ಒಂದು ಸಾರಿ ಯಮಧರ್ಮರಾಜನು ಮಹಾವಿಷ್ಣುವನ್ನು ಕಾಣಲು ವೈಕುಂಠಕ್ಕೆ ಹೋಗಬೇಕಾಯಿತು. ಬಾಗಿಲಲ್ಲೇ ಇದ್ದ ಗರುಡನು ಯಮಧರ್ಮನನ್ನು ಗೌರವಾದರಗಳಿಂದ ಕರೆದು ಕುಳ್ಳಿರಿಸಿ ತಾನು ವಿಷ್ಣುವಿಗೆ ಸಂದೇಶ ಮುಟ್ಟಿಸಿ ಕರೆ ಬರುವವರೆಗೆ ಕುಳಿತಿರಿ ಎಂದು ಪ್ರಾರ್ಥಿಸಿದ. ಅಲ್ಪ ಕಾಯುವ ವೇಳೆಯಲ್ಲಿ ಯಮಧರ್ಮನ ದೃಷ್ಟಿ ಯಾಕೋ ಗೋಡೆಯ ಮೇಲೆ ಕುಳಿತಿದ್ದ ಪಕ್ಷಿಯೊಂದರ ಮೇಲೆ ನೆಟ್ಟಿತ್ತು. ಇದನ್ನು ಗರುಡ ಗಮನಿಸಿದ. ಅವನಿಗೆ ಆ ಪಕ್ಷಿಯ ಅಂತ್ಯ ಒದಗಿತು ಎನ್ನಿಸಿ ಹೇಗಾದರೂ ಅದನ್ನು ಯಮಧರ್ಮನ ದೃಷ್ಟಿಯಿಂದ ಕಾಪಾಡಬೇಕೆಂದು ಆಲೋಚಿಸಿದ. ಅಷ್ಟರಲ್ಲಿ ಒಳಕ್ಕೆ ಕರೆಬಂದು ಯಮಧರ್ಮನು ವಿಷ್ಣುಸನ್ನಿಧಿಗೆ ಹೋದ. ಅವನು ಬರುವಷ್ಟರಲ್ಲಿ ಗರುಡನು ಆ ಪಕ್ಷಿಯನ್ನು ಬಹುದೂರಕ್ಕೆ ಕರೆದೊಯ್ದು ಬಿಟ್ಟುಬಂದ. ಹೊರಗೆ ಬಂದ ಯಮಧರ್ಮನು ಮತ್ತೆ ಗೋಡೆಯ ಕಡೆಗೆ ನೋಡಿದ. ಅವನು ಮೊದಲು ಕಂಡ ಪಕ್ಷಿಯು ಅಲ್ಲಿರಲಿಲ್ಲ. ಏಕೋ ಯಮಧರ್ಮನ ಮುಖದಲ್ಲಿ ಕಿರುನಗೆ ಮೂಡಿತು.
ಅದನ್ನು ಕಂಡು ಗರುಡನು “ಯಮಧರ್ಮರಾಜಾ, ತಮ್ಮ ಮುಖದ ಮೇಲೆ ನಗೆಯು ಸೂಸಿದ ಕಾರಣವೇನು?” ಎಂದು ಪ್ರಶ್ನಿಸಿದ.
“ಗರುಡಾ, ನಾನು ಒಳಗೆ ಹೋಗುವ ಮೊದಲು ನನ್ನ ದೃಷ್ಟಿ ಅಲ್ಲಿ ಕುಳಿತಿದ್ದ ಪಕ್ಷಿಯೊಂದರ ಮೇಲೆ ಬಿದ್ದಿತ್ತು. ಅದರ ಅಂತ್ಯಕಾಲ ಸಮೀಪಿಸಿತ್ತು ಅದು ಕೆಲವೇ ಕ್ಷಣಗಳಲ್ಲಿ ಸಪ್ತಸಾಗರಗಳಾಚೆಯಿರುವ ಕಾಡುಬೆಕ್ಕಿಗೆ ಆಹಾರವಾಗಬೇಕಿತ್ತು. ಅದನ್ನು ಅಲ್ಲಿಗೆ ಹೇಗೆ ಸ್ಥಳಾಂತರಿಸುವುದು ಎಂದು ಆಲೋಚಿಸುತ್ತಿದ್ದೆ. ಆದರೆ ನಾನು ಹಿಂದಿರುಗುವಷ್ಟರೊಳಗೆ ಯಾರೋ ನನ್ನ ಕೆಲಸವನ್ನು ಸುಲಭ ಮಾಡಿದ್ದಾರೆ. ಅದು ತಲುಪಬೇಕಾದ ಜಾಗಕ್ಕೆ ತಲುಪಿಸಿದ್ದಾರೆ. ಅದಕ್ಕೇ ನಗು ಬಂತು” ಎಂದನು.
ಈ ಮಾತಿಗೆ ಗರುಡನು “ಅಯ್ಯೋ ಆ ಕೆಲಸ ಮಾಡಿದ್ದು ನಾನೇ. ಆ ಪಕ್ಷಿಯನ್ನು ನಿನ್ನ ದೃಷ್ಟಿಯಿಂದ ದೂರಮಾಡಿದರೆ ಅದರ ಪ್ರಾಣ ಉಳಿಸಬಹುದು ಎಂದು ನಾನು ಯೋಚಿಸಿದ್ದೆ” ಎಂದನು.
“ನೀನು ತಪ್ಪು ತಿಳಿದಿದ್ದೀಯೆ. ನನ್ನ ದೃಷ್ಟಿಬಿದ್ದ ಮಾತ್ರಕ್ಕೆ ನಾನು ಅದನ್ನು ಕೊಂಡೊಯ್ಯುತ್ತೇನೆ ಎಂಬುದು ಸರಿಯಲ್ಲ. ಜೀವಿಯು ಹುಟ್ಟುವಾಗಲೇ ಅದರ ಸಾವನ್ನು ಭಗವಂತ ನಿರ್ಧರಿಸಿ ಬಿಟ್ಟಿರುತ್ತಾನೆ. ಅದು ನೆರವೇರಲೇಬೇಕು. ನಾನು ಭಗವಂತನ ಆಜ್ಞೆಯನ್ನು ಪಾಲಿಸುವ ಕೆಲಸ ಮಾಡುತ್ತೇನಷ್ಟೇ. ಭಗವಂತನ ನಿಯಮವನ್ನು ಮೀರುವುದು ಯಾರಿಗೂ ಸಾಧ್ಯವಿಲ್ಲ.” ಎಂದ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

