ಪೌರಾಣಿಕ ಕತೆ

ಕಾವ್ಯ ಭಾಗವತ 73 : ತೃಣಾವರ್ತ ವಧಾ

Share Button

ದಶಮಸ್ಕಂದ – ಅಧ್ಯಾಯ -2
ತೃಣಾವರ್ತ ವಧಾ

ದುಷ್ಟದಮನಾವರಾರಿ
ಶ್ರೀಕೃಷ್ಣನಂದ ಸ್ವಯಂ ಪ್ರೇರಿತರಾದಂತೆ
ಹತನಾದ ಮತ್ತೊಬ್ಬ ದುರುಳ ದೈತ್ಯ ತೃಣಾವರ್ತ
ಮತ್ತೊಬ್ಬ ಕಂಸ ಭೃತ್ಯ

ಶ್ರೀಕೃಷ್ಣನ ಅಂಬೆಗಾಲು
ನಡೆನುಡಿಗಳಿಂದಾನಂದವ
ಅನುಭವಿಸುತ್ತಿದ್ದಳು ಗೋಪೀದೇವಿ

ಸುಳಿಗಾಳಿರೂಪದಿ ಮಾರ್ಪಟ್ಟ
ಬಿರುಗಾಳಿಯ ರೂಪದಿ ಬಂದು
ಆಡುತ್ತಿದ್ದ ಶಿಶುವನ್ನು
ಅಂತರಿಕ್ಷಕ್ಕೆತ್ತಿಕೊಂಡು
ಅಲ್ಲಿ ಕೊಲ್ಲುವ
ಅವನಿಚ್ಛೆಯನರಿತ ಪರಮಾತ್ಮ

ನಸುನಗುತ ಗಗನದಲಿ ದೈತ್ಯದ
ಭುಜದ ಮೇಲಿದ್ದ ಶಿಶುರೂಪಿ ಕೃಷ್ಣ
ಎರಡು ಪುಟ್ಟ ಹಸ್ತಗಳಿಂದವನ ಕಂಠಪ್ರದೇಶವ
ಸುತ್ತಿ ಅದುಮತೊಡಗೆ
ಉಸಿರುಗಟ್ಟಿದ ಬಾಧೆ ಒಂದೊಡೆ
ಭುಜದ ಮೇಲಿದ್ದ ಪರ್ವತೋಪಮವಾದ
ಭಾರವೊಂದೆಡೆ ತಡೆಯಲಾಗದೆ
ದೈತ್ಯನ ಕಣ್ಣುಗಳು ಕತ್ತಲಿಟ್ಟು
ಎತ್ತರದಿಂದ ತಲೆಯಡಿಯಾಗಿ
ಭೂಮಿಗೆ ಬಿದ್ದ ದೈತ್ಯದ ತಲೆ
ಚೂರು ಚೂರಾಗಿ ಒಡೆಯಲು
ದೈತ್ಯನೆದೆಯ ಮೇಲಿದ್ದ
ಶಿಶು ಯಾವ ಉಪಹತಿಗೂ
ಒಳಗಾಗದೆ ನಗುತಲಿತ್ತು

ಯಶೋದೆ ನಂದಗೋಪರಿಗೆ
ಕೃಷ್ಣರೂಪಿ ಶಿಶುವಿನ ಸಂಬಂಧದಲಿ
ನಡೆಯುತಿರ್ಪ ಅಗಾಧ ಅಲೌಕಿಕ
ವಿಚಾರಗಳರ್ಥವಾಗದಿದ್ದರೂ
ಮುದ್ದು ಸುರಿಯುತ್ತಿದ್ದ ಮನೋಹರ
ಕೃಷ್ಣನ ಮುಖ ನೋಡಲು
ಬಾಯ್ತೆರೆದು ಆಕಳಿಸಿ ಬಾಯಲ್ಲಿ
ತೋರಿಸಿದ ವಿಶ್ವರೂಪವೊಂದು ಅದ್ಭುತ

ಏಕಕಾಲದಿ ಅಖಂಡ ಭೂಮ್ಯಾಕಾಶಗಳು
ಗ್ರಹನಕ್ಷತ್ರ ಸಮೂಹ
ಸೂರ್ಯ ಚಂದ್ರ ಸಪ್ತದ್ವೀಪಗಳು
ಪರ್ವತಗಳು, ಸಕಲ ಚರಾಚರ ಸೃಷ್ಟಿ
ಎಲ್ಲ ದೃಗ್ಗೋಚರವಾಗಲು
ಅಜ್ಞಳಾದ ಯಶೋದೆ
ಗಾಬರಿಗೊಂಡು ಕಣ್ಣುಗಳ ಮುಚ್ಚಿದಳು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44213

-ಎಂ. ಆರ್.‌ ಆನಂದ, ಮೈಸೂರು

3 Comments on “ಕಾವ್ಯ ಭಾಗವತ 73 : ತೃಣಾವರ್ತ ವಧಾ

  1. ಬಾಲಕೃಷ್ಣನಿಂದ ಹತನಾದ ಮತ್ತೊಬ್ಬ ರಕ್ಕಸ ತೃಣಾರ್ವತನ ಕಥೆ, ಯಶೋದ ನಂದಗೋಪರಿಗೆ ಪರಮಾತ್ಮನ ಲೀಲೆಗಳರ್ಥವಾಗದ ಪರಿ ಎಲ್ಲವೂ ಕುತೂಹಲಭರಿತವಾಗಿ ಸೊಗಸಾಗಿ ಮೂಡಿ ಬಂದಿದೆ.

  2. ಕಾವ್ಯ ಭಾಗವತದಲ್ಲಿ ಪ್ರಾರಂಭ ವಾಗಿರುವ ಕೃಷ್ಣ ನ ಲೀಲೆಯ ಅನಾವರಣ ಸೊಗಸಾಗಿ ಮೂಡಿಬರುತ್ತಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *