(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಿಮ್ಮ ಕುಟುಂಬದವರು ಶನಿವಾರ ಬೆಳಿಗ್ಗೆ ಇಲ್ಲಿಗೆ ಬರಲಿ. ನಮ್ಮ ಡ್ರೈವರ್ ವ್ಯಾನ್ ತೆಗೆದುಕೊಂಡು ಶನಿವಾರ ಸಾಯಂಕಾಲ 7 ಗಂಟೆಗೆ ಬರ‍್ತಾನೆ. ನೀವು ಅವರ ಜೊತೆ ಬನ್ನಿ. 10-30ಗೆ ನಮ್ಮ ಹಳ್ಳಿಯಲ್ಲರ‍್ತೀರ.”
“ಹಬ್ಬ ಯಾವತ್ತು?”
“ಸೋಮವಾರ ಹಬ್ಬ. ಆದಿನ ನಮ್ಮ ಸುತ್ತಮುತ್ತಲಿನ ಬಂಧು ಬಳಗದವರಿಗೆ ಮನೆಯಲ್ಲಿ ಊಟ. ದೇವಸ್ಥಾನಕ್ಕೆ ಬಂದವರಿಗೆ ಪುಳಿಯೋಗರೆ, ಲಾಡು ಕೊಡ್ತೀವಿ.”
“ವೆರಿಗುಡ್”
“ಮಾರನೆಯ ದಿನ ಊರಿನವರಿಗೆಲ್ಲಾ ಊಟ ಭರ್ಜರಿ ಊಟ. ಆದಿನ ಚಿರೋಟಿ ಮಾಡಿಸಲೇಬೇಕು.”
“ಸರಿಯಪ್ಪ. ನಮಗೆ ನಿಮ್ಮ ಕುಟುಂಬದ ಬಗ್ಗೆ ತಿಳಿಸು.”
“ನಮ್ಮ ದೊಡ್ಡ ದೊಡ್ಡಪ್ಪನ ಹೆಸರು ವೆಂಕಟೇಶಯ್ಯ-ಅವರ ಹೆಂಡತಿ ಶಾಂತಮ್ಮ. ಅಷ್ಟೇ ತಾಳ್ಮೆಯ ಹೆಂಗಸು. ಅವರ ಮಗಳು ನಿರ್ಮಲಾ. ಮದುವೆಯಾಗಿ ಹೊಳೆನರಸೀಪುರದಲ್ಲಿದ್ದಾಳೆ. ಅವರದೂ ಕೃಷಿಕರ ಫ್ಯಾಮಿಲಿ. ಆದರೆ ಭಾವ ಬ್ಯಾಂಕ್‌ನಲ್ಲಿದ್ದಾರೆ. ಅವರಿಗೆ ಅಶ್ವಿನ್ ಅಂತ ಎಂಟುವರ್ಷದ ಮಗನಿದ್ದಾನೆ.
ನಮ್ಮ ದೊಡ್ಡಪ್ಪನ ಮಗ ಸಾಯೀ ಚಂದ್ರಕಾಂತ್. 4ವರ್ಷದ ಹಿಂದೆ ಮದುವೆಯಾಯ್ತು. ತಿರುಪತಿ ಹುಡುಗಿ ಗಿರಿಜಾಂತ ಹೆಸರು. ಅವರು ಎಂ.ಬಿ.ಎ ಮಾಡಿದ್ದಾರೆ. ಆದರೆ ಕೆಲಸಕ್ಕೆ ಹೋಗಲು ಇಷ್ಟಪಡದೆ ನಮ್ಮನೆಗೆ ಹೊಂದಿಕೊಂಡು ಇದ್ದಾರೆ. ಎರಡು ವರ್ಷದ ಗೌರಿ ಅನ್ನುವ ಮಗಳಿದ್ದಾಳೆ.
ನಮ್ಮ ಎರಡನೇ ದೊಡ್ಡಪ್ಪ ಕೇಶವಯ್ಯ. ಬಿ.ಎ ಮಾಡಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು. ಕೀರ್ತಿರಾಜ್, ಧರ್ಮರಾಜ್. ಕೀರ್ತಿಗೆ ಈಗ 26-27 ವರ್ಷ. ಇನ್ನೂ ಮದುವೆಯಾಗಿಲ್ಲ. ಬಿ.ಎಸ್.ಸಿ ಮಾಡಿ ಡೈರಿ ಇಟ್ಟಿದ್ದಾನೆ. ಧರ್ಮರಾಜ್ ಪಿ.ಯು.ಸಿ ಮಾಡಿ ಅಂಗಡಿ ಇಟ್ಟಿದ್ದಾನೆ. ಎರಡನೇ ದೊಡ್ಡಪ್ಪ ಹಸು, ಎಮ್ಮೆ ಸಾಕಿಕೊಂಡು ತೋಟದ ಮನೆಯಲ್ಲಿದ್ದಾರೆ. ಊಟಕ್ಕೆ ಬರ‍್ತಾರೆ. ಅವರ ಹೆಂಡತಿ ಶಾರದಾ.
ನಮ್ಮ ತಂದೆಗೆ ನಾನೊಬ್ಬನೇ ಮಗ. ಈ ವರ್ಷ ನಮ್ಮ ತಂದೆ ನಿವೃತ್ತರಾಗಿದ್ದಾರೆ. “ಬೆಂಗಳೂರು ಟ್ರೆಷರಿಯಲ್ಲಿದ್ದರು. ಬೆಂಗಳೂರಿನಲ್ಲಿ ಮನೆ ಮಾಡಿಕೊಂಡಿದ್ದರು. ಅವರ ಪೆನ್ಷನ್ ಸೆಟ್ಲ್ ಆಗುವವರೆಗೂ ಓಡಾಡಬೇಕಾಗತ್ತೇಂತ ಮನೆ ಹಾಗೆ ಇಟ್ಟುಕೊಂಡಿದ್ದಾರೆ. ಮನೆ ಅಂದ್ರೆ ಒಂದು ಹಾಲ್, ಅಡಿಗೆ ಮನೆ, ಬಾತ್‌ರೂಮ ಇದೆ ಅಷ್ಟೆ. ನಾನು ಬೆಂಗಳೂರಿನಲ್ಲಿ ಅಲ್ಲೇ ಉಳಿಯೋದು.”
“ಸರಿಯಪ್ಪ -ನಾವು ಶನಿವಾರ ಎಷ್ಟು ಹೊತ್ತಿಗೆ ಸಿದ್ಧರಾಗಿರಬೇಕು?”
“ನಾಲ್ಕು ಗಂಟೆಗೆ ಸಿದ್ಧರಾಗಿರಿ. ಮಲ್ಲೀನ್ನೂ ಕರೆದುಕೊಂಡು ಬನ್ನಿ. ನಮ್ತಂದೆ ಜನ ಬಂದಷ್ಟೂ ಖುಷಿಪಡ್ತಾರೆ.”
“ಸರಿಯಪ್ಪ ನಾಲ್ಕು ಗಂಟೆಗೆ ಸರಿಯಾಗಿ ಸಿದ್ಧರಾಗರ‍್ತೇವೆ.”
ಆರ್.ಜಿ. ಊಟ ಮುಗಿಸಿಕೊಂಡು ಹೊರಟ. ಅವನನ್ನು ಕಳಿಸಿ ಗೇಟ್‌ಗೆ ಲಾಕ್ ಮಾಡಲು ಹೋದ ವರು ಹೇಳಿದಳು “ಗುಡ್‌ನೈಟ್.”
“ಗುಡ್‌ನೈಟ್. ನಾಳೆ ಬರ‍್ತೀರಾ ತಾನೆ?”
“ಬರದಿದ್ರೆ ನೀವೆಲ್ಲಿ ಬಿಡ್ತೀರಾ?”
“ಮಲ್ಲಿ ಈಗ ಮಲಗಲು ಬರಲ್ವಾ?”
“ಇಲ್ಲ ಅವಳು ಬೆಳಿಗ್ಗೇನೇ ಬರೋದು.”
“ಈ ಮನೆ ಲೊಕೇಶನ್ ನನ್ನ ಮೊಬೈಲ್‌ಗೆ ಕಳಿಸಿಕೊಡಿ.”
“ಓ.ಕೆ” ಎನ್ನುತ್ತಾ ಅವಳು ಕೈ ಬೀಸಿದಳು.
ಮರುದಿನ ಬೆಳಿಗ್ಗೆ ತಿಂಡಿ ತಿಂದುಕೊಂಡು ರಾವ್ ಶಕುಂತಲಾ ಮಕ್ಕಳು, ಶಿವಶಂಕರ್, ಶೋಭ, ಅಲೋಕ ಹೊರಟರು. ಶಿವಶಂಕರ ಧಾರಾಳತನ ತೋರಿ ವ್ಯಾನ್ ಬುಕ್ ಮಾಡಿದ್ದ. ಊಟದ ವೇಳೆಗೆ ಅವರು ಮೈಸೂರಿನಲ್ಲಿದ್ದರು.
“ಊಟ ಮಾಡಿ ರೆಸ್ಟ್ ತೆಗೆದುಕೊಳ್ಳಿ.”
“ನಾಲ್ಕು ಗಂಟೆಗೆ ವೆಹಿಕಲ್ ಬರುತ್ತದೆ. 4-30 ಹೊತ್ತಿಗೆ ಹೊರಡಬಹುದು.”
ಊಟವಾದ ನಂತರ ಅವರನ್ನು ಎರಡು ರೂಮ್‌ಗೆ ಕಳಿಸಿ ಚಂದ್ರಾವತಿ ಪ್ಯಾಕ್ ಮಾಡಲು ಕುಳಿತರು.
“ವರು ಬಾ ಇಲ್ಲಿ.”
“ಏನಾಂಟಿ?”
“ನಿನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿ ಆಯ್ತಾ?”
“ಮಾಡ್ತಾ ಇದ್ದೀನಿ.”
“ಇಲ್ಲಿ 4 ಪ್ರಿಂಟೆಡ್ ಸಿಲ್ಕ್, 2 ಕಾಟನ್ ಸೀರೆಗಳಿವೆ. ನಿನ್ನ ಬಟ್ಟೆಗಳ ಜೊತೆ ಇಟ್ಟುಕೋ. ಯಾರಿಗಾದರೂ ಉಡಲು ಬೇಕಾಗತ್ತೆ.”
“ನಾನು ಸೀರೆಗಳನ್ನು ಇಟ್ಟುಕೊಂಡಿದ್ದೇನೆ.”
“ಈ ಸೀರೆಗಳನ್ನೂ ಇಟ್ಟುಕೋ. ಬ್ಲಾಕ್, ರೆಡ್, ಗ್ರೀನ್, ಬ್ಲೂ ಶೇಡ್ ಮೇಲಿರುವ ಬ್ಲೌಸ್‌ಗಳನ್ನು ಇಟ್ಟುಕೋ. ಮ್ಯಾಚ್ ಆಗುತ್ತವೆ.”
ಅವಳು ಮರುಮಾತನಾಡದೆ ಸೀರೆಗಳನ್ನು ತನ್ನ ಸೂಟ್‌ಕೇಸ್‌ಗೆ ಸೇರಿಸಿದಳು.
ನಾಲ್ಕೂ ಕಾಲು ಹೊತ್ತಿಗೆ ವ್ಯಾನ್ ಅವರ ಮನೆಯ ಮುಂದೆ ಬಂದು ನಿಂತುಕೊಂಡಿತು. ಡ್ರೈವರನ್ನು ಒಳಗೆ ಕರೆದು ಚಂದ್ರಾವತಿ ತಾವೇ ಡ್ರೈವರ್‌ಗೆ ಕಾಫಿ ಕೊಟ್ಟು ಕೇಳಿದರು.
“ಐದು ಗಂಟೆಗೆ ಹೊರಟರೆ ಲೇಟಾಗುತ್ತದಾ?”
“ಇಲ್ಲಮ್ಮ ಹಾಗೇನಿಲ್ಲ. ಐದು ಗಂಟೆಗೆ ಹೊರಡೋಣ.”
ಐದು ಗಂಟೆಯ ಹೊತ್ತಿಗೆ ಎಲ್ಲರೂ ಸಿದ್ಧರಾದರು. ಕೃಷ್ಣ ದೊಡ್ಡ ಫ್ಲಾಸ್ಕ್ನಲ್ಲಿ ಕಾಫಿ ತಂದರು.
“ಇದೇನು ಬಾಕ್ಸ್ ಗಳು?”
“ಒಂದರಲ್ಲಿ ಪಕೋಡ ಇದೆ. ಸ್ಟೀಲ್ ಬಾಕ್ಸ್ನಲ್ಲಿ ಸಜ್ಜಿಗೆಯಿದೆ. ವಾಟರ್‌ಕ್ಯಾನ್, ಕಪ್ಸ್, ಪೇಪರ್‌ಪ್ಲೇಟ್ಸ್, ಟಿಷ್ಯೂಪೇಪರ್ ವ್ಯಾನ್‌ನಲ್ಲಿ ಇಟ್ಟಿದ್ದೀನಿ…..”
“ಇವುಗಳನ್ನು ಯಾಕೆ ಇಲ್ಲಿಗೆ ತಂದೆ?”
“ರುಚಿ ನೋಡಿ ಹೇಗಿದೆ ಹೇಳು. ಗೋಡಂಬಿ ಪಕೋಡ ಹೊಸ ಪ್ರಯೋಗ………”
ಚಂದ್ರಾವತಿ ಎಲ್ಲರಿಗೂ ಒಂದೊಂದು ಪಕೋಡ ಕೊಟ್ಟರು.
“ಸೂಪರ್ ಆಗಿದೆ” ಎಂದ ಶಿವಶಂಕರ್.
“ಅಕ್ಕಾ ಈ ಡಬ್ಬಿ ಭರ್ತಿ ಹುರಿಗಾಳಿದೆ. ಆರ್.ಜಿ. ಮನೆಯವರಿಗೆ ಕೊಡು. ಹಬ್ಬದ ಸಂಭ್ರಮ ಮುಗಿದ ಮೇಲೆ ನಿಧಾನವಾಗಿ ತಿನ್ನಲಿ.”
ಐದೂ ಕಾಲಿನ ಹೊತ್ತಿಗೆ ಚಂದ್ರಾವತಿಯ ಪರಿವಾರ ಹೊರಟಿತು. ಸುಮಾರು 7 ಗಂಟೆಯ ಹೊತ್ತಿಗೆ ಪಕೋಡ, ಸಜ್ಜಿಗೆ ತಿಂದು ಕಾಫಿ ಕುಡಿದು, ಕೆಲವರು ನಿದ್ರೆಗೆ ಜಾರಿದರು.
“ಯಾವುದಾದರೂ ಒಳ್ಳೆಯ ಊರಿನಲ್ಲಿ ನಿಲ್ಲಿಸಪ್ಪ. ಹಣ್ಣುಗಳನ್ನು ತೆಗೆದುಕೊಳ್ಳಬೇಕು” ಶಕುಂತಲ ಡ್ರೈವರ್ ರಾಚಪ್ಪನಿಗೆ ಹೇಳಿದರು.
“ಅಮ್ಮಾ, ನೀವು ನಮ್ಮೂರಿನ ಹಬ್ಬ ನೋಡಿಲ್ಲ. ಈಗಾಗಲೇ ರಾಯರ ಮನೆ ಹಣ್ಣು, ಬಾಳೆಕಂಬ, ಮಾವಿನೆಲೆ ಹೂವುಗಳಿಂದ ತುಂಬಿದೆ. ಯಾರು ಯಾವುದು ತಂದು ಕೊಡ್ತಿದ್ದಾರೆ ಅನ್ನುವುದು ಕೂಡ ರಾಯರಿಗೆ ಗೊತ್ತಾಗಲ್ಲ…….”
“ಹೌದಾ?”
“ಇನ್ನು 10 ನಿಮಿಷಗಳಲ್ಲಿ ರಾಯರ ಪರಿಚಯದವರ ಗೆಸ್ಟ್ಹೌಸ್ ಸಿಗತ್ತೆ. ನೀವಲ್ಲಿ ಫ್ರೆಷ್ ಆಗಿ ಬನ್ನಿ. ನಾವು ಊರು ತಲುಪುವ ವೇಳೆಗೆ 9 ಗಂಟೆ ಆಗಬಹುದು.”
ಗೆಸ್ಟ್ಹೌಸ್ ತುಂಬಾ ಚೆನ್ನಾಗಿತ್ತು. ಎಲ್ಲರೂ ಫ್ರೆಷ್ ಆದರು. ರಾಚಪ್ಪ ಅಡಿಗೆಯವರ ಕೈಯಲ್ಲಿ ಟೀ ಮಾಡಿಸಿದ್ದ. ಎಲ್ಲರೂ ಟೀ ಕುಡಿದರು. ವ್ಯಾನ್ ಹೊರಟಿತು.
ಕಿಟಕಿ ಪಕ್ಕ ಕುಳಿತಿದ್ದ ವಾರುಣಿ ಮಾತ್ರ ಯೋಚನೆಯಲ್ಲಿ ಮುಳುಗಿದ್ದಳು. ಅವಳು ಕಾಲೇಜ್‌ನಲ್ಲಿ ಆರ್.ಜಿ.ಯನ್ನು ನೋಡಿ ತುಂಬಾ ಅಹಂಕಾರಿ ಎಂದು ಭಾವಿಸಿದ್ದಳು. “ಅವನು ಹೆಚ್ಚು ಜನರ ಜೊತೆ ಮಿಕ್ಸ್ ಆಗುತ್ತಿರಲಿಲ್ಲ. ರಾಗಿಣಿಯ ಜೊತೆ ಚೆನ್ನಾಗಿದ್ದ. ರಾಗಿಣಿಯನ್ನು ಬಿಟ್ಟರೆ ಶ್ರೀಧರ ಅವನ ಬೆಸ್ಟ್ಫ್ರೆಂಡ್. ಶ್ರೀಧರನ ತಂದೆ ಹೃದಯಾಘಾತದಿಂದ ಕಣ್ಮುಚ್ಚಿದ್ದರಿಂದ ಶ್ರೀಧರ ಓದು ನಿಲ್ಲಿಸಿದ್ದ. ಇತ್ತಿಚೆಗಷ್ಟೇ ಗೊತ್ತಾಗಿತ್ತು ಆರ್.ಜಿ. ಅವನಿಗೆ ಅವನ ಊರಿನಲ್ಲೇ ಅಂಗಡಿ ಇಡಲು ಸಹಾಯ ಮಾಡಿದ್ದಾನೆ” ಎಂದು.
ಯಾರನ್ನೂ ಹಚ್ಚಿಕೊಳ್ಳದ ಆರ್.ಜಿ. ತಮ್ಮ ಕುಟುಂಬವನ್ನು ಏಕೆ ಹಚ್ಚಿಕೊಳ್ಳುತ್ತಿದ್ದಾನೆ? ಅವನಿಗೆ ನನ್ನಲ್ಲಿ ಆಸಕ್ತಿ ಇರಬಹುದೇನೋ? ನನಗೂ ಅವನೆಂದರೆ ಒಂದು ರೀತಿಯಲ್ಲಿ ಮೆಚ್ಚುಗೆಯಿದೆ. ನನ್ನ ಮೇಲೆ ಜವಾಬ್ದಾರಿ ಇರುವಾಗ ಮದುವೆಯ ಬಗ್ಗೆ ಕನಸು ಕಾಣಲು ಸಾಧ್ಯವೇ? ನನಗೆ ಇರುವ ಜವಾಬ್ಧಾರಿಗಳ ಬಗ್ಗೆ ಆರ್.ಜಿ.ಗೂ ಗೊತ್ತಿದೆ. ಚಂದ್ರಾವತಿ ಆಂಟಿಗೂ ಗೊತ್ತಿದೆ. ಹಾಗಿದ್ದರೂ ಆಂಟಿ ಪ್ರೋಗ್ರಾಂಗೆ ಯಾಕೆ ಒಪ್ಪಿದರು? ಅಥವಾ ನನ್ನ ಅನಿಸಿಕೆಯೇ ಸುಳ್ಳಿರಬಹುದಾ? ಆರ್.ಜಿ.ಗೆ ಶಾಲೆ ಶುರು ಮಾಡುವ ಆಸೆಯಿದೆ. ಜಾಗ ಸಿಕ್ಕಿದೆ. ಅದರ ಬಗ್ಗೆ ಮಾತನಾಡಲು ನನ್ನ ತಂದೆಯನ್ನು ಕರೆದಿರಬಹುದು. ‘ನಮ್ಮ ಊರಿನ ಹಬ್ಬ’ ನೋಡಲಿ’ ಎಂದು ನಮ್ಮನ್ನು ಆಹ್ವಾನಿಸಿರಬಹುದು. ಅದಕ್ಕೆ ಯಾಕೆ ಬೇರೆಯ ಅರ್ಥ ಹುಡುಕಬೇಕು?” ಎಂದುಕೊಂಡಳು. ಆದರೂ ಅವಳಿಗೊಂದು ತರಹ ಕಳವಳ. ಈ ಭೇಟಿ ಯಾವ ಸನ್ನಿವೇಶಗಳಿಗೆ ಮುನ್ನುಡಿ ಬರೆಯುತ್ತದೋ ಏನೋ? ನನ್ನ ಲೈಫ್‌ನಲ್ಲಿ ಏನಾಗುತ್ತದೋ?” ಅವಳಿಗೆ ಗಾಬರಿಯಾಯಿತು.
ಒಂಭತ್ತು ಗಂಟೆಗೆ 10 ನಿಮಿಷಗಳಿರುವಾಗ ಅವರು ಊರು ಪ್ರವೇಶಿಸಿದರು.
“ನಾಳೆ ಬೆಳಿಗ್ಗೆ ನೀವು ನಮ್ಮೂರು ನೋಡಬೇಕು. ಅಷ್ಟು ಚೆನ್ನಾಗಿ ಜನ ಅಲಂಕಾರ ಮಾಡರ‍್ತಾರೆ. ನೀವು ಈ ಮನೆ ಹತ್ತಿರ ಇಳಿಯಿರಿ. ಗೋಪಾಲಪ್ಪ ಬರ‍್ತಾರೆ.”
ಅವನು ವ್ಯಾನ್ ನಿಲ್ಲಿಸುತ್ತಿದ್ದಂತೆ ಆರ್.ಜಿ. ಬಂದ.
“ನಮಸ್ಕಾರ ಬನ್ನಿ. ಪ್ರಯಾಣ ಹೇಗಿತ್ತು?”
“ಚೆನ್ನಾಗಿತ್ತು. ಇದೇನಾ ನಿಮ್ಮ ಮನೆ?”
“ಇಲ್ಲ ಆಂಟಿ. ನೀವು ಇಲ್ಲಿ ಲಗೇಜ್ ಇಟ್ಟು ಬನ್ನಿ. ಪಕ್ಕದ್ದೇ ನಮ್ಮ ಮನೆ. ನಮ್ಮ ಮನೆಯವರೆಲ್ಲಾ ಅಲ್ಲೇ ಇದ್ದಾರೆ. ಎಲ್ಲರೂ ಒಳಗೆ ಹೋಗಿ ಲಗೇಜ್ ಇಟ್ಟು ಕೈಕಾಲು ತೊಳೆದು ಬಂದರು. ಆರ್.ಜಿ. ಅವರನ್ನು ತಮ್ಮ ಮನೆಗೆ ಕರೆದೊಯ್ದ. ಅವನ ತಾಯಿ-ತಂದೆ ಬಂದು ಸ್ವಾಗತಿಸಿದರು.
“ಬನ್ನಿ, ನಮ್ಮ ಗೋಪಾಲ ನಿಮ್ಮ ಕುಟುಂಬದ ಬಗ್ಗೆ ಹೇಳ್ತಾನೇ ರ‍್ತಾನೆ. ನಿಮ್ಮಂತಹವರು ನಮ್ಮ ಮನೆಗೆ ಬಂದಿದ್ದು ನಮ್ಮ ಪುಣ್ಯ” ರಾವ್ ಅವರ ಕೈ ಹಿಡಿದು ಹೇಳಿದರು. “ಬಹಳ ದೊಡ್ಡ ಮಾತು. ನಿಮ್ಮಂತಹ ಶ್ರೀಮಂತರು, ಹೃದಯವಂತರು ನಮ್ಮನ್ನು ಮನೆದೇವರ ಹಬ್ಬಕ್ಕೆ ಆಚರಿಸಿರುವುದು ನಮ್ಮ ಪುಣ್ಯ.”
“ಅಪ್ಪಾ ಇವರು ಚಂದ್ರಾವತಿ ಆಂಟಿ. ಇವರು ಅವರ ಮಗಳು ಶಾರದಾ. ಇವರು ಮಲ್ಲಿ……..”
“ವಾರುಣಿ ಎಲ್ಲಿ?”
“ವಾರುಣಿ ಶ್ರೀನಿವಾಸರಾವ್ ಮಗಳು.”
ವಾರುಣಿ ಮುಂದೆ ಬಂದು ಕೈ ಮುಗಿದಳು.
“ಇವರು ನಮ್ಮ ತಂದೆ ರಘುಪತಿ ತಾಯಿ ರಮಾ.”
ರಮಾ ವಾರುಣಿಯನ್ನು ನೋಡಿ ಮುಗುಳ್ನಗೆ ಬೀರಿದರು.
“ನಮ್ಮ ಗೋಪಾಲ ನಿನ್ನ ಬಗ್ಗೆ ತುಂಬಾ ಹೇಳಿದ್ದಾನೆ. ನೀನು ತುಂಬಾ ಬುದ್ಧಿವಂತೆಯಂತೆ………”
“ಹಾಗೇನಿಲ್ಲಮ್ಮ. ಅವರೇ ಯಾವಾಗಲೂ ನನಗಿಂತ ಒಳ್ಳೆಯ ಮಾರ್ಕ್ಸ್ ತೆಗೀತಾರೆ. ನನಗಿಂತ ಹೆಚ್ಚು ಸೆಮಿನಾರ್ಸ್ ಗಳಲ್ಲಿ ಪೇಪರ್ ಪ್ರೆಸೆಂಟ್ ಮಾಡಿದ್ದಾರೆ……..”
“ಬನ್ನಿ ಊಟಕ್ಕೇಳಿ. ನಮ್ಮ ಕುಟುಂಬದವರೆಲ್ಲಾ ಕೆಲಸಗಳಲ್ಲಿ ಮುಳುಗಿಹೋಗಿದ್ದಾರೆ. ಅಡಿಗೆಯವರು ಬಡಿಸ್ತಾರೆ. ಸಂಕೋಚವಿಲ್ಲದೆ ಊಟ ಮಾಡಿ.”
ಹಬ್ಬದ ಊಟ ಸರಳವಾಗಿತ್ತು. ಅವರು ಊಟ ಮಾಡಿ ಬರುವ ಹೊತ್ತಿಗೆ ಹಾಲ್‌ನಲ್ಲಿ ನಾಲ್ಕು ಹಾಸಿಗೆಗಳನ್ನು ಹಾಕಲಾಗಿತ್ತು. ಮೂರು ರೂಮುಗಳಲ್ಲಿ ಒಂದು ರೂಂನಲ್ಲಿ ರಾವ್, ರಾಜಲಕ್ಷ್ಮಿ, ಮತ್ತೊಂದು ರೂಮ್‌ನಲ್ಲಿ ಶಿವಶಂಕರ್ ಸಂಸಾರವಿತ್ತು. ಇನ್ನೊಂದು ರೂಂನಲ್ಲಿದ್ದ ಡಬಲ್ ಕಾಟ್‌ನಲ್ಲಿ ಶರೂ, ಶಂಕರ, ಅಲೋಕ ಮಲಗಿದ್ದರು.
“ನಾವು ಹಾಲ್‌ನಲ್ಲಿ ಮಲಗೋಣ. ಗಾಳಿ, ಬೆಳಕು ಚೆನ್ನಾಗಿದೆ. ಈ ರೀತಿ ನೆಲದ ಮೇಲೆ ಮಲಗಿ ತುಂಬಾ ದಿನಗಳಾಗಿದ್ದವು. ಚಂದ್ರಾವತಿ ಹೇಳಿದರು.
ವರುಗೆ ತುಂಬಾ ಬೇಜಾರಾಯಿತು. ಮೂರು ರೂಮುಗಳನ್ನು ತಮ್ಮ ಮನೆಯವರೇ ಆಕ್ರಮಿಸುವುದಾ? ಛೆ ಅಮ್ಮ, ಚಿಕ್ಕಮ್ಮನಿಗೆ ಅಷ್ಟು ಬುದ್ಧಿ ಬೇಡವಾ?”
ಅವಳು ತಾಯಿ ಇದ್ದ ರೂಮ್‌ಗೆ ಹೋದಳು.
“ನೀವು ಎಲ್ಲಿದ್ದೀರಾ ವರು?”
“ಹಾಲ್‌ನಲ್ಲಿದ್ದೇವೆ. ನೀವೆಲ್ಲಾ ರೂಮುಗಳನ್ನು ಆಕ್ರಮಿಸಿದರೆ ಚಂದ್ರಾವತಿ ಆಂಟಿ ಏನು ಮಾಡಬೇಕು? ನಿನ್ನ ಮಕ್ಕಳಿಗೆ ಕೆಳಗೆ ಮಲಗಿ ಅಭ್ಯಾಸವಿಲ್ವಾ?”
“ಚಂದ್ರಾವತಿ ಹಾಲ್‌ನಲ್ಲಿ ಮಲಗ್ತಿದ್ದಾರಾ?”
“ಈಗ ಎಬ್ಬಿಸಿ ರಾಮಾಯಣ ಮಾಡಬೇಡ. ಬೆಳಿಗ್ಗೆ ಅಪ್ಪನ್ನ, ಚಿಕ್ಕಪ್ಪನ್ನ ರೂಮ್‌ಗೆ ಕಳುಹಿಸು. ಉಳಿದ 2 ರೂಮ್‌ಗಳನ್ನು ಹೆಂಗಸರು ಬಳಸೋಣ.”
ಶಕುಂತಲಾಗೆ ನಿಜವಾಗಿ ಬೇಜಾರಾಯಿತು. “ಸಾರಿ ವರು ನಮಗೆ ಗೊತ್ತಾಗಲಿಲ್ಲ” ಎಂದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44620
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
