಂಡು ತಿರುಗುತ್ತಾರೆ, ಇವರು ಕನ್ನಡಕ ಬಳಸುವುದಿಲ್ಲ.

ಹಾಕಿಕೊಂಡ ಕನ್ನಡಕ ತೆಗೆದರೆ ಕಣ್ಣೇ ಕಾಣುವುದಿಲ್ಲ ಎಂಬ ಕೆಟಗರಿಯವರು, ಓದಲು ಮತ್ತು ಬರೆಯಲು ಮಾತ್ರ ಬಳಸುವವರು, ಸ್ಟೈಲಿಗಾಗಿ ಬಳಸುವವರು, ಬಿಸಿಲು ಮತ್ತು ಧೂಳಿನಿಂದ ರಕ್ಷಣೆ ಪಡೆಯಲೆಂದು ಉಪಯೋಗಿಸುವವರು ಹೀಗೆ ಕನ್ನಡಕಧಾರಿಗಳಲ್ಲಿ ಹಲಬಗೆ. ಮಾತಾಡುವಾಗ ಹತ್ತಾರು ಸಲ ಹಾಕಿಕೊಂಡ ಕನ್ನಡಕವನ್ನು ಈಚೆ ತೆಗೆದೂ ಹಾಕಿಕೊಳ್ಳುವ ಒಂದು ಬಗೆಯ ಅಂಗಚೇಷ್ಟೆಯೊಂದಿದೆ. ಪ್ರಾಜ್ಞರು ಮತ್ತು ಹಿರಿಯರು ಒಂದೆರಡು ಸಲ ಹೀಗೆ ಮಾಡಿದರೆ ಸರಿ; ಆದರೆ ಇದನ್ನೇ ದುರಭ್ಯಾಸ ಮಾಡಿಕೊಂಡರೆ ನೋಡಲು ಹಿತವಾಗಿರುವುದಿಲ್ಲ. ಹೀಗೆ ಪದೇ ಪದೇ ಹಾಕಿ ತೆಗೆದು ಮಾಡುವವರಿಗೆಂದೇ ಕನ್ನಡಕವನ್ನು ಹಿಡಿದಿಟ್ಟುಕೊಳ್ಳುವ ದಾರವೊಂದಿದೆ. ಎದುರು ಕುಳಿತವರು ಮಾತಾಡುತ್ತಿರುವಾಗ ನಾವು ಹಾಕಿಕೊಂಡ ಕನ್ನಡಕವನ್ನು ಈಚೆ ತೆಗೆದು ಕ್ಲೀನು ಮಾಡಿಕೊಳ್ಳಲು ಶುರುವಿಟ್ಟರೆ ಅವರು ಮಾತಾಡುತ್ತಿರುವುದರಲ್ಲಿ ನಮಗೆ ಆಸಕ್ತಿ ಇಲ್ಲ ಎಂದರ್ಥ ಜೊತೆಗೆ ಅವರಿಗೆ ನಾವು ಅವಮರ್ಯಾದೆ ಮಾಡುತ್ತಿದ್ದೇವೆಂದೂ ಅರ್ಥ. ಹೀಗೆ ಕನ್ನಡಕವು ನಮ್ಮ ಭಾವನೆ ಮತ್ತು ವರ್ತನೆಗಳನ್ನು ಅಭಿವ್ಯಕ್ತಿಸುವ ವಾಹಕವೂ ಆಗಿದೆ. ನಮ್ಮಜ್ಜಿಯು ಓದುವಾಗ ಹಾಕಿಕೊಳ್ಳುತ್ತಿದ್ದ ಕನ್ನಡಕಕ್ಕೆ ಒಂದು ಕಡ್ಡಿಯೇ ಇರುತ್ತಿರಲಿಲ್ಲ. ದಾರ ಸಿಕ್ಕಿಸಿಕೊಳ್ಳುತ್ತಿದ್ದರು. ಹತ್ತಾರು ಮಕ್ಕಳಿದ್ದರೂ ಒಬ್ಬರಾದರೂ ಅವರ ಕನ್ನಡಕವನ್ನು ರಿಪೇರಿ ಮಾಡಿಸಿ ಕೊಡಲೇ ಇಲ್ಲ; ಅವರೂ ಕೇಳಲೇ ಇಲ್ಲ. ಮಹಾತ್ಮ ಗಾಂಧೀಜಿಯವರು ಹಾಕಿಕೊಳ್ಳುತ್ತಿದ್ದ ಕನ್ನಡಕವಂತೂ ಜಗದ್ವಿಖ್ಯಾತವಾಗಿದೆ. ಅವರು ಬಳಸುತ್ತಿದ್ದ ಕನ್ನಡಕದ ನಮೂನಿಯ ಚಿತ್ರದಲ್ಲಿ ಕನ್ನಡಕದ ಗಾಜು ಸೀಳುಬಿಟ್ಟಿದ್ದರೆ ಅದು ಗಾಂಧೀಜಿಯ ಹತ್ಯೆ ಎಂದರ್ಥ ಮಾಡಬೇಕು. ಅಂದರೆ ಕೇವಲ ಕನ್ನಡಕವೊಂದೇ ನಮ್ಮೆಲ್ಲ ಭಾವ ಸ್ವಭಾವ ಮತ್ತು ನಡೆದು ಬಂದ ದಾರಿಯನ್ನು ಅರುಹುವಂಥ ಸಾಮರ್ಥ್ಯ ಹೊಂದಿದೆ. ಕನ್ನಡಕವೊಂದು ಅಸ್ತವ್ಯಸ್ತವಾಗಿ ಬಿದ್ದಿದ್ದರೆ ಸಮ್‌ಥಿಂಗ್ ವೆಂಟ್ ರಾಂಗ್ ಎಂದೇ ಅರ್ಥ. ಟಿ ಕೆ ರಾಮರಾಯರ ಪತ್ತೇದಾರಿ ಕಾದಂಬರಿಗಳಲ್ಲಿ ಕನ್ನಡಕವೊಂದು ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಪ್ರಮುಖಾಸ್ತ್ರ. ಪ್ರಭಾವಿ ಜನಪ್ರತಿನಿಧಿಗಳು ಮತ್ತು ಸರ್ಕಾರದ ಪ್ರಮುಖರು ಭಾಷಣ ಮಾಡುವಾಗ ಅವರ ಅಕ್ಕಪಕ್ಕ ಕಪ್ಪು ಕನ್ನಡಕ ಧರಿಸಿದ ಬಂದೂಕುಧಾರಿಗಳು ನಿಂತಿರುತ್ತಾರೆ. ಅಂದರೆ ನೆರೆದ ಜನಜಂಗುಳಿಯಲ್ಲಿ ಅವರು ಯಾರನ್ನು ಗಮನಿಸುತ್ತಾರೆಂಬುದು ಸಮೂಹಕ್ಕೆ ಗೊತ್ತಾಗಬಾರದಂತೆ. ಆಧುನಿಕ ತಾಂತ್ರಿಕತೆಯು ಕನ್ನಡಕವನ್ನೂ ಬಿಟ್ಟಿಲ್ಲ. ಅದರ ಎರಡೂ ಕಡ್ಡಿಗಳಲ್ಲೀಗ ಪುಟ್ಟ ಪುಟ್ಟ ಬ್ಲೂಟೂತ್ ಸ್ಪೀಕರ್‌ಗಳನ್ನು ಲಗತ್ತಿಸಿಡುವ ತಂತ್ರಜ್ಞಾನ ಬಂದಿದೆ. ಇಯರ್ ಫೋನ್ ಕೆಲಸವನ್ನೀಗ ಕನ್ನಡಕವೇ ಮಾಡತೊಡಗಿದೆ. ಹೀಗೆ ಕನ್ನಡಕವೆಂಬುದು ನಮ್ಮ ಕಣ್ಣದೃಷ್ಟಿಗೆ ಬಲವೂಡಲು ಆವಿಷ್ಕಾರವಾದದ್ದು ಇದೀಗ ನಮ್ಮ ನಾಗರಿಕತೆ ಬೆಳೆದಂತೆಲ್ಲ ಅದೂ ನಮ್ಮೊಂದಿಗೆ ವೈವಿಧ್ಯಮಯವಾಗಿ ಬದಲಾಗುತ್ತಿದೆ. ಕನ್ನಡಕವು ಕೇವಲ ಕನ್ನಡಕವಾಗಿ ಈಗ ಉಳಿದಿಲ್ಲ! ಕೊನೆಯ ಮಾತೆಂದರೆ, ಕನ್ನಡಕವು ನಮ್ಮ ಸ್ವಭಾವ, ವ್ಯಕ್ತಿತ್ವದ ದ್ಯೋತಕ. ನಾವು ಆಯ್ಕೆ ಮಾಡಿಕೊಂಡು ಬಳಸುವ ಕನ್ನಡಕವು ನಮ್ಮ ಬದುಕಿನ ಶುಚಿರುಚಿಯ ಪ್ರತೀಕ ಎಂದರೆ ತಪ್ಪಲ್ಲ.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ            

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *