ಊರಿನಿಂದ ಹಿಂತಿರುಗಿ ಮನೆಗೆ ಬಂದ ರಮಾಳನ್ನು ಬಾಗಿಲಲ್ಲೇ ಎದುರುಗೊಂಡರು ಅವಳ ಅತ್ತೆ ಕೌಸಲ್ಯಾ. “ಎಲ್ಲವೂ ಸಾಂಗವಾಗಿ ಮುಗಿಯಿತೇ? ಆಕೆಯ ಅಣ್ಣಂದಿರಿಬ್ಬರ ಕುಟುಂಬದವರೂ ಪ್ರವಾಸಕ್ಕೆ ಹೋಗಿದ್ದಾರಂತೆ. ಒಬ್ಬ ಅಣ್ಣನ ಮಗ ಊರಿನಲ್ಲೇ ಇದ್ದರೂ ಫೋನ್ ಮಾಡಿದರೆ ಅವನು ಪಿಕ್ ಮಾಡಲಿಲ್ಲವಂತೆ. ಮನೆಯ ಹತ್ತಿರ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತಂತೆ. ಪಾಪದ ಹೆಣ್ಣುಮಗಳು ಅವಳು ವಾಸವಿದ್ದ ಮನೆಯ ಮುಂಬಾಗಿಲಿನಲ್ಲಿಯೇ ಬಿದ್ದುಬಿಟ್ಟಿದ್ದಳಂತೆ. ಏಳದಿದ್ದಾಗ ಅಕ್ಕಪಕ್ಕದವರಿಗೆ ಅನುಮಾನ ಬಂದು ಹತ್ತಿರ ಹೋಗಿ ನೋಡಿದಾಗ ಅವಳ ಪ್ರಾಣ ಹೋಗಿಬಿಟ್ಟಿತ್ತಂತೆ. ಹೇಗೋ ಆಕೆ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಅಣ್ಣಂದಿರ ಮನೆಯಲ್ಲಿಯೇ ಇದ್ದರೆ ಹೀಗೆ ಅನಾಥ ಹೆಣವಾಗುವ ಗತಿ ಬರುತ್ತಿರಲಿಲ್ಲ. ವಾರಸುದಾರರಿಗಾಗಿ ಪರದಾಡುತ್ತಿದ್ದಾಗ ನಿಮ್ಮ ಮನೆಯ ಲ್ಯಾಂಡ್‌ಲೈನ್ ನಂಬರ್ ಸಿಕ್ಕಿತು ಅದಕ್ಕೆ ಫೋನ್ ಮಾಡಿದೆ ಎಂದು ನಿಮ್ಮೂರಿನರ‍್ಯಾರೋ ತಿಳಿಸಿದರು. ನಾನವರಿಗೆ ನೀನಾಗಲೆ ಅಲ್ಲಿಗೆ ಹೊರಟಿರುವುದನ್ನು ತಿಳಿಸಿದೆ. ಆಗವರು ಭೇಷಾತು ಬಿಡಿ ಕುಟುಂಬದವರು ಒಬ್ಬರಾದರೂ ಸ್ಥಳಕ್ಕೆ ಹೋಗಿದ್ದಾರಲ್ಲಾ ಎಂದು ಕಾಲ್ ಕಟ್ ಮಾಡಿಬಿಟ್ಟರು. ಮಗ ಶೇಷು ಇದ್ದಿದ್ದರೆ ನಿನ್ನ ಜೊತೆಗೆ ಬರುತ್ತಿದ್ದ. ಈ ಸಮಯದಲ್ಲಿ ಅವನೂ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದಾನೆ. ಏನು ಮಾಡುವುದು. ನೀನೊಬ್ಬಳೇ ಹೇಗೆ ನಿಭಾಯಿಸಿದೆಯೋ ಎಂಬ ಆತಂಕವಾಗಿತ್ತು. ಎಂದು ತಮ್ಮ ಕಾಳಜಿಯನ್ನು ತೋರಿದರು. ಈಗ ಹೇಳು ಮಿಕ್ಕ ಕಾರ್ಯಗಳನ್ನು ಯಾರು ನೆರವೇರಿಸುತ್ತಾರಂತೆ?” ಎಂದು ಪ್ರಶ್ನಿಸಿದರು.
ಅವರ ಎಲ್ಲ ಪೃಶ್ನೆಗಳಿಗೆ ಒಂದೇ ಉತ್ತರವೆನ್ನುವಂತೆ ರಮಾ “ಸಂಸ್ಕಾರ ಮುಗಿಸಿ ಮಿಕ್ಕದ್ದಕ್ಕೆಲ್ಲಾ ಅಲ್ಲಿನ ಕೆಲವು ಆಪ್ತ ಜನರಿಗೆ ಒಪ್ಪಿಸಿ ಬಂದಿದ್ದೇನೆ. ನನ್ನ ಕೈಯಲ್ಲಿ ಸಾಧ್ಯವಾದದ್ದನ್ನು ಮಾಡಿದ್ದೇನೆ.” ಎಂದಳು.
“ಆಯಿತು ನಡೆ, ಹಿಂದಿನ ಬಾತ್‌ರೂಮಿನಲ್ಲಿ ಸ್ನಾನಕ್ಕೆ ಸಿದ್ಧಮಾಡಿದ್ದೇನೆ. ಮಡಿಬಟ್ಟೆಯನ್ನೂ ಅಲ್ಲಿಯೇ ಗಳುವಿನ ಮೇಲೆ ಹರಡಿದ್ದೇನೆ. ತೆಗೆದುಕೊಂಡು ಹೋಗಿದ್ದ ಬ್ಯಾಗಿನಲ್ಲಿ ಮೊಬೈಲು, ಹಣ ತೆಗೆದಿರಿಸಿಕೊಂಡು ಉಳಿದದ್ದೆಲ್ಲವನ್ನೂ ಅಲ್ಲೇ ಪಕ್ಕಕ್ಕಿಟ್ಟುಬಿಡು. ಅವೆಲ್ಲ ಮೈಲಿಗೆ. ಬೆಳಗ್ಗೆ ತೊಳೆಸಿದರಾಯಿತು.” ಎಂದು ಮಾತು ಮುಗಿಸಿದರು ಕೌಸಲ್ಯಾ.
ಇತ್ತ ಸ್ನಾನದ ಮನೆ ಹೊಕ್ಕ ರಮಾ ತಲೆಯಮೇಲೆ ನೀರು ಸುರಿದುಕೊಳ್ಳುತ್ತಿರುವಾಗ ಅತ್ತೆ ಹೇಳಿದ ಮಾತುಗಳನ್ನು ಮತ್ತೆ ನೆನಪಿಸಿಕೊಂಡಳು. ‘ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ’, ‘ಅಣ್ಣಂದಿರ ಮನೆಗಳಲ್ಲಿ ಇದ್ದರೆ’. ಹುಂ ಎಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಆಕೆ. ಅವಳ ಆಲೋಚನೆ ಅಕ್ಕ ಕೋಮಲಾಳ ಬದುಕಿನತ್ತ ಹೊರಳಿತು. ಹಾಗೆಯೇ ತಮ್ಮ ಹಿಂದಿನ ದಿನಗಳ ನೆನಪೂ ಬಂದಿತು.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಒಂದು ಸಣ್ಣ ಗ್ರಾಮ. ಅಲ್ಲಿದ್ದ ಪುಟ್ಟಾಭಟ್ಟರು ಸೊಗಸಾದ ಅಡುಗೆಭಟ್ಟರೆಂದು ಬಹಳ ಪ್ರಸಿದ್ಧವಾಗಿದ್ದರು. ಈಗ ಅವರಿಲ್ಲದಿದ್ದರೂ ಅದೇ ಕಸುಬನ್ನು ಅವರ ಮಕ್ಕಳಾದ ಶ್ಯಾಮಭಟ್ಟರು, ರಾಮಭಟ್ಟರು ಮುಂದುವರೆಸಿಕೊಂಡು ಹೋಗುತ್ತಿದ್ದರು. ಪಕ್ಕದೂರಿನಲ್ಲಿದ್ದ ಅಂಗಡಿ ಕಿಟ್ಟಪ್ಪ(ಕೃಷ್ಣಮೂರ್ತಿ)ನವರ ಇಬ್ಬರು ಹೆಣ್ಣುಮಕ್ಕಳಾದ ಶಾಂತ ಮತ್ತು ಶಾರದಾರನ್ನು ಮದುವೆಯಾಗಿ ಗೃಹಸ್ಥರಾಗಿದ್ದರು. ಹಿರಿಯರಿಂದ ತಮಗೆ ಬಂದಿದ್ದ ಮನೆಯಲ್ಲಿ ಒಟ್ಟಿಗೇ ಇದ್ದು ಬದುಕಿನ ಬಂಡಿಯನ್ನೆಳೆಯುತ್ತಿದ್ದರು. ಅನ್ಯೋನ್ಯವಾಗಿದ್ದ ಅವರ ಸಂಸಾರ ಊರಿನವರಿಗೆ ಮಾದರಿಯಂತಿತ್ತು.
ಹಿರಿಯರಾದ ಶ್ಯಾಮಭಟ್ಟರಿಗೆ ಇಬ್ಬರು ಗಂಡು ಮಕ್ಕಳು, ಗೋಪಾಲ, ರಂಗನಾಥ. ಒಬ್ಬ ಹೆಣ್ಣು ಮಗಳು ಕೋಮಲಾ ಇದ್ದರು, ಕಿರಿಯವರಾದ ರಾಮಭಟ್ಟರಿಗೆ ಬಹಳ ವರ್ಷಗಳ ನಂತರ ಜನಿಸಿದ ಒಬ್ಬಳೇ ಮಗಳು. ಅವಳೇ ರಮಾ. ಆ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಪ್ರಾಥಮಿಕ ಶಾಲೆಯಿದ್ದರೂ ಹೈಸ್ಕೂಲು, ಕಾಲೇಜಿಗೆ ಹತ್ತಿರದ ನಂಜನಗೂಡಿಗೇ ಹೋಗಬೇಕಿತ್ತು. ಚಿಕ್ಕಂದಿನಿಂದಲೂ ತಮ್ಮ ಕುಲಕಸುಬಿನ ಏರಿಳಿತಗಳನ್ನು ಕಂಡಿದ್ದರಿಂದ ತಮ್ಮ ಮಕ್ಕಳ ಕಾಲಕ್ಕೂ ಅವರು ಅದನ್ನೇ ಮುಂದುವರೆಸಿ ಕಷ್ಟಪಡಬಾರದೆಂಬ ಉದ್ದೇಶದಿಂದ ಮಕ್ಕಳನ್ನು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ನೋಡಿಕೊಳ್ಳುತ್ತಿದ್ದರು.
ಅಡುಗೆ ಕೆಲಸವಿಲ್ಲದ ವೇಳೆಯಲ್ಲಿ ಮನೆಯಲ್ಲಿನ ಹೆಣ್ಣುಮಕ್ಕಳ ಜೊತೆಗೂಡಿ ಕಾಲಕ್ಕೆ ತಕ್ಕಂತೆ, ಹವಾಮಾನಕ್ಕೆ ಹೊಂದುವಂತೆ ಹಪ್ಪಳ, ಸಂಡಿಗೆ, ಬಾಳಕ, ಉಪ್ಪಿನಕಾಯಿ, ಕೆಲವು ಅಡುಗೆಗೆ ಬೇಕಾದ ಮಸಾಲೆ ಪುಡಿಗಳು ಮನೆಯಲ್ಲಿ ತಯಾರುಮಾಡಿ ಅಂಗಡಿಗಳಿಗೆ, ಪೇಟೆಯ ಹೋಟೆಲುಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಹೆಣ್ಣುಮಕ್ಕಳು ತಯಾರಿಸುತ್ತಿದ್ದ ಪೂಜೆಯ ಬತ್ತಿಗಳು, ಹತ್ತಿಯ ಹಾರಗಳು, ಗೆಜ್ಜೆವಸ್ತçಗಳನ್ನು ದೇವಸ್ಥಾನಗಳಿಗೆ, ವಿಶೇಷ ಪೂಜೆಮಾಡುವ ಮನೆಗಳಿಗೆ ಕೊಟ್ಟು ಬರುತ್ತಿದ್ದರು. ಚಿಕ್ಕಪುಟ್ಟ ಸಮಾರಂಭಗಳಿಗೆ ಮತ್ತು ಮನೆಗಳಿಗೆ ಬೇಡಿಕೆಯ ಮೇರೆಗೆ ತಿಂಡಿ ತಿನಿಸುಗಳನ್ನು ಮಾಡಿಕೊಡುತ್ತಿದ್ದರು. ಒಟ್ಟಾರೆ ಸುಖಾಸುಮ್ಮನೆ ಕಾಲಕಳೆಯದೆ ಏನಾದರೊಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಣ ಸಂಪಾದಿಸಿ ಆರಕ್ಕೇರದಿದ್ದರೂ ಮೂರಕ್ಕಿಳಿಯದಂತೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಅವರ ಮಕ್ಕಳೂ ಸಹ ತಮ್ಮ ಜವಾಬ್ದಾರಿಯನ್ನು ಅರಿತವರಂತೆ ಚಿಕ್ಕ ತರಗತಿಗಳಿಗೆ ಹೋಗುವ ಮಕ್ಕಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಮನೆಪಾಠ ಹೇಳಿಕೊಡುತ್ತ ಸಣ್ಣಪುಟ್ಟ ಖರ್ಚುಗಳಿಗೆ ಹಣ ಹೊಂದಿಸಿಕೊಳ್ಳುತ್ತಾ ತಮ್ಮ ವಿದ್ಯಾಭ್ಯಾಸದ ಕಡೆಗೂ ಲಕ್ಷ್ಯ ವಹಿಸಿದ್ದರು.
ಹೀಗೇ ದಿನಗಳು ಉರುಳಿದಂತೆ ಯಾವುದೇ ರೋಗರುಜಿನವಿಲ್ಲದ ಶ್ಯಾಮಭಟ್ಟರು ಹೃದಯಾಘಾತಕ್ಕೊಳಗಾಗಿ ಅಸು ನೀಗಿದರು. ಈ ಆಘಾತದಿಂದ ರಾಮಭಟ್ಟರು ತತ್ತರಿಸಿ ಹೋದರು. ಅಣ್ಣನವರ ಮೂರು ಮಕ್ಕಳು, ಅತ್ತಿಗೆ, ತಮ್ಮ ಮಗಳು ಸೇರಿ ಒಟ್ಟು ಏಳುಜನರ ಹೊಟ್ಟೆಪಾಡು, ಮಕ್ಕಳ ವಿದ್ಯಾಭ್ಯಾಸ ಹೇಗೆ ನಿಭಾಯಿಸುವುದೆಂದು ಚಿಂತಿಸುತ್ತಿರುವಾಗ ಅಣ್ಣ ಶಾಮಭಟ್ಟರ ಹಿರಿಯಮಗ ಗೋಪಾಲ “ಚಿಕ್ಕಪ್ಪಾ ನೀವೂ ಮತ್ತು ಅಪ್ಪ ಜೋಡೆತ್ತಿನಂತೆ ದುಡಿದು ಬಂಡಿಯನ್ನೆಳೆಯುತ್ತಿದ್ದಿರಿ. ಈಗ ನೀವೊಬ್ಬರೇ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಎಷ್ಟು ಕಷ್ಟವೆಂದು ನನಗೆ ತಿಳಿದಿದೆ. ಅದಕ್ಕೇ ನಾನೊಂದು ಉಪಾಯ ಹುಡುಕಿದ್ದೇನೆ” ಎಂದನು.
“ಅದೇನಪ್ಪಾ ನಿನ್ನ ಯೋಜನೆ?” ಎಂದು ಕೇಳಿದರು ರಾಮಭಟ್ಟರು.
“ನಮ್ಮ ಮನೆಯ ಹಿಂಭಾಗದಲ್ಲಿ ಬಂದೋಬಸ್ತಾಗಿ ಕಟ್ಟಿಸಿರುವ ಪಾಕಶಾಲೆ ಇದೆ. ಅಲ್ಲಿಯೇ ನಾವೊಂದು ಕ್ಯಾಟರಿಂಗ್ ಏಕೆ ಶುರು ಮಾಡಬಾರದು. ಸಪ್ಲೈ ನಾನು ಮಾಡುತ್ತೇನೆ. ಅಮ್ಮ ಚಿಕ್ಕಮ್ಮ ಅಡುಗೆಗೆ ಸಹಾಯ ಮಾಡುತ್ತಾರೆ. ಚೆನ್ನಾಗಿ ನಡೆದರೆ ಮುಂದೆ ಒಂದಿಬ್ಬರು ಸಹಾಯಕರನ್ನು ನೇಮಕ ಮಾಡಿಕೊಳ್ಳಬಹುದು. ನಿಮಗೆ ಈಗಿನಂತೆ ಅಡುಗೆಗಾಗಿ ಕರೆ ಬಂದರೆ ಹೋಗಿಬನ್ನಿ. ಆಗ ನಾನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಸಲಹೆ ನೀಡಿದನು.
“ನಿನ್ನ ಯೋಚನೆ ಲಾಯಕ್ಕಾಗಿದೆ. ಆದರೆ ನಿನ್ನ ಓದು? ಅಣ್ಣನ ಆಸೆಗೆ ತಣ್ಣೀರೆರೆಚುತ್ತೀಯಾ? ಇದಕ್ಕೆ ಕಾರಣನಾದ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೀಯಾ ಮಗಾ? ಹೇಗೋ ಹೊಂದಿಸಿಕೊಂಡು ಹೋಗುತ್ತೇನೆ, ನೀನು ಓದನ್ನು ನಿಲ್ಲಿಸಬೇಡ” ಎಂದರು ರಾಮಭಟ್ಟರು.
“ಇಲ್ಲ ಚಿಕ್ಕಪ್ಪಾ, ಓದಿನಲ್ಲಿ ನನಗೇನೂ ಅಷ್ಟು ಆಸಕ್ತಿ ಇಲ್ಲ. ಅಪ್ಪನ ಹೆದರಿಕೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಹೇಗೂ ಪಿ.ಯು.ಸಿ. ಮುಗಿಸಿದ್ದೇನೆ. ವ್ಯವಹಾರಕ್ಕೆ ಅಷ್ಟು ಸಾಕು. ತಮ್ಮ ರಂಗನಾಥ, ತಂಗಿ ಕೋಮಲಾ ಮತ್ತು ಪುಟ್ಟ ತಂಗಿ ರಮಾಳನ್ನು ಚೆನ್ನಾಗಿ ಓದಿಸಿದರಾಯಿತು. ನಿಮಗೂ ವಯಸ್ಸಾಗುತ್ತಿದೆ. ಮಕ್ಕಳ ಓದಿಗೆ, ಮನೆ ಖರ್ಚಿಗೆ, ಮುಂದೆ ಅವರ ಮದುವೆಗಳ ವೆಚ್ಚಕ್ಕೆ ಒಂದೇ ಎರಡೇ ಸಾಕಷ್ಟು ಜವಾಬ್ದಾರಿಗಳಿಗೆ ಹಣ ಹೆಚ್ಚು ಬೇಕಾಗುತ್ತದೆ. ಆದ್ದರಿಂದ ನನ್ನ ಆಲೋಚನೆ ಬಗ್ಗೆ ಯೋಚಿಸಿ” ಎಂದನು ಗೋಪಾಲ.
ಹತ್ತೊಂಬತ್ತನೇ ವಯಸ್ಸಿಗೇ ಮನೆಯ ಪರಿಸ್ಥಿತಿಯ ಬಗ್ಗೆ, ಚಿಕ್ಕಪ್ಪನ ಮೇಲೇ ಎಲ್ಲ ಹೊರೆ ಹಾಕುವುದು ಬೇಡವೆನ್ನುವ ಗೋಪಾಲನ ಯೋಚನೆ, ಕುಟುಂಬದ ಮುಂದಿನ ಕರ್ತವ್ಯಗಳ ಬಗ್ಗೆ ಅವನ ಕಾಳಜಿ ಕಂಡು ರಾಮಭಟ್ಟರ ಹೃದಯ ತುಂಬಿ ಬಂತು. ಅದಕ್ಕೆ ಸರಿಯಾಗಿ ಮನೆಯ ಹೆಣ್ಣುಮಕ್ಕಳೂ ಸಹ “ಹೌದು ಗೋಪಿ ಹೇಳುವುದರಲ್ಲಿ ತಪ್ಪೇನಿಲ್ಲ. ನಿಮಗೂ ವಯಸ್ಸಾಗುತ್ತಿದೆ. ಎಷ್ಟು ದಿನಾಂತ ಅಡುಗೆ ಗುಂಪಿನವರು ಕರೆದಾಗಲೆಲ್ಲ ಹೋಗಿ ಬರುತ್ತೀರಿ. ಈಗಲೂ ಅವನೇನು ನಿಮ್ಮನ್ನು ನಿಮ್ಮ ಕೆಲಸ ಬಿಟ್ಟು ತನ್ನ ಜೊತೆ ಯಾವಾಗಲೂ ಇರಿ ಅಂತ ಹೇಳುತ್ತಿಲ್ಲವಲ್ಲ. ಆಗುವವರೆಗೂ ಹೋಗಿ ಬನ್ನಿ. ಅವನ ಜೊತೆ ಹೇಗೂ ನಾವೆಲ್ಲ ಇರುತ್ತೇವಲ್ಲ. ಇದೇ ವ್ಯವಸ್ಥೆ ನಮ್ಮ ಕೈ ಹಿಡಿದರೆ ನಮ್ಮದೇ ಸ್ವಂತ ಉದ್ಯಮ ಆಗುತ್ತದೆ” ಎಂದು ಗೋಪಾಲನನ್ನು ಸಮರ್ಥಿಸಿದರು.
ತನ್ನ ಅಣ್ಣ ಇದ್ದಾಗ ಈ ಕ್ಯಾಟರಿಂಗ್ ಮಾಡುವ ಬಗ್ಗೆ ಹಲವಾರು ಸಾರಿ ಚರ್ಚಿಸಿ ಧೈರ್ಯ ಸಾಲದೆ ಅಲೋಚನೆಯನ್ನು ಕೈಬಿಟ್ಟಿದ್ದುಂಟು. ಈಗ ಬಂಡವಾಳಕ್ಕೇನೂ ಯೋಚಿಸಬೇಕಿಲ್ಲ. ಉಳಿತಾಯದ ಪುಟ್ಟ ಗಂಟಿದೆ. ಒಮ್ಮೆಲೇ ದೊಡ್ಡದಾಗಿ ಶುರು ಮಾಡುವುದೇನೂ ಬೇಕಿಲ್ಲ. ಮೊದಲಿಗೆ ಚಿಕ್ಕದಾಗಿ ಪ್ರಾರಂಭಿಸೋಣ. ಆ ನಂತರ ನೋಡೋಣ ಎಂದುಕೊಂಡು “ಆಯಿತು ಗೋಪಿ, ಒಂದು ಒಳ್ಳೆಯ ದಿನ ನೋಡಿ ಆರಂಭಿಸಿಬಿಡೋಣ. ಆದರೂ ಇನ್ನೊಂದು ಸಾರಿ ನಿನ್ನ ಓದಿನ ಕಡೆಗೆ ಯೋಚಿಸು” ಎಂದರು ರಾಮಭಟ್ಟರು.
“ಇಲ್ಲ ಚಿಕ್ಕಪ್ಪ, ನಾನೇನು ಹೇಳಿದೆನೋ ಅದೇ ಫೈನಲ್, ಮತ್ತೆ ಹಿಂತಿರುಗಿ ನೋಡುವುದೇನೂ ಇಲ್ಲ” ಎಂದನು ಗೋಪಾಲ.
ಸರಿ ಅಂದುಕೊಂಡಂತೆ ಒಂದು ಶುಭ ಮುಹೂರ್ತದಲ್ಲಿ “ಗಣೇಶ ಕ್ಯಾಟರಿಂಗ್” ಎಂಬ ಹೆಸರಿನಲ್ಲಿ ಉದ್ಯಮವನ್ನು ಪ್ರಾರಂಭಿಸಿಬಿಟ್ಟರು. ಆ ಕುಟುಂಬದವರ ಪಾಕಪ್ರಾವೀಣ್ಯತೆಯನ್ನು ತಿಳಿದವರಿಗೆ ಈ ಕ್ಯಾಟರಿಂಗ್ ವರದಾನವಾಯಿತು. ಉದ್ಯೋಗಸ್ಥರು, ಹಿರಿಯ ನಾಗರೀಕರು, ಶುಭ ಸಮಾರಂಭಗಳಿಗೆ ಊಟ ತಿಂಡಿ ಸರಬರಾಜಿಗೆ ಕ್ಯಾಟರಿಂಗ್ ಉಪಯೋಗವಾಗಿ ಗಣೇಶ ಕ್ಯಾಟರಿಂಗ್ ಜನಪ್ರಿಯವಾಯಿತು.
ತನ್ನಣ್ಣನ ಮಗ ಗೋಪಾಲ ತಯಾರಿಸುತ್ತಿದ್ದ ವೈವಿಧ್ಯಮಯ ತಿಂಡಿ ತಿನಿಸುಗಳು, ಅಡುಗೆಯಲ್ಲಿ ನಾವೀನ್ಯತೆಗಳನ್ನು ಕಂಡು ರಾಮಭಟ್ಟರಿಗೆ ಅಚ್ಚರಿಯಾಗುತ್ತಿತ್ತು. ಅದನ್ನು ತಮ್ಮ ಪತ್ನಿ ಶಾರದಾಳ ಮುಂದೆ “ಅಲ್ವೇ ಶಾರೂ ನಾವು ಯಾವತ್ತೂ ನಮ್ಮ ವೃತ್ತಿ ಕೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಂಡಿರಲಿಲ್ಲ. ಹಾಗಿದ್ದರೂ ಇವ ಏನೆಲ್ಲ ಹೇಗೆ ಕಲಿತುಕೊಂಡ ! ಊಹಿಸಲೂ ಸಾಧ್ಯವಾಗುತ್ತಿಲ್ಲ” ಎಂದು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದರು.
“ಹೆಹೆ..ಸೌಟು ಹಿಡಿಯುವುದು ನಮಗೆ ತಲೆತಲಾಂತರದಿಂದ ರಕ್ತಗತವಾಗಿ ಬೆರೆತುಹೋಗಿದೆ. ಇದರಲ್ಲಿ ಅಚ್ಚರಿ ಪಡುವಂತಾದ್ದೇನಿದೆ. ಬಿಡಿ ಹೇಗೋ ಒಳ್ಳೆಯದಾದರೆ ಸಾಕು” ಎಂದುತ್ತರಿಸಿದರು ಶಾರದಮ್ಮ. ಹೆಂಡತಿಯ ಮಾತಿನಲ್ಲಿದ್ದ ಸತ್ಯದ ಅರಿವಾಗಿ ಹೌದೆನ್ನುವಂತೆ ತಲೆಯಾಡಿಸಿದರು ರಾಮಭಟ್ಟರು.
ಒಂದೆರಡು ವರ್ಷ ಕಳೆಯುವುದರೊಳಗೆ ರಾಮಭಟ್ಟರ ನಿರೀಕ್ಷೆಗೂ ಮೀರಿ ‘ಗಣೇಶ ಕ್ಯಾಟರಿಂಗ್’ ಬೆಳೆಯಿತು. ತಮ್ಮ ತಿರುಗಾಟದ ಅಡುಗೆ ಕಾಯಕಕ್ಕೆ ತಿಲಾಂಜಲಿ ನೀಡಿ ಮಗನಿಗೆ ಆಸರೆಯಾಗಿ ನಿಂತರು. ಇನ್ನೂ ಒಂದಿಬ್ಬರು ಸಹಾಯಕರನ್ನೂ ಸೇರಿಸಿಕೊಂಡರು.
ಕಾಲ ಉರುಳಿದಂತೆ ರಾಮಭಟ್ಟರ ಎರಡನೆಯ ಮಗ ರಂಗನಾಥ ಫಾರ್ಮೆಸಿ ಡಿಪ್ಲೊಮಾ ಮುಗಿಸಿ ಮೈಸೂರಿನ ಹೆಸರಾಂತ ಮೆಡಿಕಲ್ ಸ್ಟೋರಿನಲ್ಲಿ ಕೆಲಸ ಗಳಿಸಿಕೊಂಡ. ಮಗಳು ಕೋಮಲಾ ಪಿ.ಯು.ಸಿ.ನಂತರ ಕಂಪ್ಯೂಟರ್ ತರಬೇತಿ ಪಡೆದುಕೊಂಡು ತನ್ನ ಊರಿನಲ್ಲಿಯೇ ಕಂಪೆನಿಯೊಂದರಲ್ಲಿ ಕೆಲಸ ಪಡೆದುಕೊಂಡಳು.
ಎಲ್ಲವೂ ಒಂದು ಹಂತಕ್ಕೆ ಬರುತ್ತಿದ್ದಂತೆ ಮಕ್ಕಳಿಗೆ ವಿವಾಹ ಮಾಡುವ ಪ್ರಯತ್ನದಲ್ಲಿ ತೊಡಗಿದರು. ಮೊದಲಿಗೆ ಮಗಳು ಕೋಮಲಾಳಿಗೆ ವರಾನ್ವೇಷಣೆ. ಬಂದ ವರಗಳ ಸಂಖ್ಯೆಗೇನೂ ಬರವಿಲ್ಲದಿದ್ದರೂ ಅವಳಿಗೆ ಕಂಕಣಬಲ ಕೂಡಿಬರಲಿಲ್ಲ. ಇದಕ್ಕಾಗಿ ಪೂಜೆ ಪುನಸ್ಕಾರ, ಹವನ ಹೋಮ, ಶಾಂತಿ ಎಲ್ಲವೂ ಆಯಿತು. ಫಲಿತಾಂಶ ಮಾತ್ರ ಶೂನ್ಯ. ಇದು ಏಕೆಂಬುದು ಮನೆಯವರೆಲ್ಲರಿಗೂ ಚಿದಂಬರ ರಹಸ್ಯವಾಯಿತು. ಕೋಮಲ ಎದ್ದುಕಾಣುವಷ್ಟು ಸುಂದರಿಯಲ್ಲದಿದ್ದರೂ ಕುರೂಪಿಯಾಗಿರಲಿಲ್ಲ. ವಿದ್ಯೆ, ಕೆಲಸ ಎಲ್ಲವೂ ಇದ್ದರೂ ಯಾಕೋ ಯಾವ ಸಂಬಂಧವೂ ಕುದುರಲೇ ಇಲ್ಲ. ಇದರಿಂದ ಬೇಸರಪಟ್ಟು ಗೊಣಗಾಟ ಮಾಡುತ್ತಿದ್ದವರೆಂದರೆ ಅವಳ ಅಣ್ಣಂದಿರಾದ ಗೋಪಾಲ ಮತ್ತು ರಂಗನಾಥ. ಅವರ ಮದುವೆಗಳಿಗೆ ತಾನು ಅಡ್ಡಿಯಾಗುತ್ತಿದ್ದೇನೆಂಬ ಕಾರಣಕ್ಕೆ ಬಹುವಾಗಿ ನೊಂದ ಕೋಮಲಾ ತನ್ನ ತಾಯಿ ಶಾಂತಾ ಹಾಗೂ ಚಿಕ್ಕಪ್ಪ ರಾಮಭಟ್ಟರ ಮನವೊಲಿಸಿ ಅಣ್ಣಂದಿರಿಬ್ಬರ ವಿವಾಹಕ್ಕೆ ಬೆಂಬಲ ಸೂಚಿಸಿದಳು. ಅಷ್ಟೇ ಅಲ್ಲ, ಅವರಿಬ್ಬರೂ ಆಗಲೇ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿರುವ ಸಂಗತಿಯನ್ನೂ ತಿಳಿಸಿ ಅದರ ಬಗ್ಗೆ ಮುಂದುವರೆಯಲು ಸೂಚನೆ ಕೊಟ್ಟಳು.
ಎಲ್ಲವನ್ನು ಕೇಳಿದ ರಾಮಭಟ್ಟರಿಗೆ ತಮ್ಮಣ್ಣ ಇದ್ದಾಗ ತಮ್ಮನ ಹೆಗಲ ಮೇಲಿನ ಭಾರವನ್ನು ಹಗುರ ಮಾಡುವ ಸಲುವಾಗಿ ತೋರುತ್ತಿದ್ದ ಕಾಳಜಿ, ಒಡಹುಟ್ಟಿದವನ ಬಗ್ಗೆ ಅವರಿಗಿದ್ದ ಅಕ್ಕರೆ ನೆನಪಾಯಿತು. ಅಣ್ಣನ ಮಗಳು ಹೇಳಿದಂತೆ ಗಂಡುಮಕ್ಕಳ ಆಯ್ಕೆಯು ಈಗಿನ ಕಾಲಕ್ಕೆ ತಕ್ಕಂತಿದೆ ಎಂದುಕೊಂಡು ಮಕ್ಕಳ ಆಯ್ಕೆಯ ಹೆಣ್ಣುಗಳ ತಂದೆ ತಾಯಿಗಳ ಜೊತೆ ಮಾತುಕತೆಯಾಡಿ ಒಂದೇ ಲಗ್ನದಲ್ಲಿ ಇಬ್ಬರ ಮದುವೆಗಳನ್ನೂ ಮಾಡಿ ಮುಗಿಸಿದರು.
ತರುವಾಯ ಬದಲಾದ ಕುಟುಂಬದ ಚಿತ್ರಣ ಮಾತ್ರ ರಾಮಭಟ್ಟರ ಊಹೆಗೂ ನಿಲುಕದ್ದಾಯಿತು. ಮೈಸೂರಿನ ಹೆಣ್ಣನ್ನು ವರಿಸಿದ ರಂಗನಾಥ ತನ್ನ ನಿವಾಸವನ್ನು ಅವನು ಕೆಲಸಮಾಡುತ್ತಿದ್ದ ಮೈಸೂರಿಗೇ ವರ್ಗಾಯಿಸಿಕೊಂಡ. ಅದೇ ಊರಿನ ಹೆಣ್ಣನ್ನು ವರಿಸಿದ ಗೋಪಾಲ ಕ್ಯಾಟರಿಂಗ್ ಕೆಲಸಕ್ಕೆ ತಾನಿದ್ದ ಮೂಲಮನೆ, ವಾಸಕ್ಕೆ ಮಾವನ ಮನೆಯನ್ನು ಆಶ್ರಯಿಸಿದ. ಮನೆಯಲ್ಲಿನ ಹಿರಿಯರು ತಾಯಿ ಮತ್ತು ಚಿಕ್ಕಪ್ಪನವರನ್ನು ಒಂದು ಮಾತು ಕೇಳಬೇಕೆಂಬ ಕನಿಷ್ಠ ಸೌಜನ್ಯವನ್ನೂ ಅವರಿಬ್ಬರೂ ತೋರಲಿಲ್ಲ. ಅವರ ವರ್ತನೆಯಿಂದ ತುಂಬ ನೊಂದವಳೆಂದರೆ ಕೋಮಲಾ. ತನ್ನ ಅನಿಸಿಕೆಯನ್ನು ಹಿರಿಯರ ಮುಂದೆ ಬಹಿರಂಗಪಡಿಸಿದಳು. ಅವಳ ಮಾತಿಗೆ ತಾಯಿ ಶಾಂತಳಾಗಲೀ, ರಾಮಭಟ್ಟರಾಗಲೀ ಉತ್ತರ ಕೊಡುವ ಗೋಜಿಗೆ ಹೋಗದೆ ಮೌನಕ್ಕೆ ಮೊರೆಹೋದರು. ಎಲ್ಲರೂ ತಮ್ಮ ಕೆಲಸಗಳಲ್ಲಿ ಎಂದಿನಂತೆ ಮಗ್ನರಾದರು.
ಮತ್ತಷ್ಟು ಸಮಯ ಕಳೆಯುತ್ತಿದ್ದಂತೆ ರಮಾ ಪಿ.ಯು.ಸಿ. ಪಾಸಾಗಿ ಮುಂದೆ ಫ್ಯಾಷನ್ ಡಿಜೈನಿಂಗ್ ಕೋರ್ಸ್ ಮುಗಿಸಿದಳು. ಅಪ್ಪನನ್ನು ಕಾಡಿಬೇಡಿ ಬೆಂಗಳೂರಿನ ಒಂದು ಖಾಸಗಿ ರೆಡಿಮೇಡ್‌ಡ್ರೆಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ಭದ್ರವಾಗಿ ನೆಲೆನಿಂತಮೇಲೆ ಹೆತ್ತವರನ್ನೂ ಅಲ್ಲಿಗೆ ಕರೆಸಿಕೊಳ್ಳಲು ನಿರ್ಧರಿಸಿದಳು. ಇತ್ತೀಚೆಗೆ ನಡೆದ ವಿದ್ಯಮಾನಗಳು ಅವಳನ್ನು ಚಿಂತೆಗೆ ಈಡು ಮಾಡಿದ್ದವು. ಹಾಗೆಯೇ ಅಕ್ಕ ಕೋಮಲಾಳ ಬಗ್ಗೆ ತುಂಬ ಕನಿಕರ ಮೂಡಿತ್ತು. ಅಣ್ಣಂದಿರ ವಿವಾಹವಾದಮೇಲೆ ಅವಳ ವಿವಾಹಕ್ಕೂ ಚಿಕ್ಕಪ್ಪನವರು ಇನ್ನಿಲ್ಲದ ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ. ರೋಸಿಹೋದ ಕೋಮಲಾ ತಾನು ಮದುವೆಯಾಗುವುದೇ ಇಲ್ಲ ಎಂದು ನಿರ್ಧರಿಸಿದ್ದಳು. ಇದೆಲ್ಲ ರಮಾಳ ಮನಸ್ಸಿನ ಮೇಲೆ ಪರಿಣಾಮ ಮಾಡಿದ್ದವು. ಏನೂ ಮಾಡಲಾಗದೆ ಈ ವಾತಾವರಣದಿಂದಲೇ ದೂರವಾಗಿ ಇರಬೇಕೆಂಬುದು ಅವಳ ಆಲೋಚನೆಯಾಗಿತ್ತು. ಅಷ್ಟರಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿದ್ದ ಬಂಧುಗಳೊಬ್ಬರು ಅಲ್ಲಿಯೇ ಮೆಸ್ ನಡೆಸುತ್ತಿದ್ದ ಶೇಷಾದ್ರಿ ಎಂಬ ಹುಡುಗನ ಬಗ್ಗೆ ರಮಾಳ ಸಂಬಂಧ ನೋಡಿ ಎಂದು ರಾಮಭಟ್ಟರಿಗೆ ತಿಳಿಸಿದಾಗ ತಕ್ಷಣ ಏನೂ ಹೇಳಲಾಗದೇ ಯೋಚಿಸುತ್ತಿದ್ದರು. ಅವರ ಹೆಂಡತಿ ಶಾರದಾ ಹೀಗೇ ಯೋಚಿಸುತ್ತಾ ಕುಳಿತರೆ ಹಿರಿಮಗಳ ಗತಿಯೇ ಇವಳಿಗೂ ಬಂದೀತೆಂದು ಹೆದರಿ “ಅಲ್ಲರೀ ನಾವೇ ಸಂಬಂಧಕ್ಕಾಗಿ ಹುಡುಕಾಡುವುದಕ್ಕೆ ಮುಂಚೆ ಸಂಬಂಧವೇ ನಮ್ಮನ್ನು ಹುಡುಕಿಕೊಂಡು ಬಂದಿದೆ. ದಯವಿಟ್ಟು ಒಪ್ಪಿಕೊಂಡು ವಿಚಾರಿಸಿ ನೋಡಿ” ಎಂದು ಒತ್ತಾಯಿಸಿದರು.
ಹೆಂಡತಿಯ ಸಲಹೆ ಕೇಳಿದ ರಾಮಭಟ್ಟರು “ಶಾರೀ ನಾನು ಅದಕ್ಕೆ ಯೋಚಿಸುತ್ತಿಲ್ಲ, ಆದರೆ ಮತ್ತೆ ಅದೇ ಅಡುಗೆ ಕಸುಬಿರುವ ಕುಟುಂಬದ ಮನೆಗೆ ಬೀಗತನ, ಮಗಳು ರಮಾ ಏನು ಹೇಳುತ್ತಾಳೊ ಎಂಬ ಅಳುಕು ಕಣೇ” ಎಂದರು.
“ಏನ್ರೀ ಕೋಳಿ ಕೇಳಿ ಮಸಾಲೆ ಅರೆಯಿರಿ ಎಂದೇನೂ ನಾನು ಹೇಳುತ್ತಿಲ್ಲ. ಮೊದಲು ವಿಚಾರಿಸುವುದಕ್ಕೇನು ತೊಂದರೆ. ಅದಕ್ಕೇಕೆ ಹಿಂದೆಮುಂದೆ ನೋಡುವುದು, ಇದರ ಮೇಲೆ ನಿಮ್ಮಿಷ್ಟ” ಎಂದುಬಿಟ್ಟರು ಶಾರದಾ.
ಅಳೆದೂ ಸುರಿದೂ ರಮಾಳ ಮುಂದೆ ವಿಷಯವನ್ನು ಪ್ರಸ್ತಾಪ ಮಾಡಿ ಅವಳ ಅಭಿಪ್ರಾಯ ಕೇಳಿದರು. ಅದಕ್ಕವಳು “ಅಪ್ಪಾ ನಿಮಗೂ ವಯಸ್ಸಾಗುತ್ತಿದೆ, ನಿಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳಬೇಕು. ನಮ್ಮ ಮನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನಗೆ ಅರಿವಾಗದ್ದೇನಲ್ಲ. ಹಾಗೇ ನನಗೆ ಮಾಡುತ್ತಿರುವ ಕೆಲಸದಲ್ಲಿ ಮುಂದುವರೆಯುವ ಅಭಿಲಾಷೆಯಿದೆ. ಅದಕ್ಕವರೊಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ” ಎಂದಳು.
ಮುಂದಿನದೆಲ್ಲ ಹೂವಿನ ಸರ ಎತ್ತಿದಂತೆ ನಡೆದು ರಮಾ ಶೇಷಾದ್ರಿಯ ಮಡದಿಯಾದಳು. ಮಾವನಿಲ್ಲದ ಮನೆ. ಅತ್ತೆ ಕೌಸಲ್ಯಾ ಸೌಮ್ಯ ಸ್ವಭಾವದವರು. ತಾನು ತಿಳಿದುಕೊಂಡಿದ್ದಕ್ಕಿಂತಲೂ ಅನುಕೂಲವಾಗಿದ್ದಾರೆ ಎಂದು ಬಂದು ಸ್ವಲ್ಪ ದಿನದಲ್ಲೇ ತಿಳಿದುಬಂತು. ಅವರು ವಾಸವಿದ್ದ ಮನೆಯಲ್ಲದೆ ಪಕ್ಕದಲ್ಲೇ ಮೆಸ್ಸು ನಡೆಸುತ್ತಿದ್ದ ಮತ್ತು ಒಂದೆರಡು ಪುಟ್ಟಪುಟ್ಟ ಮನೆಗಳನ್ನು ಕಟ್ಟಿಸಿ ಬಾಡಿಗೆಗೂ ಕೊಟ್ಟಿದ್ದರು. ಮನೆ ಮತ್ತು ಮೆಸ್ಸಿನ ಕೆಲಸಗಳಿಗೆ ಆಳುಕಾಳುಗಳಿದ್ದರು. ಕಾರು, ವ್ಯಾನು, ಸ್ಕೂಟರ್ ವಾಹನಗಳಿದ್ದವು. ಮಧ್ಯಾಹ್ನದ ಸಮಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಊಟ ಕೊಡುವ ವ್ಯವಸ್ಥೆಯಿತ್ತು. ಎಲ್ಲವೂ ಒಂದು ರೀತಿಯಲ್ಲಿ ರಮಾಳಿಗೆ ಸಮಾಧಾನ ನೀಡಿದವು.
ಹೊಸಮನೆ ವಾತಾವರಣಕ್ಕೆಲ್ಲ ಬೇಗನೆ ಹೊಂದಿಕೊಂಡ ರಮಾ ತನ್ನ ಹೆತ್ತವರನ್ನು ತಮ್ಮಲ್ಲಿಗೆ ಕರೆದುಕೊಂಡು ಬರಲು ಗಂಡನ ಮನೆಯಲ್ಲಿ ಯಾವುದೇ ಆಭ್ಯಂತರವಿಲ್ಲ ಎಂದು ತಿಳಿದುಕೊಂಡು ಊರಿಗೆ ಹೋದಾಗಲೆಲ್ಲ ಪೋಷಕರನ್ನು ತನ್ನಲ್ಲಿಗೇ ಬಂದಿರಲು ಒತ್ತಾಯಿಸುತ್ತಿದ್ದಳು. ಅವರು ಇನ್ನೂ ಸ್ವಲ್ಪ ಸಮಯವಾಗಲಿ ಮಗಳೇ ಎಂದು ಹೇಳುತ್ತಲೇ ರಮಾಳಿಗೆ ಎರಡು ಮಕ್ಕಳಾಗುವವರೆಗೆ ಮುಂದೂಡುತ್ತಲೇ ಇದ್ದರು. ಅದನ್ನು ಗಮನಿಸಿ ರಮಾ ಇವರು ತನ್ನ ದೊಡ್ಡಮ್ಮ ಮತ್ತು ಕೋಮಲಾಳನ್ನು ಬಿಟ್ಟು ತಾವಿಬ್ಬರೇ ಬರುವುದಿಲ್ಲ ಎಂಬುದನ್ನು ಅರಿತಳು. ನಿರ್ವಾಹವಿಲ್ಲದೆ ತಾನೇ ಆಗಾಗ್ಗೆ ಗಂಡ ಮಕ್ಕಳೊಂದಿಗೆ ಊರಿಗೆ ಹೋಗಿಬಂದು ಮಾಡುತ್ತಿದ್ದಳು.
ಊರಿನ ಮನೆಯಲ್ಲಿ ಗೋಪಾಲನದ್ದೇ ದರ್ಬಾರು. ಆತನ ಸಂಗಾತಿಯಾದ ಮನೆಯ ಹಿರಿಯ ಸೊಸೆಯಾಗಿದ್ದು ಹೆಸರಿಗೆ ಮಾತ್ರ. ಆಕೆಯು ತನಗೂ ಕುಟುಂಬದವರಿಗೂ ಸಂಬಂಧವೇ ಇಲ್ಲದಂತೆ ಇರುತ್ತಾ ಯಾವಾಗಲೋ ಒಮ್ಮೆ ಅತಿಥಿಗಳ ರೀತಿಯಲ್ಲಿ ಬಂದು ಹೋಗುತ್ತಿದ್ದಳು. ಇನ್ನು ಮೈಸೂರಿನಲ್ಲಿದ್ದ ಅಣ್ಣನ ಸಂಸಾರ ಅವರದ್ದೇ ಲೋಕದಲ್ಲಿದ್ದರು. ಅವರಿಗೆ ಮಕ್ಕಳು ಮರಿಗಳಾದರೂ ಅವರ ಒಡನಾಟ ಹೆಚ್ಚಾಗಲಿಲ್ಲ.
ಹೀಗೇ ಮುಂದುವರೆಯುತ್ತಿದ್ದಾಗಲೇ ಒಮ್ಮೆ ರಮಾಳ ಹೆತ್ತವರು ನಂಜನಗೂಡಿನ ಜಾತ್ರೆಗೆಂದು ಹೋದವರು ಅಲ್ಲಿನ ಹೆಚ್ಚಾದ ಜನಜಂಗುಳಿಯ ಕಾಲ್ತುಳಿದಾಟದಲ್ಲಿ ಬಲಿಯಾದವರ ಗುಂಪಿನಲ್ಲಿ ಸೇರಿಹೋದರು. ಹಿಂದಿರುಗಲಿಲ್ಲ ಅಲ್ಲಿಯೇ ಸ್ವಾಮಿಪಾದ ಸೇರಿದರು. ಇದರಿಂದ ಆಘಾತಕ್ಕೊಳಗಾದ ಹಿರಿಯ ಜೀವಿ ರಮಾಳ ದೊಡ್ಡಮ್ಮ ಶಾಂತಮ್ಮ ಹಾಸಿಗೆ ಹಿಡಿದರು. ಅದನ್ನೇ ನೆಪ ಮಾಡಿಕೊಂಡ ಗೋಪಾಲ ತನ್ನ ಕ್ಯಾಟರಿಂಗ್ ಕೇಂದ್ರವನ್ನು ತನ್ನ ಮಾವನ ಮನೆಯ ಸಮೀಪದ ಒಂದು ಬಾಡಿಗೆ ಮನೆಗೆ ಸ್ಥಳಾಂತರಿಸಿದ. ಮೂಲ ಮನೆಯ ಸಂಪರ್ಕ ಇದರಿಂದ ತಪ್ಪಿಹೋಯಿತು.
ಹಿರಿಯರ ಮನೆಯಲ್ಲಿ ಕೋಮಲಾ ಮತ್ತು ಅವಳ ತಾಯಿ ಶಾಂತಮ್ಮ ಇಬ್ಬರೇ ಇದ್ದರು. ಆಗಲೂ ರಮಾ ಒಮ್ಮೆ ಅವರನ್ನು ತನ್ನ ಮನೆಗಾದರೂ ಬನ್ನಿ ಇಲ್ಲವಾದರೆ ತನ್ನ ಮನೆಯ ಸಮೀಪದಲ್ಲಿ ತಮ್ಮದೇ ಬೇರೆ ಮನೆಯಲ್ಲಿ ಇರಿ ಎಂದು ಒತ್ತಾಯಿಸಿದಳು. ಅವರು ಒಪ್ಪದೇ ಅಲ್ಲಿಯೇ ಉಳಿದರು. ಕೋಮಲಾ ತನ್ನ ಕೆಲಸವನ್ನು ಮುಂದವರೆಸಿಕೊಂಡು, ತಾಯಿಯನ್ನು ನೋಡಿಕೊಳ್ಳಲು ಒಬ್ಬ ಸಹಾಯಕರನ್ನು ಗೊತ್ತುಮಾಡಿಕೊಂಡು ತಾಯಿಯ ಆರೈಕೆ ಮಾಡಿದಳು. ಆದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ನಂತರ ಏಕಾಕಿಯಾಗಿದ್ದಳು ಕೋಮಲಾ. ಹಿರಿಯರ ನಂತರ ಎಲ್ಲಾ ಮಕ್ಕಳೂ ಮಾಡುವಂತೆ ಗೋಪಾಲ ಮತ್ತು ರಂಗನಾಥ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದರು. ಅದರಲ್ಲಿ ರಮಾಳಿಗೂ ಹಕ್ಕು ಇದ್ದುದರಿಂದ ಆಕೆಯ ಅನುಮತಿಯನ್ನು ಪಡೆಯಲು ಅವಳನ್ನು ಕೋರಿದರು. ಆಕೆ ಅದು ತುಂಬಾ ಹಳೆಯದಾಗಿದ್ದರಿಂದ ಮಾರಾಟ ಮಾಡಲು ತನ್ನ ಅಭ್ಯಂತರವಿಲ್ಲ. ಆದರೆ ಬಂದದ್ದರಲ್ಲಿ ನಾಲ್ಕು ಭಾಗ ಮಾಡಿ ಒಂದು ಭಾಗವನ್ನು ಕೋಮಲಾಳಿಗೂ ಕೊಡಬೇಕೆಂದು ಪಟ್ಟು ಹಿಡಿದು ಕೊಡಿಸಿದ್ದಳು. ಮನೆ ಮಾರಾಟವಾದ ಮೇಲೆ ಕೋಮಲಾಳನ್ನು ಯಾವ ಅಣ್ಣಂದಿರೂ ತಮ್ಮಲ್ಲಿಗೆ ಬರಲು ಒತ್ತಾಯಿಸಲಿಲ್ಲ. ಆಕೆ ಸೂಕ್ಷ್ಮವನ್ನರಿತು ತಾನೇ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿದ್ದ ತನ್ನ ಉದ್ಯೋಗ ಮುಂದುವರೆಸಿಕೊಂಡು ಹೋಗುತ್ತಿದ್ದಳು. ರಮಾಳು ತಮ್ಮಲ್ಲಿಗೆ ಬರಲು ಆಹ್ವಾನವಿತ್ತಾಗ “ನೀನು ಅತ್ತೆ ಮನೆಯ ಸೊಸೆ. ನಾನು ಅಲ್ಲಿಗೆ ಬಂದಿರುವುದು ತರವಲ್ಲ. ನಾನು ಬೇರೆಯಾಗಿದ್ದರೂ ಇಬ್ಬರು ಅತ್ತಿಗೆಯರ ಬಾಯಿಗೆ ಆಹಾರವಾಗುತ್ತಲೇ ಇರುತ್ತೇನೆ. ಇನ್ನು ನಿಮ್ಮೊಟ್ಟಿಗೆ ಇರುವುದಂತೂ ಸಾಧ್ಯವಿಲ್ಲ. ಅಂತಹ ಕಾಲ ಬಂದಾಗ ನೊಡೋಣ” ಎಂದು ನಯವಾಗಿ ನಿರಾಕರಿಸಿದಳು. ಇದನ್ನೆಲ್ಲ ರಮಾ ತನ್ನತ್ತೆಗೆ ವಿವರಿಸಿ ಹೇಳಲು ಸಾಧ್ಯವಿರಲಿಲ್ಲ. ಬೇಸರವಾದಾಗಲೊಮ್ಮೆ ಕೋಮಲಾ ಬೆಳಗ್ಗೆ ತಂಗಿಯ ಮನೆಗೆ ಬಂದು ಮಕ್ಕಳೊಡನೆ ಕಾಲಕಳೆದು ಸಂಜೆಗೆ ನಿಲ್ಲದೆ ಹಿಂದಿರುಗುತ್ತಿದ್ದಳು. ಹೀಗೇ ಕೆಲವು ತಿಂಗಳು ಕಳೆದಿತ್ತು. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ರಮಾಳಿಗೆ ಬಂದ ಸುದ್ಧಿ ಅವಳನ್ನು ದಿಕ್ಕು ಕೆಡಿಸುವಂತೆ ಮಾಡಿತ್ತು. ಅಫೀಸಿಗೆ ರಜೆ ಹಾಕಿ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ ಗಂಡನಿಗೆ ಮೆಸೇಜ್ ಮಾಡಿ ಅತ್ತೆಗೆ ಮಕ್ಕಳ ಜವಾಬ್ದಾರಿಯನ್ನು ವಹಿಸಿ ಊರಿಗೆ ಧಾವಿಸಿದ್ದಳು.
ಊರಿನ ಜನರ ಸಹಾಯದಿಂದ ಕೋಮಲಾಳ ಅಂತ್ಯ ಸಂಸ್ಕಾರವನ್ನು ಪೂರೈಸಿ ಆಕೆಗೆ ವಿವಾಹವೂ ಆಗಿಲ್ಲದ್ದರಿಂದ ಮುಂದಿನ ಎಲ್ಲ ಕರ್ಮಾಂತರಗಳನ್ನು ಮಾಡಲು ಅದಕ್ಕಾಗಿಯೇ ಇದ್ದ ಜನರಿಗೆ ವಹಿಸಿಕೊಟ್ಟಳು. ತನಗೆ ಕೈಲಾದದ್ದನ್ನು ಅಕ್ಕನಿಗಾಗಿ ಮಾಡಲು ಅನುವು ಮಾಡಿಕೊಟ್ಟ ಭಗವಂತನಿಗೆ ಮನದಲ್ಲಿಯೇ ನಮಸ್ಕರಿಸುತ್ತ ವಾಪಸಾಗಲು ಸಿದ್ಧಳಾದಳು. ಆಗ ಕೋಮಲಾಳಿಗೆ ಬಾಡಿಗೆಗೆ ಮನೆ ಕೊಟ್ಟಿದ್ದ ಪಕ್ಕದಮನೆಯ ಮಹಿಳೆ ಇವಳನ್ನು ಪ್ರತ್ಯೇಕವಾಗಿ ಕರೆದು “ನಿಮ್ಮೊಡನೆ ಮಾತನಾಡಬೇಕಾಗಿದೆ” ಎಂದಳು. ಅವರ ಮನೆಯೊಳಕ್ಕೆ ಕರೆದುಕೊಂಡು ಹೋಗಿ ರಮಾಳ ಕೈಹಿಡಿದು “ನಿಮ್ಮ ಹತ್ತಿರ ಒಂದು ವಿಷಯ ಹೇಳಬೇಕಾಗಿದೆ.” ಎಂದರು. ಏನೆಂದು ಅರ್ಥವಾಗದ ರಮಾ ಅವರತ್ತ ನೋಡಿದಾಗ ಆಕೆ ತಮ್ಮ ಸೆರಗಿನಲ್ಲಿ ಮುಚ್ಚಿಟ್ಟುಕೊಂಡಿದ್ದ ಒಂದು ಪುಟ್ಟ ಗಂಟು ಮತ್ತು ಒಂದೆರಡು ಪಾಸ್‌ಬುಕ್ಕನ್ನು ರಮಾಳ ಮುಂದೆ ಹಿಡಿದು “ನೋಡಿ ನಿಮ್ಮ ಸೋದರಿ ಕೋಮಲಾ ನನಗೇನಾದರೂ ಆದರೆ ಆವಾಗ ನನ್ನ ತಂಗಿ ಬರುತ್ತಾಳೆ. ಯಾರೂ ಇಲ್ಲದ್ದು ನೋಡಿಕೊಂಡು ಇದನ್ನು ಅವಳಿಗೊಪ್ಪಿಸಿ ಎಂದಿದ್ದರು. ಅವರು ಯಾವಾಗಲೂ ಹೊರಗಡೆ ಹೋಗುವಾಗ ಇದನ್ನು ನನ್ನ ಕೈಗೆ ಕೊಟ್ಟು ಹೋಗುತ್ತಿದ್ದರು. ಇದು ನಿಮಗೆ ಸೇರಬೇಕಾಗಿದ್ದು ನಾನು ಜೋಪಾನವಾಗಿಟ್ಟಿದ್ದೆ” ಎಂದು ಹೇಳಿ ಕೊಟ್ಟರು.
ರಮಾ ಅವರು ಕೊಟ್ಟ ಗಂಟು ಮತ್ತು ಪಾಸ್‌ಬುಕ್‌ಗಳನ್ನು ತೆರೆದು ನೋಡಿದಳು. ಒಂದೆರಡು ತಿಂಗಳ ಹಿಂದೆ ಕೋಮಲಾ ಇಪ್ಪತ್ತೈದು ಲಕ್ಷರೂಪಾಯಿಗಳನ್ನು ಡ್ರಾ ಮಾಡಿದ್ದಳು. ತಕ್ಷಣ ರಮಾಳಿಗೆ ನೆನಪಾಗಿದ್ದು ತಮ್ಮ ದೊಡ್ಡಣ್ಣನ ಮಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದು. ಅದಕ್ಕೆ ಕೋಮಲಾ ಹಣ ಕೊಟ್ಟಿದ್ದಾಳೆ. ಅಣ್ಣಂದಿರು ಅವಳಿಗಾಗಿ ಏನೂ ಮಾಡದಿದ್ದರೂ ಆಕೆ ಮಾತ್ರ ತನಗೆ ಸಾಧ್ಯವಾಗಿದ್ದನ್ನು ಪ್ರತ್ಯಾಪೇಕ್ಷೆಯಿಲ್ಲದೆ ಮಾಡಿದ್ದಾಳೆ. ಬ್ಯಾಂಕಿನಲ್ಲಿ ಉಳಿದದ್ದು ಕೆಲವು ಸಾವಿರದಷ್ಟು ಮಾತ್ರ. ಗಂಟಿನಲ್ಲಿ ಕೆಲವು ಚಿನ್ನದ ಒಡವೆಗಳು. ದೊಡ್ಡಮ್ಮ ತನ್ನ ಸೊಸೆಯಂದಿರಿಗೆ ಕೊಟ್ಟು ಮಿಕ್ಕಿದ್ದನ್ನು ಕೋಮಲಾಳಿಗೆ ನೀಡಿದ್ದರು. ಅವಳೆಂದೂ ಅವುಗಳನ್ನು ಧರಿಸಿಕೊಂಡು ಬಂದದ್ದನ್ನು ನೋಡಿಯೇ ಇರಲಿಲ್ಲ. ರಮಾಳಿಗೆ ಕೋಮಲಾ ನೀಡಿದ್ದ ಒಡವೆ ಮತ್ತು ಪಾಸ್‌ಬುಕ್ ತೆಗೆದುಕೊಳ್ಳಲು ಮನಸ್ಸಾಗಲಿಲ್ಲ. ಅವಳು ಮನೆಯವರಿಗೆ “ಅಮ್ಮಾ ಇದೆಲ್ಲ ನನಗೆ ಬೇಡ.. ಅಣ್ಣಂದಿರು ಮನೆಯ ಸಾಮಾನುಗಳನ್ನು ಖಾಲಿಮಾಡಲು ಬರುತ್ತಾರಲ್ಲಾ ಅವರಿಗೆ ಕೊಟ್ಟುಬಿಡಿ. ಅವರಿಂದಲೇ ಮನೆಯ ಬೀಗದ ಕೈಯನ್ನು ಪಡೆದುಕೊಳ್ಳಿ. ದಯವಿಟ್ಟು ತಪ್ಪು ತಿಳಿಯಬೇಡಿ. ನೀವು ಕೋಮಲಾಳಿಗಾಗಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು. ಮನೆಯಲ್ಲಿ ಏನೇನು ಇತ್ತೆಂದು ಈ ಪತ್ರದಲ್ಲಿ ಅವಳೇ ಬರೆದಿಟ್ಟಿದ್ದಾಳೆ. ನಾನದರ ಫೋಟೋ ತೆಗೆದುಕೊಂಡಿದ್ದೇನೆ. ಅದನ್ನು ಅಣ್ಣಂದಿರಿಬ್ಬರಿಗೂ ಅವರ ಮೊಬೈಲ್‌ಗಳಿಗೆ ಕಳುಹಿಸಿದ್ದೇನೆ. ಹೆದರಬೇಡಿ. ನನ್ನಕ್ಕನೇ ಹೋದಮೇಲೆ ಇವೆಲ್ಲವೂ ನನಗೆ ಮೈಲಿಗೆಯ ಸಮಾನವಾದವುಗಳು. ಮತ್ತೊಮ್ಮೆ ಧನ್ಯವಾದಗಳು” ಎಂದು ಹೇಳಿ ಹಿಂತಿರುಗಿ ಬಂದಿದ್ದಳು ರಮಾ.
ಎಂಥಹ ವಿಪರ್ಯಾಸ. ಒಡಹುಟ್ಟಿದ ಸೋದರರಿಬ್ಬರು ಇದ್ದರೂ ಕೋಮಲಾಳಿಗೆ ಯಾರೂ ಆಸರೆಯಾಗಲಿಲ್ಲ. ಅನಾಥಳಂತೆ ಅವಳ ಕರ್ಮಾಂತರಗಳನ್ನು ಅನ್ಯರು ಮಾಡಬೇಕಾಯಿತು. ಆದರೂ ನಾಚಿಕೆಯಿಲ್ಲದೆ ಅವಳ ಉಳಿತಾಯವನ್ನು ತನ್ನ ಮಗನ ವಿದ್ಯಾಭ್ಯಾಸಕ್ಕೆ ಪಡೆದುಕೊಂಡಿದ್ದ ಒಬ್ಬಣ್ಣ. ಅತ್ತೆ ಹೇಳಿದ ಹಾಗೆ ಇಂಥವರೊಟ್ಟಿಗೆ ಅವಳು ಯಾವ ರೀತಿ ಹೊಂದಾಣಿಕೆ ಮಾಡಿಕೊಂಡಿರಲು ಸಾಧ್ಯವಿತ್ತು. ಇದನ್ನೆಲ್ಲ ಅತ್ತೆಯವರಿಗೆ ಮನದಟ್ಟು ಮಾಡಿಕೊಡಲು ಸಾಧ್ಯವೇ. ಅಷ್ಟರಲ್ಲಿ “ರಮಾ ಆಯಿತೇನೇ?” ಎಂಬ ಅತ್ತೆಯವರ ಆತಂಕದ ಕರೆ ಕೇಳಿದ ರಮಾ ವಾಸ್ತವಕ್ಕೆ ಬಂದು ಸ್ನಾನ ಮುಗಿಸಿ ದೇಹದ ಮೈಲಿಗೆಯ ಜೊತೆ ಮನದ ಮೈಲಿಗೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಶುಭ್ರಳಾಗಿ ಹೊರಬಂದಳು.

–ಬಿ.ಆರ್.ನಾಗರತ್ನ, ಮೈಸೂರು

