(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾಗ – 5 : ಬ್ಯೂಟಿಫುಲ್ ಬೆಲ್ಜಿಯ೦ – ಬ್ರಸ್ಸೆಲ್ಸ್
ದಿನ 7
ಮುಂದಿನ ನಮ್ಮ ಪ್ರಯಾಣ ಈಶಾನ್ಯ ದಿಕ್ಕಿನಲ್ಲಿರುವ ಬ್ರಸ್ಸೆಲ್ಸ್ ಗೆ. ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ, ನಮ್ಮ ಕನಸಿನ ಪ್ಯಾರಿಸ್ ಗೆ ವಿದಾಯ ಹೇಳಿ, ಯೂರೋಪ್ ನ ಈಶಾನ್ಯ ದಿಕ್ಕಿನೆಡೆಗೆ ಪ್ರಯಾಣ ಬೆಳೆಸಿದೆವು. ಪ್ಯಾರಿಸ್ನಿ೦ದ ಸುಮಾರು 300-ಕಿಲೋಮೀಟರ್ ದೂರದ ಬ್ರಸ್ಸೆಲ್ಸ್, ಬೆಲ್ಜಿಯಂ ದೇಶದ ರಾಜಧಾನಿ ಮತ್ತು ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಕೇಂದ್ರ ಕಚೇರಿಯನ್ನು ಹೊಂದಿರುವ ನಗರ. ಬೆಲ್ಜಿಯ೦ ಗಾಜು, ಬೆಲ್ಜಿಯ೦ ವ್ಯಾಫಲ್ಸ್ ಬಗ್ಗೆ ಕೇಳಿದ್ದ ನಮಗೆ ಆ ದೇಶ ನೋಡುವ ಕಾತುರ.
ಲಂಡನ್ ಮತ್ತು ಪ್ಯಾರಿಸ್ ನಲ್ಲಿ ಒಣ ಹವೆ, ಸ್ವಲ್ಪ ಸೆಕೆ ವಾತಾವರಣ ಇದ್ದರೆ, ಈಗ ಇದ್ದಕ್ಕಿದ್ದ ಹಾಗೆ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಂಡಿತು. ಮೋಡ ಮುಸುಕಿದ ವಾತಾವರಣ. ಸುಮಾರು 4 ಗ೦ಟೆಗಳ ನ೦ತರ ಬ್ರಸ್ಸೆಲ್ಸ್ ನಗರ ಪ್ರವೇಶಿಸಿ 30 ನಿಮಿಷದಲ್ಲಿ ನೇರವಾಗಿ ನಮ್ಮ ಬಸ್ ಊಟದ ಹೋಟೆಲ್ ಹತ್ತಿರ ನಿಂತಿತು. ಹೋಟೆಲ್ ಮುಟ್ಟುವವರೆಗೂ ಬಸ್ಸಿನ ಒಳಗಿನಿ೦ದಲೇ ನಗರದ ವಿವಿಧ ಭಾಗಗಳ ವೀಕ್ಷಣೆಯಾಯಿತು. ಭಾರತೀಯ ರೆಸ್ಟೋರೆಂಟ್ ನಲ್ಲಿ ಭಾರತೀಯ ಖಾದ್ಯಗಳ ಭೋಜನ ಮುಗಿಸಿದ ನಂತರ ಎಲ್ಲರೂ ಬಸ್ಸಿನಲ್ಲಿ ಕುಳಿತಾಗ, ಹೋಟೆಲ್ ಮಾಲೀಕ ಓಡೋಡಿ ಬಂದ. ಏನೆಂದು ಕೇಳಲು ‘ಮೊಬೈಲ್ ಫೋನ್ ಮೊಬೈಲ್ ಫೋನ್ ‘ಎ೦ದು ಕೂಗುತ್ತಿದ್ದ. ನಮ್ಮವರು ಯಾರೋ ಫೋನ್ ಬಿಟ್ಟು ಬಂದಿದ್ದಾರೆ ಎಂದು ನಾವು ತಿಳಿದೆವು. ಆದರೆ ವಾಸ್ತವಾ೦ಶ ಏನೆಂದರೆ ಗಡಿಬಿಡಿಯಲ್ಲಿ ಆ ಹೋಟೆಲ್ ಮಾಲೀಕನ ಮೊಬೈಲ್ ಫೋನನ್ನು ನಮ್ಮವರು ಯಾರೋ ತಂದು ಬಿಟ್ಟಿದ್ದರು. ಸಾಮಾನ್ಯವಾಗಿ ನಾವು ಏನಾದರೂ ಬಿಟ್ಟು ಬರುವುದು ಸಹಜ. ಆದರೆ ಅವರ ಫೋನ್ ತೆಗೆದುಕೊಂಡು ಬಂದಿದ್ದು ಮುಜುಗರ ಹಾಗೂ ತಮಾಷೆಯ ವಿಷಯವಾಗಿತ್ತು. ಅಲ್ಲಿಂದ ಹೊರಡುವ ವೇಳೆಗೆ ಸಣ್ಣಗೆ ಮಳೆ ಹನಿ ಪ್ರಾರಂಭವಾಯಿತು.
ಅಲ್ಲಿಂದ ನಾವು ಮೊದಲಿಗೆ ಗ್ರಾಂಡ್ ಪ್ಲೇಸ್ ಗೆ ಭೇಟಿಕೊಟ್ಟೆವು. ದಾರಿಯಲ್ಲಿ ನಮ್ಮ ಗೈಡ್, ಜಗತ್ತಿನಲ್ಲಿಯ ಅತ್ಯಂತ ಸುಂದರ ಸ್ಕ್ವೆಯರ್ ಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಿಂದ, ನಮಗೂ ಅತ್ಯಂತ ಕುತೂಹಲವಿತ್ತು. ಸುಮಾರು ಅರ್ಧ ಗಂಟೆ ಬಸ್ಸಿನಲ್ಲಿ ಪ್ರಯಾಣಿಸಿದ ನಂತರ ಒಂದು ಕಡೆ ಬಸ್ ನಿಂತಿತು. ಅಷ್ಟು ಹೊತ್ತಿಗೆ ಮಳೆ ಪ್ರಾರ೦ಭ ವಾಯಿತು. ಅಲ್ಲಿಂದ ನಾವು ಕಾಲ್ನಡಿಗೆಯಲ್ಲಿ ಮಳೆಯಲ್ಲೇ ಹೊರಟೆವು. ಛತ್ರಿ ಇರುವವರು ಛತ್ರಿ ಹಿಡಿದು ಹೊರಟರು. ನಾವು ನಾಲ್ಕು ಜನಕ್ಕೆ ಒಂದೇ ಛತ್ರಿ ಇತ್ತು. ನಮ್ಮ ಗೈಡ್ ತನ್ನ ಛತ್ರಿಯನ್ನು ಕೊಟ್ಟರು. ಸ್ವಲ್ಪ ಗಲ್ಲಿ ಅಂತಹ ಜಾಗ ದಾಟಿ ಮುಂದೆ ಹೋದೆವು. ಅದೇ ಗ್ರಾಂಡ್ ಪ್ಲೇಸ್ ಸ್ಕ್ವೆಯರ್.. ಗ್ರಾಂಡ್ ಪ್ಲೇಸ್, ಬ್ರಸೆಲ್ಸ್ ನಗರದ ಕೇಂದ್ರ ಭಾಗ. 12ನೇ ಶತಮಾನದಿಂದಲೂ ಸಾಮಾಜಿಕ ಆರ್ಥಿಕ, ಮತ್ತು ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನ. ಅನೇಕ ಬಾರಿ ಫ್ರೆಂಚ್ ಸೈನಿಕರ ದಾಳಿಗೆ ತುತ್ತಾಗಿ, ಪುನರ್ ನಿರ್ಮಿತ ಗೊಂಡಿರುವ ಸ್ಥಳ. 1695ರ ದಾಳಿಯಲ್ಲಿ ಹಾನಿಗೊಂಡ ಕಟ್ಟಡಗಳ ಅಳಿದುಳಿದ ಬುನಾದಿಯ ಮೇಲೆ ಪುನರ್ ನಿರ್ಮಿಸಿಕೊಂಡು ತನ್ನ ಮೂಲ ಆಕಾರ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡಿವೆ. ಅನೇಕ ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ಈ ಸ್ಥಳ ತನ್ನ ನೈಜತೆ ಮತ್ತು ಮೂಲ ಸೌಂದರ್ಯವನ್ನು ಕಾಪಾಡಿಕೊಂಡು ಯುನೆಸ್ಕೋ ದ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.
ಸುತ್ತಲೂ ಅತ್ಯಂತ ಸುಂದರ ವಿವಿಧ ವಿನ್ಯಾಸಗಳ ದೊಡ್ಡ ದೊಡ್ಡ ಕಟ್ಟಡಗಳು. ಅದರ ಒಂದು ಮೂಲೆಯಲ್ಲಿ ಮೊದಲ ಮಹಾಯುದ್ಧದಲ್ಲಿ ದಾಳಿಗೆ ಒಳಗಾಗಿ ಸ್ವಲ್ಪ ಶಿಥಿಲ ಗೊ೦ಡ ಟೌನ್ಹಾಲ್ ಇತ್ತು. ನಂತರ ಅದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಈ ಸ್ಥಳದ ಸರಾಸರಿ ವಿಸ್ತೀರ್ಣ ಸುಮಾರು ಒಂದು ಕ್ರಿಕೆಟ್ ಮೈದಾನದಷ್ಟು ಇರಬಹುದು. ಮಧ್ಯೆ ನಿ೦ತು ಚಿತ್ರೀಕರಣ ಮಾಡಿಕೊಂಡು, ಫೋಟೋಗಳನ್ನು ತೆಗೆದುಕೊಂಡು, ರಸ್ತೆಯಲ್ಲಿ ಸಾಗಿದೆವು.
ಅಲ್ಲಿ ಒಂದು ಚೌಕದಲ್ಲಿ ಒಂದು ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಮೂರು ನಾಲ್ಕು ವರ್ಷದ ಬಾಲಕನ ಪ್ರತಿಮೆ. ಅದರ ಸುತ್ತ ಅಲಂಕೃತಗೊಂಡ ನೀರಿನ ಕಾರಂಜಿ. ಹೂವಿನ ಗಿಡಗಳು. ಅಲ್ಲಿ ಅತಿಯಾದ ಜನಸಂದಣಿ. ಎಲ್ಲರೂ ಆ ಪ್ರತಿಮೆ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ದೇವಸ್ಥಾನದ ಮುಂದೆ ಅಥವಾ ಪ್ರಕೃತಿ ಸೌಂದರ್ಯದ ಮುಂದೆ ಫೋಟೋ ತೆಗೆದುಕೊಳ್ಳುವುದನ್ನು ನೋಡಿದ್ದ ನಮಗೆ, ಮೂತ್ರ ವಿಸರ್ಜನೆ ಮಾಡುತ್ತಿರುವ ನಗ್ನ ಹುಡುಗನ ಪ್ರತಿಮೆಗೆ ಇಷ್ಟೊಂದು ಮುಗಿಬಿದ್ದ ಜನಗಳನ್ನು ನೋಡಿ ಆಶ್ಚರ್ಯ, ತಮಾಷೆ ಎನಿಸಿತು. ಆಗ ನಮ್ಮ ಗೈಡ್, ಅದು ‘ಮನಿಕ್ಕೆನ್ ಪಿಸ್’ ಪ್ರತಿಮೆ ಎಂದೂ, ಅದೇ ಬೆಲ್ಜಿಯಂ ದೇಶದ ರಾಷ್ಟ್ರೀಯ ಸ್ಮಾರಕ ಚಿನ್ಹೆ ಎಂದೂ ಬೆಲ್ಜಿಯಂ ದೇಶದ ಜನರು ಪ್ರತಿಮೆಗೆ ತಮ್ಮ ಆದರ, ಪ್ರೀತಿ, ವಿಶ್ವಾಸ ಮತ್ತು ಗೌರವ ಸೂಚಿಸುತ್ತಾರೆ, ಎಂದು ತಿಳಿದು ಕುತೂಹಲ ಹೆಚ್ಚಾಯಿತು. ಮನೆಕ್ಕನ್ ಪಿಸ್’ 1619ರಲ್ಲಿ ಆಕರ್ಷಕ ಕಾರಂಜಿಯ ಮಧ್ಯೆ 55.5 ಸೆಂಟಿಮೀಟರ್ ಎತ್ತರದ ಮೂತ್ರ ವಿಸರ್ಜನೆ ಮಾಡುತ್ತಿರುವ ಬಾಲಕನ ಪ್ರತಿಮೆ ರಚಿಸಿದ್ದಾರೆ. ಈ ಪ್ರತಿಮೆ ನಗರದ ಜನರ ಪ್ರೀತಿಗೆ ಪಾತ್ರವಾಗಿದೆ. ವಿಷಯ ಏನೆ೦ದರೆ ಶತ್ರುಗಳು ಬ್ರಸೆಲ್ಸ್ ನಗರ ಧ್ವಂಸ ಮಾಡಲು ಬಂದಾಗ ಬಾಂಬ್ ಮೇಲೆ ಮೂತ್ರ ವಿಸರ್ಜನೆ ಮಾಡಿ ನಗರವನ್ನು ಒಬ್ಬ ಬಾಲಕ ಉಳಿಸಿದ್ದನು. ಇದರ ನೆನಪಿನಾರ್ಥವಾಗಿ ಈ ಪ್ರತಿಮೆ ಇಡಲಾಗಿದೆ. ಮೂಲ ಪ್ರತಿಮೆ ನಗ್ನಾವಸ್ಥೆಯಲ್ಲಿದ್ದರೂ ಬ್ರಸೆಲ್ಸ್ ಜನ ಪ್ರೀತಿಯಿಂದ ತೊಡಿಸಿದ ಉಡುಗೆಗಳು ಸಾವಿರಕ್ಕಿಂತಲೂ ಹೆಚ್ಚಾಗಿದ್ದು ಅವೆಲ್ಲ ಮ್ಯೂಸಿಯಂನಲ್ಲಿ ಪ್ರದರ್ಶಿತವಾಗಿವೆ.
ಅಲ್ಲಿ ನಮ್ಮ ಗೈಡ್ ಕೊಡಿಸಿದ ಬೆಲ್ಜಿಯಂ ವ್ಯಾಫಲ್ಸ್ ತಿ೦ದು ವಾಪಸ್ ಬಂದೆವು.
ಅಲ್ಲಿಂದ ಮುಂದೆ ನಾವು ಅಟಾಮಿಯಂ ಗೆ ಹೋದೆವು. ಅದು ದೂರದಿಂದ ನೋಡಿದಾಗ ನಾವು ಹೈಸ್ಕೂಲ್ನಲ್ಲಿ ಓದುವಾಗ ಭೌತಶಾಸ್ತ್ರದಲ್ಲಿ ನೋಡಿದ್ದ ಪರಮಾಣು ಚಿತ್ರ ನೆನಪಾಯಿತು. ಆ ಪರಮಾಣು ಆಕಾರದಲ್ಲಿ ಸ್ಟೀಲ್ ನಲ್ಲಿ ದೊಡ್ಡ ಆಕೃತಿ ಮಾಡಿದ್ದರು. ಐಫಲ್ ಟವರ್ ನಷ್ಟು ದೊಡ್ಡ ಆಕೃತಿ ಅಲ್ಲದಿದ್ದರೂ, ಅದನ್ನು ಮಾಡಿದ ಉದ್ದೇಶ ಅದೇ ಆಗಿತ್ತು. 1958 ರಲ್ಲಿ ಬ್ರಸೆಲ್ಸ್ ನಲ್ಲಿ ನಡೆದ ಜಾಗತಿಕ ಮೇಳದ ಮುಖ್ಯ ಆಕರ್ಷಣೆಯಾಗಿ ಈ ರಚನೆಯನ್ನು ನಿರ್ಮಿಸಲಾಗಿತ್ತು. ಒಂದೊಂದೂ 18 ಮೀಟರ್ ವ್ಯಾಸವುಳ್ಳ ಒಂಬತ್ತು ಗೋಳಗಳನ್ನು ಭೌತಶಾಸ್ತ್ರದ ಪರಮಾಣು ಆಕಾರದಲ್ಲಿ ಒ೦ದನ್ನೊ೦ದು ಕಬ್ಬಿಣದ ತೊಲೆಗಳಿ೦ದ ಪರಮಾಣು ಆಕೃತಿಯಲ್ಲಿ ಸೇರಿಸಿದ್ದಾರೆ. ನಿಜ ರೂಪದ ಪರಮಾಣುವಿಗಿ೦ತ 165 ಬಿಲಿಯನ್ ನಷ್ಟು ಹಿಗ್ಗಿಸಿ ನಿರ್ಮಿಸಿದ್ದಾರೆ. ವಿಜ್ಞಾನದಲ್ಲಿ ಅದರಲ್ಲೂ ಅಣು ಭೌತಶಾಸ್ತ್ರದಲ್ಲಿ ತಮಗಿರುವ ನಂಬಿಕೆಯ ಪ್ರತೀಕವಾಗಿ ಅದರಲ್ಲೂ ಬೆಲ್ಜಿಯಂನ ಯುರೇನಿಯಂ ಬಳಸಿ ಪರಮಾಣು ವಸ್ತುಗಳನ್ನು ತಯಾರಿಸಲು ಉಪಯೋಗಿಸಿರುವುದರಿಂದ ಮಾನವ ಕುಲದ ಶಾಂತಿಪಾಲನೆಗಾಗಿ ಸಂಶೋಧನೆ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ, ಈ ಆಕೃತಿಯನ್ನು ರಚಿಸಲಾಗಿದೆ.
ಸಮಯಾಭಾವದಿ೦ದ ಅದರ ಒಳಗಡೆ ಹೋಗದೇ, ಅದರ ಮುಂದೆ ಫೋಟೋ ತೆಗೆಸಿಕೊಂಡು ನಮ್ಮ ಪ್ರಯಾಣವನ್ನು ಈಶಾನ್ಯ ದಿಕ್ಕಿನಲ್ಲೇ ಇರುವ ಆಮ್ಸ್ಟರ್ ಡಾ೦ ಕಡೆಗೆ ಮು೦ದುವರೆಸಿದೆವು.
ಅಬ್ಬಾ – ಆಮ್ಸ್ಟರ್ಡಾ೦ – ನೆಚ್ಚಿನ ನೆದರ್ಲಾ೦ಡ್ಸ್
ಸಂಜೆಯ ಹೊತ್ತಿಗೆ ಆಮ್ಸ್ಟರ್ಡಾ೦ ತಲುಪಿದೆವು. ಇದು ಬ್ರಸ್ಸೆಲ್ಸ್ ನಿಂದ 200 ಕಿ ಮೀ . 3 ಗ೦ಟೆಗಳ ಪ್ರಯಾಣ. ಇಲ್ಲಿಯ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡವಾಗಿದ್ದು ವಿಮಾನಗಳು ಇಳಿಯಲು ಆಕಾಶದಲ್ಲೇ ತುಂಬಾ ಹೊತ್ತು ಕಾಯುತ್ತಿರುತ್ತವೆ ಎಂದು ತಿಳಿಸುತ್ತಿರುವಾಗಲೇ, ಒಂದೆರಡು ವಿಮಾನಗಳು ಆಕಾಶದಲ್ಲೇ ನಿಶ್ಚಲವಾಗಿ ನಿ೦ತಿದ್ದವು. ಆ ತರಹದ ದೃಶ್ಯ ನಾವು ಜೀವಮಾನದಲ್ಲೇ ನೋಡಿರಲಿಲ್ಲ. ಎರಡನೇ ದೃಶ್ಯವೆಂದರೆ ನಾವು ರಸ್ತೆಯಲ್ಲಿ ಬಸ್ಸಿನಲ್ಲಿ ಹೋಗುತ್ತಿರುವಾಗ, ಒ೦ದು ವಿಮಾನ ನಮ್ಮ ರಸ್ತೆಗೆ ಅಡ್ಡಲಾಗಿದ್ದ ಮೇಲ್ಸೇತುವೆ ಮೇಲೆ ( ನೆಲದ) ಹೋಗುತ್ತಿತ್ತು. ಆಮ್ಸ್ಟರ್ ಡಾ೦ ನಗರ ನೆದರ್ಲಾ೦ಡ್ ನ ನ ರಾಜಧಾನಿ. ಉತ್ತರದ ವೆನ್ನಿಸ್ ಎಂದೇ ಖ್ಯಾತಿ ಹೊಂದಿರುವ ಈ ನಗರ 10 ಲಕ್ಷ ಜನಸಂಖ್ಯೆಯನ್ನು ಹೊ೦ದಿದೆ. 17ನೇ ಶತಮಾನದ ವಾಸ್ತುಶಿಲ್ಪದ ಪ್ರಾಚೀನ ಕಟ್ಟಡಗಳನ್ನು ಹೊ೦ದಿದೆ. ಅಸಭ್ಯ ಮನೋರಂಜನೆ, ಲೈಂಗಿಕ ಚಟುವಟಿಕೆಗಳು, ವೇಶ್ಯಾವಾಟಿಕೆ, ಮಾದಕ ವಸ್ತುಗಳ ಬಹಿರಂಗ ಮಾರಾಟ ಮತ್ತು ಬಳಸುವಿಕೆಯಿಂದ ‘ಸಿನ್ಸಿಟಿ’ ಎಂಬ ಕುಖ್ಯಾತಿ ಪಡೆದಿದೆ
ರಾತ್ರಿಯ ಊಟವಾದ ನಂತರ, ಸುಮಾರು ಏಳು ಗಂಟೆಗೆ ಆಮ್ಸ್ಟರ್ಡಾ೦ ನ ವಿಮಾನ ನಿಲ್ದಾಣದ ಬಳಿ ಇದ್ದ ಎನ್ಹೆಚ್ ಹೋಟೆಲ್ ಮುಟ್ಟಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44608

–ಟಿ.ವಿ.ಬಿ.ರಾಜನ್ , ಬೆಂಗಳೂರು


