ಜ್ಯೋತಿರ್ಲಿಂಗ 8: ನಾಗೇಶ್ವರ
ನಿಸರ್ಗದ ಪ್ರತಿರೂಪದಂತಿರುವ ಈಶ್ವರನು – ತನ್ನ ಕೊರಳಿಗೆ ಹಾಗೂ ಬಾಹುಗಳಿಗೆ ಸರ್ಪವನ್ನೇ ಆಭರಣದಂತೆ ಸುತ್ತಿಕೊಂಡು ಸರ್ಪಭೂಷಣನಾದ, ಗಂಗೆಯ ರಭಸವನ್ನು ತಡೆಯಲು, ಧರೆಯ ಮೇಲಿರುವ ಗಿಡಮರಗಳಂತೆ, ತನ್ನ ಜಟೆಗಳನ್ನು ಹರಡಿ ಜಟಾಧರನಾದ, ಚಂದ್ರನನ್ನು ಮುಡಿಗೇರಿಸಿ ಚಂದ್ರಶೇಖರನಾದ, ಹುಲಿಚರ್ಮವನ್ನು ಹೊದ್ದು ಚರ್ಮಾಂಭರಧಾರಿಯಾದ, ನಂದಿಯನ್ನೇರಿ ನಂದೀಶ್ವರನಾದ, ಪ್ರಕೃತಿಯ ಲಯಕ್ಕೆ ತಕ್ಕಂತೆ ನಾಟ್ಯವಾಡುತ್ತಾ ನಟರಾಜನಾದ, ಹಿಮಗಿರಿಯನ್ನೇರಿ ತಪಗೈಯುತ್ತಾ ಪರಶಿವನಾದ.
ಗುಜರಾತಿನ ಸೌರಾಷ್ಟ್ರದ ಕಡಲತೀರದಲ್ಲಿರುವ ದ್ವಾರಕೆ ಮತ್ತು ಬೇಟ್ ದ್ವಾರಕೆಯ ಮಧ್ಯೆ ನೆಲಸಿರುವ ನಾಗೇಶ್ವರನ ದರ್ಶನ ಮಾಡೋಣ ಬನ್ನಿ. ಪಾಂಡುಪುತ್ರನಾದ ಭೀಮನು, ವನವಾಸದ ಸಮಯದಲ್ಲಿ ನೀರನ್ನು ಹುಡುಕುತ್ತಾ ಬಂದಾಗ ಅಪರೂಪದ ದೃಶ್ಯವೊಂದನ್ನು ಕಾಣುವನು. ಹಾಲ್ನೊರೆಯಂತೆ ಹರಿಯುತ್ತಿದ್ದ ನದಿಯ ಮಧ್ಯೆ ಸ್ವಯಂಭುವಾಗಿ ಕಂಗೊಳಿಸುತ್ತಿದ್ದ ಜ್ಯೋತಿರ್ಲಿಂಗವನ್ನು ಕಂಡು ಭಕ್ತಿಭಾವದಿಂದ ಪೂಜಿಸುವನು. ಗೋಮತಿ ನದೀ ತೀರದಲ್ಲಿ, ದ್ವಾರಕೆಯ ಬಳಿಯಿರುವ ‘ನಾಗೇಶ್ವರ ಜ್ಯೋತಿರ್ಲಿಂಗ’ದ ವಿಷಯವಾಗಿ ಕೆಲವು ವಿವಾದಗಳೂ ಪ್ರಚಲಿತವಾಗಿವೆ. ದಾರುಕಾವನ ಎಂದರೆ ದೇವದಾರುವೃಕ್ಷಗಳ ವನವೆಂದೂ, ಹಾಗಾಗಿ ದಾರುಕಾವನವು ಹಿಮಾಲಯದ ತಪ್ಪಲಲ್ಲಿರುವ ಉತ್ತರಾಖಂಡದ ಅಲ್ಮೊರಾ ಪ್ರದೇಶದಲ್ಲಿದೆಯೆಂದೂ ಕೆಲವರ ಅಭಿಮತ. ಇಲ್ಲಿರುವ ‘ಜಾಗೇಶ್ವರ ದೇಗುಲವೇ – ನಾಗೇಶ್ವರ ಜ್ಯೋತಿರ್ಲಿಂಗ’ವೆಂಬ ನಂಬಿಕೆಯೂ ಇದೆ.
ದ್ವಾರಕೆಯು ಚಾರ್‌ಧಾಮ್ ಗಳಲ್ಲಿ ಒಂದಾಗಿದ್ದು, ಸಪ್ತ-ಪುರಿ ಎಂಬ ಹೆಸರು ಹೊತ್ತ ಪವಿತ್ರಧಾಮಗಳಲ್ಲಿ ಒಂದಾಗಿದೆ. ಈ ಏಳು ಪವಿತ್ರಕ್ಷೇತ್ರಗಳು- ಅಯೋಧ್ಯೆ, ಮಥುರಾ, ಹರಿದ್ವಾರ, ಕಾಶಿ, ಉಜ್ಜಯಿನಿ, ಕಾಂಚೀಪುರಮ್ ಹಾಗೂ ದ್ವಾರಕಾ. ಈ ಪ್ರದೇಶದ ಬಳಿ ಉತ್ಖನನ ಮಾಡಿದ ಪುರಾತತ್ವಶಾಸ್ತ್ರಜ್ಞರು, ಐದು ಪ್ರಾಚೀನ ನಗರಿಗಳ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ನಾಗೇಶ್ವರ ಜ್ಯೋತಿರ್ಲಿಂಗದ ಪೌರಾಣಿಕ ಹಿನ್ನೆಲೆಯನ್ನು ಕೇಳೋಣವೇ? ದಾರುಕ ಮತ್ತು ದಾರುಕಾ ಎಂಬ ಅಸುರ ದಂಪತಿಗಳು ದ್ವಾರಕೆಯಲ್ಲಿ ವಾಸವಾಗಿದ್ದರು. ಪತ್ನಿಯು ಪಾರ್ವತಿಯ ಪರಮಭಕ್ತಳಾದರೆ, ಪತಿಯು ಶಿವನ ಪರಮವೈರಿಯಾಗಿದ್ದನು. ದಾರುಕೆಯ ಭಕ್ತಿಗೆ ಮೆಚ್ಚಿದ ಪಾರ್ವತೀದೇವಿಯು ಅವಳಿಗೆ ಒಂದು ವರವನ್ನು ದಯಪಾಲಿಸಿದ್ದಳು. ಅವಳು ವಾಸವಾಗಿದ್ದ ಸ್ಥಳವನ್ನು ‘ದಾರುಕಾವನ’ ಎಂದೇ ಹೆಸರಿಸಿದರು. ಹಾಗೂ ಅವಳು ಹೋದೆಡೆಯೆಲ್ಲಾ, ದಾರುಕಾವನವೂ ಅವಳನ್ನು ಹಿಂಬಾಲಿಸುವಂತಹ ವರವನ್ನು ಪಡೆದಿದ್ದಳು. ಒಮ್ಮೆ, ಅಸುರನಾದ ದಾರುಕನು, ಮಹಾಶಿವಭಕ್ತನಾದ ‘ಸುಪ್ರಿಯ’ ನೆಂಬ ಅರಸನನ್ನು ಕಾಡುತ್ತಾನೆ. ಶಿವನನ್ನು ಜಪಿಸುವ ಬದಲು ತನ್ನನ್ನು ಪೂಜಿಸಬೇಕೆಂದು ಆಜ್ಞಾಪಿಸುತ್ತಾನೆ. ಆದರೆ ಸುಪ್ರಿಯನು ‘ಓಂ ನಮಃ ಶಿವಾಯ’ ಎಂದೇ ತನ್ನ ಜಪವನ್ನು ಮುಂದುವರೆಸಿದ್ದರಿಂದ ಕೋಪಗೊಂಡ ಅಸುರನು, ಅವನ ಸಂಗಡಿಗರ ಜೊತೆ ಸುಪ್ರಿಯನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳುವನು. ಸುಪ್ರಿಯನನ್ನು ಬಂಧಿಸಿದ ಪತಿ ದಾರುಕನನ್ನು, ದೇವತೆಗಳು ಶಿಕ್ಷಿಸಬಹುದೆಂಬ ಭೀತಿಯಿಂದ ದಾರುಕಾ, ತಾನು ವಾಸಿಸುತ್ತಿದ್ದ ಸ್ಥಳವನ್ನೇ ಸಮುದ್ರದಡಿ ಸ್ಥಳಾಂತರಿಸುವಳು. ಸುತ್ತಲೂ ಹರಿದಾಡುತ್ತಿದ್ದ ಸರೀಸೃಪಗಳನ್ನು ಕಂಡ ಸುಪ್ರಿಯನ ಅನುಯಾಯಿಗಳು ಭಯಭೀತರಾಗುವರು. ಆಗ ಸುಪ್ರಿಯನು ತನ್ನ ಅನುಯಾಯಿಗಳ ಜೊತೆ ‘ಓಂ ನಮಃ ಶಿವಾಯ’ ಎಂಬ ಶಿವನಾಮವನ್ನು ಜಪಿಸತೊಡಗುವನು. ತನ್ನ ಭಕ್ತರ ಮೊರೆ ಕೇಳಿದ ಪರಶಿವನು, ಅವರನ್ನು ರಕ್ಷಿಸಲು ಧಾವಿಸಿ ಬರುವನು. ಶಿವನು ತನ್ನ ಪರಮಭಕ್ತನಾದ ಸುಪ್ರಿಯನಿಗೆ ಪಾಶುಪತಾಸ್ತ್ರವನ್ನು ನೀಡಿ, ದಾರಕನನ್ನು ಸಂಹರಿಸಲು ಸೂಚಿಸುವನು. ದಾರುಕನ ವಧೆಯಾದ ನಂತರ, ಶಿವನು, ತನ್ನ ಭಕ್ತನಾದ ಸುಪ್ರಿಯನ ಕೋರಿಕೆಯ ಮೇರೆಗೆ ನಾಗೇಶ್ವರನೆಂಬ ಜ್ಯೋತಿರ್ಲಿಂಗದ ರೂಪದಲ್ಲಿ ದಾರುಕಾವನದಲ್ಲಿ ನೆಲೆಯಾಗುವನು. ವಿಷಸರ್ಪಗಳಿಂದ ರಕ್ಷಿಸಿದ ಮಹಾದೇವನು ‘ನಾಗೇಶ್ವರ’ ಎಂದು ಪ್ರಖ್ಯಾತನಾದನು. ವಿಷಸರ್ಪಗಳು ‘ಪ್ರಾಪಂಚಿಕ ಸುಖಗಳ’ ರೂಪಕವಾಗಿ ನಿಲ್ಲುತ್ತವೆ. ಭೋಗಜೀವನದಿಂದ ವಿಮುಖರಾಗಿ ವೈರಾಗ್ಯದೆಡೆ ಚಲಿಸುವ ಸಂದೇಶವನ್ನು ಈ ದೇಗುಲವು ನೀಡುತ್ತಿದೆ.
ಮತ್ತೊಂದು ಪೌರಾಣಿಕ ಕತೆ ಹೀಗಿದೆ. ಒಂದಾನೊಂದು ಕಾಲದಲ್ಲಿ ‘ಬಾಲಕಿಲ್ಯ’ ಎಂಬ ಕುಬ್ಜ ಋಷಿಗಳ ಗುಂಪೊಂದು ಈ ಪ್ರದೇಶದಲ್ಲಿ ವಾಸಿಸುತ್ತಿತ್ತು. ಇವರು ಪರಮ ಶಿವಭಕ್ತರಾಗಿದ್ದರು. ಒಮ್ಮೆ ಶಿವನು ಇವರ ಭಕ್ತಿಯನ್ನು ಪರೀಕ್ಷಿಸಲು ಕಾಪಾಲಿಕನ ವೇಷದಲ್ಲಿ ಬರುತ್ತಾನೆ. ಮೈ ತುಂಬಾ ಭಸ್ಮ ಬಳಿದುಕೊಂಡು, ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ತನ್ನ ಕೊರಳಿಗೆ, ಬಾಹುಗಳಿಗೆ ಸರ್ಪಗಳನ್ನು ಸುತ್ತಿಕೊಂಡು ಅವತರಿಸುತ್ತಾನೆ. ಅವನಿಂದ ಆಕರ್ಷಿತರಾದ ಋಷಿಪತ್ನಿಯರನ್ನು ಗಮನಿಸಿದ ಋಷಿಗಳು, ಕಾಪಾಲಿಕನಿಗೆ, ನಿನ್ನ ಲಿಂಗ ಕಳಚಿ ಬೀಳಲಿ ಎಂದು ಶಪಿಸುತ್ತಾರೆ. ಶಿವನ ಲಿಂಗವು ಕಳಚಿ ಬೀಳುತ್ತಿದ್ದ ಹಾಗೆಯೇ, ಭೂಕಂಪವಾಗಿ ಧರೆಯು ಕಂಪಿಸತೊಡಗುವುದು. ತಕ್ಷಣವೇ, ಮುಂದಾಗಬಹುದಾದ ಭೀಕರ ವಿನಾಶವನ್ನು ತಪ್ಪಿಸಲು ಬ್ರಹ್ಮ, ವಿಷ್ಣು ಹಾಗೂ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಆಗ ಲಿಂಗವು ಶಿವನಲ್ಲಿ ಲೀನವಾಗಿ ಜ್ಯೋತಿಸ್ವರೂಪವಾಗಿ ಕಂಗೊಳಿಸುವುದು.
ಇನ್ನೊಂದು ಬಹಳ ಸ್ವಾರಸ್ಯಕರವಾದ ಐತಿಹ್ಯ ಹೀಗಿದೆ – ಔರಂಗಜೇಬನು ಈ ದೇಗುಲವನ್ನು ಧ್ವಂಸ ಮಾಡಲು ನಾಲ್ಕಾರು ಬಾರಿ ಯತ್ನಿಸಿದಾಗ, ದೇಗುಲದೊಳಗಿಂದ ಹಾರಿ ಬಂದ ಜೇನ್ನೊಣಗಳು ಸೈನಿಕರನ್ನು ಕಚ್ಚಿದಾಗ, ಅವರು ಅಲ್ಲಿಂದ ಪಲಾಯನ ಮಾಡಲೇಬೇಕಾಯಿತು. ಹೀಗೆ ನಾಗೇಶ್ವರ ಜ್ಯೋತಿರ್ಲಿಂಗದ ರಕ್ಷಣೆ ಮಾಡಿದ ಜೇನ್ನೊಣಗಳಿಗೆ ಒಂದು ಸಲಾಂ.
ಬನ್ನಿ ದೇಗುಲವನ್ನು ನೋಡೋಣ. ಈ ದೇಗುಲದ ವಾಸ್ತುಶಿಲ್ಪವು ಪಾಶ್ಚಿಮಾತ್ಯ ಮಾದರಿಯಲ್ಲಿದ್ದು, ಇದರ ಆಕಾರ ಮಲಗಿದ ಮಾನವಾಕೃತಿಯನ್ನು ಹೋಲುತ್ತದೆ. ದೇಗುಲದ ಪ್ರವೇಶದ್ವಾರವು ಎರಡು ಕಾಲುಗಳಂತೆ ಕಂಡರೆ, ಮುಖ್ಯದ್ವಾರವು ಎರಡು ಕೈಗಳನ್ನು ಹೋಲುವುದು. ಒಂದು ಬದಿಯಲ್ಲಿ ರಾಮನ ಭಂಟನಾದ ಹನುಮಂತ ಹಾಗೂ ಇನ್ನೊಂದು ಬದಿಯಲ್ಲಿ ವಿಘ್ನವಿನಾಶಕನಾದ ಗಣಪತಿಯ ಮೂರ್ತಿಗಳು ಇವೆ. ದೇಗುಲದ ಮುಖಮಂಟಪವು ಉದರ ಭಾಗದಂತೆ ಕಂಡರೆ, ನಂದಿಯನ್ನೂ ಸ್ಥಾಪಿಸಲ್ಪಟ್ಟಿರುವ ಸ್ಥಳವು ಹೃದಯ ಭಾಗದಂತೆ ಗೋಚರಿಸುವುದು. ಗರ್ಭಗುಡಿಯಲ್ಲಿರುವ ಶಿವಲಿಂಗವು ಮಾನವನ ಶಿರವನ್ನು ಹೋಲುವುದು ಮತ್ತೊಂದು ವಿಶಿಷ್ಟವಾದ ಸಂಗತಿ ಎಲ್ಲರ ಮನ ಸೆಳೆಯುವುದು.. ಈ ಶಿವಲಿಂಗವು ಮೂರು ಮುಖದ ರುದ್ರಾಕ್ಷದಂತೆ ಗೋಚರಿಸುವುದು. ಶಿವಲಿಂಗವು ನುಣುಪಾಗಿರದೆ, ಉರುಟು ಉರುಟಾದ ಚಕ್ರಾಕಾರದ ಆಕೃತಿಗಳನ್ನು ಹೊಂದಿದೆ. ಸುಮಾರು ನಲವತ್ತು ಸೆಂ.ಮೀ. ಎತ್ತರ ಹಾಗೂ ಮೂವತ್ತು ಸೆಂ.ಮೀ. ಸುತ್ತಳತೆ ಹೊದಿರುವ ಈ ಶಿವಲಿಂಗದ ಗೋಮುಖವು ಪೂರ್ವದಿಕ್ಕಿನೆಡೆ ಇದ್ದರೆ, ಶಿವಲಿಂಗವು ದಕ್ಷಿಣಮುಖಿಯಾಗಿದೆ. ಇಲ್ಲೊಂದು ಪೌರಾಣಿಕ ಐತಿಹ್ಯವೂ ಇದೆ. ಈ ದೇವಾಲಯದಲ್ಲಿ, ನಾಮದೇವನೆಂಬ ಭಕ್ತನೊಬ್ಬನು ಸದಾ ಸುಶ್ರಾವ್ಯವಾದ ಭಜನೆಗಳನ್ನು ಮಾಡುತ್ತಾ, ಜನರ ಮೆಚ್ಚುಗೆಗೆ ಪಾತ್ರನಾಗಿರುತ್ತಾನೆ. ಇದರಿಂದ ಅಸಹನೆಗೊಂಡ ಕೆಲವು ಪುರೋಹಿತರು, ಅವನನ್ನು ಅಲ್ಲಿಂದ ಓಡಿಸಲು ಯತ್ನಿಸುತ್ತಾರೆ. ನಾಮದೇವನು, ನಾನೆಲ್ಲಿ ನಿಂತು ಭಜನೆಗಳನ್ನು ಹಾಡಲಿ? ಎಂದಾಗ ಅವನಿಗೆ ದೇಗುಲದ ದಕ್ಷಿಣ ದಿಕ್ಕಿನೆಡೆ ಕಳುಹಿಸುವರು. ನಾಮದೇವನು ತನ್ನ ಭಜನೆಗಳನ್ನು ಹಾಡುವಾಗ, ಶಿವನು ತನ್ನ ಭಕ್ತನು ನಿಂತಿರುವ ಕಡೆಗೆ ತಿರುಗುವನು. ಎಲ್ಲರೂ ದಿಗ್ಭ್ರಾಂತರಾಗುವರು. ಈ ಪ್ರಸಂಗವು, ಉಡುಪಿಯ ಶ್ರೀಕೃಷ್ಣ ದೇವಾಲಯದಲ್ಲಿರುವ – ಕನಕನ ಕಿಂಡಿಯ ನೆನಪನ್ನು ಮೂಡಿಸುತ್ತದೆಯಲ್ಲವೇ?
ದ್ವಾರಕೆಯಲ್ಲಿ, ಶ್ರೀಕೃಷ್ಣನು ಶಿವನಿಗೆ ರುದ್ರಾಭಿಷೇಕವನ್ನು ಮಾಡಿದನು ಎಂಬ ಪ್ರತೀತಿಯೂ ಇದೆ. ಆದಿಗುರು ಶಂಕರರು, ಧಾರ್ಮಿಕ ಐಕ್ಯತೆಯನ್ನು ಮೂಡಿಸಲು, ತಮ್ಮ ಪೀಠವನ್ನು ಇಲ್ಲಿ ಸ್ಥಾಪಿಸಿರುತ್ತಾರೆ. ಪ್ರಾಪಂಚಿಕ ವ್ಯಾಮೋಹಗಳಿಂದ ಬಿಡುಗಡೆ ಹೊಂದಿ, ಹುಟ್ಟು ಸಾವುಗಳಿಂದ ಮುಕ್ತರಾಗಿ ಮೋಕ್ಷ ಸಾಧನೆಗೆ ಪ್ರಶಸ್ತವಾದ ಸ್ಥಳ ನಾಗೇಶ್ವರ.
ಇಂದು ನಾವು ಕಾಣುವ ನಾಗೇಶ್ವರ ದೇವಾಲಯವನ್ನು ಸುಪ್ರಸಿದ್ಧ ಟಿ-ಸೀರೀಸ್ ಸಂಗೀತ ಆಡಿಯೋ ಕಂಪೆನಿಯ ಮಾಲೀಕರಾದ ಶ್ರೀಯುತ ಗುಲ್ಶನ್ ಕುಮಾರ್ ರವರು ಭವ್ಯವಾಗಿ ನಿರ್ಮಿಸಿದ್ದಾರೆ. ಕೆಂಪು ಬಿಳಿಯ ವರ್ಣದ ಈ ದಿವ್ಯವಾದ ದೇಗುಲ ಎಲ್ಲರ ಮನವನ್ನು ಸೂರೆಗೊಳ್ಳುತ್ತಿದೆ. ದೇಗುಲದ ಪ್ರಾಂಗಣದಲ್ಲಿಯಾಗಲೀ ಅಥವಾ ಸುತ್ತಮುತ್ತಲಾಗಲೀ ಯಾವುದೇ ಬಗೆಯ ಶಿಲ್ಪಗಳಾಗಲೀ, ಕೆತ್ತನೆ ಕೆಲಸಗಳಾಗಲೀ ಕಂಡುಬರುವುದಿಲ್ಲ. ದೇವಾಲಯದ ಮುಂಭಾಗದಲ್ಲಿರುವ ಸುಂದರವಾದ ಹೂತೋಟ, ನಳನಳಿಸುತ್ತಿರುವ ಬಣ್ಣಬಣ್ಣದ ಹೂಗಳು, ತೋಟದ ಮಧ್ಯೆಯಿರುವ ಪುಷ್ಕರಣಿ – ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ದೇಗುಲದ ಪ್ರವೇಶದ್ವಾರದಲ್ಲಿರುವ ಇಪ್ಪತ್ತೈದು ಮೀಟರ್ ಎತ್ತರವಿರುವ ಶಿವನ ಪ್ರತಿಮೆ, ದಿವ್ಯವಾದ ತೇಜಸ್ಸನ್ನು ಹೊರಸೂಸುವ ಕಂಗಳು, ಭಕ್ತರ ಕಷ್ಟ್ಟಗಳನ್ನು ನಿವಾರಿಸುತ್ತಾ, ಅಭಯ ನೀಡುತ್ತಿರುವಂತಹ ಮುಖಭಾವ – ಮತ್ತೊಮ್ಮೆ ಮಗದೊಮ್ಮೆ ನೋಡುತ್ತಲೇ ಇರುವ ಆಸೆ ಮನದಲ್ಲಿ ಉಕ್ಕುವುದು. ನಾಗೇಶ್ವರನ ದರ್ಶನ ಪಡೆದು ಹಿಂತಿರುಗುವಾಗ – ಬೃಹತ್ತಾದ ಈಶ್ವರನ ದಿವ್ಯ ಮೂರ್ತಿ, ರುದ್ರಾಕ್ಷಿಯಂತೆ ಕಂಗೊಳಿಸುತ್ತಿದ್ದ ಶಿವಲಿಂಗ, ಭವಭಯಹರಣನಾದ ನಾಗೇಶ್ವರ ಕಣ್ಣು ತುಂಬಾ, ಎದೆಯ ತುಂಬಾ, ಮನದ ತುಂಬಾ ತುಂಬಿದ್ದನು.
ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 7) ಇಲ್ಲಿದೆ: http://surahonne.com/?p=34671
-ಡಾ.ಗಾಯತ್ರಿದೇವಿ ಸಜ್ಜನ್
Very nice
ವಾವ್ ಎಂದಿನಂತೆ ಜ್ಯೋತಿರ್ಲಿಂಗ ಪರಿಚಯಾತ್ಮಕ ಲೇಖನ ದಲ್ಲಿ ಇಂದು ನಾಗೇಶ್ವರ ಲಿಂಗದ ಪೌರಾಣಿಕ ಹಿನ್ನೆಲೆ ಮಹತ್ವ..ಆ ಸ್ಥಳೀಯ ನಂಬಿಕೆಗಳು ಎಲ್ಲವನ್ನೂ ಬಹಳ ಆಪ್ತವಾಗಿ ಹಾಗೂ ಸೊಗಸಾಗಿ ಅನಾವರಣ ಗೊಳಿಸಿರುವ ನಿಮಗೆ ಧನ್ಯವಾದಗಳು ಮೇಡಂ.
ಮತ್ತೆ ನೋಡಿದ ಹಾಗೆ ಆಯಿತು
ವಂದನೆಗಳು ಸಹೃದಯ ಓದುಗರಿಗೆ
ಚಂದದ ಪೂರಕ ಕಥೆಗಳೊಂದಿಗೆ ನಾಗೇಶ್ವರ ಜ್ಯೋತಿರ್ಲಿಂಗದ ದರುಶನವಾಯ್ತು… ಧನ್ಯವಾದಗಳು ಮೇಡಂ.
ಪರಿಚಯ ಸೊಗಸಾಗಿದೆ!