ಕಳೆದ ವರ್ಷ ಅದೇನಾಗಿತ್ತೋ, ಬಿಡದೆ ಸುರಿವ ಮಳೆ ಜನರಿಗೆ ಬೇಸರ ತರಿಸಿ ಎಲ್ಲರ ಬಾಯಲ್ಲೂ ಮಳೆ ಯಾವಾಗ ನಿಲ್ಲುವುದೋ, ನಿಲ್ಲುತ್ತದೋ ಇಲ್ಲ ಮುಂದಿನ ಮಳೆಗಾಲದವರೆಗೂ ಹೀಗೇ ಸುರಿಯುತ್ತಲೇ ಇರುವುದೋ ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರನಿಗೂ ಸಾಕು ಇನ್ನು ಮಳೆಯನ್ನು ನಿಲ್ಲಿಸಿಬಿಡೋಣ ಎನ್ನಿಸಿರಬಹುದು. ಅಂತೂ ಕೊನೆಗೊಮ್ಮೆ ಮಳೆ ಬರುವುದು ನಿಂತು ಛಳಿ ಶುರುವಾಗಿ ಹಿಮ ಸುರಿಯಲಾರಂಭಿಸಿತ್ತು. ಧರೆಗೆ ಮಾತ್ರ ಏನೂ ವ್ಯತ್ಯಾಸವೇ ಕಾಣಲಿಲ್ಲ. ತಣ್ಣನೆಯ ವಾತಾವರಣದಲ್ಲಿ ಅವಳು ಮೈಮರೆತು ಮಲಗಿದ್ದರೂ, ನೀರನ್ನು ಕುಡಿದ ಅವಳ ಒಡಲಿನಿಂದ ಮೇಲೆದ್ದ ಸಸಿಗಳು ಹಸಿರನ್ನು ಸೂಸುತ್ತ ಸಂಭ್ರಮಿಸುತ್ತಿವೆ.
ಬೆಳಗಿನ ಒಂಭತ್ತರ ಸಮಯ, ಮನೆಯಿಂದ ಹೊರಗೆ ಹೊರಟಿದ್ದೆ. ನಳನಳಿಸುತ್ತಿದ್ದ ಹಸಿರುಹುಲ್ಲಿನ ಮೇಲೆ ಅದೇನೋ ಮಿಸುಕಾಡುತ್ತಿದ್ದ ಹಸಿರುಬಣ್ಣದ ಚಿಕ್ಕ ಆಕೃತಿಯೊಂದು ಕುಳಿತಂತೆ ಕಂಡಿತು. ಅಲ್ಲೇ ನಿಂತು ದಿಟ್ಟಿಸಿ ನೋಡಿದೆ. ಅದು ಒಂದು ಸೂರ್ಯಕುದುರೆಯಾಗಿತ್ತು. ಈ ಕೀಟಕ್ಕೆ ಅದೇಕೆ ಸೂರ್ಯಕುದುರೆಯೆಂಬ ಹೆಸರು ಬಂದಿತೋ ಗೊತ್ತಿಲ್ಲ. ಲಂಕೆಯಲ್ಲಿನ ಅಶೋಕವನದಲ್ಲಿ ರಾಮಧ್ಯಾನದಲ್ಲಿ ಕುಳಿತಿದ್ದ ಸೀತೆಯಂತೆ ಕಾಣುತ್ತಿದ್ದ, ಅಥವಾ ನಾನು ಹಾಗೆ ಭಾವಿಸಿ ಅದರತ್ತ ನೋಡುತ್ತ ನಿಂತೆ. ಐದಾರು ನಿಮಿಷಗಳಾಗಿರಬಹುದು, ಅದರ ಧ್ಯಾನಸ್ಥ ಭಾವ ನನ್ನಲ್ಲಿ ಕುತೂಹಲವನ್ನು ಮೂಡಿಸಿತ್ತು. ಆಗಲೇ ಇದ್ದಕ್ಕಿದ್ದಂತೆ ದೊಡ್ಡ ಗಾತ್ರದ ಅಂತಹುದೇ ಇನ್ನೊಂದು ಕೀಟ ರೊಯ್ಯನೆ ಹಾರಿ ಬಂದು ಇನ್ನೊಂದು ಹುಲ್ಲಿನ ಮೇಲೆ ಕುಳಿತಿತು. ಅದು ಹಾರಿಬಂದ ರಭಸವನ್ನು ನೋಡಿದರೆ ಪುಷ್ಪಕವಿಮಾನದಲ್ಲಿ ರಾವಣನೇ ಹಾರಿಬಂದಂತಿತ್ತು. ಅರೇ! ಇದು ಒಂಟಿಯಾಗಿದ್ದ ಸೀತೆಯನ್ನು ಅಪಹರಿಸಲು ಬಂದ ರಾವಣನಿರಬಹುದೇ ಎನ್ನಿಸಿ ಮುಂದಿನ ಅದರ ನಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೆ. ಮನಸ್ಸು ಹೇಳುತ್ತಿತ್ತು-ಹೋಗಬೇಡ ಸೀತೆ! ವಿರೋಧಿಸು-ಎಂದು. ಸೀತೆ ಇಲ್ಲಿ ತನ್ನ ವಿರೋಧವನ್ನು ಪ್ರದರ್ಶಿಸಬೇಕು. ಆದರೆ ಇಲ್ಲಿ ಆದದ್ದೇ ಬೇರೆ. ಕೆಲವೇ ಕ್ಷಣಗಳಲ್ಲಿ ಎರಡೂ ಹಾರಿಹೋದವು. ಅನ್ಯೋನ್ಯತೆಯೋ, ಒತ್ತಾಯವೋ, ಏನೆಂದು ತಿಳಿಯಲಿಲ್ಲ. ಅದರ ತಪಸ್ಸಿಗಂತೂ ಭಂಗ ಬಂದಿತ್ತು, ಅಂತೆಯೇ ನನ್ನ ಆಲೋಚನೆಗಳೂ ಮತ್ತೊಂದು ದಾರಿಯನ್ನು ಹಿಡಿದಿದ್ದವು.
ಇದು ಕಲಿಯುಗವಲ್ಲವೇ? ಇಲ್ಲಿ ತ್ರೇತಾಯುಗದ ನಡವಳಿಕೆಯನ್ನು ಕಾಣಲಾಗುವುದಿಲ್ಲವಲ್ಲ ಎನ್ನಿಸಿ ವಾಸ್ತವಕ್ಕೆ ಮರಳಿದರೂ ಶಾಲಾದಿನಗಳ ನೆನಪು ಮರುಕಳಿಸಿತ್ತು. ಅರಿಯದ ಆ ದಿನಗಳಲ್ಲಿ ನನ್ನ ಸಹಪಾಠಿ ಹುಡುಗರು ಈ ಕೀಟವನ್ನು ಹಿಡಿದು ಅದರ ಕಡ್ಡಿಯಂತಹ ಕಾಲಿಗೆ ದಾರವನ್ನು ಕಟ್ಟಿ ಹಾರುವಾಗ ಹಿಂದಕ್ಕೆಳೆಯುತ್ತಿದುದನ್ನು ನನ್ನ ತಂದೆಗೆ ತಿಳಿಸಿದಾಗ ಅವರಾಡಿದ -ಪ್ರಾಣಿಹಿಂಸೆ ಮಾಡಬಾರದು, ಅದರ ಪಾಡಿಗೆ ಅದನ್ನು ಬಿಡಬೇಕು-ಎನ್ನುವ ಮಾತು ಇಂದಿಗೂ ಮನದಲ್ಲಿ ಅನುರಣಿಸುತ್ತಿದೆ. ಕರ್ಮಸಿದ್ಧಾಂತವನ್ನು ತಿಳಿದವರು ಕುಕರ್ಮಗಳಿಂದ ದೂರವಿದ್ದಾರು. ಆದರೆ ಇದನ್ನು ಕಲಿಯುವುದು ಎಲ್ಲಿ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಧೃತರಾಷ್ಟ್ರ ತನ್ನ ಹಿಂದಿನ ಯಾವುದೋ ಜನ್ಮದಲ್ಲಿ ಬಾಲ್ಯಕಾಲದಲ್ಲಿ ಹಕ್ಕಿಗಳ ಕಣ್ಣಿಗೆ ತೊಂದರೆ ಮಾಡಿದ್ದರಿಂದ ಹುಟ್ಟುಕುರುಡನಾಗಿ ಜನಿಸಿ ರಾಜನಾದರೂ ಅಶಾಂತಿಯಿಂದ ಬಳಲುವಂತಾಯಿತು ಎನ್ನುವ ಮಾಹಿತಿ ಮಹತ್ವದ್ದಾಗಿದೆ. ಇಂತಹ ವಿಷಯಗಳನ್ನು ತಿಳಿಯಲಾದರೂ ಪುರಾಣಗಳನ್ನು, ರಾಮಾಯಣ ಮಹಾಭಾರತದಂತಹ ಗ್ರಂಥಗಳನ್ನು ಓದಲೇಬೇಕಿದೆ.
ಇದಕ್ಕೂ ಮುನ್ನ ಪ್ರಾಥಮಿಕಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆ ದಿನಗಳಲ್ಲಿ ಒಂದುದಿನ ಒಬ್ಬ ಹುಡುಗ ಬೆಂಕಿಪೊಟ್ಟಣವನ್ನು ತೆರೆದು ತೋರಿಸಿದ. ಅದರಲ್ಲಿ ಕೆಂಪುಬಣ್ಣದ ನುಣುಪಾದ ದೇಹವುಳ್ಳ ಒಂದು ಹುಳುವಿತ್ತು. ಅದು ವೆಲ್ವೆಟ್ ಹುಳು ಎಂದು ಅವನು ತಿಳಿಸಿದಾಗ ಅದರ ಅಂದಕ್ಕೆ ಮರುಳಾಗಿ-ಎಲ್ಲಿ ಸಿಕ್ಕಿತು?-ಎಂದು ಅವನನ್ನು ಕೇಳಿದೆ. ಶಾಲೆಗೆ ಬರುವಾಗ ದಾರಿಯ ಪಕ್ಕದಲ್ಲಿದ್ದ ಮರದ ಕೆಳಗೆ ಇತ್ತು-ಎಂದ. ಇದನ್ನ ನನಗೆ ಕೊಡು-ಎಂದು ಕೇಳಿದೆ. ಅವನು ತನಗೇ ಬೇಕು ಎಂದಾಗ, ನನಗೂ ಒಂದು ತಂದುಕೊಡು-ಎಂದು ವ್ಯವಹಾರ ಕುದುರಿಸಲು ಪ್ರಯತ್ನಿಸಿದೆ. ಅಷ್ಟರಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ, ವಿಷಯವನ್ನು ತಿಳಿದ ಕೆಲವು ಮಕ್ಕಳು ಅವರಿಗೂ ಬೇಕು ಎಂದು ಅವನಿಗೆ ದುಂಬಾಲು ಬಿದ್ದರು. ಈಗ ನಮ್ಮೆಲ್ಲರ ದೃಷ್ಟಿಯಲ್ಲಿ ಅವನು ಹೀರೋ ಆಗಿದ್ದ. ನಾಳೆ ಎಲ್ಲರೂ ನಿಮ್ಮ ನಿಮ್ಮ ಮನೆಗಳಿಂದ ಖಾಲಿ ಬೆಂಕಿಪೆಟ್ಟಿಗೆಗಳನ್ನು ತನ್ನಿ-ಎಂದು ಅವನೆಂದಾಗ ನಮ್ಮೆಲ್ಲರಿಗೂ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸಿದ್ದು ನಿಜ. ಇಲ್ಲಿ ನನಗೆ ಇನ್ನೊಂದು ಸಮಸ್ಯೆ ಎದುರಾಗಿತ್ತು. ಖಾಲಿ ಬೆಂಕಿಪೆಟ್ಟಿಗೆಯನ್ನು ಗಳಿಸುವುದು ಹೇಗೆ ಎಂದು ಯೋಚಿಸಿ, ಬಳಪ ಹಾಕಿಕೊಳ್ಳಲು ಬೇಕು ಎಂದು ಅಜ್ಜಿಗೆ ಸುಳ್ಳು ಹೇಳಿ ಹೇಗೋ ಒಂದನ್ನು ಸಂಪಾದಿಸಿ ಚೀಲದಲ್ಲಿಟ್ಟೆ. ಮರುದಿನ ನನಗೆ ನಾಲ್ಕು ಹುಳುಗಳನ್ನು ತಂದು ಕೊಟ್ಟಿದ್ದ. ಅವುಗಳನ್ನು ಪೆಟ್ಟಿಗೆಯಲ್ಲಿಟ್ಟು ಆಗಾಗ ಸ್ವಲ್ಪವೇ ತೆರೆದು ನೋಡುತ್ತ ಸಂಭ್ರಮಿಸಿದ್ದೆ. ಇದೇ ನಾನು ನನ್ನ ಜೀವನದಲ್ಲಿ ಗಳಿಸಿದ್ದ ಪ್ರಥಮ ಆಸ್ತಿ ! ಆದರೆ ಈ ನನ್ನ ಸಂತೋಷ ಬಹಳ ದಿನ ಉಳಿಯಲಿಲ್ಲ. ನನ್ನಮ್ಮ ನನ್ನ ಚೀಲವನ್ನು ತೆರೆದು ನೋಡಿದಾಗ ಒಂದು ವಾರದಲ್ಲಿ ನನ್ನ ರಹಸ್ಯ ಬಯಲಾಗಿತ್ತು. ವಿಷಯ ನನ್ನ ಅಪ್ಪನ ಕಿವಿಗೂ ತಲುಪಿ,- ಊಟವಿಲ್ಲದೆ ಹುಳುಗಳನ್ನು ಸಾಯಿಸುತ್ತಿದ್ದೀಯ-ಎಂದು ನನ್ನ ಮೇಲೆ ಹರಿಹಾಯ್ದ ಇಬ್ಬರೂ ಆ ಹುಳುಗಳನ್ನು ಮರದ ಬುಡದಲ್ಲಿ ಬಿಟ್ಟುಬರುವಂತೆ ತಿಳಿಸಿದಾಗ ನನಗಾದ ನಿರಾಸೆಯನ್ನು ಪದಗಳಲ್ಲಿ ತಿಳಿಸಲಾರೆ. ಅದೇ ಕೊನೆ, ಮತ್ತೆಂದೂ ಅಂತಹ ಹುಳುಗಳು ನನ್ನ ದೃಷ್ಟಿಗೆ ಬಿದ್ದಿಲ್ಲ, ಆದರೂ ಮನದಲ್ಲಿ ಕುಳಿತು ಇಂದಿಗೂ ಕಾಡುತ್ತಿವೆ.
ಮಲೆನಾಡಿನಲ್ಲಿರುವ ನಮಗೆ ಕೀಟಗಳ ಮತ್ತು ಸರೀಸೃಪಗಳ ದರ್ಶನ ಸಾಮಾನ್ಯ. ಬೆಳಗಾಗೆದ್ದು ಮನೆಯ ಬಾಗಿಲನ್ನು ತೆರೆದಂತೆ ಮೊದಲು ಕಾಣುವುದೇ ಸಹಸ್ರಪದಿ ಮತ್ತು ಶತಪದಿಗಳು. ಅಯ್ಯೋ! ನೀವೆಷ್ಟು ಭಾಗ್ಯಶಾಲಿಗಳು! ಬೆಳ್ಳಂಬೆಳಗ್ಗೆ ಲಕ್ಷ್ಮಿಚೇಳನ್ನ ನೋಡಿದರೆ ಧನಲಾಭವಂತೆ ! ಅಂದಹಾಗೆ ಅವೆಲ್ಲ ನಿಮ್ಮ ಮನೆಬಾಗಿಲಿಗೆ ಬರೋಹಾಗೆ ನೀವೇನು ಉಪಾಯ ಮಾಡಿದ್ದೀರಿ?-ಎಂದವರಿಗೆ ನಾನು-ಹೌದು ಹೌದು, ನನ್ನ ಭಾಗ್ಯ ನನಗೇ ಗೊತ್ತು, ಆದರೆ ಅದರ ಗುಟ್ಟನ್ನ ಹೊರಗೆ ಬಿಟ್ಟುಕೊಡುವಂತಿಲ್ಲ, ಹಾಗೇನಾದರೂ ಬಿಟ್ಟುಕೊಟ್ಟರೆ ಬಂದ ಸಿರಿ ಹಾಗೇ ಹೋಗಿಬಿಡುತ್ತದಂತೆ-ಎನ್ನುತ್ತ ಮುಗುಳ್ನಗೆ ಬೀರಿ ಮನೆ ಸೇರಿದ್ದೆ. ಚೀನಾದೇಶದವರಾಗಿದ್ದರೆ ಉಪ್ಪಿನಕಾಯಿಗಾಯಿತು ಎಂದು ಇವುಗಳನ್ನು ಡಬ್ಬಿಯಲ್ಲಿ ಹಾಕಿಡುತ್ತಿದ್ದರೇನೋ.
ಬಾಲ್ಯದಿಂದಲೂ ನಾನು ಕೀಟಗಳನ್ನು ನೋಡುತ್ತ ಬೆಳೆದವಳು. ನಮ್ಮ ಪ್ರೌಢಶಾಲೆ ಇರುವುದೇ ಗುಡ್ಡದ ಮೇಲಿನ ನಿಸರ್ಗದ ಮಡಿಲಿನಲ್ಲಿ. ಶಾಲೆಯ ಪಕ್ಕವೇ ಇರುವ ಎತ್ತರದ ಮರಗಳು ಮತ್ತು ಶಾಲೆಯ ಆವರಣದಲ್ಲೇ ಇರುವ ಕೈತೋಟ ನನ್ನ ಕನಸುಗಳಿಗೆ, ಕಲ್ಪನೆಗಳಿಗೆ ನೀರೆರೆದು ಬೆಳೆಸಿದ ಸಾಕುತಂದೆತಾಯಿಗಳು. ಹೂವಿನ ಮೇಲೆ ಕುಳಿತು ಮಕರಂದವನ್ನು ಹೀರುವ ದುಂಬಿಗಳು ಮನದೊಳಗಿನ ಜೇನುಗೂಡಿಗೆ ಲಗ್ಗೆ ಹಾಕಿ ಕಚಗುಳಿಯನಿಟ್ಟರೆ, ಮರದ ಮೇಲೆ ಕುಳಿತು ಹಾಡುವ ಕೋಗಿಲೆಗಳು ನನ್ನ ಹೃದಯಕ್ಕೂ ಹಾಡು ಕಲಿಸಿವೆ. ಒಮ್ಮೆ ಕನ್ನಡ ಪಂಡಿತರಿಂದ ಶಕುಂತಲೆಯ ಪಾಠ ನಡೆದಿತ್ತು. ಕಣ್ವಮಹರ್ಷಿಗಳ ಆಶ್ರಮದಲ್ಲಿ ಜಿಂಕೆಯೊಡನೆ ಇದ್ದ ತರುಣಿ ಶಕುಂತಲೆಯನ್ನು ಆಕಸ್ಮಿಕವಾಗಿ ದುಷ್ಯಂತಮಹಾರಾಜ ಸಂಧಿಸುವ ಸಂದರ್ಭ. ಕಣ್ವಾಶ್ರಮದ ವರ್ಣನೆಗೆ ಬೆರಗಾಗಿ ಕಿಟಕಿಯ ಪಕ್ಕ ಕುಳಿತಿದ್ದ ನಾನು ಕಿಟಕಿಯಿಂದ ಹೊರಗೆ ನೋಡುತ್ತ ಅಲ್ಲಿದ್ದ ಹಸಿರಿನ ಸಾಮ್ರಾಜ್ಯದ ನಡುವೆ ಆಶ್ರಮವೊಂದನ್ನು ಕಲ್ಪಿಸಿಕೊಂಡು ಮೈಮರೆತಿದ್ದೆ. ಅದೇ ಸಮಯಕ್ಕೆ ದುಂಬಿಯೊಂದು ಹೂವಿನ ಸುತ್ತ ಸುಳಿಯುತ್ತ ಸುಳಿಯುತ್ತ ದೂರಕ್ಕೆ ಹಾರಿ ದೃಷ್ಟಿಯಿಂದ ಮರೆಯಾಯಿತು. ಅದು ಮತ್ತೆ ಬರಬಹುದೆಂಬ ನಿರೀಕ್ಷೆಯಲ್ಲಿ ನಾನು ಅಲ್ಲೇ ದೃಷ್ಟಿಯನ್ನು ಕೀಲಿಸಿದ್ದೆ. ಎಲ್ಲ ವಿದ್ಯಾರ್ಥಿಗಳನ್ನೂ ಗಮನಿಸುತ್ತಿದ್ದ ಮಾಸ್ತರರ ದೃಷ್ಟಿ ನನ್ನತ್ತ ತಿರುಗಿತ್ತು. ಏನು ತಂಗ್ಯಮ್ಮಾ! ಶಕುಂತಲೆಯೇನೋ ದುಷ್ಯಂತನ ಧ್ಯಾನದಲ್ಲಿ ತನ್ನನ್ನೇ ತಾನು ಮರೆತಿದ್ದಳು, ನೀನು ಪಾಠ ಕೇಳೋದನ್ನ ಬಿಟ್ಟು ಯಾರ ಧ್ಯಾನದಲ್ಲಿದೀಯ?-ಎಂದಾಗ ಒಮ್ಮೆಲೇ ತರಗತಿಯಲ್ಲಿ ನಗುವಿನ ಅಲೆ ಎದ್ದಿತ್ತು. ಎಲ್ಲ ವಿದ್ಯಾರ್ಥಿಗಳೂ ನನ್ನತ್ತ ನೋಡಲಾರಂಭಿಸಿದ್ದರು. ನಾಚಿಕೆಯಿಂದ ನಾನು ಮುದುಡಿಹೋಗಿದ್ದೆ. ಆ ಕ್ಷಣದಲ್ಲಿ ಭೂಮಿ ಬಾಯ್ದೆರೆಯಬಾರದೇ ಎನ್ನಿಸಿತ್ತು. ಇಷ್ಟಾದರೂ ನನ್ನ ಮನಸ್ಸಿನಲ್ಲಿದ್ದ ವಿಷಯಗಳನ್ನು ಹೊರಹಾಕಲೇಇಲ್ಲ. ಇದೆಲ್ಲ ಆಗಿದ್ದು ಒಂದು ದುಂಬಿಯಿಂದ. ಇಷ್ಟಾದರೂ ನನಗೆ ದುಂಬಿಗಳ ಮೇಲೆ ಸ್ವಲ್ಪವೂ ಕೋಪವಿಲ್ಲ, ದಿನದಿಂದ ದಿನಕ್ಕೆ ಮನಸ್ಸು ದುಂಬಿಗಳತ್ತ ಆಕರ್ಷಿತವಾಗುತ್ತಿದೆ.
ಕನ್ನಡ ಚಿತ್ರರಂಗದ ವರನಟ ನಮ್ಮ ಡಾ.ರಾಜಕುಮಾರ್‌ರವರ ಸಿರಿಕಂಠದಿಂದ ಮೂಡಿಬಂದ ಕವಿರತ್ನ ಕಾಳಿದಾಸ ಚಿತ್ರದ ಸೂಪರ್‌ಹಿಟ್ ಪ್ರೇಮಗೀತೆ-ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ-ಎನ್ನುವ ಹಾಡಿನಲ್ಲಿ- ಮುಂಗುರುಳು ದುಂಬಿಗಳಂತೆ. . . .ಡ್ರುಂಯ್ ಡ್ರುಂಯ್-ಎನ್ನುವ ಶಬ್ದಗಳನ್ನು ಕೇಳಿದಾಗಲೆಲ್ಲ ಚಿತ್ರದ ನಾಯಕಿಯ ಮುಖದ ಬದಲು ನನ್ನ ಮನದ ಎದುರು ಕಪ್ಪಾದ ದುಂಬಿಯೊಂದು ಕಾಣುತ್ತದೆ. ಗುಂಯ್‌ಗುಟ್ಟುತ್ತಾ ವೇಗವಾಗಿ ಹಾರಿಬಂದರೂ ಬಹಳ ನಾಜೂಕಾಗಿ ಹೂವಿನ ಮೇಲೆ ಮೆಲ್ಲಗೆ ಕುಳಿತುಕೊಳ್ಳುವ ದುಂಬಿಯ ಚಾಕಚಕ್ಯತೆಯನ್ನು ವರ್ಣಿಸಲು ಪದಗಳನ್ನು ಅರಸಬೇಕು. ಶಬ್ದ ಮಾಡುವ ಕೀಟಗಳಲ್ಲಿ ಜೀರುಂಡೆಗೆ ಮೊದಲ ಸ್ಥಾನ. ಕತ್ತಲಾಗುತ್ತಿದ್ದಂತೆ ನೀರವವಾದ ರಾತ್ರಿಗಳಲ್ಲಿ ಜೀರ್‌ಜೀರ್ ಎನ್ನುವ ಶಬ್ದ ಮಲೆನಾಡಿನ ರಹಸ್ಯವನ್ನು ಬಿಚ್ಚಿಡುತ್ತದೆ, ಜೊತೆಗೆ ಭಯಾನಕ ವಾತಾವರಣವನ್ನೂ ಸೃಷ್ಟಿಸುತ್ತದೆ. ವಿವಿಧ ರೀತಿಯ ಕೀಟಗಳ ಸದ್ದುಗಳನ್ನು ನಮ್ಮ ಮಲೆನಾಡಿನ ಸಿಗ್ನೇಚರ್ ಟ್ಯೂನ್ ಎಂದು ಭಾವಿಸಬಹುದು. ಚರ್ ಚರ್ ಎಂದು ಸದ್ದು ಮಾಡುವ ಹೊಟ್ಟೆಬಾಕ ಮಿಡತೆಯನ್ನು ನೋಡುವಾಗಲೆಲ್ಲ ಇರುವೆ ಮತ್ತು ಮಿಡತೆಯ ಕಥೆ ನೆನಪಾಗುತ್ತದೆ. ಬೇಸಿಗೆಯಲ್ಲಿ ಇರುವೆ ಮಳೆಗಾಲಕ್ಕೆಂದು ಗೂಡಿನಲ್ಲಿ ಆಹಾರವನ್ನು ಶೇಖರಿಸಲು ಹೆಣಗಾಡುತ್ತಿದ್ದರೆ ಮಿಡತೆ ಬಿಸಿಲನ್ನು ಸವಿಯುತ್ತ ಹಾಡುತ್ತ ಹಾರುತ್ತ ಸಂತೋಷದಲ್ಲಿ ಕಾಲವನ್ನು ಕಳೆಯುತ್ತದೆ. ಇರುವೆಯಂತೆ ಮುಂದಾಲೋಚನೆಯಿರಬೇಕು ಎನ್ನುವ ನೀತಿಯನ್ನು ನಾವೆಲ್ಲ ಪಾಲಿಸಬೇಕು, ಮುಂದಿನ ದಿನಗಳಿಗಾಗಿ ಒಂದಿಷ್ಟು ಹಣವನ್ನು ಕೂಡಿಸಿಡಬೇಕು ಎಂದು ಆ ಕಾಲದಲ್ಲಿನ ಹಿರಿಯರು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಾಳೆ ಏನಾಗುತ್ತದೋ, ಇಂದೇ ಮಜಾ ಉಡಾಯಿಸಿಬಿಡೋಣ ಎನ್ನುತ್ತ ಕೊಳ್ಳುಬಾಕ ಸಂಸ್ಕೃತಿಯ ಹಿಂದೆ ಬಿದ್ದಿರುವ ಮಿಡತೆಯ ವರ್ಗದವರೇ ಹೆಚ್ಚಾಗಿದ್ದಾರೆ. ಕಾಲಾಯ ತಸ್ಮೈ ನಮಃ ಎನ್ನದೇ ಬೇರೆ ದಾರಿಯಿಲ್ಲ.
ನನ್ನನ್ನು ಕಾಡಿದ ಮತ್ತು ಈಗಲೂ ಕಾಡುತ್ತಿರುವ ಇನ್ನೊಂದು ಕೀಟ ಗುಂಗಿಹುಳ. ಮಹಾಭಾರತದಲ್ಲಿ ಬರುವ ಕರ್ಣನ ಪ್ರಸಂಗದಲ್ಲಿ ಈ ಗುಂಗಿಹುಳು ವಿಲನ್ ಆಗಿ ಪ್ರವೇಶಿಸುತ್ತದೆ. ದ್ರೋಣಾಚಾರ್ಯರಿಂದ ತಿರಸ್ಕೃತನಾದ ಕರ್ಣ ಅಸ್ತ್ರವಿದ್ಯೆಯನ್ನು ಕಲಿಯಲು ಪರಶುರಾಮರ ಬಳಿಗೆ ಬರುತ್ತಾನೆ. ತಾನು ಬ್ರಾಹ್ಮಣನೆಂದು ಸುಳ್ಳುಹೇಳಿ ಅವರ ಶಿಷ್ಯನಾಗಿ ಅವರಿಂದ ದಿವ್ಯಾಸ್ತ್ರಗಳನ್ನು ಪಡೆಯುವಂತಹ ಅರ್ಹತೆಯನ್ನು ಗಳಿಸುತ್ತಾನೆ. ಒಂದುದಿನ ಮಧ್ಯಾಹ್ನದ ಸಮಯದಲ್ಲಿ ಪರಶುರಾಮರು ಶಿಷ್ಯನಾದ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಿರುವ ಸಮಯದಲ್ಲಿ ಒಂದು ಗುಂಗಿಹುಳು ಕರ್ಣನ ತೊಡೆಯನ್ನು ಕಚ್ಚುತ್ತದೆ. ಗುರುವಿಗೆ ನಿದ್ರಾಭಂಗವಾಗಬಾರದೆಂಬ ಸದುದ್ದೇಶದಿಂದ ಕರ್ಣ ನೋವನ್ನು ಸಹಿಸಿ ಮೌನವಾಗಿದ್ದರೂ ಗಾಯದಿಂದ ಹರಿದ ರಕ್ತ ಸೋಕಿದ್ದರಿಂದ ಎಚ್ಚರಗೊಂಡ ಪರಶುರಾಮರು ವಿಷಯ ತಿಳಿದು ಕರ್ಣನನ್ನು ಹೊಗಳುವ ಬದಲು-ನೋವನ್ನು ಸಹಿಸಿದ ನೀನು ಬ್ರಾಹ್ಮಣನಾಗಿರಲಾರೆ. ಸುಳ್ಳು ಹೇಳಿ ನನ್ನಿಂದ ವಿದ್ಯೆಯನ್ನು ಕಲಿತ ನಿನಗೆ ಅಗತ್ಯವಿದ್ದ ಕಾಲದಲ್ಲಿ ಬ್ರಹ್ಮಾಸ್ತ್ರ ಮಂತ್ರ ಮರೆತುಹೋಗಲಿ-ಎಂದು ಶಾಪವನ್ನು ನೀಡಿದ ವಿಷಯ ನನ್ನ ಮನದಲ್ಲಿ ಗುಂಗಿಹುಳುವಿನ ಬಗೆಗೆ ದ್ವೇಷ ಮೂಡಲು ಕಾರಣವಾಗಿತ್ತು. ಪಾಪದ ಕರ್ಣನಿಗಾಗಿ ನನ್ನ ಜೀವ ಮರುಗಿತ್ತು. ಈ ಕೀಟದ ಬಣ್ಣ ನೀಲಿಯೆಂದು ಎಲ್ಲೋ ಓದಿದ ನೆನಪು. ಒಮ್ಮೆ ಬೆಳಗಿನಸಮಯದಲ್ಲಿ ಅಂಗಳದಲ್ಲಿನ ಗಿಡಗಳಿಗೆ ನೀರು ಹಾಕುತ್ತಿದ್ದೆ. ಆಗಲೇ ಎಲ್ಲಿಂದಲೋ ಹಾರಿಬಂದ ನೀಲಿಬಣ್ಣದ ಕೀಟವೊಂದು ಗಿಡದ ಮೇಲೆ ಒಂದು ಕ್ಷಣ ಕುಳಿತ ಶಾಸ್ತ್ರ ಮಾಡಿ ರೊಯ್ಯನೆ ಹಾರಿಹೋಯಿತು. ಅದು ಗುಂಗಿಹುಳುವೇ ಇರಬೇಕು. ಅದರ ನೀಲಿವರ್ಣಕ್ಕೆ ಮತ್ತು ಸೌಂದರ್ಯಕ್ಕೆ ನಾನು ಫಿದಾ ಆಗಿದ್ದೆ ಮಾತ್ರವಲ್ಲ, ಅದನ್ನು ಹೂವಿನಂತೆ ತಲೆಯಲ್ಲಿಟ್ಟು ಸಂಭ್ರಮಿಸಬೇಕೆನ್ನುವ ಮನಸ್ಸಾಗಿತ್ತು. ನನ್ನ ಮನದಲ್ಲಿದ್ದ ದ್ವೇಷವೂ ಮಾಯವಾಗಿತ್ತು. ಇದಲ್ಲವೆ ಸೌಂದರ್ಯದ ಕರಾಮತ್ತು! ಕೀಟಗಳಿಗೆ ತಮ್ಮ ಸೌಂದರ್ಯವನ್ನು ಕುರಿತಾದ ಅರಿವಿದ್ದಿದ್ದರೆ ಕನ್ನಡಿಯ ಮುಂದೆ ನಿಂತು, ಅಲ್ಲಲ್ಲ, ಹಾರುತ್ತ ಬಂದು ತಮ್ಮ ರೂಪವನ್ನೊಮ್ಮೆ ನೋಡಿಕೊಳ್ಳುತ್ತಿದ್ದವೇನೋ. ಇತ್ತೀಚೆಗೆ ಒಂದುದಿನ ಅಂಗಳವನ್ನು ಗುಡಿಸುವ ಸಮಯದಲ್ಲಿ ಗೇಟಿನ ಕೆಳಗಿನ ಹಸಿರುಹುಲ್ಲುಗಳ ನಡುವೆ ಏನೋ ಚಲಿಸಿದಂತೆ ಕಾಣಿಸಿತು. ಕಡ್ಡಿಯಿಂದ ಸರಿಸಿ ನೋಡಿದಾಗ ಕಂಡಿದ್ದು ಒಂದು ಚಿಕ್ಕ ಅರ್ಧ ಸೆಂಟಿಮೀಟರ್ ಉದ್ದದ ಹಚ್ಚ ಹಸಿರಿನ ಕೀಟ. ಅದರ ಇಡೀ ಶರೀರ ಹಸಿರಾಗಿದ್ದು, ಬೆನ್ನಿನ ಮೇಲೆ ಪಚ್ಚೆಕಲ್ಲನ್ನು ಅಂಟಿಸಿದಂತೆ ಹೊಳೆಯುವ ಚಿಕ್ಕ ಕವಚವಿತ್ತು. ನಾನು ಮುಂದಿನ ಕೆಲಸವನ್ನು ಮರೆತು ಅದರತ್ತ ನೋಡುತ್ತ ನಿಂತೆ. ಕಾಳಿಕಾಮಾತೆಯ ದರ್ಶನದಿಂದ ಕಾಳಿದಾಸನ ಮನದಲ್ಲಿ ಕಾವ್ಯಗಳು ಉದಯಿಸಿದಂತೆ ಈ ಕೀಟದ ದರ್ಶನದಿಂದ ನನ್ನ ಮನದಲ್ಲಿ ವಿವಿಧ ಭಾವಗಳು ಉದಯಿಸತೊಡಗಿದವು. ಈ ಕೀಟವೂ ನಮ್ಮಂತೆ ಡಿಸೈನರ್ ಬ್ಲೌಸ್ ತೊಟ್ಟಿದೆಯೇನೋ ಎನ್ನಿಸಿತ್ತಲ್ಲದೆ ಈ ಕೀಟವನ್ನೇ ಬೆನ್ನಿನ ಭಾಗಕ್ಕೆ ಬರುವಂತೆ ಹಸಿರು ಅಥವಾ ಹಳದಿ ಬ್ಲೌಸ್‌ನ ಹಿಂಭಾಗಕ್ಕೆ ಅಂಟಿಸಿದರೆ ಹೇಗಿರುತ್ತದೆ ಎನ್ನುವ ಭಾವನೆಯೂ ಸುಳಿದುಹೋಯಿತು. ನಾನು ಕಲ್ಪನೆಯಲ್ಲೇ ಡಿಸೈನರ್‌ಬ್ಲೌಸನ್ನು ತೊಟ್ಟು ಸಂಭ್ರಮಿಸುತ್ತಿದ್ದೆ, ಅಷ್ಟರೊಳಗೆ ಅದು ಹುಲ್ಲಿನ ನಡುವೆ ಸೇರಿ ಕಾಣದಾಯಿತು.
ದಶಕಗಳ ಹಿಂದೆ ಮನೆ ಕಟ್ಟಿಸಿ ವಾಸಮಾಡಲು ಪ್ರಾರಂಭಿಸಿದ ಸಮಯದಲ್ಲಿ ನಮ್ಮ ಮನೆಯ ಸುತ್ತಮುತ್ತ ಯಾವುದೇ ಮನೆಗಳಿರದ ಆ ಕಾಲದಲ್ಲಿ ನಡೆದ ಒಂದು ವಿಚಿತ್ರ ಘಟನೆ ಈಗಲೂ ನೆನಪಾಗುತ್ತದೆ. ನಾನು ಮೊದಲೇ ತಿಳಿಸಿದಂತೆ ನನ್ನೂರು ಸಂಪೂರ್ಣ ಮಲೆನಾಡು. ಛಳಿಗಾಲದಲ್ಲಂತೂ ಸಂಜೆ ಆರಕ್ಕೇ ಕತ್ತಲೆ ಮುಸುಕಿದಂತೆ ಭಾಸವಾಗುತ್ತಿತ್ತು. ಒಂದು ರಾತ್ರಿ ಒಂಭತ್ತರ ಸುಮಾರಿಗೆ ಝಣ್ ಝಣ್ ಗೆಜ್ಜೆದನಿ, ಯಾರೋ ನಡೆದುಬರುತ್ತಿರುವಂತೆ. ಸ್ವಲ್ಪ ಸಮಯದ ಮೌನದ ನಂತರ ಮತ್ತದೇ ಸದ್ದು, ಈಗ ಮನೆಯ ಸಮೀಪ ಯಾರೋ ಹಾದುಹೋಗುತ್ತಿದ್ದಾರೆ ಎನ್ನುವಂತೆ. ನಮಗೆಲ್ಲ ಭಯವಾಗತೊಡಗಿತು. ಯಾವ ದೆವ್ವದ ಅಥವಾ ಮೋಹಿನಿಯ ಕಾಟವೋ ಎನಿಸಿದರೂ ಹೇಳಿಕೊಳ್ಳಲು ಸಮೀಪ ಯಾರೂ ಇಲ್ಲ. ಸುತ್ತಲೂ ಕೇವಲ ಹಸಿರು, ಸಸ್ಯಗಳ ಪ್ರಪಂಚ. ಧೈರ್ಯಮಾಡಿ ಅಂಗಳದ ದೀಪ ಹಾಕಿ ಬಾಗಿಲು ತೆರೆದು ನೋಡಿದರೆ ಯಾರೂ ಕಾಣಲಿಲ್ಲ. ದೀಪ ಆರಿಸಿ ಬಾಗಿಲು ಹಾಕಿದ ಸ್ವಲ್ಪ ಸಮಯದಲ್ಲೇ ಮತ್ತದೇ ಝಣ್ ಝಣ್ ದನಿ. ಈಗ ದೀಪ ಹಾಕದೇ ಕತ್ತಲೆಯಲ್ಲೇ ಬಾಗಿಲು ತೆರೆದು ಹೊರಗೆ ಬಂದು ನಿಂತೆ. ಎದೆ ಭಯದಿಂದಾಗಿ ಡವಗುಟ್ಟುತ್ತಿತ್ತು. ಹತ್ತು ನಿಮಿಷಗಳ ನೀರವ ಮೌನದ ನಂತರ ಪಕ್ಕದ ಬೇಲಿಯಿಂದ ಅದೇ ಗೆಜ್ಜೆನಾದ ಹೊರಬಂತು! ಹಾಗೆ ಸದ್ದು ಮಾಡುತ್ತಿದ್ದುದು ಒಂದು ಕೀಟವಾಗಿತ್ತು! ನಂತರದ ದಿನಗಳಲ್ಲಿ ಜನಸಂಚಾರ ಹೆಚ್ಚಾಗಿ, ಬೇಕೆಂದರೂ ಗೆಜ್ಜೆನಾದ ಕೇಳಿಸುತ್ತಿಲ್ಲ. ಇಲ್ಲಿಯವರೆಗೆ ನಾನು ಅಂತಹ ಸದ್ದನ್ನು ಮತ್ತೆ ಕೇಳಿಲ್ಲ.
ಕೀಟಪ್ರಪಂಚದ ವಿಸ್ಮಯವೆಂದರೆ ಅದು ಚಿಟ್ಟೆ. ಅತ್ಯಂತ ವಿಕೃತವಾಗಿ ಮತ್ತು ಅಸಹ್ಯವಾಗಿ ಕಾಣುವ ರೋಮಭರಿತ ಕಂಬಳಿಹುಳು ಸುಂದರವಾದ ಚಿಟ್ಟೆಯಾಗುವುದೆಂದರೆ ವಿಚಿತ್ರವಾದ ವಿಷಯ, ಆದರೂ ಸತ್ಯ. ತನ್ನ ಸುತ್ತಲೂ ಕೋಶವನ್ನು ನಿರ್ಮಿಸಿಕೊಂಡು ಏಕಾಂತದಲ್ಲಿ ತಪಸ್ಸಿನಲ್ಲಿ ತೊಡಗಿದಂತಿದ್ದ ಕಂಬಳಿಹುಳು ಸ್ವಲ್ಪಕಾಲದ ನಂತರ ಶಾಪ ಕಳೆದ ಅಪ್ಸರೆಯಂತೆ ಸುಂದರವಾದ ಬಣ್ಣಗಳಿಂದ ಕೂಡಿದ ಚಿಟ್ಟೆಯಾಗಿ ರೆಕ್ಕೆಗಳನ್ನು ಬಡಿಯುತ್ತ ಹೊರಬರುವ ಪರಿ ವರ್ಣನೆಗೆ ನಿಲುಕದ್ದು. ಪಾತರಗಿತ್ತಿ ಪಕ್ಕಾ ನೋಡೀದೇನ ಅಕ್ಕ? ಹಸಿರು ಹಚ್ಚಿ ಚುಚ್ಚಿ ಮೇಲಕರಿಸಿಣ ಹಚ್ಚಿ-ಎಂದು ಬೇಂದ್ರೆಯವರು ಹಾಡಿದ್ದು ಸುಮ್ಮನೆಯೇ? ಚಿಟ್ಟೆಯ ಸಾಮಾನ್ಯವಾದ ಹಾರಾಟವೂ ಅದರ ವೈಯ್ಯಾರವೆಂಬಂತೆ ಕಾಣುವುದು ಸೃಷ್ಟಿಕರ್ತ ಅದಕ್ಕಿತ್ತಿರುವ ವರದಾನವಾಗಿದೆ. ನಾವು ಅಷ್ಟೆಲ್ಲಾ ಹಣ ತೆತ್ತು ವಿಮಾನದಲ್ಲಿ ಕುಳಿತು ಹಾರಿದರೂ ಈ ವಯ್ಯಾರದ ಬಾಗು ಬಳುಕುಗಳನ್ನು ಪ್ರದರ್ಶಿಸಲು ಸಾಧ್ಯವೇ? ಚಿಟ್ಟೆಗೂ ರಾಮಾಯಣಕ್ಕೂ ಸೃಷ್ಟಿಯ ವಿಷಯದಲ್ಲಿ ಹೋಲಿಕೆಯಿದೆ. ಹುತ್ತದೊಳಗೆ ರಾಮಧ್ಯಾನದಲ್ಲಿದ್ದ ಕವಿ ವಾಲ್ಮೀಕಿ ಹುತ್ತದಿಂದ ಹೊರಬಂದು ರಚಿಸಿದ ರಾಮಾಯಣವೆಂಬ ಘನವಾದ ಕಾವ್ಯವೂ ಕೋಶದಿಂದ ಹೊರಬಂದ ಚಿಟ್ಟೆಯಂತೆಯೇ ಜನರಿಗೆ ಬಹಳ ಪ್ರಿಯವೆನಿಸಿದೆ. ಅಂತೆಯೇ ವಲ್ಮೀಕದಿಂದ ಹೊರಬಂದ ವಾಲ್ಮೀಕಿಗಳೂ ಜನಮಾನಸದಲ್ಲಿ ಅಮರರಾಗಿದ್ದಾರೆ. ಗೋಡೆಯ ಮೇಲಿನ ಕೋಶಗಳಂತಹ ರಚನೆಗಳು ನನಗೆ ರಾಮಾಯಣವನ್ನು ನೆನಪಿಸುತ್ತವೆ. ಇದೊಂದು ರೀತಿ ಇಮಾಂಸಾಹೇಬರಿಗೂ ಗೋಕುಲಾಷ್ಟಮಿಗೂ ಎಲ್ಲಿಯ ಸಂಬಂಧ ಎಂದಂತೆ.
ಕೀಟಪ್ರಪಂಚದಲ್ಲಿ ಪತಂಗಗಳದ್ದೇ ಒಂದು ವಿಶೇಷ. ಬೆಳಕಿಗೆ ಸ್ಪಂದಿಸುವ ಈ ಕೀಟಗಳು ಸಾಹಿತ್ಯವಲಯದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನಗಳನ್ನು ಹೊಂದಿವೆ. ಕವಿಗಳಿಗೂ ಕಲಾವಿದರಿಗೂ ಕಥೆಗಾರರಿಗೂ ಮತ್ತು ಚಿತ್ರಸಾಹಿತಿಗಳಿಗೂ ಪ್ರೇರಣೆಯನ್ನು ನೀಡುತ್ತ ಬಂದಿರುವ ಪತಂಗ ಸಾಹಿತ್ಯಪ್ರೇಮಿ ಓದುಗರ ಮನದಲ್ಲಿ ಸಂಚಲನವನ್ನು ಮೂಡಿಸುವ ಕೀಟವಾಗಿದೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದ -ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ-ಎಂಬ ಹಾಡಿನಲ್ಲಿ ಮಾನವರಿಗೆ ಸಂಯಮವನ್ನು ಕುರಿತಾದ ಎಚ್ಚರಿಕೆಯ ಕರೆಯಿದ್ದರೂ ಪತಂಗಗಳು ಜ್ವಾಲೆಯ ಆಕರ್ಷಣೆಯನ್ನು ಮಾತ್ರ ತೊರೆದಿಲ್ಲ. ಪ್ರತಿವರ್ಷ ದೀಪಾವಳಿಯ ಸಮಯದಲ್ಲಿ ಬೆಳಗ್ಗೆ ಬಾಗಿಲನ್ನು ತೆರೆದೊಡನೆ ಹಣತೆಗಳ ಸುತ್ತಮುತ್ತ ಕಾಣುವ ಕೀಟಗಳ ಉದುರಿದ ರೆಕ್ಕೆಗಳು ಆಕರ್ಷಣೆಯ ಕಥೆಯನ್ನು ಹೇಳುವಂತೆ ಕಾಣುತ್ತವೆ.
ನಾನೇ ಕೀಟಗಳ ಬೆಂಬತ್ತಿದ್ದೇನೋ, ಕೀಟಗಳೇ ನನ್ನ ಬೆನ್ನೇರಿವೆಯೋ ಹೇಳಲಾರೆ. ಆಗಾಗ ದೃಷ್ಟಿಗೆ ಬೀಳುತ್ತಲೇ ಇರುತ್ತವೆ. ನನ್ನ ಕುತೂಹಲದ ಕಣ್ಣುಗಳೂ ಅವನ್ನು ಹಿಂಬಾಲಿಸುತ್ತವೆ. ಇತ್ತೀಚೆಗೆ ಬೆಳಗಿನ ಒಂಭತ್ತರ ಸಮಯದಲ್ಲಿ ಮರಳ ರಾಶಿಯ ತುದಿಯಲ್ಲಿ ಸತ್ತಂತೆ ಬಿದ್ದಿರುವ ಕೀಟ ಕಂಡಿತು. ಕಪ್ಪುಬಣ್ಣದ ಒಡಲು, ಕಪ್ಪು ರೆಕ್ಕೆಗಳು, ತಲೆಯ ಮೇಲಿಂದ ಕುತ್ತಿಗೆಯವರೆಗೆ ಹಳದಿ ಹಚ್ಚಿದಂತಿತ್ತು. ಯಾರಾದರೂ ತುಳಿಯುವರೆಂದು ಭಾವಿಸಿ ಕಡ್ಡಿಯಲ್ಲಿ ಸರಿಸಲು ಪ್ರಯತ್ನಿಸಿದೆ ಅಷ್ಟೇ, ರಿವ್ವನೆ ಹಾರಿ ದೃಷ್ಟಿಯಿಂದ ದೂರವಾಯಿತು. ನನಗೆ ನಿರಾಶೆಯಾದರೂ, ಅದು ಬದುಕಿದೆಯಲ್ಲ ಎನ್ನುವ ಭಾವನೆ ಮನಸ್ಸಿಗೆ ಸಮಾಧಾನವನ್ನು ನೀಡಿತು. ಹೀಗೆ ಕೀಟಗಳು ಆಗಾಗ ಮುಖಾಮುಖಿಯಾಗಿ ಕಾಡುತ್ತಲೇ ಇರುತ್ತವೆ. ಮುಂಬರುವ ಚೈತ್ರದಲ್ಲಿ ಮತ್ತಷ್ಟು ಕೀಟಗಳನ್ನು ನೋಡುವ ನಿರೀಕ್ಷೆಯಲ್ಲಿದ್ದೇನೆ ಮತ್ತು ಪಂಪಮಹಾಕವಿಯ ಕ್ಷಮೆ ಕೋರಿ-ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಕೀಟಂಗಳಂ-ಎನ್ನುತ್ತೇನೆ.
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ-ಎಂಬ ಬೇಂದ್ರೆಯವರ ಕವನವನ್ನು ಪ್ರಥಮಬಾರಿಗೆ ಓದಿದಾಗ ಮನದಲ್ಲಿ ಅದೇಕೋ ಕೋಲಾಹಲ, ಏಕೆಂದರೆ ನಾನು ಅದಾಗಲೇ ಕೀಟಗಳ ಬೆನ್ನತ್ತಿ ಹೊರಟಿದ್ದೆ. ಆದರೆ ನನಗೆ ಅದನ್ನು ಕಾವ್ಯಾತ್ಮಕವಾಗಿ ಹೇಳುವಷ್ಟು ಪ್ರಬುದ್ಧತೆ ಬಂದಿರಲಿಲ್ಲ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ನನ್ನಪ್ಪ ಒಂದು ಸಂಜೆ ನನ್ನನ್ನು ಅವರ ಗೆಳೆಯರ ಮನೆಗೆ ಕರೆದೊಯ್ದರು. ಮೊದಲೇ ಮಲೆನಾಡು, ಬರುವಾಗ ಕತ್ತಲಾಗಿತ್ತು. ಕೆರೆಏರಿಯ ಮೇಲೆ ಬರುವಾಗ ಪಕ್ಕದಲ್ಲಿದ್ದ ಹಸಿರಿನ ನಡುವೆ ಅದೇನೋ ಮಿನುಗಿ ಮಾಯವಾದಂತೆ, ಮತ್ತೆ ಹೊಳೆದಂತೆ ಕಾಣಿಸಿತು. ಕೆಳಗೆ ನೀರಿನಲ್ಲಿ ಅಲ್ಲಲ್ಲಿ ನಕ್ಷತ್ರಗಳು ಉದುರಿ ಬಿದ್ದಿರುವಂತೆ ಕಂಡಿತ್ತು. ಅದೇನೆಂದು ಕೇಳಿದ್ದೆ. ಆಗಲೇ ಅವು ಮಿಣುಕುಹುಳುಗಳೆಂದು ತಿಳಿದದ್ದು. ದೇಹದಿಂದ ಪ್ರಕಾಶವನ್ನು ಸೂಸುವ ಅವುಗಳ ಶಕ್ತಿಗೆ ನಾನು ಅಚ್ಚರಿಗೊಂಡು ಎವೆಯಿಕ್ಕದೆ ಅಲ್ಲೇ ನೋಡುತ್ತ ನಿಂತೆ. ಐದು ನಿಮಿಷ ಸುಮ್ಮನಿದ್ದ ಅಪ್ಪ-ಲೇಟಾಗಿದೆ, ಹೋಗೋಣ ಬಾ-ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ಹಿಂದೆ ತಿರುಗಿ ನೋಡುತ್ತಲೇ ಅವುಗಳಿಗೆ ವಿದಾಯ ಹೇಳಿದ್ದೆ. ಮನೆಗೆ ಬಂದರೂ ಮನದಲ್ಲಿ ಅವು ಹೊಳೆಯುತ್ತಲೇಇದ್ದವು. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಕಾಲದಲ್ಲಿ ಕವಿತೆಗಳನ್ನು ಬರೆಯುವ ಗುಂಗಿನಲ್ಲಿ ಕಣ್ಣಿಗೆ ಕಾಣದ ಮಿಣುಕುಹುಳುಗಳನ್ನು ನೆನೆದು-ಬಾ ಬಾ ಇಂದ್ರಗೋಪವೇ ! ಇಂದ್ರನಗರಿಯಿಂದ ಧರೆಯೆಡೆಗೆ, ಬೆಳಕ ಹರಿಸುತ್ತ ಹಾರಿ ಬಾ, ದಿವ್ಯನೋಟವ ತೋರು ಬಾ-ಎಂದೆಲ್ಲ ಬರೆದು ಅವುಗಳನ್ನು ನೋಡುವ ಆಸೆಯನ್ನು ಪದಗಳ ಮೂಲಕ ತಣಿಸಿಕೊಂಡಿದ್ದೆ. ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಹಸಿರು ಕಡಿಮೆಯಾಗಿದೆ, ವಾಹನಗಳ ಸಂಚಾರ ಹೆಚ್ಚಿದೆ, ಕೆರೆಯಲ್ಲಿನ ನೀರು ಕಡಿಮೆಯಾಗಿದೆ. ಮಿಣುಕುಹುಳುಗಳು ಎಲ್ಲೋ ದೂರ ಸಾಗಿಹೋಗಿವೆ.
ಕೆರೆಯಲ್ಲಿ ಮಾತ್ರವೇ ಏಕೆ, ನಮ್ಮ ಹೇಮಾವತಿನದಿಯೇ ಪ್ರತಿ ಬೇಸಿಗೆಯಲ್ಲೂ ನೀರನ್ನು ಕಳೆದುಕೊಂಡು ಭಣಗುಟ್ಟುತ್ತದೆ. ಆದರೂ ಅಲ್ಲಲ್ಲಿ ಒಂದಿಷ್ಟು ಕೀಟಗಳು ಆಗಾಗ ನನಗೆ ದರ್ಶನಭಾಗ್ಯವನ್ನು ನೀಡುತ್ತಿವೆ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ. ನಮ್ಮ ಆರೋಗ್ಯದಂತೆಯೇ ಧರೆಯ ಆರೋಗ್ಯವನ್ನೂ ಗಮನಿಸಲು ಮತ್ತು ತಿಳಿಯಲು ಇಂತಹ ಸಣ್ಣ ಸಂಗತಿಗಳೂ ನೆರವಾಗುತ್ತವೆ. ಜನಸಂಖ್ಯೆ ಹೆಚ್ಚುತ್ತಿದ್ದಂತೆ ಮತ್ತು ನಿಸರ್ಗದಲ್ಲಿ ಮಾನವರ ಹಸ್ತಕ್ಷೇಪ ಹೆಚ್ಚಾಗುತ್ತಿದ್ದಂತೆ ಎಲ್ಲ ಊರುಗಳದ್ದೂ ಒಂದೇ ಕಥೆ. ಬೇರುಗಳ ಮೂಲಕ ನೀರನ್ನು ಹಿಡಿದಿಟ್ಟು ಹಸಿರನ್ನು ಉಕ್ಕಿಸುತ್ತಿದ್ದ ಮರಗಳು ರಸ್ತೆಗಳ ನಿರ್ಮಾಣ ಮತ್ತು ರಸ್ತೆಗಳ ಅಗಲೀಕರಣದಿಂದಾಗಿ ಕಡಿಯಲ್ಪಟ್ಟು ಶಾಶ್ವತವಾಗಿ ಭೂಮಿಯಿಂದ ಮರೆಯಾಗುತ್ತಿವೆ. ಎಲ್ಲೆಡೆ ಧರೆಯಲ್ಲಿನ ನೀರು ಖಾಲಿಯಾಗಿದೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತದೆ. ಅದರ ಮುಂದುವರಿದ ಭಾಗವೆಂಬಂತೆ ಈಗ ಶುದ್ಧವಾದ ಗಾಳಿಗೂ ತತ್ವಾರ. ನೋಡಿದಲ್ಲೆಲ್ಲ ಕಸದ ರಾಶಿಗಳು, ಕಾಂಕ್ರೀಟೀಕರಣದ ಅವಾಂತರಗಳು. ವಾತಾವರಣದಲ್ಲಿ ಎಲ್ಲೆಲ್ಲೂ ಧೂಳು ಸೇರಿ ಉಸಿರಾಟದ ಸಮಸ್ಯೆ ಎದುರಾಗಿದೆ. ಇದರೊಂದಿಗೆ ಕೋವಿಡ್‌ನ ಹಾವಳಿಯೂ ಸೇರಿ ಜನರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮತ್ತು ಚಳುವಳಿಗಳು ಗಾಳಿಗಾಗಿ ನಡೆಯುವುದಂತೂ ನಿಶ್ಚಿತ. ಅದಕ್ಕಾಗಿ ಘೋಷಣೆಗಳನ್ನೂ ಸಿದ್ಧಪಡಿಸಬೇಕಿದೆ. ಧಿಕ್ಕಾರ ಧಿಕ್ಕಾರ, ಹೆಚ್ಚು ಗಾಳಿಯನ್ನು ಸೇವಿಸಿ ಉಸಿರಾಡುವವರಿಗೆ ಧಿಕ್ಕಾರ ಧಿಕ್ಕಾರ, ಗಾಳಿ ಉಳಿಸಿ, ವಿ ವಾಂಟ್ ಜಸ್ಟೀಸ್, ಬೇಕೇ ಬೇಕು, ನ್ಯಾಯ ಬೇಕು, ಮೂಗುಮುಚ್ಚಿ ಓಡಾಡಿ, ಮುಂದಿನವರಿಗೂ ಗಾಳಿ ಉಳಿಸಿ-ಇತ್ಯಾದಿ. ಅಂದಹಾಗೆ ಹೋರಾಟ ಎಲ್ಲಿ ಅಂದ್ರಾ? ಸ್ವಲ್ಪ ಇರಿ, ಉಸಿರು ಕಟ್ಟುತ್ತಿದೆ, ಆಮ್ಲಜನಕ ಮುಗಿದಿರಬಹುದು. ಮೂಗಿಗೆ ಬೇರೆ ಸಿಲಿಂಡರನ್ನ ಹಾಕ್ಕೊಂಡು ಬರ‍್ತೀನಿ.

–ಲಲಿತ ಎಸ್, ಸಕಲೇಶಪುರ



